Pages

Wednesday, November 24, 2010

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು

 ಇಂದು ಸರ್ಕಾರಿ ರಜೆ. ನಮ್ಮ ಕೇಂದ್ರದಿಂದ ಯಾವ ಕರೆಯೂ ಬಾರದೆ ಮನೆಯಲ್ಲೇ ಇದ್ದೆ. " ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ" ಹಾಡು ನೆನಪು ಬಂತು ಹಾಗೆಯೇ ಗುನುಗುಡುತ್ತಿದ್ದೆ. ಕನ್ನಡ ಇರಲಿ, ಆದರೆ ತಾಯಿ ಭಾರತಿಯನ್ನು ನೆನೆಯುತ್ತಾ ಪದ್ಯಒಂದನ್ನು ಇದೇ ದಾಟಿಯಲ್ಲಿ ಬರೆಯಬಾರದೇಕೆ? ಎಂದುಕೊಂಡು ಪ್ರಯತ್ನ ಮಾಡಿದೆ. ನನ್ನ ನಾದಿನಿ ಶೀಮತಿ ಲಲಿತಾ ರಮೇಶ್ ಕೂಡ ಮನೆಗೆ ಬಂದಳು. ಸರಿ ರಾಗ ಹಾಕಿ, ಹಾಡಿಯೇ ಬಿಟ್ಟೆವು. ಹೇಗಿದೆ? ಹೇಳಿ.

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು|
ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು
ಭೇದಭಾವವ ತೊರೆದು ಮುಂದೆ ಸಾಗುವೆವು||ಪ||

ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ
ಜನ್ಮತಾಳಿದ ನಾವು ಎಂದೆಂದು ಒಂದು|
ವೇದ ಮಂತ್ರವಪಠಿಸಿ ,ಧರ್ಮಾರ್ಥಕಾಮದಲಿ
ಮುಂದೆನಡೆವೆವು ನಾವು ಧರ್ಮಸೂತ್ರದಲಿ||೧||

ಈ ಮಣ್ಣಿನಲಿ ಜನಿಸಿ, ದೇಶದಗಲದಿ ತಿರುಗಿ
ತಪವ ಮಾಡಿದ ಋಷಿಯ ಸಂತತಿಯು ನಾವು|
ತ್ಯಾಗಮಯ ಜೀವನದಿ ಸರಳಬದುಕನು ನಡೆಸಿ
ವಿಶ್ವದಲಿ ಎತ್ತರಕೆ ಮೆರದ ಜನ ನಾವು||೨||

ಶಂಕರರು ಮಧ್ವರು, ಬಸವ ರಾಮಾನುಜರು
ತೋರಿದಾ ದಾರಿಯಲಿ ಸಾಗುವೆವು ನಾವು|
ಎದುರಾಳಿ ಶತೃಗಳ ರಕ್ತತರ್ಪಣಮಾಡಿ
ಮೆರದ ವೀರರ ಜನ್ಮ ಸಾರ್ಥಕವ ಮಾಡಿ||೩||

ನಮ್ಮ ಚಟಕ್ಕೆ ಬರೆಯುತ್ತೇವೆಯೇ?

ಸಮ: ಶತ್ರೌ ಚ ಮಿತ್ರೇ ಚ  ತಥಾ ಮಾನಾಪಮಾನಯೋ:
ಶೀತೋಷ್ಣ ಸು:ಖ ದು:ಖೇಷು  ಸಮ: ಸಂಗ ವಿವರ್ಜಿತ:|

ಭಗವದ್ಗೀತೆಯಲ್ಲಿ ಕೃಷ್ಣನು   ಹೇಳಿದಂತೆ ಶತ್ರುಗಳನ್ನು-ಮಿತ್ರರನ್ನೂ ಸಮನಾಗಿ ಕಾಣುವ,   ಮಾನಾಪಮನಗಳನ್ನೂ ಸಮನಾಗಿ ಕಾಣುವ,  ಶೀತ-ಉಷ್ಣ, ಸು:ಖ-ದು:ಖ , ಎಲ್ಲವನ್ನೂ ಸಮನಾಗಿ ಕಾಣುವಂತಹ ಮಟ್ಟಕ್ಕೆ ನಾವೇರಬೇಕು.ಇದು ಆದರ್ಶ, ಸರಿ. ಆದರೆ ಆ ಮಟ್ಟವನ್ನು ನಾವು ತಲುಪಲು ಸಾಧ್ಯವೇ? ಹೊರಗಿನ ವಿಚಾರಗಳು ಒಂದೆಡೆ ಇರಲಿ,  ಬ್ಲಾಗ್ ನಲ್ಲಿ ಬರೆಯುವ ನಾವು ನಮ್ಮ  ಬರಹಗಳಿಗೆ    ಮೆಚ್ಚುಗೆ ವ್ಯಕ್ತ ಪಡಿಸಿದವರನ್ನೂ ,ಮತ್ತು  ಖಂಡಿಸಿದವರನ್ನೂ  ಸಮನಾಗಿ ಕಾಣುವ ಮನ: ಸ್ಥಿತಿಯನ್ನು ಹೊಂದಿದ್ದೇವೆಯೇ?  ಅಥವಾ ಯಾರೂ ಒಂದೂ ಪ್ರತಿಕ್ರಿಯೆಗಳನ್ನೂ ಹಾಕದಾಗ! ವೈರಾಗ್ಯದ ಮಾತನಾಡುವವರೂ ಕೂಡ ತಾವು ಬರೆದ ಬರಹವನ್ನು ಜನರು ನೋಡಿ, ಮೆಚ್ಚಿ ಪ್ರತಿಕ್ರಿಯಿಸಿದರೇ! ಎಂದು  ಬ್ಲಾಗ್ ನಲ್ಲಿ ಹುಡುಕುವುದು ಸರ್ವೇ ಸಾಮನ್ಯವಾದ ಸಂಗತಿ. ಯಾರ ಸಹವಾಸ ಬೇಡ ವೆಂದು ತನ್ನಷ್ಟಕ್ಕೆ ಬ್ಲಾಗ್ ನಲ್ಲಿ ಏನೋ ಬರೆದುಕೊಂಡು ಕಾಲ ಹಾಕೋಣವೆನ್ನುವವರೂ ಕೂಡ, ಅವರ ಲೇಖನವನ್ನು ಪೋಸ್ಟ್ ಮಾಡಿದ ನಂತರ ಹಲವಾರು ಭಾರಿ, ತಾನು ಬರೆದ ಲೇಖನವನ್ನೇ ನೋಡದೇ ಇರಲಾರರು. ಎಷ್ಟು ಜನರು ಓದಿದ್ದಾರೆ! ಎಷ್ಟು ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ! ಎಂದು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇದ್ದದ್ದೇ. ಎಲ್ಲೋ ಒಬ್ಬಿಬರು " ನಾನು ಪೋಸ್ಟ್ ಮಾಡಿದವನು ಮತ್ತೆ  ಬ್ಲಾಗ್ ನೋಡಿಯೇ ಇಲ್ಲ ಎನ್ನುವವರೂ ಇದ್ದಿರಬಹುದು.. ಆದರೆ ಇಂತಹವರು ಬೆರಳೆಣಿಕೆ ಜನರು.
ಅಂತೂ ಜನರು ನಮ್ಮನ್ನು ಹೊಗಳಿದಾಗ ಉಬ್ಬುವ, ತೆಗಳಿದಾಗ ಕುಗ್ಗಿ ಹೋಗುವ ಹುಲುಮಾನವರು ನಾವಲ್ಲವೇ? ಈ ಸ್ಥಿತಿಯಿಂದ ಹೊರಗೆ ಬರಲು ನಿತ್ಯ ಸತತ ಸಾಧನೆ  ಅನಿವಾರ್ಯ.ಆದರೆ  ಬ್ಲಾಗ್ ನಲ್ಲಿ ಬರೆಯುವ ಬಹುಪಾಲು ನಾವು ನಿತ್ಯ ಧ್ಯಾನ, ಪ್ರಾಣಾಯಾಮ, ಯೋಗ, ಅಥವಾ ಇನ್ಯಾವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆಂದು  ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಲ್ಲವೇ? ಬ್ಲಾಗ್ ನಲ್ಲಿ ಬರಯುವುದೂ ಒಂದು ಚಟವೆನಿಸುವುದಿಲ್ಲವೇ?
ನನಗನಿಸಿದ್ದು ಜಗತ್ತಿಗೂ ಅನ್ವಯವೆಂದುಕೊಂಡು ಲೇಖನವನ್ನು ಮುಂದುವರೆಸುತ್ತೇನೆ. ನನ್ನ ಕತೆಯಂತೂ ಸನ್ಯಾಸಿಯೊಬ್ಬ ಬೆಕ್ಕು ಸಾಕಿದ ಕತೆಯಂತಯೇ ಆಗಿದೆ. ಬೆಕ್ಕಿಗೆ ಹಾಲು ಬೇಕಲ್ಲವೇ? ಅದಕ್ಕೊಂದು ಹಸು, ಹಸುವಿದ್ದಮೇಲೆ ಅದನ್ನು ಸನ್ಯಾಸಿ ನೋಡಿಕೊಳ್ಳಲು ಸಾಧ್ಯವೇ? ಅದಕ್ಕೊಬ್ಬಳು ಹೆಣ್ಣು, ಸನ್ಯಾಸಿಯ ಆಶ್ರಮಕ್ಕೆ ಹೆಣ್ಣಿನ ಪ್ರವೇಶವಾದಮೇಲೆ  ಇನ್ನು ಕೇಳಬೇಕೆ! ಸಂಪದದಲ್ಲಿ ಆಗೊಂದು ಈಗೊಂದು ಬರೆಯುತ್ತಿದ್ದ ನಾನು ಮೆಚ್ಚುಗೆಯ ಪ್ರತಿಕ್ರಿಯೆ ಬಂದಾಗ ಉಬ್ಬಿ, ತೆಗಳಿಕೆಯ ಮಾತುಗಳು ಬಂದಾಗ ಕುಗ್ಗಿ, ಕಡೆಗೆ ಇವೆಲ್ಲಾ ತಂಟೆ -ತಕರಾರು ಬೇಡವೆಂದು ನೆಮ್ಮದಿಯಾಗಿರಲು ನನ್ನ ಸ್ವಂತ ಬ್ಲಾಗ್ "ನೆಮ್ಮದಿಗಾಗಿ" ಆರಂಭಿಸಿದೆ. ಆನಂತರ ಮೂರುನಾಲ್ಕು ಬ್ಲಾಗ್ ಆರಂಭವಾಗಿ ಕಡೆಗೆ ಈಗ " ವೇದಸುಧೆ" ನನ್ನ ವ್ಯಾಪ್ತಿ ಮೀರಿ ಅದೊಂದು ಬಳಗದ ಬ್ಲಾಗ್ ಆಗಿ ನಡೆಯುತ್ತಿದೆ. ಕೇವಲ ಒಂಬತ್ತು ತಿಂಗಳಲ್ಲಿ ಹದಿನೆಂಟು ಸಾವಿರ ಇಣುಕುಗಳನ್ನು ಕಂಡಿರುವ ಬ್ಲಾಗಿನ ಗೌರವ ಕಾಪಾಡ ಬೇಕಲ್ಲಾ! ಅದಕ್ಕಾಗಿ ಬೇಡವೆಂದರೂ  ನಾಲ್ಕಾರು ಗಂಟೆ ಅಂತರ್ಜಾಲದಮುಂದೆ ಕೂರಲೇ ಬೇಕು! ಇವೆಲ್ಲಾ  ಏತಕ್ಕಾಗಿ? ಜನರ ಮೆಚ್ಚುಗೆಗಾಗಿ ತಾನೆ? ಒಂದು ಸದ್ವಿಚಾರವನ್ನು ಕೊಡುವುದು ನೆಪ! ಆದರೆ ಬ್ಲಾಗ್ ಮುಂದೆ ಕೂರುವುದೊಂದು ಚಟವಾಗಿ ಬಿಟ್ಟಿದೆಯೇ! ಎಂಬ ಅನುಮಾನ ಬಂದು ಬಿಟ್ಟಿದೆ. ಏನಾದರೂ ಮಾಡಿ ಒಂದು ನಿಯಮ ಹಾಕಿಕೊಳ್ಳದಿದ್ದರೆ  ಆರೋಗ್ಯ ಹದಗೆಟ್ಟು  ಅನಿವಾರ್ಯವಾದ " ವಿಶ್ರಾಂತಿ" ಗೆ ಬರಬೇಕಾಗಬಹುದು. ಇದು ನನ್ನ ಸ್ಥಿತಿ! ನಿಮ್ಮದು?ಸ್ವಲ್ಪ ಉತ್ತಮವಾಗಿರಬಹುದಲ್ಲವೇ? 
ಕೊಸರು: ನನ್ನ ಮಿತ್ರ  ಗ್ರಾ.ಬ.ಹರೀಶ್ ಹೇಳುತ್ತಿರುತ್ತಾರೆ-" ನಾವು ಯಾರ ಉದ್ಧಾರಕ್ಕೂ ಬರೆಯುವುದಿಲ್ಲ, ನಮ್ಮ ಚಟಕ್ಕೆ ಬರೆಯುತ್ತೇವೆ"



ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ

ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ
ಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ||


ಭರತಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರಾ
ಮಡಿಲ ಮಕ್ಕಳ ಸೋಲು-ಗೆಲುವಿನ ನೋವು-ನಲಿವಿನ ಹಂದರ
ಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರ
ಮತ್ತೆ ಮೂಡಲಿ ಭಾಸ್ಕರ, ಮತ್ತೆ ಮೂಡಲಿ ಭಾಸ್ಕರ||


ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ
ಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ||


ಖಡ್ಗ ಬಲದಿಂ ಕುಟಿಲ ತನದಿಂ ನಡೆಯಿತಿಲ್ಲಿ ಮತಾಂತರ
ಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷ ಬೀಜಾಂಕುರ
ಒಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರ
ವಿಭಜನೆಯ ಫಲ ಭೀಕರ, ವಿಭಜನೆಯ ಫಲ ಭೀಕರ||


ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ
ಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ||


ನಮ್ಮ ನಾಡನು ತುಂಡುಗೈದಿಹ ಧೂರ್ತಕೃತ್ಯವ ಖಂಡಿಸಿ
ಅರಿಯ ಜೊತೆಯೆಲಿ ಸಂಚು ಹೂಡಿಹ ಭಂಡಜನರನು ದಂಡಿಸಿ
ರಾಷ್ಟ್ರವೆಮದು ಅಖಂಡವೆಂದು, ವಿಶ್ವದೆದುರಲಿ ಮಂಡಿಸಿ
ಮಾತೃ ಭೂಮಿಯ ವಂದಿಸಿ, ಮಾತೃ ಭೂಮಿಯ ವಂದಿಸಿ||


ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ
ಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ||


ಮೌನ ಮುರಿದು ಮಾತನಾಡಿ ಎದೆಯ ಭಾವಕೆ ದನಿಯ ನೀಡಿ
ಸಖ್ಯ ಬೆಳೆಸಿ ಭೇದ ಮರೆತು ಮುಖ್ಯವಾಹಿನಿಯಲ್ಲಿ ಬೆರೆತು
ಬಿಂಕ ಬಿಗುಮಾನವನು ತ್ಯಜಿಸಿ, ಶಂಕೆ ಅಂಜಿಕೆ ದೂರವಿರಿಸಿ
ಬನ್ನಿ ಐಕ್ಯದ ದೀಕ್ಷೆ ಧರಿಸಿ, ಬನ್ನಿ ಐಕ್ಯದ ದೀಕ್ಷೆ ಧರಿಸಿ||


ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣ
ಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ



ಕೃಪೆ: ಗೀತ ಗಂಗಾ

ರಾಜ ಮಾರ್ಗ


ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ
ಅದು ಪ್ರತಿಬಂದಿತವೂ ಅಲ್ಲ
ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ
ಗಮ್ಯದ ತನಕ ಸುದೃಢ ಘನ ಗಂಭೀರ
ಆದರೆ ಕ್ರ ಮಿಸರು ಅದರಲಿ ಹಲವರು
ಅವರೋ ತಾವೇ ಕಿರುದಾರಿ ಹುಡುಕುವರು
ಅಲೆದಲೆದು ಬಳಲಿ ಗಮ್ಯವ ತಲುಪದವರು
ಸೋತು ಕೈ ಕೈ ಹಿಸುಕಿ ಮರುಗುವರು
ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ
ಸುವಿಹಾರಿ ಚೇತೋಹಾರಿ  ಘನ ಗಂಭೀರದೆ
ಕಾಯುತಲಿದೆ ಅದು ಒಯ್ಯಲು ತೀರಕೆ
ಸೋತು ಬಳಲಿ ಬರುವರೆಲ್ಲರ ಗಮ್ಯಕೆ

[ಭಾವಸಂಗಮ ಪುಟದಲ್ಲಿ ಸೇರ್ಪಡೆಯಾಗಿದೆ]