Pages

Saturday, August 20, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೬:


     ಕರ್ಮ ಒಂದು ಬಗೆಯಲ್ಲ, ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸಿರುತ್ತದೆ. ಕರ್ಮ, ಪರರಿಗೆ ಕೇಡಾಗದಂತೆ ತನ್ನ ಹಿತಕ್ಕಾಗಿ, ಸರ್ವಮುಖೀ ಉನ್ನತಿಗಾಗಿ ಮಾಡುವ, ಪರರ ಸರ್ವಮುಖೀ ಉನ್ನತಿಗಾಗಿ ನೆರವಾಗಿ ನಿಂತು ಮಾಡುವ, ಎಲ್ಲ ಕ್ಷೇತ್ರಗಳಲ್ಲಿನ ಕರ್ತವ್ಯಗಳೂ ವೇದಗಳ ದೃಷ್ಟಿಯಲ್ಲಿ ಅವಶ್ಯವಾಗಿ ಮಾಡಲ್ಪಡಲೇಬೇಕಾದುದಾಗಿದೆ. ಅದರಲ್ಲಿಯೂ ರಾಷ್ಟ್ರದ ಹಿತ ಎದುರು ನಿಂತಾಗ ತನ್ನ ಹಿತದ ಸ್ವಾರ್ಥವನ್ನೂ ಬಿಟ್ಟು ಕೇವಲ ಪರಾರ್ಥವನ್ನೇ ನೋಡಬೇಕಾಗುವುದು. ಕರ್ತವ್ಯಕ್ಷೇತ್ರದಿಂದ ಸಂನ್ಯಾಸದ ಅಥವಾ ತ್ಯಾಗದ ಹೆಸರಿನಲ್ಲಿ ಓಡಿಹೋಗುವ ಪ್ರಶ್ನೆ ವೈದಿಕ ಧರ್ಮದಲ್ಲಿ ಇಲ್ಲವೇ ಇಲ್ಲ. ಇಂತಹ ಸಮಸ್ತ ಕರ್ತವ್ಯಗಳನ್ನೂ ಒಟ್ಟು ಸೇರಿಸಿ, ವೇದಗಳು ಯಜ್ಞ ಎಂದು ಕರೆಯುತ್ತವೆ ಮತ್ತು ಯಜ್ಞದ ಬಗೆಗೆ ಈ ಸಂದೇಶವನ್ನು ನೀಡುತ್ತದೆ :-


ಯಜ್ಞೋ ಹಿ ತ ಇಂದ್ರ ವರ್ಧನೋ ಭೂದುತ ಪ್ರಿಯಃ ಸುತಸೋಮೋ ಮಿಯೇಧಃ |
ಯಜ್ಞೇನ ಯಜ್ಞಮವ ಯಜ್ಞಿಯಃ ಸನ್ ಯಜ್ಞಸ್ತೇ ವಜ್ರಮಹಿಹತ್ಯ ಆವತ್ ||
(ಋಕ್. ೩.೩೨.೧೨.)

     [ಇಂದ್ರ] ದೇಹಾಧೀಶನಾದ, ಇಂದ್ರಿಯವಾನ್ ಜೀವ! [ಹಿ] ನಿಜವಾಗಿ [ಯಜ್ಞಃ] ಯಜ್ಞವೇ [ತೇ ವರ್ಧನಃ] ನಿನಗೆ ಅಭಿವೃದ್ಧಿಕಾರಕವೂ [ಉತ] ಮತ್ತು [ಪ್ರಿಯಃ] ಪ್ರಿಯಕರವೂ [ಸುತಸೋಮಃ] ಹಿಂಡಲ್ಪಟ್ಟ ಆನಂದರಸವನ್ನುಳ್ಳದ್ದೂ [ಮಿಯೇಧಃ] ಮೈತ್ರಿಯನ್ನು ವರ್ಧಿಸತಕ್ಕುದೂ [ಭೂತ್] ಆಗಿದೆ. [ಯಜ್ಞಿಯಃ ಸನ್ ಯಜ್ಞೇನ] ಯಜ್ಞಕರ್ತೃವಾಗಿ ಸತ್ಕರ್ಮದಿಂದಲೇ [ಯಜ್ಞಂ ಅವ] ಯಜ್ಞವನ್ನು, ಸತ್ಕರ್ಮವನ್ನು ರಕ್ಷಿಸು. [ಅಹಿ ಹತ್ಯೇ] ಕುಟಿಲತನವನ್ನು ನಾಶಮಾಡುವುದರಲ್ಲಿ [ಯಜ್ಞಃ] ಯಜ್ಞವು [ತೇ ವಜ್ರಮ್] ನಿನ್ನ ವಜ್ರಾಯುಧವಾಗಿ [ಆ ಆವತ್] ರಕ್ಷಿಸುತ್ತದೆ.
     ಎಂತಹ ಭವ್ಯ ಆದೇಶ! ಸತ್ಕರ್ಮದಿಂದ ನಮ್ಮ ಆತ್ಮಗಳ ರಕ್ಷಣೆಯೂ ಆಗುತ್ತದೆ. ಯಜ್ಞವನ್ನು ನಾವು ರಕ್ಷಿಸಿದರೆ, ಯಜ್ಞ ನಮ್ಮನ್ನು ರಕ್ಷಿಸುತ್ತದೆ. ಯಜ್ಞ-ಸತ್ಕರ್ಮ, ಧರ್ಮದ ಕ್ರಿಯಾತ್ಮಕ ರೂಪ. ಸತ್ಕರ್ಮದಿಂದ ಪುಷ್ಟೀಕರಿಸಲ್ಪಡದ ಜ್ಞಾನ, ಕೇವಲ ಗ್ರಾಂಥಿಕ ಜ್ಞಾನವಾಗಿ ತಲೆಯಲ್ಲೇ ಉಳಿದುಹೋಗುತ್ತದೆ. ಅದೊಂದು ನಿರರ್ಥಕ ಭಾರವಾಗಿ ಪರಿಣಮಿಸುತ್ತದೆ. ಆದಕಾರಣ, ಜ್ಞಾನವನ್ನು ಸಾರ್ಥಕಪಡಿಸಲು ಸತ್ಕರ್ಮಗಳನ್ನು ಮಾಡುತ್ತಲೇ ಜೀವನ ಪೂರ್ತ ಉಸಿರಾಡಲಿಚ್ಛಿಸಬೇಕು.
*****************