Pages

Friday, April 26, 2013

ಬಾಲಶಿಬಿರದ ಬಗ್ಗೆ ಆತ್ಮೀಯರ ಅಂತರಾಳದ ನುಡಿ





           ವೇದಸುಧೆಯ ಆತ್ಮೀಯ ಸದಸ್ಯರಾದ ಮೈಸೂರಿನ ಶ್ರೀ  ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್ ಅವರು ನಮ್ಮೆಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. ಅವರ ಮನದಾಳದ ಮಾತು ಇಲ್ಲಿದೆ.

ಪ್ರಿಯ  ಶ್ರೀಧರ್,
ಬಾಲಸಂಸ್ಕಾರ ಶಿಬಿರದ ಎಲ್ಲ ವರದಿ,ಚಿತ್ರಗಳನ್ನು ಗಮನಿಸುತ್ತಿರುವೆ. ತುಂಬಾ ಕುಶಿ, ಹೆಮ್ಮೆ ಅನಿಸುತ್ತಿದೆ. 

          ಕಾರ್ಯಕ್ರಮದಲ್ಲಿ  ಶಿಕರವಿಟ್ಟಂತೆ "ತಂದೆ ತಾಯಿಯರ ಪಾದಪೂಜೆ " ನೋಡಿ ಹೃದಯ ತುಂಬಿ ಬಂತು . ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ, ಮಾಡಿದ ನಿಮ್ಮೆಲ್ಲಾ ಯೋಜನೆ, ಶ್ರಮಗಳಿಗೆ   ಹೃತ್ಪೂರ್ವಕ  ಧನ್ಯವಾದ.

              ಜೊತೆಯಲ್ಲಿ ನಾನು ಗಮನಿಸುತ್ತಿರುವುದು ನಿಮ್ಮ'ಆಲೋಚನೆ, ಮಾತು, ಕೃತಿಗಲ್ಲಿರುವ ಅದ್ಭುತ ಸ್ಪಸ್ಟತೆ' (CLARITY ) , ಯಾವುದೇ ಗೊಂದಲಗಲ್ಲಿದ, ನಿಸ್ಸಂದೇಹದ - ಜೊತಗೆ  ಕೇವಲ ಬರವಣಿಗೆ ಎಂದೂ ಸೀಮಿತ ಗೊಳ್ಳದ  ನಡೆ ನುಡಿ . ನಿಮ್ಮದು ಸಾರ್ಥಕ 'ಋಜು ಜೀವನ '. 

                  ಮುಖ ಸ್ತುತಿ  ಅಥವಾ  ಹೊಗಳಿಕೆ ಎಂದು ಅಪಾರ್ಥಿಸಬೇಡಿ. ಉತ್ತಮ ಕಾರ್ಯ, ನೆಡವಳಿಕೆಗಳನ್ನು ಮನ ಬಿಚ್ಚಿ ಶ್ಲಾಘಿಸಿ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಸದಾ ಹೇಳುತಿರುತ್ತಾರೆ. 

  ನಮನಗಳೊಂದಿಗೆ,

ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್  
--------------------------------------------------------------------

                   ಈ ಶಿಬಿರ ಇದು ಕೇವಲ ಪ್ರಯೋಗವಲ್ಲ. ಮುಂದಿನ ಪೀಳಿಗೆಗೆ ಸತ್ಯ, ಸತ್ವಯುತ ಚಿಂತನೆಯ ಹಾದಿಯನ್ನು ತೋರಿಸಲು ವೇದಭಾರತೀ ಮಾಡಿದ ದೃಢ ಸಂಕಲ್ಪದ ಸಫಲತೆಯ ಪ್ರಥಮ ಸೋಪಾನ ಇದು ಮಕ್ಕಳಿಂದಲೇ ಪೋಷಕರು ಪಾಠ ಕಲಿಯುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಥವಾ ತನ್ಮೂಲಕ ಹಿರಿಯರೂ ಕಲಿಕೆಗೆ ತೊಡಗಲೂ ಪ್ರೇರಣೆಯಾದೀತು. ಅಂತಾಗಲಿ. ವೇದಭಾರತೀ ತಾನು ಕಂಡುಂಡ ಸವಿಯನ್ನು ’ ಏಕಃ ಸ್ವಾದು ನ ಭುಂಜೀತ’ ಎಂಬ ಮಹಾಭಾರತದ ಮಾತಿಗನುಗುಣವಾಗಿ ಎಲ್ಲರಲ್ಲಿ ಹಂಚುತ್ತಿದೆ. ಅಭಿನಂದನೀಯ.

-ಜಿ.ಎಸ್.ಮಂಜುನಾಥ್
ಶ್ರೀ ವಾಸವೀ ವಿದ್ಯಾಲಯ, ಹಾಸನ





Friday, April 19, 2013

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು



     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (19-04-2013) 116 ವಸಂತಗಳನ್ನು ಕಂಡು 117ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು 6-7 ವರ್ಷದವರಾಗಿದ್ದಾಗ -ಅಂದರೆ ಸುಮಾರು 110 ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.

     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ 117 ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ 5ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. 286/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.




       ಪೂಜ್ಯ ಪಂಡಿತ್ ಸುಧಾಕರಚತುರ್ವೇದಿಗಳನ್ನು ಕಾಣಲು ಅಮೆರಿಕಾದಿಂದ  ಬಂದಿದ್ದ  ಡಾ.ಜೆಸ್ಸೀ ಯವರೊಡನೆ -ಪಂಡಿತ್ ಜಿ   ಮನೆಯಲ್ಲಿ.
        ಈ ವಯಸ್ಸಿನಲ್ಲಿ ಪಂಡಿತರ ಅಸಾಧಾರಣ ಸ್ಮರಣ ಶಕ್ತಿ, ಆರೋಗ್ಯ, ಛಲ, ವೇದಪ್ರಸಾರದಲ್ಲಿ ಅವರ ಶ್ರದ್ಧೆ ಎಲ್ಲರಿಗೂ ಮಾದರಿ.ಅವರೊಂದು ಹಿಮಾಲಯ ಪರ್ವತವಿದ್ದಂತೆ.  ಹಿಮಾಲಯದ ಹತ್ತಿರ    ನಾವೇ ಹೋಗಬೇಕಲ್ಲವೇ?
-ಹರಿಹರಪುರಶ್ರೀಧರ್

Wednesday, April 17, 2013

ಬಾಲಸಂಸ್ಕಾರ ಶಿಬಿರ ಹಿನ್ನೋಟ

              

 ಬ್ಲಾಗ್ ನಲ್ಲಿ ವೇದದ ಬಗ್ಗೆ ಲೇಖನಗಳನ್ನು ಬರೆಯುವುದು, ಉಪನ್ಯಾಸಗಳ ಆಡಿಯೋ ಹಾಕುವುದು ಮತ್ತು ವೀಡಿಯೋಗಳನ್ನು ಅಪ್ ಲೋಡ್ ಮಾಡುವುದು, ಇತ್ಯಾದಿಗಳು     ಕಂಪ್ಯೂಟರ್ ಮುಂದೆ ಕುಳಿತು ಮಾಡುವ ವೇದದ ಕೆಲಸ. ಆದರೆ ನೇರವಾಗಿ ವೇದಗಳ ಉಪನ್ಯಾಸಗಳನ್ನು ಏರ್ಪಡಿಸುವುದು, ವೇದಪಾಠ ತರಗತಿಗಳನ್ನು ನಡೆಸುವುದು ,ಇವೆಲ್ಲಾ ಅಶ್ಟು ಸುಲಭದ ಕೆಲಸವೇನಲ್ಲ. ಕಳೆದ ವರ್ಷ ಆಗಸ್ಟ್ ೧೯ ರಂದು   ಹಾಸನದಲ್ಲಿ  ಆರಂಭಿಸಿದ ಸಾಪ್ತಾಹಿಕ ವೇದ ಪಾಠಕ್ಕೆ ಬರುತ್ತಿದ್ದ ವೇದಾಧ್ಯಾಯಿಗಳು        ಕೆಲವೇ ತಿಂಗಳುಗಳಲ್ಲಿ ನಿತ್ಯ  ವೇದಾಭ್ಯಾಸ ಮಾಡಲು ಅಪೇಕ್ಷಿಸಿ ನಿರಂತರ ವೇದಾಭ್ಯಾಸವು ಆರಂಭವಾಯ್ತು.
              ಹೀಗಿರುವಾಗಲೇ ಬೇಸಿಗೆ ರಜೆ ಆರಂಭವಾಯ್ತು. ಎಲ್ಲರೂ ಚರ್ಚೆ ಮಾಡಿ ಮಕ್ಕಳಿಗೆ ಒಂದು ವೇದ ಶಿಬಿರವನ್ನು ಮಾಡಬಾರದೇಕೆ? ಎಂಬ ಆಲೋಚನೆ ಬಂತು. ಸರಿ, ಚರ್ಚಿಸಿದೆವು.  ಕೆಲಸ ಆರಂಭಿಸಿಯೇ ಬಿಟ್ಟೆವು. ಕೇವಲ ವೇದ ಶಿಬಿರವೆಂದರೆ ಮಕ್ಕಳು ಬರುವುದು  ಕಷ್ಟವೆಂದರಿತು " ಮಕ್ಕಳ ಸಂಸ್ಕಾರ ಶಿಬಿರದ"  ಹೆಸರಲ್ಲಿ  ಪ್ರತಿ ದಿನ  ಮೂರು ಗಂಟೆಯಂತೆ ದಿನಾಂಕ 7.4.2013  ರಿಂದ ಹತ್ತು ದಿನಗಳು ನಡೆಸಬೇಕೆಂದು ತೀರ್ಮಾನಿಸಿ  ಆರಂಭಿಸಿಯೇ ಬಿಟ್ಟೆವು. ಅರ್ಧ ಗಂಟೆಗಳ ಐದು ಅವಧಿಗಳು. ಅರ್ಧಗಂಟೆ ಅಲ್ಫೋಪಹಾರದ ಅವಧಿ ಸೇರಿ ಒಟ್ಟು ಮೂರು ಗಂಟೆಗಳು. ಕಥೆ, ಆಟ, ಎರಡು ಅವಧಿಯ ವೇದಪಾಠ ಮತ್ತು ಮಕ್ಕಳ ಸುಪ್ತ ಪ್ರತಿಭೆಯನ್ನು    ಅನಾವರಣಗೊಳಿಸಲು ಒಂದು ಅವಧಿ. ಹೀಗೆ ಸಮಯಸಾರಿಣಿ ಸಿದ್ಧ ಗೊಳಿಸಿದೆವು. ಮೂರು ಶಿಬಿರ ಗೀತೆಗಳನ್ನು ನಿಸ್ಚಯಗೊಳಿಸಿದೆವು. ಪುಟ್ಟ ಪುಟ್ಟ 25 ಮಂತ್ರಗಳನ್ನು ಆರಿಸಿ, ಮಂತ್ರಗಳು, ಶಿಬಿರಗೀತೆ, ವೇದಭಾರತಿಯ ಪರಿಚಯ, ಸಮಯಸಾರಿಣಿ, ಸೂಚನೆಗಳು, ಎಲ್ಲವೂ ಒಳಗೊಂಡಂತೆ ಪುಟ್ಟ ಹೊತ್ತಿಗೆಯೊಂದನ್ನು ಮುದ್ರಿಸಿದೆವು. ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಗಳು ಅವರ ಶಾಲೆಯ ಆವರಣದ ಜೊತೆಗೆ ಪೀಠೋಪಕರನಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದರು. ಮಿತ್ರ ಕುಮಾರ್ ಧ್ವನಿವರ್ಧಕ ವ್ಯವಸ್ಥೆ ಗೊಳಿಸಿದರು.
                        ಎಲ್ಲಾ ವಿಷಯಗಳಿಗೂ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿದೆವು. ಯಾರಿಗೂ ಸಂಭಾವನೆ ಇಲ್ಲ. ಮಕ್ಕಳ ಹತ್ತಿರ ಅವರ ಕಮಿಟ್ ಮೆಂಟ್ ಗಾಗಿ ಐವತ್ತು ರೂಪಾಯಿ ಸಂಭಾವನೆ ಪಡೆದೆವು. ನಾವು ನಲವತ್ತು ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ ಎಂದು ಪ್ರಕಟಿಸಿದ್ದರೂ ಅದು ಎಂಬತ್ತಾಗುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಆದರೆ  ನಮ್ಮೊಡನಿರುವ ವೇದಾಧ್ಯಾಯಿಗಳು ಟೊಂಕಕಟ್ಟಿ  ನಿಂತಮೇಲೆ  ಚಿಂತಿಸಲು ನಮಗೆ ಆಸ್ಪದವೇ ಇರಲಿಲ್ಲ. ಎಂಟು ದಿನಗಳಿಗೆ ನಮ್ಮ ವೇದಾಧ್ಯಾಯಿಗಳೇ ಅವರ ಮನೆಯಿಂದ ಅಲ್ಪೋಪಹಾರ[ ಕೋಸಂಬ್ರಿ, ಉಸ್ಲಿ, ಅವಲಕ್ಕಿ, ಇತ್ಯಾದಿ ಮತ್ತು ಜ್ಯೂಸ್, ಬಾದಾಮಿ ಹಾಲು ಮೊದಲಾದ] ಮಾಡಿ ತರಲು ಒಪ್ಪಿದರು. ಮತ್ತೊಬ್ಬ ಮಿತ್ರರು ಒಂದು ದಿನ ಪುಳಿಯೋಗರೆ ,ಮೊಸರನ್ನ, ಆಂಬೊಡೆ, ಗಸಗಸೆ ಪಾಯ್ಸ ಮಾಡಿಸಿದರು. ಇದೆಲ್ಲಾ ಗಮನಿಸಿದ ಶಿಬಿರಾರ್ಥಿಗಳ ಇಬ್ಬರು ಪೋಷಕರು ಇನ್ನೆರಡು ದಿನಗಳಿಗೂ ಅಲ್ಪೋಪಹಾರ  ಕೊಡಲು   ಮುಂದೆ ಬಂದರು.
                ಮಿತ್ರರಾದ ಪಾಂಡುರಂಗ ಅವರು ಅವರ ಮುದ್ರಣಾಲಯದಲ್ಲಿ  ಆಹ್ವಾನ ಪತ್ರಿಕೆ, ಪುಟ್ಟ   ಹೊತ್ತಿಗೆ ಮತ್ತು  ಅಗತ್ಯವಾದ ಎಲ್ಲಾ ಮುದ್ರಣವನ್ನು ಉಚಿತವಾಗಿ ಮಾಡಿಕೊಟ್ಟರು. ಶಿಬಿರದಲ್ಲಿ ಒಂದು ದಿನ  " ಮಾತೃವಂದನ, ಮತ್ತು ಭಾರತ ಮಾತಾ ಪೂಜನ  ವಿಶೇಷಕಾರ್ಯಕ್ರಮಗಳನ್ನು ಯೋಜಿಸಿದೆವು. ಮಕ್ಕಳ ಪೋಷಕರೆಲ್ಲಾ ಬಂದಮೇಲೆ ಅವರನ್ನು ಸುಮ್ಮನೆ ಕಳಿಸಲು ಸಾಧ್ಯವೇ?  ಅಂದೂ  ಪುಳಿಯೋಗರೆ, ಮೊಸರನ್ನ, ಪಾಯ್ಸ ಸೇವೆ ಯಾಯ್ತು. ಇನ್ನು ಕೊನೆಯ ದಿನ " ಅಗ್ನಿಹೋತ್ರ " ಯೋಜಿಸಿದೆವು. ಅಗ್ನಿ ಹೋತ್ರ ನಡೆದ ಮೇಲೆ ಪ್ರಸಾದ ವಿಲ್ಲವೆಂದರೆ ಹೇಗೆ? ಸರಿ! ಚಿತ್ರಾನ್ನ, ಪಾಯ್ಸ ಸೇವೆ ಯಾಯ್ತು.ಮಿತ್ರ ಚಿನ್ನಪ್ಪನವರು ಫೋಟೋ/ವೀಡಿಯೋ ಗಳನ್ನು ಉಚಿತವಾಗಿ ತೆಗೆದರು. ಮಿತ್ರ ಪ್ರಭಾಕರ್ ಎಲ್ಲಾ ಪತ್ರಿಕೆಗಳಲ್ಲಿ  ಸುದ್ಧಿ ಮಾಡಿದರೆ ಮಿತ್ರರಾದ ಪ್ರಮೋದ್ ಅವರ ಆಮೋಘ್ ಚಾನಲ್ ಮತ್ತು ಅವರೇ ಸಂಪಾದಕರಾಗಿರುವ "ಜನಮಿತ್ರ "ಪತ್ರಿಕೆಯ ಸಹಕಾರ ಕೊಟ್ಟರು.
               ಅಬ್ಭಾ! ನಾವು ಆರಂಭದಲ್ಲಿ  ಇದೆಲ್ಲಾ ಯೋಚಿಸಿಯೇ ಇರಲಿಲ್ಲ. ಆದರೆ ಎಲ್ಲವೂ ತಾನೇ ತಾನಾಗಿ ನಡೆದು ಹೋಯ್ತು. ತುಂಬಾ ಖುಷಿಕೊಟ್ಟ    ವಿಚಾರ ಯಾವುದು ಗೊತ್ತಾ?  ಆರೇಳು   ಜನ ವೇದಾಧ್ಯಾಯಿಗಳು  ತಮ್ಮ ಕುಟುಂಬವನ್ನು ಈ ದಿನಗಳಲ್ಲಿ ಮರೆತೇ ಬಿಟ್ಟಿದ್ದರು. ಮಕ್ಕಳು ಬರುವ ಮುಂಚೆ  ಶಿಬಿರ ಸ್ಥಾನ ಶುಚಿಯಾಗಿರಬೇಡವೇ? ಶಿಬಿರ 9.30 ಕ್ಕೆ ಆರಂಭವಾದರೆ ನಾವೆಲ್ಲಾ ಬೆಳಿಗ್ಗೆ 8.00 ಗಂಟೆಗೇ ಶಿಬಿರಸ್ಥಾನದಲ್ಲಿ ಹಾಜರ್. ಇಬ್ಬರು ಮೂವರು ಕಸ ಗುಡಿಸಿದರೆ ಉಳಿದವರು ನೆಲ ತೊಳೆಯುವ ಕಾಯಕವನ್ನು ಎಷ್ಟು ಶ್ರದ್ಧೆಯಿಂದ ಮಾಡಿದರೆಂದರೆ ಆಗೆಲ್ಲಾ ನನಗೆ ನೆನಪಾಗುತ್ತಿದ್ದುದು ವೇದದ ಮಾತು" ಶ್ರೇಷ್ಠತಮ ಕರ್ಮವೇ ಯಜ್ಞ"
               ಶಿಬಿರ ಮುಗಿಯಿತು. ಆದರೆ ಅದೇ ಮಕ್ಕಳು ಬರುವ 21.4.2013 ರಿಂದ ನಿತ್ಯವೂ ವೇದ ಪಾಠಕ್ಕೆ ಈಶಾವಾಸ್ಯಮ್ ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಶಿಬಿರ ನಡೆಸಿದ್ದು ಸಾರ್ಥಕವಾಗಲಿಲ್ಲವೇ? 

ಶಿಬಿರ ಮುಗಿದೇ ಹೋಯ್ತು!

   ಇಂದು ನಡೆದ  ಶಿಬಿರದ ಸಮಾರೋಪ ಸಮಾರಂಭದ ಕೆಲವು ದೃಶ್ಯಗಳು ಇಲ್ಲಿವೆ
     
ಶಿಬಿರಾರ್ಥಿಗಳಾದ ನಿಖಿಲ್ ಮತ್ತು ನಿಶಾಂತ್  ಚಮತ್ಕಾರ!!

ಅಗ್ನಿಹೋತ್ರ ನಡೆದಾಗ

ಶಿಬಿರಸ್ಥಾನದಿಂದ ಈಶಾವಾಸ್ಯಮ್ ಗೆ ಶೋಭಾಯಾತ್ರೆ

ಶಿಬಿರಸ್ಥಾನದಿಂದ ಈಶಾವಾಸ್ಯಮ್ ಗೆ ಶೋಭಾಯಾತ್ರೆ

ಶಿಬಿರಸ್ಥಾನದಿಂದ ಈಶಾವಾಸ್ಯಮ್ ಗೆ ಶೋಭಾಯಾತ್ರೆ

ಶಿಬಿರಸ್ಥಾನದಿಂದ ಈಶಾವಾಸ್ಯಮ್ ಗೆ ಶೋಭಾಯಾತ್ರೆ

ಈಶಾವಾಸ್ಯಮ್ ನಲ್ಲಿ ಉಪಹಾರ ಸ್ವೀಕರಿಸಿದ ಶಿಬಿರಾರ್ಥಿಗಳು

           ವೇದಸುಧೆಯ ಆತ್ಮೀಯ ಸದಸ್ಯರಾದ ಮೈಸೂರಿನ ಶ್ರೀ  ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್ ಅವರು ನಮ್ಮೆಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. ಅವರ ಮನದಾಳದ ಮಾತು ಇಲ್ಲಿದೆ.

ಪ್ರಿಯ  ಶ್ರೀಧರ್,
ಬಾಲಸಂಸ್ಕಾರ ಶಿಬಿರದ ಎಲ್ಲ ವರದಿ,ಚಿತ್ರಗಳನ್ನು ಗಮನಿಸುತ್ತಿರುವೆ. ತುಂಬಾ ಕುಶಿ, ಹೆಮ್ಮೆ ಅನಿಸುತ್ತಿದೆ. 

          ಕಾರ್ಯಕ್ರಮದಲ್ಲಿ  ಶಿಕರವಿಟ್ಟಂತೆ "ತಂದೆ ತಾಯಿಯರ ಪಾದಪೂಜೆ " ನೋಡಿ ಹೃದಯ ತುಂಬಿ ಬಂತು . ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ, ಮಾಡಿದ ನಿಮ್ಮೆಲ್ಲಾ ಯೋಜನೆ, ಶ್ರಮಗಳಿಗೆ   ಹೃತ್ಪೂರ್ವಕ  ಧನ್ಯವಾದ.

              ಜೊತೆಯಲ್ಲಿ ನಾನು ಗಮನಿಸುತ್ತಿರುವುದು ನಿಮ್ಮ'ಆಲೋಚನೆ, ಮಾತು, ಕೃತಿಗಲ್ಲಿರುವ ಅದ್ಭುತ ಸ್ಪಸ್ಟತೆ' (CLARITY ) , ಯಾವುದೇ ಗೊಂದಲಗಲ್ಲಿದ, ನಿಸ್ಸಂದೇಹದ - ಜೊತಗೆ  ಕೇವಲ ಬರವಣಿಗೆ ಎಂದೂ ಸೀಮಿತ ಗೊಳ್ಳದ  ನಡೆ ನುಡಿ . ನಿಮ್ಮದು ಸಾರ್ಥಕ 'ಋಜು ಜೀವನ '. 

                  ಮುಖ ಸ್ತುತಿ  ಅಥವಾ  ಹೊಗಳಿಕೆ ಎಂದು ಅಪಾರ್ಥಿಸಬೇಡಿ. ಉತ್ತಮ ಕಾರ್ಯ, ನೆಡವಳಿಕೆಗಳನ್ನು ಮನ ಬಿಚ್ಚಿ ಶ್ಲಾಘಿಸಿ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಸದಾ ಹೇಳುತಿರುತ್ತಾರೆ. 

  ನಮನಗಳೊಂದಿಗೆ,

ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್  



                   ಈ ಶಿಬಿರ ಇದು ಕೇವಲ ಪ್ರಯೋಗವಲ್ಲ. ಮುಂದಿನ ಪೀಳಿಗೆಗೆ ಸತ್ಯ, ಸತ್ವಯುತ ಚಿಂತನೆಯ
ಹಾದಿಯನ್ನು ತೋರಿಸಲು ವೇದಭಾರತೀ ಮಾಡಿದ ದೃಢ ಸಂಕಲ್ಪದ ಸಫಲತೆಯ ಪ್ರಥಮ ಸೋಪಾನ ಇದು
ಮಕ್ಕಳಿಂದಲೇ ಪೋಷಕರು ಪಾಠ ಕಲಿಯುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಥವಾ ತನ್ಮೂಲಕ ಹಿರಿಯರೂ
ಕಲಿಕೆಗೆ ತೊಡಗಲೂ ಪ್ರೇರಣೆಯಾದೀತು. ಅಂತಾಗಲಿ. ವೇದಭಾರತೀ ತಾನು ಕಂಡುಂಡ ಸವಿಯನ್ನು ’ ಏಕಃ
ಸ್ವಾದು ನ ಭುಂಜೀತ’ ಎಂಬ ಮಹಾಭಾರತದ ಮಾತಿಗನುಗುಣವಾಗಿ ಎಲ್ಲರಲ್ಲಿ ಹಂಚುತ್ತಿದೆ.
ಅಭಿನಂದನೀಯ.

-Manjunatha Gandasi Satyanarayana 

Tuesday, April 16, 2013

ಹಾಸನದ ವೇದಭಾರತೀ ಬಾಲಶಿಬಿರ - ಕೆಲವು ದೃಶ್ಯಗಳು


ಮಕ್ಕಳಿಂದ  ತಂದೆ-ತಾಯಿಗೆ ಪಾದ ಪೂಜೆ


ಪಾದ ಪೂಜೆಯ ಮಹತ್ವ ತಿಳಿಸಿದ ಶ್ರೀ ಅನಂತನಾರಾಯಣ

ಪೋಷಕರು


ವೇದಭಾರತಿಯ ಭಗಿನಿಯರಿಂದ ವೇದ ಘೋಷ

ಮಕ್ಕಳಿಂದ ಭಾರತಮಾತಾ ಪೂಜನ

ಹರಿಹರಪುರಶ್ರೀಧರರಿಂದ ಮಾಧ್ಯಮಕ್ಕೆ ಮಾಹಿತಿ

ಮಕ್ಕಳಿಂದ ಅನುಭವ ಕಥನ

ಪೋಷಕರಿಂದ ಅನುಭವ ಕಥನ

ಶ್ರೀಮತಿ ಸುಧನಟರಾಜ್ ರಿಂದ ಶಿಬಿರಗೀತೆ ಚಾಲನೆ

ಪೋಷಕರಿಂದ ಅನುಭವ ಕಥನ


ಮಕ್ಕಳಿಂದ ಅನುಭವ ಕಥನ

ಮಕ್ಕಳಿಂದ ಅನುಭವ ಕಥನ

ಮಕ್ಕಳಿಂದ ಅನುಭವ ಕಥನ


ಮಕ್ಕಳಿಂದ ಅನುಭವ ಕಥನ


ಮುಖ್ಯ ಅತಿಥಿಗಳಾದ ಡಾ|| ವಾಮನರಾವ್ ಬಾಪಟ್ ರಿಂದ ಭಾಷಣ

ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರಿಂದ ಅಧ್ಯಕ್ಷ ನುಡಿ


ಶ್ರೀ ಮತಿ ಸುಮ ಅವರಿಂದ ಧನ್ಯವಾದ ಸಮರ್ಪಣೆ




Sunday, April 14, 2013

ಎರಡು ವಿಶೇಷ ಕಾರ್ಯಕ್ರಮಗಳು

ಶಿಬಿರಾರ್ಥಿಯಿಂದ ಅನುಭವ ಕಥನ
ಅಬ್ಭಾ! ವೇದಭಾರತಿಯ ಚಟುವಟಿಕೆ ಆರಂಭವಾಗಿ ಆರೇಳು ತಿಂಗಳುಗಳಲ್ಲಿ ಮಕ್ಕಳಿಗಾಗಿ ಅದ್ಭುತವಾದ ಶಿಬಿರವನ್ನು ಆಯೋಜಿಸಿ ಯಶಸ್ಸಿನ ಹೊಸ್ತಿಲಿನಲ್ಲಿದೆ. ಎಲ್ಲವೂ ಹೊಸ ಪ್ರಯೋಗ. ವೇದಾಧ್ಯಾಯೆಗಳೇ ಶಿಬಿರ ಸಂಯೋಜಕರು. ಯಾವ ಪೂರ್ವ ತರಬೇತಿ ಏನಿಲ್ಲ. ಆದರೂ ಶಿಬಿರದ ನಡುವೆ  ಆಯೋಜಿಸಿದ್ದ     ಎರಡು ವಿಶೇಷ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ       ಪಾತ್ರವಾಯ್ತು. ಅದರ ವೀಡಿಯೋ ತುಣುಕು ಇಲ್ಲಿದೆ.

ಮಕ್ಕಳಿಂದ ಮಾತೃವಂದನ
ಬಾಲ ಸಂಸ್ಕಾರ ಶಿಬಿರದಲ್ಲಿ ಆಯೋಜಿಸಿದ್ದ ಭಾರತಮಾತಾ ಪೂಜನ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರೂ ಕೂಡ ಭಾರತಮಾತೆಯನ್ನು ಅರ್ಚಿಸಿದರು

Saturday, April 13, 2013

ಹಾಸನದ ಬಾಲ ಶಿಬಿರದಲ್ಲಿ ಇಂದಿನ ಕೆಲವು ದೃಶ್ಯಗಳು


ಶಿಬಿರಗೀತೆ ಕಲಿಸಿಕೊಡುತ್ತಿರುವ ಶ್ರೀಮತಿ ಕಲಾವತಿ



ಶ್ರೀ ಪಾಂಡುರಂಗ ಅವರಿಂದ ಕಥೆ-ನಚೀಕೇತ


ವೇದಗಣಿತದ ಬಗ್ಗೆ ತಿಳಿಸಿಕೊಡುತ್ತಿರುವ ಶ್ರೀ ಅಶೋಕ್

Friday, April 12, 2013

ಹಾಸನದ ಬಾಲಶಿಬಿರದಲ್ಲಿ ವೇದಾಧ್ಯಾಯೀ ಶ್ರೀ ಅನಂತನಾರಾಯಣ ರಿಂದ ವೇದಪಾಠ



"ಮಾತೃ ವಂದನಾ"



ಓಂ
ವೇದಭಾರತೀ, ಹಾಸನ

ಬಾಲ ಸಂಸ್ಕಾರ ಶಿಬಿರದ ವಿಶೇಷ ಕಾರ್ಯಕ್ರಮ

"ಮಾತೃ ವಂದನಾ"

ದಿನಾಂಕ ೧೪-೦೪-೨೦೧೩ ಭಾನುವಾರ ಬೆ. ೯.೩೦
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ, ರವೀಂದ್ರ ನಗರ, ಹಾಸನ

ಅಧ್ಯಕ್ಷತೆ:
ಶ್ರೀ ಸಿ.ಎಸ್. ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಮುಖ್ಯ ಅತಿಥಿಗಳು:
ಡಾ|| ವಾಮನರಾವ್ ಬಾಪಟ್,
ವಿಭಾಗ ಸಂಘಚಾಲಕರು, ರಾ.ಸ್ವ.ಸಂಘ, ಮೈಸೂರು

ಶ್ರೀ ಕೆ.ಪಿ.ಎಸ್. ಪ್ರಮೋದ್,
ಮುಖ್ಯಸ್ಥರು, ಅಮೋಘ್ ಛಾನಲ್ ಮತ್ತು
ಪ್ರಧಾನ ಸಂಪಾದಕರು, ಜನಮಿತ್ರ, ಹಾಸನ.

      ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಅಂದು ತಮ್ಮ ತಂದೆ-ತಾಯಿಗಳನ್ನು ಗೌರವಿಸುವ 
ಮತ್ತು ಭಾರತಮಾತಾ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ. ಮಕ್ಕಳ ತಂದೆ-ತಾಯಿ, ಪೋಷಕರುಗಳು
 ಈ ಸಂದರ್ಭದಲ್ಲಿ ತಪ್ಪದೆ ಹಾಜರಿರಲು ವಿನಂತಿಸಿದೆ.

  ಕ.ವೆಂ.ನಾಗರಾಜ್                                           ಚಿನ್ನಪ್ಪ
          ಅಧ್ಯಕ್ಷರು                                                       ಕಾರ್ಯದರ್ಶಿ

    ಮತ್ತು ಪದಾಧಿಕಾರಿಗಳು, ವೇದಭಾರತೀ, ಹಾಸನ.

Sunday, April 7, 2013

ಹಾಸನಲ್ಲಿ ಆರಂಭವಾದ ಬಾಲ ಸಂಸ್ಕಾರ ಶಿಬಿರ

ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತನಾರಾಯಣ ಅವರು ನಂತರ ಮಾತನಾಡಿದರು. ‘ಮನೆ ಮನೆಯೂ ಸಂಸ್ಕಾರ ಕೇಂದ್ರವಾಗಬೇಕು’ ಹಾಸನ, ಏ. ೮: ಶ್ರೇಷ್ಠತೆಯಿಂದ ಅತ್ಯಂತ ಶ್ರೇಷ್ಠತೆಯೆಡೆಗೆ ಸಾಗುವುದೇ ನಿಜವಾದ ಶಿಕ್ಷಣ; ಇಂತಹ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆಯಲು ಇಂದು ಪ್ರತಿ ಮನೆ ಮನೆಯೂ ಸಂಸ್ಕಾರ ಕೇಂದ್ರಗಳಾಗಬೇಕು ಹಾಗೂ ವ್ಯಕ್ತಿತ್ವ ವಿಕಾಸ ಕೇಂದ್ರಗಳಾಗಬೇಕು ಎಂದು ನಗರದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತ ನಾರಾಯಣ ಅವರು ಕಿವಿಮಾತು ಹೇಳಿದರು. ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಮೆಕಾಲೆ ಪ್ರಣೀತ ಶಿಕ್ಷಣಕ್ಕೆ ಒಳಪಟ್ಟಿರುವ ಭಾರತೀಯರು ಇಂದು ಕೇವಲ ಹಣ ಸಂಪಾದನೆ ಮಾಡುವ ಶಿಕ್ಷಣಕ್ಕೆ ಜೋತುಬಿದ್ದು, ನಮ್ಮ ಮಕ್ಕಳಿಗೆ ನಾವೇ ಮಾನಸಿಕ ಒತ್ತಡ ಹೇರುತ್ತಾ; ಅಂಕ ಗಳಿಕೆಯನ್ನೇ ಗುರಿಯಾಗಿಸಿ; ಅವರಿಗೆ ಅವಿಧೇಯತೆ, ಸುಳ್ಳು ಹೇಳುವುದು; ಕಳ್ಳತನ ಮಾಡುವುದು; ವಂಚನೆ ಮಾಡುವುದು ಇತ್ಯಾದಿ ಕೆಟ್ಟ ಶಿಕ್ಷಣವನ್ನು ಪರೋಕ್ಷವಾಗಿ ಕಲಿಸುತ್ತಿದ್ದೇವೆ. ನಾವು ಮಕ್ಕಳಿಗೆ ದುಡಿದು ತಿನ್ನುವುದನ್ನು ಕಲಿಸದೆ; ಹೊಡೆದು ತಿನ್ನುವುದನ್ನು ಕಲಿಸುತ್ತಿದ್ದೇವೆ ಎಂದು ವಿಷಾದಿಸಿದರು. ಇಂತಹ ಕೆಟ್ಟ ಮೆಕಾಲೆ ಪ್ರಣೀತ ಶಿಕ್ಷಣ ನಮಗೆ ಬೇಡ; ಮಹರ್ಷಿ ಪ್ರಣೀತ ಶಿಕ್ಷಣ ನಮಗಿಂದು ಅತ್ಯಗತ್ಯವಾಗಿದೆ; ಸಂಸ್ಕಾರ ರಹಿತ ಶಿಕ್ಷಣ ಶಿಕ್ಷಣವೇ ಅಲ್ಲ; ಪಠ್ಯ ಕ್ರಮ ಆಧರಿಸಿದ ನೈತಿಕ ಶಿಕ್ಷಣವೂ ಬೇಕಾಗಿಲ್ಲ; ಮನೆ ಮನೆಗಳಲ್ಲಿ ಈ ಹಿಂದೆ ಇದ್ದಂತಹ ಉತ್ತಮ ಮೌಲ್ಯಗಳನ್ನೆ ಪುನರ್ ಪ್ರತಿಷ್ಠಾಪಿಸಬೇಕು; ಆಗ ಮಕ್ಕಳು ತಾವಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತವೆ; ಪೋಷಕರೇ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅವರು ತಿಳಿಹೇಳಿದರು. ಆಧ್ಯಾತ್ಮವೆಂದರೆ ವಯಸ್ಸಾದವರು ಕಾಲಹರಣ ಮಾಡಲು ಆಶ್ರಯಿಸುವ ಸಂಗತಿಯಲ್ಲ; ಸದಾ ಕಾಲವೂ ಬೇರೆಯವರ ಹಿತಚಿಂತನೆ ಕುರಿತು ಆಲೋಚಿಸುವುದೇ ನಿಜವಾದ ಆಧ್ಯಾತ್ಮ. ಹೀಗಾಗಿ ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ಆಧ್ಯಾತ್ಮದ ಪರಿಚಯ ಮಾಡಬೇಕು; ಅದಕ್ಕೆ ಪ್ರೇರಣೆ ನೀಡುವ ಪ್ರತಿ ಸಂಗತಿಗಳನ್ನೂ ಗಮನಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ವೇದ ಭಾರತೀ ಅಧ್ಯಕ್ಷರಾದ ಕ.ವೆಂ. ನಾಗರಾಜು ಪ್ರಾಸ್ತಾವಿಕ ಮಾತುಗಳನ್ನಾಡಿ, ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ. ಜಗತ್ತಿನ ಸರ್ವರಿಗೂ ಮುಕ್ತವಾಗಿ ತೆರೆದುಕೊಂಡಿರುವ ವೇದ ಮಂತ್ರಗಳನ್ನು ಆಧರಿಸಿ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲು ಪ್ರಯತ್ನಿಸಲಾಗುವುದು. ಇಲ್ಲಿ ಪಡೆದ ಸಂಸ್ಕಾರವನ್ನು ಜೀವನದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಕೋರಿದರು. ವೇದ ಭಾರತೀ ಸಹೋದರ ಸಂಸ್ಥೆಗಳಾದ ‘ವೇದಸುಧೆ’; ‘ವೇದ ಜೀವನ’ಕ್ಕೆ ಸೇರಿದ ಬ್ಲಾಗ್ಗಳಿಗೆ ಓದುಗರ ಸಂಖ್ಯೆ ದಿನೇದಿನೇ ಏರುತ್ತಿದೆ; ಈಗಾಗಲೇ ‘ವೇದಸುಧೆ’ಯಲ್ಲಿ ೯೫ ಸಾವಿರ ಮೀರಿ ಪುಟಗಳ ವೀಕ್ಷಣೆಯಾಗಿದೆ ಎಂದು ಹೆಮ್ಮೆಪಟ್ಟರು. ‘ವೇದಸುಧೆ’ ಬ್ಲಾಗ್ ಸಂಪಾದಕ ಹಾಗೂ ವೇದ ಭಾರತೀ ಪದಾಧಿಕಾರಿ ಹರಿಹರಪುರ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಚಿನ್ನಪ್ಪ ಹಾಜರಿದ್ದರು. ಆರಂಭದಲ್ಲಿ ವೇದಘೋಷ ನಡೆಯಿತು. ಈ ಬಾಲ ಸಂಸ್ಕಾರ ಶಿಬಿರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ವೇದಾಧ್ಯಾಯಿ ವಿಶ್ವನಾಥ ಶರ್ಮ ಮತ್ತಿತರರು ತರಬೇತಿ ನೀಡುವರು.

ವರದಿ: ಹೆಚ್.ಎಸ್.ಪ್ರಭಾಕರ್
ಹಾಸನ ಜಿಲ್ಲಾ   ವರದಿಗಾರರು
ಸಂಯುಕ್ತ ಕರ್ನಾಟಕ



ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು
ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ
ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ
ಮನಸಾ ಸತತಂ ಸ್ಮರಣೀಯಂ ಗೀತೆ ಹೇಳಿಕೊಡುತ್ತಿರುವ ಭಗಿನಿ ಸುಧಾನಟರಾಜ್
 ವೇದ ಪಾಠ ಮಾಡುತ್ತಿರುವ ವೇದಾಧ್ಯಾಯೀ ಶ್ರೀ ಪ್ರಸಾದ್ ಶರ್ಮ

" ದೇಶ ದೇಶ ದೇಶ ದೇಶ ದೇಶ ನನ್ನದು"  ಶಿಬಿರಗೀತೆ  ಹೇಳಿಕೊಡುತ್ತಿರುವ ಭಗಿನಿ ಕಲಾವತಿ

Wednesday, April 3, 2013

ಕುಸುಮ-2


“ಎಲ್ಲರಿಗಾಗಿ ವೇದ”
[11.11.2012 ರಂದು ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿದೆ]

ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ… ಯಜುರ್ವೇದದ 31 ನೇ ಅಧ್ಯಾಯದ 7ನೇ ಮಂತ್ರ ಹೀಗಿದೆ…

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ    ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು.ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
ವೇದವು ಯಾರಿಗಾಗಿ?
ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊ ಟ್ಟಿದ್ದೇನೆ, ಎಂಬುದು     ಭಗವಂತನ ಮಾತು. ಯಜುರ್ವೇದದ 26 ನೇ ಅಧ್ಯಾಯದ 2ನೇ ಮಂತ್ರ ಹೀಗಿದೆ…

ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ,ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ  ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ  ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
 ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ

ಭಾವಾರ್ಥ:
ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ  ಈ ವಿಚಾರವು ಸ್ಪಷ್ಟವಾಗುತ್ತದೆ.ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದಿನ ವೇದಮಂತ್ರದಲ್ಲಿ ನೋಡ   ಬಹುದಾಗಿದೆ. 

Tuesday, April 2, 2013

ನಿಮ್ಮ ಜೀವನದ ಗುರಿ ಏನು?

ವೇದಸುಧೆಯ ಆತ್ಮೀಯ ಬಂಧುಗಳೇ,

                ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಪ್ರಕಟವಾಗುತ್ತಿರುವ ನನ್ನ " ಚಿಂತನ"  ಮತ್ತು "ಎಲ್ಲರಿಗಾಗಿ ವೇದ " ಲೇಖನಗಳನ್ನು ಇಂದಿನಿಂದ ಆರಂಭಿಸಿ ವಾರದಲ್ಲಿ ಎರಡು ಲೇಖನಗಳನ್ನಾದರೂ ಇಲ್ಲಿ ಪ್ರಕಟಿಸಬೇಕೆಂದಿರುವೆ. ಸಾಮಾನ್ಯವಾಗಿ ಪ್ರತೀ ಸೋಮವಾರ ಮತ್ತು ಗುರುವಾರ ಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ಓದಿ ನಿಮ್ಮ ಅಭಿಪ್ರಾಯಗಳನ್ನು     ತಿಳಿಸಿದರೆ ಮುಂದಿನ ನನ್ನ ಬರವಣಿಗೆಗೆ ಸಹಾಯ ವಾಗುವುದು.  ಸಮಾಜದ ಸ್ವಾಸ್ಥ್ಯದ  ದೃಷ್ಟಿಯಿಂದ ಸೂಕ್ತವಲ್ಲ ವೆನಿಸುವ  ವಿಚಾರಗಳನ್ನು ನೀವು ನನ್ನ ಬರವಣಿಗೆಯಲ್ಲಿ ಗಮನಿಸಿದರೆ ತಿಳಿಸಲು    ಹಿಂಜರಿಕೆ ಬೇಡ. ನನ್ನ ಅಭಿಪ್ರಾಯವೇ ಸರಿ ಎಂಬ ಮೊಂಡುವಾದ ನನಗಿಲ್ಲ.  ತಪ್ಪುಗಳನ್ನು  ತಿದ್ದುವ /ಸಲಹೆ ನೀಡುವ ಅಭಿಮಾನಿಗಳಿಗೆ ಸ್ವಾಗತವಿದೆ. ಸಂಸ್ಕೃತ ಅಥವಾ ಶಾಸ್ತ್ರೋಕ್ತ ವೇದ ಪಾಠವಾಗದ ನಾನು ಕೇವಲ ಉಪನ್ಯಾಸಗಳನ್ನು ಕೇಳಿಕೊಂಡು, ವೇದದಿಂದ ಆಕರ್ಶಿತನಾಗಿ  ವೇದದ ಕುರಿತು  ಬರೆಯುವ ಸಾಹಸ ಮಾಡುತ್ತಿರುವೆ. ಬರವಣಿಗೆಗೆ ಆಧಾರ ಪಂಡಿತ್ ಸುಧಾಕರ ಚತುರ್ವೇದಿಗಳ ಗ್ರಂಥಗಳು ಮತ್ತು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು. ಅದಕ್ಕೆ ನನ್ನ ಅಭಿಪ್ರಾಯವನ್ನು ಸೇರಿಸಿ ಬರೆಯುತ್ತಿರುವೆ.
ನಮಸ್ಕಾರಗಳು
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
------------------------------------------------------------------------------------------------------

ಚಿಂತನ-1                                       13.12.2012
ನೀವೇನಂತೀರಾ?             - ಹರಿಹರಪುರಶ್ರೀಧರ್,ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

ನಿಮ್ಮ  ಜೀವನದ ಗುರಿ ಏನು?
ಹೀಗೆಂದು ಕಾಲೇಜು ಹುಡುಗರಿಗೆ  ಪ್ರಶ್ನೆ ಹಾಕಿಬಿಟ್ಟರೆ ಅವರು ತಮ್ಮ ತಲೆಯನ್ನೆಲ್ಲಾ ಹೋಳುಮಾಡಿಕೊಂಡು ತಮ್ಮ ಕಣ್ಮುಂದೆ ಬರಬಹುದಾದ ಸರ್ವೋಚ್ಛ ಸ್ಥಿತಿಯನ್ನುಕಲ್ಪಿಸಿಕೊಂಡು ಅವರಿವರನ್ನೆಲ್ಲಾ ಅಂಗಲಾಚಿ ಒಂದಿಷ್ಟು ವಿಷಯ ಸಂಗ್ರಹ ಮಾಡಿ ಐದು ಪುಟದ ಲೇಖನ ಒಂದನ್ನು ಒಂದು ವಾರದ ಅವಧಿಯಲ್ಲಿ ಸಿದ್ಧಪಡಿಸಿಯಾರು!
ಯಾಕೇ? ತನ್ನ ಬರಹಕ್ಕೆ ಇಟ್ಟಿರುವ 25 ಅಂಕಗಳಲ್ಲಿ 15-20 ಆದರೂ ಬಂದು ಅವನ ಪರೀಕ್ಷೆಯಲ್ಲಿ ಪಾಸಾದರೆ ಸಾಕೆಂದು ಅವನ ಯೋಚನೆ. ಬರಹವನ್ನು ಇವ್ಯಾಲ್ಯುಯೇಟ್ ಮಾಡುವವರೂ ಕೂಡ ಬರಹ ಎಷ್ಟು ಉತ್ಕೃಷ್ಟವಾಗಿದೆ! ಎಂದು ಆಲೋಚಿಸುತ್ತಾರೆಯೇ ಹೊರತೂ  ಸಾಮಾನ್ಯಜನರ “ನೆಮ್ಮದಿಯ” ಜೀವನದ ಬಗ್ಗೆ ಯೋಚಿಸುವುದೇ ಇಲ್ಲ. ಯೋಚಿಸುವ ಸಾಮರ್ಥ್ಯ ಕೂಡ  ಕೆಲವರಲ್ಲಿರುವುದಿಲ್ಲ.
ನಮ್ಮ ಮನೆಗೆ ನಮ್ಮ ಸಂಬಂಧಿ ಒಬ್ಬ ನಿವೃತ್ತ ಉಪನ್ಯಾಸಕರು ಬಂದಿದ್ದರು. ನಮ್ಮಮನೆಯಲ್ಲಿ ವೇದಪಾಠ ನಡೆಯುವುದನ್ನು ಮತ್ತು ಮೇಜಿನ ಮೇಲಿರುವ ವೇದ ಸಾಹಿತ್ಯವನ್ನೆಲ್ಲಾ ನೋಡಿ ಹೇಳಿದರು” ಇದೆಲ್ಲಾ ಏನೋ,  ಈಗಾಗಲೇ  ವೃದ್ಧಾಪ್ಯ ಬಂದು ಬಿಡ್ತಾ?-ಕೇಳಿದರು
-“ಯಾಕೆ  ಹೀಗೆ ಕೇಳುತ್ತಿದ್ದೀರಿ?
-ಮತ್ತಿನ್ನೇನು? ವೇದ,ಪುರಾಣ ಎಲ್ಲಾ  ವೃದ್ಧಾಪ್ಯದಲ್ಲಿ ಕಾಲ ಕಳೆಯುವುದಕ್ಕೆ !
-ಈಗ ಏನು ಮಾಡಬೇಕು?
-ನಿಮ್ಮನೆಯಲ್ಲಿ ಟಿ.ವಿ.ಇಲ್ವಾ? ಇಂಟರ್ನೆಟ್ ಇಲ್ವಾ? ಅದೆಷ್ಟು ದಾರಾವಾಹಿಗಳು ಬರುತ್ವೆ! ಅದೆಷ್ಟು  ಸಿನೆಮಾ ನೋಡ್ ಬಹುದು, ಅದೆಲ್ಲಾ ಬಿಟ್ಟು ಇವೆಲ್ಲಾ ಯಾಕೋ?
ಪಾಪ! ಅವರಿಗೆ ನಿವೃತ್ತಿಯಾಗಿ 10-15 ವರ್ಷವೇ ಕಳೆದಿದೆ. ಆರಾಮವಾಗಿ ಟಿ.ವಿ.ನೋಡ್ ಕಂಡು,     ಊರೂರು ಸುತ್ತಿಕೊಂಡು,ಬೇಕಾದ್ದು ತಿನ್ಕೊಂಡು ಆರಾಮವಾಗಿದೀನಿ ಅಂತಾರೆ. ಆದರೆ ಮನುಶ್ಯನಿಗಿರಬಹುದಾದ ಎಲ್ಲಾ ಖಾಯಿಲೆಗಳೂ ಅವರಿಗಿದೆ. ದಿನಕ್ಕೆ  ಒಂದು ಬೊಗಸೆ ಮಾತ್ರೆ ನುಂಗುತ್ತಾರೆ. ನಾನು ಕೇಳಿದೆ ಅವರನ್ನು ನೀವು  ಕಾಲೇಜಿನಲ್ಲಿ ಯಾವ ವಿಷಯ ಪಾಠ ಮಾಡ್ತಾ ಇದ್ರೀ?

- ಪರ್ಸನಾಲಿಟಿ ಡೆವೆಲಪ್ ಮೆಂಟ್  ನನ್ನ ಪೆಟ್ ವಿಷಯ. ನನ್ನಿಂದ ತಯಾರಾದ ಹುಡುಗರು ಎಂತಾ ಭಾಷಣ     ಮಾಡ್ತಾರೆ, ಗೊತ್ತಾ? ಸೊಸೈಟಿಯಲ್ಲಿ ಹೇಗೆ ಬದುಕಬೇಕು, ಅಂತಾ ಸೊಗಸಾಗಿ ಮಾತನಾಡುವ ಹುಡುಗರನ್ನು ತಯಾರು ಮಾಡಿದ್ದೇನೆ- ಅವರು ಬಹಳ ಹೆಮ್ಮೆಯಿಂದ ಹೇಳಿದರು
-ನಿಮ್ಮ ಶಿಷ್ಯರಾಗಿದ್ದವರಲ್ಲಿ ಅನೇಕರು ಡಾಕ್ಟರ್ ಆಗಿರಬಹುದು, ಕೆಲವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರಬಹುದು ಅಲ್ವೇ?
- ಓಹೋ !  ನೂರಾರು ಜನ ನನ್ನ ಶಿಷ್ಯರು ಡಾಕ್ಟರ್ ಗಳಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಗಳಿದ್ದಾರೆ.
-  ಪ್ರಸಾದ್ ಅಂತಾ ನಿಮ್ಮ ಸ್ಟುಡೆಂಟ್ ಒಬ್ಬ ಮೈಸೂರಲ್ಲಿದ್ದ. ಅವನು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾಇದ್ದ. ಕಾಲೇಜು ದಿನಗಳಲ್ಲಿ ಅವನನ್ನು ಒಳ್ಳೆಯ ಭಾಷಣಕಾರನನ್ನಾಗಿ ತಯಾರು ಮಾಡಿದ್ದಿರಿ, ಅಲ್ವೇ?
- ಅವನ ಮಾತು ಬೇಡ ಬಿಡು. ಅವನೊನೊಬ್ಬ ರಾಕ್ಷಸನಾಗಿಬಿಟ್ಟ.   ಮದುವೆಯಾದ ಆರು ತಿಂಗಳಲ್ಲಿ ಅವನ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು.
-ಯಾಕೆ ಹಾಗಾಯ್ತು?
-ಅವನಿಗೆ ಮದುವೆಗೆ ಮುಂಚೆಯೇ ಎರಡು ಮೂರು ಹುಡುಗಿಯರ ಸಂಬಂಧ ಇತ್ತು. ಮದುವೆಯಾದಮೇಲೂ ಒಬ್ಬಳ ಜೊತೆ ಇವನ ಸಂಬಂಧ ಮುಂದುವರೆಯಿತು. ಹೆಂಡತಿ ಜೊತೆ ವಿನಾಕಾರಣ ಜಗಳ ಮಾಡ್ತಾ ಇದ್ದ.ಕೆಲವು ದಿನ ಕಂಪನಿಯಿಂದ ಬರುವಾಗ ರಾತ್ರಿ ಬಲು ತಡವಾಗ್ತಾಇತ್ತಂತೆ. ರಾತ್ರಿ ಹತ್ತು-ಹನ್ನೊಂದರ ಸಮಯದಲ್ಲಿ ಕುಡಿದು ಬರ್ತಾಇದ್ದ. ಹೆಂಡತಿಗೆ ಇವೆಲ್ಲಾ ಗೊತ್ತಾಯ್ತು. ಒಳ್ಳೆ ಹುಡುಗಿ ಆಕೆ. ಮರ್ಯಾದೆಗೆ ಅಂಜಿ ನೇಣಿಗೆ ಶರಣಾದಳು…..
ಕೊನೆಯಮಾತು ಹೇಳುವಾಗ  ಅವರ ಕಣ್ಣಂಚಿನಲ್ಲಿ ನೀರು ಹರಿದಿತ್ತು…………
ನಾನು ಹೇಳಿದೆ-
-ನಿಮ್ಮ ಪ್ರಶ್ನೆಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿರಬಹುದು, ಅನ್ಕೋತೀನಿ. ಅಧ್ಯಾತ್ಮ, ವೇದ ಉಪನಿಷತ್ತುಗಳ ಪರಿಚಯ, ಸತ್ ಸಂಸ್ಕಾರಗಳು  ನನಗೆ ನಿಜವಾಗಲೂ ಬಾಲ್ಯದಲ್ಲೇ ಸಿಗಬೇಕಿತ್ತು. ನಮಗೆ ಆಗ ಲಭ್ಯವಾಗಲಿಲ್ಲ. ಈಗಲಾದರೂ  ವೇದಾಭ್ಯಾಸ ಮಾಡುತ್ತಾ , ಆಸಕ್ತರೆಲ್ಲರಿಗೆ  ವೇದದಲ್ಲಿ ಲಭ್ಯವಿರುವ “ನೆಮ್ಮದಿಯ ಬದುಕಿನ ಸೂತ್ರಗಳ ಅರಿವು ಮೂಡಿಸುವುದಕ್ಕೆ ನನ್ನ ಕೈಲಾದ ಪ್ರಯತ್ನ ಮಾಡಬೇಕೂಂತ  ಇದೆಲ್ಲಾ ವ್ಯವಸ್ಥೆಗಳು. ನಾನೂ ಅದರ ಪ್ರಯೋಜನ ಪಡೀತೀನಿ. ಆಸಕ್ತರು ಯಾರು ಬಂದರೂ ಅವರಿಗೂ ಪಡೆಯಲು ಅವಕಾಶ ಮಾಡಿಕೊಡ್ತೀನಿ. ಇಲ್ಲಿ ಯುವಕರು ಬರ್ತಾರೆ, ಗೃಹಿಣಿಯರು ಬರ್ತಾರೆ, ಉದ್ಯೋಗಿಗಳು ಬರ್ತಾರೆ. ಎಲ್ಲಾ ಒಟ್ಟಿಗೆ  ಒಂದಿಷ್ಟು ವೇದಾಧ್ಯಯನ  ಆರಂಭ ಮಾಡಿದೀವಿ. ಅದರಲ್ಲಿ ಎಲ್ಲರಿಗೂ ಸಂತಸವಿದೆ. ನನಗಂತೂ ನನ್ನ ನಿವೃತ್ತಿಯ ಜೀವನದಲ್ಲಿ ಒಂದು ದಿನವೂ “ಹೇಗೆ ಕಳೆಯಬೇಕಪ್ಪಾ! ಅನ್ನಿಸಲಿಲ್ಲ. ಸಂತೋಷವಾಗಿ ಕಾಲ ಸಾಗಿದೆ. ಆರೋಗ್ಯವಾಗಿ ನೆಮ್ಮದಿಯಾಗಿರುವೆ. ಅದಕ್ಕಾಗಿ ಇವೆಲ್ಲಾ!!
          ಪರ್ಸನಾಲಿಟಿ ಡೆವೆಲಪ್ ಮೆಂಟ್ ಅಥವಾ ವ್ಯಕ್ತಿತ್ವ ವಿಕಸನ ಎಂದರೆ  ಭಾಷಣ ಹೇಗೆ ಮಾಡಬೇಕು? ಅನ್ನೋದನ್ನು ಕಲಿಸೋದಾ? ಅಥವಾ ನೆಮ್ಮದಿಯ ಜೀವನ ಹೇಗೆ ನಡೆಸೋದು ಅನ್ನೋದನ್ನು ಕಲಿಯೋದಾ?
ನೀವೇನಂತೀರಾ?