ನಿಂದಕರ ವಂದಿಸುವೆ ನಡೆಯ ತೋರಿಹರು|
ಮನೆಮುರುಕರಿಂ ಮನವು ಮಟ್ಟವಾಗಿಹುದು||
ಕುಹಕಿಗಳ ಹರಸುವೆ ಮತ್ತೆ ಪೀಡಕರ|
ಜರೆವವರು ಗುರುವಾಗರೇ ಓ ಮೂಢ||
ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?
ಕೊಂಕರಸುವ ಡೊಂಕ ಮನವೊಡೆವ ಕೆಡುಕನ|
ಹುಣ್ಣನರಸುವ ನೊಣನೆಂದೆಣಿಸು ಮೂಢ||
ವೇಷಭೂಷಣವನೊಪ್ಪೀತು ನೆರೆಗಡಣ|
ನೀತಿಪಠಣವ ಮೆಚ್ಚೀತು ಶ್ರೋತೃಗಣ||
ನುಡಿದಂತೆ ನಡೆದರದುವೆ ಆಭರಣ|
ಮೊದಲಂತರಂಗವನೊಪ್ಪಿಸೆಲೋ ಮೂಢ||
ಆವರಣ ಚೆಂದವಿರೆ ಹೂರಣಕೆ ರಕ್ಷಣ|
ಹೂರಣ ಚೆಂದವಿರೆ ಆವರಣಕೆ ಮನ್ನಣ||
ಆವರಣ ಹೂರಣ ಚೆಂದವಿರೆ ಪ್ರೇರಣ|
ಬದುಕು ಸುಂದರ ಪಯಣ ಕಾಣಾ ಮೂಢ||
**********************
-ಕವಿನಾಗರಾಜ್.