Pages

Wednesday, March 31, 2010

ಆತ್ಮೀಯ ವೇದ ಬಂಧುಗಳೇ,
ವೇದದ ಬಗ್ಗೆ ವೇದಾಧ್ಯಾಯೀ ಸುಧಾಕರ ಶರ್ಮರ ಸರಳವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ಪ್ರಚುರ ಪಡಿಸಬೇಕೆಂಬ ಉದ್ಧೇಶದಿಂದಆರಂಭಿಸಿರುವ ಈ ಬ್ಲಾಗಿನಲ್ಲಿ ಶರ್ಮರಿಗೆ ಬರೆಯಲು ತಾಂತ್ರಿಕ ಅಡಚಣೆಗಳಾದುದರಿಂದ ಬೇರೆಯ ತಾಣವನ್ನೇ [ವೇದಸುಧೆ ಡಾಟ್ ವೆಬ್ಸ್ ಡಾಟ್ ಕಾಮ್] ಆರಂಭಿಸಿದೆ. ಆದರೆ ಅನೇಕ ಮಿತ್ರರು ವೇದ ಸುಧೆಯ ಬ್ಲಾಗೇ ಸಾಕು, ಬೇರೆ ತಾಣಗಳನ್ನು ನಿರ್ವಹಿಸಲುಕಷ್ಟವಾಗುತ್ತದೆಂಬ ಸಲಹೆ ನೀಡಿದ್ದಾರೆ.ಅವರ ಸಲಹೆಯನ್ನು ಸ್ವೀಕರಿಸಿ ವೇದಸುಧೆಗೇ ಒಂದಿಷ್ಟು ಅಲಂಕಾರ ಮಾಡಿದ್ದೇನೆ. ಎಂದಿನಂತೆವೇದಸುಧೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.ಶರ್ಮರಿಗೆ ಮನವಿಮಾಡಿ ಕೆಲವು ವೇದ ಮಂತ್ರಗಳನ್ನು ಎಲ್ಲರಿಗಾಗಿ ವೇದ ತಾಣದಲ್ಲಿ ಕಲಿಸುವ ಕೃಪೆಮಾಡಬೇಕೆಂದು ಕೋರುವೆ. ಅದರ ಅರ್ಥ ವಿವರಣೆಯನ್ನು ಈ ಬ್ಲಾಗಿನಲ್ಲಿ ಕನ್ನಡದಲ್ಲಿ ಪ್ರಕಟಿಸುವ ಪ್ರಯತ್ನಮಾಡಲಾಗುವುದು.

ವೇದವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

೧೯.೯.೨೦೦೩ ರಂದು ಬೇಲೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮರು ವೇದವನ್ನು ಸರಿಯಾಗಿಅರ್ಥಮಾಡಿಕೊಳ್ಳುವ ಬಗೆ ಹೇಗೆ? ಎಂಬ ವಿಚಾರವಾಗಿ ಬಹು ಸರಳ ಮತ್ತು ಸ್ಪಷ್ಟ ಮಾತುಗಳಲ್ಲಿ ಉಪನ್ಯಾಸವನ್ನು ಮಾಡಿದ್ದಾರೆ. ಅಂದುಮಾಡಿದ ಉಪನ್ಯಾಸಕ್ಕೆ ಅಕ್ಷರಕೊಡುವ ಪ್ರಯತ್ನ ಮಾಡುತ್ತಿರುವೆ. ಒಂದು ವೇಳೆ ಬರೆಯುವಾಗ ಅಕ್ಷರ ತಪ್ಪಾಗಿ ಅರ್ಥ ತಪ್ಪಾದರೆ ಅದುನನ್ನ ತಪ್ಪು. ಆದರೆ ಅವರ ಮಾತುಗಳನ್ನು ಒಪ್ಪದಿದ್ದರೆ ದಯಮಾಡಿ ಓದುಗರು ಪ್ರತಿಕ್ರಿಯಿಸಿದರೆ ಶ್ರೀಯುತರ ಗಮನಕ್ಕೆ ತಂದುಅವರಿಂದಲೇ ಸಮಾಧಾನದ ಉತ್ತರ ಕೊಡಿಸುವೆ. ಇನ್ನು ಮುಂದೆ ಅವರದೇ ಮಾತು ಕೇಳಿ.......
ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರರು ನಿರೂಪಿಸಿದ್ದಾರೆ. ಇದನ್ನುನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನುಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ?
ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂಪದದನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋಅದಕ್ಕೆ ಅಶ್ವ ವೆಂದುಹೆಸರು. ಇದನ್ನು ನಾವು ಶುದ್ಧ ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕಅರ್ಥ ೩]ಇವೆರಡರಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥದೊಡನೆ ರೂಢಿಯಿಂದ ಬಂದಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈಮಿತಿಯಿಲ್ಲ. ಒಂದು ಉಧಾಹರಣೆನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆಕೆಸರು ಜ ಎಂದರೆ ಹುಟ್ಟಿದ್ದು ಎಂದುಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವುಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿಕೇವಲ ಕಮಲ ಎಂದು ಕರೆಯಲಾಗಿದೆ. ಇದುಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆಯಾವುದು ತಿನ್ನುತ್ತದೋ ಅದು , ಎಂದಾಗಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನುತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನುತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂಅಶ್ವವೇ. ಅಂದರೆ ಯಾಸ್ಕರಾಚಾರ್ಯರುಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದುಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮಪಂಚೇಂದ್ರಿಯಗಳು. ಮೇಧ ಎಂದಾಗ ಒಂದುಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸುಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲುಏನು ಮಾಡಬೇಕೆಂಬುದು ಅದರ ಸಾರ. ಇದೇ ಬ್ಲಾಗಿನಲ್ಲಿ ಫೆಬ್ರವರಿ ತಿಂಗಳಲ್ಲಿ ಶರ್ಮರ ಉಪನ್ಯಾಸಗಳಾದ ಯಜ್ಞ ಮತ್ತು ಅಶ್ವಮೇಧಯಾಗ ಬರಹಗಳನ್ನು ನೋಡಿ