Pages

Friday, August 26, 2011

ವಿವೇಕ ಚೂಡಾಮಣಿ ಭಾಗ -೯



ಗ್ರಂಥದ ಮುಂದುವರಿದ ಭಾಗ

अतो विचारः कर्तव्यो जिज्ञासोरात्मवस्तुनः |
समासाध्य दयासिन्धुं गुरुं ब्रह्मविदुत्तमम् ||१५ ||

ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ |
(=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ )
ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫||
(= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು)

ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ ಪರಿಹಾರವನ್ನು ಒದಗಿಸುತ್ತಾರೆ.
ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ.
’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ್ನು ನೀಡುತ್ತದೆ. ತನ್ನ ಒಡಲಿನಲ್ಲಿ ಅಂತಹ ಅದೆಷ್ಟು ಹನಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆಯೋ ಬಲ್ಲವರಾರು !?. ಅಧಿಕಾರಿಯು ಆತ್ಮವಿದ್ಯಾಸಕ್ತನ ಎಲ್ಲಾ ಅವಗುಣಗಳನ್ನೂ ಮನ್ನಿಸಿ ಉಪದೇಶಿಸುವಂತಹ ಕರುಣಾಳಾಗಿರಬೇಕು ಎಂದು ಹೇಳುತ್ತಾರೆ.
ಮುಂದೆ, ’ಗುರುಂ’ ಎಂದು ಹೇಳುತ್ತಾರೆ. ’ಅಧಿಕಾರಿಯೆಂದರೇ ಗುರು’ ಎನ್ನುವಾಗ ಮತ್ತೊಮ್ಮೆ ’ಗುರುಂ’ ಎಂದು ಹೇಳುವ ಅಗತ್ಯವೇನು ? ಎಂಬ ಪ್ರಶ್ನೆ ಮೂಡುತ್ತದೆ. ’ಗು’ ಶಬ್ದವು ಕತ್ತಲೆ ಅಥವಾ ಅಜ್ಞಾನವನ್ನು ಸೂಚಿಸಿದರೆ ’ರು’ ಶಬ್ದವು ಬೆಳಕು (ಕತ್ತಲೆಯ ನಿರೋಧಕ) ಅಥವಾ ಜ್ಞಾನವನ್ನು ಸೂಚಿಸುತ್ತದೆ. ಕರುಣಾಳುವಾದ ಅಧಿಕಾರಿಯು ತನ್ನ ಉಪದೇಶದ ಮೂಲಕ ಆಸಕ್ತನ ಮನದ (ಹೃದಯಾಂಧಕಾರ) ಗೊಂದಲ, ಅಜ್ಞಾನವನ್ನು ತೊಳೆಯುತ್ತಾನೆ. ಆತ್ಮವಿದ್ಯೆಯ ಅಧಿಕಾರಿಯು ಗುರುವಾಗಿರಬೇಕು ಎಂದು ಹೀಗೆ ಹೇಳುತ್ತಾರೆ.
’ದಯಾಸಿಂಧು’ ಮತ್ತು ’ಗುರುಂ’ ಎಂಬ ಎರಡು ವಿಶೇಷ ಅರ್ಹತೆಗಳನ್ನು ಪಡೆದಿರುವ ಅಧಿಕಾರಿಯು ’ ಬ್ರಹ್ಮ ವಿದುತ್ತಮಮ್’ ಎಂದೆನಿಸಿಕೊಳ್ಳುತ್ತಾನೆ. ಬ್ರಹ್ಮನನ್ನು ತಿಳಿದವರು, ಆತ್ಮಾರ್ಥವನ್ನು ಅರಿತವರೇ ಬ್ರಹ್ಮವಿದುತ್ತಮರು.

ಆಕ್ಷೇಪ : ’ಸ್ವನುಭವೋ’ ಎಂದು ಈ ಮೊದಲೇ ಹೇಳಿರುವುದರಿಂದ ’ಅಧಿಕಾರಿ’ಯ ಉಪದೇಶದ ಅಗತ್ಯವೇನಿದೆ ?

ಸಮಾಧಾನ : ಯಾವುದೇ ಅಧ್ಯಯನ , ಉಪದೇಶಗಳಿಲ್ಲದೆ ಆತ್ಮವಿದ್ಯೆಯನ್ನು ಗಳಿಸುವುದು ಪಾಮರರಿಗೆ ಸಾಧ್ಯವಿಲ್ಲ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳಂತೆ ಏನೂ ಓದದೆ, ಯಾವುದನ್ನೂ ಅಭ್ಯಾಸ ಮಾಡದೆ ಸಮ್ಯಕ್ ಜ್ಞಾನವನ್ನು ಪಡೆಯಬಲ್ಲವರು ಜಗಕ್ಕೊಬ್ಬರು, ಯುಗಕ್ಕೊಬ್ಬರು ಎನ್ನಬಹುದು (ಇಲ್ಲಿ ’ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ’ ಎಂಬ ಗ್ರಂಥದ ಆರಂಭಿಕ ಶ್ಲೋಕದ ಸಾಲನ್ನು ಮನನ ಮಾಡಬಹುದು). ಎಲ್ಲರೂ ಇಂತಹವರಾಗಲು ಸಾಧ್ಯವಿಲ್ಲವಾದುದರಿಂದ ಗುರೂಪದೇಶ, ಗುರುವಿನ ಆಶ್ರಯ ಅಗತ್ಯವಾದುದಾಗಿರುತ್ತದೆ.
--------------------------------

ಮುಂದಿನ ಶ್ಲೋಕ

मेधावी पुरुषो विद्वान् ऊहापोह विचक्षणः ।
अधिकार्यात्मविद्यायामुक्तलक्षणलक्षितः ॥१६॥

ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ ವಿಚಕ್ಷಣಃ |
(= ಮೇಧಾವಿಯೂ(ಚುರುಕು ಬುದ್ಧಿ), ವಿದ್ವಾಂಸನೂ , ನ್ಯಾಯಾನ್ಯಾಯಗಳ ವಿವೇಚನೆಯುಳ್ಳವನು)
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣಲಕ್ಷಿತಃ ||೧೬||
(= ಅಧಿಕಾರಿಯು ಹೀಗೆ ಹೇಳಿರುವ ಲಕ್ಷಣಗಳಿಂದ ಕೂಡಿರಬೇಕು)

’ದಯಾಸಿಂಧುವಾದ ಗುರು, ಬ್ರಹ್ಮವಿದುತ್ತಮ, ಮೇಧಾವೀ, ವಿದ್ವಾನ್, ಉಹಾಪೋಹ ವಿಚಕ್ಷಣಃ ’ ಇವೆಲ್ಲಾ ಆತ್ಮವಿದ್ಯೆಯ ಅಧಿಕಾರಿಗೆ ಇರಬೇಕಾದ qualifications ಗಳು ಎನ್ನಬಹುದು. ವೇದಾಂತದ ಎಲ್ಲಾ ಮಜಲುಗಳು ಆರಂಭವಾಗುವುದೇ ಅಧಿಕಾರಿಯ ಅರ್ಹತೆಯ ನಿರೂಪಣೆಯಿಂದ. ಅಧಿಕಾರಿಯ ಪೂರ್ವಾರ್ಹತೆಯ ವಿವೇಚನೆಯ ನಂತರ ವೇದಾಂತದ ವಿಚಾರವು ಆರಂಭವಾಗುತ್ತದೆ.
ಆತ್ಮವಿದ್ಯೆಯ ಸಂಪಾದನೆಗಾಗಿ ಆಸಕ್ತನು ಆಶ್ರಯಿಸುವ ಅಧಿಕಾರಿಯು ಮೇಧಾವಿಯಾಗಿರಬೇಕು ಎಂಬಲ್ಲಿ, ’ಶಾಸ್ತ್ರಾರ್ಥಗಳಲ್ಲಿ ಪಾರಂಗತನಾದವನೂ, ಉಪದೇಶಿಸಲ್ಪಟ್ಟ ವಿಚಾರಗಳನ್ನು ಮನೋಗತ ಮಾಡಿಕೊಳ್ಳುವ ಶಕ್ತಿಯುಳ್ಳ ಬುದ್ಧಿವಂತನನ್ನು ’ಮೇಧಾವೀ’ ಎಂಬ ಪದದಿಂದ ಸೂಚಿಸಿರುತ್ತಾರೆ. ’ವಿದ್ವಾನ್ ’(Scholar) ಎಂದರೆ ಕಾವ್ಯ, ಕೋಶ, ವ್ಯಾಕರಣಗಳಲ್ಲಿ ನುರಿತಿರುವವನು ಎಂದು ತಿಳಿಯಬೇಕಾಗುತ್ತದೆ. ’ಊಹಾಪೋಹ ವಿಚಕ್ಷಣಃ’ ಎಂದರೆ ತರ್ಕಮೀಮಾಂಸ ಶಾಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನೆಂದು ಹೇಳುತ್ತಾರೆ. *ಪದವಾಕ್ಯಪ್ರಮಾಣಜ್ಞ*(೧) ನಾಗಿರುವುದೇ ಆತ್ಮವಿದ್ಯೆಯ ಅಧಿಕಾರಿಯ ಮುಖ್ಯ ಲಕ್ಷಣ ಎಂದು ಶಂಕರರು ತಿಳಿಸುತ್ತಾರೆ.
’ಉಕ್ತಲಕ್ಷಣ ಲಕ್ಷಿತಃ’ ಎಂದರೆ ಈಗಾಗಲೇ ಸೂಕ್ಷ್ಮವಾಗಿ ಗ್ರಂಥದ ಕೆಲವು ಶ್ಲೋಕಗಳಲ್ಲಿ ಹೇಳಿರುವ ನಾಲ್ಕು ವಿಧವಾದ ಸಾಧನಗಳ (=ಸಾಧನ ಚತುಷ್ಟಯ. ಮುಂದಿನ ಶ್ಲೋಕಗಳಲ್ಲಿ ವಿವರಣೆಗಳು ಬರಲಿದೆ) ಸಂಪನ್ನನೆಂದು ಎಂದು ಅರ್ಥ.
ಶುಭಕಾರ್ಯಕ್ಕೆ ಹೊರಟಾಗ ಎದುರಿಗೆ ಯಾರಾದರೂ ಬರಿದಾದ ಬಿಂದಿಗೆಯನ್ನು ಹಿಡಿದು ಹೊರಟರೆ ಅಪಶಕುನವೆಂದು(ಬೆಕ್ಕು ಅಡ್ಡಬರುವುದು) ಭಾವಿಸಿ ಕೆಲಹೊತ್ತು ತಡೆದು ಮುಂದುವರಿಯುವವರಿದ್ದಾರೆ. ಅವರಿಗೂ ಗೊತ್ತಿರುತ್ತದೆ
’ಬರಿಯ ಬಿಂದಿಗೆಯು ಏನೂ ಮಾಡದೆಂದು’ , ಆದರೂ ಇತರರು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ’ನಮಗೇಕೆ ಸಲ್ಲದ ಗೊಡವೆ’ ಎಂದು ಅಂಧಾನುಸರಣೆ ಮಾಡುತ್ತಾರೆ. ಇಂತಹವರಿಗೆ ’ಅಪೋಹ’ ವಿರುವುದಿಲ್ಲ. ಅರ್ಥಾನರ್ಥಗಳ ವಿವೇಚನೆಯನ್ನು ಹೊಂದಿರುವುದು ಅಧಿಕಾರಿಯ ಲಕ್ಷಣ ಎಂದು ಹೇಳುತ್ತಾರೆ.
--------------------------------------

ಮುಂದಿನ ಶ್ಲೋಕ

विवेकिनो विरक्तस्य शमादिगुणशालिनः ।
मुमुक्षोरेव हि ब्रह्मजिज्ञासायोग्यता मता ॥१७॥

ವಿವೇಕಿನೋ ವಿರಕ್ತಸ್ಯ ಶಮಾದಿಗುಣಶಾಲಿನಃ |
(= ವಿವೇಕಿಯೂ , ಅನಾಸಕ್ತನೂ(ತಟಸ್ಥ), ಸಹನಾಶೀಲಗುಣವುಳ್ಳವನು)
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾಯೋಗ್ಯತಾ ಮತಾ ||೧೭||
(= ಬ್ರಹ್ಮಜಿಜ್ಞಾಸುವಿಗೆ ಮುಮುಕ್ಷುತ್ವವೇ(ಬಂಧನದಿಂದ ಬಿಡುಗಡೆ) ಯೋಗ್ಯವಾದುದು)

ವಿವೇಕಿಯೂ, ವಿರಕ್ತನೂ ಶಮಾದಿಗುಣವುಳ್ಳವನು ಮತ್ತು ಮುಮುಕ್ಷುವಾದ ಅಧಿಕಾರಿಯು ವಿಚಾರಕ್ಕೆ ಯೋಗ್ಯನಾದವನು ಎಂದು ಶಂಕರರು ಸೂಚಿಸುತ್ತಾರೆ. ಈ ಶ್ಲೋಕದಲ್ಲಿ ಹೇಳಿರುವ ಎಲ್ಲಾ ಗುಣಗಳ ವಿವರಣೆಯು ಮುಂದೆ ’ಸಾಧನ ಚತುಷ್ಟಯ’ ಎಂದು ಹತ್ತು-ಹನ್ನೆರೆಡು ಶ್ಲೋಕಗಳಲ್ಲಿ ವಿವರವಾಗಿ ನಿರೂಪಿಸಲಾಗಿದೆ. ಅವುಗಳನ್ನು ಮುಂದೆ ತಿಳಿಯೋಣ.

ಅಧಿಕಾರಿಯನ್ನು ಅಥವಾ ಗುರುವನ್ನು ಹೇಗಿದ್ದರೂ ಒಪ್ಪಿಕೊಳ್ಳುವ ಪರಿಪಾಠ ಇಂದು ತುಸು ಹೆಚ್ಚಾಗಿದೆ ಎಂದೇ ಹೇಳಬಹುದು. ’ಶಿಷ್ಯರ ವಿತ್ತವನ್ನು(ದುಡ್ಡನ್ನು, ಸಂಪತ್ತನ್ನು) ಕಸಿಯುವ ಗುರುಗಳು ಹೇರಳವಾಗಿದ್ದಾರೆ , ಆದರೆ ಶಿಷ್ಯರ ಚಿತ್ತವನ್ನು( ಕಲಿಯುವ ಹುಮ್ಮಸ್ಸನ್ನು ತಣಿಸುವ) ಹಿಡಿದಿಟ್ಟುಕೊಳ್ಳುವ, ಹೃದಯವನ್ನು ಕಸಿಯುವ ಗುರುಗಳು ವಿರಳ’ ಎಂಬ ಮಾತೊಂದಿದೆ. ಅಂತಹ ಉತ್ತಮ ಗುರುಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದಲ್ಲಿ ರಾಮಕೃಷ್ಣರಂತೆ, ರಮಣಮಹರ್ಷಿಗಳಂತೆ self thought ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಇದು ಅಸಾಧಾರಣವಾದ ದಾರಿಯಾದ್ದರಿಂದ ಗುರೂಪದೇಶ, ಆಶ್ರಯದ ವಿಚಾರವನ್ನು ಶಂಕರರು ಹೇಳುತ್ತಾರೆ. ಕೆಲವರಿಗೆ ವಿಚಾರವು ಬಹು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದನ್ನು ಆಸಕ್ತರಿಗೆ ತಿಳಿಯುವಂತೆ ಹೇಳುವ ಚತುರತೆ ಇರುವುದಿಲ್ಲ ಅಥವಾ ಅಂತಹ ಕಾರುಣ್ಯವಿರುವುದಿಲ್ಲ ಎಂದು ಹೇಳಬಹುದು. ಒಂದು ವಿಚಾರವನ್ನು ನಾವು ಅರಿತಿದ್ದೇವೆ ಎನ್ನುವುದು ಅದನ್ನು ನಾವು ಹೇಗೆ ಬೇಕಾದರೂ ವಿವರಿಸಬಲ್ಲೆವು ಎನ್ನುವುದರ ಮೂಲಕ ತಿಳಿಯುತ್ತದೆ. ಗುರುವಿಗೆ ಕಲಿಸುವುದರ ಮತ್ತು ಕಲಿಯುವವರ ಬಗೆಗೆ ಪ್ರೀತಿ, ಸಹನೆ ಕಾರುಣ್ಯಗಳು ಇರಬೇಕಾಗುತ್ತದೆ. ಇಲ್ಲಿ ನನ್ನ ಕಾಲೇಜು ದಿನದ ಅನುಭವದ ವಿಷಯವೊಂದನ್ನು ಹೇಳಬಯಸುತ್ತೇನೆ. ನಾನು ಉಜಿರೆಯ ಧ.ಮ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಮಗೆ ಜಯಲಕ್ಷ್ಮಿ ( ಅವರು ಬಹಳ ದಪ್ಪಗಿದ್ದಿದ್ದರಿಂದ ತಮ್ಮನ್ನು ತಾವೇ ’ಗಜಲಕ್ಷ್ಮಿ’ ಎಂದು ಕರೆದುಕೊಳ್ಳುತ್ತಿದ್ದರು !) ಎಂಬ ಅಧ್ಯಾಪಕರು ಗಣಿತವನ್ನು ಕಲಿಸುತ್ತಿದ್ದರು. ಅವರು ಟ್ರಿಗ್ನಾಮೆಟ್ರಿ ಹೇಳಿಕೊಡುವಾಗ ನಮ್ಮಲ್ಲಿ ಬಹಳಷ್ಟು ಮಂದಿಗೆ ನಿದ್ದೆಯ ಮಂಪರು ಬರುತ್ತಿತ್ತು.
( ಆ ವಿಷಯವೇ ಹಾಗೇ ಅನ್ನಿ !). ಪಾಠದ ಮಧ್ಯೆ ನಮ್ಮ ಗುರುಗಳು ಆಗಾಗ್ಗೆ ಡಯಾಸನ್ನು ಜೋರಾಗಿ ಕಾಲಲ್ಲಿ ಕುಟ್ಟುವುದೋ ಅಥವಾ cos theta = ’some’ degree ಎಂತಲೋ ಜೋರಾಗಿ ಕಿರುಚುತ್ತಿದ್ದರು. ಹಾಗೇ ಸದ್ದು ಜೋರಾದಾಗ ಮಂಪರುಗಳಿಗೆ ಎಚ್ಚರಿಕೆಯಾಗುತ್ತಿತ್ತು !. ಪಾಠದ ಮಧ್ಯೆ ಅವರು ತೆರೆದ ಮನದಿಂದ ಮಾತನಾಡುತ್ತಿದ್ದರು "ಮಕ್ಕಳೇ, ನಾನೂ ನಿಮ್ಮಂತೆ ಟ್ರಿಗ್ನಾಮೆಟ್ರಿ ಕ್ಲಾಸಿನಲ್ಲಿ ನಿದ್ದೆ ಮಾಡಿಕೊಂಡೇ ಬಂದವಳು. ನನಗೂ ನಿಮ್ಮ ಕಷ್ಟ ಗೊತ್ತಾಗುತ್ತದೆ. ಈ ಪಾಠವೇ ಹೀಗೆ. ಅದಕ್ಕೆ ಆಗಾಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತಿರುತ್ತೇನೆ " ಎಂದು ಹೇಳುತ್ತಿದ್ದರು. ಎಂತಹಾ ಕಾರುಣ್ಯ ನೋಡಿ ನಮ್ಮ ಗುರುಗಳದ್ದು !. ಅವರು ನಿದ್ದೆ ಮಾಡಿ ಕಲಿತಿದ್ದರು ಎನ್ನುವ ಕಾರಣಕ್ಕೆ ನಾವು ಅವರಿಂದ ಏನು ಕಲಿಯುವುದಿದೆ ಎಂದು ಭಾವಿಸಿದ್ದಿದ್ದರೆ ಗಣಿತದಲ್ಲಿ ನಮ್ಮದು ಶೂನ್ಯಸಂಪಾದನೆಯಾಗಿರುತ್ತಿತ್ತು.
ಅವರು ಇಡೀ ಕಾಲೇಜಿಗೆ ಅತ್ಯುತ್ತಮ ಗಣಿತ ಉಪನ್ಯಾಸಕರು ಎನ್ನುವುದು ಹೆಮ್ಮೆಯ ವಿಚಾರವಾಗಿತ್ತು .
’ನೆಚ್ಚಿದ್ದ ಗುರುವೊಬ್ಬರು ಉಪ್ಪಿನಕಾಯಿ ತಿಂದರು’ ಎಂದ ಮಾತ್ರಕ್ಕೆ ಅವರಲ್ಲಿ ಗುರುವಿನ ಲಕ್ಷಣವೇ ಇಲ್ಲ ಎಂದು ತೀರ್ಮಾನಿಸಲು ಸಾಧ್ಯವೆ ?!. ಶಿಷ್ಯನಿಗೆ ಬೇಕಾದ್ದು ಅವರಲ್ಲಿರುವುದು ಮುಖ್ಯವಾಗುತ್ತದೆ.

ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ.
( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ.
ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು.
( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ
 ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ.

ಆತ್ಮವಿದ್ಯೆಯ ಸಾಧನೆಗೆ ಬೇಕಾದ ಸಾಧನಗಳ ವಿವರಣೆಯನ್ನು ’ಸಾಧನ ಚತುಷ್ಟಯ’ ಎಂಬ ವಿಭಾಗದಲ್ಲಿ ಶಂಕರರು ನಿರೂಪಿಸುತ್ತಾರೆ. ಮುಂದಿನ ಕಂತಿನಲ್ಲಿ ಇದರ ಬಗೆಗೆ ವಿವರವಾಗಿ ತಿಳಿಯೋಣ.

---------------------------------------------------

ಟಿಪ್ಪಣಿ:

೧) ಪದವಾಕ್ಯಪ್ರಮಾಣಜ್ಞ : ಪದಶಾಸ್ತ್ರವೆಂದರೆ ಭಾಷೆಯ ವ್ಯಾಕರಣದ ತಿಳುವಳಿಕೆ ಅಥವಾ ನುಡಿಯರಿಮೆ.
ವಾಕ್ಯಶಾಸ್ತ್ರವೆಂದರೆ ತರ್ಕ ಮತ್ತು ಮೀಮಾಂಸಶಾಸ್ತ್ರಗಳ ಅರಿವು. ಪ್ರಮಾಣವೆಂದರೆ
ನ್ಯಾಯಶಾಸ್ತ್ರಗಳ ತಿಳುವಳಿಕೆ. "ಪದವಾಕ್ಯಪ್ರಮಾಣಜ್ಞ" ಎಂಬುದನ್ನು ಯತಿಗಳ
ಬಿರುದಾವಳಿಯನ್ನು ಹೇಳುವಾಗ ಬಳಸುವುದನ್ನು ಗಮನಿಸಬಹುದು.


ವಂದನೆಗಳೊಂದಿಗೆ..