Pages

Showing posts with label ಸದ್ಯೋಜಾತ. Show all posts
Showing posts with label ಸದ್ಯೋಜಾತ. Show all posts

Monday, November 19, 2012


ಅಪತ್ಯಂ ಮೇ ಕಳತ್ರಂ ಮೇ ಧನಂ ಮೇ ಬಾಂಧವಾಷ್ಚ ಮೇ |
ಜಲ್ಪಂತಮ್ ಇತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ ||

ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಹಣ, ನನ್ನ ನೆಂಟರು, ಎಂದು ಒದರುತ್ತಾ ಇರುವ ಮನುಷ್ಯ ಎನ್ನುವ ಆಡನ್ನು ಕಾಲ ಎನ್ನುವ ತೋಳವು ಬಲಾತ್ಕಾರವಾಗಿ ಕೊಲ್ಲುತ್ತದೆ.

-ಸದ್ಯೋಜಾತಭಟ್ಟ

Monday, November 12, 2012

ನಮಸ್ಕಾರ


ನಾಸ್ತಿ ಸತ್ಯಾತ್ ಪರೋ ಧರ್ಮಃ ಸಂತುಷ್ಟಿರ್ ನಾತ್ಮಜಾತ್ ಪರಾ ।
ನಾನ್ನದಾನಾತ್ ಪರಂ ದಾನಂ ವಂದನಾನ್ನೋಪಚಾರಕಮ್ ॥

ಸತ್ಯಕ್ಕಿಂತಲೂ ಮಿಗಿಲಾದ ಧರ್ಮ ಇಲ್ಲ, ಪುತ್ರ ಜನನಕ್ಕಿಂತ ಹೆಚ್ಚಿನ ಆನಂದ ಬೇರೊಂದಿಲ್ಲ, ಅನ್ನದಾನಕ್ಕಿಂತ ಉತ್ತಮವಾದ ದಾನವಿಲ್ಲ, ನಮಸ್ಕಾರಕ್ಕಿಂತಲೂ ಉತ್ತಮವಾದ ಉಪಚಾರ ಇನ್ನೊಂದಿಲ್ಲ.

-ಸದ್ಯೋಜಾತ ಭಟ್ಟ

ವ್ಯಾಪ್ತಿ:

* ಪುತ್ರ ನೆಂದರೆ ಗಂಡುಮಗು ಅಂತಾ ತಿಳಿಯ ಬಾರದು ಪುತ್ರಿ ಜನನ ವಾದರೂ ಅಷ್ಟೇ ಸಂತೋಷವಾಗುತ್ತದೆ.
* ನಮಸ್ಕಾರ ಎಂದರೆ....ಕೇವಲ ನಮಸ್ಕರಿಸುವುದೇ? ನಮ್ಮ ಉತ್ತಮ ನಡವಳಿಕೆ, ಮಧುರವಾದ ಮಾತು. ಒಳ್ಳೆಯ ಮಾತಿಲ್ಲದೆ ನಮಸ್ಕರಿಸಿದರೂ ಅದಕ್ಕೆ ಬೆಲೆಇಲ್ಲ. ಕೋಪ ಮಾಡಿಕೊಂಡು "ನಮಸ್ಕಾರ" ಎಂದರೆ.....ಅಥವಾ ಮಧುರವಾದ ಮಾತಿಲ್ಲದೆ  ಮನೆಗೆ ಬಂದ ಅತಿಥಿ ಗಳಿಗೆ ಏನು ಸತ್ಕರಿಸಿದರೇನು ಪ್ರಯೋಜನ? ಅಲ್ಲವೇ?

Saturday, November 10, 2012

ನಾನು ನನ್ನದು ಎಂಬ ಅಭಿಮಾನ


ಅಹಂಮಮಾಭಿಮಾನೋತ್ಥೈಃ ಕಾಮ ಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಢಮದುಃಖಮಸುಖಂ ಸಮಮ್ ॥

ನಾನು ನನ್ನದು ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ ದುಃಖವಾಗಲೀ, ಸಮಾನವೆನಿಸುತ್ತದೆ

-ಸದ್ಯೋಜಾತ ಭಟ್ಟ

Saturday, November 3, 2012

ಇಂದ್ರಿಯನಿಗ್ರಹ


ಭೇತವ್ಯಂ ನ ತಥಾ ಶತ್ರೋರ್ನಾಗ್ನೇರ್ನಾಹೇರ್ನ ಚಾಶನೇಃ ।
ಇಂದ್ರಿಯೇಭ್ಯೋ ಯಥಾ ಸ್ವೇಭ್ಯಸ್ತೈರಜಸ್ರಂ ಹಿ ಹನ್ಯತೇ ॥


ಶತ್ರುವಿಗಾಗಲಿ, ಬೆಂಕಿಗಾಗಲಿ, ಸರ್ಪಕ್ಕಾಗಲಿ, ಸಿಡಿಲಿನ ಹೊಡೆತಕ್ಕಾಗಲಿ ನಾವು ಅಷ್ಟು ಹೆದರಬೇಕಾಗಿಲ್ಲ. ತನ್ನ ಇಂದ್ರಿಯಗಳಿಗೆ ಹೆಚ್ಚು ಹೆದರಬೇಕಾಗಿದೆ. ಏಕೆಂದರೆ ಅವುಗಳು ಸದಾ ಪೀಡಕವು . ಅವುಗಳು ಪೀಡಿಸಿದಷ್ಟು ಬೇರಾವುದೂ ಪೀಡಿಸುವುದಿಲ್ಲ.

ಅಬ್ಭಾ! ಎಂತಹ ಮಾತು!! ನಮ್ಮ ಇಂದ್ರಿಯದಾಟವನ್ನು ನಾವು ಗೆದ್ದರೆ ಬೇರೇನನ್ನೂ  ಗೆಲ್ಲುವುದು ಕಷ್ಟವೇನಿಲ್ಲ. ಇಂದ್ರಿಯನಿಗ್ರಹ ಇದೆಯಲ್ಲಾ, ಅದೇ ಬಲು  ಕಷ್ಟ. ಸಾಧನೆ ಅಂದರೆ ಬೇರೇನು? ಅದನ್ನು ಸಾಧಿಸಬೇಕು.ಕಷ್ಟಪಟ್ಟು   ಸಾಧಿಸುವುದರಲ್ಲಿ ಸಂತಸ ಕಾಣಬೇಕು.

Friday, November 2, 2012

ನಮ್ಮ ವ್ಯಕ್ತಿತ್ವವನ್ನು ಅಳೆಯುವುದೇ ನಮ್ಮ ನಡತೆ



ವಿದೇಶೇಷು ಧನಂ ವಿದ್ಯಾ ವ್ಯಸನೇಷು ಧನಂ ಮತಿಃ ।
ಪರಲೋಕೇ ಧನಂ ಧರ್ಮಃ ಶೀಲಂ ತು ನಿಖಿಲಂ ಧನಮ್ ॥


ಬೇರೆ ದೇಶಗಳಲ್ಲಿ ನಮ್ಮಲ್ಲಿರುವ ವಿದ್ಯೆಯೆ ಸಂಪತ್ತು, ಆಪತ್ಕಾಲ ಬಂದಾಗ ನಮ್ಮ ಬುದ್ಧಿಯೇ ಸಂಪತ್ತು, ಬೆರೊಂದು ಲೋಕದಲ್ಲಿರುವಾಗ ಅನುಸರಣೆಯ ಧರ್ಮವೇ ಸಂಪತ್ತು, ನಮ್ಮ ಗುಣ ನಡತೆಯು ಎಲ್ಲಾಕಡೆಯಲ್ಲಿಯೂ ನಮಗೊದಗುವ ಸಂಪತ್ತು. ನಮ್ಮ ವ್ಯಕ್ತಿತ್ವವನ್ನು ಅಳೆಯುವುದೇ ನಮ್ಮ ನಡತೆ.





-Sadyojata Bhatta

Sunday, September 23, 2012

ಉಪದೇಶದಿಂದ ಸ್ವಭಾವ ಬದಲಾಯಿಸುವುದು ಸಾಧ್ಯವಿಲ್ಲ

ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ ।
ಸುತಪ್ತಮಪಿ ಪಾನೀಯಂ ಪುನರ್ಗಚ್ಚತಿ ಶೀತತಾಮ್ ॥

ಉಪದೇಶ ಮಾಡುವುದರಿಂದ ಒಬ್ಬನ ಸ್ವಭಾವವನ್ನು ಬದಲಾಯಿಸುವುದು ಸಾಧ್ಯವಿಲ್ಲ ನೀರನ್ನು ಚೆನ್ನಾಗಿ ಕುದಿಸಿದರೂ ಕೂಡಾ ಮತ್ತೆ ಅದು ತಣ್ಣಗೇ ಆಗುತ್ತದೆ. 



Sunday, September 16, 2012

ಬಡವ ಅಂದರೆ ಯಾರು?

ದಾರಿದ್ರ್ಯಾತ್ ಪುರುಷಸ್ಯ ಬಾಂಧವ ಜನೋ ವಾಕ್ಯೇ ನ ಸಂತಿಷ್ಠತೇ |
ಸತ್ತ್ವಂ ಹಾಸ್ಯಮುಪೈತಿ ಶೀಲಶಶಿನಃ ಕಾಂತಿಃ ಪರಿಮ್ಲಾಯತೇ |
ನಿರ್ವೈರಾ ವಿಮುಖೀ ಭವಂತಿ ಸುಹೃದಃ ಸ್ಫೀತಾ ಭವಂತ್ಯಾಪದಃ |
ಪಾಪಂ ಕರ್ಮ ಚ ಯತ್ ಪರೈರಪಿಕೃತಂ ತತ್ತಸ್ಯ ಸಂಭಾವ್ಯತೇ ||


ಬಡವನ ಮಾತಿಗೆ ನೆಂಟರು ಬೆಲೆ ಕೊಡುವುದಿಲ್ಲ, ಅವನ ಶಕ್ತಿ ಧೈರ್ಯಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ಚಂದ್ರನ ಕಾಂತಿಯು ಹಗಲಿನಲ್ಲಿ ಬಾಡುವಂತೆ ಅವನ ಒಳ್ಳೆಯತನವು ಮಸುಕಾಗುತ್ತವೆ.
ಹಗೆತನಕ್ಕೆ ಕಾರಣ ಇಲ್ಲದಿದ್ದರೂ ಮಿತ್ರರು ದೂರವಾಗುತ್ತಾರೆ. ಕಷ್ಟಗಳು ಹೆಚ್ಚುತ್ತವೆ. 
ಬೇರೆಯವರು ಮಾಡಿದ ಪಾಪದ ಕೆಲಸಗಳಿಗೂ ಇವನೇ ಹೊಣೆಗಾರನಾಗುತ್ತಾನೆ.

ನನ್ನ ಮಾತು:
ಏನು ಸೂಕ್ತಿ ಹೀಗೆ ಹೇಳುತ್ತದಲ್ಲಾ! ಬಡವನ ಬಗ್ಗೆ ತಾತ್ಸಾರವೇ? ಏನಿದರ ಅರ್ಥ? 
ಈಗ ಬಡವ ಅಂದರೆ ಯಾರು? ಬಡತನ   ಅಂದರೆ ಏನು?   ಇಲ್ಲಿನ  ಆಡಿಯೋ ಕೇಳಿ ಪುನ: ಈ ಬಗ್ಗೆ ಮಾತಾಡೋಣ.

ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?

Saturday, September 15, 2012

ಯಾವನು ಶುಚಿ ?

ಕಃ ಪಥ್ಯತರೋ ಧರ್ಮಃ ಕಃ ಶುಚಿರಿಹ ಯಸ್ಯ ಮಾನಸಂ ಶುದ್ಧಂ ।
ಕಃ ಪಂಡಿತೋ ವಿವೇಕೀ ಕಿಂ ವಿಷಮವಧೀರಣಾ ಗುರುಷು ॥

ಅತ್ಯಂತ ಹಿತಕರವಾಗಿರುವುದು ಯಾವುದು ? - ಆಚರಿಸತಕ್ಕ ಧರ್ಮ
ಯಾವನು ಶುಚಿ ? - ಯಾರ ಮನಸ್ಸು ಶುಚಿಯಾಗಿರುತ್ತದೋ ಅವನು
ಪಂಡಿತನು ಯಾರು ? - ನಿತ್ಯ - ಅನಿತ್ಯ (ಶಾಶ್ವತ ಮತ್ತು ನಶ್ವರ) ಗಳನ್ನು ವಿವೇಚಿಸಿ ತಿಳಿದವನು ಪಂಡಿತನು. ಯಾವುದು ವಿಷ ?- ಗುರುಗಳನ್ನು ಮತ್ತು ಹಿರಿಯರನ್ನು ನಿಂದೆ ಮಾಡುವುದೇ ವಿಷವು. 

Thursday, September 13, 2012

ನಾನು, ನನ್ನದು, ಎಂಬ ಅಭಿಮಾನ.....

ಅಹಂಮಮಾಭಿಮಾನೋತ್ಥೈಃ ಕಾಮಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಧಮದುಃಖಮಸುಖಂ ಸಮಮ್ ॥

ನಾನು, ನನ್ನದು, ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ, ದುಃಖವಾಗಲೀ ಸಮವೆನಿಸುತ್ತದೆ.

Tuesday, September 11, 2012

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಸಿಂಹವನ್ನು ಅಪ್ಪಿಕೊಂಡಂತೆ


ರಾಜಸೇವಾ ಮನುಷ್ಯಾಣಾಂ ಅಸಿಧಾರಾವಲೇಹನಂ ।
ಪಂಚಾನನಪರಿಷ್ವಂಗೋ ವ್ಯಾಲೀವದನ ಚುಂಬನಮ್ ॥

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಕತ್ತಿಯ ಅಲಗನ್ನು ಚುಂಬಿಸಿದಂತೆ, ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. ಆದುದರಿಂದ ರಾಜನನ್ನು ಅಥವಾ ಪ್ರಸ್ತುತದಲ್ಲಿ ರಾಜಕಾರಣಿಗಳನ್ನು ದೂರವಿಡುವುದೆ ಒಳ್ಳೆಯದು.

Monday, September 3, 2012

ವಿದ್ಯಾ ಪ್ರವಸತೋ ಮಿತ್ರಂ

ವಿದ್ಯಾ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರ ಗೃಹೇ ಸತಃ |
ಆತುರಸ್ಯ ಭಿಷಕ್ ಮಿತ್ರಂ ದಾನಂ ಮಿತ್ರಂ ಮರಿಷ್ಯತಃ ||

ಪ್ರವಾಸ ಮಾಡುವವನಿಗೆ ವಿದ್ಯೆಯೇ ಮಿತ್ರನು,ಮನೆಯಲ್ಲಿ  ಹೆಂಡತಿಯೇ ಮಿತ್ರಳು,
 ರೋಗಿಯಾದವನಿಗೆ ವೈದ್ಯನೇ ಮಿತ್ರನು, ಹಾಗೆಯೇ ಸಾಯುವವನಿಗೆ ದಾನವೇ ಮಿತ್ರ.

Saturday, September 1, 2012

ರಾಜರಿಗೆ ಸತ್ಯವೇ ಭೂಷಣ.

ವೈರಾಗ್ಯಮಿವ ವೃದ್ಧಾನಾಮ್ ಔಚಿತ್ಯಂ ಮಹತಾಮ್ ಇವ |
ಶುಚಿ ಶೀಲಮಿವಾರ್ಯಾಣಾಂ ಸತ್ಯಂ ರಾಜ್ಞಾಂ ವಿಭೂಷಣಮ್ ||


ವಯಸ್ಸಾದವರಿಗೆ ವೈರಾಗ್ಯವೇ ಭೂಷಣ, ಮಹಾತ್ಮರಿಗೆ
 ಔಚಿ ತ್ಯ ಮತ್ತು ಜ್ಞಾನವೂ,
 ಪೂಜ್ಯರಿಗೆ ಶುದ್ಧವಾದ ನಡತೆಯೂ ಮತ್ತು ರಾಜರಿಗೆ ಸತ್ಯವೇ ಭೂಷಣ. 
--

Friday, August 31, 2012

ಗುಣ ಮತ್ತು ಸ್ವಭಾವ

ಸರ್ವಸ್ಯ ಹಿ ಪರೀಕ್ಷ್ಯಂತೇ ಸ್ವಭಾವಾ ನೇತರೇ ಗುಣಾಃ ।
ಅತೀತ್ಯ ಹಿ ಗುಣಾನ್ ಸರ್ವಾನ್ ಸ್ವಭಾವೋ ಮೂರ್ಧ್ನಿ ವರ್ತತೇ ॥ 

ಎಲ್ಲರೂ (ಎಲ್ಲರ) ಮನುಷ್ಯರ ಸ್ವಭಾವವನ್ನು ಪರೀಕ್ಷಿಸುತ್ತಾರೆ; ಇತರ ಗುಣಗಳನ್ನಲ್ಲ. ಏಕೆಂದರೆ ಎಲ್ಲಗುಣಗಳನ್ನೂ ಮೀರಿಸಿ ಸ್ವಭಾವವು ಎಲ್ಲವುದಕ್ಕೂ ಮೇಲಿರುತ್ತದೆ. ಗುಣ ಮತ್ತು ಸ್ವಭಾವ ಪ್ರತ್ಯೇಕವಾಗಿರುತ್ತವೆ

Wednesday, August 29, 2012

ಬುದ್ಧಿವಂತರ ಸಮಯ


ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಚತಿ ಧೀಮತಾಂ |
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನವಾ ॥

ಕಾವ್ಯ, ಶಾಸ್ತ್ರ, ಸಾಹಿತ್ಯ ಇವುಗಳನ್ನು ಓದಿ ಅದರಲ್ಲಿ ಸಂತೋಷಪಡುವುದರಲ್ಲಿ ಬುದ್ಧಿವಂತರ ಸಮಯ ಕಳೆಯುತ್ತದೆ. ಆದರೆ ಮೂರ್ಖನ ಸಮಯವು ಜೂಜು, ನಿದ್ರೆ, ಅಥವಾ ಜಗಳಗಳಲ್ಲಿ ಕಳೆದು ಹೋಗುತ್ತದೆ 

Tuesday, August 28, 2012

ಮೊದಲು ಚಂಚಲವಾದ ಮನಸ್ಸಿನ ಹತೋಟಿ

ಏಕಸ್ಯಾಪಿ ನ ಯಃ ಶಕ್ತೋ ಮನಸಃ ಸಂನಿಬರ್ಹಣೇ ।
ಮಹೀಂ ಸಾಗರ ಪರ್ಯಂತಾಂ ಸ ಕಥಂ ವಿಜಿಗೀಷತೇ ॥

ಮನಸ್ಸೆಂಬ ಒಂದನ್ನು ಚೆನ್ನಾಗಿ ಅಡಗಿಸಲು ಯಾವನು ಸಮರ್ಥನಲ್ಲವೋ ಅವನು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಮಿಯನ್ನು ಹೇಗೆ ಗೆಲ್ಲಬಹುದು ? ಮೊದಲು    ಚಂಚಲವಾದ  ಮನಸ್ಸಿನ ಹತೋಟಿ ಮಾಡಿಕೊಂಡರೆ ಇಡೀ     ವಿಶ್ವವನ್ನೆ ಗೆಲ್ಲುವುದಕ್ಕೆ ಸಮರ್ಥನಾಗುತ್ತಾನೆ.

Monday, August 27, 2012

ಇರಬಾರದ ಕೆಟ್ಟಏಳು ಗುಣಗಳು

ಪಾನಂ ಸ್ತ್ರೀ ಮೃಗಯಾ ದ್ಯೂತಂ ಅರ್ಥದೂಷಣಮೇವ ಚ ।
ವಾಗ್ದಂಡಯೋಶ್ಚ ಪಾರುಷ್ಯಂ ವ್ಯಸನಾನಿ ಮಹೀಭುಜಾಮ್ ॥


ಕುಡಿತ, ಸ್ತ್ರೀಯರಲ್ಲಿ ಅತ್ಯಾಸಕ್ತಿ, ಬೇಟೆ, ಜೂಜು, ಹಣವನ್ನು ಅತಿಯಾಗಿದುರುಪಯೋಗ ಮಾಡುವುದು, ಒರಟಾದ ಮಾತು, ಔಚಿತ್ಯ ಮೀರಿದ ದಂಡ, ಇವು ಏಳು ರಾಜರಲ್ಲಿ ಇರಬಾರದ ಕೆಟ್ಟ ಗುಣಗಳು. ಇವು 
 ರಾಜರಲ್ಲಿ   ಮಾತ್ರವೇ ಅಲ್ಲ ಯಾರಲ್ಲಿಯೂ ಇರಬಾರದು. 

Saturday, August 25, 2012

ರಾಜ ಧರ್ಮ.

ನ್ಯಾಯೇನಾರ್ಜನಮರ್ಥಸ್ಯ ವರ್ಧನಂ ಪಾಲನಂ ತಥಾ ।
ಸತ್ಪಾತ್ರೇ ಪ್ರತಿಪತ್ತಿಶ್ಚ ರಾಜವೃತ್ತಂ ಚತುರ್ವಿಧಮ್ ॥

ನ್ಯಾಯವಾದ ಮಾರ್ಗದಲ್ಲಿ ಹಣಸಂಪಾದಿಸುವುದು, ಸಂಪಾದಿಸಿದ ಹಣವನ್ನು ವರ್ಧಿಸುವುದು, ವರ್ಧಿಸಿದ ಹಣವನ್ನು ಕಾಪಾಡುವುದು, ಹಾಗೆಯೆ ರಾಜ್ಯನಿರ್ವಹಣೆಗೆ ಅರ್ಹರಾದವರಲ್ಲಿ ಆ ಹಣವನ್ನು ಕೊಡುವುದು. ಇವು ನಾಲ್ಕು ರಾಜನು ನಿರ್ವಹಿಸಬೇಕಾದ ಧರ್ಮ. 

Friday, August 24, 2012

ಬಡವನ ಸುಖವೇ ಅದೆಷ್ಟೋ ಮೇಲು

ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।
ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥


ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ ದುಃಖ ಹೀಗೆ ಕಷಟಗಳಿಂದ ಕೂಡಿರುವ ಐಶ್ವರ್ಯಕ್ಕೆ ಧಿಕ್ಕಾರವಿರಲಿ. ಐಶ್ವರ್ಯವಂತನಿಗಿರುವ ಸುಖಕ್ಕಿಂತ ಬಡವನ ಸುಖವೇ ಅದೆಷ್ಟೋ ಮೇಲು.  ಬಡ ತನದಲ್ಲಿ ತೃಪ್ತಿ ಇರುತ್ತದೆ ಸಿರಿತನದಲ್ಲಿ ದುರಾಸೆಗಳಿರುತ್ತವೆ. 

ನನ್ನ ಮಾತು: 

ನಮ್ಮ ಪೂರ್ವಜರು ತಮ್ಮ ಅನುಭವದ ಮಾತನ್ನೇ ಹೇಳಿದ್ದಾರೆ. ಈ ಸೂಕ್ತಿಯಲ್ಲಿ ಅದೆಷ್ಟು ಸತ್ಯವಿದೆ! ಬಡ   ವನಿಗೆ ಆ ದಿನಕ್ಕೆ ಹೊಟ್ಟೆಗೆ ಅನ್ನ ಸಿಕ್ಕಿದರೆ ಸಾಕು, ಇಚ್ಚೆಯಿಂದ ಊಟಮಾಡಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಹಣ ಗಳಿಸುತ್ತಾ ಗಳಿಸುತ್ತಾ ಅದರ ಜೊತೆಗೇ ಭಯ ಕೂಡ ಮನೆಮಾಡುತ್ತದೆ. ಸಂಪಾದಿಸಿದ ಹಣವನ್ನು    ರಕ್ಷಣೆ ಮಾಡುವುದು ಬಲು ಕಷ್ಟದ ಮಾತು.ಆದರೆ  ಈ ಸಂಪಾದನೆ ಸಮಾಜದಿಂದ ನನಗೆ ಬಂದದ್ದು. ನಾನು ಇದರ ವಿಶ್ವಸ್ತನಷ್ಟೇ ಎಂದು ಯೋಚಿಸಿದಾಗ ಸಂಪತ್ತಿನ ಸದ್ವಿನಿಯೋಗದ ಮಾರ್ಗ ಗೊತ್ತಾಗುತ್ತದೆ. ಭಗವಂತನು  ಸಂಪತ್ತನ್ನು ಕೊಟ್ಟಾಗ ತನ್ನ ನಿತ್ಯದ ಬದುಕಿಗೆ ಅಗತ್ಯವಾದಷ್ಟನ್ನು ತಾನು ಇಟ್ಟುಕೊಂಡು ಉಳಿದದ್ದನ್ನು   ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಅದರಿಂದ ಅವನಿಗೆ ಸಂತೋಷ-ಸಮಾಧಾನಗಳೂ ಲಭ್ಯವಾಗುತ್ತದೆ. ಕಳ್ಳನಿಂದ ತನ್ನ ಸಂಪತ್ತನ್ನು ರಕ್ಷಿಸಬೇಕೆಂಬ ಕೊರಗೂ ತಪ್ಪುತ್ತದೆ.

ವಿತ್ತೇ ತ್ಯಾಗ: ಕ್ಷಮಾ ಶಕ್ತೌ,.............ಸ್ವಭಾವೋಯಮ್ ಮಹಾತ್ಮನಾಮ್||

 ಮಹಾತ್ಮರ ಸ್ವಭಾವದ ವರ್ಣನೆ ಮಾಡುತ್ತಾ.    ಹಣವಿದ್ದಾಗ ತ್ಯಾಗಮಾಡಬೇಕು, ಶಕ್ತಿ ಇದ್ದಾಗ ಅಶಕ್ತನನ್ನು ಕ್ಷಮಿಸಬೇಕು...........ಎಂದು ಹೇಳಿದೆ. ಭಗವಂತನು ಕೊಟ್ಟಿರುವ  ಬುದ್ಧಿ, ಹಣ ಮತ್ತು ದೇಹಬಲವನ್ನು ಸದ್ವಿಚಾರಗಳಿಗೆ ವಿನಿಯೋಗಿಸಿದಾಗ ಅವನು ನಿರಾತಂಕನಾಗಿ ನೆಮ್ಮದಿಯಿಂದ ಇರಬಹುದಲ್ಲವೇ?

Tuesday, August 21, 2012

ಎಲ್ಲ ಅನರ್ಥಗಳಿಗೂ ಹಣವು ಕಾರಣ


ಪೂಜ್ಯತೇ ಯದಪೂಜ್ಯೋಪಿ ಯದಗಮ್ಯೋಪಿ ಗಮ್ಯತೇ ।
ವಂದ್ಯತೇ ಯದವಂದ್ಯೋಪಿ ಸ ಪ್ರಭಾವೋ ಧನಸ್ಯ ಚ ॥

ಪೂಜೆಗೆ ಅನರ್ಹನಾದವನನ್ನು  ಪೂಜಿಸಿದರೆ,   ಯಾರಲ್ಲಿಗೆ ಹೊಗಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸ ಬಾರದೋ ಅವನಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವವೇ ಕಾರಣ. ಎಲ್ಲ ಅನರ್ಥಗಳಿಗೂ ಹಣವು ಕಾರಣವಾಗಿದೆ.
--

ವಿದ್ವಾಂಸನೇ ಶ್ರೇಷ್ಠ

ಕಚ್ಚಿತ್ ಸಹಸ್ರಾನ್ ಮೂರ್ಖಾನಾಮ್ ಏಕಮಿಚ್ಚಸಿ ಪಂಡಿತಂ ।
ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಶ್ರೇಯಸಂ ಮಹತ್ ॥

ಸಾವಿರ ಮೂರ್ಖ ಜನರಿಗಿಂತಲೂ ಒಬ್ಬ ವಿದ್ವಾಂಸನೇ ಶ್ರೇಷ್ಠ ಎಂದು ಅವನನ್ನೇ ಆದರಿಸಬೇಕು, ಏಕೆಂದರೆ ಕಷ್ಟಕಾಲದಲ್ಲಿ ವಿದ್ವಂಸನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖನ ಉಪದೇಶಕ್ಕಿಂತ   ಬುದ್ಧಿವಂತನ  ನಿಂದನೆಯೂ ಶ್ರೆಷ್ಠವೇ ಆಗಿದೆಯಲ್ಲವೇ.