Pages

Friday, March 20, 2015

ಜೀವನವೇದ-1






ವೇದಭಾರತಿಯ ಕಾರ್ಯಕ್ರಮಗಳ ಒತ್ತಡದಲ್ಲಿ ವೇದಸುಧೆಯನ್ನು ಗಮನಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ನನ್ನ ಪುಸ್ತಕ "ಜೀವನವೇದ" ಲೋಕಾರ್ಪಣೆಯಾಗಿದೆ. ಪುಸ್ತಕವನ್ನು ಲೋಕಾರ್ಪಣೆಮಾಡಿದ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ್ ಮತ್ತು ಪುಸ್ತಕವನ್ನು ಕುರಿತು ಮಾತನಾಡಿದ ವಿಕ್ರಮ ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ಮಾತುಗಳನ್ನು ಕೇಳಿ.ನಾಳೆ ಉಗಾದಿ ಹಬ್ಬದಿಂದ ಆರಂಭಿಸಿ ಪ್ರತಿ ಭಾನುವಾರ "ಜೀವನವೇದದ" ಒಂದೊಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗುವುದು. ಶ್ರೀಸುಧಾಕರಶರ್ಮರ ಆರೋಗ್ಯವನ್ನು ನೋಡಿಕೊಂಡು ಅವರ ಉಪನ್ಯಾಸವನ್ನೂ ಸಹ ವಾರಕ್ಕೊಂದಾದರೂ ಪ್ರಕಟಿಸಬೇಕೆಂಬ ಆಸೆ ಇದೆ.ಎಂದಿನಂತೆ ಸಹಕರಿಸುತ್ತೀರಾಗಿ ನಂಬಿಕೆ ಇದೆ. ಹೊಸವರ್ಷವು ಎಲ್ಲರಿಗೂ ಶುಭವನ್ನು ತರಲಿ.
---------------------------------------------------------------------------------------------------------
ಭಾಗ-೧
 ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅಂತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ ಬರಬೇಕೇ? ಅಧ್ಯಾತ್ಮ ಚಿಂತನೆ ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ? ಸ್ವರ್ಗ ಎಲ್ಲಿದೆ? ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು ನಿತ್ಯ ನರಕವಾಗಿ ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ? ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು ಕೆಲವು ಜೀವನ ಸೂತ್ರಗಳನ್ನು ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ. ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ವಿಧಿ ಇರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
 ಸಖೇ ಸಪ್ತಪದೀ ಭವ 
 ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತು? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ. ಸಖೇ ಸಪ್ತಪದೀ ಭವ ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ ನೂರಾರು ಜನರು ಸಾಕ್ಷಿಯಾಗಿದ್ದಾರೆ, ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ? ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನಡೆಯುತ್ತವೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ? ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು , ಅಲ್ಲವೇ? ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ? ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕಕ್ಕೆ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆ ಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.

 ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ| [ಕಾಂಡ ೧೪ ಸೂಕ್ತ ೨ ಮಂತ್ರ ೬೪] 

ಅರ್ಥ:- ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ. ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು. ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು ಹೇಗೆ ಜೀವನವನ್ನು ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು ವೇದವು ನಮಗೆ ನೀಡುತ್ತದೆ.