ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಹರಿಹರಪುರ ಶ್ರೀಧರರ 'ಜೀವನವೇದ' ಪುಸ್ತಕದ ಲೋಕಾರ್ಪಣೆ
ಮಿತ್ರ ಹರಿಹರಪುರ ಶ್ರೀಧರ್ ಸ್ಥಳೀಯ ಜನಮಿತ್ರ, ಜನಹಿತ ಪತ್ರಿಕೆಗಳಲ್ಲಿ ಮತ್ತು ವಿಕ್ರಮ ವಾರಪತ್ರಿಕೆಯಲ್ಲಿ ವೇದದ ವಿಚಾರಗಳನ್ನು ಮಂತ್ರಗಳ ಅರ್ಥಸಹಿತ ವಿವರಿಸಿ ಅಂಕಣ ಲೇಖನಗಳನ್ನು ಬರೆಯುತ್ತಿದ್ದು, ಆಯ್ದ 51 ಲೇಖನಗಳನ್ನು ಒಟ್ಟಗೂಡಿಸಿದ 'ಜೀವನವೇದ' ಎಂಬ ಪುಸ್ತಕವನ್ನು ಬೆಂಗಳೂರಿನ ಸಂಮೃದ್ಧ ಪ್ರಕಾಶನದವರು ಹೊರತಂದಿದ್ದು ಅದನ್ನು ಸಮ್ಮೇಳನದಲ್ಲಿ ಬೆಂಗಳೂರಿನ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಮಲ್ಲೇಪುರಂ ವೆಂಕಟೇಶ್ ರವರು ಕಾಗಿನೆಲೆಯ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಶ್ರೀ ಶ್ರೀ ಶಿವಾನಂದುರಿ ಸ್ವಾಮೀಜಿ, ಶ್ರೀ ಕೆ.ಎಸ್.ಎಲ್. ಸ್ವಾಮಿ ಮತ್ತು ವಿಕ್ರಮ ವಾರಪತ್ರಿಕೆ ಸಂಪಾದಕ ಶ್ರೀ ದು.ಗು.ಲಕ್ಷ್ಮಣ್ ರವರುಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ಮಲ್ಲೇಪುರಂ ವೆಂಕಟೇಶರು "ವೇದಗಳಲ್ಲಿನ ಜ್ಞಾನ ಸಾಮರಸ್ಯದ ಸಾರವಾಗಿದೆ. ವೇದಗಳ ಕುರಿತು ಇದ್ದ ಅಪಪ್ರಚಾರಗಳನ್ನು ಸ್ವಾಮಿ ದಯಾನಂದ ಸರಸ್ವತಿಯವರು ನಿವಾರಿಸಿದರು. ದೈವರಾತ ಮಹನೀಯರು ಹೆಣ್ಣು ಮಕ್ಕಳಿಗೂ ವೇದಾಧ್ಯಯನ ಮಾಡಿಸಿದವರು. ವೇದಗಳೇ ಇರದಿದ್ದರೆ ನಂತರದ ಯಾವುದೇ ದರ್ಶನಗಳು ಇರುತ್ತಿರಲಿಲ್ಲ. ಜೀವನವೇದ ಕೃತಿಯಲ್ಲಿ ವೇದಮಂತ್ರಗಳನ್ನು ಆಧರಿಸಿದ ಬಿಡಿ ಲೇಖನಗಳು ಅತ್ಯಂತ ಸರಳ, ಸತ್ಯ ಮತ್ತು ಆಕರ್ಷಕವಾಗಿವೆ. ಎಲ್ಲರೂ ಕೊಂಡು ಓದಬೇಕು" ಎಂದರು.
ನಂತರ ಮಾತನಾಡಿದ ಶ್ರೀ ದು.ಗು. ಲಕ್ಷ್ಮಣ್ "ಜೀವನವೇದದಲ್ಲಿನ ಬಿಡಿ ಲೇಖನಗಳು ವಿಕ್ರಮದಲ್ಲಿ ಪ್ರಕಟವಾದಾಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಸಾಮಾನ್ಯರಿಗೂ ಅರ್ಥವಾಗುವಂತೆ ವೇದದ ಸಾರವನ್ನು ಲೇಖನಗಳಲ್ಲಿ ಲೇಖಕರು ಬಿಂಬಿಸಿದ್ದಾರೆ" ಎಂದರು. ಮುಂದುವರೆದು, "ಭಗವದ್ಗೀತೆಯನ್ನು ಸುಡುವ ಮಾತನಾಡುವ ಮಹನೀಯರುಗಳು ಅದನ್ನು ಓದಿಯೇ ಇರುವುದಿಲ್ಲ. ಓದಿ ಅರ್ಥ ಮಾಡಿಕೊಂಡಿದ್ದರೆ ಅದನ್ನು ಸುಡುವ ಮಾತನ್ನೇ ಆಡುತ್ತಿರಲಿಲ್ಲ. ಭೈರಪ್ಪನವರ ಕೃತಿಗಳನ್ನೂ ಓದದೇ ಪೂರ್ವಾಗ್ರಹಪೀಡಿತರಾಗಿ ವಿಮರ್ಶಿಸಹೋಗುವವರದು ಹುಚ್ಚುತನವೋ, ಮೂರ್ಖತನವೋ ತಿಳಿಯದು" ಎಂದು ಪರೋಕ್ಷವಾಗಿ 'ಬುದ್ಧಿಜೀವಿ' ಎಂದು ಕರೆಯಲಾಗುವ ಭಗವಾನರ ಮತ್ತು ಇತರ ಸ್ವಘೋಷಿತ ವಿಚಾರವಾದಿಗಳ ಕೃತ್ಯವನ್ನು ಟೀಕಿಸಿದರು.
ಲೇಖಕ ಹರಿಹರಪುರ ಶ್ರೀಧರ್ ಮಾತನಾಡುತ್ತಾ, "ನಾನು ವೇದ ಪಂಡಿತನಲ್ಲ. ವೇದಾಧ್ಯಾಯಿ ಸುಧಾಕರ ಶರ್ಮರಿಂದ ವೇದದ ವಿಚಾರಗಳಲ್ಲಿ ಆಸಕ್ತಿ ತಳೆದವನು. ಪಂ. ಸುಧಾಕರ ಚತುರ್ವೇದಿಯವರು ವೇದಮಂತ್ರಗಳಿಗೆ ಕೊಟ್ಟ ಅರ್ಥ ವಿವರಣೆಗಳನ್ನು ಆಧಾರವಾಗಿ ಬಳಸಿಕೊಂಡು ಇಂದಿನ ಘಟನೆಗಳು, ಸಂಗತಿಗಳು, ಜೀವನಶೈಲಿಗಳನ್ನು ಜೋಡಿಸಿ ಲೇಖನಗಳನ್ನು ಬರೆದಿದ್ದು ಇದನ್ನು ಪ್ರಾಜ್ಞರು ಮೆಚ್ಚಿ ಹರಸಿರುವುದು ಧನ್ಯತಾಭಾವ ಮೂಡಿಸಿದೆ" ಎಂದರು. ಪ್ರಕಾಶಕ ಶ್ರೀಹರ್ಷ ಸಹ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಜಿ.ಎಸ್.ಮಂಜುನಾಥ್ ನಿರೂಪಣೆ ಮಾಡಿದರು.
ರೂ. 160.00 ಬೆಲೆಯ ಈ ಪುಸ್ತಕವನ್ನು ರೂ. 100ರ ರಿಯಾಯಿತಿ ಬೆಲೆಯಲ್ಲಿ ಅಂದು ಮಾರಲಾಯಿತು. ಗಣನೀಯ ಸಂಖ್ಯೆಯ ಪುಸ್ತಕಗಳು ಮಾರಾಟವಾದವು.


















[ಕವಿ ನಾಗರಾಜರ ಜೀವನವೇದದಿಂದ]
[ಕವಿ ನಾಗರಾಜರ ಜೀವನವೇದದಿಂದ]