Pages

Friday, July 25, 2014

ಒಂದು ಮನವಿ

 ವೇದಸುಧೆಯ ಆತ್ಮೀಯ ಅಭಿಮಾನಿಗಳೇ

ಕಳೆದ ಐದಾರು ವರ್ಷಗಳಿಂದ  ಸಾಮಾನ್ಯಜನರಲ್ಲಿ  ವೇದದ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ವೇದಸುಧೆಯು ತನ್ನೆಲ್ಲಾ ಸಾಮರ್ಥ್ಯದೊಡನೆ   ಮಾಡುತ್ತಿದೆ. ಕೇವಲ ಬ್ಲಾಗ್ ಬರೆಯುವುದಷ್ಟೇ ನಮ್ಮ ಕೆಲಸವಾಗಿದ್ದರೆ ಬ್ಲಾಗನ್ನು  ಇನ್ನೂ ಚೆನ್ನಾಗಿ ನಡೆಸಬಹುದಿತ್ತು.ಆದರೆ ಇದರ ಜೊತೆ ಜೊತೆಗೇ ವೆಬ್ಸೈಟ್ ಇದೆ. ಪತ್ರಿಕೆಗಳಲ್ಲಿ ಕಾಲಮ್ ಬರೆಯಲಾಗುತ್ತಿದೆ. ಹಲವಾರು ಊರುಗಳಲ್ಲಿ ವೇದದ ಪರಿಚಯ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿತ್ಯ ಅಗ್ನಿಹೋತ್ರ-ವೇದಪಾಠ ನಡೆಸಲಾಗುತ್ತಿದೆ.ಬ್ಲಾಗ್ ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಏರ್ಪಾಡು, ಆದರ ಆಡಿಯೋ ಗಳನ್ನು  ಬ್ಲಾಗ್ನಲ್ಲಿ ಅಪ್ ಲೋಡ್ ಮಾಡುವುದು...ಇದರಲ್ಲೇ ತಲ್ಲೀನರಾಗಿದ್ದೆವು. ಆ ಸಂದರ್ಭದಲ್ಲಿ ವೇದಸುಧೆಯ ವಾರ್ಷಿಕೋತ್ಸವವನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿದೆವು. ನಂತರದ ದಿನಗಳಲ್ಲಿ ಶರ್ಮರ ಅನಾರೋಗ್ಯ ದ ಕಾರಣ   ಅವರಿಗೆ ಹೆಚ್ಚು ಒತ್ತದ ಕೊಡದಂತೆ ನಾವೇ ಬರೆಯಲು ಆರಂಭಿಸಿದೆವು. ಅಧ್ಯಯನ ,ಬರವಣಿಗೆ ಜೊತೆ ಜೊತೆಗೇ   ಹಲವಾರು ಸಾಮಾಜಿಕ ಮತ್ತು ವೇದ ಜಾಗೃತಿಯ ಕಾರ್ಯಕ್ರಮಗಳು.ಒಂದರ ಮೇಲೊಂದು. ಇದರಿಂದಾಗಿ ಬ್ಲಾಗ್ ಗೆ ಸರಿಯಾಗಿ ಗಮನಕೊಡಲಾಗುತ್ತಿಲ್ಲ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ  ಈ ಬ್ಲಾಗ್ ನಲ್ಲಿ ಮುಖ್ಯವಾಗಿ ಶ್ರೀ ಶರ್ಮರ ಆಡಿಯೋ/ವೀಡಿಯೋ ಗಳು, ಅವರ ಲೇಖನಗಳು , ನಾನು ಮತ್ತು ಕವಿನಾಗರಾಜ್ ಬರೆದಿರುವ ಲೇಖನಗಳು ಹೆಚ್ಚಿವೆ. ಕವಿನಾಗರಾಜರು ಲೇಬಲ್ ಕೊಟ್ಟಿರಬಹುದು. ಆದರೆ ಶರ್ಮರ ಮತ್ತು ನನ್ನ  ಪೋಸ್ಟ್ ಗಳಿಗೆ ಕೆಲವಕ್ಕೆ ಲೇಬಲ್ ಕೊಟ್ಟಿದೆ. ಕೆಲವಕ್ಕೆ ಲೇಬಲ್ ಕೊಟ್ಟಿಲ್ಲ. ನಮಗೀಗ ಒಬ್ಬರ ನೆರವು ಅಗತ್ಯವಿದೆ. ಅವರಿಗೆ ಸೂಕ್ತ ಸಂಭಾವನೆಯನ್ನು ಕೊಡಲಾಗುವುದು. ಅವರು ಮಾಡಬೇಕಾಗಿರುವುದೇನೆಂದರೆ................

೧. ಶ್ರೀ ಶರ್ಮರ  ಆಡಿಯೋ/ವೀಡಿಯೋ/ಬರಹ ಗಳಿಗೆ ಲೇಬಲ್ ಇಲ್ಲದಿದ್ದರೆ ಕೊಡುವುದು

೨. ಶ್ರೀ ಹರಿಹರಪುರಶ್ರೀಧರ್ ಮತ್ತು ಕವಿನಾಗರಾಜರ    ಪೋಸ್ಟ್ ಗಳಿಗೂ ಸೂಕ್ತ ಲೇಬಲ್ ಇಲ್ಲದಿದ್ದರೆ ಕೊಡುವುದು

೩. ವೇದ, ಸಾಮಾಜಿಕ ಚಿಂತನೆ, ರಾಷ್ಟ್ರಭಕ್ತಿಯ ಜಾಗೃತಿಗೆ  ಹೊರತಾದ ಪೋಸ್ಟ್ ಗಳಿದ್ದರೆ ಅಳಿಸುವುದು

೪. ಮುಂದೆ ಬ್ಲಾಗ್ ನಡೆಸಿಕೊಂಡು    ಹೋಗುವುದು

ಆಸಕ್ತರು ನನಗೊಂದು ಮೇಲ್ ಮಾಡಿದರೆ ಅವರಿಗೆ ಪಾಸ್ ವರ್ಡ್ ಕೊಟ್ಟು ಅಗತ್ಯ ಸಲಹೆ ನೀಡಲಾಗುವುದು.

ಬ್ರಹ್ಮಶಕ್ತಿ-ಕ್ಷಾತ್ರಶಕ್ತಿಗಳ ಸಮ್ಮಿಲದಿಂದಲೇ ರಾಷ್ಟ್ರದ ಉತ್ಥಾನ


ಉತ್ತಮವಾದ ಆಡಳಿತ ನೀಡಬೇಕಾದರೆ ಒಂದು ಸರ್ಕಾರ ಹೇಗಿರಬೇಕೆಂಬುದನ್ನು ವೇದದಲ್ಲಿ ಸೊಗಸಾಗಿ ಹೇಳಿದೆ. ಆ ಬಗ್ಗೆ ಇಂದು ಒಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಂಮ್ಯಂಚೌ  ಚರತ: ಸಹ |
ತಂ ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾ: ಸಹಾಗ್ನಿನಾ ||
 [ಯಜು.೨೦.೨೫]
ಅರ್ಥ:
ಯತ್ರ = ಯಾವ ದೇಶದಲ್ಲಿ
ಬ್ರಹ್ಮ = ಬ್ರಾಹ್ಮಣ ಅಂದರೆ [ವಿಪ್ರ] ವಿಶೇಷ ಪ್ರಜ್ಞಾವಂತರು
ಚ = ಮತ್ತು
ಕ್ಷತ್ರಂ = ಕ್ಷತ್ರಿಯರು ಅಂದರೆ ಶೌರ್ಯವಂತರು
ಸಮ್ಯಂ ಚೌ = ಏಕೀ ಭಾವದಿಂದ ಸೇರಿ
ಚರತ: = ಜೀವನ ನಡೆಸುವರೋ
ಸಹ = ಜೊತೆಗೆ
ತಂ ಲೋಕಂ =  ಆ ದೇಶವನ್ನು
ಪುಣ್ಯಂ = ಪುಣ್ಯಯುಕ್ತವೆಂದೂ
ಪ್ರಜ್ಞೇಷಂ = ಯಜ್ಞ ಮಾಡಲು ವಿಶಿಷ್ಟ ವಾಗಿದೆ ಎಂದೂ ತಿಳಿಯಲ್ಪಡಬೇಕು
ಯತ್ರ = ಎಲ್ಲಿ
ದೇವಾ: = ದಿವ್ಯ ಗುಣ ಸಂಪನ್ನರು
ಸಹ ಅಗ್ನಿನಾ = ಯಜ್ಞಾನುಷ್ಠಾನದೊಡನೆ ವರ್ತಿಸುತ್ತಾರೋ
[ ಅಲ್ಲಿಯೇ ಪ್ರಜೆಗಳು ಸುಖಿಗಳಾಗಿರುತ್ತಾರೆ  ಎಂದು ಭಾಷ್ಯಕಾರರು ವಿವರಿಸುತ್ತಾರೆ]
ಭಾವಾರ್ಥ:
 ಯಾವ ದೇಶದಲ್ಲಿ ವಿದ್ವಜ್ಜನರು, ಕ್ಷಾತ್ರ ತೇಜಸ್ಸಿನವರು ಇಬ್ಬರೂ ಪರಸ್ಪರ ಸಾಮರಸ್ಯದಿಂದ  ಒಟ್ಟಾಗಿ ಸಹಮತದಿಂದ  ವರ್ತಿಸುತ್ತಾರೋ ಆದೇಶವು ಪುಣ್ಯವಂತ ದೇಶವೆಂದು ತಿಳಿಯುವುದು.ಹಾಗೂ ಯಜ್ಞಮಾಡಲು ವಿಶಿಷ್ಟವಾಗಿದೆ ಎಂದು ತಿಳಿಯಬೇಕು. ಅಂದರೆ ಯಾವ ದೇಶವು ಉತ್ತಮ ವಿದ್ವಾಂಸರುಗಳಿಂದ ಕೂಡಿದ  ವಿದ್ಯಾಸಭೆ ಮತ್ತು ಶೂರ ವೀರ ಕ್ಷಾತ್ರ ತೇಜಸ್ಸಿನ ಜನರಿಂದ ಕೂಡಿದ ರಾಜಸಭೆ ಯನ್ನು ಹೊಂದಿದ್ದು ಇವರೆಲ್ಲರೂ ಸೇರಿ ರಾಜಕಾರ್ಯಗಳನ್ನು ನೆರವೇರಿಸುತ್ತಾರೋ  ಮತ್ತು ಯಾವ ದೇಶದಲ್ಲಿ ಯಜ್ಞಗಳು ನಡೆಯುತ್ತವೆಯೋ  ಅಲ್ಲಿನ ಪ್ರಜೆಗಳು ಸುಖವಾಗಿರುತ್ತಾರೆ.
ವೇದಮಂತ್ರಗಳನ್ನು ಅರ್ಥ ಮಾಡಿಕೊಳ್ಳುತ್ತಾ ಹೋದಂತೆ ಅದ್ಭುತವಾದ ಮಾರ್ಗದರ್ಶನ ವಿರುವುದು ಗೊತ್ತಾಗುತ್ತದೆ. ಪ್ರಜೆಗಳು ಸುಖದಿಂದರಬೇಕಾದರೆ ಸರ್ಕಾರ ಹೇಗಿರಬೇಕೆಂಬುದರ  ಅದ್ಭುತವಾದ ವರ್ಣನೆ ಈ ಮಂತ್ರದಲ್ಲಿದೆ.  ಈ ಮಾರ್ಗದರ್ಶನವು ಯಾವ   ದೇಶಕ್ಕೆ ಬೇಡ? ಯಾವ ಕಾಲಕ್ಕೆ ಬೇಡ?
 ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಿಗೂ ಅತ್ಯಗತ್ಯವಾಗಿ ಬೇಕಾಗಿರುವಂತಹ ಒಳ್ಳೆಯ ಆಡಳಿತ ಹೇಗಿರಬೇಕೆಂಬ ಸೂತ್ರಗಳು ಇಲ್ಲಿವೆ. ಒಂದು ಸರ್ಕಾರ ಉತ್ತಮ ಆಡಳಿತ ಕೊಡಬೇಕಾದರೆ  ರಾಜವ್ಯವಸ್ಥೆ ಹೇಗಿರಬೇಕು? ಸರ್ಕಾರದಲ್ಲಿ ಎಂತಹ ಜನರು ಇರಬೇಕು? ಎಂಬ ಬಗ್ಗೆ ವೇದವು ಬಹು ಸ್ಪಷ್ಟವಾದ ವಿಚಾರವನ್ನು ತಿಳಿಸುತ್ತದೆ.  ಪ್ರಮುಖವಾಗಿ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮ ಸಭೆ ಎಂಬ  ಮೂರು ಸಭೆಗಳಿರಬೇಕು. ರಾಜ ಸಭೆಯಲ್ಲಿ ರಾಜ್ಯ ಭಾರ ಮಾಡಲು ಯೋಗ್ಯರಾದ ಕ್ಷಾತ್ರ ಸ್ವಭಾವದ ಸಮರ್ಥ  ವ್ಯಕ್ತಿಗಳಿರಬೇಕು. ರಾಜನ ಕರ್ತವ್ಯದ ಬಗ್ಗೆ ಹಿಂದಿನ ಮಂತ್ರಗಳಲ್ಲಿ  ವಿಚಾರ ಮಾಡಲಾಗಿದೆ. ಅವರ ಆಡಳಿತಕ್ಕೆ  ಮಾರ್ಗದರ್ಶನ ನೀಡಲು ವಿದ್ಯಾಸಭೆಯಲ್ಲಿ ಉತ್ತಮ ವಿದ್ವಾಂಸರುಗಳಿರಬೇಕು. ಅವರ ಮಾರ್ಗದರ್ಶನದ ಮೇಲೆಯೇ ರಾಜಸಭೆಯಲ್ಲಿರುವ ವ್ಯಕ್ತಿಗಳು ಆಡಳಿತ ನಡೆಸಬೇಕು.ವಿದ್ಯಾಸಭೆಯಲ್ಲಿರುವ ವಿದ್ವಾಂಸರು ಉತ್ತಮ ಆದಳಿತಕ್ಕೆ  ಅಗತ್ಯವಾದ ನೀತಿ ನಿಯಮಗಳನ್ನು ರೂಪಿಸಬೇಕು. ರಾಜ್ಯದ ಅಭಿವೃದ್ಧಿ ಕೆಲಸಗಳ ನೀಲಿ ನಕಾಶೆ ತಯಾರಿಸಬೇಕು. ಸಾಮಾನ್ಯ ಪ್ರಜೆಯ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳಭಗ್ಗೆ ರಾಜ ಸಭೆಗೆ ಮಾರ್ಗದರ್ಶನ ನೀಡಬೇಕು. ಒಟ್ಟಿನಲ್ಲಿ ರಾಜ ಸಭೆ ಮತ್ತು ವಿದ್ಯಾಸಭೆಗಳು ಒಟ್ಟಾಗಿ ಸಹಮತದಿಂದ ಉತ್ತಮ ಆಡಳಿತ ಕೊಡಬೇಕು. ಇನ್ನು ಮೂರನೆಯ ಸಭೆಯೇ ಧರ್ಮ ಸಭೆ.  ರಾಜ್ಯದಲ್ಲಿ ಧರ್ಮದ ಪ್ರಚಾರ ಮತ್ತು ಅಧರ್ಮವನ್ನು ಮೆಟ್ಟಿನಿಲ್ಲುವ ಎರಡೂ ಕೆಲಸಗಳು ಧರ್ಮಸಭೆಯಿಂದ ನಡೆಯಬೇಕು.
ಈ ಮಂತ್ರವನ್ನು ಮೇಲ್ನೋಟಕ್ಕೆ ನೋಡಿದಾಗ ಬ್ರಾಹ್ಮಣರು ಮತ್ತು ರಾಜರು ಸೇರಿ ಸಹಮತದಿಂದ ರಾಜ್ಯಭಾರ ಮಾಡಬೇಕೆಂದು ಅರ್ಥೈಸಿಬಿಡಬಹುದು. ಆದರೆ ಮಂತ್ರದ ಆಳಕ್ಕೆ ಇಳಿದು ಅರ್ಥ ಮಾಡಿಕೊಂಡರೆ ಅದ್ಭುತವಾದ ಆಡಳಿತ ಸೂತ್ರಗಳು ಇಲ್ಲಿ ಲಭ್ಯವಾಗುತ್ತವೆ. ಇಂದು ಆಚರಣೆಯಲ್ಲಿರುವ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಗಳಿಗೆ ಇದನ್ನು ಸಮೀಕರಿಸುವಂತಿಲ್ಲ. ವಿಶೇಷ ಪ್ರಜ್ಞಾವಂತನಿಗೆ ಬ್ರಾಹ್ಮಣ ಎಂದು ವೇದವು ಕರೆದಿದೆ. ಈ ವಿಚಾರವನ್ನು  ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣ ನೆನಸಿಕೊಳ್ಳುವ ಅರ್ಹತೆ ಸಿಕ್ಕಿ ಬಿಡುವುದಿಲ್ಲ. ವೈದ್ಯನೊಬ್ಬನ ಮಗನು ವೈದ್ಯನಾಗಬೇಕಾದರೆ ಅವನು ವೈದ್ಯಕೀಯ ಪದವಿ ಪಡೆಯಲೇಬೇಕಲ್ಲವೇ? ಇಲ್ಲೂ ಅದೇ ಮಾತು ಅನ್ವಯವಾಗುತ್ತದೆ. ಯಾರು ವೇದಜ್ಞಾನವನ್ನು [ವಿಶೇಷ ಜ್ಞಾನ] ಕಲಿಯುತ್ತಾರೋ ಅವರು ವಿಪ್ರರು ಅಥವಾ ಬ್ರಾಹ್ಮಣರು. ಇಂದಿನ ಕಾಲಕ್ಕೆ ಅರ್ಥವಾಗುವಂತೆ ಹೇಳಬೇಕೆಂದರೆ ಮಾಜಿ ರಾಷ್ಟ್ರಪತಿಗಳಾದ  ಸನ್ಮಾನ್ಯ ಶ್ರೀ ಅಬ್ದುಲ್ ಕಲಾಂ ಅವರನ್ನು ಉಧಾಹರಣೆಯಾಗಿ ತೆಗೆದುಕೊಂಡರೆ ತಪ್ಪಿಲ್ಲ. ಇಸ್ಲಾಮ್ ಮತದಲ್ಲಿ ಜನಿಸಿರಬಹುದು. ಆದರೆ ಜ್ಞಾನದ ದೃಷ್ಟಿಯಿಂದ ಅವರು ಬ್ರಾಹ್ಮಣರು. ವೇದ ಜ್ಞಾನ ಎಂದೊಡನೆ ಮತ್ತೆ ನಾಲ್ಕು ವೇದಗಳು ಅವರಿಗೆ ಗೊತ್ತಿದೆಯೇ? ಎಂದು ಪ್ರಶ್ನೆ ಮಾಡಬೇಕಾಗಿಲ್ಲ. ವೇದ ಎಂದರೆ ಅರ್ಥವೇ ಜ್ಞಾನ. ಶ್ರೀ ಅಬ್ದುಲ್‌ಕಲಾಮ್ ಅವರಿಗಿಂತ ಜ್ಞಾನಿಗಳು ಬೇಕೇ? ಇಂತವರು ವಿದ್ಯಾಸಭೆಯಲ್ಲಿರಬೇಕೆಂಬುದು ಭಾವ. ಇಂದಿನ ಪ್ರಜಾಪ್ರಭುತ್ವದ ಆಡಳಿತದಲ್ಲಿ ಜಾತಿಯಿಂದ ಕ್ಷತ್ರಿಯರು ಆಡಳಿತ ಮಾಡಬೇಕಾಗಿಲ್ಲ. ರಾಜಸಭೆ ಯಲ್ಲಿ ಕ್ಷಾತ್ರ ಗುಣ ಸ್ವಭಾವದ, ದಕ್ಷ ವ್ಯಕ್ತಿಗಳು, ವೀರರು, ಶೂರರು, ಗಂಡೆದೆಯವರು ರಾಜ ಸಭೆಯಲ್ಲಿರಲು ಅರ್ಹರು. ವಜ್ರಾದಪಿ ಕಠೋರಾಣಿ ಎಂಬ ಮಾತಿನಂತೆ ವಜ್ರದಷ್ಟು ಕಠೋರವಾಗಿದ್ದು  ವಿದ್ಯಾಸಭೆಯ ಮಾರ್ಗದರ್ಶನದಲ್ಲಿ ದಕ್ಷ ಆಡಳಿತ ನಡೆಸುವಂತವರಾಗಿರಬೇಕು.
ಧರ್ಮಸಭೆಯು ಧರ್ಮದ ಪ್ರಚಾರ ಮಾಡುವುದು ಮತ್ತು ಅಧರ್ಮವನ್ನು ಮೆಟ್ಟಿ ನಿಲ್ಲಲು ಅಗತ್ಯವಾದ ಯೋಜನೆ ರೂಪಿಸುವುದು ಮತ್ತು ರಾಜಸಭೆಯು ಅದನ್ನು ಕಾರ್ಯರೂಪಕ್ಕೆ ತರುವುದು. ಧರ್ಮ ಪ್ರಚಾರವೆಂದರೆ ಇಂದಿನ ಕಂದಾಚಾರಗಳಿಗೆ ಸಮೀಕರಿಸಬಾರದು. ವೇದವು ಹೇಳುವುದೇ ಸತ್ಯಪಥ. ಭಗವಂತನು ಒಬ್ಬನೇ. ಅವನು ಸರ್ವಾಂತರ್ಯಾಮಿ. ಸರ್ವಶಕ್ತ. ಸಾರ್ವಭೌಮ.ನಿರಾಕಾರಿ. ಈ ಸತ್ಯಗಳಿಗೆ ಅಪಚಾರವಾಗದಂತೆ ಧರ್ಮ ಪ್ರಚಾರ ಮಾಡುವುದು ಅಂದರೆ ಅರ್ಥಾತ್ ವೇದ ಜ್ಞಾನವನ್ನು ಹರಡುವುದು ಧರ್ಮಸಭೆಯ ಕೆಲಸ. ಇಲ್ಲಿ ವೇದದ ಆಶಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ವೇದ ಮಂತ್ರಗಳನ್ನು ಪ್ರಚಾರಮಾಡುವುದು ಧರ್ಮಸಭೆಯ ಕೆಲಸವಲ್ಲ. ರಾಜ್ಯದ ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸುವುದು ಧರ್ಮಸಭೆಯ ಕೆಲಸ. ವೇದದ ಆಶಯದಂತೆ ಆಡಳಿತ ನಡೆದರೆ ದೇಶವು ಸಂಮೃದ್ಧ ವಾಗಲಾರದೇ?
ನಮ್ಮ ದೇಶವು  ಸಂಮೃದ್ಧವಾಗಲು ರಾಷ್ಟ್ರನಾಯಕರು ಹೇಗಿರಬೇಕೆಂಬುದನ್ನೂ ಸಹ ವೇದದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಅಥರ್ವವೇದದ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.
ಭದ್ರಮಿಚ್ಛಂತ ಋಷಯ: ಸ್ವರ್ವಿದಸ್ತಪೋ ದೀಕ್ಷಾಮುಪಷೇದುರಗ್ರೇ |
ತತೋ ರಾಷ್ಟ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಉಪಸಂನಮಂತು ||
[ಯಜು ೧೯ನೇ ಕಾಂಡ ೪೧ನೇ ಸೂಕ್ತ ಮೊದಲನೇ ಮಂತ್ರ]
ಅರ್ಥ:-
ಭದ್ರಂ = ಪ್ರಜೆಗಳ ಕಲ್ಯಾಣವನ್ನು
ಇಚ್ಛಂತ: = ಬಯಸುತ್ತಾ
ಸ್ವರ್ವಿದ: = ಸುಖಪ್ರಾಪ್ತಿಯ ಮಾರ್ಗವನ್ನು ಬಲ್ಲ
ಋಷಯ: = ತತ್ವದರ್ಶಿಗಳು
ಅಗ್ರೇ = ಮೊದಲಲ್ಲೇ
ತಪೋದೀಕ್ಷಾಮ್ = ತಪಸ್ಸಿನ ಕಷ್ಟಸಹಿಷ್ಣುತೆಯ ದೀಕ್ಷೆಯನ್ನು
ಉಪಷೇದು: = ಅನುಷ್ಠಾನ ಮಾಡಿದರು
ತತ: = ಅದರಿಂದ
ರಾಷ್ಟ್ರಂ = ರಾಷ್ಟ್ರಭಾವನೆಯೂ
ಬಲಂ ಚ ಓಜ: = ಶಕ್ತಿ ಮತ್ತು ತೇಜಸ್ಸು
ಜಾತಂ = ಪ್ರಕಟವಾದವು
ತತ್ = ಅದರಿಂದ
ಅಸ್ಮೈ = ಈ ರಾಷ್ಟ್ರದ ಹಿತದ ಭಾವನೆಯ  ಪೂರ್ತಿಗಾಗಿ
ದೇವಾ: ರಾಷ್ಟ್ರನಾಯಕರು
ಉಪಸಂ ನಮಂತು = ಪರಸ್ಪರ ಸೇರಿ ನಮ್ರತೆಯನ್ನು ಸಲ್ಲಿಸಲಿ
ಭಾವಾರ್ಥ:-
ಪ್ರಜೆಗಳ ಹಿತವನ್ನು ಬಯಸುವ ಋಷಿಗಳು ಸರ್ವಪ್ರಥಮವಾಗಿ ತಪಸ್ಸನ್ನೂ,ವ್ರತವನ್ನೂ ಅನುಷ್ಠಾನ ಮಾಡಿದರು.ಅದರಿಂದ ರಾಷ್ಟ್ರದ ಬಲ ಮತ್ತು ಓಜಸ್ಸುಗಳು ವೃದ್ಧಿಯಾದವು. ಇಂತಹ ರಾಷ್ಟ್ರೀಯ ಮನೋಭಾವ ಮತ್ತು ರಾಷ್ಟ್ರದ ಸತ್ಯ ವರ್ಚಸ್ಸುಗಳ ವೃದ್ಧಿಗಾಗಿ ನಮ್ಮ ರಾಷ್ಟ್ರನಾಯಕರು ಪರಸ್ಪರ ಸಮ್ಮಿಲಿತವಾಗಿ ಯತ್ನವನ್ನು ಮಾಡಲಿ.
ಈ ವೇದಮಂತ್ರವು ನಮ್ಮ ರಾಷ್ಟ್ರನಾಯಕರುಗಳಿಗೆ ಮಾರ್ಗದರ್ಶಕ ಸೂತ್ರವಾಗಲಾರದೇ? ಒಂದು ರಾಷ್ಟ್ರದ ಉತ್ಥಾನವಾಗಬೇಕಾದರೆ ನಮ್ಮ ರಾಷ್ಟ್ರನಾಯಕರು ಒಟ್ಟಿಗೆ ಕುಳಿತು ಚಿಂತನ-ಮಂಥನ ನಡೆಸಿ ಸರಿಯಾದ ಮಾರ್ಗದಲ್ಲಿ ದೇಶವನ್ನು ನಡೆಸಬೇಕೆಂಬುದು ವೇದದ ಆಶಯ.