Pages

Saturday, December 20, 2014

ವೇದಚಿಂತನೆ ಮತ್ತು ಸಾಮಾಜಿಕ ಸಾಮರಸ್ಯದ ಆಧ್ಯತೆ



                 ಕಳೆದ ಆರೇಳು ವರ್ಷಗಳಿಂದ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಒಡನಾಟದಲ್ಲಿದ್ದೇನೆ.ಶರ್ಮರ ಸತ್ಯ ನುಡಿಗಳು ಹಲವರಿಗೆ ಸಹ್ಯವಾಗುವುದಿಲ್ಲ.ಶರ್ಮರು ಹೇಳುವುದೆಲ್ಲಾ ಸತ್ಯವೇ ಆದರೂ ಶರ್ಮರಿಗೆ ಕಟು ವಿರೋಧಿಗಳಿದ್ದಾರೆ.ಹಾಗೆಂದು ಅವರ ಶಿಷ್ಯರುಗಳಿಲ್ಲವೆಂದಲ್ಲ. ಸಾವಿರಾರು ಜನ ಅವರ ವಿಚಾರವನ್ನು ಇಷ್ಟಪಡುತ್ತಾರೆ ನನ್ನನ್ನೂ ಸೇರಿಸಿದಂತೆ.ಆದರೆ ಯಾವುದನ್ನು ಶರ್ಮರು ಖಂಡಿಸುತ್ತಾರೋ ಅದನ್ನೇ ಅವರ ಹಲವು ಶಿಷ್ಯರು ಮನೆಯಲ್ಲಿ ನಡೆಸಿಕೊಂಡು ಬರುವಂತಾ ಪರಿಸ್ಥಿತಿ! ಇದರಲ್ಲಿ ನಾನೇನೂ  ಹೊರತಲ್ಲ.ಅಂದರೆ ಕೇಳುವಾಗ ಹಿತವಾಗಿದ್ದು ಆಚರಿಸುವಾಗ ಹಿತವಾಗುವುದಿಲ್ಲ. ಉಧಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ವಿಚಾರವನ್ನು ಶರ್ಮರು ಒಪ್ಪುವುದಿಲ್ಲ.  ಮೃತಶರೀರವನ್ನು ಸುಟ್ಟಮೇಲೆ ಎಲ್ಲಾ ಮುಗಿದಂತೆ.ಮುಂದೆ ಯಾವ ಶ್ರಾದ್ಧ ಕರ್ಮಗಳ ಅಗತ್ಯವಿಲ್ಲ. ಇದೆಲ್ಲಾ ಪುರೋಹಿತರ ಸೃಷ್ಟಿ ಎಂದೇ ಶರ್ಮರ ಅಭಿಮತ. ಆದರೆ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.ಅದನ್ನು ಬಿಡುವುದು ಹೇಗೆ? ಈ ಅಡ್ದಕತ್ತರಿಯಲ್ಲಿ ಶರ್ಮರ ಶಿಷ್ಯರು ಸಿಕ್ಕಿಹಾಕಿಕೊಂಡು ನೆರಳುವವರೂ ಉಂಟು.    
         ನನ್ನಂತವನ ಚಿಂತನೆಯೇ ಬೇರೆ. ಶರ್ಮರನ್ನು ಒಪ್ಪುತ್ತೇನೆ.ಆದರೆ ಶ್ರಾದ್ಧಕರ್ಮಗಳನ್ನು ಬಿಡುವುದಿಲ್ಲ. ಅಂದರೆ ಇದೇನಿದು? ಹೇಳುವುದೊಂದು ಮಾಡುವುದೊಂದೇ? ಇಲ್ಲಾ. ಹೇಳುವುದನ್ನೇ ಮಾಡುತ್ತಿರುವುದು. ಅಪ್ಪ-ಅಮ್ಮನ ವಾರ್ಷಿಕ ಶ್ರಾದ್ಧಗಳನ್ನು ವರ್ಷಕ್ಕೊಮ್ಮೆ ಅಣ್ಣ ತಮ್ಮ ಅಕ್ಕ ತಂಗಿಯರು ಸೇರಲು ಒಂದು ಅವಕಾಶ ಮಾಡಿಕೊಂಡು ನಾಲ್ಕು ಜನರಿಗೆ ಊಟ ಹಾಕಿ ಅಪ್ಪ ಅಮ್ಮನ ಸ್ಮರಣೆಯಲ್ಲಿ ಅಂದು ಕಾಲ ಹಾಕೋದು. ನನಗೆ ನಿಜವಾಗಿ ಈ ಶ್ರಾದ್ಧಕರ್ಮಗಳಲ್ಲಿ ನಂಬಿಕೆ ಇಲ್ಲ. ಹಾಗಂತಾ ನನ್ನ ಅಣ್ಣ -ತಮ್ಮ,ಅಕ್ಕ-ತಂಗಿಯರಿಂದ ದೂರವಾಗಲೇ? ಅವರನ್ನು ಇದುವರೆವಿಗೆ ಕನ್ವಿನ್ಸ್ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ಹಾಗಾಗಿ ನಾನು ಶರ್ಮರನ್ನೂ ಬಿಡುವುದಿಲ್ಲ, ನನ್ನ ಕುಟುಂಬದವರನ್ನೂ ಬಿಡುವುದಿಲ್ಲ, ಇಂದಲ್ಲಾ ನಾಳೆ ಸತ್ಯ ಅರ್ಥವಾಗದೆ ಇರದು. ಆಗ ಶರ್ಮರ ಎಲ್ಲಾ ಸತ್ಯ ಚಿಂತನೆಯಂತೆಯೇ ನಡೆಯಬಹುದು. ಅದು ವರೆವಿಗೆ ಕಾಯುವ ತಾಳ್ಮೆಯನ್ನು ಕಲಿಸಿ ಕೊಟ್ಟಿರುವುದೂ ವೇದವೇ. 
      ವೇದೋಕ್ತವಾಗಿ ಮನೆಯಲ್ಲಿ ಎಲ್ಲವೂ ನಡೆದರೆ ನಿಜವಾಗಿ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದು ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಿದೆ. ಇದು ಎಲ್ಲರಿಗೂ ಅರ್ಥವಾಗುವುದಿಲ್ಲ. ಆದರೆ ಎಲ್ಲರಿಗೂ ಒತ್ತಾಯ ಮಾಡಿ ಮನಸ್ಸಿಗೆ ಬೇಸರ ಮಾಡುವ ಬದಲು ನಾನು ಆ ದಾರಿಯಲ್ಲಿದ್ದೇನೆ. ಆನಂದವಾಗಿದ್ದೇನೆ. ನೀವೂ ಬನ್ನಿ ಎಂದು ನಿತ್ಯವೂ ಹೇಳುತ್ತೇನೆ. ನನ್ನ ಪರಿಚಯವಿಲ್ಲದವರೆಲ್ಲಾ ವೇದಮಾರ್ಗದಲ್ಲಿ ಬರುತ್ತಾರೆ.ಆದರೆ ಕುಟುಂಬದವರು ಇನ್ನೂ ಮನಸ್ಸು ಮಾಡಿಲ್ಲ. ಆದರೆ ನಾನು ಮಾಡುವುದನ್ನು ಬಿಟ್ಟಿಲ್ಲ. ನಾನು ನಿತ್ಯವೂ ಪೂಜೆ ಪುನಸ್ಕಾರಗಳನ್ನೇನೂ ಮಾಡುವುದಿಲ್ಲ. [ ಪೂಜೆ ಪುನಸ್ಕಾರ ಮಾಡುವುದನ್ನು ಅಪರಾಧವೆಂದು ನಾನು ಹೇಳುವುದಿಲ್ಲ.ಅದಕ್ಕೆ ಪ್ರತ್ಯೇಕ ಚಿಂತನೆ ಮಾಡೋಣ] ಬೆಳಿಗ್ಗೆ ಧ್ಯಾನ. ಸಂಜೆ ಒಂದು ಗಂಟೆ ನಿಯಮಿತ ಸತ್ಸಂಗ. ಅದರಲ್ಲಿ ಮೊದಲು ಅರ್ಧ ಗಂಟೆ ಅಗ್ನಿಹೋತ್ರ. ಇನ್ನರ್ಧಗಂಟೆ ವೇದಮಂತ್ರಾಭ್ಯಾಸ. ಕೆಲವು ದಿನ ವೇದಮಂತ್ರಾಭ್ಯಾಸದ ಬದಲು ವೇದಚಿಂತನೆ. ಇದು ಕಳೆದ ಎರಡು ವರ್ಷಗಳ ನನ್ನ ನಿಯಮಿತ ದಿನಚರಿ. ಬೆಳಿಗ್ಗೆಯಿಂದ ಅದೆಷ್ಟೇ ಕೆಲಸಗಳ ಒತ್ತಡ ವಿರಲೀ ಸಂಜೆ ಒಂದು ಗಂಟೆಯಲ್ಲಿ ಮನಸ್ಸು ಶಾಂತವಾಗಿ ಬಿಡುತ್ತೆ.ಇದು ನನ್ನೊಬ್ಬನ ಅನುಭವವಲ್ಲ. ನಮ್ಮ ವೇದಭಾರತಿಯ ಸತ್ಸಂಗದಲ್ಲಿ ಪಾಲ್ಗೊಳ್ಳುವ ಎಲ್ಲರ ಅನುಭವವೂ ಇದೇ ಆಗಿದೆ.
               ವೇದದ ಆಧಾರದಲ್ಲಿ ಭಗವಂತನು ನಿರಾಕಾರಿ. ವಿಗ್ರಹಾರಾಧನೆ ಒಂದು ನಾಟಕವೆನ್ನುತ್ತಾರೆ ಶರ್ಮರು. ಆದರೆ ಒಬ್ಬ ಸಾಮಾಜಿಕ ಚಿಂತಕ ಯೋಚಿಸುವ ರೀತಿಯೇ ಬೇರೆ.ಅವನ ಮುಂದೆ ವಿಗ್ರಹಾರಾಧನೆ ಖಂಡನೆಗಿಂತಲೂ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಸುತ್ತಿರುವ ಬೇರೆ ವಿಚಾರಗಳು ಅವನ ಆಧ್ಯತೆಯಾಗಿರುತ್ತದೆ. ನಿಜವಾಗಿ ಅವನ ಕಣ್ಮುಂದೆ ಬರುವುದು ಸಾಮಾಜಿಕ ಸಾಮರಸ್ಯ. ವಿಗ್ರಹಾರಾಧನೆಯನ್ನು ಖಂಡಿಸುವುದಕ್ಕಿಂತ ಮನುಷ್ಯ-ಮನುಷ್ಯನಲ್ಲಿರುವ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನವು ಅವನ ಆಧ್ಯತೆಯಾಗಿರುತ್ತದೆ. ದೇವಾಲಯಗಳೇ ಅಪ್ರಸ್ತುತವಾದರೂ ದೇವಾಲಯಗಳಿಗೆ ಎಲ್ಲರಿಗೂ ಮುಕ್ತಪ್ರವೇಶವಿರಬೇಕೆಂಬುದು ಅವನ ಆಧ್ಯತೆಯ ವಿಷಯವಾಗುತ್ತದೆ. ಭಗವಂತನ ಸ್ವರೂಪವನ್ನು ಅರ್ಥ ಮಾಡಿಕೊಂಡರೆ ಮತ್ತು ಮನುಷ್ಯರೆಲ್ಲರೂ ಒಂದೇ ಎಂಬ ವೇದದ ವಿಚಾರವನ್ನು ಅರ್ಥಮಾಡಿಕೊಂಡರೆ, ಆಗ ದೇವರ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ, ಭಾಷೆಯ ಹೆಸರಲ್ಲಿ, ಪ್ರದೇಶದ ಹೆಸರಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಆಸ್ಪದವೇ ಇರುವುದಿಲ್ಲ-ಎಂಬುದು ಶರ್ಮರ ವಾದ. ಹೌದು, ಶರ್ಮರ ಮಾತು ನೂರಕ್ಕೆ ನೂರು ಸತ್ಯ.ಆದರೆ ಅಷ್ಟು ವಿಶಾಲ ಮನೋಭಾವ ಈಗ ಇಲ್ಲವಲ್ಲಾ!! ಅಷ್ಟು ದೂರ ನಡೆದುಬಂದಿದ್ದೀವಲ್ಲಾ!!
                 ಇಂತಾ ಸಮಯದಲ್ಲಿ ವೇದವನ್ನೂ ಬಿಡಬಾರದು, ನಮ್ಮ ಪೂರ್ವಜರು ನಡೆಸಿಕೊಂದು ಬಂದಿರುವ ಸಂಪ್ರದಾಯಗಳನ್ನೂ ಬಿಡಬಾರದು[ಅಸ್ಪೃಶ್ಯತಾ ಆಚರಣೆ ಸಂಪ್ರದಾಯ ವಿರೋಧಿ ಕೂಡ, ಇದು ಗೊತ್ತಿರಬೇಕು]             ಸಂಪ್ರದಾಯಗಳನ್ನು ವೇದಕ್ಕನುಗುಣವಾಗಿ ನಿಧಾನವಾಗಿ ಬದಲಿಸುತ್ತಾ ಬರುವುದೇ ಜಾಣ್ಮೆಯ ದಾರಿ. ಶರ್ಮರ ಪರಿಚಯ ವಾದ ಹಲವು ವರ್ಷಗಳು ಅವರೊಡನೆ ಚರ್ಚೆಯು ಜಗಳದಂತೆಯೇ ಆಗಿದೆ. ಆದರೂ ಅವರ ತಾಳ್ಮೆ ದೊಡ್ದದು.ಅವರು ತಾಳ್ಮೆಗೆಡುವುದಿಲ್ಲ. ಅವರ ಖಂಡನಾ ಸ್ವಭಾವವನ್ನು ನಾನು ಖಂಡಿಸಿದರೆ ಅವರು ಬೇಸರಗೊಳ್ಳುವುದಿಲ್ಲ, ಬದಲಿಗೆ ನಿಮ್ಮಗಳ ಒಡನಾಟದಲ್ಲಿ ನಾನು ಸ್ವಲ್ಪ ಮೆದುವಾಗಿದ್ದೇನೆ, ಎನ್ನುತ್ತಾರೆ.ಅವರ ಖಂಡನಾ ಸ್ವಭಾವದಿಂದಲೇ ಪುರೋಹಿತವರ್ಗವು ಅವರನ್ನು ಸಹಿಸಿಕೊಳ್ಳುವುದಿಲ್ಲ. ಅದು ಹೇಗೆ ಸಾಧ್ಯ? ಎಲ್ಲರನ್ನೂ ಮೆಚ್ಚಿಸಲು ಸಾಧ್ಯವೂ ಇಲ್ಲ.
             ಆದರೆ ನನಗೊಮ್ಮೊಮ್ಮೆ ಅನ್ನಿಸಿದ್ದುಂಟು " ಶರ್ಮರು ಪುರಾಣಗಳನ್ನು, ರೂಢಿಯಲ್ಲಿರುವ ಸಂಪ್ರದಾಯಗಳನ್ನು ಖಂಡಿಸದೇ ಹೋದರೆ ಅವರ ವಿಚಾರವನ್ನು ಕೇಳುವ ಜನರು ಹೆಚ್ಚುತ್ತಾರೆ. ಪುರಾಣವನ್ನೂ, ಸಂಪ್ರದಾಯಗಳನ್ನೂ ಖಂಡಿಸದೇ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋದರೆ ನಿಧಾನವಾಗಿಯಾದರೂ ಜನರಿಗೆ ಅರ್ಥವಾಗುತ್ತದೆಂಬುದು ನನ್ನ ಅನಿಸಿಕೆ. ಅಸತ್ಯವನ್ನು ಕಂಡಾಗ ನನ್ನರಿವಿಗೆ ಬಾರದಂತೆ ಖಂಡನೆಯ ಮಾತುಗಳನ್ನು ನಾನೂ ಆಡಿರಬಹುದು.ಆದರೆ ಖಂಡನೆಗಿಂತಲೂ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋಗುವುದೇ ಸರಿಯಾದ ದಾರಿ ಎನಿಸುತ್ತದೆ.