Pages

Friday, October 3, 2014

ಜೀವನವೇದ-12

ವೇದಸುಧೆಯ  ಆತ್ಮೀಯ ಅಭಿಮಾನಿಗಳೇ ,

                                                               ನಮಸ್ಕಾರಗಳು.

             ಇದು   ಜೀವನವೇದ ಸರಣಿಯ ಹನ್ನೆರಡನೆಯ ಕಂತು.   ಲೇಖನವನ್ನು ಓದುವ ಮುಂಚೆ ನನ್ನದೊಂದು ಮನವಿ.   ಬ್ಲಾಗ್ ನ ಮುಖ ಪುಟದಲ್ಲಿ ಸಂಪಾದಕರನ್ನು ಸಂಪರ್ಕಿಸಲು ಒಂದು ಕಾಂಟಾಕ್ಟ್ ಕಾಲಮ್ ಇದೆ.ಸಾಮಾನ್ಯವಾಗಿ ಓದುಗರು ಲೇಖನಗಳ ಬಗ್ಗೆ  ತಮ್ಮ  ಅಭಿಪ್ರಾಯವನ್ನೂ ಕೂಡ ಅಲ್ಲೇ ಬರೆಯುತ್ತಾರೆ. ಹಾಗೆ ಬರೆದಾಗ ಅದು ಸಂಪಾದಕರಿಗೆ ನೇರವಾಗಿ ಮೇಲ್ ತಲುಪುತ್ತದೆ. ಅದರಲ್ಲಿ  " ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ" ಎಂದು ಬರೆದರೆ  ಸಂಪಾದಕರಿಗೆ ಈ ಅಭಿಪ್ರಾಯವು ಯಾವ ಲೇಖನದ ಬಗ್ಗೆ ಎಂದು ತಿಳಿಯುವುದಿಲ್ಲ. ಆಯಾ ಲೇಖನಗಳ ಕೆಳಗೆ  ಇರುವ ಕಾಮೆಂಟ್ ಕಾಲಮ್ ನಲ್ಲಿ ಬರೆದಾಗ ಅದು ಬ್ಲಾಗ್ ನಲ್ಲಿ ಪ್ರಕಟವಾಗಿ ಎಲ್ಲರೂ ಅದನ್ನು ಓದಬಹುದಾಗಿರುತ್ತದೆ.ಅಲ್ಲದೆ ಬೇರೆ  ಓದುಗರೂ ಕೂ  ತಮ್ಮ ಅಭಿಪ್ರಾಯವನ್ನು ತಿಳಿಸಲು ಅದು ನೆರವಾಗುತ್ತದೆ. 

                   ಬ್ಲಾಗ್  ವಿಚಾರದಲ್ಲಿ      ಏನಾದರೂ ನೀವು  ಸಲಹೆ ಕೊಡುವುದಿದ್ದರೆ  ಮಾತ್ರ  ಪಕ್ಕದಲ್ಲಿ ಪ್ರತ್ಯೇಕವಾಗಿ ಇರುವ ಕಾಂಟ್ಯಾಕ್ಟ್ ಫಾರಮ್ ನಲ್ಲಿ ಬರೆಯುವುದು ಸೂಕ್ತ. ಇನ್ನು ಇಂದಿನ ಸರಣಿಯನ್ನು ಓದಲು ಆರಂಭಿಸಬಹುದು.
ನಮಸ್ತೆ

-ಹರಿಹರಪುರಶ್ರೀಧರ್
ಸಂಪಾದಕ
-----------------------------------------------------------------------------------------------------
ಸುಖೀ ರಾಜ್ಯಕ್ಕಾಗಿ ರಾಜ ಮತ್ತು ಪ್ರಜೆಯ ಕರ್ತವ್ಯವೇನು?

ರಾಜ್ಯಭಾರ ಮಾಡುವವರು ಹೇಗಿರಬೇಕೆಂಬುದನ್ನು ವೇದವು ಹಲವು ಮಂತ್ರಗಳಲ್ಲಿ ತಿಳಿಸಿದೆ. ರಾಜನ ಜೊತೆಜೊತೆಗೇ ಪ್ರಜೆಯ ಕರ್ತವ್ಯವೂ ಇದೆ, ಎಂಬುದನ್ನೂ ವೇದವು ಮನದಟ್ಟು ಮಾಡುತ್ತದೆ. ಈ ಬಗ್ಗೆ ಇಂದು ವಿಚಾರ ಮಾಡೋಣ.

ತ್ರೀಣೀ ರಾಜಾನಾ ವಿದಥೇ ಪುರೂಣಿ ಪರಿ ವಿಶ್ವಾನಿ ಭೂಷಥಃ ಸದಾಂಸಿ |
ಅಪಶ್ಯಮತ್ರ ಮನಸಾ ಜಗನ್ವಾನ್ ವ್ರತೇ ಗಂಧರ್ವಾ ಅಪಿ ವಾಯುಕೇಶಾನ್ ||
[ಋಕ್. ೩.೩೮.೬]

ಅನ್ವಯಾರ್ಥ :

ರಾಜಾನಾ = ರಾಜ ಮತ್ತು ಪ್ರಜೆಗಳೇ
ವೃತೇ = ಸತ್ಯವಾದ
ಗಂಧರ್ವಾನ್ = ಸುಶಿಕ್ಷಿತ ವಾಣಿಯನ್ನು
ವಾಯುಕೇಶಾನ್ = ವಾಯುವಿನಂತೆ ವೇಗ ಗತಿ ಹೊಂದಿರುವ ಉತ್ತಮ ಪುರುಷರನ್ನು
ಮನಸಾ = ವಿಜ್ಞಾನದೊಂದಿಗೆ
ಜಗನ್ವಾನ್ = ಪಡೆದುಕೊಂಡಿರುವ
ಅಪಶ್ಯಮ್ = ನಿನ್ನನ್ನು ನಾನು ನೋಡುವೆನು
ತ್ರೀಣಿ ಸದಾಂಸಿ = ಮೂರು ರೀತಿಯ ಸಭೆಗಳನ್ನು ನಿಶ್ಚಿತಗೊಳಿಸಿ
ವಿಧಥೇ = ಜ್ಞಾನಕಾರಕ ವ್ಯವಹಾರಗಳಲ್ಲಿ
ಪುರೂಣಿ = ಬಹಳಷ್ಟು
ವಿಶ್ವಾನಿ = ಸಮಗ್ರ ವ್ಯವಹಾರಗಳನ್ನು
ಪರಿಭೂಷಥ: = ಪರಿಪೂರ್ಣಗೊಳ್ಳುವಂತೆ ಮಾಡಿರಿ

ಭಾವಾರ್ಥ:
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮಸಭೆ  ಎಂಬ ಮೂರು ರೀತಿಯ ಸಂಸತ್ತನ್ನು ರಚಿಸಿಕೊಂಡು ರಾಜ್ಯಕ್ಕೆ ಸಂಬಂಧಿಸಿದ ಸಮಗ್ರ ಕರ್ಮಗಳನ್ನು ಯೋಗ್ಯ ರೀತಿಯಲ್ಲಿ ಮಾಡುವವರಾಗಿರಿ. ಅದರಿಂದ ನಿಮಗೂ ಮತ್ತು ರಾಜ್ಯಕ್ಕೂ ಅತಿಶಯ ಸುಖವು ಲಭಿಸುತ್ತದೆ.
ಈ ವೇದ ಮಂತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವೇನಿಲ್ಲ. ಅತ್ಯಂತ ಸರಳ ವಾಗಿದೆ.ವೇದವು ಎಲ್ಲಾ ಕಾಲಕ್ಕೂ ಪ್ರಸ್ತುತವೆಂಬುದನ್ನು ನಾವು ಈ ಮಂತ್ರದಿಂದ ಕಾಣಬಹುದಾಗಿದೆ. ಈ ಮಂತ್ರವು ಏನು ಕರೆ ಕೊಡುತ್ತದೆ?...
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ   ಪ್ರಜಾಪ್ರಭುಗಳಾದ ನಮ್ಮ ಯೋಗ್ಯತೆ ಬಗ್ಗೆ ನಾವೀಗ ಯೋಚಿಸಬೇಕು.ಪ್ರಜೆಗಳು ಉತ್ತಮ ಗುಣ ಕರ್ಮ ಸ್ವಭಾವದವರಾದರೆ ಅವರಿಗೆ ತಕ್ಕನಾದ ಸರ್ಕಾರವನ್ನು ಚುನಾಯಿಸುತ್ತಾರೆ. ಆದರೆ ಈಗ ನಡೆದಿರುವುದೆಲ್ಲಾ ಪ್ರಜಾಪ್ರಭುತ್ವದ ನಗೆಪಾಟಲಲ್ಲವೇ? ನಿಜವಾಗಿ ಭಾರತದ ಒಬ್ಬ ಪ್ರಜೆ ತನ್ನ ಕರ್ತವ್ಯದ, ತನ್ನ ಸ್ವಭಾವ, ತನ್ನ ಗುಣದ  ಬಗ್ಗೆ ಯೋಚಿಸಿದ್ದಾನೆಯೇ? ಸಭ್ಯ ನಾಗರೀಕನೆನಿಸಿಕೊಂಡವರು ಬಹಳಷ್ಟು ಜನ ಚುನಾವಣೆ ಸಂದರ್ಭದಲ್ಲಿ  ಮತಕೇಂದ್ರಗಳಿಗೆ ಹೋಗದೆ ಟಿ.ವಿ. ಮುಂದೆ ಕುಳಿತು “ ದೇಶದ ರಾಜಕಾರಣವನ್ನು” ಮಾತನಾಡುವುದನ್ನು ನಾವು ನೋಡಿಲ್ಲವೇ? ದೇಶಕ್ಕೆ ಇಂತಹ ಸರ್ಕಾರ ಬರಬೇಕೆಂದು ಅಪೇಕ್ಷಿಸುವುದಕ್ಕೆ ಇಂತವರಿಗೆ ಯಾವ ನೈತಿಕ ಹಕ್ಕಿದೆ?
   ಚುನಾವಣೆಯ ದಿನ ೭೦% ಮತ ಚಲಾಯಿಸಿದರೆ ಅದು ಅತ್ಯಂತ ಹೆಚ್ಚಿನ ಮತದಾನ ಎಂದು ಹೇಳಬಹುದು. ಉಳಿದ ೩೦% ಜನರಲ್ಲಿ ವಿದ್ಯಾವಂತರೇ ಹೆಚ್ಚೆಂಬುದು ಸರಿಯಾಗಿ ಸರ್ವೇ ಮಾಡಿದರೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು, ಅವಿದ್ಯಾವಂತರು, ಶ್ರಮಿಕರು ಪ್ರತಿಶತ ಹೆಚ್ಚು ಮತ ಚಲಾಯಿಸುತ್ತಾರೆ. ದುರ್ದೈವವೆಂದರೆ ಅವರಿಗೆ ದೇಶಕ್ಕೆ ಒಳ್ಳೆಯದು ಮಾಡುವವರಾರು? ದೇಶದ ಸಂಪತ್ತನ್ನು  ಲೂಟಿಹೊಡೆಯುವವರಾರು? ಎಂಬ ಅರಿವಿರುವುದಿಲ್ಲ. ಇಂತವರಲ್ಲಿ  ಸಾಮಾನ್ಯವಾಗಿ ಯಾವುದಾದರೂ ಪ್ರಲೋಭನೆಗೆ ಒಳಗಾಗಿ ಮತ ಚಲಾಯಿಸುವವರೇ ಹೆಚ್ಚು. ಮತದಾರರನ್ನು ಜಾಗೃತಿ ಮಾಡುವವರಾರು?
ಪ್ರಜ್ಞಾವಂತ ಮತದಾರರು ವೇದದ ಆದೇಶದಂತೆ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ ಸರ್ಕಾರವನ್ನು ಆರಿಸಿದರೆ ಆ ಸರ್ಕಾರದಲ್ಲಿ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮ ಸಭೆ  ಎಂಬ ಮೂರುಮುಖ್ಯ ಅಂಗಗಳಲ್ಲಿ ವೇದದ ಆಶಯ ಏನಿದೆಯೋ ಅದರಂತೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗಲಾರದೇ?


ರಾಜನಾದವನು ಹೇಗಿರಬೇಕೆಂಬುದನ್ನು ಮುಂದಿನ ಮಂತ್ರದಲ್ಲಿ ತಿಳಿಸಲಾಗಿದೆ.

ತದಿನ್ನ್ವಸ್ಯ  ವೃಷಭಸ್ಯ  ಧೇನೋ-ರಾ ನಾಮಭಿರ್ಮಮಿರೇ ಸಮ್ಯಕಂ  ಗೋಃ |
ಅನ್ಯದನ್ಯದಸುರ್ಯಂ ವಸಾನಾ ನಿ ಮಾಯಿನೋ ಮಮಿರೇ ರೂಪಮಸ್ಮಿನ್ ||   
[ಋಕ್. ೩.೩೮.೭]

ಅನ್ವಯಾರ್ಥ :

ಅಸ್ಯ ವೃಷಭಸ್ಯ = ಈ ಬಲಿಷ್ಟ ಮನುಷ್ಯನ
ಧೇನೋಃ= ನುಡಿಯ
ನಾಮಭಿಃ = ಹೆಸರುಗಳಿಂದ
ನು ಆ ಮಿಮಿರೇ = ಬೇಗ ಬೇಗನೇ ಅಳೆಯುವವರಾಗಿರಿ
ತತ್ = ಅದನ್ನು
ಸಮ್ಯಕ್ = ಸಂಯೋಜನಗೊಳಿಸುವುದರ ಮೂಲಕ ಉತ್ಪನ್ನವಾದ
ಗೋಃ = ಮಾತಿನಿಂದ
ಅನ್ಯದನ್ಯತ್ = ಪ್ರತ್ಯೇಕಪ್ರತ್ಯೇಕವಾಗಿರುವ
ಅಸುರ್ಯಂ = ಮೇಘದ ಸ್ವತ್ತನ್ನು
ವಸಾನಾಃ = ಮರೆಮಾಡುತ್ತಾ
ಮಾಯಿನಃ = ಬುದ್ಧಿವಂತರಿರುವ
ಅಸ್ಮಿನ್ = ಈ ರಾಜ್ಯದಲ್ಲಿ
ರೂಪಂ = ಸೌಂದರ್ಯವನ್ನು
ನೀ  ಮಮೀರೇ = ಉತ್ಪಾದಿಸುತ್ತಾರೆ.
ಇತ್ = ಅವರೇ ಶಾಸನ ಮಾಡಲು ಅರ್ಹರು

ಭಾವಾರ್ಥ : 
ಯಾವ ರಾಜನು ತನ್ನ ರಾಜ್ಯವನ್ನು ಮೃದುವಚನದಿಂದ ಪಾಲನೆ ಮಾಡುತ್ತಾನೋ ಅವನು ಮೋಡದಿಂದ ಮಳೆಗರೆಯುವ ರೀತಿಯಲ್ಲಿ ಬಹು ವಿಧವಾದ ಸಂಪತ್ತನ್ನು ಪಡೆಯುತ್ತಾನೆ.
 ಒಂದು ಉತ್ತಮ ಆಡಳಿತವನ್ನು ನೀಡಬೇಕೆಂದರೆ ರಾಜನು ಮೃದುವಚನದಿಂದ ಆಡಳಿತ ನಡೆಸಬೇಕೆಂಬುದು ವೇದದ ಆಶಯ. ಸರ್ಕಾರವನ್ನು ನಡೆಸುವ ಪಕ್ಷಗಳು ಮತ್ತು ಅದರ ನಾಯಕರುಗಳು ವೇದದ ಈ ಆದೇಶವನ್ನು ಗಮನಿಸಬೇಕು. ವೇದವು ಎಲ್ಲಾ ಕಾಲಕ್ಕೂ ಎಷ್ಟು ಪ್ರಸ್ತುತವೆಂಬುದನ್ನೂ ನಾವು ಎಲ್ಲಾ ಮಂತ್ರಗಳಲ್ಲೂ ಕಾಣಬಹುದಾಗಿದೆ. ಒಂದು ಮಾತು ನೆನಪಾಗುತ್ತದೆ “ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ” ವಜ್ರದಷ್ಟು ಕಠೋರವಾಗಿರಬೇಕು ಆದರೆ ಸಂದರ್ಭವರಿತು ಹೂವಿನಂತೆ ಮೃದುವೂ ಆಗಬೇಕು. ಇದು ಒಬ್ಬ ಆಡಳಿತಗಾರನ ಲಕ್ಷಣ. ಯಾರ ಹತ್ತಿರ ಕಠೋರವಾಗಿರಬೇಕು,  ಯಾರ ಹತ್ತಿರ ಮೃದುವಾಗಿರಬೇಕೆಂಬ ವಿವೇಕ ರಾಜನಿಗಿರಬೇಕು. ಆದರೆ ದುರ್ದೈವವೆಂದರೆ ಸಧ್ಯದ ನಮ್ಮ ವ್ಯವಸ್ಥೆಯಲ್ಲಿ ಅದು ತದ್ವಿರುದ್ಧವಾಗಿದ್ದು ಉತ್ತಮ ಆಡಳಿತವನ್ನು ನಿರೀಕ್ಷಿಸುವುದಾದರೂ ಹೇಗೆ? ಮುಂದಿನ ಮಂತ್ರದಲ್ಲಿ ಸರ್ಕಾರದ ಕಾರ್ಯಾಂಗ ವ್ಯವಸ್ಥೆ ಹೇಗಿರಬೇಕೆಂಬುದನ್ನು ವಿವರಿಸಲಾಗಿದೆ

ಶುನಂ ಹುವೇಮ ಮಘವಾನಮಿಂದ್ರ-ಮಸ್ಮಿನ್ ಭರೇ ನೃತಮಂ  ವಾಜಸಾತೌ|
ಶೃಣ್ವಂತಮುಗ್ರಮೂತಯೇ ಸಮತ್ಸು ಘ್ನಂತಂ ವೃತ್ರಾಣಿ ಸಂಜಿತಂ ಧನಾನಾಮ್ ||
[ಋಕ್. ೩.೩೮.೧೦]

ಅನ್ವಯಾರ್ಥ :
ಊತಯೇ = ರಕ್ಷಣೆಗಾಗಿ
ಸಮತ್ಸು = ಸಂಗ್ರಾಮದಲ್ಲಿ
ಘ್ನಂತಂ = ನಾಶ ಮಾಡುವ
ಉಗ್ರಂ = ಕಠೋರ ಸ್ವಭಾವದ
ಧನಾನಾಂ = ದ್ರವ್ಯಗಳ
ಸಂಜಿತಂ = ಉತ್ತಮ ರೀತಿಯಲ್ಲಿ ಶತೃಗಳನ್ನು ಜಯಿಸುವಂತಹ
ವೃತ್ರಾಣಿ =ಸುವರ್ಣಾದಿ ಧನಗಳನ್ನು
ಶೃಣ್ವಂತಂ = ಆಲೈಸುವವನನ್ನು
ಅಸ್ಮಿನ್ = ಈ ವ್ಯವಹಾರದಲ್ಲಿ
ವಾಜಸಾತೌ = ಧನ ಅನ್ನಾದಿಗಳ ವಿಭಾಗ ಮಾಡುವವನು
ಭರೇ = ಸಂಗ್ರಾಮದಲ್ಲಿ
ನೃತಮಂ = ಶ್ರೇಷ್ಠನಾದ
ಮಘವಾನಂ = ಐಶ್ವರ್ಯ ಸಂಪನ್ನನಾದ
ಇಂದ್ರಂ = ಶತೃಗಳನ್ನು ನಾಶಮಾಡುವಂತಹ ರಾಜನನ್ನು
ಹುವೇಮ = ಕರೆಯೋಣ[ಅವನ ಸಹಕಾರದಿಂದ]
ಶುನಂ = ಸುಖವನ್ನೂ ಜಯವನ್ನೂ ಪಡೆಯೋಣ..

ಭಾವಾರ್ಥ:
ಯಾವ ರಾಜನು ಪ್ರಮುಖ ವ್ಯಕ್ತಿಗಳನ್ನೂ, ರಾಜ ವಿದ್ಯೆಯಲ್ಲಿ ಚತುರರನ್ನೂ, ಶೂರರಾದ ಸೈನಿಕರನ್ನೂ, ನ್ಯಾಯಾಧೀಶರನ್ನೂ, ವಾದಮಾಡುವ ವಕೀಲರನ್ನೂ, ಸೇವೆ ಮಾಡುವ ಸೇವಕರನ್ನೂ ಗೌರವ ಪೂರ್ವಕವಾಗಿ ರಾಜ್ಯಾಂಗದಲ್ಲಿ ನೇಮಿಸಿಕೊಳ್ಳುತ್ತಾನೋ, ಅವನು ಯಾವಾಗಲೂ ವಿಜಯಶೀಲನೂ, ಕೀರ್ತಿವಂತನೂ,ಐಶ್ವರ್ಯಸಂಪನ್ನನೂ ಆಗುತ್ತಾನೆ. ಇಂದಿನ ಸರ್ಕಾರದ ಮುಖ್ಯಸ್ಥರಿಗೂ ಕೂಡ ಈ ಮಂತ್ರದಲ್ಲಿ ಅದ್ಭುತವಾದ ಮಾರ್ಗದರ್ಶನವಿದೆ. ತನ್ನ ಆಡಳಿತಕ್ಕೆ ಯಾವ ಯಾವ ಹುದ್ಧೆಗೆ  ಎಂತಹ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕೆಂಬುದಕ್ಕೆ ಸೂಕ್ತ ಸಲಹೆ ಇಲ್ಲಿದೆ. ಒಂದು ರಾಜ್ಯದ ಆಡಳಿತ ನಡೆಸುವವನು ವೇದದ ಮಾರ್ಗದರ್ಶನವನ್ನು ಅನುಸರಿಸಿದ್ದೇ ಆದರೆ ಆ ರಾಜ್ಯದಲ್ಲಿ ಉತ್ತಮ ಆಡಳಿತವಿರುವುದರಲ್ಲಿ ಸಂಶಯವಿಲ್ಲ. ಉತ್ತಮ ಆಡಳಿತವಿದ್ದಾಗ ಸಹಜವಾಗಿ ಪ್ರಜೆಗಳು ನೆಮ್ಮದಿ ಯಿಂದಿದ್ದು ಸರ್ಕಾರವೂ ಕೂಡ ಸಂಪತ್ಭರಿತವಾಗಿರಲು ಸಾಧ್ಯ. ಯಾವಾಗ ಪ್ರಜೆಗಳ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಸೌಕರ್ಯಗಳನ್ನು ಸರ್ಕಾರವು ನೀಡುತ್ತದೆ, ಆಗ ಸಹಜವಾಗಿ ಪ್ರಜೆಗಳೂ ತೆರಿಗೆಯನ್ನು ಸಂತೋಷದಿಂದಲೇ ಪಾವತಿಸುತ್ತಾರೆ.ಆಗ ರಾಜ್ಯ/ಕೇಂದ್ರ ಸರ್ಕಾರವೂ ಸಂಪತ್ಭರಿತವಾಗಿದ್ದು ಅದರ ಕೀರ್ತಿಯು ಹೆಚ್ಚುತ್ತದೆ.
ಹೀಗೆ ರಾಜನಾದವನ ಮತ್ತು ಪ್ರಜೆಗಳ ಕರ್ತವ್ಯವನ್ನು ತಿಳಿಸುವ ಹಲವಾರು ಮಂತ್ರಗಳು ವೇದದಲ್ಲಿ ಲಭ್ಯ. ಇದನ್ನು ಅಧ್ಯಯನ ಮಾಡಿ ಸರ್ಕಾರದ ವ್ಯವಸ್ಥೆಗೆ ಲಾಭವನ್ನು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಂತೂ ಇದೆ. ಆದರೆ ನಮ್ಮ ಸೆಕ್ಯೂಲರ್ ಆಡಳಿತದಲ್ಲಿ ವೇದದ ಕರೆಯನ್ನು ಆಲಿಸುವವರಾರು?