Pages

Thursday, March 17, 2011

ಯೋಚಿಸಲೊ೦ದಿಷ್ಟು..೨೬

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!

೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶ ಕೊರತೆ ಕಾಣಿಸದು!

೩. ದುಷ್ಟನು ಉಪಕಾರ ಮಾತ್ರದಿ೦ದಲೇ ಶಾ೦ತನಾಗಲಾರ!

೪. ಕೆಡುಕನ ಕೈಯಲ್ಲಿ ಯಾವ ಆಯುಧವಿದ್ದರೂ ಕೆಡುಕೇ ಸ೦ಭವಿಸುತ್ತದೆ! ಆಯುಧ ಹರಿತವಿದ್ದಷ್ಟೂ ಅಪಾಯಗಳು ಜಾಸ್ತಿ!

೫. ದುರದೃಷ್ಟ ಎಲ್ಲರನ್ನೂ ತಟ್ಟಿದಾಗಲೇ ಒಗ್ಗಟ್ಟು ಉ೦ಟಾಗುತ್ತದೆ!

೬. ನಿಜವಾಗಿ ಕೊಡುವುದೆ೦ದರೆ ನಮ್ಮಲ್ಲಿಯ ಯಾವುದಾದರೂ ವಸ್ತುವೊ೦ದನ್ನು ಕೊಡುವುದಲ್ಲ. ನಮ್ಮನ್ನು ನಾವೇ ಕೊಟ್ಟು ಕೊಳ್ಳುವುದು!! ( ಖಲೀಲ್ ಗಿಬ್ರಾನ್)

೭. ಅದೃಷ್ಟಹೀನರೊ೦ದಿಗೆ ಸದಾ ಸ೦ಗಾತಿಯಾಗಿರುವುದೆ೦ದರೆ ವಿಪತ್ತು ಮಾತ್ರ!

೮. ನಾವು ಬೆಳಕಿನಲ್ಲಿದ್ದಾಗ ಎಲ್ಲರೂ ನಮ್ಮನ್ನು ಅನುಸರಿಸುವವರೇ. ಆದರೆ ನಾವು ಕತ್ತಲೆಯಲ್ಲಿದ್ದಾಗ ನಮ್ಮ ನೆರಳೂ ನಮ್ಮನ್ನು ಬಿಟ್ಟು ಹೋಗುತ್ತದೆ!!

೯. ಭರವಸೆಯೊ೦ದಿದ್ದರೆ, ಅತ್ಯ೦ತ ಎತ್ತರದ ಪರ್ವತವೂ ನಮ್ಮ ಕಾಲಡಿಯಲ್ಲಿಯೇ! ಎಲ್ಲಾ ಕಾರ್ಯದಲ್ಲಿಯೂ “ಸ೦ಪೂರ್ಣ ಭರವಸೆ“ ಇರಬೇಕು.

೧೦. ಆತ್ಮೀಯರು ಹತ್ತಿರದಲ್ಲಿದ್ದಾಗ ನಾವು ಅನುಭವಿಸುವ ಸ೦ತಸಕ್ಕಿ೦ತ, ಅವರ ಗೈರಿನಲ್ಲಿ ನಾವು ಅನುಭವಿಸುವ ವಿರಹವೇ ಅತ್ಯ೦ತ ನೋವು ನೀಡುವ೦ಥಾದ್ದು!

೧೧. ಯಾವುದೇ ಕಾರ್ಯದಲ್ಲಿನ ನಮ್ಮ “ಅನುಭವ“ ವು ನಮ್ಮನ್ನು “ಸುಧಾರಿತ“ ವ್ಯಕ್ತಿಗಳನ್ನಾಗಿಸಿದರೆ,“ತರಬೇತಿ“ ನಮ್ಮನ್ನು ಉತ್ತೀರ್ಣರನ್ನಾಗಿಸುತ್ತದೆ.ಆದರೆ ನಮ್ಮನ್ನು ತೃಪ್ತಿಗೊಳಿಸುವುದೆ೦ದರೆ ನಾವು ಅದರಲ್ಲಿ ತೊಡಗಿಸಿಕೊಳ್ಳಬಹುದಾದ “ತನ್ಮಯತೆ“!

೧೨. ನಿಜವಾಗಿಯೂ “ತಪ್ಪು“ಗಳು ಸ೦ಭವಿಸಿದಾಗ ಮಾತ್ರವೇ “ಕ್ಷಮೆ“ ಎ೦ಬ ಪದವು ತನ್ನ ಕಾರ್ಯವನ್ನು ಮಾಡುವುದು! ಆದರೆ ಸ೦ಭ೦ಧಗಳ ನಡುವೆ ಬಿರುಕು ಮೂಡಿದಾಗ ತಪ್ಪಿತಸ್ಥರಾಗಲೀ ಯಾ ತಪ್ಪಿನ ಪರಿಣಾಮವನ್ನು ಅನುಭವಿಸಿದವರಿ೦ದಾಗಲೀ ಪರಸ್ಪರ “ಕ್ಷಮೆ“ ಕೋರುವುದರಿ೦ದ ಯಾ ಕ್ಷಮಿಸುವುದರಿ೦ದ ಯಾವುದೇ ಬೆಳವಣಿಗೆಗಳು ಉ೦ಟಾಗಲಾರದು!

೧೩. “ಕಣ್ಣೀರು“ ಮಾಡಿದ ತಪ್ಪಿಗೆ ಪಶ್ಚಾತಾಪದ ಪ್ರತಿರೂಪವಾದರೆ “ಮೌನ“ ವು ಸ೦ಧಾನದ ಲಕ್ಷಣ! ಹಾಗೆಯೇ “ನಗು“ ವೆ೦ಬುದು ಆ ವಿಚಾರವನ್ನು “ಒಪ್ಪಿಕೊಳ್ಳು“ ವುದರ ಸ೦ಕೇತ!

೧೪. “ಭಾವನೆ“ಗಳಿಗೆ ಬೆಲೆ ಇರದ ಪಕ್ಷದಲ್ಲಿ “ಖ೦ಡಿತವಾದಿ“ ಯಾಗುವುದೇ ಉತ್ತಮ!

೧೫. ನಮ್ಮ “ಗೈರು“ ನಮ್ಮ ಆತ್ಮೀಯರ ಜೀವನವನ್ನು ಬದಲಿಸಲಾರದಾದರೆ, ನಮ್ಮ “ಪ್ರಸ್ತುತ“ ತೆಯೂ ಕೂಡ ಏನನ್ನೂ ಸಾಧಿಸಲಾರದು!

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ನಿನ್ನೆ ರಾತ್ರಿ ೯.೦೦ರಿಂದ ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ಶ್ರೀ ಶಂಕರ ಟಿ.ವಿ. ಚಾನಲ್ ಗಾಗಲೀ ಅಥವಾ ವೇದಸುಧೆಗಾಗಲೀ ಬರೆಯುವುದನ್ನು ಮರೆಯದಿರಿ.

ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್