Pages

Friday, January 30, 2015

ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನ ಪೂರ್ವಭಾವಿ ಸಭೆ

ಸಂಸ್ಕೃತ ಭಾರತಿಯ ಕರ್ನಾತಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖರಾದ ಶ್ರೀ ಶ್ರೀನಿವಾಸ್,ಪಕ್ಕದಲ್ಲಿ ಸಂಸ್ಕೃತ ಪೋಷಕರಾದ ಶ್ರೀ ಅಟ್ಟಾವರರಾಮದಾಸ್ ಮತ್ತು ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್





ಸಭೆಯಲ್ಲಿ ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಮಾತು

Sunday, January 25, 2015

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ ದ ವಿಷಯದಲ್ಲಿ ಓದುಗರ ಅಭಿಪ್ರಾಯ

 


ನಿನ್ನೆಯ ನನ್ನ " ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ   ಕ್ಕೆ ಅಂತರ್ಜಾಲದ ಹಲವು ತಾಣಗಳಲ್ಲಿ   ಪ್ರಕಟವಾಗಿರುವ  ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ನಿನ್ನೆ ಲೇಖನ ಕೊಂಡಿ ಇಲ್ಲೇ ಇದೆ. ಓದುಗರು  ಈ ಲೇಖನದ ಬಗ್ಗೆ ಇಲ್ಲಿ ಚರ್ಚೆ ಮಾಡಲು  ಅವಕಾಶವಿದೆ. ನನ್ನ ವಿಚಾರವನ್ನು ಒಪ್ಪಬೇಕೆಂದೇನೂ ಇಲ್ಲ. ರೂಢಿಯಲ್ಲಿರುವ ಹಲವು ಮೌಢ್ಯಗಳನ್ನು ದೂರಮಾಡುವುದು ಅಷ್ಟು ಸುಲಭವಲ್ಲ.  ವಿದ್ಯಾವಂತರೆನಿಸಿಕೊಂಡಿರುವ ಯುವಕರೇ ಮೌಢ್ಯದಲ್ಲಿ ಸಿಕ್ಕಿ ನೆರಳುತ್ತಿದ್ದಾರೆ. ನಮ್ಮ ಚರ್ಚೆಗಳು ಸತ್ಯವನ್ನು ಎತ್ತಿತೋರಿಸಲು ಕಾರಣವಾಗಲಿ.

http://blog.vedasudhe.com/2015/01/blog-post_87.html

ಈವರಗೆ ಪ್ರಕಟವಾಗಿರುವ ಓದುಗರ ಅಭಿಪ್ರಾಯಗಳು ಇಲ್ಲಿವೆ.
-------------------------------------------------------------------
 ೧. ಇಷ್ಟು ತಿಳಿದುಕೊಂಡರೆ ಮನುಷ್ಯ ಉದ್ಧಾರವಾಗಬಹುದು ಎಂಬುದು ಖಂಡಿತ | - ೨. ಆದರೆ ಇನ್ನೊಂದು ವಿಷಯ -- ಅಕ್ಷರಶಃ ಭವಣೆ ಗಳನ್ನು ಅನುಭವಿಸುವ ಮನುಷ್ಯನು - ಕೆಲವೊಮ್ಮೆ ತಿಳಿದೂ -- ಅದರಿಂದ ಪರಿಹಾರ ಸಿಗಬಹುದೇನೋ ಎಂಬ ಒಂದು ಮನದ ಆಸೆಯಿಂದ -- ಅಲ್ಲಿ ಆಸರೆಯನ್ನು ಬಯಸುತ್ತಾನೆ -- ( ಉದಾ - ಅತ್ಯಂತ ಸೆಳೆತವಿರುವ - ನೀರಿನ ತೊರೆ /ಸುಳಿಯಲ್ಲಿ ಸಿಲುಕಿದವನು ಕೈಗೆ ಎಟುಕಿದ್ದನ್ನು ಹಿಡಿಯುತ್ತಾನೆ- ) | ೩. ಇಲ್ಲಿ ಅತ್ಯಂತ ನೀಚತನವನ್ನು ಮಾಡುವವನು - ಈ ಕಷ್ಟ ಪರಿಸ್ಥಿತಿ ಯಲ್ಲೂ ಅದರ ಲಾಭ ಪಡೆದು - ಯದ್ವಾ ತದ್ವಾ ಜ್ಯೋತಿಷ್ಯ / ಪೂಜೆ,/ಹೋಮಾದಿಗಲನ್ನು ಅವನಿಂದ ಮಾಡಿಸಿ -- ಆ ಬಡ ಜೀವದಿಂದ -ಅಳಿದುಳಿದ ಹಣವನ್ನೂ ದೋಚುವ "ಮಿಥ್ಯಾಚಾರಿ " ವೇಶಧಾರಿ " - ಸತ್ಪುರುಷರು ಎಂದೆನಿಸಿಕೊಳ್ಳುವವರು || - ಇಂತಹವರಿಗೆ ಧಿಕ್ಕಾರ ||
-Edurkala Ishwar Bhat
-----------------------------------------------------------------
 ಆರೋಗ್ಯಪೂರ್ಣ ಚಿಂತನೆ.ದೇವರಲ್ಲೂ ಬೇಡದೆ ಬದುಕುವುದು ಸರಿಯಲ್ಲವೇ? ಕೊಡುವ ಇಚ್ಛೆ ಅವನಿಗಿದ್ದರೆ ಕೊಡದೆ ಬಿಡ,ಇಲ್ಲವಾದರೆ ಬೇಡಿದರೂ ಕೊಡ.ಈ ನೆಲೆಯಲ್ಲಿ ಉದಾತ್ತರೆಲ್ಲ ನಿಮ್ಮ ಚಿತ್ರದ ಹಿನ್ನೆಲೆಯಲ್ಲಿ ಕಾಣುವ ' ಏನೂ ಇಲ್ಲದ, ಏನೂ ಅಲ್ಲದ' ಔನ್ನತ್ಯದಲ್ಲಿ ಕಾಣಿಸುತ್ತಿದ್ದಾರೆ
-Raveesh Karnur
-------------------------------------------------------------------
 ದೇವರು ನಮ್ಮ ಹೃದಯ ಮಂದಿರದಲ್ಲೇ ಇದ್ದಾನೆ. ನಾವು ಅವನನ್ನು ನಮ್ಮಲ್ಲಿಯೇ ಸಂಧಿಸಬಹುದು. ಪ್ರಾರ್ಥನೆ ಎಂದರೆ ಪ್ರ ಎಂದರೆ ಶ್ರೇಷ್ಠ ಮತ್ತು ಅರ್ಥನೆ ಎಂದರೆ ಬೇಡುವುದು ಎಂದು. ಪ್ರಾರ್ಥನಾ ವೈ ಸಂಕಲ್ಪಃ ನಾವು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅದನ್ನು ಪಡೆಯುವ ಸಂಕಲ್ಪ ಮಾಡಬೇಕು. ಪ್ರಾರ್ಥನೆಯ ಮುಖ್ಯಗುರಿ ನಮ್ಮ ಆತ್ಮದ ವಿಕಾಸ ಅಥವಾ ಆತ್ಮೋನ್ನತಿ. ಇದನ್ನು ಸಾಧಿಸ ಹೊರಟರೆ ನಮ್ಮ ಯಶಸ್ಸು ಶತಸ್ಸಿದ್ಧ, ಇದನ್ನು ಅರ್ಥ ಮಾಡಿಕೊಳ್ಲದೆ ನಮ್ಮಲ್ಲಿರುವರ ಪರಮಾತ್ಮನನ್ನು ದೇವಸ್ಥಾನಗಳಲ್ಲಿ, ಅಲಂಕೃತ ಬೊಂಬೆಗಳಲ್ಲಿ ಅರಸಲು ಹೊರಟಿದ್ದೇ ಇಂದಿನ ದೇವಸ್ಥಾನದ ಹುಚ್ಚಿಗೆ ಮೂಲ. ಎಲ್ಲಿಯವರೆಗೆ ಈ ಬೊಂಬೆ ಸತ್ಕಾರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ವೈಕ್ತಿ ಮತ್ತು ನಮ್ಮ ಸಮಾಜದ ಏಳಿಗೆ ಕಷ್ಟಸಾಧ್ಯ
-Vasudevarao Rao
------------------------------------------------------------------
Sentiments of weak persons are exploited by FORECASTING community........ It's strange that Media people are also involved in this profiting exercise ........
-Shivaswamy Bhoopalam
--------------------------------------------------------------------

ತುಂಬಾ ಸಮಾಧಾನವಾಯಿತು...ಹಾಗೆಯೇ ಒಂದು ವಿಚಾರ ಹೊಳೆಯಿತು.ಇತ್ತೀಚೆಗೆ ಈ ಜ್ಯೋತಿಷಿಗಳು, ಸ್ವಾಮೀಜಿಗಳು ಟಿ.ವಿ.ವೇದಿಕೆ ಮೇಲೆ ಡಾನ್ಸ್ ಮಾಡುತ್ತಿರುವುದನ್ನು ನೋಡಿ ಅಸಹ್ಯ ಅನ್ನಿಸುತ್ತಿದೆ...
.Sharanappa R Pujar
----------------------------------------------------------------------------

nanoo obba jyotishi. dodda dodda pariharagalu. mantravadagalannu helidare matra fieldnalli hesaru. beligge toiletnalli yava dikkige mukhavirbeku anta kooda jyotishiye helbeku kelavarige. indina jyotishyakku jyotiyagaballa jyotishyakku ajagantara. jyotirvijnana adbhuta. indina jyotishya matra bahala keelumattaddu- Ramachandra Kanjarpane Madantyar
-----------------------------------------------------------------------
ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ...... ಸುಂದರ ಸಾಲುಗಳು
 .-Nammuru Rajashekhar

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ.

ಮನದ ಮಾತನ್ನು ಹೇಳಿಬಿಡುವೆ.ನನ್ನ ಬಗ್ಗೆ ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ನಿತ್ಯವೂ ಬೆಳಿಗ್ಗೆ ಟಿ.ವಿ. ಆನ್ ಮಾಡಿದರೆ ಸಾಕು ಜ್ಯೋತಿಷಿಗಳ ದರ್ಶನ! ಪಾಪ! ಜನ ಕಾಯುತ್ತಿರುತ್ತಾರೆ. ಕೆಲವರು ಅವತ್ತಿನ ಜೀವನವನ್ನು ನಿರ್ಧಾರ ಮಾಡುವುದೇ ಜ್ಯೋತಿಷಿಗಳ ಸಲಹೆ ಪಡೆದು! ಕೆಲವು ರಾಶಿಯವರಿಗೆ ಜ್ಯೋತಿಷಿಗಳು ಸಲಹೆ ಕೊಟ್ಟು ಬಿಡ್ತಾರೆ “ ಇವತ್ತು ನಿಮಗೆ ಕ್ರೂರವಾಗಿದೆ. ನೀವು ಗಣೇಶನ ಅಥವಾ ಮತ್ಯಾವುದೋ ದೇವರ ನಾಮಜಪಮಾಡಿ.ನಿಮಗೆ ಕಾರ್ಯ ಸಿದ್ಧಿಯಾಗುತ್ತೆ! ಸರಿ ಹಲವರು ಅದರಂತೆಯೇ ನಡೆದುಕೊಳ್ಳುತ್ತಾರೆ.ಇರಲಿ.ಅದು ಅವರ ಸ್ವಾತಂತ್ರ್ಯ.ನಾನ್ಯಾರು ಆ ಮಾತು ಹೇಳಲು?
ಇನ್ನು ದೇವಾಲಯಗಳ ಬಗ್ಗೆ ನೋಡುವಾಗ. ಕೆಲವಂತೂ ಅಕ್ಷರಷಃ ವ್ಯಾಪಾರಕೇಂದ್ರಗಳು! ಅದಕ್ಕೆ ಮುಗಿಲು ಬಿದ್ದ ಭಕ್ತರು!! ದಿನಗಟ್ಟಲೆ ಸಾಲಿನಲ್ಲಿ ಕ್ಯೂ ನಿಂತು ಅಂತೂ ದರ್ಶನ ಪಡೆದವೆಂದು ನಿಟ್ಟುಸಿರು ಬಿಡುವ ಭಕ್ತರು! ಇನ್ನು ಸಾವಿರಾರು ರೂಪಾಯಿ ಟಿಕೆಟ್ ಕೊಂಡು ವಿಶೇಷ ದರ್ಶನ ಪಡೆಯುವ ಶ್ರೀಮಂತ ಭಕ್ತರು!!
ಒಬ್ಬ ಸ್ವಾಮಿಗಳು ಹೀಗೆ ಹೇಳಿದರು “ ಕ್ಲಬ್ ಗಳಿಗೆ ಹೋಗಿ ಹೆಂಡ ಕುಡಿದು ಜೂಜು ಆಡಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಬಗ್ಗೆ,ವೇಶ್ಯಾಗೃಹಗಳಿಗೆ ಹೋಗಿ ಬರಿದಾಗುವವರ ಬಗ್ಗೆ ಮಾತಾಡುವುದಿಲ್ಲ, ದೇವಸ್ಥಾನಗಳ ಬಗ್ಗೆ ಮಾತಾಡ್ತಾರೆ! ಇದು ತಪ್ಪು!
ಅಯ್ಯೋ ರಾಮ –ಕೆಟ್ಟ ಚಟಗಳ ಬಗ್ಗೆ ಅದೆಷ್ಟು ಜಾಗೃತಿ ಸಭೆಗಳು ನಡೆಯುವುದಿಲ್ಲ! ಇವರಿಗೆ ಅದು ಗೊತ್ತಿಲ್ಲ. ಕೆಟ್ಟ ಚಟಗಳು ಮನುಷ್ಯನ ದೌರ್ಬಲ್ಯ. ಆದರೆ ದೇವಾಲಯಗಳಿಗೆ ಹೋಗುವುದು ಮನುಷ್ಯನ ದೌರ್ಬಲ್ಯವಾಗಬಾರದು. ದೇವಾಲಯಗಳಲ್ಲಿ ಮನುಷ್ಯನ ಆತ್ಮೋನ್ನತಿ ಯಾಗಬೇಕು. ಸಾವಿರ ಸಾವಿರ ಜನ ಕ್ಯೂನಲ್ಲಿ ನಿಂತು ದೇವರ ದರ್ಶನ ಮಾಡುವ ದೇವಾಲಯಗಳು ಇಂತಾ ಆತ್ಮೋನ್ನತಿಯ ಕೇಂದ್ರವಾಗಲು ಸಾಧ್ಯವೇ ಹೇಳಿ. ದಿನಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡುವುದೂ ಕೂಡ ಒಂದು ರೀತಿಯ ದೌರ್ಬಲ್ಯವೇ ಸರಿ. ಮನೆಯಲ್ಲೇನೋ ತಾಪತ್ರಯಗಳು! ಗಂಡ ಹೆಂಡಿರ ಜಗಳ. ಮಕ್ಕಳಲ್ಲಿ ಮನಸ್ಥಾಪ.ಯಾರಿಗೋ ಖಾಯಿಲೆ. ಇವೆಲ್ಲವನ್ನೂ ಆ ದೇವರು ಸರಿಪಡಿಸಬೇಕು, ಆ ಬೇಡಿಕೆಯ ಪಟ್ಟಿ ಹಿಡಿದು ದೇವರ ಮುಂದೆ ಉದ್ದುದ್ದ ಕ್ಯೂ.
ಜ್ಯೋತಿಷಿಗಳಿಗೂ ಡಿಮ್ಯಾಂಡ್!!
ಯಾಕೆ ಇದನ್ನೆಲ್ಲಾ ಬರೆದೆ, ಎಂದರೆ ನಾವು ನಮ್ಮ ವಿವೇಕದಿಂದ ಸರಿಮಾಡಿಕೊಳ್ಳ ಬೇಕಾದ್ದನ್ನು ದೇವರು ಸರಿ ಮಾಡ್ತಾನೆ, ಅಂತಾ ತೆಗೆದುಕೊಂಡು ಹೋಗ್ತೀವಲ್ಲಾ! ಅಂತಾ ಚಿಂತೆಯಾಯ್ತು.
ದೇವರು ಇಲ್ವಾ? ಖಂಡಿತಾ ಇದಾನೆ. ಅವನಿಲ್ಲದಿದ್ದರೆ ಈ ಜಗತ್ತು ನಡೆಯುತ್ತಲೇ ಇರಲಿಲ್ಲ. ಅವನು ಒಂದು ದಿವ್ಯ ಶಕ್ತಿ. ಅವನು ಅಗೋಚರ. ಅವನ ನೆರವು ಬೇಡವೇ? ಖಂಡಿತಾ ಬೇಕು. ನಮ್ಮ ಸಂಕಲ್ಪ ಸರಿಯಾಗಿದ್ದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಂಡರೆ [ಹರಕೆ ತೀರಿಸುವುದಲ್ಲ] ಅಂದರೆ ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಆಗೇ ತೀರುತ್ತದೆ. ಅವನಿಗೆ ಇಡೀ ಬ್ರಹ್ಮಾಂಡವನ್ನು ನಡೆಸುವ ಹೊಣೆ ಇದೆ.ನಮ್ಮ ಗಂಡ-ಹೆಂಡಿರ ಮನಸ್ಥಾಪ ಬಿಡಿಸಲು ಅವನು ಬರಬೇಕೆ?
ನಿಜವಾಗಿ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗವನ್ನು ಪಕ್ಕಕ್ಕಿಟ್ಟು ಜನರನ್ನು ದಾರಿತಪ್ಪಿಸುವವರಿಗೇ ಹೆಚ್ಚು ಪ್ರಾಮುಖ್ಯತೆ ಯಾಗಿದೆಯಲ್ಲಾ! ಇದು ಅತ್ಯಂತ ನೋವಿನ ಸಂಗತಿ.
ಸತ್ಯವನ್ನು ಹೂತು ಹಾಕಿ ಸುಳ್ಳಿನ ಮಹಲುಗಳನ್ನು ಕಟ್ಟಿ ದೊಡ್ದ ನಾಟಕದ ಕಂಪನಿಗಳು ನಡೆಯಿತ್ತಿವೆ. ಜನರು ನೋಡುತ್ತಿದ್ದಾರೆ. ಅದನ್ನೇ ಸತ್ಯವೆಂದು ನಂಬಿದ್ದಾರೆ. ಇದಕ್ಕಿಂತ ಆತ್ಮವಂಚನೆ ಬೇರೆ ಇಲ್ಲ.
ನಮಗೆ ಜೀವನದ ನಿಜವಾದ ಅರಿವು ಮೂಡುವುದು ವೇದಜ್ಞಾನದಿಂದ ಮಾತ್ರ.ಆದರೆ ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಅಮೂಲ್ಯ ಜ್ಞಾನಭಂಡಾರವಿದೆ, ಎಂದು ತಿಳಿಸಿಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.


[ ಈ ಪೋಸ್ಟ್ ಗೆ ಆಧಾರವಾದ ಒಂದು ವೇದ ಮಂತ್ರವನ್ನು ನೋಡಿ]

ಸ್ವಯಂ ವಾಜಿನ್ಸ್ತನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|

ಸ್ವಯಂ ಜುಷಸ್ವ ಮಹಿಮಾ ತೇ ಅನ್ಯೇನ ನಸನ್ನಶೇ ||

[ಯಜುರ್ವೇದ ೨೩ನೇ ಅಧ್ಯಾಯ ೧೫ ನೇ ಮಂತ್ರ]

ಸ್ವಯಂ = ತಾನೇ ಸ್ವತ:

ವಾಜಿನ್ = ಹೇ ಬಲಶಾಲಿಯೇ,

ತನ್ವಂ = ಶರೀರವನ್ನು

ಕಲ್ಪಯಸ್ವ = ಸಮರ್ಥಗೊಳಿಸಿಕೊ

ಸ್ವಯಂ ಯಜಸ್ವ = ತಾನೇ ಸ್ವತ: ಸತ್ಕರ್ಮ ಮಾಡು

ಸ್ವಯಂ ಜುಷಸ್ವ = ತಾನೇ ಸ್ವತ: ಪ್ರೀತಿಯಿಂದ ಮಾಡು

ತೇ ಮಹಿಮಾ = ಸಾಮರ್ಥ್ಯವು ನಿನ್ನದೇ

ಅನ್ಯೇನ ನ ಸನ್ನಶೇ = ಬೇರೆಯವರೊಂದಿಗೆ ನಷ್ಟವಾಗದಿರಲಿ.

ನನ್ನ ಕೈಲಿ ಈ ಕೆಲಸ ಮಾಡಲು ಸಾಧ್ಯವೇ? ನಾನು ಸಮರ್ಥನೇ? ನನಗೆ ಶಕ್ತಿ ಇದೆಯೇ? ಎಂದು ತಲ್ಲಣಿಸುವ ಕೀಳರಿಮೆಯ ಜನರು ಈ ವೇದ ಮಂತ್ರವನ್ನು ಕೇಳಬೇಕು.

ವೇದ ಮಂತ್ರವು ಸಾರುತ್ತಿದೆ ಹೇ ಅಣುಚೇತನರೇ ನೀನು ಬಲಶಾಲಿ ನೀನು ಕುಸಿದು ಕೂರುವ ಅಗತ್ಯವಿಲ್ಲ. ನಿನಗೆ ಸಾಮರ್ಥ್ಯವಿದೆ! ನಿನ್ನಲ್ಲಿ ಅಂತ:ಸತ್ವ ಇದೆ. ಕುಸಿದು ಕೂರಬೇಡ. ಯಾರಿಗೂ ನಿನ್ನನ್ನು ಹೋಲಿಸಿಕೊಳ್ಳುವ ಅಗತ್ಯವಿಲ್ಲ. ನಿನಗೆ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನು ನೀನು ಮಾಡು. ತನ್ವಂ ಕಲ್ಪಯಸ್ವ ಅಂದರೆ ನಿನ್ನ ಶರೀರವನ್ನು ನೀನೇ ಸಮರ್ಥಗೊಳಿಸಿಕೊ. ನಮ್ಮ ಹೊಟ್ಟೆ ತುಂಬಲು ನಾವೇ ಊಟ ಮಾಡಬೇಕು,ನಮ್ಮ ಶರೀರ ಸದೃಢವಾಗಿರಲು ನಾವೇ ವ್ಯಾಯಾಮ ಮಾಡಬೇಕು, ನಾವೇ ವಿಶ್ರಾಂತಿ ತೆಗೆದುಕೊಳ್ಳಬೇಕು ತಾನೇ. ಹಾಗೆಯೇ ನಿನ್ನ ಶರೀರವನ್ನು ನೀನೇ ಸದೃಢ ಗೊಳಿಸಿಕೊ. ಸ್ವಯಂ ಯಜಸ್ವ ಅಂದರೆ ನೀನೇ ಸ್ವತ: ಸತ್ಕರ್ಮಗಳನ್ನು ಮಾಡು. ನಿನ್ನ ಪರವಾಗಿ ಬೇರೆ ಯಾರೋ ಸತ್ಕರ್ಮವನ್ನು ಮಾಡಿದರೆ ಅದರ ಫಲ ಅವರಿಗೇ ಹೊರತೂ ನಿನಗಲ್ಲ. ಸ್ವಯಂ ಜುಷಸ್ವ ಅಂದರೆ ನೀನೇ ಸ್ವತ: ಪ್ರೀತಿಯಿಂದ ಕರ್ಮವನ್ನು ಮಾಡು. ಮಾಡುವ ಕೆಲಸವನ್ನು ಬೇಸರದಿಂದ ಮಾಡಬೇಡ. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ನಿನ್ನ ಅಂತರಂಗದಲ್ಲಿರುವ ಪಾತ್ರೆಯಲ್ಲಿ ಸತ್ಕರ್ಮ ಫಲವೇ ಜಾಸ್ತಿಯಾಗುತ್ತದಲ್ಲಾ! ಮಾಡುವ ಕೆಲಸವನ್ನು ಅಯ್ಯೋ ಮಾಡಬೇಕಲ್ಲಾ! ಎಂದು ಮಾಡುವ ಬದಲು ಸಂತೋಷವಾಗಿ ಮಾಡು. ಅದರಿಂದ ನಿನಗೇ ಲಾಭ. ಎಷ್ಟು ಕಷ್ಟಪಟ್ಟು ಜೀವನ ಮಾಡುತ್ತಿದ್ದೇನೆ, ಗೊತ್ತಾ? ಎಂದು ಯಾರೋ ಕನಿಕರ ಪಡುವಂತೆ ವರ್ತಿಸಬೇಡಿ.ಇದರಿಂದ ನಿಮ್ಮ ಅಂತರಂಗವು ಮಲಿನವಾಗುತ್ತದೆ.

"ತೇ ಮಹಿಮಾ ಅನ್ಯೇನ ನಸನ್ನಶೇ" ಅಂದರೆ ಯಾರೋ ಮಾಡುವ ಸಾಧನೆಯಿಂದ ನಿನ್ನ ಮಹಿಮೆಯು ಸಿದ್ಧಿಸುವುದಿಲ್ಲ. ನೀನು ಒಳ್ಳೆಯ ಅಡುಗೆ ಮಾಡಬೇಕೆಂದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀನೇ ಹೊಂದಿಸಿಕೊಳ್ಳ ಬೇಕು. ಬೇಕಾಗುವ ಸಾಮಗ್ರಿಗಳೇನು ? ನಿನ್ನ ಮಾತು, ನಿನ್ನ ನಡೆ, ನಿನ್ನ ವ್ಯವಹಾರ.ಅಷ್ಟೆ. ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ.

Tuesday, January 20, 2015

ವೇದಮಂತ್ರಗಳಲ್ಲಡಗಿರುವ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸುವರೇ?


ಅಥರ್ವವೇದದ ೫ನೇ ಕಾಂಡದ ೧೮ ನೇ ಸೂಕ್ತವು ಬ್ರಹ್ಮಜ್ಞಾನಿಯ ಮಹತ್ವದ ಬಗ್ಗೆ ಅತ್ಯಂತ ನೇರವಾದ ಮಾತುಗಳನ್ನು ರಾಜನಿಗೆ ಹೇಳುತ್ತದೆ.ಮಂತ್ರದಲ್ಲಿ ಬ್ರಾಹ್ಮಣ ಪದ ಪ್ರಯೋಗವಾಗುವುದರಿಂದ ಇದನ್ನು ಯಾರೋ ಬ್ರಾಹ್ಮಣರು [ಜಾತಿಯಲ್ಲಿ] ಬರೆದುಕೊಂಡಿ ದ್ದಾರೆ, ಎಂದು ಮೂದಲಿಸುವ ಜನರನ್ನು ಇಂದಿನ ಸಮಾಜದಲ್ಲಿ ಕಾಣಬಹುದು. ಆದರೆ ಬ್ರಹ್ಮಜ್ಞಾನಿಗೆ ಇಂದು ರೂಢಿಯಲ್ಲಿರುವ  ಜಾತಿ ಇಲ್ಲವೆಂಬ ವೇದದ ಸ್ಪಷ್ಟ ನುಡಿಗಳನ್ನು ಹಲವಾರು ಮಂತ್ರಗಳಲ್ಲಿ ಕಾಣಬಹುದಾಗಿದೆ. ವೇದದ ಕಾಲದ ವರ್ಣ ವ್ಯವಸ್ಥೆಗೂ ಇಂದಿನ ಜಾತಿಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾ , ಬ್ರಾಹ್ಮಣ ಪದವನ್ನು  ಬ್ರಹ್ಮಜ್ಞಾನವನ್ನು ಪಡೆದ ಒಬ್ಬ ಜ್ಞಾನಿ-ಎಂದು ಅರಿತುಕೊಂಡಾಗ ಮುಂದಿನ ಮಂತ್ರಗಳ ಮಹತ್ವವು ನಮಗೆ ಯಾವ ಪೂರ್ವಾಗ್ರಹವಿಲ್ಲದೆ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ನೈತಾಂ ತೇ ದೇವಾ ಅದದುಸ್ತುಭ್ಯಂ ನೃಪತೇ ಅತ್ತವೇ|
ಮಾ ಬ್ರಾಹ್ಮಣಸ್ಯ ರಾಜನ್ಯ ಗಾಂ ಜಿಘತ್ಸೋ ಅನಾಧ್ಯಾಮ್ ||೧||

ಅನ್ವಯ :
ನೃಪತೇ = ಎಲೈ ದೊರೆಯೇ
ತೇ ದೇವಾಃ = ಆ ದೇವತೆಗಳು [ಬ್ರಹ್ಮಜ್ಞಾನಿಗಳು]
ಏತಾಂ ತುಭ್ಯಂ ಅತ್ತವೇ ನ ದದುಃ = ನಿನಗೆ ಆಗೊವನ್ನು ತಿನ್ನಲು ಕೊಟ್ಟಿಲ್ಲ
ರಾಜನ್ಯ = ಹೇ ರಾಜನೇ
ಬ್ರಾಹ್ಮಣಸ್ಯ ಅನಾದ್ಯಾಂ ಗಾಂ ಮಾ ಜಿಘತ್ಸಃ = ಬ್ರಾಹ್ಮಣನ ಆಗೋವನ್ನು ತಿನ್ನಲು ಬಯಸಬೇಡ
ಭಾವಾರ್ಥ : ರಾಜನು ಬ್ರಾಹ್ಮಣನ ಗೋವನ್ನು [ವಾಣಿಯನ್ನು] ಕೊಲ್ಲಬಾರದು
ವೇದಮಂತ್ರಗಳಲ್ಲಿ ಬೀಜದ ರೂಪದಲ್ಲಿ ಒಂದು ವಿಚಾರವೇ ಅಡಗಿರುತ್ತದೆ. ಈ ಮಂತ್ರದಲ್ಲಿ ಬ್ರಾಹ್ಮಣಸ್ಯ ಗಾಂ ಎಂಬ ಪದವನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಎರಡೂ ಕೂಡ ಸಮಜಕ್ಕೆ ಹಿತವೇ ಆಗಿದೆ. ಮೊದಲನೆಯದು ಗಾಂ ಎಂಬುದಕ್ಕೆ ಗೋವು ಎನ್ನುವ ಅರ್ಥವಿದೆ. ಹೀಗೆ ಅರ್ಥ ಮಾಡಿಕೊಂಡಾಗ ರಾಜನು ಗೋವುಗಳನ್ನು ಕೊಲ್ಲಬಾರದು. ಅದನ್ನು ರಕ್ಷಿಸಬೇಕೆಂದು  ಅರ್ಥ ಮಾಡಿಕೊಳ್ಳಬಹುದು.ಹೀಗೆ ಅರ್ಥ ಮಾಡಿಕೊಂಡಾಗ ಗೋಸಂತತಿಯನ್ನು ರಕ್ಷಿಸುವುದು ರಾಜನ ಕರ್ತವ್ಯವಾಗುತ್ತದೆ. ಗೋಸಂತತಿಯ ರಕ್ಷಣೆಯ ಹಿಂದೆ ಒಂದು ಸಂಸ್ಕೃತಿಯ  ರಕ್ಷಣೆ ಕೂಡ ಇದೆ. ಆ ಬಗ್ಗೆ ವಿವರವಾಗಿ ಹೋದರೆ ಈ ಅಂಕಣವೆಲ್ಲಾ ಅದೇ ವಿಚಾರದಿಂದ ತುಂಬುತ್ತದೆ. ಆದರೆ ನಮಗೆಲ್ಲಾ ಗೋವಿನ ಮಹತ್ವದ ಅರಿವಿರುವುದರಿಂದ ಇಲ್ಲಿ ಆ ಬಗ್ಗೆ ಹೆಚ್ಚು ಬರೆಯುವುದಿಲ್ಲ.
ಇನ್ನು ಗಾಂ ಪದದ ಎರಡನೆಯ ಅರ್ಥ ವಾಣಿ. ಈ ಮಂತ್ರದಲ್ಲಿ ಬ್ರಾಹ್ಮಣನ ವಾಣಿಯ ಬಗ್ಗೆ ಮಹತ್ವವನ್ನು ಕೊಟ್ಟಿದೆ. ಬ್ರಾಹ್ಮಣನ ವಾಣಿಯನ್ನು ಕೊಲ್ಲಬೇಡ[ನಿರಾಕರಿಸಬೇಡ] ಎಂದು ರಾಜನಿಗೆ ವೇದವು ಕರೆಕೊಡುತ್ತದೆ. ಹೀಗೆ ಒಂದು ವೇಳೆ ಬ್ರಾಹ್ಮಣನವಾಣಿಯನ್ನು ಕಡೆಗಣಿಸಿದರೆ ಅದರ ಪರಿಣಾಮ ಏನಾಗುತ್ತದೆಂಬುದನ್ನು ಮುಂದಿನ ಮಂತ್ರಗಳು ವಿವರಿಸುತ್ತವೆ.
ಅಕ್ಷದ್ರುಗ್ಧೋ ರಾಜನ್ಯಃ ಪಾಪ ಆತ್ಮ ಪರಾಜಿತಃ |
ಸ ಬ್ರಾಹ್ಮಣಸ್ಯ ಗಾಮದ್ಯಾದದ್ಯ ಜೀವಾನಿ ಮಾ ಶ್ವಃ ||೨||

ಅನ್ವಯ :
ಹೇ ರಾಜನೇ,
ಅಕ್ಷದ್ರುಗ್ಧಃ ಪಾಪಃ = ತನ್ನ ಇಂದ್ರಿಯ ಭೋಗಾಭಿಲಾಷೆಯಿಂದ ಪ್ರಜೆಗಳಿಗೆ ದ್ರೋಹ ಮಾಡುವ ಪಾಪಿಯಾದ
ರಾಜನ್ಯಃ = ರಾಜನು
ಆತ್ಮ ಪರಾಜಿತಃ = ಸ್ವಯಂ ನಾಶನಾಗಿ
ಸಃ = ಅವನು
ಬ್ರಾಹ್ಮಣಸ್ಯ ಗಾಂ ಅದ್ಯತ್ = ಬ್ರಾಹ್ಮಣನ ಗೋಸಂಪತ್ತನ್ನು ಭೋಗಿಸಿದ್ದೇ ಆದರೆ
ಅದ್ಯ ಜೀವಾನಿ ಮಾ ಶ್ವಃ = ಇವತ್ತು ಇರುತ್ತಾನೆ, ನಾಳೆ ಇರುವುದಿಲ್ಲ
ಭಾವಾರ್ಥ :
ಭೋಗಾಸಕ್ತನಾಗಿ ಆತ್ಮ ಮತ್ತು ಪ್ರಜೆಗಳಿಗೆ ದ್ರೋಹ ಮಾಡುತ್ತಾ ವ್ಯಸನಿಯಾಗಿ ಬಾಳುವ ರಾಜನು ಬ್ರಾಹ್ಮಣನ ಸಂಪತ್ತಿಗೆ ಕೈ ಹಾಕಿದರೆ, ವಾಣಿಯನ್ನು ನಾಶಮಾಡಿದರೆ ಇವತ್ತು ಬದುಕಬಹುದು, ಆದರೆ ನಾಳೆ ಬದುಕಲಾರ.
ಈ ಮಾತುಗಳು ಪ್ರಪಂಚದ ಯಾವ ರಾಜರುಗಳ ಇತಿಹಾಸ ನೋಡಿದರೂ ಸತ್ಯ ಎನಿಸದೆ ಇರದು. ನಮ್ಮ ದೇಶದ ಇತಿಹಾಸವನ್ನೇ ನೋಡಿದರೂ, ಅದರಲ್ಲೂ ಸ್ವಾತಂತ್ರ್ಯಾನಂತರದ ದಿನಗಳ ನಮ್ಮ ಶಾಸಕರ ಜೀವನವನ್ನು ಅವಲೋಕನ ಮಾಡಿದರೂ ನಮಗೆ ಈ ಮಂತ್ರದ ಸತ್ಯದ ಅರಿವಾಗುತ್ತದೆ. ಒಮ್ಮೆ ಶಾಸಕನಾಗಿ ಚುನಾಯಿತನಾದವನು ದೇಶ ಮತ್ತು ಸಮಾಜವನ್ನು ಮರೆತು ಸ್ವಾರ್ಥಪರನಾಗಿ ಭೋಗಜೀವನವನ್ನು ನಡೆಸುತ್ತಾ ಬ್ರಾಹ್ಮಣವಾಣಿಯನ್ನು ಕಡೆಗಣಿಸಿದವನ ಸ್ಥಿತಿ ಏನಾಗಿದೆ, ಎಂಬ ಉಧಾಹರಣೆಗಳೇ ನಮ್ಮ ಕಣ್ಮುಂದಿವೆ. ಇಲ್ಲಿ ಮತ್ತೆ ಮತ್ತೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ ಬ್ರಾಹ್ಮಣ ಪದವನ್ನು  ಇಂದಿನ ಜಾತಿಗೆ ಸಮೀಕರಿಸಬಾರದು. ಇಂದಿನ ಯಾವ ಜಾತಿಗೆ ಸೇರಿದವರೇ ಆಗಲೀ ಅವರು ವೇದವಾಣಿಯನ್ನು ಕಲಿತು ವಿದ್ವಾಂಸನಾಗಿದ್ದು ಸಮಾಜಮುಖಿ ಚಿಂತನೆಯನ್ನು ಮಾಡುತ್ತಾ ಸಮಾಜದ ಸಾಮರಸ್ಯವನ್ನು, ಅಭ್ಯುದಯವನ್ನು ನಿರಂತರ ಬಯಸುತ್ತಿದ್ದರೆ ಅವನಿಗೆ ಶಾಸಕನು ಮನ್ನಣೆ ಕೊಡಬೇಕು. ಮನ್ನಣೆ ಕೊಡದೆ ಅವರ ಮಾತನ್ನು ಕಡೆಗಣಿಸಿ ಸ್ವಾರ್ಥದಲ್ಲಿ ಮುಳುಗಿ ಭೋಗಜೀವದಲ್ಲಿ ಮುಳುಗಿದ್ದರೆ ಅಂತಹ ಶಾಸಕನು ಇಂದು ಶಾಸಕನಾಗಿರಬಹುದು, ಮುಂದೆ ಅವನನ್ನು  ಸಮಾಜವು ಕಡೆಗಾಣಿಸುವುದು ಸತ್ಯ. ವೇದವಾಣಿ-ಎಂದಾಗ ನಾಲ್ಕು ವೇದUಳನ್ನು ಅಧ್ಯಯನ ಮಾಡಿದವನ ಮಾತು ಎಂದು ಭಾವಿಸಬೇಕಾಗಿಲ್ಲ. ವೇದ ಎಂದರೆ ಜ್ಞಾನ, ಎಂದು ಅರ್ಥಮಾಡಿಕೊಂಡರೆ ಸಾಕು.
ಮುಂದಿನ ಮಂತ್ರವು ರಾಜನನ್ನು ಮತ್ತೂ ಎಚ್ಚರಿಸುತ್ತದೆ. . . . . . . . .
ಆವಿಷ್ಟಿತಾಘವಿಷಾ ಪೃದಾಕೂರಿವ ಚರ್ಮಣಾ |
ಸಾ ಬ್ರಾಹ್ಮಣಸ್ಯ ರಾಜನ್ಯ ತೃಷ್ಟೈಷಾ ಗೌರನಾದ್ಯಾ ||೩||
ಅನ್ವಯ :
ರಾಜನ್ಯ = ಹೇ ರಾಜನೇ
ಏಷಾ ಬ್ರಾಹ್ಮಣಸ್ಯ ಗೌಃ ಅನದ್ಯಾ = ಈ ಬ್ರಾಹ್ಮಣನ ಹಸುವು[ವಾಣಿಯು] ಭೋಗ್ಯವಲ್ಲ, ನಿನಗೆ ಉಣ್ಣುವುದಕ್ಕಾಗಿ ಅಲ್ಲ. ಏಕೆಂದರೆ ಅದು
ಸಾ ಚರ್ಮಣಾ ಆವಿಷ್ಟಿತಾ ತೃಷ್ಟಾ ಪೃದಕೂಃ ಇವ = ಆ ಆಕಳು ಚರ್ಮದ ಪೊರೆಯಲ್ಲಿ ಮುಚ್ಚಿದ ಸರ್ಪಿಣಿಯಂತೆ
ಅಘವಿಷಾ = ಭಯಂಕರ ವಿಷದಂತೆ ನಿನಗೆ ಆಪತ್ಕಾರಿಯಾಗುತ್ತದೆ

ಭಾವಾರ್ಥ :
ಭ್ರಾಹ್ಮಣನ ವಾಣಿಯನ್ನು ಕಸಿದುಕೊಂಡು ರಾಜನು ಭೋಗಿಸಬಾರದು.ಅದು ಸರ್ಪದ ವಿಷದಂತೆ ಆತ್ಮಘಾತುಕವಾಗಿ ಪರಿಣಮಿಸುತ್ತದೆ.
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಗೌಃ ಪದವನ್ನು ವಾಣಿ ಮತ್ತು ಹಸು ಈ ಎರಡೂ ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು. ರಾಜನಾದನು ಗೋವನ್ನು ಕೊಂದರೂ ಮತ್ತು ಕೊಲ್ಲಲು ಅವಕಾಶಕೊಟ್ಟರೂ ಗೋಭಕ್ತರ ಅಂತರಂಗದಲ್ಲಡಗಿರುವ ಆಕ್ರೊಶಕ್ಕೆ ಗುರಿಯಾಗಿ ರಾಜನನ್ನು ಇಂದಲ್ಲಾ ನಾಳೆ ಸುಡುವುದು ನಿಶ್ಚಿತ. ಅಂತೆಯೇ ಬ್ರಾಹ್ಮಣನ ವಾಣಿಯನ್ನು ಹತ್ತಿಕ್ಕಿದರೂ ಮುಂದೆ ಅದರ ಪರಿಣಾಮ ಘೋರವಾಗಿರುತ್ತದೆ.
ವೇದಮಂತ್ರಗಳಲ್ಲಡಗಿರುವ ಈ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸಿದರೆ ಅವರಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು. ಕಡೆಗಣಿಸಿ ಅಧಿಕಾರವಿದೆ ಎಂದು ಬಲಪ್ರಯೋಗದಿಂದ ಸುವಿಚಾರಗಳನ್ನು ಹತ್ತಿಕ್ಕಿದರೆ ಅದರ ಫಲವನ್ನು ಆಡಳಿತ ಮಾಡುವವರು ಅನುಭವಿಸಲೇ ಬೇಕಾಗುತ್ತದೆ. ವೇದವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವಭೌಮವಾದ್ದರಿಂದ ಅದನ್ನು ಗೊಡ್ಡು ಎಂದು ಹೇಳುವವರಿಗೂ ಕೂಡ ಈ ಮಂತ್ರವು ಎಚ್ಚರಿಕೆಯ ಗಂಟೆಯಾಗಿದೆ.
-ಹರಿಹರಪುರಶ್ರೀಧರ್

Monday, January 19, 2015

ಆನ್ ಲೈನ್ ಸತ್ಸಂಗ

ನಿನ್ನೆ 18.1.2015 ಭಾನುವಾರ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು skype ಮೂಲಕ ಪ್ರವಚನ ಮಾಡಿದರು. ಅಮೆರಿಕೆಯಿಂದ ಶ್ರೀಮತಿ ಶಾಂತಿತಂತ್ರಿ ಆನ್ ಲೈನ್ ನಲ್ಲಿ ಭಾಗವಹಿಸಿದ್ದರು. ಇದೊಂದು ಯಶಸ್ವೀ ಪ್ರಯೋಗವೆಂದೇ ಹೇಳಬೇಕು. ಆನ್ ಲೈನ್ ನಲ್ಲಿ ಪಾಲ್ಗೊಳ್ಳಬಯಸುವ ವೇದಾಭಿಮಾನಿಗಳು ಇಂದು ಸಂಜೆ 5.40 ರಿಂದ 5.55 ರ ನಡುವೆ ನಮ್ಮ  skype ವಿಳಾಸ  vedasudhe ಗೆ ಲಾಗಿನ್ ಆಗಿ ನಮ್ಮ ಗುಂಪು ಸೇರಬಹುದು. ತಡವಾಗಿ Reduest ಕಳಿಸಿದರೆ accept ಮಾಡಿಕೊಳ್ಳಲು ಸಿಸ್ಸ್ಟೆಮ್ ಮುಂದೆ ಯಾರೂ ಆಪರೇಟರುಗಳಿರುವುದಿಲ್ಲ. ಅಂತರ್ಜಾಲದ ದೋಷದಿಂದ  ಸಂಪರ್ಕ ಕಡಿತಗೊಂಡರೆ ಬೇಸರಿಸಬೇಡಿ. vedasudhe@gmail.com ಗೆ ಒಂದು ಮೇಲ್ ಹಾಕಿ ನಿಮ್ಮ ಅನಿಸಿಕೆಯನ್ನು ತಿಳಿಸಿದರೆ ಸುಧಾರಣೆ ಮಾಡಿಕೊ ಳ್ಳಲು ಸಹಾಯವಾಗುತ್ತೆ. ದಿನಾಂಕ 10.2.2015ರಂದು ಹಾವೇರಿ ಸಮೀಪ ಮಲಗುಂದದಲ್ಲಿರುವ ಆರ್ಷವಿದ್ಯಾಲಯದಲ್ಲಿ ನಡೆಯಲಿರುವ ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಲಲು   ಈ ತಿಂಗಳು ಪೂರ್ಣ ಸತ್ಸಂಗದಲ್ಲಿ   ಅಗ್ನಿಹೋತ್ರ ಮಂತ್ರವನ್ನು ಅಭ್ಯಾಸ ಮಾಡಲಾಗುವುದು.

Sunday, January 18, 2015

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಆನ್ ಲೈನ್ ಪ್ರವಚನ

ಹಾಸನ  ವೇದಭಾರತಿಯು ನಡೆಸುವ ಸತ್ಸಂಗದಲ್ಲಿ ಇಂದು[18.1.2015] ಸಂಜೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು "ಸತ್ಸಂಗ ಮತ್ತು ಆತ್ಮೋನ್ನತಿ" ಎಂಬ ವಿಚಾರದಲ್ಲಿ ಆನ್ ಲೈನ್ ನಲ್ಲಿ  ಪ್ರವಚನ ಮಾಡುವರು. skype ಮೂಲಕ ಸತ್ಸಂಗದಲ್ಲಿ ಆನ್ ಲೈನ್ ಭಾಗವಹಿಸಲು ಆಸಕ್ತರು ಇಂದು ಸಂಜೆ 5.40 ರೊಳಗೆ  ನಮ್ಮ ಸ್ಕೈಪ್ ವಿಳಾಸ ವಾದ   vedasudhe ಗೆ ಕಾಲ್ ಮಾಡಿದರೆ ಅಕ್ಸೆಪ್ಟ್ ಮಾಡಿಕೊಂಡು ಗುಂಪಿನಲ್ಲಿ ಸಂಪರ್ಕ ಒದಗಿಸುವ ಪ್ರಯತ್ನ ಮಾಡಲಾಗುವುದು.ಒಂದು ಶಾಶ್ವತ ವ್ಯವಸ್ಥೆ ಆಗುವವರಗೆ ಇದು ಪ್ರಯೋಗವೇ ಆಗಿರುತ್ತದಾದ್ದರಿಂದ ಸಂಪರ್ಕ ಕಡಿತಗೊಂಡರೆ ದಯಮಾಡಿ ಬೇಸರಿಸಬಾರದು. 5.55 ರ ನಂತರ ಸಿಸ್ಟೆಮ್ ಮುಂದೆ ನಿಯಂತ್ರಣ ಮಾಡಲು ಯಾರೂ ಇರುವುದಿಲ್ಲ. ಎಲ್ಲರೂ ಸತ್ಸಂಗದಲ್ಲಿ ಇರುತ್ತೇವಾದ್ದರಿಂದ 5.50 ರೊಳಗೆ ಆನ್ ಲೈನ್ ಗೆ ಬರುವವರೆಲ್ಲಾ ಬಂದರೆ ಉತ್ತಮ. ಒಮ್ಮೆ ಗುಂಪಿಗೆ ಸೇರ್ಪಡೆಯಾದರೆ ಮುಂದೆ ತೊಂದರೆಯಾಗಲಾರದೆಂದು ಭಾವಿಸುವೆ.

Thursday, January 15, 2015

ವಿದ್ವಾಂಸರು ಪ್ರಾಪಂಚಿಕ ಜ್ಞಾನವನ್ನು ಜನರಿಗೆ ನೀಡುವುದರ ಜೊತೆಗೆ ಜನರು ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.


ವಿದ್ವಾಂಸರ ಕರ್ತವ್ಯದ ಬಗ್ಗೆ ಇರುವ ವೇದ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.
ಸುತಾ ಅನು ಸ್ವಮಾ ರಜೋ ಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಚಂತ ಇಂದವಃ ||
[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೬]
ಪದಾರ್ಥ :-
ಸ್ವಂ ಆ ರಜಃ ಅನು = ತನ್ನ ಶಕ್ತಿಯನ್ನು ಅನುಸರಿಸಿ
ಬಭ್ರವಃ = ಭರಣಪೋಷಣ ಮಾಡುವವರಾಗಿ
ಇಂದ್ರಮ್ ಗಚ್ಛಂತಃ = ಸರ್ವೇಶ್ವರನ ಬಳಿ ಸಾಗುತ್ತಾ
ಇಂದವಃ = ಕರುಣಾಮಯರು
ಸುತಾಃ = ಪವಿತ್ರರಾಗಿ
ಅಭಿ ಅರ್ಷಂತಿ = ಮುಂದೆ ಸಾಗುತ್ತಾರೆ
ಭಾವಾರ್ಥ :
ಕ್ರಿಯಾಶೀಲರಾದ ವಿದ್ವಾಂಸರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿ ಇತರರ ಪೋಷಣೆ ಮಾಡುತ್ತಾ ಸಮಾಜದ ಸಂಪತ್ತನ್ನು ಉಳಿಸಿ ಬೆಳೆಸುತ್ತಾರೆ. ಮತ್ತು ಜಗತ್ತಿನ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡುತ್ತಾರೆ. ಅಂತೆಯೇ ಸ್ವಾರ್ಥಭಾವನೆಯನ್ನು ನಾಶ ಮಾಡುತ್ತಾರೆ. ಈ ರೀತಿಯ ಕರುಣಾಮಯರೂ, ಪವಿತ್ರರೂ ಆದ ವಿವೇಕಿಗಳು ಭಗವಂತನ ಸಾಮೀಪ್ಯವನ್ನು ಪಡೆಯುತ್ತಾರೆ.
ಸಮಾಜದಲ್ಲಿ ಯಾವಾಗಲೂ ಹಾಗೆಯೇ, ಹೆಚ್ಚು ತಿಳಿದವನಿಗೆ ಹೆಚ್ಚು ಹೊಣೆ. ಇದು ಧರ್ಮ. ತನ್ನಲ್ಲಿರುವ ಸಾಮರ್ಥ್ಯವನ್ನು ವಿದ್ವಾಂಸನಾದವನು ತನ್ನಲಿಟ್ಟುಕೊಂಡು ಸುಮ್ಮನಾಗುವಂತಿಲ್ಲ. ತನ್ನ ಜ್ಞಾನವನ್ನು ಇತರರಿಗೆ ಹಂಚಿ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗೆ ಕಾರಣರಾದಾಗ ಒಬ್ಬ ವಿದ್ವಾಂಸನ  ಜ್ಞಾಕ್ಕೆ ಮಾತ್ರ ಬೆಲೆ. ಹಾಗಿಲ್ಲದೆ ಹತ್ತಾರು ಪದವಿಗಳನ್ನು ಪಡೆದಿದ್ದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅಂತವನಿಗೆ ಸದ್ಗತಿಯೂ ಕೂಡ ಸಿಕ್ಕಲಾರದು. ವಿದ್ವಾಂಸನಾದವನು ತನ್ನ ಜ್ಞಾನವನ್ನು ಹಂಚುತ್ತಾ ಸಮಾಜದ ಉನ್ನತಿಗೆ ಕಾರಣ ನಾಗುತ್ತಾ ಇಡೀ ವಿಶ್ವದ ಜನರನ್ನು ಶ್ರೇಷ್ಠರನ್ನಾಗಿ ಮಾಡಬೇಕೆಂದು ವೇದವು ವಿದ್ವಾಂಸನಾದವನಿಗೆ ಕರೆ ಕೊಡುತ್ತದೆ. ಅಂತವನಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ.
ಮತ್ತೊಂದು ಮಂತ್ರವೂ ಈ ವಿಚಾರವನ್ನೇ ಒತ್ತಿ ಹೇಳುತ್ತದೆ.

ಅಯಾ ಪವಸ್ಯ ಧಾರಯಾ ಯಯಾ ಸೂರ್ಯಮರೋಚಯಃ |
ಹಿನ್ವಾನೋ ಮಾನುಷೀರಪಃ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೭]
ಪದಾರ್ಥ :-
ಯಯಾ ಧಾರಯಾ = ಯಾವ ವಚನದಿಂದ
ಮಾನುಷೀಃ ಅಪಃ = ಮಾನವೀಯ ಪ್ರಜೆಗಳನ್ನು
ಹಿನ್ವಾನಃ = ಪ್ರೇರಿಸುತ್ತಾ
ಸೂರ್ಯಮ್ = ಪ್ರಗತಿಶೀಲನನ್ನು
ಅರೋಚಯಃ = ಬೆಳಗಿಸುತ್ತೀಯೋ
ಅಯಾ ಧಾರಯಾ = ಆ ವಚನದಿಂದ
ಪವಸ್ವ = ಮುನ್ನಡೆಸು
ಭಾವಾರ್ಥ :
ಯಾವ ವಚನಗಳಿಂದ ಜನರಿಗೆ ಪ್ರೇರಣೆ ಸಿಗಬಲ್ಲದೋ ಅಂತಹ ವಚನಗಳಿಂದ ವಿದ್ವಾಂಸರು  ಜನರನ್ನು   ಪ್ರೇರಿಸುತ್ತಾ ಮುನ್ನಡೆಸಬೇಕೆಂಬುದು ವೇದದ ಕರೆ.ಇದು ವೇದದ ಆದೇಶ ಕೂಡ. ಜ್ಞಾನವನ್ನು ಪಡೆದು ಒಬ್ಬ ವಿದ್ವಾಂಸನು ಸುಮ್ಮನಿರುವಂತಿಲ್ಲ. ಪಡೆದ  ಜ್ಞಾನವನ್ನು ಜನರಿಗೆ ಹಂಚಬೇಕು.
ಇನ್ನೊಂದು ಮಂತ್ರವನ್ನು ನೋಡೋಣ.
ಅಯುಕ್ತ ಸೂರ ಏತಶಂ ಪವಮಾನೋ ಮನಾವಧಿ |
ಅಂತರಿಕ್ಷೇಣ ಯಾತವೇ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೮]

ಪದಾರ್ಥ:
ಪವಮಾನಃ ಸೂರಃ = ಪವಿತ್ರಕಾರಕನಾದ ಪ್ರೇರಕನು
ಮನೌ ಅಧಿ = ಮಾನವ ಸಮಾಜದಲ್ಲಿ
ಅಂತರಿಕ್ಷೇಣ ಯಾತವೇ = ಆಂತರಿಕ ಮಾರ್ಗದಿಂದ ಹೋಗಲು
ಏತಶಮ್ = ಗತಿಸಾಧನವನ್ನು
ಅಯುಕ್ತ = ಹೊಂದಿಸಿಕೊಳ್ಳಬೇಕು
ಭಾವಾರ್ಥ :
ಇಲ್ಲಿ ವಿದ್ವಾಂಸರುಗಳಿಗೆ ವೇದವು ಕೊಡುವ ಕರೆಯನ್ನು ಗಮನಿಸ ಬೇಕು. ಒಬ್ಬ ವಿಚಾರಶೀಲನು ಪ್ರಾಪಂಚಿಕ ಜ್ಞಾನವನ್ನು ಜನರಿಗೆ ನೀಡುವುದರ ಜೊತೆಗೆ ಜನರು ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಏನಾದರೂ ಇನ್ನೊಬ್ಬರಿಗೆ  ಕೊಡಬೇಕಾದರೆ ಅವನಲ್ಲಿ ಅದು ಮೊದಲು ಇರಬೇಕು ತಾನೇ? ಇಲ್ಲದಿದ್ದುದನ್ನು ಕೊಡುವುದಾದರೂ ಹೇಗೆ? ಆದ್ದರಿಂದ ಪಂಡಿತನಾದವನು ಮೊದಲು ತಾನು ಆತ್ಮೋನ್ನತಿಯ ಮಾರ್ಗದಲ್ಲಿ ಸಾಧನೆಯನ್ನು ಮಾಡಿ ಉಳಿದ ಜನರಿಗೂ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಇಂದು ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪಡೆಯುತ್ತಿರುವ ವಿದ್ಯೆಯ ಪರಿಣಾಮ ಏನಾಗಿದೆ! ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡಬೇಡವೇ? ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ  ಮಗುವನ್ನು ಅದರ ಮೂರನೇ ವಯಸ್ಸಿನಲ್ಲಿಯೇ  ಎಲ್.ಕೆ.ಜಿ ಎಂಬ ತರಗತಿಗೆ ತಳ್ಳಲಾಗುತ್ತದೆ. ಆಗಿನಿಂದಲೇ ಅದರ ಸ್ವಾತಂತ್ರ್ಯ ಹರಣವಾಗುತ್ತದೆ. ಬಲವಂತದ ವಿದ್ಯೆ ತುಂಬಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಆ ಮಗುವಿಗೆ ವಿದ್ಯೆಯ ಹೆಸರಲ್ಲಿ ಅದಕ್ಕೆ ಇಚ್ಚೆ ಇರಲಿ ಬಿಡಲಿ ತುರುಕುತ್ತಾ ಅಂತೂ ಆ ಮಗು ಬೆಳೆದು ಒಬ್ಬ ವೈದ್ಯನೋ, ಸಾಫ್ಟ್ ವೇರ್ ಇಂಜಿನಿಯರೋ ಆದರೆ ಅಪ್ಪ-ಅಮ್ಮನ ಜನ್ಮ ಸಾರ್ಥಕ ಎಂದುಕೊಳ್ಳುತ್ತೇವೆ. ಆದರೆ ಸಾಮಾಜಿಕ ಕಾರ್ಯಕರ್ತನಾದ ನಾನು ಹಲವು ಮನೆಯಲ್ಲಿ ಅಪ್ಪ ಅಮ್ಮನ ಸಂಕಟವನ್ನೂ ಗಮನಿಸಿರುವೆ.
  ೨೫ ವರ್ಷ ವಯಸ್ಸಿನ ಮಗನ ನಡವಳಿಕೆ,ಸ್ವಭಾವ,ಮಾತುಕತೆ ಗಮನಿಸಿದಾಗ ಅಪ್ಪ-ಅಮ್ಮನಿಗೆ ಚಿಂತೆ ಶುರುವಾಗುತ್ತದೆ.ಯಾಕೋ ನನ್ನ ಮಗನ ನಡವಳಿಕೆಯೇ ವಿಚಿತ್ರವಾಗಿದೆಯಲ್ಲಾ! ಆಫೀಸ್‌ಗೆ ಹೋಗುತ್ತಾನೆ, ಮನೆಗೆ ಬಂದರೆ ಟಿ.ವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಬಿಟ್ಟರೆ ಅವನಿಗೆ ಪ್ರಪಂಚವೇ ಬೇಡವಾಗಿದೆಯಲ್ಲಾ! ಜೀವನದಲ್ಲಿ ಸ್ಪೂರ್ತಿಯೇ ಇಲ್ಲವಲ್ಲಾ! ಜೀವಂತಿಕೆಯೇ ಇಲ್ಲವಲ್ಲಾ!
ಈ ಪರಿಸ್ಥಿತಿ ಯಾರದೋ ಒಂದು ಮನೆಯದ್ದಲ್ಲ. ಬಹುಪಾಲು ತಂದೆತಾಯಿಯರ ಸಂಕಟ ಇದೇ ಆಗಿದೆ. ಯಾಕೆ ಹೀಗೆ? ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಮಗುವಿನೊಳಗಿನ ಚೈತನ್ಯವನ್ನು ಜಾಗೃತ ಮಾಡುವ ವ್ಯವಸ್ಥೆಯೇ ಇಲ್ಲ. ಮೇಲಿನಿಂದ ತುರುಕುತ್ತಾ ಇದ್ದೇವೆ, ಅಷ್ಟೆ. ಮೆಲಿನ ಒತ್ತಡಗಳ  ಪರಿಣಾಮ ಒಳಗಿನ ಚೈತನ್ಯವು ಕಮರಿ ಹೋಗುತ್ತಿದೆಯಲ್ಲಾ!!
ಇಂತಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನಮ್ಮ ಪಂಡಿತರನ್ನು[?] ವಿದ್ವಾಂಸರೆನಲು ಸಾಧ್ಯವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವರು ಯಾವ ಭಾಷಾಪಂಡಿತರೇ ಇರಲಿ, ವಿಜ್ಞಾನದ ಪಂಡಿತರೇ ಇರಲಿ ಅವರನ್ನು ವೇದದ ಆಶಯದಂತೆ ವಿದ್ವಾಂಸರೆಂದು ಕರೆಯಲು ಬಹುಪಾಲು ಜನರು  ಅರ್ಹರಲ್ಲ.
ಮೇಲಿನ ಮಂತ್ರಗಳಲ್ಲಿ ವಿದ್ವಾಂಸನ ಕರ್ತವ್ಯದ ಬಗ್ಗೆ ಸೂಚಿಸುತ್ತಲೇ ಇನ್ನೂ ಮುಂದುವರೆದಂತೆ ಕರ್ತವ್ಯದ ವ್ಯಾಪ್ತಿಯನ್ನು ಇನ್ನೂ ಹೆಚ್ಚುಗೊಳಿಸುವುದನ್ನು ಮುಂದಿನ ಮಂತ್ರದಲ್ಲಿ ನಾವು ತಿಳಿಯಬಹುದಾಗಿದೆ.
ಉತ ತ್ಯಾ ಹರಿತೋ ದಶ ಸೂರೋ ಆಯುಕ್ತ ಯಾತವೇ |
ಇಂದುರಿಂದ್ರ ಇತಿ ಬ್ರುವನ್ ||[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೯]

ಪದಾರ್ಥ:
ಸೂರಃ ಇಂದುಃ = ಪ್ರೇರಣಾದಾಯಕನಾದ ಕರುಣಾಮಯನು
ಇಂದ್ರಃ = ಭಾಗ್ಯಶಾಲಿಯಾಗಿ
ಉತ =ಮತ್ತು
ಇತಿ ಬ್ರುವನ್ = ಹೀಗೆಯೇ ಉಪದೇಶ ಮಾಡುತ್ತಾ
ಯಾತವೇ = ಮುಂದುವರೆಯುವುದಕ್ಕಾಗಿ
ತ್ಯಾ ದಶ ಹರಿತಃ = ಆ ಹತ್ತು ದಿಕ್ಕುಗಳಲ್ಲಿ ಇರುವ ಆಕರ್ಷಣೀಯ ಪ್ರಜೆಗಳನ್ನು
ಅಯುಕ್ತ = ನಿಯೋಜಿಸಬೇಕು
ಭಾವಾರ್ಥ :
ವಿಚಾರಶೀಲನಾದ ಮಾನವನು ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ದಯಾಮಯನೂ ಆಗಿರಬೇಕು. ಜನರಿಗೆ ಉಪದೇಶಮಾಡುತ್ತಾ ಹತ್ತು ದಿಕ್ಕುಗಳಲ್ಲೂ ವಾಸಿಸುವ ಪ್ರಜೆಗಳನ್ನು ಉನ್ನತಿಯ ಮಾರ್ಗದಲ್ಲಿ ನಿಯೋಜಿಸಬೇಕು.
ಜ್ಞಾನವನ್ನು ಪಡೆದಂತೆಲ್ಲಾ ಅವನ ಸಾಮಾಜಿಕಪ್ರಜ್ಞೆ ಹೇಗೆ ಹೆಚ್ಚುತ್ತಾ ಹೋಗಬೇಕೆಂಬುದಕ್ಕೆ ಈ ಮಂತ್ರದಲ್ಲಿ ನಿಖರವಾದ ಸಂದೇಶವಿದೆ.  ಒಬ್ಬ ವಿದ್ವಾಂಸನು ತನ್ನ ಪಾಂಡಿತ್ಯದಿಂದ ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ಆಗುವುದರ ಜೊತೆಗೆ ಅವನು  ದಯಾಮಯನೂ ಆಗಿರಬೇಕು, ಹಾಗೂ ಎಲ್ಲಾ ದಿಕ್ಕುಗಳಲ್ಲಿರುವ ಜನರಲ್ಲೂ ಆತ್ಮೋನ್ನತಿಗಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು  ಈ ಮಂತ್ರವು ವಿದ್ವಾಂಸರಿಗೆ ಕರೆಕೊಡುತ್ತದೆ.
-ಹರಿಹರಪುರಶ್ರೀಧರ್

Tuesday, January 13, 2015

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು    ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

ಸಾಮೂಹಿಕ ಅಗ್ನಿಹೋತ್ರಕ್ಕೆ ಪೂರ್ವ ಸಿದ್ಧತೆಯಾಗಿ ಹಾಸನದ ವೇದ ಭಾರತಿಯು ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಸುವ ಸತ್ಸಂಗದಲ್ಲಿ ಆನ್ ಲೈನ್ ನಲ್ಲಿ ಪಾಲ್ಗೊಳ್ಲಲು ಅವಕಾಶವಿದೆ.ಆಸಕ್ತರು vedasudhe@gmail.com ಗೆ ಮೇಲ್ ಕಳಿಸಿ ಮಾಹಿತಿ ಪಡೆಯಬಹುದು.




Friday, January 9, 2015

ಸಿರಿಭೂವಲಯ ಒಂದು ಖಚಿತವಾದ ಸರಳ ಪರಿಚಯ

 ಒಂದು ಖಚಿತವಾದ ಸರಳ ಪರಿಚಯ
ಗ್ರಂಥದ ಮೂಲ ವಾರಸುದಾರರು: ದೊಡ್ಡಬೆಲೆ ಧರಣೆಂದ್ರ ಪಂಡಿತರು
ಗ್ರಂಥ ಸಂರಕ್ಷಕರು:  ಪಂ. ಯಲ್ಲಪ್ಪ ಶಾಸ್ತ್ರಿ
ಗ್ರಂಥ ಸಂಶೋಧಕರು: ಕರ್ಲಮಂಗಲಂ ಶ್ರೀಕಂಠಯ್ಯ
ಗ್ರಂಥ ಪ್ರಚಾರಕರು: ಕೆ. ಅನಂತಸುಬ್ಬರಾಯ
ಅಕ್ಷರ ಆವೃತಿಯ ಮೊದಲ ಪ್ರಕಾಶಕರು: ಸರ್ವಾರ್ಥಸಿದ್ಧಿಸಂಘ ಬೆಂಗಳೂರು
ನಾಡಿನ ಹೆಸರಾಂತ ವಿದ್ವಾಂಸರ ಸಂಪಾದಕ ಮಂಡಳಿಯ ನೆರವಿನೊಂದಿಗೆ
ಭಾಗಶಃ ಪರಿಷ್ಕೃತ ಮರುಮುದ್ರಣ: ಪುಸ್ತಕಶಕ್ತಿಪ್ರಕಾಶನ ಬೆಂಗಳೂರು.
ಪ್ರಥಮಖಂಡದ ೫೯ ಅಧ್ಯಾಯಗಳ ಸರಳ ಪರಿಚಯಕಾರ: ಸಿರಿಭೂವಲಯದ ಸುಧಾರ್ಥಿ
ಸರಳ ಪರಿಚಯಕೃತಿಗಳ ಪ್ರಕಟಣೆ: ಶ್ರೀಮತಿ ಗಿರಿಜಾಶಂಕರ ಹಾಲುವಾಗಿಲು.
ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳಿರುವಜಾಗ:
ಗೂಗಲ್ಸ್, ವಿಕಿಪಿಡಿಯ ಸೇರಿದಂತೆ ಹಲವಾರು ಅಂತರ್ಜಾಲ ತಾಣಗಳು
ಸಿರಿಭೂವಲಯದ ಸಂಶೋಧನೆಯ ಮಾಹಿತಿಗಳಿಗೇ ಮೀಸಲಾದ ತಾಣ:
Siribhuuvalayasaa.blogspot.in
*   *   *
  ಆತ್ಮೀಯ ಕನ್ನಡಾಭಿಮಾನಿಗಳೇ.
  ಜಗತ್ತಿನ ಸಾಹಿತ್ಯಕ್ಷೇತ್ರದಲ್ಲಿ ಕನ್ನಡದವೇದ ಎಂದು ಪರಿಗಣಿಸಬೇಕಾದ ಸಿರಿಭೂವಲಯವನ್ನು ಕುರಿತಂತೆ ಈಗಾಗಲೇ ನಿಮಗೆ ಈ ಅಂತರ್ಜಾಲತಾಣದಲ್ಲಿ ಸಾಕಷ್ಟು ಮಾಹಿತಿಗಳನ್ನು ಒದಗಿಸಲಾಗಿದೆ. ಇದರೊಂದಿಗೆ ವಿವಿಧಮೂಲದಿಂದಲೂ  ನೀವು ಮಾಹಿತಿಗಳನ್ನು ತಿಳಿದಿರುವುದು ಸಹಜ.  ಪ್ರಾರಂಭದಿಂದಲೂ ಈ ಗ್ರಂಥದ ವಿಚಾರವಾಗಿ ಇಲ್ಲದ ಇತಿಹಾಸ ಸೃಷ್ಟಿಸುವ ದಿಸೆಯಲ್ಲಿ ಹಲವಾರು ಅಸಹಜ ಸಂಗತಿಗಳು ಪ್ರಚಾರವಾಗಿರುವುದರ ಕಾರಣ ಸಾಮಾನ್ಯ ಓದುಗರಿರಲೀ; ಈ ಅಚ್ಚರಿಯ ಕೃತಿಯನ್ನು ಕುರಿತು ಮುಂದೆ ಪ್ರಾಮಾಣಿಕವಾಗಿ ಸಂಶೋಧನೆ ಮಾಡಬಯಸುವ ಪ್ರತಿಭಾಶಾಲಿಗಳನ್ನೂ ದಿಕ್ಕುಗೆಡಿಸುವ ಗೊಂದಲದ ಮಾಹಿತಿಗಳು ಅಂತರ್ಜಲತಾಣದಲ್ಲಿ ವ್ಯಾಪಕವಾಗಿ ಬೆಳಕುಕಂಡವು.
   ವಿವೇಕಶಾಲಿಗಳ ಸಮಂಜಸವಾದ ತರ್ಕಕ್ಕೆ ಸಿಲುಕದಂತೆ ಅಂತೆ ಕಂತೆ ಗಳ ಅಡ್ಡಗೋಡೆಯಮೇಲಿನ ದೀಪದಂಥ ಅಲ್ಲಿನ ಮಾಹಿತಿಗಳಿಂದಾಗಿ ಯಾವುದನ್ನು ನಂಬುವುದು; ಯಾವುದನ್ನು ನಿರಾಕರಿಸುವುದು!? ಎಂಬುದೇ ಹಲವರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು! ಇದರೊಂದಿಗೆ ಜೈನ ಸಂಪ್ರದಾಯ ಹಾಗೂ ವೈದಿಕ ಸಂಪ್ರದಾಯಗಳ ನಡುವೆ ಬೆಳೆದುಬಂದಿರುವ ಶ್ರೇಷ್ಠತೆಯ ಮೇಲಾಟದಲ್ಲಿ ಈ ಕೃತಿಯು ಬಲಿಪಶುವಾಗಿತ್ತು. ಈ ಎರಡೂ ಸಂಪ್ರದಾಯದ ವಿದ್ವಾಂಸರೂ ತಮ್ಮದೇ ಆದ ಕಾರಣಗಳಿಂದಾಗಿ ಈ ಅಚ್ಚರಿಯ ಅಂಕಕಾವ್ಯವನ್ನು ಆಧುನಿಕ ಕನ್ನಡ ಸಾಹಿತ್ಯ ಪರಿಸರದಲ್ಲಿ ಸುಮಾರು ೬೦ ವರ್ಷಗಳಕಾಲ ಕತ್ತಲಕೋಣೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಸಿರಿಭೂವಲಯ ಎಲ್ಲಿದೆ? ಕುಮುದೇಂದು ಮುನಿಯಾರು? ಸಿರಿಭೂವಲಯದಲ್ಲಿ ಏನಿದೆ ಮಣ್ಣು? ಎಂದು ಪ್ರಶ್ನಿಸುತ್ತಿದ್ದ ವಿದ್ವಾಂಸರು ಈಗ ಪರಿತಪಿಸುವಂತಾಗಿದೆ!
   ಈಗ ಪರಿಸರ ಪೂರ್ಣ ಬದಲಾಗಿದೆ. ಕುಮುದೇಂದುಮುನಿಯ ಸಿರಿಭೂವಲಯಕ್ಕೆ ಸಂಬಂಧಿಸಿದ ಅಧಿಕೃತವಾದ ಖಚಿತ ಮಾಹಿತಿಗಳನ್ನು ಒಳಗೊಂಡಂತೆ ಪ್ರಥಮ ಖಂಡದ ಸರಳ ಪರಿಚಯ ರೂಪದಲ್ಲಿ ನಿರೂಪಿತವಾದ ಒಂಬತ್ತು ಕೃತಿಗಳು ಹಾಗೂ ಇವುಗಳ ಹಿಂದಿ ಹಾಗೂ ಆಂಗ್ಲಾಭಾಷೆಯ ಭಾವಾನುವಾದವು ಮೇಲೆ ಸೂಚಿಸಿದ ದಿಕ್ಕುಗೆಡಿಸುವ ಗೊಂದಲದ ಪರಿಸರವನ್ನು ಯಶಸ್ವಿಯಾಗಿ ಬದಲಿಸಿದೆ. (ಹಿಂದಿ ಭಾವಾನುವಾದ: ಶ್ರೀ ರಾಮಣ್ಣ ಹಾಸನ ; ಆಂಗ್ಲಾಭಾವಾನುವಾದ: ಶ್ರೀ ಕವಿ ಸುರೇಶ್ ಶಿವಮೊಗ್ಗ)  ಕಳೆದ ೩೦ ವರ್ಷಗಳಿಂದ ನಡೆದುಬಂದಿರುವ ನಿರಂತರವಾದ ಅಧ್ಯಯನವು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
 
  ಕುಮುದೇಂದುಮುನಿಯ ಸಿರಿಭೂವಲಯವು ಆಧುನಿಕ ವಿದ್ವಾಂಸರ ದೃಷ್ಟಿಯಲ್ಲಿ ಎಷ್ಟೇ ಅನಾದಣೆಗೆ ಗುರಿಯಾದರೂ ಇದು ಕನ್ನಡಭಾಷೆಯ ಮಾನಸ್ತಂಬ! ಕನ್ನಡಭಾಷೆಯ ಪ್ರಾಚೀನತೆ ಹಾಗೂ ಪ್ರಬುದ್ಧತೆಯನ್ನು ಪ್ರತಿಪಾದಿಸಲು ಇರುವ ಏಕೈಕ ಜೀವಂತ ದಾಖಲೆ!!

   ತನ್ನದೇ ಆದ ತಾಂತ್ರಿಕ ಕಾರಣದಿಂದಾಗಿ ಈ ಗ್ರಂಥವು ಓದುಗರಿಗೆ ಬಹಳ ಕಠಿಣವಾದ ಕಾವ್ಯವೆನಿಸಿದರೂ ಇದೊಂದು ಜಗತ್ತಿನ ಜ್ಞಾನಭಂಡಾರ. ಆಧುನಿಕ ವಿಜ್ಞಾನದ ಎಲ್ಲರೀತಿಯ ತಂತ್ರಜ್ಞಾನದ ಮಾಹಿತಿಯೂ ಇದರಲ್ಲಿ ಅಡಕವಾಗಿವೆ. ಯಾರೊಬ್ಬರೂ ನಾಶಪಡಿಸಲಾಗದ ೩೬೩ ಮತಧರ್ಮಗಳ ವಿವರಗಳು ಇದರಲ್ಲಿ ಸಮಾವೇಶವಾಗಿವೆ. ೧೨೦೦ ವರ್ಷಗಳ ಹಿಂದಿನ ಜಾಗತಿಕ ಪರಿಸರದಲ್ಲಿ ಪ್ರಚಲಿತವಿದ್ದ ೭೧೮ಭಾಷೆಗಳ ಸಾಹಿತ್ಯ ಸಾಗರವು ಈ ಗ್ರಂಥದಲ್ಲಿ ಅಡಕವಾಗಿದೆ. ಇದನ್ನು ಅಲ್ಲಗಳೆಯಲು ಈಗ ಯಾಗಿಗೂ ಸಾಧ್ಯವಿಲ್ಲವಾಗಿದೆ!

  ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ ಅಕ್ಷರಗಳಿಗೆ ಅನ್ವಯವಾಗುವ ೧ ರಿಂದ ೬೪ ಅಂಕಿಗಳನ್ನು ಉದ್ದಸಾಲು ೨೭ ; ಅಡ್ಡಸಾಲು ೨೭ ರಂತೆ ಒಂಟ್ಟು ೭೨೯ ಚೌಕಗಳಲ್ಲಿ ಸೂತ್ರಬದ್ಧವಾಗಿ ತುಂಬಿಸಿ ರಚಿಸಲಾಗಿರುವ  ಈ ಅಂಕಕಾವ್ಯವನ್ನು ಓದಲು ಸುಮಾರು ೪೦ ಬಂಧಗಳಿವೆ. ೬೦೦೦ ಸೂತ್ರಗಳನ್ನು ಬಳಸಿ ಈ ಅಂಕಕಾವ್ಯವನ್ನು ರಚಿಸಲಾಗಿದೆ. ನೂರುಸಾವಿರ ಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿರುವ  ೭೧೮ ಭಾಷೆಗಳಿಗೆ ಸೇರಿದ ಸಕಲ ಸಾಹಿಯ್ಯವನ್ನೂ ಒಳಗೊಂಡ ಈ ಕಾವ್ಯದ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಒಟ್ಟು ಸಂಖ್ಯೆ: ಆರುಲಕ್ಷ! ಇದರಲ್ಲಿ ೬೦೦೦ ಪ್ರಶ್ನೆಗಳಿಗೆ ಉತ್ತರವಿದೆಯೆಂದು ಕವಿಯು ಘೋಷಿಸಿದ್ದಾನೆ. ಕಾವ್ಯವು ೯ ಖಂಡಗಳಾಗಿ ವಿಂಗಡಣೆಯಾಗಿದೆ. ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳು ಇರುತ್ತವೆ. ಮಂಗಳಪ್ರಾಭೃತವೆಂದು ಹೆಸರಿರುವ ಪ್ರಥಮಖಂಡದಲ್ಲಿ ೫೯ ಅಧ್ಯಾಯಗಳಿವೆ.

  ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಸೀಮಿತ ಪರಿಧಿಯಲ್ಲಿ ಸಾಧ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿ, ಅಂತರ್ಸಾಹಿತ್ಯವನ್ನು ಬಿಡಿಸಿ; ೭ ಸರಳ ಪರಿಚಯಕೃತಿಗಳ ನಿರೂಪಣೆ ಮಾಡಿದ್ದಾಗಿದೆ. ಈಗ ಇವುಗಳ ಪೈಕಿ ಕೆಲವು ಲಭ್ಯವಿಲ್ಲ. ಇದನ್ನು ಗಮನಿಸಿ ಜನಸಾಮಾನ್ಯ ಓದುಗರ ಅಗತ್ಯಕ್ಕೆ ಬೇಕಾದ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸಿ ಜಗತ್ತಿನ ಹತ್ತನೇ ಅಚ್ಚರಿ ಎಂಬ ಪರಿಚಯಕೃತಿಯನ್ನು ರೂಪಿಸಲಾಗಿದೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಇದೊಂದು ಉಪಯುಕ್ತ ಕೈಪಿಡಿ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾಮಾನ್ಯ ಓದುಗರಿಗಾಗಿ ಸಂಕ್ಷಿಪ್ತ ಸಿರಿಭೂವಲಯ ಎಂಬ ಕಿರುಹೊತ್ತಿಗೆಯನ್ನೂ ಹೊರತರಲಾಗಿದೆ.  ಸಿರಿಭೂವಲಯದ ಅಂತರ್ಸಾಹಿತ್ಯದ ಮೂಲಕ ಹೆಚ್ಚಿನ ಸಂಶೋಧನೆ ಮಾಡುವ ಆಸಕ್ತಿ ಹೊಂದಿರುವವರು ಜಗತ್ತಿನ ಹತ್ತನೇ ಅಚ್ಚರಿಯೊಂದಿಗೆ ಸಿರಿಭೂವಲಯಸಾರ, ಸಿರಿಭೂವಲಯಸಾಗರರತ್ನಮಂಜೂಷ, ಸಿರಿಭೂವಲಯ ಸಾಗರರತ್ನಮಂಜೂಷ, ೨. ಇವುಗಳನ್ನು ಪೂರ್ಣವಾಗಿ ಗಮನಿಸುವುದು ಅಗತ್ಯವಾಗಿದೆ.

  ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದಲ್ಲಿ ದೊರೆತಿರುವ ಪ್ರಾಕೃತ; ಸಂಸ್ಕೃತ; ಕನ್ನಡ ಹಾಗೂ ಇತರ ಹಲವಾರು ಭಾಷೆಗಳ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಒಂದೆಡೆ ಸಂಗ್ರಹಿಸಿ; ಅವುಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಸಂಬಂಧಿಸಿದ ಭಾಷಾ ವಿಶಾರದರು ಆಸಕ್ತಿವಹಿಸಿ ಮಾಡಬೆಕಿದೆ.
 
  ಆತ್ಮೀಯ ಓದುಗರೇ, ಇದುವರೆವಿಗೂ ನೀವು ಈ ಜಗದ ಅಚ್ಚರಿಯೆನಿಸಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಸರಳ ಪರಿಚಯ ಕೃತಿಗಳಿಗೆ ಸಂಬಂಧಿಸಿದ ಪ್ರಮುಖವಾದ ಮಾಹಿತಿಗಳನ್ನು  ಓದಿ ತಿಳಿದಂತಾಯಿತು. ಈ ಕಾವ್ಯದಲ್ಲಿ ಕವಿಯು ಒಂದೆಡೆ ವಿದ್ಯೆಯನ್ನು ಕಲಿಯಲು ೧೨ ವರ್ಷಗಳಕಾಲ ಏಕೆ? ಇಲ್ಲಿ ಬನ್ನಿ ಒಂದು ಅಂತರ್ಮುಹೂರ್ತದಲ್ಲಿ (ಸುಮಾರು ೪೭ ನಿಮಿಷಗಳ ಅವಧಿ) ಎಲ್ಲವನ್ನೂ ತಿಳಿಸಿಕೊಡುತ್ತೇನೆ! ಎಂದು ಘೋಷಿಸಿರುವುದಿದೆ! ಜಗತ್ತಿನ ಜ್ಞಾನ ಸಾಗರದಲ್ಲಿ ಇದೊಂದು ಸವಾಲಾಗಿದೆ!
 
  ಪಂಡಿತರಿರಲೀ; ಪಾಮರರಿರಲೀ ಯಾರೊಬ್ಬರೂ ಈ ಮಾತನ್ನು ತಕ್ಷಣವೇ ಒಪ್ಪಿಕೊಳ್ಳ್ಳುವುದಿಲ್ಲವೆಂಬುದು ನಿಶ್ಚಯ!! ಈ ಜಗತ್ತಿನಲ್ಲಿ ವ್ಯಕ್ತಿಜೀವನದ ಸೂಕ್ಷ್ಮ ಮರ್ಮವನ್ನು ಅರಿತವರು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಾಧ್ಯ!! ಸಿರಿ; ಸಂಪತ್ತು; ಸೌಂದರ್ಯ, ಸಾಮರ್ಥ್ಯ, ಅಧಿಕಾರ, ಆರೋಗ್ಯ, ವಿದ್ಯೆ; ಬುದ್ಧಿ, ಮುಂತಾದುವು ಇಲ್ಲದೇ ಇಹಜೀವನದಲ್ಲಿ ಸಾರ್ಥಕತೆ ಸಿಗದೆಂಬುದು ಬಹುಜನರ ಭಾವನೆ! ಈ ಭಾವನೆಯು ಅರೆ ಸತ್ಯ; ಅರೆ ಮಿಥ್ಯ! ಇವುಗಳು ದೇಹಕ್ಕೆ ಬೇಕು; ಆತ್ಮಕ್ಕೆ ಬೇಡ!
 
  ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವನ್ನು ಹೊಂದುವುದೇ ನಿಜವಾದ ಜೀವನ ಸಾರ್ಥಕತೆಯಾಗಿದೆ. ಈ ಪರಿಚಯಕೃತಿಯನ್ನು ಓದಲು ನೀವು ತೆಗೆದುಕೊಳ್ಳುವ ಸಮಯವು ಎಷ್ಟೇ ಇರಲೀ; ನಿಮ್ಮ ಗ್ರಹಿಕೆಗೆ ಸಿಕ್ಕಿದ ವಿಚಾರಗಳನ್ನು ಕುರಿತು ನೀವು ಕೆಲವು ಸಮಯವಾದರೂ ಯೋಚಿಸಿದರೆ ನಿಮಗೆ ಕೂಡಲೇ ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವು ಅನುಭವಕ್ಕೆ ಬರುತ್ತದೆ. ಈ ಯೋಚನೆಯ ಅವಧಿಯು ನಿಜಕ್ಕೂ ೪೭ ನಿಮಿಷಗಳನ್ನು ಮೀರುವುದಿಲ್ಲ! ಇದು ನನ್ನ ಸ್ವಾನುಭವ. ಅಲ್ಲಿಗೆ ಕವಿವಾಣಿಯು ಸತ್ಯವೆಂದು ನನಗೆ ಖಚಿತವಾಯಿತು.! ನೀವೂ ಇದನ್ನು ಪರೀಕ್ಷಿಸಲು ಸ್ವತಂತ್ರರಿದ್ದೀರಿ!

  ವೈಯಕ್ತಿಕವಾಗಿ ನನಗೆ ಈ ಸತ್ಯದರ್ಶನವಾಗುವ ದಿಸೆಯಲ್ಲಿ ಕಾರಣವಾದ ಕುಮುದೇಂದು ಸಹಿತವಾದ ಸಕಲ ಪ್ರಾಚೀನ ಋಷಿ ಮುನಿಗಳಿಗೆ; ಸಿರಿಭೂವಲಯಕ್ಕೆ; ನನ್ನನ್ನು ಈ ಸಿರಿಭೂವಲಯದ ಪರಿಧಿಗೆ ಒತ್ತಾಯ ಪೂರ್ವಕವಾಗಿ ಸೇರಿಸಿದ ಹಿರಿಯ ಚೇತನ ದಿ| ಕೆ. ಅನಂತ ಸುಬ್ಬರಾಯರಿಗೆ, ಅಧ್ಯಯನಕ್ಕೆ ನೆರವಾಗಿ; ಈ ಸಂಬಂಧದ ನನ್ನ ಬರಹವನ್ನು ಪ್ರಕಟಿಸುವ ಊಹಾತೀತವಾದ ಕಾರ್ಯಕ್ಕೆ ಕೈಹಾಕಿ ಯಶಸ್ಸುಗಳಿಸಿದ ನನ್ನಾಕೆ ಸೌ|| ಗಿರಿಜೆಗೆ; ಈ ಫಲವನ್ನು ಸಾರ್ಥಕ ಪಡಿಸಿಕೊಳ್ಳ್ಳುವ ಉತ್ಸಾಹ ತೋರಿಸಿರುವ ಅಭಿಮಾನೀ ಓದುಗರಿಗೆ ಸಿರಿಭೂವಲಯದ ಸುಧಾರ್ಥಿಯ ನಮನಗಳು.

   ಸಿರಿಭೂವಲಯವು ಇದುವರೆವಿಗೂ ಕೇವಲ ಕೆಲವೇ ಜನಗಳ ಆಸಕ್ತಿಯ ವಿಚಾರವಾಗಿತ್ತು. ಈಗ ಪಸರಿಸರವು ಸಂಪೂರ್ಣವಾಗಿ ಬದಲಾಗಿದೆ! ವೈದ್ಯಕೀಯ; ವಿದ್ಯುತ್, ಗಣಕಯಂತ್ರಕ್ರಮ; ಗಣಿತಶಾಸ್ತ್ರ ಮುಂತಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳ ಪದವಿ ಪಡೆದ ಪ್ರತಿಭಾಶಾಲಿ  ಯುವ ಸಮೂಹವು ಈಗ ಈ ಜಗದ ಅಚ್ಚರಿಯತ್ತ ಗಮನಹರಿಸಿ; ಮುಂದಿನ ಸಂಶೋಧನೆಗೆ ಅಗತ್ಯವಾದ ಸಿದ್ಧತೆಗೆ ಮುಂದಾಗಿದೆ! ಈ ಪೈಕಿ ಕಾರ್ಕಳದ ಸಮೀಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹೇಮಂತ ಕುಮಾರ್ ಹಾಗೂ ಮಿತ್ರರ ತಂಡವು ವಹಿಸಿರುವ ಆಸಕ್ತಿಯು ಬಹಳ ಸಂತೋಷದಾಯಕವಾದುದು. ಇವರ ಪ್ರಯತ್ನದಿಂದ ಈ ಪ್ರಾಚೀನ ಕನ್ನಡ ಅಂಕ ಕಾವ್ಯದ ಊಹಾತೀತವಾದ ಸಾಮರ್ಥ್ಯದ ಪರಿಚಯವು ಜಗತ್ತಿನಾದ್ಯಂತ ವಿದ್ವಜ್ಜನರ ಗಮನಸೆಳೆದು; ಕವಿ ಕುಮುದೇಂದುವಿನ ಸರ್ವಜ್ಞತ್ವವು ಲೋಕವಿದಿತವಾಗುವುದು ನಿಶ್ಚಿತವೆಂದು ಭಾವಿಸಿದ್ದೇನೆ.  ಸಿರಿಭೂವಲಯದ ವಿಸ್ತ್ರುತ ಪರಿಚಯಕೃತಿ  ಜಗತ್ತಿನ ಹತ್ತನೇ ಅಚ್ಚರಿ ಹಾಗೂ ಸಂಕ್ಷಿಪ್ತ ಸಿರಿಭೂವಲಯವು ಮುಂದಿನ ಸಂಕ್ರಾತಿಯ ವೇಳೆಗೆ ಓದುಗರ ಕೈಸೇರಲಿದೆಯೆಂದು ತಿಳಿಸಲು ಸಂತೋಷಿಸುತ್ತೇನೆ.
                                             ಸಿರಿಭೂವಲಯದ ಸುಧಾರ್ಥಿ.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿರಿ: ೯೪೪೯೯೪೬೨೮೦, ೦೮೧೭೨ ೨೫೭೧೮೬.
ಮಿಂಚಂಚೆ: sudharthyhassan@gmail.com

Wednesday, January 7, 2015

ವಿಶ್ವದ ಅಭ್ಯುದಯಕ್ಕಾಗಿ ವೇದ"

ಇಷ್ಟಂತೂ ಸತ್ಯ. ನಮ್ಮ ದೇಶದಲ್ಲಿ ವೇದವನ್ನು ಎಲ್ಲದಕ್ಕೂ ಆಧಾರವೆಂದು ಹೇಳುತ್ತಲೇ ನೂರಾರು ದಾರ್ಶನಿಕರು ಅವರು ಕಂಡ   ಸತ್ಯವನ್ನು ಪ್ರತಿಪಾದಿಸುತ್ತಾ ಅಂತೂ ಇಂತೂ ವೇದದ ಸುತ್ತ ಮುತ್ತವೇ ಸುತ್ತುತ್ತಾ,  ವೇದದ ವಿರುದ್ಧವಾಗಿಯೂ ನಡೆಯುತ್ತಾ ನಮ್ಮ ಋಷಿಮುನಿಗಳು ಕೊಟ್ಟ   ವಿಚಾರವನ್ನು ಅವರಿಗೆ ತೋಚಿದ  ರೀತಿಯಲ್ಲಿ ಉಳಿಸಿದರು.  ಉಳಿಸಿದರೆನ್ನುವುದಕ್ಕಿಂತಲೂ  ವೇದವು ಅದರ ಗಟ್ಟಿತನದಿಂದ ಉಳಿದಿದೆ. ಇನ್ನು ಮುಂದೆಯೂ ಉಳಿಯುತ್ತದೆ.ಕಾರಣ  ಅದು ಸಾರ್ವಕಾಲಿಕ ಸತ್ಯ. ಶಂಕರ,ಮಧ್ವ,ರಾಮಾನುಜ,ಬಸವಣ್ಣ, ಬುದ್ಧ,ಮಹಾವೀರ, ಗುರುನಾನಕ್ ಅಲ್ಲದೆ ಇತ್ತೀಚಿನ ವಿವೇಕಾನಂದ, ಡಾ.ಅಂಬೇಡ್ಕರ್ ವರಗೆ ಎಲ್ಲರೂ ಕೊಟ್ಟ ವಿಚಾರಗಳು ನಶಿಸಿದರೂ ವೇದವು  ನಶಿಸಲು ಸಾಧ್ಯವೇ ಇಲ್ಲ.ಕಾರಣ ಅದು ಸಾರ್ವಕಾಲಿಕ, ಸಾರ್ವಭೌಮ, ಸಾರ್ವತ್ರಿಕ ಮತ್ತು ಸಾರ್ವದೇಶಿಕ. ಹಿಂದುಗಳಿಗೆ ಮಾತ್ರ ವೇದ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆ ಇದೆ. ಆದರೆ ವೇದವು ಸಕಲ ಮಾನವರಿಗಾಗಿ ಇದೆ.ಅದನ್ನು ಮರೆತಿರುವ ಪರಿಣಾಮವೇ ಈಗಿನ ಭಯೋತ್ಪಾದನೆ, ಮತೀಯ ಕಲಹ...ಎಲ್ಲವೂ ಕೂಡ. ಇವೆಲ್ಲ ಸಂಘರ್ಷಗಳಿಗೂ ಪರಿಹಾರ ಸಿಗಲು  ಮತ್ತೆ ವೇದವೇ ಗತಿ. ನಮ್ಮ ವೇದ ಪಂಡಿತರು ಕೇವಲ ಪೂಜೆ-ಪುನಸ್ಕಾರಗಳು, ಹವನ ಹೋಮಗಳು, ಶ್ರಾದ್ಧಕರ್ಮಗಳು, ವ್ರತ ಕತೆಗಳಿಗೆ ಸೀಮಿತವಾಗದೆ ವೇದದ ಒಳಹೊಕ್ಕಿ ನೋಡುವ ಕಾಲ ಬಂದಿದೆ. ಆ ಕೆಲಸ ಎಷ್ಟು ಬೇಗ ಶುರುವಾಗುತ್ತದೋ ಅಷ್ಟು ಬೇಗ ಇಡೀ ವಿಶ್ವದ ಅಭ್ಯುದಯಕ್ಕೆ     ಅಗತ್ಯವಾದ ಎಲ್ಲಾ ಮಾರ್ಗದರ್ಶನವೂ ಸಿಗುವುದರಲ್ಲಿ ಸಂಶಯವಿಲ್ಲ. ಈಗ ವೇದ ವಿದ್ವಾಂಸರನ್ನು ಎಚ್ಚರಿಸುವವರು ಬೇಕಾಗಿದ್ದಾರೆ. ಮೋದಿಯವರ ಸರ್ಕಾರವೂ ಕೂಡ  ಈ ಬಗ್ಗೆ ಚಿಂತನೆ ನಡೆಸಬೇಕು." ವಿಶ್ವದ ಅಭ್ಯುದಯಕ್ಕಾಗಿ ವೇದ"  ಗುರಿಯೊಡನೆ  ರಭಸದ ಕೆಲಸವಾಗಬೇಕು. ನನಗೆಲ್ಲೋ ಹುಚ್ಚು ಅಂತೀರಾ? ಪರವಾಗಿಲ್ಲ. ಈ ಹುಚ್ಚನ್ನು ವಿದ್ವಾಂಸರಿಗೆ ಹಿಡಿಸುವ ಕೆಲಸವನ್ನು ಮಾಡಿ.

Tuesday, January 6, 2015

ಹಾಸನ ವೇದಭಾರತೀ,ಸಹಕಾರದೊಡನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಒಂದು ಸಾವಿರ ಜನರ ಸಾಮೂಹಿಕ ಅಗ್ನಿಹೋತ್ರ




ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು    ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

ನೀನು ನನ್ನೊಳಗೇ ಇದ್ದೀಯ

ಭಗವಂತನೆಂಬುವನು ಒಬ್ಬನೇ. ಅದೂ ಕೂಡ ಒಂದು ಶಕ್ತಿಯ ರೂಪದಲ್ಲಿ. ಅವನು   ಗಂಡೂ ಅಲ್ಲ.ಹೆಣ್ಣೂ ಅಲ್ಲ. ಆದರೂ ಭಗವಂತನನ್ನು ಪುಲ್ಲಿಂಗ ರೂಪದಲ್ಲಿ ಕರೆಯುವುದು ರೂಢಿಯಲ್ಲಿ ಬಂದಿದೆ.  ಅವನಿಗೆ  ದೇಹವೇ ಇಲ್ಲ. ಅದೊಂದು ಶಕ್ತಿ -ವಿದ್ಯುತ್  ಇದ್ದಂತೆ. ವಿದ್ಯುತ್ ಗೆ ಆಕಾರ ಹೇಗಿರಲು ಸಾಧ್ಯ?  ಕಣ್ಣಿಗೆ  ಕಾಣುವ ಮೋಟಾರ್,ಜನರೇಟರ್, ವಿದ್ಯುತ್ ದೀಪಗಳನ್ನೇ  ವಿದ್ಯುತ್ ಎಂದು ಕರೆದರೆ ಸರಿಯೇ? ವಿದ್ಯುತ್ ಪ್ರಭಾವದಿಂದ ಓಡುವ ಮೋಟಾರ್ ನ್ನು  ನೋಡಬಹುದೇ ಹೊರತೂ ವಿದ್ಯುತ್ ನ್ನು ನೋಡಲು ಸಾಧ್ಯವಿಲ್ಲ. ಅಲ್ಲವೇ?
ಹಾಗೆಯೇ ಭಗವಚ್ಛಕ್ತಿ ಕೂಡ. ಅವನ ನಿಯಂತ್ರಣಕ್ಕೊಳಪಟ್ಟ ಜಗತ್ತನ್ನು ಕಾಣಬಹುದೇ ಹೊರತೂ ಅವನನ್ನು ನೋಡಲು ಸಾಧ್ಯವೇ ಇಲ್ಲ.  ನಮಗೆ    ಶರೀರವಿದೆ. ಅದರ ಚಿತ್ರವನ್ನೂ ಬರೆಯಬಹುದು. ಆದರೆ ಇಲ್ಲದ ಶರೀರದ ಚಿತ್ರ ಬರೆಯುವುದಾದರೂ ಹೇಗೆ? ಆದರೂ ಭಗವಂತನ ಹಲವಾರು ಕ್ರಿಯೆಗಳನ್ನು ಬಿಂಬಿಸುವ ರೂಪವನ್ನು ಕಲ್ಪಿಸಿ  ವಿಗ್ರಹಗಳನ್ನು ಶಿಲ್ಪಿಯೊಬ್ಬ ಕೆತ್ತಿದ. ವಿದ್ವಾಂಸನೊಬ್ಬ ಭಗವಂತನ ಲೀಲಾ ಪ್ರಸಂಗಗಳನ್ನು ಸ್ತೋತ್ರ ರೂಪದಲ್ಲಿ ಬರೆದ. ಆ ವಿಚಿತ್ರ ಶಕ್ತಿಯನ್ನು ಆರಾಧಿಸಿದ.ಆ ಪರಂಪರೆ ಮುಂದುವರೆಸಿದ. ಎಲ್ಲಿಯವರೆಗೆ ವಿಗ್ರಹಗಳು ಬಂದು ತಲುಪಿದೆಯೆಂದರೆ ಕ್ರಿಕೆಟ್ ಆಡುವ ಗಣಪನ ಮೂರ್ತಿಯನ್ನೂ ಸಹ ಇಂದು ಕಾಣಬಹುದು.ಕ್ರಿಕೆಟ್ ಗಣಪನಿಗೆ ಅಭಿಶೇಕ, ನೈವೇದ್ಯ, ಮಂಗಳಾರತಿ…ಎಲ್ಲವೂ ನಡೆಯುತ್ತವೆ!!!
ವೇದವು  ಸಾಮಾನ್ಯ  ಜನರಿಗೆ ಅರ್ಥವಾಗುವುದಿಲ್ಲ-ಎಂಬ ಸಬೂಬು ಹೇಳಿ ಪಂಡಿತರುಗಳೇ  ಕತೆಗಳನ್ನು ಕಟ್ಟಿ ವಿಗ್ರಹಾರಾಧನೆಯನ್ನು ವೈಭವೀಕರಿಸಿದರು. ಮನುಷ್ಯನ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಮಾಹಿತಿಗಳು ವೇದದಲ್ಲಿರುವುದನ್ನು ಸಾಮಾನ್ಯ ಜನರಿಗೆ ಪರಿಚಯಿಸಲೆ ಇಲ್ಲ! ಬದಲಿಗೆ ಭಗವಂತನ ಸ್ತೋತ್ರಗಳನ್ನು ಹೇಳುವ , ಅವನ ಹೆಸರಲ್ಲಿ ಸಹಸ್ರನಾಮಗಳನ್ನು ಪಠಿಸುವ ಪದ್ದತಿಗಳನ್ನು ಹುಟ್ಟುಹಾಕಿದರು. ನಾನೊಮ್ಮೆ ಚಿನ್ಮಯಾ ಮಿಷನ್ನಿನ ಆಶ್ರಮ ಒಂದಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುವಾಗ ಹೇಳುವ ಚಿನ್ಮಯಾನಂದರ ಸಹಸ್ರನಾಮ ಕೇಳಿ ಅಚ್ಚರಿ ಗೊಂಡೆ.ಸಹಸ್ರನಾಮ ದಲ್ಲಿ ಒಂದು ನಾಮ ಏನು ಗೊತ್ತೆ? “ ಓಂ ಆಂಗ್ಲಭಾಷಾಪ್ರವೀಣಾಯೈ ನಮಃ” ಈ ಸಹಸ್ರನಾಮ ಅರ್ಚನೆ ಕೇಳಿದಾಗ ನಗು ಬರುವುದಿಲ್ಲವೇ? ಚಿನ್ಮಯಾನಂದರು ಭಗವದ್ಗೀತೆಯ ಸಾರವನ್ನು ಪ್ರಚುರಪಡಿಸುತ್ತಾ ಹೋದರೆ ಅವರ ಅನುಯಾಯಿಗಳು ಚಿನ್ಮಯ ಸಹಸ್ರನಾಮ ಪ್ರಚುರಪಡಿಸುತ್ತಿದ್ದಾರಲ್ಲಾ!!
ಹಿಂದುಗಳನ್ನು ನೋಡಿ ನೋಡಿ ಇತ್ತೀಚೆಗೆ ಕ್ರೈಸ್ತರೂ ಶುರುಮಾಡಿದರು “ ಜೀಸಸ್ ಸಹಸ್ರನಾಮ” ಹೀಗೆಯೇ ಮುಂದುವರೆದರೆ ಎಲ್ಲಾ ರಾಜಕೀಯ ನಾಯಕರು, ಸಿನೆಮಾ ನಟರುಗಳ ಸಹಸ್ರನಾಮ ಬರಲು ಕಾಲ ದೂರವಿಲ್ಲ.
ಇದೇನು! ಭಗವಂತನ ವಿಚಾರದಲ್ಲಿ ಹುಡುಕುವ ನಮ್ಮ ದಿಕ್ಕು ಸರಿ ಇದೆಯೇ? ಹೀಗೊಂದು ಚಿಂತನೆ ನನ್ನ ಮನದಲ್ಲಿ ಹೊಕ್ಕಾಗ….
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ
ಯಾವ ಮಂತ್ರವ ಹೇಳಿ
ನಿನ್ನ ಮೆಚ್ಚಿಸಲಿ?
ಭಗವಂತನನ್ನು  ಹುಡುಕುತ್ತಾ ಹೊರಟಾಗ ಬಂದ ಪ್ರಶ್ನೆಗಳು. “ಭಗವಂತಾ, ನಿನ್ನನ್ನು ಎಲ್ಲಿ ಹುಡುಕಲಿ? ಎಲ್ಲಿದ್ದೀಯಾ ನೀನು? ನಿನ್ನನ್ನು ನಾನು ಹೇಗೆ ಆರಾಧಿಸಲಿ? ಯಾವ ಮಂತ್ರವನ್ನು ಹೇಳಿ ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ನನ್ನ ಹುಚ್ಚುತನ ನೋಡು.ನಾನು ಸ್ನಾನ ಮಾಡುವುದು ಅನಿವಾರ್ಯ. ಆದರೆ ನಿನಗೂ ಮಾಡಿಸುವ ಭ್ರಮೆ ನನ್ನದು. ನಿತ್ಯಶುದ್ಧನಾದ ನಿನಗೆ ಮಡಿಯ ಮಾಡಿಸುವ ಭ್ರಮೆ ನನ್ನದು!! ನಾನು ಹಸಿವಿನಿಂದ ಇದ್ದು ನಿನಗೆ ನೈವೇದ್ಯ ಮಾಡುವ ಹುಚ್ಚು ನನಗೆ! ನಿನಗೆಲ್ಲಿಯ ಹಸಿವು? ನಿನಗೆ ನಾನು ತಿನ್ನಿಸಿಯಾಯ್ತೇ?

ಕಣ್ಮುಚ್ಚಿ ಕುಳಿತಿರುವ ನಿನ್ನ
ದೇಗುಲದೀ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಭಗವಂತಾ, ಕಣ್ಣು ಮುಚ್ಚಿ ಕುಳಿತಿರುವ ನಿನ್ನ ವಿಗ್ರಹವನ್ನೇ ನೋಡಿ ಭ್ರಮಿಸಿದ ನನಗೆ ನಿನ್ನ ಪ್ರತ್ಯಕ್ಷ ದರ್ಶನ ಆಗಲೆ ಇಲ್ಲವಲ್ಲಾ! ಹೇಳು ಎಲ್ಲಿದ್ದೀಯಾ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಜಗತ್ತಿಗೆಲ್ಲಾ ಬೆಳಕು ಕೊಡುವ ನೀನು ಸ್ವಯಂ ಪ್ರಕಾಶ. ನಿನ್ನನ್ನು ಪುಟ್ಟ ಹಣತೆಯ ಬೆಳಕಿನಲ್ಲಿ ಹುಡುಕುವ ನನ್ನ ಹುಚ್ಚುತನಕ್ಕೆ ಏನು ಹೇಳಲಿ? ಜಗತ್ತೆಲ್ಲವನ್ನೂ ರಕ್ಷಿಸುವವನೇ ನೀನು, ನಿನಗೊಂದು ಗುಡಿ ಕಟ್ಟಿಸುವ ನನ್ನ ಹುಚ್ಚುತನ ನೋಡು. ನನ್ನ ಸಂತೋಷಕ್ಕೆ ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು.ಆದರೆ ನಾನು ಹೇಳುವುದು ನಿನ್ನ ಹೆಸರನ್ನು! ನಿನಗೆ  ಮನೆ ಇಲ್ಲವಂತೆ! ಅದಕ್ಕೆ ಗುಡಿ ಕಟ್ಟಿಸಬೇಕಂತೆ!!

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ
ಅಹುದೇ ದೇವ ತೋರು
ನಿನ್ನರೂಪ|

ಎಲ್ಲೆಲ್ಲೂ ಇರುವ ನಿನ್ನ   ನಿಜವಾದ ರೂಪವನ್ನು ನೋಡುವ ನನ್ನ ಹುಚ್ಚು ಆಸೆ ನೋಡು ಹೇಗಿದೆ? ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ನಿನ್ನನ್ನು ನಾನು ನೋಡುವುದಾದರೂ ಹೇಗೆ? ಒಂದು ವೇಳೆ ನಾನು ನೋಡುತ್ತಿದ್ದೇನೆಂದರೂ  ಆ ನೋಡುತ್ತಿರುವ ಕಣ್ಣಿನಲ್ಲೂ ನೀನೇ ಇದ್ದೀಯಲ್ಲಾ!  ಆ ನಿನ್ನನ್ನು ನಾನು ಹೇಗೆ ನೋಡಲಿ?

ನನ್ನೊಳಗೆ ಇರುವ
ನಿನ್ನ ಮರೆತೂ ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?

ಕೊನೆಯಲ್ಲಿ ನನಗೆ  ನಿನ್ನ ಬಗ್ಗೆ  ಸ್ವಲ್ಪ ಅರಿವುಂಟಾಗುತ್ತಿದೆ. . ನನ್ನಲ್ಲಿರುವ ನಿನ್ನನ್ನು ನಾನು ಮರೆತು ಎಲ್ಲೆಲ್ಲೋ ಹುಡುಕುತ್ತಿದ್ದೀನಲ್ಲಾ! ನನ್ನನ್ನು ಕ್ಷಮಿಸು ದೇವ. ನಿನ್ನ ಅನುಭವ ನನಗೆ ಮಾಡಿಬಿಡು ಸಾಕು. ನಿನ್ನ ರೂಪವನ್ನು ನೋಡುವ ಭ್ರಮೆಯನ್ನು ತೊರೆದುಬಿಡುವೆ.


ಇದೆಲ್ಲಾ ಓದಿದ ಮೇಲೆ ಇವನೊಬ್ಬ ಆರ್ಯಸಮಾಜಿ ಇವನು ವಿಗ್ರಹಾರಾಧನೆ ವಿರೋಧಿಸುತ್ತಾನೆ, ಎಂಬ ಭ್ರಮೆಗೆ ನೀವು ಬಂದರೆ ಅದು ನನ್ನ ತಪ್ಪಲ್ಲ. ಇದು ನನ್ನೊಳಗಿನ ಮಾತು. ಮ್ಕನುಷ್ಯನ ಆತ್ಮೋದ್ಧಾರಕ್ಕೆ ಅಗತ್ಯವಾಗಿರುವುದು  ಭಗವಂತನ ಸರ್ವವ್ಯಾಪಕತೆಯ ಬಗ್ಗೆ  ಬಲವಾದ ನಂಬಿಕೆ ಹೊರತೂ ಅವನನ್ನು ಸಂಕುಚಿತಗೊಳಿಸಿ ಅದಕ್ಕೊಂದು ಬಣ್ಣ ಕಟ್ಟುವುದಲ್ಲ. ಭಗವಂತನ ಈ ಭವ್ಯ ಸ್ಥಿತಿಯನ್ನು ಒಪ್ಪಿಅವನ ಗುಣಗಳನ್ನುನಮ್ಮದಾಗಿ ಮಾಡಿಕೊಳ್ಳುವುದೊಂದೇ ನಮ್ಮ ಆತ್ಮೋದ್ಧಾರಕ್ಕೆ ಇರುವ ಮಾರ್ಗ.

ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
http://sridhar.vedasudhe.com/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%a1%e0%b3%81%e0%b2%95%e0%b2%b2%e0%b2%bf-%e0%b2%a8%e0%b2%bf%e0%b2%a8%e0%b3%8d%e0%b2%a8/

Sunday, January 4, 2015

ವಾಸ್ತು ಹಿಂದಿರುವ ವಿಜ್ಞಾನ

ವೇದಭಾರತಿಯ ಸತ್ಸಂಗದಲ್ಲಿ ಡಾ. ಜೆಸ್ಸಿ(ಮಾಯಾ) ಜೆ. ಮರ್ಸೆ ನೀಡಿದ ಉಪನ್ಯಾಸ
     ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ,  ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ ಸಂಸ್ಥೆಗಳಿಗೆ ಸಲಹಾಕಾರರಾಗಿಯೂ ಹೆಸರು ಮಾಡಿದ್ದ ಅವರು ವಾಸ್ತುವ್ಯಾಸ ಡಾ. ಗಣಪತಿ ಸ್ಥಪತಿಯವರ ಶಿಷ್ಯೆಯಾಗಿ ವಾಸ್ತುಶಾಸ್ತ್ರದಲ್ಲಿ ಪರಿಣಿತಿ ಗಳಿಸಿದವರು. ಈ ವಿಷಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ಈಗ ಮೇಲೆ ತಿಳಿಸಿದ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಿತ್ರ ಹರಿಹರಪುರ ಶ್ರೀಧರರೊಂದಿಗೆ ಆಗಾಗ್ಗೆ ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದರು. ಪಂ. ಸುಧಾಕರ ಚತುರ್ವೇದಿ ಮತ್ತು ವೇದಾಧ್ಯಾಯಿ ಸುಧಾಕರ ಶರ್ಮರವರೊಂದಿಗೆ ಭೇಟಿಗೂ ಶ್ರೀಧರ್ ಸ್ವತಃ ವ್ಯವಸ್ಥೆ ಮಾಡಿದ್ದರು. ಅವಕಾಶವಾದಾಗ ಹಾಸನಕ್ಕೂ ಬರಲು ಅವರು ಆಹ್ವಾನಿಸಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ ಅವರು ೨.೧.೨೦೧೫ ರಂದು ಹಾಸನದ ವೇದಭಾರತಿಯ ಸತ್ಸಂಗಕ್ಕೂ ಬರುವುದಾಗಿ ತಿಳಿಸಿ ಅದರಂತೆ ಬಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆಗಳು, ಸೆಮಿನಾರುಗಳಲ್ಲಿ ಭಾಗವಹಿಸಿ ವಿದ್ವತ್ ಪೂರ್ಣ ವಿಚಾರ ಮಂಡಿಸುವ ಅವರು ಹಾಸನದಲ್ಲಿ ನಡೆಯುವ ಸತ್ಸಂಗಕ್ಕೂ ಅದೇ ಮಹತ್ವ ನೀಡಿ ಬಂದದ್ದು ವಿಶೇಷವೇ ಸರಿ. ದೊಡ್ಡವರು ದೊಡ್ಡವರಾಗಿಯೇ ಇರುತ್ತಾರೆ, ಸಣ್ಣ ವಿಷಯಕ್ಕೂ ಮಹತ್ವ ನೀಡುವುದರಿಂದಲೇ ಅವರು ದೊಡ್ಡವರಾಗುತ್ತಾರೆ ಎಂಬುದು ಇಲ್ಲಿ ವೇದ್ಯವಾಯಿತು.
     ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಬಂದ ಅವರು ಸೀರೆ ಉಡಲು ಬಾರದಿದ್ದರೂ ಕಷ್ಟಪಟ್ಟು ಸೀರೆ ಧರಿಸಿ ಬಂದಿದ್ದರು. ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿನಾಗರಾಜರು ಡಾ. ಜೆಸ್ಸಿಯವರ ಪರಿಚಯವನ್ನು ಸತ್ಸಂಗದಲ್ಲಿ ಹಾಜರಿದ್ದ ವೇದಾಸಕ್ತರು ಮತ್ತು ವೇದಾಧ್ಯಾಯಿಗಳಿಗೆ ಮಾಡಿಕೊಟ್ಟದ್ದಲ್ಲದೆ, ಸತ್ಸಂಗದಲ್ಲಿ ಪ್ರತಿನಿತ್ಯ ಮಾಡಲಾಗುವ ಅಗ್ನಿಹೋತ್ರದ ವಿವರ, ಮಹತ್ವಗಳನ್ನು ಡಾ. ಜೆಸ್ಸಿ ಮತ್ತು ಅವರ ಸಂಗಡಿಗರಿಗೆ ವಿವರಿಸಿದರು. ಅಗ್ನಿಹೋತ್ರ ಮತ್ತು ಎರಡು ಭಜನೆಗಳ ನಂತರದಲ್ಲಿ ಡಾ. ಜೆಸ್ಸಿಯವರನ್ನು ಮಾತನಾಡಲು ಕೋರಲಾಯಿತು. ವಾಸ್ತು ಹಿಂದಿರುವ ವಿಜ್ಞಾನ ಎಂಬ ವಿಷಯದಲ್ಲಿ ಅವರು ಮಾತನಾಡಿದ್ದು, ಅವರು ಪ್ರಸ್ತಾಪಿಸಿದ ಸಂಗತಿಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ತಿಳಿಸುವ ಪ್ರಯತ್ನ ಇಲ್ಲಿ ಮಾಡಿದೆ. (ಡಾ.ಜೆಸ್ಸಿಯವರ ಇಂಗ್ಲಿಷ್ ಉಚ್ಛಾರಣೆ ನಮ್ಮ ಇಂಗ್ಲಿಷಿನಂತೆ ಅಲ್ಲವಾದ್ದರಿಂದ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ತಿಳಿಸಿರುವುದರಲ್ಲಿ ಏನಾದರೂ ತಪ್ಪಿದ್ದರೆ ಅದು ಡಾ. ಜೆಸ್ಸಿಯವರ ತಪ್ಪಲ್ಲ, ಈ ಲೇಖಕನದು.) 
ವಾಸ್ತು ಹಿಂದಿರುವ ವಿಜ್ಞಾನ
     ಋಗ್ವೇದದ ಮೊದಲನೆಯ ಮಂತ್ರ ಅಗ್ನಿಮೀಳೇ ಪುರೋಹಿತಮ್ . . ಸಮರ್ಪಣಾ ಮನೋಭಾವವನ್ನು ಹೊಂದಲು ಹೇಳುತ್ತದೆ. ಈ ತ್ಯಾಗ ಮನೋಭಾವದಿಂದ ಮಾಡುವ ಕೆಲಸಗಳು ಸತ್ಪ್ರಭಾವ ಬೀರುತ್ತವೆ. ಈಗ ಅಗ್ನಿಹೋತ್ರ ಮಾಡಿದಿರಿ. ಅಗ್ನಿಹೋತ್ರದ ಜ್ವಾಲೆ, ಹರಡಿದ ಧೂಮದ ಪರಿಮಳ, ಹೇಳಿದ ಮಂತ್ರಗಳು ನಿಮ್ಮ ಮೇಲೆ ಪ್ರಭಾವ ಬೀರಿದವು ಅಲ್ಲವೇ? ಇದಕ್ಕೆ ಕಾರಣ ಇಲ್ಲಿ ಉಂಟಾದ ತರಂಗಗಳು (vibrations).. ಈ ವಿಶ್ವದ ಸೃಷ್ಟಿ ಸಹ ತರಂಗಗಳಿಂದಲೇ ಆದದ್ದು. 
     ಸಾವಿರಾರು ವರ್ಷಗಳ ಹಿಂದೆ ಇದ್ದ ಮಹಾಮುನಿ ಮಾಯನ್ ವಾಸ್ತುಶಾಸ್ತ್ರದ ಪ್ರಥಮ ಕೃತಿಕಾರರಾಗಿದ್ದಾರೆ. ಖಾಲಿ ಇರುವ ಸ್ಥಳ ಶಕ್ತಿಯ ಕೇಂದ್ರೀಕೃತ ಕ್ಷೇತ್ರವಾಗಿದ್ದು, ಈ ಭೌತಿಕ ಪ್ರಪಂಚದಲ್ಲಿನ ವಸ್ತುಗಳು ಮತ್ತು ಎಲ್ಲಾ ರೀತಿಗಳ ಉಗಮಕ್ಕೆ ಮೂಲವಾಗಿರುತ್ತದೆ ಎಂಬುದು ಆ ಋಷಿವಾಣಿಯಾಗಿದೆ. ಈ ಖಾಲಿ ಸ್ಥಳದಲ್ಲಿ ಶಕ್ತಿ ತರಂಗಗಳಿದ್ದು ಅದು ಗಣಿತದ ಲೆಕ್ಕಾಚಾರಕ್ಕೆ ಒಳಪಟ್ಟಿರುತ್ತದೆ. ವಿವಿಧ ರೀತಿಯ ಜೀವಿಗಳು ಇದ್ದು ಇವುಗಳು ಪಂಚಭೂತಗಳಿಂದ -ಆಕಾಶ, ವಾಯು, ಅಗ್ನಿ, ನೆಲ, ಜಲ- ಆದದ್ದು. ವಿವಿಧ ಜೀವಿಗಳ ಗುಣ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತವೆ. ಬೆಕ್ಕಿನ ಸ್ವಭಾವವೇ ಬೇರೆ, ನಾಯಿಯ ಸ್ವಭಾವವೇ ಬೇರೆ, ಮನುಷ್ಯನ ಸ್ವಭಾವವೇ ಬೇರೆ. ಮನುಷ್ಯರಲ್ಲೂ ವಿವಿಧ ಸ್ವಭಾವದವರನ್ನು ಕಾಣುತ್ತೇವೆ. ಈ ವ್ಯತ್ಯಾಸಗಳಿಗೂ ಕಾರಣ ತರಂಗಗಳೇ ಆಗಿವೆ. ‘Birds of same feather flock together’ ಎಂಬಂತೆ ನೀವುಗಳು ಇಲ್ಲಿ ಒಟ್ಟಿಗೇ ಸೇರುವುದಕ್ಕೂ ನಿಮ್ಮಲ್ಲಿನ ತರಂಗಗಳು ಹೊಂದಾಣಿಕೆಯಾಗಿರುವುದೇ ಕಾರಣ.
     ವಾಸ್ತು (ವಾಸ್ತುಬ್ರಹ್ಮ ಅಥವ ವಾಸ್ತು ಪುರುಷ) ಅನ್ನುವುದು ಒಂದು ಶಕ್ತಿಯಾಗಿದ್ದು, ಇದರಿಂದಲೇ, ಇದರ ಮೂಲಕವೇ ಭೌತಿಕ ಸೃಷ್ಟಿ ಸಂಭವಿಸುತ್ತದೆ. ಇದನ್ನು ಧಾರ್ಮಿಕವಾಗಿ ದೇವರು ಅನ್ನುತ್ತಾರೆ, ಸೃಷ್ಟಿಕರ್ತ ಅನ್ನುತ್ತಾರೆ, ವೈಜ್ಞಾನಿಕವಾಗಿ ಕೇಂದ್ರೀಕೃತ ಶಕ್ತಿ ಕೇಂದ್ರ ಅನ್ನುತ್ತಾರೆ. ವಾಸ್ತು ಅನ್ನುವ ಪದದ ನಿಖರ ಅರ್ಥವೆಂದರೆ ಶಾಶ್ವತವಾಗಿ ಇರುವಂತಹದು. 
     ಭಾರತದಲ್ಲಿನ ದೇವಸ್ಥಾನಗಳು, ಈಜಿಪ್ಟಿನಲ್ಲಿನ ಪಿರಮಿಡ್ಡುಗಳು, ಮುಂತಾದವು ಗಣಿತದ ಲೆಕ್ಕಾಚಾರಗಳನ್ನು ಆಧರಿಸಿ ನಿರ್ಮಿಸಿದ್ದಾಗಿವೆ. ಆ ಸ್ಥಳಗಳಿಗೆ ಹೋದಾಗ ಆಗುವ ನಮ್ಮ ಅನುಭವಗಳಿಂದಲೇ ಇದನ್ನು ತಿಳಿಯಬಹುದು. ಅಲ್ಲಿನ ಕಟ್ಟಡ ರಚನೆಯ ರೀತಿಯ ಕಾರಣಗಳಿಂದ ಉಂಟಾಗುವ ತರಂಗಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿರುವ ಪ್ರಬಾವೀ ತರಂಗಗಳೇ ಬೇರೆ ರೀತಿಯಲ್ಲಿರುತ್ತವೆ. ವಾಸ್ತು ಪ್ರಕಾರ, ಗಣಿತದ ಲೆಕ್ಕಾಚಾರಗಳಿಗೆ ಅನುಗುಣವಾಗಿ ಕಟ್ಟಡಗಳನ್ನು ರಚಿಸಿದರೆ ಅದಕ್ಕೆ ತಕ್ಕಂತೆ ಮನುಷ್ಯನ ಸ್ವಭಾವಗಳ ಮೇಲೂ ಅದು ಪ್ರಭಾವ ಬೀರುತ್ತವೆ. ಅಪರಾಧಗಳ ಪ್ರಮಾಣವನ್ನೂ ಲೆಕ್ಕಾಚಾರದ ರಚನೆಗಳು ತಗ್ಗಿಸುತ್ತವೆ. ಇದನ್ನು ಪರಿಶೀಲಿಸಬಹುದಾಗಿದೆ. ಜೀವಿಗಳಿಗೆ ಆಯಸ್ಸಿನ ಮಿತಿ ಇರುಂತೆ ಕಟ್ಟಡದ ವಾಸ್ತುವಿಗೂ ಮಿತಿ ಇರುತ್ತದೆ.
     ಸೀಮಿತ ಅವಧಿಯಲ್ಲಿ ಈ ವಿಷಯದ ಕುರಿತು ತಿಳಿಸುವುದು ಸುಲಭವಲ್ಲ. ಡಾ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನಾಲಜಿ ವಿದ್ಯಾಲಯದಲ್ಲಿ ವಾಸ್ತುಶಾಸ್ತ್ರವನ್ನು ವೈಜ್ಞಾನಿಕವಾಗಿ ಕಲಿಸುವ ಕೆಲಸ ನಡೆಯುತ್ತಿದೆ. ವಾಸ್ತುವಿಗೆ ಸಂಬಂಧಿಸಿದ ಸಂದೇಹ, ಸಲಹೆಗಳಿಗೆ ಮುಕ್ತವಾಗಿ ಸಂಪರ್ಕಿಸಿ ಪರಿಹಾರ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಹಲವಾರು ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಆನ್ ಲೈನ್ ಮೂಲಕ ಶಿಕ್ಷಣ ಕೊಡಲಾಗುತ್ತಿದೆ ಮತ್ತು ಪ್ರತ್ಯಕ್ಷ ತರಗತಿಗಳಿಗೂ, ತರಬೇತಿಗೂ ಅವಕಾಶ ಮಾಡಲಾಗಿದೆ. ಆಸಕ್ತರು ಪ್ರಯೋಜನ ಹೊಂದಬಹುದು. 
     ಸೂರ್ಯ ಸಿದ್ಧಾಂತದಲ್ಲಿ ಹೇಳಿರುವಂತೆ ಖಾಲಿ ಸ್ಥಳದಲ್ಲಿನ ಪ್ರತಿಯೊಂದು ಕಣವೂ ಒಂದೊಂದು ಶಕ್ತಿಯ ಕಣಜವಾಗಿದ್ದು, ಶೃತಿಬದ್ಧವಾಗಿ ಚಲಿಸುತ್ತಿರುತ್ತದೆ/ಕುಣಿಯುತ್ತಿರುತ್ತದೆ. ಇಡೀ ವಿಶ್ವವು ಇಂತಹ ಕಣಗಳಿಂದ ತುಂಬಿದೆ. ವಾಸ್ತುಶಾಸ್ತ್ರ ಅನ್ನುವುದು ಇದನ್ನು ಭೌತಿಕ ಪ್ರಪಂಚಕ್ಕೆ ಕಲೆ, ಸಂಗೀತ, ನೃತ್ಯ, ಬರಹ, ಕಟ್ಟಡ ವಿನ್ಯಾಸ, ಮುಂತಾದುವುಗಳಿಂದ ಅಳವಡಿಸುವ ವಿಜ್ಞಾನವಾಗಿದೆ. ಜೀವಿಗಳ ಒಳಗೂ ಸಹ ಇಂತಹ ತರಂಗಗಳನ್ನು ಉಂಟುಮಾಡುವ ಕಣಗಳಿದ್ದು ಅವು ಶರೀರ ವೀಣೆಯ ತಂತಿಗಳಾಗಿ ಕೆಲಸ ಮಾಡುತ್ತವೆ. ಮಹಾಮುನಿ ಹೇಳುವಂತೆ ಮನುಷ್ಯನ ಶರೀರದ ತರಂಗಗಳು (ಜೀವಾತ್ಮನ ತರಂಗಗಳು) ಪರಮಾತ್ಮನ ತರಂಗಗಳೊಂದಿಗೆ ಹೊಂದಾಣಿಕೆಯಾದರೆ ಮೋಕ್ಷ ಸಾಧ್ಯ.
-ಕ.ವೆಂ.ನಾಗರಾಜ್.