Pages

Sunday, April 1, 2012

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರವರ ವಿಚಾರಗಳು

        ರಾಗ-ದ್ವೇಷಗಳು ಇರಬೇಕು! ಹೌದು ಇರಬೇಕು! ಆಶ್ಚರ್ಯವೆನಿಸಿತೇ? ಸತ್ಕಾರ್ಯದಲ್ಲಿ ರಾಗ, ದುಷ್ಕಾರ್ಯದಲ್ಲಿ ದ್ವೇಷ ಇರಬೇಕು ಎನ್ನುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಕೇಳಿ:


     ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ? ಈ ಪದಗಳ ನಿಜವಾದ ಅರ್ಥವೇನು? ಕೇಳೋಣ ಬನ್ನಿ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ದ್ವನಿಯಲ್ಲಿ:
     ಒಂದು ಉಪನ್ಯಾಸದ ಸಂದರ್ಭದಲ್ಲಿ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹಾಸ್ಯವಾಗಿ ಹೇಳಿದ್ದ ಉದಾಹರಣೆಯಿದು: "ಅಕ್ಕ ಪಕ್ಕ ವಾಸಿಸುವ ಇಬ್ಬರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ. ಒಬ್ಬ ದೇವರನ್ನು ಪ್ರಾರ್ಥಿಸುತ್ತಾನೆ - ಓ, ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವನ ಎರಡು ಕಣ್ಣುಗಳೂ ಹೋಗಲಿ. ಇನ್ನೊಬ್ಬನೂ ಹಾಗೆಯೇ ಪ್ರಾರ್ಥಿಸುತ್ತಾನೆ. ದೇವರು ಯಾರ ಮಾತನ್ನು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಕೋಪ, ಇವನ ಮಾತು ಕೇಳಿದರೆ ಅವನಿಗೆ ಕೋಪ." ದೇವರಿಗೆ ಯಾರ ಮೇಲೂ ಕೋಪವೂ ಇಲ್ಲ, ವಿಶೇಷ ಪ್ರೀತಿಯೂ ಇಲ್ಲ. ದೇವರು ಆಸ್ತಿಕರಿಗೆ ವಿಶೇಷ ಅನುಗ್ರಹ ತೋರುತ್ತಾನೆ ಎಂದೇನೂ ಇಲ್ಲ, ನಾಸ್ತಿಕರಿಗೆ ಕೇಡು ಮಾಡುತ್ತಾನೆ ಅನ್ನುವುದೂ ಸುಳ್ಳು. ದೇವರು ಎಲ್ಲಾ ಜೀವಿಗಳನ್ನೂ ನೋಡುವುದು ಒಂದೇ ರೀತಿಯಲ್ಲಿ. ದೇವರನ್ನು ನಾವು ಪೂಜಿಸುತ್ತೇವೆ, ಸ್ತುತಿಸುತ್ತೇವೆ, ಪ್ರಾರ್ಥಿಸುತ್ತೇವೆ. ಏಕೆ ಹಾಗೆ ಮಾಡುತ್ತೇವೆ? ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಉದ್ದೇಶ ನಮ್ಮನ್ನು ಚೆನ್ನಾಗಿಟ್ಟಿರು, ನಮಗೆ ಒಳ್ಳೆಯದು ಮಾಡು, ನಮಗೆ ಬಂದಿರುವ ಕಷ್ಟಗಳಿಂದ ಪಾರು ಮಾಡು ಎಂದು ಕೇಳುವುದೇ ಆಗಿದೆ. ನಮಗೆ ಉಪಯೋಗಿಸಿಕೊಳ್ಳಲು ಇಡೀ ಸೃಷ್ಟಿಯನ್ನು ಕೊಟ್ಟ ಭಗವಂತನನ್ನು ಆ ಉಪಕಾರಕ್ಕಾಗಿ ಕೃತಜ್ಞರಾಗಿ ಸ್ಮರಿಸಿಕೊಳ್ಳುವುದೇ ನಿಜವಾದ ಪೂಜೆ. ಅವನ ಸೃಷ್ಟಿಗೆ ಹಾನಿಯಾಗದಂತೆ ಉಪಯೋಗಿಸಿಕೊಳ್ಳುವುದು ನಿಜವಾದ ಅನುಷ್ಟಾನ. ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು? ಪಂ. ಸುಧಾಕರ ಚತುರ್ವೇದಿಯವರ ಶಿಷ್ಯ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಕಳೆದ ವಾರ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದಾಗ ಅವರ ವಿಚಾರದ ತುಣುಕನ್ನು ವಿಡಿಯೋ ಚಿತ್ರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಈಗ ಚರ್ಚಿತವಾಗುತ್ತಿರುವ ವಿಷಯಕ್ಕೆ ಈ ವಿಚಾರವೂ ಪೂರಕವಾಗಿದೆಯೆಂದು ಭಾವಿಸುವೆ. 
-ಕ.ವೆಂ.ನಾಗರಾಜ್.

ಎಂತು ಮುಕ್ತಾ ನಾಗಬೇಕಣ್ಣಾ

ಎಂತು ಮುಕ್ತಾ ನಾಗಬೇಕಣ್ಣಾ|
ಇಂತಾದಮೇಲ್ ತಾನ್ ಎಂತು ಮುಕ್ತಾ ನಾಗಬೇಕಣ್ಣಾ||

ಕಂತೆ  ಬೊಂತೆಗೆ ಚಿಂತೆ |ರೋಗದ ಚಿಂತೆ|
ಮುಪ್ಪಿನ ಚಿಂತೆ| ಬಡತನ ಚಿಂತೆ|
ಸತ್ತರೆ ಚಿಂತೆ| ಈಪರಿ ಚಿಂತೆ ಎಂಬೀ ಸಂತೆ ಯೋಳ್  ತಾನ್  ||1||

ಸಿಕ್ಕ ಪುಟ್ಟವ ರಿಲ್ಲ ದಿಹ ಚಿಂತೆ|
ನೆರೆಹೊರೆಯ ಮನೆಯೊಳು | ಒಕ್ಕಲಿರುವವರ ಮಾತುಗಳ ಚಿಂತೆ|
ಮಕ್ಕಳಾಗದ ಚಿಂತೆ ಬಳಿಕ | ಮಕ್ಕಳಿಗೆ ದಿಕ್ಕೆಂಬ ಚಿಂತೆಯು|
ಮಕ್ಕಳೆಲ್ಲಾ ವೋಕ್ಕಲ್ಹೊಗಳು | ಬಿಕ್ಕಿ ಬಿಕ್ಕಿ ಅಳುವ ಚಿಂತೆ ||2||

ಹೋಮ ನೇಮ ದ ಸ್ನಾನ ಗಳ ಚಿಂತೆ|
ಮನದೊಳಗೆ ಪುಟ್ಟುವ ಕಾಮಿತಾರ್ಥಗಳಿಲ್ಲ ದಿಹಚಿಂತೆ|
ಭಾಮೆ ಇಲ್ಲದ ಚಿಂತೆ | ಭಾಮೆಗೆ ಪ್ರೇಮ ವಿಲ್ಲದ ಚಿಂತೆ |
ಪ್ರೇಮಕೆ ಹೆಮವಿಲ್ಲದ ಚಿಂತೆ|
ಹೆಮಕೆ ಭೂಮಿಯಿಲ್ಲದ ಚಿಂತೆ ಯೋಳ್ತಾನ್||3||

ದಿಕ್ಕು ತೋರದೆ ದು:ಕಿಸುವ ಚಿಂತೆ|
ಗುರು ಶಂಕರಾರ್ಯರ ಸಿಕ್ಕಿ ತಿಳಿಯದೆ ಲೆಕ್ಖಿಸುವ ಚಿಂತೆ|
ಅಕ್ಕಿ ಇಲ್ಲದ ಚಿಂತೆ | ಅಕ್ಕಿಗೆ ರೊಕ್ಕವಿಲ್ಲದ ಚಿಂತೆ |
ರೊಕ್ಕವು    ಸಿಕ್ಕಲಿಲ್ಲದ ಚಿಂತೆ |
ಸಿಕ್ಕಳು ಮುಕ್ಕ ತಾನಾಗಿರುವ ಚಿಂತೆ||4||





ಸೋರುತಿಹುದು ಮನೆಯ ಮಾಳಿಗೀ ಅಜ್ಞಾನದಿಂದ ಸೋರುತಿಹುದೂ ಮನೆಯ ಮಾಳಿಗೀ


ಮಿತ್ರ ನಾಗೇಶ್ ಇವತ್ತು  ನನ್ನ ಬೆಳಗಿನ ಗಾಳಿಸೇವನೆಯಲ್ಲಿ ಜೊತೆಗೇ ಇದ್ದರು. ನಾನು  ಅರ್ಧ ಗಂಟೆ ವಾಕ್ ಮಾಡಿ ಮನೆಗೆ ಹಿಂದುರುಗಿದೆ. ಸ್ವಲ್ಪ ಹೊತ್ತಿನಲ್ಲೇ ಅವರೂ ನಮ್ಮ ಮನೆಮುಂದೆ ಹೋಗುತ್ತಿದ್ದುದನ್ನು ಕಂಡು ಮಾತನಾಡಿಸಿದೆ. ಅವರು ನನಗೆ ಏನೋ ಹೇಳಬೇಕೆನಿಸಿದರೂ ಸ್ವಲ್ಪ ನಿಧಾನಿಸಿದ್ದರು. ಆದರೂ ಮಾತುಕತೆಯ ಭರದಲ್ಲಿ ಹೇಳಬೇಕಾದ್ದನ್ನು ಹೇಳಿದರು. ಆ  ವಿಚಾರವನ್ನು   ನಿಮ್ಮೊಡನೆ ಹಂಚಿಕೊಳ್ಳಬೇಕು. ಈಗಾಗಲೇ ಬೆಳಗಿನ ಎಂಟು ಗಂಟೆ ಯಾಗಿದೆ.ಇನ್ನೂ ಪ್ರಾಥರ್ವಿಧಿಗಳು ಮುಗಿದು ಶ್ರೀ ರಾಮ ನವಮಿ ಹಬ್ಬ ಬೇರೆ ಆಚರಿಸಬೇಕಾಗಿದೆ. ಆದರೂ  ನಾಲ್ಕು ಜನರಿಗೆ ಇದರಿಂದ ಏನಾದರೂ ಅನುಕೂಲವಾಗುವುದಾದರೆ ಇದನ್ನೇ " ರಾಮ ಪೂಜೆ" ಎಂದುಕೊಂಡು ವಿಷಯವನ್ನು ಹಂಚಿಕೊಳ್ಳುವೆ.

ನಾಗೇಶ್ ಇಪ್ಪತು ವರ್ಷಗಳು ಏರ್ ಫೋರ್ಸ್ ನಲ್ಲಿ ದುಡಿದು  ವಿಶ್ರಾಂತಿ        ಪಡೆದವರು. ವಿಶ್ರಾಂತಿ ವೇತನ ಸುಮಾರು ಹತ್ತು ಸಾವಿರ ರೂಪಾಯಿ ಬರಬಹುದು. ಅವರಿಗೀಗ ಐವತ್ತು ವರ್ಷಗಳು. ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜೀವನದ ಗಾಡಿ ಓಡಲು ಏನಾದರೂ ಮಾಡಲೇ ಬೇಕಲ್ಲಾ! ಒಂದು ಬ್ರೌಸಿಂಗ್ ಸೆಂಟರ್ ಶುರು ಮಾಡಿದರು. ಅದರಿಂದ ಬಂದ ಲಾಭ ಅದರ ನಿರ್ವಹಣೆಗೇ ಆಯ್ತು. ಯೋಚನೆ ಶುರುವಾಯ್ತು. ಏನಾದರೂ ಮಾಡಬೇಕಲ್ಲಾ! ಮಾಜಿ ಸೈನಿಕರಾದ್ದರಿಂದ ಎಲ್ಲಾದರೂ ಕೆಲಸ ಸಿಗುತ್ತೆ. ಅದಕ್ಕೆ ಪ್ರವೇಶ ಪರೀಕ್ಷೆಗಳನ್ನು ಬರೆದು ಪಾಸ್ ಮಾಡಬೇಕು.   ಕೆಲಸಕ್ಕೆ ಸೇರಲು ಪರೀಕ್ಷೆ ಬರೆಯಬೇಕು.ಈ ವಯಸ್ಸಿನಲ್ಲಿ ಬೆಳಗಿನ ಜಾವ ನಾಲ್ಕಕ್ಕೆ ಎದ್ದು  ಒಂದಷ್ಟು ಓದಿದರು. ಕಷ್ಟಪಟ್ಟು ಪರೀಕ್ಷೆ ಪಾಸ್ ಮಾಡಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿದರು. ಕೆಲಸವೇನೋ ಸಿಕ್ಕಿತು. ಮನೆಯ ಒತ್ತಡಗಳು ಎಷ್ಟಿತ್ತೆಂದರೆ ಶಿಸ್ತಿನ ಸಿಪಾಯಿಯಾಗಿದ್ದ ನಾಗೇಶ್ ಗೂ ಒಂದು ದಿನ ಹಾರ್ಟ್ ಅಟ್ಯಾಕ್ ಆಯ್ತು. ಅವತ್ತಿನ ಅವರ ಭವಣೆಯನ್ನು ಕೇಳುತ್ತಿದ್ದರೆ ಕಣ್ಣಲ್ಲಿ   ನೀರು ಬರುತ್ತೆ. ಭಗವಂತ ಕಾಪಾಡಿದ ಈಗ ಆರೊಗ್ಯವಾಗಿದ್ದಾರೆ.ಈ  ಒಂದು ಘಟನೆ ಹಲವು ಘಟನೆಗಳನ್ನು ನೆನಪು ಮಾಡಿತು. ಮೊನ್ನೆತಾನೆ ನನ್ನ ಮಿತ್ರ ದಾಸೇಗೌಡರು ಹಾರ್ಟ್ ಆಟ್ಯಾಕ್ ಆಗಿ ಪ್ರಾಣಬಿಟ್ಟರು. ಅವರಿಗೆ ಐವತ್ತು ವರ್ಷ ವಯಸ್ಸು. ಕಳೆದ ವರ್ಷ ಮಿತ್ರ ರಾಜನ್ ಇದೇ ವಯಸ್ಸಿನವರು ಹಾರ್ಟ್ ಆಟ್ಯಾಕ್ ನಿಂದ ಪ್ರಾಣಬಿಟ್ಟರು. ಅದಕ್ಕಿಂತ ಕೆಲವೇ ದಿನಗಳ ಮುಂಚೆ ನನ್ನ ಮಿತ್ರ ಲಕ್ಷ್ಮಣ್  ಸುಮಾರು ಐವತ್ತೈದು ವರ್ಷ ವಯಸ್ಸಿನವ. ಅವನೂ ಹೀಗೇ ಪ್ರಾಣ ಬಿಟ್ಟ  . ಸ್ವಲ್ಪ ದಿನದ ಮುಂಚೆ  ಇದೇ ವಯಸ್ಸಿನ ರಾಮಚಂದ್ರ ಹೀಗೇ ಪ್ರಾಣ    ಬಿಟ್ಟ . ಏನಪ್ಪಾ ರಾಮ ನವಮಿಯಂದು ಬರೇ ಸಾವುಗಳ ಬಗ್ಗೆ ಮಾತನಾಡ್ತಾ ಇದಾರಲ್ಲಾ! ಅಂತೀರಾ? ಏನು ಮಾಡಲೀ ? ಮನಸ್ಸಿನಲ್ಲಿ ಬಂದದ್ದನ್ನು ಆಗಲೇ ಹಂಚಿಕೊಳ್ಳುವುದಕ್ಕೆ ತಾನೇ ಈ ವೇದಿಕೆ ಮಾಡಿದ್ದು. ಹಂಚಿಕೊಳ್ಲಲು ಕಾರಣವಿದೆ. ಇವರೆಲ್ಲಾ ಇನ್ನೂ ಹತ್ತಾರು ವರ್ಷ ಇರಬೇಕಾದವರು ಸಂಸಾರಗಳನ್ನು ಸಂಕಷ್ಟಕ್ಕೆ ಸಿಲುಕಿಸಿ ಹೊರಟು ಬಿಟ್ಟಿದ್ದೇಕೆ? ಅದಕ್ಕೆ ಕಾರಣವನ್ನು ಹುಡುಕುವಾಗ ಈ ಎಲ್ಲರ ಮನೆಯ ಪರಿಚಯವಿರುವ ನನಗೆ ಮನೆಯ ಒತ್ತಡಗಳೂ ಕೂಡ ಕಾರಣಗಳಲ್ಲೊಂದಾಯ್ತೆನಿಸುತ್ತಿದೆ.


ಹಲವು ಮನೆಗಳಲ್ಲಿ ಪತಿ-ಪತ್ನಿಯರ ಸಂಬಂಧ, ತಂದೆ-ಮಕ್ಕಳ ಸಂಬಂಧ, ಮನೆಯ ವಾತಾವರಣ, ಸಾಮಾಜಿಕ ಒತ್ತಡಗಳು, ಕೆಲಸದ ಒತ್ತಡಗಳು, ಬೇಕು ಬೇಕುಗಳ ಒತ್ತಡಗಳು,.....ಒಂದೇ ಎರಡೇ... ಒಂದು ಮನೆಯಲ್ಲಿ ಅಪ್ಪನಿಗೆ ಹೃದಯದ ಸಮಸ್ಯೆ. ಕಾಲೇಜು ಓದುತ್ತಿರುವ ಮಗ ಕರ್ಕಷ ಶಬ್ಧ ಮಾಡುವ ಟಿ.ವಿ.ಕಾರ್ಯಕ್ರಮ ನೋಡುತ್ತಾನೆ. ಮನೆ ಬೇರೆ ಚಿಕ್ಕದು. ತಾನು ತನ್ನ ಪಾಡಿಗೆ ತನ್ನ ಕೊಠಡಿಯಲ್ಲಿ ಮಲಗಿದ್ದರೂ ಹೊಡೆದಾಟ ಬಡಿದಾಟದ ಕರ್ಕಶ ಶಬ್ಧಗಳು ರೂಮಿನ ಗೋಡೆಯನ್ನೂ ಭೇಧಿಸಿ ಒಳನುಗ್ಗುತ್ತವೆ." ಯಾಕೋ ರಾಜು ನಿನ್ನ ಮಗನಿಗೆ ಹೇಳಬೇಡವೇನೋ " ಅಂದರೆ  " ಹೇಳಿದರೆ ಬೇಜಾರು ಮಾಡಿಕೊಳ್ತಾನೆ ಕಣೋ, ಇನ್ನೆಷ್ಟು ದಿನ ನೋಡ್ತಾನೆ ಬಿಡು, ಇನ್ನೆರಡು ವರ್ಷಗಳಲ್ಲಿ ಓದು ಮುಗಿಸಿ ಕೆಲಸಕ್ಕೆ ಸೇರುತ್ತಾನೆ. ಆಗ ಇಲ್ಲೇ ಕುಳಿತಿರುತ್ತಾನೆಯೇ? ’"...........ನನಗೆ ಅಯ್ಯೋ ಎನಿಸಿತು. ಇನ್ನೆರಡು ವರ್ಷ ಈ ಪ್ರಾಣಿ ಬದುಕಿರಬೇಕಲ್ಲಾ!

ಬಹುಪಾಲು ಮನೆಗಳಲ್ಲಿ ಇದೇ ದೃಷ್ಯ. ಕೇಳಲಾಗದಷ್ಟು ಕರ್ಕಶ ಶಬ್ಧವನ್ನು  ಹೊರ ಚೆಲ್ಲುವ ಟಿ.ವಿ.ಕಾರ್ಯಕ್ರಮಗಳು. ಅಪ್ಪಿತಪ್ಪಿ  ನೀವು ನೋಡಿದಿರಾ.......ರಕ್ತದ ಚೆಲ್ಲಾಟ...ಹೊಡಿ..ಬಡಿ...ಕೊಚ್ಚು, ಕತ್ತರಿಸು, ಶೂಟ್ ಮಾಡು, ರಕ್ತದ ಹೋಳಿಯಾಡು........ಅಥವಾ ಬೆತ್ತಲೆ ನೃತ್ಯ.....

ಅರೆ, ಭಗವಾನ್, ನರಕ ಅನ್ನೋದು ಬೇರೆ  ಬೇಕೆ? ಇಂತಾ ಮಕ್ಕಳು ಇದ್ದರೆ ಸಾಲದೇ?

ಛೇ! ಛೇ!!  ಅಂತರ್ಜಾಲ ಮತ್ತು ಟಿ.ವಿ. ಮಾಧ್ಯಮಗಳನ್ನು  ಮನಸ್ಸಿನ ಉಲ್ಲಾಸಕ್ಕೆ ಬಳಸಿಕೊಳ್ಳಲು  ಎಷ್ಟೊಂದು ಅವಕಾಶಗಳಿದೆ! ಆದರೂ..........  ಉಲ್ಲಾಸಕ್ಕೆ  ಒಂದೊಂದು ವಯಸ್ಸಿನಲ್ಲಿ ಒಂದೊಂದು ಕಲ್ಪನೆ. ಆದರೆ ಮಕ್ಕಳಿಗೆ ಅವರಪ್ಪ ಅಮ್ಮ  ತಮ್ಮೊಡನೆ ನಾಲ್ಕು ದಿನ ಸುಖವಾಗಿ ಬದುಕಿರಲೆಂಬ ಆಸೆ ಬೇಡವೇ? ಅಪ್ಪ-ಅಮ್ಮನ ಮೇಲೆ ನಿಜವಾದ ಪ್ರೀತಿ ಇದ್ದರೆ ಹೀಗೆ ಮಾಡುತ್ತಾರೆಯೇ?  ಏನಾದರೂ ಹೇಳಿ... ಈ ಟೀವಿ  ಅನ್ನೋದು ಹಲವರಿಗೆ ಕಂಟಕವಾಗಿದೆ. .............

ಸೋರುತಿಹುದು ಮನೆಯ ಮಾಳಿಗೀ ಅಜ್ಞಾನದಿಂದ ಸೋರುತಿಹುದೂ ಮನೆಯ ಮಾಳಿಗೀ.....  ಶಿಶುನಾಳ ಶರೀಫರ  ಹಾಡು ನೆನಪಾಗುತ್ತಿದೆ!

......ಆಗಲೇ ಒಮ್ಬತ್ತಾಯ್ತು....... ನೋಡೋಣ  ಮುಂದೆ ರಾಮನವಮಿ ಹಬ್ಬ ಆಚರಿಸಬೇಕಾಗಿದೆ .........