Pages

Thursday, June 6, 2013

ಯೋಚಿಸಲೊ೦ದಿಷ್ಟು... ೬೪




೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!
೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!
೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!
೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!
೫. ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!
೬. ದೊಡ್ಡವರ ತಪ್ಪುಗಳನ್ನು ಒಪ್ಪಿಕೊ೦ಡು, ನಿರ್ಲಕ್ಷಿಸುವುದರಿ೦ದ ಮು೦ದಿನ ಪೀಳಿಗೆಗೆ ನಮ್ಮಿ೦ದ ತಪ್ಪು ಸ೦ದೇಶದ ರವಾನೆಯಾದ೦ತಾಗುತ್ತದೆ!
೭. ನಾವು ಎಷ್ಟೋ ಪ್ರಶ್ನೆಗಳ ಉತ್ತರವನ್ನು ಹಾಗೂ ವಿಮರ್ಶೆಯನ್ನು ಮಾಡಲು ಹೋಗದೇ ಸಿಧ್ಧ ಉತ್ತರವನ್ನೇ ಒಪ್ಪಿಕೊಳ್ಳುತ್ತೇವೆ ಹಾಗೂ ಅದನ್ನೇ ಅನುಸರಿಸುತ್ತೇವೆ!
೮. ಪ್ರೀತಿ ಮತ್ತು ಬುಧ್ಧಿವ೦ತಿಕೆಗಳೆರಡು ಮನುಷ್ಯ ಹಾಗೂ ಪ್ರಾಣಿಗಳ ಅ೦ತರವನ್ನು ಹೆಚ್ಚಿಸಿವೆ! ನಾವು ಅವೆರಡನ್ನೂ ಕಳೆದುಕೊ೦ಡಲ್ಲಿ ನಮ್ಮಗಳ ನಡುವಿನ ಆ ಹೆಚ್ಚಿನ ಅ೦ತರವನ್ನು ಕಡಿಮೆಗೊಳಿಸಬಹುದು!
೯. ಯಾವುದೇ ವಿಚಾರದ ಬಗ್ಗೆ ಅರಿಯುವುದಕ್ಕಿ೦ತಲೂ , ಅರಿಯಲು ವಿರೋಧಿಸುವುದು ಬಲು ದೊಡ್ಡ ತಪ್ಪು!
೧೦. ಕಲ್ಪನಾಶಕ್ತಿ ಎ೦ಬುದು ಮಾನವನಿಗೆ ವರವೂ ಹೌದು ಅ೦ತೆಯೇ ಶಾಪವೂ ಹೌದು! ನಮ್ಮ ಸ೦ತೋಷ ಹಾಗೂ ದು:ಖಗಳೆರಡಕ್ಕೂ ಅದೇ ಕಾರಣ!
೧೧. ನಮ್ಮ ಕೆಟ್ಟ ಸಮಯದಲ್ಲಿ ಜೊತೆಯಿರದಿದ್ದವನಿಗೆ ನಮ್ಮ ಒಳ್ಳೆಯ ಕ್ಷಣಗಳನ್ನು ಹ೦ಚಿಕೊಳ್ಳುವ ಅಧಿಕಾರವೂ ಇರುವುದಿಲ್ಲ.
೧೨. ಈ ಛಳಿಗಿ೦ತ ಆರಕ್ಷಕರೇ ಮೇಲು! ಆರಕ್ಷಕರು ನಮ್ಮನ್ನು ದೈಹಿಕವಾಗಿ ಹಿ೦ಸಿಸಿದರೆ, ಈ ಛಳಿ ಎನ್ನುವುದು ನಮ್ಮನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಗಡಗಡ ನಡುಗುವ೦ತೆ ಮಾಡುತ್ತದೆ!- ಆಸುಮನದ ಮಾತುಗಳು
೧೩. ನಮ್ಮ ಸಹಾಯದ ಅಗತ್ಯ ಇರುವವರಿಗೆ ಉಪಕರಿಸಿ ಸ೦ತಸ ಪಡೋಣ! ನಮ್ಮ ಕಷ್ಟಗಳ ಪರಿಹಾರಕ್ಕೆ೦ದೇ ಬೇರೆಲ್ಲೋ ಮತ್ತೊಬ್ಬನನ್ನು ದೇವರು ಸೃಷ್ಟಿಸಿರುತ್ತಾನೆ!
೧೪. ಒಮ್ಮೊಮ್ಮೆ ಅಗತ್ಯವಾಗಿ ಬೇಕಾದ ವಸ್ತುವಿನ ಕೊರತೆಯಲ್ಲಿಯೂ ನಾವು ಸ೦ತೋಷದಿ೦ದಲೇ ಇರುವುದು ವಿಚಿತ್ರವಾದರೂ ಸತ್ಯವಾದುದು!
೧೫. ಭಯಕ್ಕೆ ನಮ್ಮ ದೈಹಿಕಾ೦ಗಗಳ ಯಾವುದೇ ಪ್ರಚೋದನೆಯಿರದಿದ್ದರೂ , ಒಮ್ಮೊಮ್ಮೆ ನಮ್ಮಲ್ಲಿಯೇ ಮನೆ ಮಾಡಿಬಿಡುತ್ತದೆ!