"ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಲೇಖನವನ್ನು ಓದಿದ ಶ್ರೀ ಪಿ.ಎಸ್. ರಂಗನಾಥ್ ಇವರು ಕೆಲವು ಸಂಶಯಗಳನ್ನು ಬರೆದಿದ್ದಾರೆ. ಅದಕ್ಕೆ ನನ್ನ ಸಮಾಧಾನವನ್ನು ಕೋರಿದ್ದಾರೆ. ಅವರ ಸಂಶಯಗಳಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್
ನಿಮ್ಮ ಲೇಖನ "ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಯನ್ನು ಓದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಒಳ್ಳೊಳ್ಳೆ ವಿಚಾರಗಳನ್ನು ತಿಳಿಸುತ್ತಿರುವ ತಮಗೆ ದೇವರು ಸದಾಕಾಲ ಒಳ್ಳೆಯದನ್ನು ಮಾಡಲಿ ಎಂದು ನಾನು ಕೋರುತ್ತೇನೆ. ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ.ನಿಮ್ಮ ಉತ್ತರದ ನಂತರ ನನ್ನ ಮುಂದಿನ ಪ್ರಶ್ನೆ ಗಳನ್ನು ನಿಮ್ಮ ಮುಂದಿಡತ್ತೇನೆ.
-ಪಿ.ಎಸ್.ರಂಗನಾಥ್
· ಸಂಶಯ: ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ
ಉ: ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಷ್ಟೆ. ಸಂಶಯ ಪರಿಹರಿಸುವಷ್ಟು ಸಮರ್ಥನಲ್ಲ.
· ಪ್ರ: ಸಸ್ಯ, ಗಿಡ ಮರಗಳಿಗೆ ಜೀವ ಇದೆಯೇ?
ಉ: ಜೀವ ಇದೆ.
· ಪ್ರ:ಹಸುವಿನ ಹಾಲು, ತುಪ್ಪ ಮತ್ತು ಮೊಸರನ್ನು ಸಸ್ಯಹಾರ ವರ್ಗದಲ್ಲಿ ಯಾಕೆ ಸೇರಿಸಿದ್ದಾರೆ?
ಉ: ಗೊತ್ತಿಲ್ಲ.ಅದರೆ ಕರು ಕುಡಿದು ಬಿಟ್ಟ ಹಾಲನ್ನು ಉಪಯೋಗಿಸುವುದರಿಂದ ಅದನ್ನು ಅಹಿಂಸಾತ್ಮಕ ಹಾಲು ಎಂದು ಹೇಳಬಹುದು.
· ಪ್ರ: ರಸ್ತೆ ಅಗಲೀಕರಣ ಸಂಧರ್ಭದಲ್ಲಿ ನೂರಾರು ಮರಗಳನ್ನು ಕಡಿದಾಗ, ನಾವೆಲ್ಲರು ಹೇಳುವ ಮಾತು "ಮರಗಳ ಮಾರಣ ಹೋಮ" ಅಂತ ಅಥವ ರಸ್ತೆ ಅಗಲೀಕರಣಕ್ಕೆ ಮರಗಳ ಬಲಿ. ಮಾತನಾಡಲು ಬರದ ಮತ್ತು ಕೆಂಪು ರಕ್ತವಿಲ್ಲದ ಹಾಗು ಮೆದುಳೇ ಇಲ್ಲದ ಮರಗಳನ್ನು ಕಡಿದಾಗ ನಮ್ಮ ಮನ ಮಿಡಿಯುವುದೇಕೆ. ಅಥವ ನಾವೇ ಕೈಯಾರೆ ನೆಟ್ಟ ಒಂದು ಹೂ ಗಿಡ ಅಥವ ಹಣ್ಣಿನ ಗಿಡ ನಮ್ಮೆದುರುಗೆ ಬೆಳೆದು ನಿಂತಾಗ ನಮಗಾಗುವ ಆನಂದ ಅಷ್ಟಿಷ್ಟಲ್ಲ, ಯಾರಾದರು ಅದಕ್ಕೆ ಘಾಸಿ ಮಾಡಿದರೆ ಮನಸ್ಸು ಮುದುಡುವುದೇಕೆ?
ಉ: ಇದೆಲ್ಲ ಮಾನವೀಯತೆಯ ಲಕ್ಷಣಗಳಲ್ಲವೇ? ಬಹುಷ: ನಿಮ್ಮ ಮುಂದಿನ ಪ್ರಶ್ನೆ ಹೀಗಿರಬಹುದು. ತರಕಾರಿಯನ್ನು ಕೊಯ್ದಾಗ ಸಸ್ಯಕ್ಕೆ ಹಿಂಸೆಯಾಗುವುದಿಲ್ಲವೇ? ಬತ್ತ, ರಾಗಿ ಜೋಳ ಮುಂತಾದ ಸಸ್ಯಗಳನ್ನು ಕೊಯ್ದು ದವಸ ಧಾನ್ಯ ಪಡೆಯುವುದು ಹಿಂಸೆಮಾಡಿದಂತಲ್ಲವೇ? ಕೊತ್ತಂಬರಿ, ಕರಿಬೇವು ಎಲ್ಲವನ್ನೂ ಗಿಡ/ಮರದಿಂದ ಕೊಯ್ದು ಅವಕ್ಕೆ ಹಿಂಸೆಯುಂಟುಮಾಡುವಿದಿಲ್ಲವೇ? ಹೀಗೆ ಯೋಚಿಸುತ್ತಾ ಹೋದರೆ ಬಹಳ ಪ್ರಶ್ನೆಗಳು ಹುಟ್ಟುತ್ತವೆ. ಹುಲಿ-ಸಿಂಹ ಗಳು ಒಂದು ಪ್ರಾಣಿಯನ್ನು ಕೊಂದು ಅದನ್ನು ತನ್ನ ಆಹಾರಮಾಡಿಕೊಳ್ಳುತ್ತವೆ. ಅದು ಸೃಷ್ಟಿ ನಿಯಮ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆಹಾರ. ಮನುಷ್ಯನಾದರೋ ಕೆಲವು ಮರ/ಗಿಡ/ಬಳ್ಳಿಗಳನ್ನು ಮತ್ತು ಅದರ ಬೆಳೆಯನ್ನು ತನ್ನ ಆಹಾರ ಮಾಡಿಕೊಂಡಿದ್ದಾನೆ. ಹೌದು, ಒಂದು ಗಿಡ ತಾನೇ ತಾನಾಗಿ ಸಾಯುವುದಕ್ಕಿಂತ ಮುಂಚೆಯೇ ಮನುಷ್ಯನು ಅದರ ಆಯುಶ್ಯವನ್ನು ಮುಗಿಸಿ ಬಿಡುತ್ತಾನೆ. ಇನ್ನೂ ಬೇರೆ ರೀತಿಯಲ್ಲಿ ಯೋಚಿಸಿದಾಗ ಇರುವೆ, ಜಿರಲೆ, ಸೊಳ್ಳೆ, ನೊಣ, ಇಲಿ ಮುಂತಾದುವುಗಳನ್ನು ಕೊಲ್ಲುವಾಗ ಅದು ಹಿಂಸೆ ಎನಿಸುವುದಿಲ್ಲ. ಜಿರಲೆ ಔಷಧಿ ಸ್ಪ್ರೆ ಮಾಡಿದಾಗಲಂತೂ ನೂರಾರು ಹೆಣ ಉರುಳುತ್ತವೆ. ಇದೆಲ್ಲಾ ಮಾಡುವ ನಾವೆಲ್ಲರೂ ಪ್ರಾಣಿ ಹಿಂಸೆ ಮಾಡಿದಂತಾಗಲಿಲ್ಲವೇ? ಇಂತಹ ಸಂಶಯಗಳಿಗೆ ಸಮಾಧಾನ ಕಷ್ಟ. ಅಥವಾ ಚರ್ಚೆಯಿಂದ ಲೇ ಸಮಾಧಾನವಾಗುವುದೂ ಇಲ್ಲ. ಇಂತಾ ಸಂಶಯಗಳಿಗೆ ನನ್ನ ಸಮಾಧಾನ ಏನೆಂದರೆ……
ನಮ್ಮ ಆಹಾರಕ್ಕಾಗಿ ಮನುಷ್ಯನು ಪ್ರಾಣಿಯನ್ನು ಕೊಲ್ಲಬಾರದು. ಮನುಷ್ಯನು ಸಸ್ಯಾಹಾರಿ. ಆದರೆ ನಮಗೆ ಉಪಟಳ ಕೊಡುವ ಜಿರಲೆ, ಇರುವೆ,ಇಲಿ,ಇವುಗಳ ನಾಶ ಮಾಡದೆ ವಿಧಿಯಿಲ್ಲ-ನಮ್ಮ ನಿರಾಳ ಬದುಕಿಗಾಗಿ[ಆಹಾರಕ್ಕಾಗಿ ಅಲ್ಲ] ಅಂತೆಯೇ ಸಸ್ಯಾಹಾರ ಪಡೆಯಲು ಸಸ್ಯಗಳನ್ನು ಕೊಲ್ಲುವುದಕ್ಕಾಗಿಯೇ ಬೆಳೆಯುತ್ತೇವೆ.ಸಸ್ಯಗಳನ್ನು ಕೊಯ್ಯುವ ಪ್ರಕ್ರಿಯೆಯನ್ನು ಪ್ರಾಣಿಗಳನ್ನು ಕೊಲ್ಲುವ ಪ್ರಕ್ರಿಯೆಗೆ ಹೋಲಿಸಲಾಗದು.
ನನ್ನ ಸ್ವಭಾವ ತಿಳಿಸುವೆ. ನಮ್ಮ ಕಛೇರಿ ಆವರಣದಲ್ಲಿ ಸಾಕಷ್ಟು ಹೂ ಗಿಡ ಬೆಳೆದಿದ್ದೇವೆ. ಪ್ರತಿದಿನ ಸಾಕಷ್ಟು ಹೂ ಅರಳುತ್ತವೆ. ನಮ್ಮ ಕಛೇರಿಯ ಸಿಬ್ಬಂಧಿಗಳು ಅವುಗಳನ್ನು ಕೊಯ್ದು ದೇವರ ಫೋಟೋ ಗಳಿಗೆ ಅಲಂಕರಿಸುತ್ತಾರೆ.ನಾನು ಅವರಲ್ಲಿ ಸಾಮಾನ್ಯವಾಗಿ ಹೇಳುತ್ತೇನೆ. “ ಗಿಡಗಳಲ್ಲಿ ಹೂ ಅರಳಿದ್ದಾಗ ಅವು ಗಾಳಿಗೆ ತೂಗುತ್ತಿದ್ದರೆ ಅವನ್ನು ನೋಡಲು ಚೆಂದವೋ? ಅಥವಾ ಕಿತ್ತ ಹೂ ಸ್ವಲ್ಪ ಹೊತ್ತಿನಲ್ಲಿ ಬಾಡಿ ದೇವರ ಪಟದ ಮೇಲೆ ಮುದುಡಿಕೊಳ್ಳುವ ಚಿತ್ರಣ ಅಂದವೋ? ಹಾಗಂತ ಯಾರೂ ಗಿಡದಿಂದ ಹೂ ಕೀಳದೇ ಇರುವುದಿಲ್ಲ. ಆದರೆ ಹೂ ವು ಗಿಡದಲ್ಲಿದ್ದರೇನೇ ಚೆಂದ. ಪೈರು ಬಂದಾಗ ಬೆಳೆಕೊಯ್ದು ದವಸ ಧಾನ್ಯವನ್ನು ಆಹಾರಕ್ಕೆ ಪಡೆಯುವುದೇ ಯೋಗ್ಯ.
ಇವೆಲ್ಲಾ ನನ್ನ ಭಾವನೆಗಳು. ಶ್ರೀ ಸುಧಾಕರಶರ್ಮರಂತವರು ಸೂಕ್ತ ಉತ್ತರ ಕೊಡಬಲ್ಲರು. ಆದರೆ ಶರ್ಮರಿಗೆ ಆರೋಗ್ಯ ಉತ್ತಮವಾಗಿಲ್ಲ. ಸಧ್ಯಕ್ಕೆ ಶರ್ಮರು ಉತ್ತರಿಸಲಾರರು. ಬೇರೆ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಿದೆ.