ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ. ಋಗ್ವೇದ ಹೇಳುತ್ತದೆ:-
ತ್ವಂ ಹ್ಯಗ್ನೇ ಅಗ್ನಿನಾ ವಿಪ್ರೋ ವಿಪ್ರೇಣ ಸನ್ ತ್ಸತಾ|
ಸಖಾ ಸಖ್ಯಾ ಸಮಿಧುಸೇ || (ಋಕ್. ೮.೪೩.೧೪.)
[ಅಗ್ನೇ] ಜ್ಞಾನಜ್ಯೋತಿರ್ಮಯನೇ! [ವಿಪ್ರಃ] ವಿಶೇಷ ಪ್ರಜ್ಞನೂ [ಸನ್] ಸತ್ಯಸ್ವರೂಪನೂ [ಸಖಾ] ಸರ್ವಮಿತ್ರನೂ ಆದ, [ತ್ವಮ್] ನೀನು, [ಹಿ] ನಿಜವಾಗಿ [ಅಗ್ನಿನಾ] ಜ್ಞಾನಜ್ಯೋತಿರ್ಮಯನೂ [ವಿಪ್ರೇಣ] ವಿಶೇಷ ಪ್ರಜ್ಞನೂ [ಸತಾ] ಸತ್ಯಮಯನೂ [ಸಖ್ಯಾ] ಮೈತ್ರೀಭಾವ ಪ್ರಧಾನನೂ ಆದ ಮಾನವನಿಂದ [ಸಂ ಇಧ್ಯಸೇ] ಚೆನ್ನಾಗಿ ಪ್ರಕಾಶಿಸಲ್ಪಡುತ್ತೀಯೆ.
ಭಗವದ್ಗುಣಸದೃಶ ಗುಣಧಾರಣವೇ ವೈದಿಕೋಪಾಸನೆಯ ಆದರ್ಶ. ಈ ಉಪಾಸನೆ ಧರ್ಮದ ಹೃದಯವಿದ್ದಂತೆ. ಹೀಗೆ ಪೂರ್ಣಧರ್ಮ ಜೀವನದಲ್ಲಿ ಪ್ರಸ್ಫುಟಿತವಾಗಬೇಕಾದರೆ, ಜ್ಞಾನ-ಕರ್ಮ-ಉಪಾಸನಾ ಮೂರನ್ನೂ ರೂಢಿಸಿಕೊಳ್ಳಬೇಕು.