Pages

Tuesday, May 31, 2011

ಮೇಲಕ್ಕೇರಿದ ಮೈಲಾರಶರ್ಮ: ಲೇಖಕನ ಪ್ರತಿಕ್ರಿಯೆ:

     ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದಿಸುವೆ. ಚಿಂತನೆ, ಜಿಜ್ಞಾಸೆಗಳಿಗೆ ಅವಕಾಶವಾದ ಲೇಖನ ಸಾರ್ಥಕವೆಂದು ಅನ್ನಿಸಿದೆ. ಪ್ರಾರಂಭದಲ್ಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಪೂರ್ವಾಗ್ರಹ ಪೀಡಿತನಾಗಿ ನನ್ನದೇ ಅಭಿಪ್ರಾಯ ಸರಿಯೆಂದು ವಾದಿಸಲು ಹೋಗುವುದಿಲ್ಲ, ಆದರೆ ನಾನು ಹೊಂದಿರುವ ಅಭಿಪ್ರಾಯ ಸರಿಯಲ್ಲವೆಂದು ನನಗೆ ಮನವರಿಕೆಯಾಗುವವರೆಗೂ ಅದನ್ನು ಬದಲಾಯಿಸಿಕೊಳ್ಳುವ ಮನೋಭಾವ ನನ್ನದಲ್ಲ. ನಡೆದುಕೊಂಡು ಬಂದಿರುವ ನಡವಳಿಕೆಗಳು/ ಸಂಪ್ರದಾಯಗಳು/ ವಸ್ತುಸ್ಥಿತಿಯೊಂದಿಗೆ ರಾಜಿ/ಹೊಂದಾಣಿಕೆ ಮಾಡಿಕೊಳ್ಳುವೆನಷ್ಟೆ. ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯಗಳಿಗೆ ನಾನು ವಿರೋಧಿಯಲ್ಲ. ಅದು ಅವರ ಹಕ್ಕು, ಅದನ್ನು ಗೌರವಿಸುವೆ. ಅಂತಹವರ ಅಭಿಪ್ರಾಯಗಳಿಂದ ನಾನು ನೊಂದುಕೊಳ್ಳುವುದಾಗಲೀ, ಬೇಸರಪಟ್ಟುಕೊಳ್ಳುವುದಾಗಲೀ ಮಾಡುವುದಿಲ್ಲ. ವೈಚಾರಿಕ ಭಿನ್ನತೆಯೂ ಸಹ ಚಿಂತನೆ, ಜಿಜ್ಞಾಸೆಗಳಿಗೆ ಸಹಕಾರಿ. ನನ್ನ ಲ್ಯಾಪ್ ಟಾಪ್‌ನ ದೋಷದಿಂದಾಗಿ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಪ್ರಕಟಗೊಳ್ಳುತ್ತಿರಲಿಲ್ಲ. ಎಲ್ಲರಿಗೂ ಒಟ್ಟಿಗೆ ಪ್ರತಿಕ್ರಿಯಿಸಿದರೆ ದೊಡ್ಡದಾಗುವ ಕಾರಣದಿಂದ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವೆ. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು.
     ಮಿತ್ರ ಶ್ರೀಧರರು ಭಾವನಾತ್ಮಕವಾಗಿ ಪತಿ-ಪತ್ನಿಯರ ಮತ್ತು ಇತರ ಸಂಬಂಧಿಕರ ಭಾವನೆಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ಮಧುರವಾಗಿರಲೇಬೇಕು, ಅದಕ್ಕಾಗಿ ಪತಿ-ಪತ್ನಿಯರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರಿ. ನಿಜ, ಮೃತರಾದ ನಂತರ ಅಂತ್ಯ ಸಂಸ್ಕಾರವಾಗುವವರೆಗೂ ಜಡವಾದ ಶರೀರವನ್ನು ನೋಡಲು, ಕಡೆಯ ಸಲವಾದರೂ ಕಣ್ತುಂಬಿಕೊಳ್ಳಲು ಬಯಸುವುದು ಮಾನವ ಸಹಜ ಗುಣ. ಮೃತರೊಡನೆ ನಾವು ಹೊಂದಿದ್ದ ಆತ್ಮೀಯತೆ ಅನುಸರಿಸಿ ಅವರನ್ನು ದೀರ್ಘಕಾಲದವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ. ಸಾಂಸಾರಿಕ ಜೀವನಕ್ಕೂ, ಮೃತರಾದ ನಂತರದ ಉತ್ತರಕ್ರಿಯೆಗಳಿಗೂ ತಳುಕು ಹಾಕುವುದು ತರವಲ್ಲ. 'ಎಲ್ಲರೂ ದೇಹದಾನ ಮಾಡಲು ತೊಡಗಿದರೆ ಮುಂದೊಂದು ದಿನ ದೇಹ ಪಡೆಯಲು ಆಸ್ಪತ್ರೆಯವರೂ ಮುಂದೆ ಬರಲಾರರು' ಎಂಬ ಮಾತಿಗೆ ನಾನು ಪ್ರತಿಕ್ರಿಯಿಸುವುದೇನೆಂದರೆ ಅಂತಹ ಸ್ಥಿತಿ ಬರಲಿ ಎಂದು. ಅಗತ್ಯವಿರುವ ವಸ್ತುಗಳನ್ನು ಕೊಟ್ಟರೆ ಅದು ದಾನ, ಅದು ಅಗತ್ಯ. ಒಂದು ವೇಳೆ ಅಂತಹ ಅಗತ್ಯವಿಲ್ಲದಿದ್ದರೆ ದೇಹವನ್ನು ಸುಡುವುದು ಒಳ್ಳೆಯ ಕೆಲಸ. ಶರೀರದ ಮಾರಾಟ ಒಂದು ದಂಧೆಯಾದರೂ, ನೆಗಡಿಯೆಂದು ಮೂಗನ್ನೇ ಕತ್ತರಿಸುವುದಿಲ್ಲವಲ್ಲವೇ? ಬದುಕಿರುವಾಗಲೇ ತಮ್ಮ ಆತ್ಮೀಯರಿಗಾಗಿ ತಮ್ಮ ಒಂದು ಕಿಡ್ನಿಯನ್ನು ಕೊಟ್ಟ ಪುಣ್ಯಾತ್ಮರು ಇರುವ ಭೂಮಿಯಿದು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ, ನರಕಯಾತನೆ ಪಡುತ್ತಿರುವವರನ್ನು ನೋಡಿದವರಿಗೆ, ಸತ್ತ ಮೇಲಾದರೂ ನಮ್ಮ ಶರೀರದ ಕಿಡ್ನಿ ಅವರ ಬದುಕಿಗೆ ಬೆಳಕಾಗುವುದಾದರೆ ಸಾರ್ಥಕವೆಂದು ಅನ್ನಿಸುವುದಿಲ್ಲವೇ? ಅನಾಥರ, ಚಿಕಿತ್ಸೆಗೆ ಬಂದವರ ಕಿಡ್ನಿಗಳನ್ನು ಚಿಕಿತ್ಸೆಯ ನೆಪದಲ್ಲಿ ಕಳ್ಳತನದಿಂದ ಶಸ್ತ್ರಚಿಕಿತ್ಸೆ ಮಾಡಿ ಅಪಹರಿಸುವವರ ಕುಕೃತ್ಯಕ್ಕೆ ಸಹ ಇಂತಹ ದೇಹದಾನದಿಂದ ಕಡಿವಾಣ ಬೀಳುವುದು. ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಆದರೂ ಸಾಧಿಸಿಲ್ಲ. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ? 'ಶರೀರದಾನ ಮಾಡಿದರೆ ನಾವು ಜಡವಸ್ತುವಿನಂತೆ, ನಾವು ಭಾವನೆಗಳಿಲ್ಲದವರು' ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಸುಟ್ಟರೆ ಪೂರ್ಣ ಶರೀರ ನಾಶಗೊಳ್ಳುತ್ತದೆ. ದಾನ ಮಾಡಿದರೆ ಕನಿಷ್ಠ ಪಕ್ಷ ಮೃತರ ಕೆಲವು ಅಂಗಗಳಾದರೂ - ಕಿಡ್ನಿ, ಕಣ್ಣು, ಇತ್ಯಾದಿ - ಬೇರೆಯವರ ಶರೀರಗಳಲ್ಲಿ ಬದುಕಿರುತ್ತವೆ, ಅದರಿಂದ ಅವರುಗಳ ಬಾಳೂ ಬೆಳಕಾಗಿದೆ ಎಂಬುದನ್ನು ಜ್ಞಾಪಿಸಿಕೊಂಡರೆ ಧನ್ಯತೆಯ ಭಾವನೆ ಮೂಡಬಹುದು. ದೇಹದಾನ ಮಾಡಬಯಸುವವರು ಮತ್ತು ಸಹಕರಿಸುವ ಕುಟುಂಬದವರಿಗೆ ಸಹ ದೇಹ ಸುಡುವವರಿಗೆ/ಹೂಳೂವವರಿಗೆ ಭಾವನೆಗಳು, ಕಳಕಳಿಯಿಲ್ಲವೆಂದು ಅನ್ನಿಸಬಹುದಲ್ಲವೇ?
     'ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ. ಭಾವನಾರಹಿತ ಜೀವನವು ಬದುಕೇ ಅಲ್ಲ. ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ?' ಎಂಬ ಶ್ರೀಧರರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ದೇಹವನ್ನು ಸುಟ್ಟರೆ ಮಾತ್ರ ಪ್ರೀತಿ, ವಿಶ್ವಾಸಗಳಿವೆ, ದಾನ ಮಾಡಿದರೆ ಇಲ್ಲ ಎಂಬಲ್ಲಿ ಮಾತ್ರ ನಾನು ಭಿನ್ನನೆನಿಸಿಕೊಳ್ಳುವೆ. 'ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ. ಒಂದೆಡೆ ಭಾವನಾರಹಿತರಾದವರು ಇನ್ನೊಂದೆಡೆ ಅತ್ಯುನ್ನತ ಸ್ಥಿತಿ ತಲುಪಿದವರು ಎಂದು ಅನ್ನಿಸಿಕೊಳ್ಳುವುದು ಸಾಧ್ಯವೇ? ಸಾವಿನ ವಿಷಯ ಬಂದಾಗ ಆತ್ಮೀಯರು ಆ ವಿಷಯ ಮಾತನಾಡಲು ಬಯಸುವುದಿಲ್ಲ. ಅಂತಹ ವಿಷಯ ಮಾತನಾಡಬೇಡ ಎಂದು ಬಾಯಿ ಮುಚ್ಚಿಸುವುದು ಸಾಮಾನ್ಯ. ನನ್ನ ಬರಹದ ಬಗ್ಗೆ ಮಿತ್ರ ಶ್ರೀಧರರ ಪ್ರತಿಕ್ರಿಯೆಯೂ ಸಹ ಇದಕ್ಕೆ ಒಂದು ಉದಾಹರಣೆ. ಅಂತಹುದರಲ್ಲಿ ಸಾವಿನ ನಂತರ ದೇಹದಾನ ಮಾಡುವ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಕಷ್ಟ ಮತ್ತು ಸೂಕ್ಷ್ಮವಾದ ವಿಚಾರ. ಭಾವನೆ ಅರ್ಥವಾಗುವಂತೆ ಮತ್ತು ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಹೇಳಬೇಕಾಗುತ್ತದೆ. ಆಗ ದೇಹದಾನ ಮಾಡಿದ ಮೈಲಾರಶರ್ಮರಂತಹವರು ನೆರವಿಗೆ ಬರುತ್ತಾರೆ.
     ಶ್ರೀಯುತ ಜಗದೀಶರು ಉಲ್ಲೇಖಿಸಿದ 'ಶರೀರಮಾತ್ರಮ್ ಖಲುಧರ್ಮಸಾಧನಂ' ಎಂಬ ಉಕ್ತಿಗೆ ನನ್ನ ಸಹಮತವಿದೆ. ಧೃಢ ಮನಸ್ಸು ಮತ್ತು ಶರೀರಗಳಿಂದ ಅದ್ಭುತಗಳನ್ನು ಸಾಧಿಸಬಹುದು. ಆದರೆ ಈ ಮಾತು ಜೀವಂತ ಶರೀರಕ್ಕೆ ಅನ್ವಯಿಸುತ್ತದೆ. ಅವರಂತೆ ನನಗೂ ಸಹ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ವಿಚಾರದಲ್ಲಿ ನಂಬಿಕೆಯಿದೆ. ದೇವನ ಅತ್ಯದ್ಭುತ ನಿರ್ಮಾಣವಾದ  ನವರಸದರಮನೆಯಾದ ಈ ದೇಹ ಪಡೆಯುವಲ್ಲಿ ದೇವನ ಕರುಣೆಯೊಂದಿಗೆ ಜೀವಿಯ ಕರ್ಮಫಲವೂ ಸೇರುತ್ತದೆ. ಇಂತಹ ದೇಹದ ಒಡೆತನವನ್ನು ದೇವನನ್ನು ಹೊರತುಪಡಿಸಿ ಸ್ವತಃ ಜೀವಿಯೂ ಸೇರಿದಂತೆ ಯಾರಾದರೂ ಸಾಧಿಸಲು ಸಾಧ್ಯವೇ ಎಂಬುದೇ 'ತಾಯಿಯ ಸ್ವತ್ತಲ್ಲ, ತಂದೆಯ ಸ್ವತ್ತಲ್ಲ, ಪತ್ನಿಯ ಸ್ವತ್ತಲ್ಲ, ಮಕ್ಕಳ ಸ್ವತ್ತಲ್ಲ' ಎಂಬ ಮೂಢನ ಉದ್ಗಾರದ ಒಳಾರ್ಥ. ಭಗವದ್ಗೀತೆ ಬೋಧಿಸಿದಂತೆ ಪ್ರತಿ ಜೀವಿಯೂ ತನ್ನ ಕರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತಾನೆ. ಎಲ್ಲರೂ ತಾವೇ ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕು. ಮೃತ ಶರೀರವನ್ನು ಸುಡಲಿ, ಬಿಡಲಿ, (ಕೇವಲ ಸುಡುವುದಕ್ಕೆ ಮಾತ್ರವಲ್ಲ, ಸಂಪ್ರದಾಯಕ್ಕನುಸಾರವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಿ, ಬಿಡಲಿ) ಅದು ಜೀವಿಯ ಪುನರ್ಜನ್ಮದ ಮೇಲೆ ಪರಿಣಾಮ ಬೀರಲಾರದು. ಜೀವಿತಾವಧಿಯಲ್ಲಿನ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮವಿರುತ್ತದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿದೆ. ಜಗದೀಶರು ಕೊಟ್ಟ 'ಕೇವಲ ಫೋಟೋದಲ್ಲಿನ ತಂದೆಯ ಚಿತ್ರದ ಕಣ್ಣಿಗೆ ಚುಚ್ಚಿದರೆ ಸಹಿಸುತ್ತಾರೆಯೇ' ಎಂಬ ಉದಾಹರಣೆ ಈ ವಿಷಯಕ್ಕೆ ಅಷ್ಟೊಂದು ಸೂಕ್ತವೆನಿಸದು. ಮೃತ ದೇಹಕ್ಕೆ ನೋವಾಗುತ್ತದೆ ಅಥವಾ ಸಂಬಂಧಿಕರ ಮನಸ್ಸಿಗೆ ನೋವಾಗುತ್ತದೆ ಅದನ್ನು ಸುಡದೆ/ಹೂಳದೆ ಇರುತ್ತಾರೆಯೇ? ಅವರಂತೆ ನಾನೂ ಸಹ ಯಾರ ಮನಸ್ಸನ್ನೂ ನೋಯಿಸಲು ಉದ್ದೇಶಿಸಿಲ್ಲ. ನನ್ನ ಅಭಿಪ್ರಾಯವನ್ನು ಎಲ್ಲರೂ - ನನ್ನ ಕುಟುಂಬದ ಸದಸ್ಯರುಗಳೂ ಸೇರಿ - ಒಪ್ಪಬೇಕೆಂದು ನನ್ನ ಆಗ್ರಹವಿಲ್ಲ. ಗಲ್ಲು ಶಿಕ್ಷೆಗೆ ಒಳಗಾದವರನ್ನೂ ಅವರ ಅಂತಿಮ ಇಚ್ಛೆ ಏನೆಂದು ಕೇಳಿ ಸಾಧ್ಯವಿದ್ದರೆ ನೆರವೇರಿಸುತ್ತಾರೆ. ಅದೇ ರೀತಿ ದೇಹದಾನ ಮಾಡಬಯಸುವವರು ಮೃತರಾದ ನಂತರ ಅವರ ಇಚ್ಛೆಯನ್ನು ನೆರವೇರಿಸುವುದು, ಬಿಡುವುದು ಸಂಬಂಧಿಕರಿಗೆ ಸೇರಿದ್ದು. ಕೆಲವು ಜಾತಿಗಳಲ್ಲಿ ಸತ್ತವರಿಗೆ ಇಷ್ಟವೆಂದು ಮಾಂಸ, ಮದ್ಯ, ಸಿಗರೇಟು, ಇತ್ಯಾದಿಗಳನ್ನೂ ಎಡೆ ಇಡುವುದನ್ನು ಕಂಡಿದ್ದೇನೆ. ಅಂತಹುದರಲ್ಲಿ ದೇಹದಾನ ಮಾಡಬಯಸಿದಲ್ಲಿ ಆ ಆಸೆಯನ್ನು ನೆರವೇರಿಸಲು ಸಂಬಂಧಿಕರು ಮನಸ್ಸು ಮಾಡಬಹುದು. ಇದನ್ನು ಬಾಲಿಶ ಹೇಳಿಕೆ ಎಂದು ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ.
     ಮಿತ್ರ ಮಹೇಶ ಪ್ರಸಾದ ನೀರ್ಕಜೆಯವರ ಅಭಿಪ್ರಾಯಗಳು ನನ್ನ ಬರಹಕ್ಕೆ ಪೂರಕವಾಗಿದೆ. ನಡೆದ ಚರ್ಚೆಗಳು ಉಪಯುಕ್ತವಾಗಿದೆ. ಸಂಪದದಲ್ಲಿ ಮಿತ್ರ ಗಣೇಶರು ಬರೆದ ದೇಹದಾನ ಕುರಿತ ಲೇಖನ ಸಹ ಇದಕ್ಕೆ ಪೂರಕವಾಗಿದ್ದು ಅದನ್ನೂ ಓದಲು ವಿನಂತಿಸುವೆ. ಶ್ರೀಯುತ ಜಗದೀಶರೇ ಉಲ್ಲೇಖಿಸಿದ ಮುತ್ತಿನಂತಹ ಮಾತುಗಳಿಂದ ಮುಗಿಸುವೆ: The most difficult requirement of becoming knowledgable is that you must give up certainty!”  ಪೂರ್ವಾಗ್ರಹವಿಲ್ಲದೆ ನಮ್ಮದೇ ಸರಿಯೆಂಬ ವಿಚಾರಕ್ಕೆ ಅಂಟಿಕೊಳ್ಳದೆ ವಿಚಾರ ಮಾಡೋಣ, ವಿಮರ್ಶಿಸೋಣ, ನಿಜವ ತಿಳಿಯೋಣ!
ನಮಸ್ಕಾರಗಳು.
-ಕ.ವೆಂ.ನಾಗರಾಜ್.

ದೇಹದಾನ - ಕೆಲವು ಮಾಹಿತಿಗಳು


Valves from the heart of a brain-dead 40-day- old infant have saved two other children from premature death in a hospital here. The infant’s eyes were also donated for cornea grafting.
[ಚಿತ್ರ ಕೃಪೆ: ಬಿ.ಬಿ.ಸಿ]


A doctor in India is steadying his nerves to dissect his father's embalmed body to help anatomy students' research at a medical college.
**************
'ಸಂಪದ' ತಾಣದಲ್ಲಿ ನನ್ನ ಲೇಖನಕ್ಕೆ ಶ್ರೀ ಗಣೇಶರು ನೀಡಿದ ಪ್ರತಿಕ್ರಿಯೆ ಹೀಗಿದೆ:
ಕವಿನಾಗರಾಜರೆ,
ನೂರಾರು ವರ್ಷ ಆರೋಗ್ಯವಂತರಾಗಿ ಬಾಳಿ ಎಂದು ಮೊದಲಿಗೆ ಹಾರೈಸುವೆ. ನಿಮ್ಮ ಅಂಗಾಂಗ ದಾನ,ದೇಹದಾನದ ನಿರ್ಧಾರಕ್ಕೆ ಜೈ. ಕೊನೆಯಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ-"...ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು." ನಿಮ್ಮ ಮುಕ್ತಕಗಳು ನಾಗರತ್ನಮ್ಮನವರು ಹೇಳಿದಂತೆ ಅನರ್ಘ್ಯ ರತ್ನಗಳು.
ಮೈಲಾರ ಶರ್ಮ ಹಾಗೂ ಅವರ ಕುಟುಂಬದವರು ಇತರರಿಗೆ ಆದರ್ಶಪ್ರಾಯರು.
-ಗಣೇಶ.
****************
'ದೇಹದಾನ' ಕುರಿತು ಮಿತ್ರ ಶ್ರೀ ಗಣೇಶರು 'ಸಂಪದ'ದಲ್ಲಿ ಬರೆದ ಲೇಖನವನ್ನು ಅವರ ಅನುಮತಿ ನಿರೀಕ್ಷಿಸಿ ಇಲ್ಲಿ ಪ್ರತಿ ಮಾಡಿರುವೆ:
'ದೇಹದಾನ'
     "ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "ಅಮ್ಮನ ದೇಹದಾನ ಮೆಡಿಕಲ್ ಕಾಲೇಜ್‌ಗೆ ಮಾಡುವಂತೆ ಡಾಕ್ಟ್ರಿಗೆ ತಿಳಿಸು" ಎಂದರು. ನನಗೆ ಆಗ ಏನು ಹೇಳುವುದು, ಏನು ಮಾಡುವುದು ತೋಚಲೇ ಇಲ್ಲ. " ಈ ದೇಹದಲ್ಲಿ ಏನಿದೆ? ಅವಳು ನಮ್ಮೆಲ್ಲರ ಹೃದಯದಲ್ಲಿರುವಳು. ನಾಳೆ ಹೇಗೂ ಸುಡುವರು,ಅದರ ಬದಲು..."ಎಂದೆಲ್ಲಾ ತಮ್ಮ ದುಃಖ ನುಂಗಿ ಹೇಳುತ್ತಲೇ ಇದ್ದರು. ಸಿನೆಮಾ ನಟ ಲೋಕೇಶ್‌ರ ನಿಧನಾನಂತರ ಅವರ ದೇಹವನ್ನು ಮೆಡಿಕಲ್ ಕಾಲೇಜ್‌ಗೆ ದಾನ ನೀಡಿದ್ದು ಗೊತ್ತಿತ್ತು. http://www.chitraloka.com/flash-back/137-memories-tragedies/1754-body-donated-to-hospital.html  ಮನಸ್ಸನ್ನು ಎಷ್ಟು ಗಟ್ಟಿ ಮಾಡಿದರೂ ನನ್ನಿಂದ ಒಪ್ಪಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಅಭಿಪ್ರಾಯ ಕೇಳಿ ಬರುವೆ ಎಂದು ತಂದೆಯ ಬಳಿ ಹೇಳಿ ಬಂದೆ. ಎಲ್ಲರೂ ಬೇಡ ಎಂದು ಒತ್ತಾಯಿಸಿದ್ದರಿಂದ ಅಪ್ಪ ಸುಮ್ಮನಾದರು.
     ನಂತರವೂ ಪ್ರತಿದಿನ ನಮ್ಮಲ್ಲಿ ನಡೆಯುವ ಕ್ರಿಯಾಕರ್ಮಗಳ ಬಗ್ಗೆ ತಂದೆಯವರು ವಿರೋಧಿಸುತ್ತಲೇ ಇದ್ದರು. "ಬದುಕಿರುವಾಗ ನೀನು ಚೆನ್ನಾಗಿ ನೋಡಿರುವೆ. ಅದು ಮುಖ್ಯ. ಇದೆಲ್ಲಾ ವ್ಯರ್ಥ..." ಎಂದು ಹೇಳುತ್ತಿದ್ದರು.
ಒಂದೆರಡು ತಿಂಗಳ ನಂತರ ತಂದೆಯವರು ಒಂದು ಅರ್ಜಿ ತಂದು ಸಹಿ ಹಾಕಲು ಹೇಳಿದರು. ನೋಡಿದರೆ ಅವರ ದೇಹದಾನದ ಅರ್ಜಿ. ಒಬ್ಬ ಡಾಕ್ಟರ್ ಮಗ ತನ್ನ ತಂದೆಯ ದೇಹವನ್ನೇ ಬಗೆದು ಮಕ್ಕಳಿಗೆ ಪಾಠ ಮಾಡಿದರೆ, http://www.bbc.co.uk/news/world-south-asia-11710741 ನಾನು ದೇಹದಾನದ ಅರ್ಜಿಗೇ ಸಹಿ ಹಾಕಲು ಹಿಂದೇಟು ಹಾಕಿದೆ.
     ಆರೋಗ್ಯವಂತರಾಗೇ ಇದ್ದ ನನ್ನ ತಂದೆಯವರು ಎಪ್ರಿಲ್ ೨೫ರಂದು ನಮ್ಮಲ್ಲಿ (ಕೊನೆಯ) ಊಟಮಾಡಿ, ತಂಗಿ ಮನೆಗೆ ಹೋದವರು, ಎಪ್ರಿಲ್ ೨೯ರಂದು ಮನೆಯಲ್ಲಿ ಮಲಗಿದ್ದಂತೆ ತೀರಿದರು. ದುಃಖದಲ್ಲಿದ್ದವನಿಗೆ ದೇಹದಾನವಾಗಲಿ, ಅಂಗಾಂಗ ದಾನವಾಗಲೀ ನೆನಪಾಗಲೇ ಇಲ್ಲ. ತೀರಿಹೋದ ೪೧ ದಿನದ ಮಗುವಿನ ಹೃದಯದ ಕವಾಟ ದಾನದಿಂದಾಗಿ ೨ ಮಕ್ಕಳಿಗೆ ಜೀವದಾನ ಎಂಬ ಪತ್ರಿಕಾ ವರದಿ ಇದೇ ೨೨ನೇ ತಾರೀಕಿನಂದು ಓದಿದೆ. http://www.manipalworldnews.com/news_local.asp?id=3249 ಕವಾಟ ದಾನದ ಬಗ್ಗೆ ಮಗುವಿನ ತಂದೆತಾಯಿಯ ಮನವೊಲಿಸಿದ Mohan (Multi Organ Harvesting Aid Network) foundation ಪ್ರಯತ್ನ ನಿಜಕ್ಕೂ ಪ್ರಶಂಸನೀಯ. http://www.mohanfoundation.org/  ಆದರ್ಶ ಅಧ್ಯಾಪಕರಾಗಿದ್ದ ತಂದೆಯವರು ಸಾವಲ್ಲೂ ಆದರ್ಶರಾಗಲು ನಾನು ಬಿಡಲಿಲ್ಲ..
-ಗಣೇಶ
*******
ಮಿತ್ರ ಗಣೇಶರೇ, ನಿಮ್ಮ ಪ್ರಾಮಾಣಿಕ ಅನಿಸಿಕೆಗೆ ವಂದಿಸುವೆ.

ವೇದ,ಉಪನಿಷತ್ತು, ಅರಣ್ಯಕ, ಪುರಾಣ

ನಮ್ಮ ದೇಶದಲ್ಲಿ ವೇದಗಳ ಜೊತೆ ಜೊತೆಗೇ ಉಪನಿಷತ್ತುಗಳ, ಅರಣ್ಯಕಗಳ, ಪುರಾಣಗಳ ಹಾಗೂ ಇನ್ನಿತರ ಗ್ರಂಥಗಳ ಅಧ್ಯಯನವು ನಡೆದು ಬಂದಿದೆ. ಎಲ್ಲದರಲ್ಲೂ ವೇದದ ಹಲವು ಅಂಶಗಳು ಇರುವುದು ಸುಳ್ಳಲ್ಲ . ಇವೆಲ್ಲವೂ ವೇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಗ್ರಂಥಗಳೇನಲ್ಲ[ಇದು ನನ್ನ ತಿಳುವಳಿಕೆ] ನಮ್ಮ ದೇಶದಲ್ಲಿ ಸಾವಿರಾರು ಋಷಿಗಳು ಜನ್ಮತಾಳಿ ಅವರವರ ತಪಸ್ಸಿನಿಂದ ಅವರು ಕಂಡುಕೊಂಡ ಸತ್ಯವನ್ನು ನಮಗೆಲ್ಲಾ ಅವರವರ ರೀತಿಯಲ್ಲಿ ತಿಳಿಸಿದ್ದಾರೆ. ಇದು ನಮ್ಮ ಭಾಗ್ಯವೆಂಬುದು ನನ್ನ ಅಭಿಮತ.


ಯಥಾ ನಧ್ಯ: ಸ್ಯಂದಮಾನಾ ಸಮುದ್ರೇ
ಅಸ್ತಂ ಗಚ್ಚತಿ ನಾಮರೂಪೇ ವಿಹಾಯ
ತಥಾ ವಿದ್ವಾನ್ ನಾಮರೂಪಾತ್ ವಿಮುಕ್ತ:
ಪರಾತ್ಪರಂ ಪುರುಷಮುಪೈತಿ ದಿವ್ಯಂ
[ಸಂಸ್ಕೃತ ಕಲಿತಿಲ್ಲವಾದ್ದರಿಂದ ಮೇಲಿನ ಸೂಕ್ತಿಯಲ್ಲಿ ವ್ಯಾಕರಣ ದೋಷ ವಿದ್ದರೆ ಪಂಡಿತರು ದಯಮಾಡಿ ತಿದ್ದಿ]


"ಹರಿಯುತ್ತಾ ಹರಿಯುತ್ತಾ ಹೇಗೆ ನದಿಗಳು ತಮ್ಮ ನಾಮರೂಪವನ್ನು ಕಳೆದುಕೊಂಡು ಸಮುದ್ರದಲ್ಲಿ ಒಂದಾಗುತ್ತವೋ ಹಾಗೆ ಜ್ಞಾನಿಗಳು ನಾಮರೂಪವನ್ನು ಬಿಟ್ಟು ದಿವ್ಯ ಪರಾತ್ಪರ ಪುರುಷನನ್ನು ಪಡೆಯುತ್ತಾರೆ"....ಈ ಚಿಂತನೆ ನಮಗೆ ಹಿತವೆನಿಸುತ್ತದೆಯಲ್ಲವೇ? ಆದರೆ ವೇದಾಧ್ಯಾಯೀ      ಶ್ರೀ ಸುಧಾಕರಶರ್ಮರ ಚಿಂತನಾ ಲಹರಿಯೇ ಬೇರೆ. ವೇದಸುಧೆ ಬಳಗದ ಶ್ರೀ ವಿ.ಆರ್.ಭಟ್ಟರು ಕೇಳಿರುವ ಪ್ರಶ್ನೆಗೆ ಇಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರಿಸಿದ್ದಾರೆ.ವೇದಸುಧೆಯ ಅಭಿಮಾನಿಗಳೆಲ್ಲರೂ ಈ ಚರ್ಚೆಯಲ್ಲಿ ದಯಮಾಡಿ ಪಾಲ್ಗೊಳ್ಳಿ. ಇಲ್ಲಿ ಯಾರದೋ ವಾದ ಗೆಲ್ಲಬೇಕೆಂದಿಲ್ಲ. ಆದರೆ ಆರೋಗ್ಯಕರ ಚರ್ಚೆನಡೆದು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. ಅಂತಹ ಪ್ರತಿಕ್ರಿಯೆಗಳನ್ನು ವೇದಸುಧೆಯು ಪ್ರಕಟಿಸುವುದಿಲ್ಲ.
ವಿ.ಸೂ:- ಶ್ರೀ ಸುಧಾಕರಶರ್ಮರು ತಮ್ಮ   ಅನಾರೋಗ್ಯದ ಕಾರಣ    ಹೆಚ್ಚಾಗಿ ಅಂತರ್ಜಾಲತಾಣವನ್ನು ಇಣುಕುತ್ತಿಲ್ಲ. ಆದರೂ  ನಾವು ಚರ್ಚೆ ಮುಂದುವರೆಸೋಣ. ಅವರ ಆರೋಗ್ಯ ಸ್ಥಿತಿ ಉತ್ತಮಗೊಂಡಾಗ ಶರ್ಮರು ತಮ್ಮ ಉತ್ತರವನ್ನು ನೀಡುತ್ತಾರೆ.
-----------------------------------------------------
ಶ್ರೀ ವಿ.ಆರ್.ಭಟ್ಟರ ಪ್ರಶ್ನೆ:
ವೇದವನ್ನು ಸಂಕಲಿಸಿದ ಮಹರ್ಷಿ ವ್ಯಾಸರೇ ಭಾಗವತ ಪುರಾಣವನ್ನೂ ಬರೆದರು. ಇಲ್ಲಿ ನೀವು ಹೇಳುವುದು ವೇದದ ಉಲ್ಲೇಖ. ಕೇವಲ ವೇದವೇ ಸತ್ಯ ಮಿಕ್ಕಿದ್ದೆಲ್ಲಾ ಸುಳ್ಳು ಎಂದು ಯಾವುದರಿಂದ ಪ್ರತಿಪಾದಿಸುತ್ತೀರಿ ಸ್ವಾಮೀ? ಯಾಕೆಂದರೆ ವೇದದ ಕರ್ತೃ ಯಾರೆಂಬುದು ಹಲವು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆಯಲ್ಲಾ!
ಶ್ರೀ ಸುಧಾಕರಶರ್ಮರ ಉತ್ತರ:
ಈ ಪ್ರಶ್ನೆ ಮೇಲಿಂದ ಮೇಲೆ ಬರಬೇಕು. ವಿಮರ್ಶೆ ಮಾಡಿ. ಸತ್ಯವಾದರೆ ಸ್ವೀಕರಿಸಿ, ಸುಳ್ಳಾದರೆ ಹೇಗೆ ಎಂಬುದನ್ನು ಸಾಧಾರವಾಗಿ ತಿಳಿಸಿ.
-ವೇದಗಳು ಸಕಲ ಮಾನವರಿಗಾಗಿದೆ.
-ವೇದಗಳು ಸಕಲ ಮಾನವರ ಹಿತವನ್ನು ಬಯಸುತ್ತದೆ.
-ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಜ್ಞಾನಭಂಡಾರ. ಮಿಕ್ಕೆಲ್ಲ ಜ್ಞಾನಭಂಡಾರಗಳ ಮೇಲೂ ಇದರ ಪ್ರಭಾವವಿದೆ.
-ವೇದಗಳಲ್ಲಿ ತದ್ವಿರುದ್ಧವಾದ ಸಿದ್ಧಾಂತಗಳಿಲ್ಲ.
-ವೇದಗಳಲ್ಲಿ ಕಲಬೆರಕೆಯಿಲ್ಲ. ಕಲಬೆರಕೆಯಾಗದಂತಹ ವ್ಯವಸ್ಥೆಯಿದೆ.
-ವೇದಗಳು ಸೃಷ್ಟಿನಿಯಮಕ್ಕೆ ಅನುಗುಣವಾದ Physical Laws, Laws of Nature, ಭೌತವಿಜ್ಞಾನ ಮೋದಲಾದವಿಗಳ ನಿಯಮಗಳಿಗೆ ವಿರುದ್ಧವಾದ ಅಪದ್ಧಗಳನ್ನು ಆಡುವುದಿಲ್ಲ.
-ಅರ್ಥವನ್ನು ಲೆಕ್ಕಿಸದೆ, ಕೆಲವೊಮ್ಮೆ ಇಲ್ಲವೆಂದೇ ಹೇಳುತ್ತಾ, ತಾವಾಡಿದ್ದೇ ವೇದ ಎಂದೂ, ಬಡಬಡಿಸುವ ಎಲ್ಲವೂ ವೇದವಲ್ಲ! ಅಲ್ಲೆಲ್ಲಾ ಸಮಾನ್ಯಜ್ಞಾನಕ್ಕೆ. ತರ್ಕಕ್ಕೆ ವಿರುದ್ಧವಾದ ಅಂಶಗಳು ಬೇಕಾದಷ್ಟಿವೆ. ಅವನ್ನು ಸಮರ್ಥಿಸುತ್ತಿಲ್ಲ.
-ವೇದಗಳು ತರ್ಕಬದ್ಧವಾಗಿವೆ.
-ವೇದಗಳು ಸಾರ್ವಕಾಲಿಕವಾದ್ದರಿಂದ ತಿದ್ದುಪಡಿಯ ಅವಶ್ಯಕತೆಯಿಲ್ಲ.
-ವೇದಗಳಲ್ಲಿ ಕೇವಲ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ಸಂಹಿತಭಾಗ (ಸುಮಾರು 20,379 ಮಂತ್ರಗಳಿವೆ). ರೂಢಿಯಲ್ಲಿ ಬ್ರಾಹ್ಮಣಗ್ರಂಥಗಳನ್ನೂ, ಆರಣ್ಯಕಗಳನ್ನೂ, ಉಪನಿಷತ್ತುಗಳನ್ನೂ ಇನ್ನೂ ಯಾವ್ಯಾವುದೋ ಗ್ರಂಥಗಳನ್ನು ವೇದವೆಂದು ಗುರುತಿಸುವ ಸಂಪ್ರದಾಯಗಳು ಬಂದಿವೆ. ಅವನ್ನು ಇಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಸಧ್ಯಕ್ಕೆ ಇಷ್ಟು ಸಾಕು. ಇಷ್ಟೂ ಗುಣಗಳು ಇಂದಿನ ಯಾವುದೇ ಜ್ಞಾನಭಂಡಾರದಲ್ಲಿ ಇಲ್ಲವಾದ್ದರಿಂದ ವೇದಗಳು ಉತ್ತಮ.