Pages

Wednesday, March 6, 2013

ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ!


ಈ ಮಾತು ಉತ್ಪ್ರೇಕ್ಷೆಯಲ್ಲ.  ಲೇಖನದ ಕೊನೆಗೆ ಬಂದಾಗ ನೀವೂ ಇದನ್ನು ಒಪ್ಪುವಿರಿ.  ದಯವಿಟ್ಟು ಸಾಲುಗಳ ಮಧ್ಯದಲ್ಲಿ ಓದುತ್ತಾ ಹೋಗಿ!!

           ಸಮಸ್ಯೆ ಎದುರಾದ ಮೇಲೆ ಪರಿಹಾರ ಹುಡುಕುವುದು, ಮನೆಗೆ ಬೆಂಕಿ ಬಿದ್ದಮೇಲೆ ಬಾವಿಯನ್ನು ತೋಡಲು ಪ್ರಾರಂಭಿಸಿದಂತೆ.  ನಾಳೆ ಬರಬಹುದಾದ ಸಮಸ್ಯೆ ಬಾರದಂತೆ ಇಂದೇ ತಡೆಯೊಡ್ಡುವುದೇ ಜಾಣತನ.  ಒಂದು ವೇಳೆ ತಡೆಯಲಾಗದಿದ್ದರೆ ಅದಕ್ಕೆ ಇಂದೇ ಪರಿಹಾರವನ್ನು ಹುಡುಕಿ ತೆಗೆಯುವುದೂ ಜಾಣತನವೇ.  ಇಷ್ಟಂತೂ ಸತ್ಯ.  ಸಮಸ್ಯೆಗೆ ಹೆದರಿ ಓಡುವುದಾಗಲಿ, ಕೈಚೆಲ್ಲಿ ಕೂಡುವುದಾಗಲಿ, ಕುಸಿದು ಮಡಿಯುವುದಾಗಲೀ ಸಮಸ್ಯೆಗೆ ಪರಿಹಾರವಲ್ಲ.  ಖಚಿತವಾಗಿ ಪರಿಹಾರ ದೊರೆಯುವ ಎಡೆಯನ್ನು ತಿಳಿಯದೇ, ‘ಹೇಗೋ ಒಂದು, ಸಮಸ್ಯೆ ಪರಿಹಾರವಾದರೆ ಸಾಕಪ್ಪಾ’ ಎನ್ನುವ ಮನೋಭಾವದಿಂದ ಸಿಕ್ಕಸಿಕ್ಕಲ್ಲಿ ಅಲೆದು ಪರದಾಡುವುದೂ ಪರಿಹಾರವಲ್ಲ.

             ನಮ್ಮ ಯಾವುದೇ ಸಮಸ್ಯೆಯ ಮೂಲ ಇರುವುದು ನಮ್ಮಲ್ಲೇ!  ಈ ಅರಿವು ನಮಗಿಲ್ಲದಿದ್ದಲ್ಲಿ ಹೊರಗಿನಿಂದ, ಯಾರಿಂದಲೋ ಪರಿಹಾರವನ್ನು ನಿರೀಕ್ಷಿಸುತ್ತಿರುತ್ತೇವೆ, ಇಲ್ಲವೇ, ಸಮಸ್ಯೆಯ ಮೂಲವನ್ನು ಹೊರಗಿನ ಯಾವುದೋ ಸನ್ನಿವೇಶದಲ್ಲಿಯೋ, ಯಾರಲ್ಲೋ ಗುರುತಿಸಿ ಶಪಿಸುತ್ತಿರುತ್ತೇವೆ.  ಇದರಿಂದ ಸಮಸ್ಯೆ ಬಿಗಡಾಯಿಸುವುದೇ ಹೊರತು ಪರಿಹಾರವಂತೂ ಕಾಣುವುದಿಲ್ಲ.  ಸಮಸ್ಯೆಯ ಮೂಲ ನಮ್ಮಲ್ಲಿರುವುದನ್ನು ಗುರುತಿಸಿದಾಗ, ಪರಿಹಾರವೂ ನಮ್ಮಲ್ಲೇ ಇರುವುದು ಸ್ಪಷ್ಟವಾಗುತ್ತದೆ.  ಸಮಸ್ಯೆಯ ಪರಿಹಾರಕ್ಕಾಗಿ ಮೊದಲ ಹೆಜ್ಜೆ ನಮ್ಮಿಂದಲೇ ಆರಂಭವಾಗುತ್ತದೆ.
  
            ಯಾವುದೇ ಸಮಸ್ಯೆಯ ಮೂಲವಿರುವುದು ಅಜ್ಞಾನದಲ್ಲಿ!  ಸರಿಯಾದ ತಿಳಿವಿನೊಂದಿಗೆ ಆಲೋಚಿಸಿ ಕೆಲಸ ಮಾಡಿದಾಗ ಸಮಸ್ಯೆಗೆ ಅವಕಾಶವೇ ಇಲ್ಲ.  ಆ ‘ಸರಿಯಾದ ತಿಳಿವೇ’ ಜ್ಞಾನ.  ಅದೇ ‘ವೇದ’.  ವೇದವನ್ನು ಜ್ಞಾನವೆಂದು ತಿಳಿದಾಗ, ಸಾರ್ವಕಾಲಿಕವೂ, ಸಾರ್ವಜನಿಕವೂ, ಸಾರ್ವದೇಶಿಕವೂ ಆದ ಜ್ಞಾನವೆಂದು ತಿಳಿದಾಗ ಪರಿಹಾರ ಖಚಿತವಾಗಿ ದೊರೆಯುವುದು.  ಈ ವೇದವನ್ನು ಇನ್ನೇನೆಂದೋ ತಿಳಿದಲ್ಲಿ, ಅಜ್ಞಾನದಿಂದಲೋ ಅಥವಾ ಪೂರ್ವಾಗ್ರಹದಿಂದಲೋ, ಕೈಗೆಟಕುವ ಗಟ್ಟಿ ಪರಿಹಾರವನ್ನು ನಾವೇ ದೂರಕ್ಕೆಸೆದು ಸಮಸ್ಯೆಯನ್ನು ಜಟಿಲ ಮಾಡಿಕೊಂಡಂತೆ ಆಗುತ್ತದೆ.  ಮುಕ್ತಮನಸ್ಸಿನಿಂದ ವೇದಗಳಲ್ಲಿರುವ ಸೂಚನೆಗಳನ್ನು ಅನುಸರಿಸಿದಲ್ಲಿ ‘ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ’ ಎಂಬುದು ಮನದಟ್ಟಾಗುತ್ತದೆ.  ವೇದಗಳು ಯಾವುದೇ ಜಾತಿ-ಮತ-ಪಂಥ-ಪಂಗಡಗಳ ಸ್ವತ್ತಲ್ಲ.  ಗಂಡು-ಹೆಣ್ಣು ಎಂಬ ಭೇದವೂ ಇಲ್ಲದೇ ಇದರಲ್ಲಿರುವ ಜ್ಞಾನ ಎಲ್ಲರಿಗಾಗಿದೆ ಎಂಬ ಸ್ಪಷ್ಟ ದೃಢನಿಲುವಿನೊಂದಿಗೆ, ಎಲ್ಲ ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಹೇಗಿದೆ ಎಂಬುದನ್ನು ವಿಶ್ಲೇಷಿಸೋಣ.

              ಮೊದಲಿಗೆ ಜಾಗತಿಕ ಸಮಸ್ಯೆಗಳು.  ದೇಶದೇಶಗಳ ನಡುವೆ ವೈರತ್ವ, ಗಡಿ-ರೇಖೆಗಳಿಂದಾಗಿ ನಿರಂತರ ಘರ್ಷಣೆ, ಇತರ ದೇಶಗಳಿಗೆ ಹಾನಿಯುಂಟಾದರೂ ಸರಿಯೇ ತಮ್ಮ ದೇಶದ ಅಭಿವೃದ್ಧಿ ಸಾಧಿಸಬೇಕೆಂಬ ಪೈಪೋಟಿ, ಈ ಪ್ರವೃತ್ತಿಗಳನ್ನೇ ಬಂಡವಾಳವಾಗಿಸಿಕೊಂಡು ಶಸ್ತ್ರಾಸ್ತ್ರಗಳ ನಿರ್ಮಾಣ, ವ್ಯಾಪಾರವನ್ನೇ ಪ್ರಧಾನ ಉದ್ದಿಮೆಯನ್ನಾಗಿಸಿಕೊಂಡಿರುವ ದೇಶಗಳು, ಓಜೋನ್ ಪದರಕ್ಕೆ ತೂತು, ಆಮ್ಲವರ್ಷ, ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ, ಭಯಂಕರ ವಿಕಿರಣಗಳನ್ನು ಸೂಸುವ ಅಣುತ್ಯಾಜ್ಯ, ಭೂಮಿಯ ಉಷ್ಣತೆ ನಿರಂತರವಾಗಿ ಏರುತ್ತಿರುವುದು, ಒಂದೇ ಎರಡೇ.  ಒಂದೊಂದು ಸಮಸ್ಯೆಯೂ ಇಡೀ ಭೂಮಂಡಲವನ್ನೇ ನಾಶಗೈಯುವಷ್ಟು ತೀಕ್ಷ್ಣವಾಗಿದೆ.  ಇವು ಜಗತ್ತಿನ ಹಿತವನ್ನು ಕುರಿತು ಚಿಂತಿಸುವವರ ನಿದ್ದೆಯನ್ನು ಸಾಕಷ್ಟು ಕೆಡಿಸಿದೆ, ಕೆಡಿಸುತ್ತಿದೆ.  ನಮ್ಮ ನಾಶವನ್ನು ನಾವೇ ಸಿದ್ಧಪಡಿಸಿಕೊಂಡಂತಾಗಿದೆ.  ಯಾವುದೇ ಕ್ಷಣದಲ್ಲೂ ಈ ನಾಶವು ನಮ್ಮ ಮೇಲೆರಗಬಹುದು.  ಹಲವಾರು ಕಡೆಗಳಲ್ಲಿ ಇವುಗಳಿಗೆ ‘ಕಾರ್ಬನ್ ಟ್ರೇಡಿಂಗ್’ನಂತಹ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ನಿಜವಾದರೂ, ಪರಿಣಾಮಕಾರಿ ಪ್ರಾಮಾಣಿಕ ಪರಿಹಾರ ಕೈಗೆಟುಕದಿರುವುದೂ ಅಷ್ಟೇ ದಿಟವಾಗಿದೆ.

          ವೇದಗಳಲ್ಲಿ ಇವಕ್ಕೆ ಸ್ಪಷ್ಟವೂ, ಖಚಿತವೂ ಆದ ಪರಿಹಾರಗಳಿರುವುದು ನಿಚ್ಚಳವಾಗಿದೆ.  ಅಷ್ಟೇ ಅಲ್ಲ ಅವುಗಳು ಸತ್ಯಪೂರ್ಣವೂ, ವೈಜ್ಞಾನಿಕವೂ, ತರ್ಕಬದ್ಧವೂ, ಸಾಮಾನ್ಯಜ್ಞಾನಕ್ಕೆ ನಿಲುಕುವಂತೆಯೂ ಇರುವುದನ್ನೂ ಗಮನಿಸಿಕೊಳ್ಳಬಹುದು.

          ಮೊದಲಿಗೆ ಯುದ್ಧಸಂಬಂಧೀ ಸಮಸ್ಯೆಗಳು.  ಇದರ ಮೂಲದಲ್ಲಿರುವುದು ಪ್ರಕೃತಿಯ ಮೇಲಿನ ಹಕ್ಕಿಗಾಗಿ, ಅಲ್ಲಿಯ ಪ್ರಕೃತಿಸಂಪತ್ತಿನ ಮೇಲಿನ ಒಡೆತನಕ್ಕಾಗಿ ನಡೆಸುವ ಪೈಪೋಟಿ.  ಮೂಲದಲ್ಲೇ ಸಮಸ್ಯೆಯಿದೆ.  ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಬರಿಕೈ, ಹೋಗುವಾಗಲೂ ಬರಿಕೈ!  ಯಾವುದರ ಮೇಲೂ ನಮಗೆ ಒಡೆತನವಿಲ್ಲ.  ನಾವೆಲ್ಲರೂ ಈ ಜಗತ್ತಿನಲ್ಲಿ ಕೆಲಕಾಲ ನಿಂತು ಹೋಗುವವರೇ!  ಹಿಂದಿನ ತಲೆಮಾರಿನವರು ಈ ಪ್ರಕೃತಿಸಂಪತ್ತನ್ನು ನಮಗಾಗಿ ಉಳಿಸಿಹೋಗಿದ್ದರಿಂದ ನಮಗೆ ಅವು ಲಭ್ಯವಾಗಿವೆ.  ಅಂತೆಯೇ ಮುಂದಿನ ಜನಾಂಗಕ್ಕೆ ಅವನ್ನು ಬಿಟ್ಟುಹೋಗುವುದೂ ನಮ್ಮ ಕರ್ತವ್ಯವಾಗಿದೆ.  ಬಡಿದು, ಕಿತ್ತುತಿನ್ನುವ ಪ್ರವೃತ್ತಿಯನ್ನು ನಾವಿಂದು ಪ್ರೋತ್ಸಾಹಿಸುವುದಕ್ಕೆ ಮುಖ್ಯ ಕಾರಣ ನಾವಿಂದು ಬಲಶಾಲಿಗಳಾಗಿದ್ದೇವೆ.  ನಮಗಿಂತ ಬಲಶಾಲಿಗಳು ನಮ್ಮನ್ನು ಬಡಿದು, ಕಿತ್ತುಕೊಂಡೊಯ್ಯುವಾಗ ನಮ್ಮ ನಿಲುವೇನಿರುತ್ತದೆ?!  ಒಟ್ಟಾರೆ ನಾವೆಲ್ಲರೂ ಶಾಂತಿ, ನೆಮ್ಮದಿಯಿಂದ ಪ್ರಕೃತಿಸಂಪತ್ತನ್ನು ಅನುಭವಿಸಬೇಕಾದರೆ ಬಡಿದು, ಕಿತ್ತುತಿನ್ನುವ ಪ್ರವೃತ್ತಿ ಅಣಗಲೇಬೇಕು, ನಾವು ಈ ಪ್ರಕೃತಿಸಂಪತ್ತಿನ ವಿಶ್ವಸ್ತರೇ ಹೊರತು ಮಾಲೀಕರಲ್ಲ ಎಂಬ ಪ್ರಜ್ಞೆಯೂ ಇರಬೇಕು.  ಈ ವೇದಮಂತ್ರಭಾಗದ ಭಾವವಾದರೂ ಅದೇ ತಾನೇ - “ಮಾ ಗೃಧಃ ಕಸ್ಯ ಸ್ವಿದ್ಧನಮ್?” (ಯಜುರ್ವೇದ.೪೦.೧.) - ಕಸಿಯಬೇಡ.  ಯಾರದೀ ಸಂಪತ್ತು?!  ಹಾಗಾದರೆ ನಮ್ಮ ಬದುಕುವಿಕೆಗೆ ಏನೂ ಬೇಡವೇ?!!  ಬೇಕು.  ಪ್ರಕೃತಿಸಂಪತ್ತನ್ನು ಪಾಲಿಸಿ ಪೋಷಿಸಿದಾಗ ಅದು ಬೆಳೆಯುತ್ತದೆ.  ಬೆಳೆದ ಭಾಗ ನಮಗೆ, ಮೂಲ ಮುಂದಿನ ಪೀಳಿಗೆಗೆ!

                     ಇಂದು ರಾಷ್ಟ್ರ ರಾಷ್ಟ್ರಗಳ ನಡುವೆ ನಾವು ಕಾಣುತ್ತಿರುವ ಗಡಿ-ರೇಖೆಗಳೆಲ್ಲ ಕೃತಕ, ಮಾನವನಿರ್ಮಿತ.  ಯಾವುದೇ ಪ್ರಕೃತಿಯ ನಿಯಮ ಈ ಗಡಿ-ರೇಖೆಗಳನ್ನು ಒಪ್ಪುವುದಿಲ್ಲ, ಗೌರವಿಸುವುದೂ ಇಲ್ಲ!!  ಒಂದು ದೇಶದ ಕಾರ್ಖಾನೆಯ ಕೆಟ್ಟಹೊಗೆ ಆ ದೇಶದ ಗಡಿ ಬಂದ ತಕ್ಷಣ ಅಲ್ಲಿಯೇ ನಿಲ್ಲುವುದಿಲ್ಲ.  ಗಡಿ ಮೀರಿ ಹರಡುತ್ತದೆ.  ಒಂದು ದೇಶದಲ್ಲಿ ಹರಿಯುವ ನದಿಯ ನೀರು ಆ ದೇಶದ ಗಡಿ ಬಂದ ತಕ್ಷಣ ನಿಂತುಬಿಡುವುದಿಲ್ಲ.  ಗಡಿ ದಾಟಿ ಸಮುದ್ರದೆಡೆಗೆ ಹರಿಯುತ್ತದೆ.  ಯಾವುದೇ ಪ್ರಾಣಿ, ಪಕ್ಷಿ ಇಂತಹ ಗಡಿಗಳನ್ನು ಗಮನಿಸಿಕೊಂಡು ಓಡುವುದಿಲ್ಲ, ಹಾರುವುದಿಲ್ಲ!!  ಯಾವುದೇ ಜಲಚರ ದೇಶದ ಗಡಿಯಲ್ಲಿಯೇ ಈಸುವುದಿಲ್ಲ.  ಇಡೀ ಸಮುದ್ರ, ಸಾಗರವೇ ಅದರ ಸಾಮ್ರಾಜ್ಯ!!  ವೇದಗಳ ದೃಷ್ಟಿಯಲ್ಲಿ ರಾಷ್ಟ್ರವೆಂದರೆ ಇಡೀ ಜಗತ್ತು.  ಒಂದೆಡೆಯ ಪ್ರಕೃತಿ ವಿಕೋಪ ಜಗತ್ತಿನ ಇತರ ಭಾಗಗಳ ಮೇಲೂ ಪ್ರಭಾವ ಬೀರುತ್ತದೆ.  ಇಂದು ನಾವು ಮಾಡಿಕೊಂಡಿರುವ ಯಾವುದೇ ದೇಶ ಸುಭಿಕ್ಷವಾಗಿ, ಶಾಂತವಾಗಿರಬೇಕಾದರೆ ಇಡೀ ಜಗತ್ತು ಸುಭಿಕ್ಷವಾಗಿ, ಶಾಂತವಾಗಿ ಇರಲೇಬೇಕು.

                 ಜಗತ್ತಿನಲ್ಲಿಯ ಒಂದೊಂದು ದೇಶವೂ ತನ್ನದೇ ಆದ ಸಂವಿಧಾನವನ್ನು ಹೊಂದಿರುವುದು ತಿಳಿದ ವಿಷಯವೇ ಆಗಿದೆ.  ಈ ಸಂವಿಧಾನಗಳ ನಡುವೇ ವೈರುಧ್ಯಗಳಿರುವುದೂ ತಿಳಿದದ್ದೇ.  ಇವುಗಳಿಂದಾಗಿ ಜಾಗತಿಕ ಹಂತದಲ್ಲಿ ಘರ್ಷಣೆಗಳು ತಪ್ಪಿದ್ದಲ್ಲ.  ಇಡೀ ಜಗತ್ತಿಗೇ, ಇಡೀ ಮನುಕುಲಕ್ಕೇ ಒಂದು ಸಂವಿಧಾನದ ಅಗತ್ಯವಿದೆ.  ವಿಶ್ವಂ ಭವತ್ಯೇಕ ನೀಡಮ್|| (ಯಜುರ್ವೇದ.೩೨.೮) - ಇಡೀ ಜಗತ್ತು ಒಂದು ಪುಟ್ಟ ಗೂಡಾಗಿದೆ.  ಈ ಜ್ಞಾನ ನಮ್ಮದಾದ ದಿನವೇ ಇಡೀ ವಿಶ್ವದಲ್ಲಿಯ ಎಲ್ಲ ಯುದ್ಧಸಂಬಂಧೀ ಸಮಸ್ಯೆಗಳೂ ಪರಿಹಾರವಾದಂತೆಯೇ!!

             ಇನ್ನು ಪಂಚಭೂತಗಳ ಮಾಲಿನ್ಯ.  ಎಂದಿನವರೆಗೂ ಈ ಪಂಚಭೂತಗಳನ್ನು ನಮ್ಮ ಭೋಗಕ್ಕಿರುವ ಸಾಧನಗಳೆಂದು ತಿಳಿಯುತ್ತಿರುತ್ತೇವೋ ಅಲ್ಲಿಯವರೆಗೂ ಅವುಗಳ ಶೋಷಣೆ, ಅರ್ಥಾತ್ ಅವುಗಳ ಮೇಲಿನ ಅತ್ಯಾಚಾರ ತಪ್ಪುವುದಿಲ್ಲ.  ಅವು ನಮ್ಮ ಉಳಿವಿಗೆ ಅತ್ಯಾವಶ್ಯಕ, ಅವುಗಳ ಕೊಡುಗೆಗಳು ನಮಗೆ ಅನಿವಾರ್ಯ ಎಂಬ ಪ್ರಜ್ಞೆ ಬರುವವರೆಗೂ, ಕುಳಿತ ರೆಂಬೆಯನ್ನೇ ಕಡಿಯುವ ನಮ್ಮ ಮೂರ್ಖತನ ಕೊನೆಗೊಳ್ಳುವುದಿಲ್ಲ.  ಈ ಪಂಚಭೂತಗಳೆಲ್ಲವೂ ‘ದೇವ’, ನಮ್ಮ ಬಾಳ್ವೆಗೆ ಬೇಕಾದ್ದನ್ನು ಕೊಡುವಂತಹವು ಎಂಬ ಅರಿವು ಮೂಡಿ, ಅವುಗಳ ‘ಪೂಜೆ’ ಅರ್ಥಾತ್ ಸತ್ಕಾರ, ಸದುಪಯೋಗ ಮಾಡಿಕೊಂಡಾಗ ಮಾತ್ರ ಸಕಲವಿಧ ಮಾಲಿನ್ಯಗಳು ನಿಲ್ಲುವುದು ಸಾಧ್ಯ.  ಆಗಿರುವು ಮಾಲಿನ್ಯಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ.  ಅಗ್ನಿರ್ದೇವತಾ ವಾತೋ ದೇವತಾ ...... ವರುಣೋ ದೇವತಾ ..... || (ಯಜುರ್ವೇದ.೧೪.೨೦.) - ಅಗ್ನಿ, ವಾಯು, ನೀರು ಮೊದಲಾದವು ದೇವತೆಗಳು.  ಈಗಾಗಲೇ ಆಗಿರುವ ಮಾಲಿನ್ಯಗಳನ್ನು ಹೋಗಲಾಡಿಸಲು ವೇದಗಳ ಪರಿಹಾರ ‘ಯಜ್ಞ’.  ವಾಯು ಮೊದಲಾದವುಗಳ ಶುದ್ಧಿಗಾಗಿ ಮಾಡುವ ‘ದ್ರವ್ಯಯಜ್ಞ’ವೂ ಹೌದು.  ಅದರಲ್ಲಿ ಔಷಧೀಯ ಗುಣಗಳಿಂದ ಕೂಡಿದ ವಸ್ತುಗಳನ್ನು ಮಾತ್ರ ಬಳಸುವುದರಿಂದ ಶುದ್ಧತೆಯನ್ನು ಸಾಧಿಸಬಹುದು.  ವಿಶಾಲವಾದ ಅರ್ಥದಲ್ಲಿ ‘ಯಜ್ಞ’ವೆಂದರೆ ಶ್ರೇಷ್ಠತಮ ಕರ್ಮವೆಂದರ್ಥ.  ನಾವು ಮಾಡುವ ಯಾವುದೇ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದಾದರೆ ಅದು ಯಜ್ಞವೆನಿಸುತ್ತದೆ.  ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ|| (ಯಜುರ್ವೇದ.೧.೧.) - ಪ್ರೇರಕನಾದ ಜ್ಯೋತಿಸ್ವರೂಪ ಭಗವಂತನು ನಿಮ್ಮನ್ನು ಶ್ರೇಷ್ಠತಮ ಕರ್ಮಕ್ಕೆ ಪ್ರೇರೇಪಿಸಲಿ.  ಒಂದು ಎಚ್ಚರಿಕೆಯ ಮಾತು.  ಯಜ್ಞದಲ್ಲಿ ಸಾಮಾನ್ಯವಾಗಿ ನಾವು ತಿಳಿದಿರುವಂತೆ ಪ್ರಾಣಿಬಲಿ ಮೊದಲಾದ ಹಿಂಸಾಕಾರ್ಯಗಳಿಲ್ಲ.  ಅಹಿಂಸಾಕರ್ಮಗಳಿಗೆ ‘ಅಧ್ವರ’ ಎಂದು ಹೆಸರು.  ಇದು ಯಜ್ಞಕ್ಕಿರುವ ಮತ್ತೊಂದು ಹೆಸರು.

               ಇನ್ನು ಸಾಮಾಜಿಕ ಸಮಸ್ಯೆಗಳು.  ಒಂದಾಗಿರಬೇಕಾಗಿದ್ದ ಮಾನವ ಸಮಾಜವು ಇಂದು ಜಾತಿ-ಮತ, ಪಂಥ-ಪಂಗಡ, ಪಕ್ಷಗಳ ಹೆಸರಿನಲ್ಲಿ ಒಡೆದು ನುಚ್ಚುನೂರಾಗಿದೆ.  ಮೇಲು-ಕೀಳುಗಳ ಜೇಡರಬಲೆಯಲ್ಲಿ ಸಿಕ್ಕು ತೊಳಲುತ್ತಿದೆ.  ಇವುಗಳಿಂದಾಗಿ ಇನ್ನಿತರ ಸಾಮಾಜಿಕ ಸಮಸ್ಯೆಗಳು ಉದ್ಭವವಾಗಿವೆ.  ಇವೆರಡನ್ನೂ ಪರಿಹರಿಸಿಕೊಂಡರೆ ಉಳದ ಸಮಸ್ಯೆಗಳು ತಮ್ಮಂತೆ ತಾವೇ ಮರಣವನ್ನಪ್ಪುತ್ತವೆ.

             ವೇದಗಳಲ್ಲಿ ಎಲ್ಲಿಯೂ ಇಂದು ನಾವು ಕಾಣುತ್ತಿರುವ ಜಾತಿಪದ್ಧತಿಯ ಲವಲೇಶವೂ ಕಂಡುಬರುವುದಿಲ್ಲ.  ಅದು ಹೇಳುವ ಜಾತಿ ಹುಟ್ಟಿನಿಂದ ಬಂದು, ಸಾಯುವವರೆಗೂ ಬದಲಾಗದ, ನೋಡಿದ ಕೂಡಲೇ ತಿಳಿದುಬರುವ ಲಕ್ಷಣಗಳನ್ನು ಹೊಂದಿದ (ಜಾತಿ ಪದದ ಮೂಲವಾದ ಜನೀ ಪ್ರಾದುರ್ಭಾವೇ ಧಾತುವಿನ ಅರ್ಥದ ಆಧಾರದ ಮೇಲೆ) ಇಂದಿನ ಯಾವ ಜಾತಿಯೂ ಈ ವಿವರಣೆಗೆ ಹೊಂದುವುದಿಲ್ಲ.  ಹುಟ್ಟಿದ ಮಗು ಯಾವ ಜಾತಿಯೆಂದು ಯಾರೂ ಹೇಳಲಾಗುವುದಿಲ್ಲ.  ಮಧ್ಯದಲ್ಲಿ ಜಾತಿ-ಮತಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳಬಹುದು.  ಹಾಗಾಗಿ ಜಾತಿ = ಇಂದಿನ Caste  ಅಲ್ಲ.  ಜಾತಿ ಪದದ ನಿಜವಾದ ಅರ್ಥ ಪ್ರಾಣಿಪ್ರಭೇದ, ಪ್ರಾಣಿವರ್ಗ, Species  ಎಂಬುದೇ ಆಗಿದೆ.  ಹಾಗಾಗಿ ನಮ್ಮೆಲ್ಲ ಜಾತಿ ಒಂದೇ ‘ಮಾನವಜಾತಿ’. ಮಾನವಜಾತಿಗೆ ಒಂದೇ ಧರ್ಮ, ‘ಮಾನವಧರ್ಮ’.  ಮತಗಳನ್ನು ಧರ್ಮಗಳೆಂದು ತಪ್ಪು ತಿಳಿದಾಗ ಗೊಂದಲ, ಘರ್ಷಣೆಗಳು ತಪ್ಪುವುದೇ ಇಲ್ಲ.  ಎಲ್ಲ ಮತಗಳೂ ವ್ಯಕ್ತಿಗಳಿಂದ ಪ್ರಾರಂಭವಾದರೆ, ಧರ್ಮವು ಅರ್ಥಾತ್ ಎಲ್ಲರನ್ನೂ ಧರಿಸಿ, ಉಳಿಸಿ, ಬೆಳೆಸುವ ತತ್ತ್ವಗಳು (ಯದ್ಧಾರ್ಯತೇ ತದ್ಧರ್ಮಮ್; ಮೂಲ ಧಾತು ಡುಧಾಞ ಧಾರಣಪೋಷಣಯೋಃ) ಪ್ರಕೃತಿನಿಯಮಗಳನ್ನನುಸರಿಸುತ್ತವೆಯೇ ಹೊರತು ವ್ಯಕ್ತಿಗಳನ್ನು ಆಶ್ರಯಿಸುವುದಿಲ್ಲ.

            ವ್ಯಕ್ತಿ ವ್ಯಕ್ತಿಗಳ ನಡುವೆ ಅಭಿಪ್ರಾಯ ಭೇದ ಇರುವುದು ಸಹಜವೇ.  ಮತಗಳಲ್ಲಿ ಭಿನ್ನತೆ ಅನಿವಾರ್ಯ.  ಆದರೆ, ಇದು ಘರ್ಷಣೆಗೆ, ಮೇಲು-ಕೀಳಿಗೆ ಕಾರಣವಾಗಬಾರದು.  ಹಾಗೆ ಕಾರಣವಾದರೆ, ಒಂದು ಮತವನ್ನು ಸ್ವೀಕರಿಸುವವರು ತಾವು ಶ್ರೇಷ್ಠರೆಂದು ಇತರರ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಿದರೆ, ಅದು ಗುಂಪುಗಾರಿಕೆ ಎನಿಸುತ್ತದೆ.  ಪಂಥ, ಪಂಗಡ, ಪಕ್ಷಗಳ ಕಥೆಯೂ ಇಷ್ಟೇ.  ಮತಭೇದವಿದ್ದಾಗ ಆರೋಗ್ಯಕರ ಚರ್ಚೆ, ಸತ್ಯಾನ್ವೇಷಣೆಗಳನ್ನು ಮುಕ್ತಮನಸ್ಸಿನಿಂದ ಮಾಡುವುದೊಂದೇ ಪರಿಹಾರ.  ಅದು ನಮಗೂ ಸಮಾಜಕ್ಕೂ ಬಲವನ್ನೀಯುತ್ತದೆ.  ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ|| (ಋಗ್ವೇದ.೧.೮೬.೯.) - ಸತ್ಯವನ್ನೇ ಶಕ್ತಿಯನ್ನಾಗಿ ಹೊಂದಿರುವ ಮಾನವರೇ!  ನೀವು ನಿಮ್ಮೆಲ್ಲ ಶಕ್ತಿಗಳನ್ನು ಬಳಸಿಕೊಂಡು ಆ ಸತ್ಯವನ್ನು ಅನ್ವೇಷಿಸಿರಿ.  ಹುಟ್ಟಿನಿಂದ ಹಿಡಿದು, ಬಹುಮತ ಸೇರಿ, ಚರ್ಮದ ಬಣ್ಣದವರೆಗೆ ಯಾವುದೇ ಕಾರಣವನ್ನು ಮುಂದೊಡ್ಡಿ ಜನಜನರ ನಡುವೆ ಮೇಲು-ಕೀಳೆಂಬ ಭಾವನೆಯನ್ನು ಪ್ರೋತ್ಸಾಹಿಸುವುದು ಅಮಾನವೀಯವೇ ಸರಿ.  ಅಜ್ಯೇಷ್ಠಾಸೋ ಅಕನಿಷ್ಠಾಸಃ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|| (ಋಗ್ವೇದ.೫.೬೦.೫.) - ಈ ಮಾನವರಲ್ಲಿ ಯಾರೂ ಜ್ಯೇಷ್ಠರಲ್ಲ, ಯಾರೂ ಕನಿಷ್ಠರಲ್ಲ.  ಸಹೋದರರಾದ ನೀವೆಲ್ಲರೂ ಒಂದುಗೂಡಿ ನಿಮ್ಮ ಸೌಭಾಗ್ಯವನ್ನು ಸಾಧಿಸಿಕೊಳ್ಳಿ.  ವೇದಗಳಲ್ಲಿ ಇಂತಹ ವಿಶ್ವಭ್ರಾತೃತ್ವದ, ಸಹಬಾಳ್ವೆಯ ಮಾತುಗಳಿಗೆ ಲೆಕ್ಕವೇ ಇಲ್ಲ.  ಸುಜಾತಾಸೋ ಜನುಷಾ|| (ಋಗ್ವೇದ.೫.೫೯.೬.) - ಜನ್ಮದಿಂದ ಎಲ್ಲರೂ ಕುಲೀನರೇ.  ಸಮಾನೀ ಪ್ರಪಾ ಸಹ ವೋsನ್ನಭಾಗಃ|| (ಅಥರ್ವವೇದ.೩.೩೦.೬.) - ನಿಮ್ಮೆಲ್ಲರ ಜಲಮೂಲಗಳು ಒಂದಾಗಿರಲಿ, ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ.

              ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ| ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ|| (ಅಥರ್ವವೇದ.೩.೩೦.೫.) - ಮಾನವರೇ!  ಉನ್ನತ ಆದರ್ಶಗಳನ್ನು ಹೊಂದಿದವರಾಗಿರಿ.  ತಿಳಿದವರೂ, ಜಾಗರೂಕರೂ ಆಗಿರಿ.  ಒಬ್ಬರಿಂದೊಬ್ಬರು ಬೇರೆಯಾಗಬೇಡಿರಿ.  ಒಗ್ಗಟ್ಟಾಗಿ ಸಂಪತ್ತನ್ನು ಸಂಪಾದಿಸಿರಿ.  ಒಂದೇ ಮಾನವಧರ್ಮದ ನೊಗವನ್ನು ಹೊತ್ತು ಸಾಗಿರಿ.  ಪರಸ್ಪರರ ನಡುವೆ ಒಳ್ಳೆಯ ಮಾತುಗಳನ್ನೇ ಆಡುವವರಾಗಿ ಉನ್ನತಿಯನ್ನು ಸಾಧಿಸಿರಿ.  ನೀವೆಲ್ಲರೂ ಒಂದೇ ಮಾನವಪಥದಲ್ಲಿ ನಡೆಯುವಂತೆಯೂ, ಸಮಾನಮನಸ್ಕರಾಗಿರುವಂತೆಯೂ ಮಾಡಿರುತ್ತೇನೆ.  ಅನ್ಯೋ ಅನ್ಯಮಭಿ ಹರ್ಯತ|| (ಅಥರ್ವವೇದ.೩.೩೦.೭.) - ಒಬ್ಬರನ್ನೊಬ್ಬರು ಪ್ರೀತಿಸಿರಿ, ಒಬ್ಬರು ಇನ್ನೊಬ್ಬರ ಮನವನ್ನು ಗೆಲ್ಲಿರಿ.  ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ವೇದಗಳಲ್ಲಿ ಇಂದು ಜಾತಿಯ ಹೆಸರಿನಲ್ಲಿ ಬಳಕೆಯಾಗಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮೊದಲಾದ ಪದಗಳ ಪ್ರಯೋಗವಿದೆ.  ಆದರೆ, ಅಲ್ಲೆಲ್ಲಿಯೂ ಅವುಗಳನ್ನು ಇಂದು ನಾವು ಕೃತಕವಾಗಿ ನಿರ್ಮಿಸಿಕೊಂಡಿರುವ ಜಾತಿ =  Cast  ಎಂದು ಅಪ್ಪಿತಪ್ಪಿಯೂ ಹೇಳಿಲ್ಲ.  ವೇದಗಳು ಅವನ್ನು ಅತ್ಯಂತ ಸ್ಪಷ್ಟವಾಗಿ ವರ್ಣಗಳೆಂದು ಕರೆದಿವೆ.  ವರ್ಣವೆಂದರೆ ಆರಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವ ಜೀವನ ಪದ್ಧತಿ.  ನಮ್ಮ ನಮ್ಮ ಗುಣ, ಕರ್ಮ, ಸ್ವಭಾವ, ಸಾಮರ್ಥ್ಯಗಳಿಗನುಸಾರವಾಗಿ ಆಯ್ಕೆಮಾಡಿಕೊಳ್ಳಲು ನಮಗೆ ಸ್ವಾತಂತ್ರ್ಯವಿರುವುದಕ್ಕೇ ವರ್ಣವೆಂದು ಹೆಸರು.  ಈಗಾಗಲೇ ಹೇಳಿರುವಂತೆ ಈ ವರ್ಣಗಳ ನಡುವೆ ಹೆಚ್ಚು-ಕಡಿಮೆ ಎಂಬುದಿಲ್ಲ.  ಎಲ್ಲದಕ್ಕೂ ಸಮಾನವಾದ ಪ್ರಾಶಸ್ತ್ಯ.

               ಮುಂದಿನ ಹಂತದಲ್ಲಿ ದಾಂಪತ್ಯ, ಪಾರಿವಾರಿಕ, ಕೌಟುಂಬಿಕ, ಸಾಂಸಾರಿಕ ಸಮಸ್ಯೆಗಳು.  ಕುಟುಂಬ, ಸಂಸಾರ ಪ್ರಾರಂಭವಾಗುವುದೇ ‘ವಿವಾಹ’ ಸಂಸ್ಕಾರದಿಂದ.  ಆ ಸಂದರ್ಭದಲ್ಲೇ ವಧೂ-ವರರ ಬಾಯಿಯಲ್ಲಿ ಈ ಮಾತನ್ನು ಹೇಳಿಸಲಾಗುತ್ತದೆ.  ವಧೂ-ವರರು ಅರ್ಥ ತಿಳಿದೇ ಹೇಳಬೇಕು.  ಸಮಾಪೋ ಹೃದಯಾನಿ ನೌ|| (ಋಗ್ವೇದ.೧೦.೮೫.೪೭.) - ಎರಡು ನೀರುಗಳು ಬೆರೆತ ಮೇಲೆ ಅವುಗಳನ್ನು ಪ್ರತ್ಯೇಕವಾಗಿ ಗುರಿತಿಸಲಾಗದಂತೆ, ನಮ್ಮಿಬ್ಬರ ಹೃದಯಗಳನ್ನು ಒಂದಾಗಿ ಬೆಸೆಯುವ ಸಂಕಲ್ಪ ನಮ್ಮದಾಗಿದೆ.  ಈ ಸಂಕಲ್ಪವು ಇಬ್ಬರಲ್ಲೂ ದೃಢವಾಗಿದ್ದಲ್ಲಿ ಎಷ್ಟೋ ದಾಂಪತ್ಯ ಸಮಸ್ಯೆಗಳು ಉಂಟಾಗುವುದೇ ಇಲ್ಲ.  ಪತಿ-ಪತ್ನಿಯರ ನಡುವೆ ನೂರಕ್ಕೆ ನೂರು ಹೊಂದಾಣಿಕೆ ಎಂಬುದು ವಾಸ್ತವವಲ್ಲ.  ಹೊಂದಿಸಿಕೊಂಡು ಹೋಗುವ ಮನೋಭಾವ ಇಬ್ಬರಲ್ಲೂ ಇರಬೇಕು.  ಸಂಬಂಧವನ್ನು ಕಡಿದುಕೊಳ್ಳುವ ಧೋರಣೆಗೆ ಇಲ್ಲಿ ಅವಕಾಶವಿಲ್ಲ.  ಪಾಣಿಗ್ರಹಣ ಸಂದರ್ಭದಲ್ಲಿ ವರನು ವಧುವಿಗೆ ಇದನ್ನೇ ಹೇಳುತ್ತಾನೆ.  ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾಸಃ|| (ಋಗ್ವೇದ.೧೦.೮೫.೩೬.) - ಪತಿಯಾಗುವ ನನ್ನೊಂದಿಗೆ ನೀನು ಮುಪ್ಪಿನ ಕಾಲದವರೆಗೂ ಬಾಳುವಂತೆ, ಆಧ್ಯಾತ್ಮಿಕ ಮತ್ತು ಭೌತಿಕ ಸೌಭಾಗ್ಯಪ್ರಾಪ್ತಿಗಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ.  ಇಂದು ದಾಂಪತ್ಯದಲ್ಲಿ ಒಡಕುಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅನೈತಿಕ ಹಾಗೂ ವಿವಾಹೇತರ ಸಂಬಂಧಗಳು.  ಇವುಗಳನ್ನು ಮೂಲದಲ್ಲಿಯೇ ಚಿವುಟಿಹಾಕುವಂತಹ ಮಾರ್ಗದರ್ಶನ ವೇದಗಳಲ್ಲಿವೆ.  ವರನು ವಧುವಿಗೆ ತಾನು ಗೃಹಸ್ಥನಾಗಿ ಬಾಳುವೆ ಮಾಡುವ ಸಂದರ್ಭದಲ್ಲಿ ತನ್ನ ನಡತೆ ಹೇಗಿರುತ್ತದೆ ಎಂಬುದನ್ನು ತಿಳಿಸುವಾಗ, ನ ಸ್ತೇಯಮದ್ಮಿ ಮನಸೋದಮುಚ್ಯೇ|| (ಅಥರ್ವ.೧೪.೧.೫೭.) - ನಾನು ನಿನಗೆ ಕಾಣದಂತೆ ಕಳ್ಳತನದಿಂದ ಯಾವ ಭೋಗವನ್ನೂ ಅನುಭವಿಸೆನು, ಮನದಿಂದ ಕಳ್ಳತನದ ಭಾವನೆಯನ್ನೇ ಕಿತ್ತು ಬಿಸಾಡುವೆನು, ಎಂದು ಆಶ್ವಾಸನೆಯನ್ನು ನೀಡುತ್ತಾನೆ.  ಅರಿತು ಈ ಮಾತುಗಳನ್ನಾಡಿದಾಗ ಎಷ್ಟೋ ಸಮಸ್ಯೆಗಳು ಹುಟ್ಟುವುದೇ ಇಲ್ಲ.  ಇಂತಹ ವರನ ಅನೇಕ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ ವಧುವು ಲಾಜಾಹೋಮದಲ್ಲಿ, ದೀರ್ಘಾಯುರಸ್ತು ಮೇ ಪತಿಃ|| (ಅಥರ್ವವೇದ.೧೪.೨.೬೩.) - ನನ್ನ ಪತಿಯು ದೀರ್ಘಾಯುವಾಗಲಿ, ಎನ್ನುತ್ತಾಳೆ.  ದಾಂಪತ್ಯದ ಸೌಖ್ಯಕ್ಕಾಗಿ ಅನೇಕ ಮಾರ್ಗದರ್ಶನಗಳಿವೆ.  ಉದಾಹರಣೆಗೆ, ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್|| (ಅಥರ್ವವೇದ.೩.೩೦.೨.) - ಪತ್ನಿಯು ಪತಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ.  ಈ ಸೂಚನೆ ಇಬ್ಬರಿಗೂ ಹೊಂದುತ್ತದೆ.  ಪತಿಯು ಪತ್ನಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ.  ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳು ಹೇಗಿರಬೇಕು ಎಂಬುದನ್ನು ಸೂಚಿಸುತ್ತಾ, ಅನುವ್ರತಃ ಪಿತುಃ ಪುತ್ರೋ ಮಾತ್ರಾ ಭವತು ಸಂಮನಾಃ|| (ಅಥರ್ವವೇದ.೩.೩೦.೨.) - ತಂದೆಯ ಸಂಕಲ್ಪಗಳಿಗೆ ಅನುಗುಣವಾದ ಸಂಕಲ್ಪಗಳು ಮಗ/ಮಗಳಲ್ಲಿ ಮೂಡಲಿ.  ತಾಯಿಯೊಂದಿಗೆ ಸಮಾನಚಿತ್ತವಿರಲಿ.  ಇನ್ನು ಸಹೋದರ, ಸಹೋದರಿಯರ ನಡುವಣ ಬಾಂಧವ್ಯಕ್ಕೆ ಸಂಬಂದಿಸಿದಂತೆ ಈ ಮಾತುಗಳು ಸ್ಪಷ್ಟವಾಗಿಯೇ ಇವೆ.  ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ|| (ಅಥರ್ವವೇದ.೩.೩೦.೩.) - ಸೋದರನು ಸೋದರನನ್ನು, ಅಂತೆಯೇ ಸೋದರಿಯು ಸೋದರಿಯನ್ನು ದ್ವೇಷಿಸದಿರಲಿ.  ಪರಸ್ಪರರ ನಡುವೆ ದ್ವೇಷಭಾವನೆ ಇಲ್ಲದಿರಲಿ.  ಅತ್ತೆ, ಮಾವ, ಸೊಸೆ, ಅಳಿಯಂದಿರ ನಡುವಣ ನೆಂಟಸ್ತಿಕೆ ಹೇಗಿರಬೇಕೆಂಬುದಕ್ಕೆ ಒಂದು ಉದಾಹರಣೆ.  ಸಮ್ರಾಜ್ಞೀ ಶ್ವಶುರೇ ಭವ ಸಮ್ರಾಜ್ಞೀ ಶ್ವಶ್ವ್ರಾಂ ಭವ|| (ಋಗ್ವೇದ.೧೦.೮೫.೪೬.) - ಅತ್ತೆ-ಮಾವ ಇವರುಗಳಿಗೆ ಸಾಮ್ರಾಜ್ಞಿಯೆನಿಸು/ಸಮ್ರಾಜನೆನಿಸು..  ತನ್ನ ಸೇವೆ, ಪ್ರೀತಿ, ಆದರಗಳಿಂದ ಉನ್ನತವಾದ ಸ್ಥಾನವನ್ನು ಗಳಿಸಿಕೊಳ್ಳಬೇಕೆಂಬುದು ತಾತ್ಪರ್ಯ.  ಇಂದು ಇಂತಹ ವೇದಮಾರ್ಗದರ್ಶನ, ಶಿಕ್ಷಣಗಳಿಲ್ಲದ ಕಾರಣ ನೂರಾರು ಸಮಸ್ಯೆಗಳುಂಟಾಗಿವೆ.  ಈ ಸಾಮರಸ್ಯದ ಮಾರ್ಗದರ್ಶನ ಎಷ್ಟು ವಿಶಾಲವಾಗಿದೆಯೆಂದರೆ ಸಕಲ ಜೀವರಾಶಿಗಳ ಬಗ್ಗೆಯೂ ಮೈತ್ರೀಭಾವನೆಯಿರಲಿ ಎನ್ನುತ್ತದೆ ವೇದ.  ಮಿತ್ರಸ್ಯ ಮಾ ಚಕ್ಷುಷಾ ಸರ್ವಾಣಿ ಭೂತಾನಿ ಸಮೀಕ್ಷಂತಾಮ್| ಮಿತ್ರಸ್ಯಾಹಂ ಚಕ್ಷುಷಾ ಸರ್ವಾಣಿಭೂತಾನಿ ಸಮೀಕ್ಷೇ ಮಿತ್ರಸ್ಯ ಚಕ್ಷುಷಾ ಸಮೀಕ್ಷಾಮಹೇ|| (ಯಜುರ್ವೇದ.೩೬.೧೮.) - ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೂ ನನ್ನೊಡನೆ ವ್ಯವಹರಿಸಲಿ.  ನಾನೂ ಕೂಡ ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೊಂದಿಗೆ ವ್ಯವಹರಿಸುತ್ತೇನೆ.  ಸಕಲಜೀವರಾಶಿಗಳು ಮೈತ್ರೀಭಾವನೆಯಿಂದಲೇ ಪರಸ್ಪರರ ವಿಷಯದಲ್ಲಿ ವ್ಯವಹರಿಸಲಿ.

          ಕೊನೆಯದಾಗಿ ವ್ಯಕ್ತಿಗತ ಸಮಸ್ಯೆಗಳು.  ಶಾರೀರಿಕ ಆರೋಗ್ಯಸಾಧನೆಗೆ ಮಾರ್ಗಸೂಚಿಗಳಿವೆ.  ಅಶ್ಮಾ ಭವತ ನಸ್ತನೂಃ|| (ಅಥರ್ವವೇದ.೨.೧೩.೪.) - ನಮ್ಮ ಶರೀರವು ಕಲ್ಲಿನಂತಾಗಲಿ.  ಬಲಂ ಧೇಹಿ ತನೂಷು ನಃ|| (ಋಗ್ವೇದ.೩.೫೩.೧೮.) - ನಮ್ಮ ಶರೀರಗಳಲ್ಲಿ ಬಲವನ್ನು ಧಾರಣೆ ಮಾಡಿಸು.  ಶಾರೀರಿಕ, ಮಾನಸಿಕ ಆರೋಗ್ಯ ಸಾಧನೆಯ ಸಂಕಲ್ಪಕ್ಕೆ ಪ್ರೇರಣೆಯಿದೆ.  ಅದೀನಾಃ ಸ್ಯಾಮ ಶರದಃ ಶತಮ್|| (ಯಜುರ್ವೇದ.೩೬.೩೪.) - ದೈನ್ಯತೆ ಇಲ್ಲದೆ ನೂರ್ಕಾಲ ಬಾಳೋಣ.  ಮಾನಸಿಕ ಆರೋಗ್ಯಸಿದ್ಧಿಗಾಗಿ ನಮ್ಮಲ್ಲಿ ಮಂಗಳಕರವಾದ ಚಿಂತನೆಗಳು ಅತ್ಯಗತ್ಯ.  ಭಗವಂತನಲ್ಲಿ ನಮ್ಮ ಪ್ರಾರ್ಥನೇ ಅದೇ ಆಗಿರಬೇಕು.  ತನ್ಮೇ ಮನಃ ಶಿವಸಂಕಲ್ಪಮಸ್ತು|| (ಯಜುರ್ವೇದ.೩೪.೧.) - ನನ್ನ ಮನಸ್ಸು ಮಂಗಳಕರ ಸಂಕಲ್ಪಗಳನ್ನು ಉಳ್ಳದ್ದಾಗಲಿ. ಧಿಯೋ ಯೋ ನಃ ಪ್ರಚೋದಯಾತ್|| (ಯಜುರ್ವೇದ.೩.೩೫.) - ನಮ್ಮ ಪ್ರಜ್ಞಾ-ಕರ್ಮಗಳನ್ನು (ಆ ವಿಶ್ವಚೇತನನು) ಪ್ರಚೋದಿಸಲಿ.  ಪರೋsಪೇಹಿ ಮನಸ್ಪಾಪ|| (ಅಥರ್ವವೇದ.೬.೪೫.೧.) - ಹೇ ಪಾಪವೇ! ನನ್ನ ಮನಸ್ಸಿನಿಂದ ದೂರಹೋಗು.  ವಿಶ್ವಾಯುರ್ಧೇಹ್ಯಕ್ಷಿತಮ್|| (ಋಗ್ವೇದ.೧.೯.೭.) - ಕೊರತೆಗಳಿಲ್ಲದ ಪೂರ್ಣ ಆಯಸ್ಸನ್ನು ಧಾರಣೆ ಮಾಡಿಸು.

                ಈ ಶಾರೀರಿಕ, ಮಾನಸಿಕ ಆರೋಗ್ಯಗಳ ಹಿಂದಿರುವುದು ಆಧ್ಯಾತ್ಮಿಕ ಆರೋಗ್ಯ.  ಅಲ್ಲಿ ‘ಸಂಸ್ಕಾರ’ಗಳದೇ ಸಾಮ್ರಾಜ್ಯ.  ಅವುಗಳ ಶುದ್ಧತೆಗಾಗಿ ಪ್ರಾರ್ಥನೆಗಳಿವೆ.  ಪ್ರಾರ್ಥನೆಯೆಂದರೆ ಬರೀ ಬೇಡುವುದಲ್ಲ, ಅದರಂತೆ ನಡೆಯುವ ಸಂಕಲ್ಪ, ಆನುಷ್ಠಾನ.  ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಿಭಿರ್ಯಜತ್ರಾಃ|  ಸ್ಥಿರೈರಂಗೈಸ್ತುಷ್ಟುವಾಗ್ ಮ್ ಸಸ್ತ      ನೂಭಿಃ ವ್ಯಶೇಮ ದೇವಹಿತಂ ಯದಾಯುಃ|| (ಯಜುರ್ವೇದ.೨೫.೨೧.) - ಮಂಗಳಕರವಾದುದನ್ನೇ ಕಿವಿಗಳಿಂದ ಕೇಳೋಣ, ಕಲ್ಯಾಣಕರವಾದುವನ್ನೇ ಕಣ್ಣುಗಳಿಂದ ನೋಡೋಣ.  ಸ್ಥಿರವಾದ ಅಂಗಾಗಗಳನ್ನು ಹೊಂದಿದವರಾಗಿ, ನಮ್ಮೀ ಶರೀರವನ್ನು ಸಂಪೂರ್ಣ ಆಯುವಿರುವವರೆಗೆ ಸಾಧನೆಗಾಗಿ ಬಳಸಿಕೊಳ್ಳೋಣ.  ಜಹಿ ರಕ್ಷಾಂಸಿ ಸುಕ್ರತೋ|| (ಋಗ್ವೇದ.೬.೧೬.೨೯.) - ಸತ್ಕರ್ಮಶೀಲನೇ! ರಾಕ್ಷಸೀಗುಣಗಳನ್ನು ನಾಶಮಾಡು.  ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಂ ಉತ ಕೋಕಯಾತುಮ್|  ಸುಪರ್ಣಯಾತುಂ ಉತ ಗೃಧ್ರಯಾತುಂ ದೃಶದೇವ ಪ್ರಮೃಣ ರಕ್ಷ ಇಂದ್ರ|| (ಅಥರ್ವವೇದ.೮.೪.೨೨.) - ಹೇ ಭಗವಂತ!  ನನ್ನಲ್ಲಿರುವ ಗೂಬೆಯ ಗುಣ (ಮೋಹ), ತೋಳನ ಗುಣ (ಕ್ರೋಧ), ನಾಯಿಯ ನಡೆ (ಮತ್ಸರ), ಕೋಕಪಕ್ಷಿಯ ರೀತಿ (ಕಾಮ), ಗರುಡನ ಗುಣ (ಮದ), ಹದ್ದಿನ ನಡೆ (ಲೋಭ), ಇವುಗಳನ್ನು ಕಲ್ಲಿನಿಂದೆಂಬಂತೆ ತಿಕ್ಕಿ ತೀಡಿಬಿಡು.  ನನ್ನಲ್ಲಿರುವ ಪಶುತ್ವವು ಇಲ್ಲವಾಗಲಿ.  ನಮ್ಮೊಳಗಿನ ‘ಸಂಸ್ಕಾರ’ಗಳ ಶುದ್ಧಿಗಾಗಿ ಇಂತಹ ನೂರಾರು ಮಂತ್ರಗಳಿವೆ.

                      ಮೇಲಿನವೆಲ್ಲವೂ ಪ್ರಾರ್ಥನೆ, ಸಂಕಲ್ಪಗಳ ರೂಪದಲ್ಲಿದ್ದರೆ, ಇನ್ನೂ ಅನೇಕ ಮಂತ್ರಗಳು ಅವನ್ನು ಸಾಧಿಸಲು ಬೇಕಾದ ಅನುಷ್ಠಾನಪರವಾದ ಮಾತುಗಳನ್ನೂ ನೇರವಾಗಿಯೇ ಆಡಿವೆ.  ಅಕ್ಷೈರ್ಮಾ ದೀವ್ಯಃ|| (ಋಗ್ವೇದ.೧೦.೩೪.೧೩.) - ದಾಳ ಮೊದಲಾದವುಗಳಿಂದ ಜೂಜಾಡಬೇಡ.  ಅನಾಗೋ ಹತ್ಯಾ ವೈ ಭೀಮಾ|| (ಅಥರ್ವವೇದ.೧೦.೧.೨೯.) - ನಿಷ್ಪಾಪ ಪ್ರಾಣಿಗಳನ್ನು ಕೊಲ್ಲುವುದು ಭಯಾನಕವು. ಅನೃಣಾಃ ಸ್ಯಾಮ||  (ಋಗ್ವೇದ.೬.೧೧೭.೩.) - ಸಾಲವಿಲ್ಲದವರಾಗೋಣ.  ಉಪಸರ್ಪ ಮಾತರಂ ಭೂಮಿಮೇತಾಮ್|| (ಋಗ್ವೇದ.೧೦.೧೮.) - ಈ ತಾಯಿನೆಲದ ಬಳಿ ಸಾರು.  ಕೇವಲಾಘೋ ಭವತಿ ಕೇವಲಾದೀ|| (ಋಗ್ವೇದ.೧೦.೧೧೭.೬.) - ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ.  ಮನುರ್ಭವ|| (ಋಗ್ವೇದ.೧೦.೫೩.೬.) - ಮನನಶೀಲನಾಗು.  ಮರ್ಯಾದೇ ಪುತ್ರಮಾಧೇಹಿ|| (ಅಥರ್ವವೇದ.೬.೮೧.೨.) - ಮಿತಿಯಲ್ಲಿ ಸಂತಾನವನ್ನು ಹೊಂದಿರಿ.  ಮಾ ಕ್ರುಧಃ|| (ಅಥರ್ವವೇದ.೧೧.೨.೨೦.) - ಕೋಪಿಸಿಕೊಳ್ಳಬೇಡ.  ಮಾ ನಿಂದತಃ|| (ಋಗ್ವೇದ.೪.೫.೨.) - ನಿಂದೆಯನ್ನು ಮಾಡಬೇಡ.  ಮಾ ರುವಣ್ಯಃ|| (ಋಗ್ವೇದ.೮.೯೬.೧೨.) - ಅಳಲೇಬೇಡ.  ಇಂತಹ ಉದಾಹರಣೆಗಳನ್ನು ನೂರಾರು ಕೊಡಬಹುದು.

         ಒಂದೊಂದು ಮಾರ್ಗದರ್ಶನವೂ ಎಷ್ಟು ಗಂಭೀರವಾಗಿದೆ ಮತ್ತು ಅವುಗಳ ಪಾಲನೆಯಿಂದ ಇಂದು ಜಗತ್ತನ್ನು, ಸಮಾಜವನ್ನು, ಪರಿವಾರಗಳನ್ನು, ವ್ಯಕ್ತಿಗಳನ್ನು ಕಾಡುತ್ತಿರುವ ಎಷ್ಟೋ ಸಮಸ್ಯೆಗಳು ಮೂಲದಲ್ಲಿಯೇ ಇಲ್ಲವಾಗುತ್ತವೆ ಎಂಬುದನ್ನು ಯಾರು ಬೇಕಾದರೂ ಕಾಣಬಹುದಾಗಿದೆ.  ಈಗಲಾದರೂ ಯಾವುದೇ ಸಮಸ್ಯೆಗೂ ವೇದಗಳಲ್ಲಿ ಪರಿಹಾರವಿದೆ ಎಂಬುದನ್ನು ಒಪ್ಪುತ್ತೀರಿ ತಾನೇ!!!

- ವೇದಾಧ್ಯಾಯೀ ಸುಧಾಕರ ಶರ್ಮಾ / ೯೪೪೮೮೪೨೪೭೪.