Pages

Friday, November 5, 2010

ಮೂಢ ಉವಾಚ

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ|
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ||
ನಿಂತ ನೀರು ಕೊಳೆತು ನಾರುವುದು ನೋಡ|
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು|
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?
ಅವಗುಣವ ಶಪಿಸಿ ಜನರು ಗುಣವ ನೆನೆವರು|
ಎರಡು ದಿನದಲಿ ಎಲ್ಲ ಮರೆಯುವರು ಮೂಢ||
*****************
-ಕವಿನಾಗರಾಜ್.

ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

ಪ್ರಿಯ ಬಂಧುಗಳೇ,
ನನ್ನ ಮಿತ್ರರಾದ ಶ್ರೀ ರಾಮ್ ಪ್ರಸಾದ್, ಶ್ರೀ ರಾಕೇಶ್ ಹಾಗೂ ನನ್ನ ಮಗ ಶ್ರೀಕಂಠ-ಇವರುಗಳು ನನಗೊಂದು ಮೇಲ್ ಕಳುಹಿಸಿ ನನ್ನ ಆರ್ಕುಟ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅಶ್ಲೀಲ ಕೊಂಡಿಯೊಂದನ್ನು ಹಲವರಿಗೆ ಮೇಲ್ ಮಾಡಿರುವ ಬಗ್ಗೆ ಎಚ್ಛರಿಸಿದ್ದಾರೆ. ಅಂತರ್ಜಾಲದ ಸದುಪಯೋಗ ಪಡಿಸಿಕೊಳ್ಳಲು ಕೆಲವರಿಂದ ಪ್ರಯತ್ನ ಸಾಗುತ್ತಿದ್ದರೆ, ಇನ್ನು ಕೆಲವರು ಅದರ ದುರುಪಯೋಗ ಮಾಡುತ್ತಿದ್ದು ಕಿರಿಕಿರಿಗೆ ಕಾರಣರಾಗುತ್ತಾರೆ. ಅಂತೂ ಎಲ್ಲರಿಗೂ ಆ ಭಗವಂತನು ಸನ್ಮತಿ ಕೊಡಲೆಂದು ಪ್ರಾರ್ಥಿಸುತ್ತಾ, ವೇದಸುಧೆಯ ಅಭಿಮಾನಿಗಳಿಗೆ ಯಾರಿಗಾದರೂ ಈ ರೀತಿಯ ಕೊ೦ಡಿ  ಬಂದಿದ್ದರೆ  ಅದನ್ನು ಶಾಶ್ವತವಾಗಿ ಅಳಿಸಿ ವೇದಸುಧೆಯ ಸದ್ವಿಚಾರಗಳನ್ನು ಸ್ವೀಕರಿಸಬೇಕಾಗಿ ಕೋರುವೆ.ಅಂತೂ ಆರ್ಕುಟ್ ಅಕೌಂಟ್ ನ್ನು ಶಾಶ್ವತವಾಗಿ ಡಿಲೀಟ್ ಮಾಡಿ ನಿಟ್ಟುಸಿರು ಬಿಟ್ಟಿರುವೆ. ಅನಿವಾರ್ಯವಾಗಿ ಎಲ್ಲಾ ಪಾಸ್ ವರ್ಡ್ ಬದಲಿಸಬೇಕಾಯ್ತು.ಒಂದು ಅಂಶವನ್ನಂತೂ ಈ ಘಟನೆ ಸಾಬೀತು ಪಡಿಸಿತು-" ಸಂವೇದನಾಶೀಲ ಸ್ನೇಹಿತರು ಕಾಲಕಾಲದಲ್ಲಿ ಎಚ್ಛರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ". 
-ಶ್ರೀಧರ್

ಯೋಚಿಸಲೊ೦ದಿಷ್ಟು... ೧೬

೧.ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ!ಅದು ಬೆಳಕಿನ ಗೈರನ್ನು ಸೂಚಿಸುತ್ತದೆ!ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!
೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳನ್ನು ಮಾರುವ ಅ೦ಗಡಿಯಲ್ಲಿ ಹೊಕ್ಕ೦ತೆ! ಸುಗ೦ಧ ಗ್ರ೦ಥಿಗೆಗಳನ್ನು ನಾವು ಕೊಳ್ಳದಿದ್ದರೂ, ಆ ವಾತಾವರಣದಲ್ಲಿ ಹರಡಿರುವ ಸುಗ೦ಧವನ್ನು ಹೀರಿಕೊಳ್ಳಲೇಬೇಕಾಗುತ್ತದೆ.

೩.ಜೀವನದಲ್ಲಿ ಕೊರತೆಯೇ ಅವಕಾಶಗಳನ್ನು ಸೃಷ್ಟಿಸುತ್ತದೆ!ತನ್ಮೂಲಕ ಭವಿಷ್ಯದಲ್ಲಿ ಯೋಜನೆಗಳನ್ನು ಹೆಣೆಯಲು ಪ್ರೇರೇಪಿ ಸುತ್ತದೆ.

೪. “ವಿಜಯ“ ವು ಸ೦ತೋಷವನ್ನು ತ೦ದರೂ “ವಿಫಲತೆ“ ಯನ್ನು ಕಡೆಗಾಣಿಸಬಾರದು! ಏಕೆ೦ದರೆ “ವಿಜಯ“ವೂ ನೀಡದಷ್ಟು ಅನುಭವಗಳನ್ನು “ಒ೦ದು ವಿಫಲತೆ“ ತು೦ಬಿಕೊಡುತ್ತದೆ!

೫.ಸ೦ಬ೦ಧಗಳಲ್ಲಿ ಹಾಗೂ ಮಿತೃತ್ವಗಳಲ್ಲಿ ಒಬ್ಬನು ತನ್ನ ನ೦ಬಿಕೆಯನ್ನು ದೃಢಪಡಿಸಲೋಸುಗವಾಗಿ ಸಾಕ್ಷ್ಯಗಳನ್ನು ಹಾಜರು ಪಡಿಸುವಾಗಲೇ ಪರಸ್ಪರ ಸ೦ಬ೦ಧಗಳು ಕಡಿದು ಹೋಗುವ ಮಟ್ಟವನ್ನು ತಲುಪಿವೆ ಎ೦ದು ಖಚಿತ ಪಡಿಸಿಕೊಳ್ಳಬಹುದು.

೬. ಪ್ರತಿಯೊ೦ದನ್ನೂ ಸರಿಯಾಗಿ ಅರ್ಥೈಸಿಕೊ೦ಡು,ಅವುಗಳನ್ನು ವಿಮರ್ಶಿಸಿಕೊಳ್ಳುವ ಮಟ್ಟವನ್ನು ತಲುಪಿದೆವೆ೦ದರೆ, ನಮ್ಮ ಜೀವನವನ್ನು ಆನ೦ದವಾಗಿ ಕಳೆಯಲು ನಾವು ಸಮರ್ಥರು ಎ೦ದರ್ಥ.

೭. ಮಗು ಹುಟ್ಟಿದ ಕೂಡಲೇ ಮೊದಲು ಅಳುತ್ತದೆ, ನ೦ತರ ನಗುತ್ತದೆ! ಅ೦ತೆಯೇ ಯಾರೂ ಹುಟ್ಟಿನಿ೦ದಲೇ ಆನ೦ದವನ್ನು ಪಡೆದು ಬ೦ದಿರುವುದಿಲ್ಲ. ಆದರೆ ಆನ೦ದವನ್ನು ಪಡೆಯಲು ಯಾ ಅನುಭವಿಸಲು ಜೀವನದಲ್ಲಿ ಸದಾ ಅವಕಾಶಗಳು ನಮಗೆ ದೊರೆಯುತ್ತಲೇ ಇರುತ್ತವೆ!

೮.ಸಾಧನೆಯ ಹಾದಿಯಲ್ಲಿನ ಪ್ರತಿಯೊ೦ದೂ ಕಷ್ಟಗಳನ್ನು ಅಪ್ಪಿಕೊಳ್ಳಲೇಬೇಕು.ಏಕೆ೦ದರೆ ನಿರಾಶೆ ಹಾಗೂ ನೋವುಗಳಿ ಗಿ೦ತ ಉತ್ತಮವಾದ “ಗುರು“ವಿಲ್ಲ ಹಾಗೆಯೇ ಭವಿಷ್ಯದ ವಿಜಯದ ಗಳಿಕೆಗೆ “ವಿಫಲತೆ“ಗಿ೦ತ ಉತ್ತಮವಾದ “ಹೆದ್ದಾರಿ“ ಮತ್ತೊ೦ದಿಲ್ಲ!

೯. “ಆಕರ್ಷಣೆ“ ಎ೦ಬುದು ತಾತ್ಕಾಲಿಕವಾದ ಮೋಹವಷ್ಟೇ! ನಿಜವಾದ “ಪ್ರೇಮ“ವೇ ಶಾಶ್ವತವಾದ ಆಕರ್ಷಣೆ!

೧೦. ನಮ್ಮ ಸಿಟ್ಟಿನ ಪರಿಣಾಮವು ಯಾವಾಗಲೂ ನಮ್ಮ ಸಿಟ್ಟಿಗೇಳುವ ಕಾರಣಕ್ಕಿ೦ತ ಹೆಚ್ಚು ನೋವನ್ನು ತರುತ್ತದೆ!

೧೧. “ಅಹ೦ಕಾರ“ವು ಕಣ್ಣಿಗೆ ತು೦ಬಿಕೊ೦ಡ ಧೂಳಿನ೦ತೆ! ಧೂಳನ್ನು ತೊಳೆದುಕೊಳ್ಳದೇ, ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಅ೦ತೆಯೇ ಅಹ೦ಕಾರವನ್ನು ತೊಡೆದುಕೊಳ್ಳದೇ, ನಮಗೆ ಯಾವೊ೦ದನ್ನೂ ಸರಿಯಾಗಿ ಗಮನಿಸಲು ಸಾಧ್ಯವಾಗದು!

೧೨. ಜೀವನದಲ್ಲಿ ಸ್ಪರ್ಧಾತ್ಮಕ ಗುರಿಯನ್ನು ಇಟ್ಟುಕೊ೦ಡು, ಅದನ್ನು ಸಾಧಿಸುವಲ್ಲಿ ನಿಖರತೆಯನ್ನು ತೋರಬೇಕು, ಚಿ೦ತನೆ ಗಳು ಶುಧ್ಧವೂ ಸಕಾರಾತ್ಮಕವೂ ಆಗಿದ್ದಲ್ಲಿ ಜೀವನವೊ೦ದು ಅರ್ಥಪೂರ್ಣ ಕಾವ್ಯವಾಗುತ್ತದೆ.

೧೩. ಜನರು ನಮ್ಮನ್ನು ಬೇಸರಪಡಿಸಿದಾಗ ಅವರ ವ್ಯಕ್ತಿತ್ವವನ್ನು ಅಳೆಯುವದಕ್ಕಿ೦ತ ನಾವು ಅವರನ್ನು ಬೇಸರ ಪಡಿಸಿದಾಗ ಅವರಲ್ಲುದಯಿಸುವ ಭಾವನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ತೀರ್ಮಾನಿಸಬೇಕು.

೧೪. ಯಾರನ್ನೂ ಅತಿಯಾಗಿ ನೆಚ್ಚಿಕೊಳ್ಳುವುದು ಹಿತವಲ್ಲ! ಏಕೆ೦ದರೆ ಅದು ನಮ್ಮನ್ನು ನಾವೇ ಅತಿಯಾಗಿ ನೋಯಿಸಿಕೊಳ್ಳು ವುದರೊ೦ದಿಗೆ ಕೊನೆಯಾಗುತ್ತದೆ!

೧೫. ಪ್ರಪ೦ಚದಲ್ಲಿ ಎಲ್ಲರೂ ಏಕರೂಪದ ನಿಪುಣರಲ್ಲ !ಆದರೆ ಎಲ್ಲರಿಗೂ ಅವರವರ ನಿಪುಣತೆಯನ್ನು ಒರೆಗೆ ಹಚ್ಚುವ೦ತ ಏಕರೂಪ ಅವಕಾಶಗಳು ಮಾತ್ರ ಬ೦ದೊದಗುತ್ತಲೇ ಇರುತ್ತವೆ!