Pages

Thursday, August 12, 2010

ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ

ಕೃಷಿ ಬಗ್ಗೆ ಸಂಶೋಧನೆಗಾಗಿ ಒಬ್ಬ ವಿದ್ಯಾರ್ಥಿಯು ಹಳ್ಳಿಗೆ ಹೋಗುತ್ತಾನೆ. ಒಂದು ಹೊಲ. ಅದರಲ್ಲಿ ಒಂದು ಎತ್ತಿನ ಗಾಣ ಕಟ್ಟಿದೆ. ಎತ್ತು ಅದರಪಾಡಿಗೆ ಅದು ಸುತ್ತುತ್ತಿದೆ. ಗಾಣದಿಂದ ಬಂದ ಎಣ್ಣೆ ಡಬ್ಬ ತುಂಬುತ್ತಿದೆ.ಅಲ್ಲಿ ಯಾರೂ ಮನುಷ್ಯರು ಇಲ್ಲ. ವಿದ್ಯಾರ್ಥಿ ಸುತ್ತ ಮುತ್ತ ನೋಡುತ್ತಾನೆ. ಸಮೀಪದಲ್ಲಿಯೇ ಒಬ್ಬ ರೈತ ಹೊಲ ಉಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ವಿಚಾರಿಸುತ್ತಾನೆ. ಆ ಗಾಣ ಯಾರದು?

ರೈತ ಹೇಳುತ್ತಾನೆ.-" ನನ್ನದೇ ಸ್ವಾಮಿ"

- ನಿನಗೆ ಬುದ್ಧಿ-ಗಿದ್ಧಿ ಇದ್ಯಾ? ಎಣ್ಣೆ ಗಾಣ ತಿರುಗಲು ಬಿಟ್ಟು ಇಲ್ಲಿ ಬಂದು ಇಲ್ಲಿ ಹೊಲ ಉಳುತ್ತಿದ್ದೀಯಲ್ಲಾ? ಎಣ್ಣೆ ಡಬ್ಬ ತುಂಬಿ ಹೊರಚೆಲ್ಲಿದರೆ ಎಷ್ಟು ನ್ಯಾಶನಲ್ ವೇಸ್ಟ್ ಆಗುತ್ತೆ ಗೊತ್ತಾ?

- ಅಂಗಂದ್ರ ನಂಗ್ ಅರ್ಥ ಆಗಲಿಲ್ಲ ಬುದ್ಧಿ.

- ಎಣ್ಣೆ ಡಬ್ಬ ತುಂಬಿ ಹೆಚ್ಚಾಗಿ ಹೊರಚೆಲ್ಲಿದರೆ ನಷ್ಟ ಆಗುತ್ತೆ ಅಂತಾ.ಇಷ್ಟೂ ಬುದ್ಧಿ ಇಲ್ವಲ್ಲಾ ನಿನಗೆ.

- ಅಂಗೆಲ್ಲಾ ಏನೂ ಆಕ್ಕಿಲ್ಲ ಬುದ್ಧಿ.

-ಅದು ಹೇಗೆ? ನೀನು ಇಲ್ಲಿದ್ದೀಯ.ವೇಸ್ಟ್ಆಗುಲ್ಲಾ ಅಂತೀಯಲ್ಲಾ?

-ನೋಡಿ ಬುದ್ಧಿ, ನಾನು ನಾಲ್ಕು ಸಾಲು ಉಳ್ಮೆ ಮಾಡೋ ಹೊತ್ತಿಗೆ ಒಂದು ಡಬ್ಬ ಎಣ್ಣೆ ತುಂಬಿರ್ತದೆ. ಇಲ್ಲಿ ಉಳಾದು ನಿಲ್ಸಿ ಅಲ್ಲಿ ಓಯ್ತೀನಿ. ಎಣ್ಣೆ ಡಬ್ಬ ಬದಲಿಸ್ತೀನಿ. ಬತ್ತೀನಿ.

-ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳ್ತೀಯಾ? ನೀನು ಇಲ್ಲಿರುವಾಗ ಗಾಣದೆತ್ತು ತಿರುಗೋದು ನಿಲ್ಲಿಸಿಬಿಟ್ರೆ!

- ಇಲ್ಲಾ ಬುದ್ಧಿ, ಅಂಗಾಗಾಕಿಲ್ಲ. ಅದರ ಕುತ್ತಿಗೆಗೆ ಗಂಟೆ ಕಟ್ಟೀವ್ನಿ.ಅದು ಸುತ್ತುತ್ತಿರೋವಾಗ ನನಗೆ ಗಂಟೆ ಸದ್ದು ಕೇಳ್ತಾ ಇರ್ತದೆ.

- ಎತ್ತು ಏನಾದರೂ ನಿ೦ತಲ್ಲೇ ಕತ್ತು ಅಲ್ಲಾಡಿಸುತ್ತಾ ಗಂಟೆ ಶಬ್ಧ ಮಾಡುತ್ತಿದ್ದರೆ?

-ಅದು ನಿಮ್ಮಂಗೆ ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ ಬುದ್ಧಿ.

“ಹೃದಯ ಮಾತನಾಡಿದಾಗ”

ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………

“ಸುಮಾರು ನಾಲ್ಕು ದಶಕಗಳಿಂದ ಸಮಾಜ-ಸಮಾಜ ಅಂತ ಪ್ರಾಣ ಬಿಡ್ತೀಯಲ್ಲಾ,ಈಗಿನ ಸಾಮಾಜಿಕ ಸಂದರ್ಭ ನಿನಗೆ ಏನನ್ನಿಸುತ್ತಿದೆ?”

ಅವನ ಪ್ರಶ್ನೆಯಲ್ಲಿ ಕಳಕಳಿ ಇತ್ತು. ಹಾಗಾಗಿ ಅವನ ಪ್ರಶ್ನೆ ನನ್ನನ್ನು ಸ್ವಲ್ಪ ಚಿಂತನೆಗೆ ಈಡುಮಾಡಿತು. ತಕ್ಷಣಕ್ಕೆ ಉತ್ತರಕೊಡುವುದು ಕಷ್ಟವೆನಿಸಿತು. ಶ್ಯಾಮ್ ನಲ್ಲಿ ಸಮಾಜದ ಬಗ್ಗೆ ಪ್ರಾಮಾಣಿಕವಾದ ಕಳಕಳಿ ಇದೆ,ಇಂದಿನ ಸ್ಥಿತಿಗತಿಗಳಬಗ್ಗೆ ಅಸಮಾಧಾನವಿದೆ, ದು:ಖವಿದೆ, ಅಂತೆಯೇ ನೋವೂ ಇದೆ. ಅವನೇ ಮಾತು ಮುಂದುಬರೆಸಿದ.

“ ಶ್ರೀಧರ್, ಎಲ್ಲಾ ಬೋಗಸ್, ಯಾರನ್ನೂ ನಂಬಬೇಡ,ಸಮಾಜದ ಹೆಸರು ಹೇಳಿಕೊಂಡು ಮುಗ್ಧರನ್ನು ಹಿಂಡಿ ಹಿಪ್ಪೇಕಾಯಿ ಮಾಡ್ತಾರೆ. ಕೆಲಸವಾಗುವ ತನಕ ನಿಮ್ಮಂತವರನ್ನು ಇಂದ್ರ,ಚಂದ್ರ, ದೇವೇಂದ್ರನೆನ್ನುತ್ತಾರೆ. ಕೆಲಸವಾದಮೇಲೆ “ಹಾಸುಂಡು ಬೀಸಿ ಒಗೆದಂಗ” ಅನ್ನೋ ಮಾತು ಕೇಳಿದೀಯ ತಾನೆ, ಅಷ್ಟೆ.

ಅವನ ನಾಲಿಗೆ ಮಾತನಾಡುತ್ತಿರಲಿಲ್ಲ ಬದಲಿಗೆ ಹೃದಯ ಮಾತನಾಡುತ್ತಿತ್ತು. ಹಾಗಾಗಿ ನಾನು ತಲೆಯಾಡಿಸುತ್ತಲೇ ಇದ್ದೆ. “ ಕೇವಲ ೧೦-೨೦ ವರ್ಷಗಳ ಹಿಂದೆ ಮಂಡಿಯಲ್ಲಿ ಲೆಕ್ಖ ಬರೆಯುತ್ತಿದ್ದವರು ರಾಜಕೀಯ ಪ್ರವೇಶ ಮಾಡಿ ಈಗ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯರು, ನೂರಾರು ಎಕರೆ ಜಮೀನು,ಹತ್ತಾರು ಬಂಗಲೆಗಳು, ಹತ್ತಾರು ಕಾರ್ಖಾನೆಗಳ ಒಡೆಯರು. ಶಾಸಕರು-ಮಂತ್ರಿಗಳಾಗಿ ಇವರು ಮಾಡಿರುವ ಸಮಾಜಸೇವೆಯ ಪರಿ ಇದು.ಹೇಳು ಶ್ರೀಧರ್, ಇದೆಲ್ಲಾ ಹೇಗೆ ಸಾಧ್ಯ ವಾಯ್ತು? ಅಥವಾ ಇದು ಸುಳ್ಳೇ ?”

ನನ್ನ ಮೌನ ಗಮನಿಸಿದ ಶ್ಯಾಮ್ ಮಾತನಾಡುತ್ತಲೇ ಇದ್ದ. “ಶ್ರೀಧರ್, ಯಾರನ್ನೂ ನಂಬಬೇಡ.ಸಮಾಜದ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಸೇವೆಯ ಹೆಸರಲ್ಲಿ, ಮೋಸ ಮಾಡಿ ಮಾಡಿ “ಸಮಾಜ ಸೇವೆ” ಎಂಬ ಪದ ಅದರ ಅರ್ಥವನ್ನೇ ಕಳೆದುಕೊಂಡಿದೆ.”

ಅಬ್ಭಾ! ನನ್ನ ಮಿತ್ರನ ಮುಖ ಕೆಂಪೇರಿತ್ತು, ದು:ಖ, ಕೋಪ ಒಮ್ಮೆಲೇ ಬರುತ್ತಿತ್ತು. ಯಾಕೋ ಎರಡು ನಿಮಿಷ ಸುಮ್ಮನಾದ. ಆಗ ನಾನು ಬಾಯ್ತೆರೆದೆ “ ನೋಡು ಶ್ಯಾಮ್, ನೀನು ಸಮಾಜದ ಒಂದು ವರ್ಗದ ಕೆಟ್ಟ ಮುಖವನ್ನು ನೋಡಿ ಮಾತನಾಡುತ್ತಿರುವೆ. ಆದರೆ ಸಮಾಜವೆಂದರೆ ಕೇವಲ ಭ್ರಷ್ಟ ರಾಜಕಾರಣಿಗಳ ಸ್ವತ್ಥಲ್ಲ.ನಿಜವಾದ ಸಮಾಜಸೇವೆ ಮಾಡುತ್ತಿರುವ ಸಾವಿರಾರು ಮಂದಿ ಇನ್ನೂ ಎಲೆಮರೆಕಾಯಿಯಂತೆ ಸುದ್ಧಿಯಿಲ್ಲದೇ ನಿಜದರ್ಥದ ಸಮಾಜಸೇವೆ ಮಾಡುತ್ತಲೇ ಇದ್ದಾರೆ. ಸಮಾಜಕ್ಕೆ ಇನ್ನೂ ಒಂದು ಮುಖವಿದೆ. ಅಲ್ಲಿ ದೀನ, ದಲಿತ,ದರಿದ್ರರ ಆಕ್ರಂದನ ಬೆಚ್ಚಿ ಬೀಳಿಸುವಂತೆ ಕೇಳುತ್ತದೆ. ಕೇವಲ ಟಿ.ವಿ. ಮಾಧ್ಯಮಗಳಲ್ಲಿ ನೋಡುವ, ಸುದ್ಧಿಪತ್ರಿಕೆಗಳಲ್ಲಿ ಓದುವ ಸುದ್ಧಿಯಷ್ಟೇ ಪ್ರಪಂಚವಲ್ಲ. ಅದರಾಚೆಗೂ ಯಾವ ಮಾಧ್ಯಮಗಳೂ ತಲುಪಲಾರದ ಜಾಗದಲ್ಲಿ ನೆರಳುತ್ತಿರುವವರ ಗೋಳು ಕಿವಿಗೆ ಬೀಳದಿರುವ ಜಾಗದಲ್ಲಿ ಅಂತವರ ಸೇವೆ ಮಾಡುತ್ತಿರುವವರ ಸಂಖ್ಯೆಗೇನೂ ಕಮ್ಮಿಇಲ್ಲ. ಆದೃಶ್ಯಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ. ಕಾರಣ ಆ ಜಾಗವನ್ನು ತಲುಪಲು ರಸ್ತೆಗಳೇ ಇಲ್ಲ, ದೂರವಾಣಿ ಇಲ್ಲ, ವಿದ್ಯುತ್ ಎಂಬುದು ಗೊತ್ತೇ ಇಲ್ಲ. ಮಾನ ಮುಚ್ಚಲು ಬಟ್ಟೆಗೇ ಗತಿಯಿಲ್ಲ. ಮಲಗಲು ಸೂರಿಲ್ಲ. ಹೊರಪ್ರಪಂಚವನ್ನು ಕಂಡೇ ಇಲ್ಲ……

ನನ್ನ ಮಾತು ಮುಗಿದೇ ಇಲ್ಲ, ಮಧ್ಯೆ ಬಾಯಿ ಹಾಕಿದ ಶ್ಯಾಮ್ “ ಹೌದು ಶ್ರೀಧರ್, ಅಂತಹ ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ಮಹಾನುಭಾವರಿಲ್ಲವೆಂದು ನಾನು ಹೇಳಲಿಲ್ಲ. ಅಂತವರು ಮಾಡುತ್ತಲೇ ಇದ್ದಾರೆ. ಎಷ್ಟೋ ಜನ ಅಂತವರ ಸೇವೆಮಾಡುತ್ತಲೇ ಕೊನೆಯುಸಿರೆಳದಿರುವ ನಿದರ್ಶನಗಳೂ ನನ್ನ ಗಮನಕ್ಕೆ ಬಂದಿದೆ. ಆದರೆ ಅದಕ್ಕಿಂತ ಘೋರ ಸುದ್ಧಿಯೂ ಕಿವಿಮುಟ್ಟಿದೆ. ಇಂತಹ ದೀನ, ದಲಿತ,ದರಿದ್ರರ ಸೇವೆಯ ಹೆಸರಲ್ಲೂ ಲೂಟಿ ನಡೆಯುತ್ತಿದೆ. ಅಂತವರ ಹೆಸರಲ್ಲಿ ಹಣಸಂಗ್ರಹಿಸಿ ಅದರ ದುರುಪಯೋಗ ಪಡಿಸಿಕೊಂಡಿರುವ ಬೋಗಸ್ ಸಂಸ್ಥೆಗಳ ಬಗ್ಗೆ ನಿನಗಿನ್ನೂ ತಿಳಿದಿಲ್ಲ. ಅದಕ್ಕೇ ನೀನು ಇಷ್ಟು ಮುಗ್ಧನಾಗಿ ಮಾತನಾಡುತ್ತಿರುವೆ.”

“ನೋಡು ಶ್ಯಾಮ್, ನೀನು ಏನೇ ಹೇಳು, ಸಮಾಜಸೇವೆಯ ಶುದ್ಧಮುಖವನ್ನು ಹತ್ತಿರದಿಂದ ಕಂಡಿರುವವನು ನಾನು.ಆ ಮುಖವೇ ನನಗೆ ಸ್ಫೂರ್ತಿ, ಕಾಲೇಜುಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ವೈದ್ಯರಾಗಿ, ಇಂಜಿನಿಯರುಗಳಾಗಿ ಲಕ್ಷ ಲಕ್ಷ ದುಡಿಯಲು ಸಮರ್ಥರಿದ್ದ ತರುಣರು ಅದನ್ನೆಲ್ಲಾ ಎಡಗಾಲಲ್ಲಿ ಒದ್ದು ,ಮುಂಜಿ-ಮದುವೆ ಗಳಿಲ್ಲದೆ, ಏಕಾಂಗಿಯಾಗಿ ಸಮಾಜಕಾರ್ಯಮಾಡುತ್ತಾ ಅದರಲ್ಲೇ ಕೊನೆಯುಸಿರೆಳೆದಿರುವ ಅನೇಕ ಪುಣ್ಯಾತ್ಮರನ್ನು ಕಂಡಿದ್ದೇನೆ. ಅವರೊಡನೆ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನೆನಪುಗಳು ನನ್ನ ಸ್ಮೃತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ…….” ನನ್ನ ಮಾತಿನ ನಡುವೆಯೇ ಮಾತಿಗಿಳಿದ ಶ್ಯಾಮ್

“ ಹೌದೌದು ಶ್ರೀಧರ್, ಹೊಟ್ಟೆಗೆ ಹಿಟ್ಟಿಲ್ಲದೇ ಕಡಲೆ ಪುರಿ ತಿಂದು , ಹಳ್ಳಿಗಳ ದೇವಸ್ಥಾನದ ಜಗಲಿಯ ಮೇಲೆ ಮಲಗಿ, ಆಹಳ್ಳೀ ಜನಗಳಿಂದ ಬಾಯ್ತುಂಬ ಬೈಗುಳ ಕೇಳಿದರೂ ಬೇಸರಿಸದೆ ಅವರ ಮನ ಒಲಿಸಿ, ನಾಲ್ಕಾರು ತರುಣರನ್ನು ಕಲೆಹಾಕಿ, ಅವರೊಡನೆ ಗೆಳೆತನ ಬೆಳಸಿ, ದೇಶಭಕ್ತಿಗೀತೆಗಳನ್ನು ಹೇಳಿಕೊಟ್ಟು, ಕಬ್ಬಡ್ಡಿ ಆಡಿಸಿ, ಕೊನೆಯಲ್ಲಿ “ ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ” ಅಂತಾ ಪ್ರೆಯರ್ ಮಾಡಿಸಿ ಅವರಲ್ಲಿ ದೇಶ ಭಕ್ತಿಯ ಹುಚ್ಚು ಹಿಡಿಸಿದರಲ್ಲಾ! ಆ ಪುಣ್ಯಾತ್ಮರ ಹೆಸರು ಹೇಳಿಕೊಂಡೇ ಬೆಳೆದವರು ಈಗ ದೇಶವನ್ನೇ ಲೂಟಿಮಾಡುತ್ತಿದ್ದಾರಲ್ಲಾ! ಸಂಸ್ಕಾರವಿಲ್ಲದೆ ನೇರವಾಗಿ ರಾಜಕೀಯ ಪ್ರವೇಶಮಾಡಿ ಭ್ರಷ್ಟ ನಾದ ರಾಜಕಾರಣಿಗೂ ಸೋಕಾಲ್ದ್ ಸಂಸ್ಕಾರ ಪಡೆದ ಈ ಮಂದಿಗೂ ಏನಪ್ಪಾ ವೆತ್ಯಾಸ? ಸಾಕು ನಿನ್ನ ಆದರ್ಶಗಳ ಬೊಗಳೆ ಪಾಠ. ಜನರು ಈಗ ರೋಸಿ ಹೋಗಿದ್ದಾರೆ. ದೇಶ ಭಕ್ತಿಯ ಹೆಸರು ಹೇಳಿಕೊಂಡು ಬೆಳೆದವರು ಈಗ ಭ್ರಷ್ಟ ರಾಜಕಾರಣಿಗಳ ರೂಪ ತಳೆದಿರುವುದು ನಿನ್ನ ಕಣ್ಣಿಗೆ ಬೀಳುತ್ತಿಲ್ಲವೇ? ನೀವೆಲ್ಲಾ ಕಣ್ಣಿದ್ದೂ ಕುರುಡರೇ? ಕಿವಿ ಸರಿ ಇದ್ದೂ ಕಿವುಡರೇ? ಅಥವಾ ಜಾಣ ಕಿವುಡೋ? “

ನನ್ನ ಮಿತ್ರನ ಕೋಪ ನೆತ್ತಿಗೇರಿತ್ತು. ನನ್ನ ಮಾತು ಅವನ ಕಿವಿಗೆ ಬೀಳುವ ಸ್ಥಿತಿಯಲ್ಲಿರಲಿಲ್ಲ. ಆದರೂ ನಾನು ಬಾಯ್ದೆರೆದೆ….

“ ಹಾಗಲ್ಲಾ ಶ್ಯಾಮ್, ನಿನಗೆ ಮತ್ತೂ ಸಮಾಜದ ಒಂದೇ ಮುಖ ಕಾಣುತ್ತಿದೆ, ಸಮಾಜದ ಇನ್ನೊಂದು ಮುಖವನ್ನೂ ನೋಡುವ ಮನಸ್ಸು ಮಾಡು, ಈಗಲೂ ಸತ್ಯವಾಗಿ, ಪ್ರಾಮಾಣಿಕವಾಗಿ, ಸಮಾಜಕ್ಕಾಗಿ ಬೆವರು ಸುರಿಸುತ್ತಿರುವವರು ಇಲ್ಲವೇ?”

ನನ್ನ ಮಿತ್ರ ಈಗ ಸ್ವಲ್ಪ ಸಮಾಧಾನದಿಂದ ಮಾತನಾಡಲು ಶುರು ಮಾಡಿದ “ ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಗಳೇ ಇಲ್ಲವೆಂದು ನಾನು ಹೇಳಲಿಲ್ಲ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಶ್ರೀಮಂತರೂ ಇದ್ದಾರೆ- ಬಡವರೂ ಇದ್ದಾರೆ. ದಾನಿಗಳೂ ಇದ್ದಾರೆ-ಜಿಪುಣರೂ ಇದ್ದಾರೆ. ಸಂಕುಚಿತರೂ ಇದ್ದಾರೆ- ವಿಶಾಲ ಮನೋಭಾವದವರೂ ಇದ್ದಾರೆ. ಧರ್ಮಾಂಧರೂ ಇದ್ದಾರೆ- ಧರ್ಮಿಷ್ಠರೂ ಇದ್ದಾರೆ. ಹಾಗೆಯೇ ಪ್ರಾಮಾಣಿಕರೂ ಇದ್ದಾರೆ, ಆದರೆ ಭ್ರಷ್ಟ ರು ಮೆರೆದಿದ್ದಾರೆ. ಇಲ್ಲಿ ಎಲ್ಲರೂ ಇದ್ದಾರೆ. ಸಮಾಜವೆಂದರೆ ಇವೆಲ್ಲದರ ಮಿಶ್ರಣವೇ ಆಗಿದೆ. ಆದರೆ ಒಂದು ಉತ್ತಮ ಕಾರ್ಯಮಾಡಲು ಹೊರಟ ಸಾಮಾಜಿಕ ಕಾರ್ಯಕರ್ತನು ಭ್ರಷ್ಟ ರಾಜಕಾರಣಿಗಳನ್ನು ಓಲೈಸಲು ಹೊರಟಿದ್ದಾನಲ್ಲಾ! ಸಮಾಜ ಕಾರ್ಯಕ್ಕಾಗಿ ಭ್ರಷ್ಟರ ಹಣವನ್ನು ಅವಲಂಭಿಸುವ ಪರಿಸ್ಥಿತಿ ಬಂದಿದೆಯಲ್ಲಾ! ಅದು ಸುಳ್ಳೇ? ಇಂತಾ ಸಮಾಜ ಕಾರ್ಯ ಬೇಕಾ? ನಿಮ್ಮಂತವರು ಇಂತಹಾ ವಿಷವೃತ್ತದಲ್ಲಿ ಸಿಕ್ಕಿಹಾಕಿಕೊಂಡು ಮಾಡುವ ಸಮಾಜಕಾರ್ಯದ ಅನಿವಾರ್ಯತೆಯಾದರೂ ಏನು? “

ಶ್ಯಾಮ್ ಮಾತನಾಡುತ್ತಾ ಆಡುತ್ತಾ ಭಾವುಕನಾಗಿದ್ದ. ನಿಜವಾಗಿ ನನ್ನ ತಲೆಯಲ್ಲಿ ನೂರಾರು ಹುಳುಗಳನ್ನು ಒಮ್ಮೆಲೇ ಬಿಟ್ಟು ಚಡಪಡಿಸುವಂತೆ ಮಾಡಿದ್ದ. ಅವನೂ ಭಾವುಕನಾಗಿ ಚಡಪಡಿಸುತ್ತಿದ್ದ. ಹೌದು ಶ್ಯಾಮನ ಮಾತಿನಲ್ಲಿ ಸತ್ಯವಿದೆ. ಅಬ್ಭಾ! ಒಂದು ಸಾಮಾಜಿಕ ಕಾರ್ಯ ಮಾಡುವಾಗ ಅಪ್ರಮಾಣಿಕ, ಭ್ರಷ್ಟ ವ್ಯಕ್ತಿಗಳನ್ನು ಅವಲಂಬಿಸಿ ಸಮಾಜಕಾರ್ಯ ಮಾಡುವಂತಹ ಪರಿಸ್ಥಿತಿ ಇದೆಯಲ್ಲಾ! ಇಂತಹಾ ಸಮಾಜಕಾರ್ಯ ಬೇಕೆ? ನನ್ನೊಳಗೇ ಏನೋ ತಳಮಳ! ದ್ವಂದ್ವ ಕಾಡುತ್ತಲಿತ್ತು.ಶ್ಯಾಮನ ಮುಖ ಕೆಂಪೇರಿತ್ತು. ಅವನನ್ನು ದೃಷ್ಟಿಸುವುದೂ ಕಷ್ಟವಾಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. “ ಶ್ಯಾಮ್ ಸಧ್ಯಕ್ಕೆ ಊಟ ಮಾಡಿ ಮಲಗೋಣ. ನನ್ನ ಆತ್ಮ ಒಪ್ಪುವಂತಾ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುವೆ. ಆದರೆ ನಿನಗೊಂದು ಭರವಸೆ ನೀಡುವೆ “ಭ್ರಷ್ಟ ವ್ಯಕ್ತಿಗಳಿಂದ ನನಗೇನೂ ಆಗ ಬೇಕಿಲ್ಲ. ಅವರ ಹಂಗು ನನಗೆ ಬೇಡ. ಆದರೆ ಆ ವಿಷ ವರ್ತುಲ ನಾಶವಾಗಲೇ ಬೇಕು.ಆಗುತ್ತದೆ. ಅಂತಹ ಆತ್ಮ ವಿಶ್ವಾಸ ನನಗಿದೆ. ಹೇಗೆ? ಯಾರಿಂದ? ಕೇಳಬೇಡ.ಇದು ಧರ್ಮ ಭೂಮಿ. ಧರ್ಮಕ್ಕೇ ಜಯ. ದುಷ್ಟ ಶಕ್ತಿಗಳು ನಾಶವಾಗಲೇ ಬೇಕು. ಇದು ನಾವು ಚರಿತ್ರೆಯಿಂದ ಕಲಿತಿರುವ ಪಾಠ. ದುಷ್ಟರ ಶಿಕ್ಷೆ-ಶಿಷ್ಟರ ರಕ್ಷಣೆ ಆಗಲೇ ಬೇಕು. ಇದು ವಿಧಿ ಲಿಖಿತ. ಇದನ್ನು ಯಾರೂ ತಪ್ಪಿಸಲಾರರು. ಈಗ ಕಾಣುತ್ತಿರುವುದೆಲ್ಲಾ ಭ್ರಷ್ಟ ತನದ ಪರಾಕಾಷ್ಟೆ. ಇನ್ನು ಮೇಲೇರಲು ಸಾಧ್ಯವಿಲ್ಲ. ಇನ್ನೇನಿದ್ದರೂ ದುಷ್ಟ ಶಕ್ತಿಗಳ ನಾಶ-ಶಿಷ್ಟರ ಉತ್ಥಾನಕ್ಕೆ ಕಾಲ ಪಕ್ವವಾಗುತ್ತಿದೆ. ಇದೇ ಕಣ್ಣುಗಳಿಂದ ಆ ಕಾಲವನ್ನೂ ನೋಡುವಿಯಂತೆ . ಅರವಿಂದರ ಮಾತು ಸುಳ್ಳಾಗಲಾರದು. ಇನ್ನೇನಿದ್ದರೂ ಧರ್ಮದ್ದೇ ಕಾಲ. ಆ ದಿನಗಳು ಹತ್ತಿರ ವಾಗುತ್ತಿದೆ. ಸ್ವಲ್ಪ ತಾಳ್ಮೆ ಬೇಕಷ್ಟೇ……”

ಊಟ ಸೇರಲಿಲ್ಲ. ದುಗುಡ ತುಂಬಿದ ಮನಸ್ಸಲ್ಲೇ ಮಾತನಾಡುತ್ತಲೇ ಮಲಗಿದಾಗ ಯಾವಾಗ ನಿದ್ರಾದೇವಿ ಒಳಿದಳೋ ಬೆಳಿಗ್ಗೆ ಕಣ್ ಬಿಟ್ಟಾಗ ಕಿಟಿಕಿಯ ಸರಳುಗಳನ್ನು ಭೇದಿಸಿಕೊಂಡು ಬಂದ ಸೂರ್ಯನ ಕಿರಣಗಳು ನವೋತ್ಸಾಹ ಮೂಡಿಸಿದ್ದವು.

ಸತ್ಯ

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ ಸತ್ಯ!
****
-ಕವಿನಾಗರಾಜ್.
ತೋಚಿದ್ದು-ಗೀಚಿದ್ದು-ಭಾಗ-1


ನಾನೆಂಬುದು ನಾನಲ್ಲ,
ನನದೆಂಬುದು ನನದಲ್ಲ,
ನನ್ನವರೆಂಬುವರು ನನ್ನವರಲ್ಲ,
ಆದರೂ ಈ ಸತ್ಯ ನಾ ತಿಳಿದಿಲ್ಲ!
*** *** ***

ಬದುಕುವಾಸೆ ವರ್ಷ ನೂರು,
ಅಂದು ಕೊಂಡದ್ದು ನೂರು,
ಕನಸು ಕಂಡಿದ್ದು ನೂರು,
ಆದರೂ ಆಗಲಿಲ್ಲ ಚೂರು-ಪಾರು!
*** *** ***

ಬರುವಾಗ ಒಂಟಿ,
ಹೋಗುವಾಗ ಒಂಟಿ,
ನಡುವಿನಲೇಕೆ ಈ ಜಂಟಿ?
*** *** ***

ನನದೆಲ್ಲವೂ ಸರಿ
ನಾ ನುಡಿವುದೆಲ್ಲವೂ ಸರಿ
ನಾ ಮಾಡುವುದೆಲ್ಲವೂ ಸರಿ
ಹೌದಲ್ಲವೇ? ನೀವೇನಂತೀರಿ?
ಖಂಡಿತಾ ಅಲ್ಲ! ಸಧ್ಯಕ್ಕೆ ನೀ ಪಕ್ಕಕ್ಕೆ ಸರಿ!!
*** *** ***

ನನ್ನ ನಿತ್ಯಾನುಷ್ಠಾನದ ಮೂಲ ಜಪಮಂತ್ರ 'ಬೇಕು'
ಎಲ್ಲವೂ ಬೇಕು, ಎಲ್ಲವೂ ನನಗೇ ಬೇಕು,
ಆದರೂ ತಿಳಿಯದಾಗಿದೆ, 'ನನಗೇನು ಬೇಕು'
ಯಾರಾದರೂ ತಿಳಿಸುವಿರಾ ಈ ಬೇಕಿಗೊಂದು ಬ್ರೇಕು?
*** *** ***

ಬದುಕಬೇಡ ನೀ ನೂರು ವರುಷ
ಖಂಡಿತಾ ತರಲಾರದು ಅದು ನಿನಗೆ ಹರುಷ
ಬದುಕಾಗುವುದು ನಿತ್ಯ ಗೋಳಾಟದ ಬೇಗುದಿ
ತೊಲಗಿದರೆ ಸಾಕಪ್ಪಾ ಎಂದು ಕಾಯ್ವರೇ ಬಲು ಮಂದಿ!
*** *** ***

ದಿನಾ ನಡೆಯುತ್ತೇನೆ, ದಿನಾ ಎಡವುತ್ತೇನೆ
ದಿನಾ ನುಡಿಯುತ್ತೇನೆ, ದಿನಾ ತೊದಲುತ್ತೇನೆ
ದಿನಾ ಅಳುತ್ತೇನೆ, ದಿನಾ ನಗುತ್ತೇನೆ
ದಿನದಿನದ ಬಾಳಿನ ಅನುಭವವೆ ಇದೇ ತಾನೆ?
*** *** ***

ಒಳಗೆ ಜ್ವಾಲಾಮುಖಿ, ಹೊರಗೆ ಹಸನ್ಮುಖಿ,
ಒಳಗೆ ನಾನಾ ಜಂಜಾಟದ ನಡುವೆಯೂ ಜೀವನ್ಮುಖಿ,
ಬದುಕುವುದು ನನಗಲ್ಲ, ಪರರಿಗೆ,
ಅದುವೇ ಸದಾ ಇರಲಿ ನನ ಪಾಲಿಗೆ!
*** *** ***

ಕಡೆಗಣಿಸಬೇಡ ನಿನ್ನೀ ದೇಹವನು
ಅದೇ ಆ ಭಗವಂತನ ಅನುಪಮ ಸೃಷ್ಠಿ
ಸದಾ ಇರಲಿ ಸ್ವಸ್ಥ ದೇಹ, ಸ್ವಸ್ಥ ಮನಸ್ಸು
ಅದುವೇ ಇಹಲೋಕದಿಂದ ಪರಲೋಕಕ್ಕೊಯ್ಯುವ ಸಾಧನ ಸಂಪತ್ತು!
*** *** ***

ಸುರಿಯುತಿಹುದು ಮಳೆ

ತಂಪಾಗಿಹುದು ಇಳೆ

ಬಸಿರೊಡೆಯಿತು ಧರೆ,

ಹೊದ್ದಿತು ಹಸಿರಿನಾ ಝರಿ-ಸೀರೆ!
*** *** ***

ನಿನಗಿರಲು ಅಧಿಕಾರ
ಇರುವುದು ವಂದಿ ಮಾಗದರ
ಜೈಜೈಕಾರ
ಅಧಿಕಾರ ಹೋದೊಡನೆ ವಂದಿ
ಮಾಗದರು ಮಾಯ
ಕಾಲ್ಗೆ ಬೀಳುವವರಿಲ್ಲ, ಕಾಲೆಳೆಯುವವರೇ ಎಲ್ಲ!
*** *** ***

ಒಳಗೆ ತುಂಬಿದಾ ನಗು, ಹೊರಬಾರದ ನಗು,
ಒಳಗೆ ತುಂಬಿದಾ ಹರುಷ, ಹೊರಗೆ ಬರೀ ವರ್ಷ
ಒಳಗೆ ತುಂಬಿದಾ ಭಾವನೆಗಳು, ಹೊರಗೆ ಬರೀ ಗೋಜಲುಗಳು
ಉಕ್ಕಬಾರದೇ ಈ ಅಗ್ನಿಪರ್ವತ, ಉಗುಳಬಾರದೇ ತನ್ನೊಡಲಿನ ತುಡಿತಗಳ?
*** *** ***

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

*** *** ***
ನನಗ್ಯಾರಿಲ್ಲ ನಾನೊಬ್ಬನೇ ಎಲ್ಲ
ಎಲ್ಲವೂ ಇದೆ ಆದರೆ ನನಗೇನಿಲ್ಲ
ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
ಅಂಬಿಗನ ಬಾಳಿನ ಪರಿ ನನ ಬಾಳೂ ದಂಡ!
*** *** ***
ನೊಂದು ಮೂಕಾಗಿ

ಬೆಂದು ಬೆಂಡಾಗಿ

ಸೋತು ಸುಣ್ಣಾಗಿ, ಸುಟ್ಟು ಕರಕಲಾಗಿ

ರೋಧಿಸುತಿಹುದೀ ಜೀವ

*** *** ***

ಬಳಸಿದರು ನನ್ನನ್ನು ಕಬ್ಬಿನ ಜೆಲ್ಲೆಯಂತೆ

ಬಳಸಿ ಮೂಲೆ ಸೇರಿಸಿದರು ಕಸಪೊರಕೆಯಂತೆ

ಮೊಸರನ್ನ ತಿಂದು ನನ ಮೂತಿಗೆ ಸವರಿದರು ಕೋತಿಯಂತೆ

ಎಸೆದರು ಉಂಡಾದ ಮೇಲೆ ಬಾಳೆಎಲೆಯ ಪರಿಯಂತೆ!

*** *** ***

ಮಾತಾಡಿ ಕೆಟ್ಟರು ಕೆಲವರು

ಮಾಡಿ ಕೆಟ್ಟರು ಕೆಲವರು

ಮಾತಾಡಿ-ಮಾಡಿ ಕೆಟ್ಟವರೂ ಕೆಲವರು

ಮಾತಾಡದೇ, ಮಾಡದೇ ಜಾಣರಾದರು ಹಲವರು!

*** *** ***


ದುರ್ಬಳಿಸಿಹರು ಎನ್ನ ಸಹನೆಯನ್ನ

ದುರ್ಬಳಿಸಿಹರು ಎನ್ನ ಮೌನವನ್ನ

ದುರ್ಬಳಿಸಿಹರು ಎನ್ನ ಮೃದು ಮನಸ್ಸನ್ನ

ನಾನೀಗ ಬರೀ ಹಳಸಿದ ಚಿತ್ರಾನ್ನ!


*** *** ***


ಋಣದಿಂದ ಬಂತು ಸಂಬಂಧ

ಸಂಬಂಧದಿಂದ ಹೆಚ್ಚಿತು ಋಣಬಂಧ

ಅದುವೇ ಜೀವ-ಜೀವನದ ಋಣಾನುಬಂಧ

ಅದುವೇ ತಪ್ಪಿಸಿಕೊಳ್ಳಲಾರದ ಪಾಶ-ಬಂಧ!


*** *** ***