Pages

Friday, July 20, 2012

ಮಕ್ಕಳ ಕನಸು



ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು,  ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ ಹಾಕುತ್ತಾರೆ.  ತಮ್ಮ ಮಕ್ಕಳು  ತಮಗಿಂತ ಹೆಚ್ಚು ಪುರೋಭಿವೃದ್ಧಿಗೆ  ಬರಬೇಕೆಂದು ತಮ್ಮ ಅಮೂಲ್ಯವಾದ ಸಮಯವನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣವನ್ನು ಹಲವಾರು ಪ್ರಾಕಾರಗಳಲ್ಲಿ ಕೊಡಿಸುತ್ತಾರೆ, ಕೊಡುತ್ತಾರೆ. ತಮ್ಮ ಮಕ್ಕಳ ಸ್ವಲ್ಪ ಯಶಸ್ಸು ಕೂಡಾ,  ಅಪ್ಪ ಅಮ್ಮರಿಗೆ ಅಪಾರ ಸುಖವನ್ನು ನೀಡುತ್ತದೆ.  ಆದರೆ, ಕೆಲವೊಮ್ಮೆ ಮಕ್ಕಳ ಮನಸ್ಸು ಬೇರೆಡೆಗೆ ಹೋದಾಗ, ಅಥವಾ ತಂದೆತಾಯಿಯರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ, ಅಥವಾ ತಮ್ಮ ಕನಸುಗಳು ವಿಭಿನ್ನವಾದಾಗ, ಇನ್ನಿತರ ಯಾವುದೋ ಕಾರಣದಿಂದ ನಿರೀಕ್ಷಿತ ಫಲಿತಾಂಶ ಸಿಗದಾದಾಗ ಮಕ್ಕಳ ಮೇಲೆ ಅಪ್ಪ ಅಮ್ಮರ ನಿರಾಸೆ ಹೆಚ್ಚಾಗುತ್ತದೆ.  ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ ಮತ್ತು ಸಿಟ್ಟು ಇವುಗಳು ಮಕ್ಕಳ ಮೇಲೆ ದುಬಾರಿಯಾದ ಪರಿಣಾಮ ಬೀರುತ್ತವೆ.     ಇಂತಹ ಜಟಿಲವಾದ  ಸಮಸ್ಯೆಗಳು ಬರುವ ಮುಂಚೆ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.  ಮಕ್ಕಳ ಕನಸು, ವಿಚಾರ ಮತ್ತು ಆಸೆಗಳು ತೀರಾ ಬಾಲಿಶವಾಗಿದೆಯೆಂದು ನಮಗೆ ಅನ್ನಿಸಬಹುದು,  ಆದರೆ,ಆ ಚಿಂತನೆಯಲ್ಲೂ  ಸರಿಯಾದ ದಿಕ್ಕು ಇರುತ್ತೆ  ಎಂಬುದನ್ನು   ತಂದೆ ತಾಯಿಯರು ಮರೆಯಬಾರದು.

ನರೇಂದ್ರ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆ ತಾಯಿಯ ಜೊತೆ ಎರಡು ಕುದುರೆಗಳ ಸಾರೋಟಿನ ಪ್ರಯಾಣವನ್ನು ಬಹಳ ಇಷ್ಟ ಪಡುತ್ತಿದ್ದ.  ಕಲ್ಕೊತ್ತ ನಗರ ಸಂಚಾರ ಮಾಡುವಾಗ ಕುದುರೆಯ ಕಾಲಿನ ಟಕ್ ಟಕ್ ಸದ್ದು, ಕಟ್ಟಿದ ಗೆಜ್ಜೆಯ ನಿನಾದ, ತಂಪಾದ ಗಾಳಿ ಇವೆಲ್ಲವೂ ನರೆಂದ್ರನಿಗೆ ಬಹಳ ಆಪ್ಯಾಯಮಾನವಾಗಿತ್ತು.  ಇಂತಹ ನಗರ ಪ್ರದಕ್ಷಿಣೆ ಮುಗಿಸಿ ಬಂದ ನರೇಂದ್ರನ ತಂದೆ " ನೀನು ದೊಡ್ಡವನಾದ ಮೇಲೆ ಏನು ಆಗಲು ಬಯಸುತ್ತೀ? " ಎಂದು ಪ್ರಶ್ನೆ ಹಾಕಿದರು.  ನರೇಂದ್ರ ಕ್ಷಣ ಮಾತ್ರವೂ ತಡಮಾಡದೆ " ನಾನು ಜೋಡಿ ಕುದರೆಯ ಸಾರೋಟಿನ ಸವಾರನಾಗುತ್ತೀನಿ " ಎಂದು ಉತ್ತರಿಸಿದ.  ಈ ಮಾತು ನರೇಂದ್ರನ ತಂದೆಗೆ ಅತ್ಯಂತ ಸಿಟ್ಟು ಮತ್ತು ನಿರಾಸೆ ಒಮ್ಮೆಲೇ ಆಯಿತು.  ಇದನ್ನು ಗಮನಿಸಿದ ತಾಯಿ ನರೇಂದ್ರನ ಕೈ ಹಿಡಿದುಕೊಂಡು ನೇರಾ ದೇವರಮನೆಗೆ ಕರೆದುಕೊಂಡು ಹೋಗಿ ದೇವರಮುಂದೆ ನಿಲ್ಲಿಸಿ ಅಲ್ಲಿ ಇರಿಸಲಾಗಿದ್ದ ಶ್ರೀ ಕೃಷ್ಣನ ಭಗವದ್ಗೀತಾ ಉಪದೇಶದ ಫೋಟೋ ತೋರಿಸುತ್ತ " ಈ ರೀತಿಯ ಸವಾರನಾಗಲು ಬಯಸಿರುವೆ ಅಲ್ಲವೇ? " ಎಂದು ಕೇಳಿದರು.  ನರೇಂದ್ರನ ಬಾಯಿಂದ ಮಾತು ಬರಲಿಲ್ಲ.  " ನೀನು ಜೋಡಿ ಕುದುರೆಗಳ ಸಾರೋಟಿನ ಸವಾರನೇ ಆಗುವುದಾದರೆ ಶ್ರೀಕೃಷ್ಣನ ತರಹ ಜಗತ್ತಿಗೆ ಬೆಳಕು ಕೊಡುವ ಸವಾರನಾಗು." ಎಂದು ಹುರಿದುಂಬಿಸಿದರು.  ಮುಂದೆ ಆ ಪುಟ್ಟ ನರೇಂದ್ರನೆ,   ಸ್ವಾಮಿ   ವಿವೇಕಾನಂದನಾಗಿ ಜಗತ್ತಿಗೆ ಬೆಳಕು ತೋರಿದ ಸವಾರನಷ್ಟೇ ಅಲ್ಲ ಸರದಾರನು   ಆದರು.

ಮಕ್ಕಳ ಮನಸಿನಲ್ಲಿ ಇರುವ ಆಸೆಗಳು ಅಸ್ಪಷ್ಟವಾಗಿರಬಹುದು, ಕನಸುಗಳು ಬಾಲಿಶ ಎನಿಸಬಹುದು, ವಿಚಾರಗಳು ಅಸಂಬದ್ಧ ಎನಿಸಬಹುದು.  ಆದರೆ ಸ್ವಲ್ಪ ತಾಳ್ಮೆ ವಹಿಸಿ, ಮಕ್ಕಳ ಕನಸಿಗೆ, ಆಸೆಗಳಿಗೆ, ವಿಚಾರಗಳಿಗೆ ಹೇಗೆ ನೀರೆರೆದು ಪೋಷಿಸಿ ಬೆಳೆಸೆಬಹುದು ಎಂಬುದರ ಬಗ್ಗೆ ಚಿಂತಿಸಿದರೆ ಸಾಕು ಮಕ್ಕಳು ಹೆಚ್ಚು ಸಬಲರಾಗುತ್ತಾರೆ.  ತಮ್ಮ  ಮಕ್ಕಳು ಪ್ರತಿಭಾಶಾಲಿಗಳು ಆಗಬೇಕೆಂಬುದು ಪ್ರತಿ ತಂದೆತಾಯರ ಉದ್ದೇಶವು ಅದೇ ತಾನೇ!  ಇದಕ್ಕೆ ನೀವೇನು ಹೇಳುವಿರಿ?

ಹೆಚ್ ಏನ್ ಪ್ರಕಾಶ್

ಓ ದೇವರೇ, ನೀನೆಲ್ಲಿರುವೆ?


ಓ ದೇವರೇ, ನೀನೆಲ್ಲಿರುವೆ?

ಇಲ್ಲಿ, ಭೂಲೋಕದಲ್ಲಿ ನಿನ್ನ ಬಗ್ಗೆ

ಅದೆಷ್ಟು  ಚರ್ಚೆಗಳು! ಅದೆಷ್ಟು ವಾದಗಳು!

ಎಲ್ಲವೂ ನಿನ್ನ ಗಮನಕ್ಕೆ ಬಂತೇ?


ಗುಡಿಯಲ್ಲಿ ಬಂಧಿಸುವವರು ನಿನ್ನ  ಕೆಲವರು|

ಅಷ್ಟೇ ಸಾಲದೆಂಬಂತೆ ನಿನಗೆ

ಸ್ನಾನ ಮಾಡಿಸುವವರೆಷ್ಟು ಮಂದಿ!

ಬೆಳಕು ತೋರುವವರೆಷ್ಟು ಮಂದಿ!

ಉಣ   ಬಡಿಸುವವರೆಷ್ಟು ಮಂದಿ!


ಇದ ನೋಡಿದ ಕೆಲವರು ನಕ್ಕು

ಸುಮ್ಮನಾಗಿದ್ದರೆ ಪರವಾಗಿರಲಿಲ್ಲ|

ನಿನಗೆ ಉಣಿಸಿದರನ್ನೇ [!!] ಗೇಲಿ ಮಾಡುವರು

ನಿನ್ನ ಆಕಾರವ ನೋಡಿ ಕೇಕೆ ಹಾಕುವರು||


ದ್ವೈತ/ಅದ್ವೈತ/ವಿಶಿಷ್ಟಾದ್ವೈತ ವಂತೆ

ನಿನ್ನ ನೋಡಲು ಹಲವು ದಾರಿಗಳ೦ತೆ!

ಹವನ ಹೋಮ ಗಳಂತೆ! ವ್ರತ ಕತೆಗಳಂತೆ!!

ನಿನಗೆ ಇವೆಲ್ಲಾ ಲಂಚ ವಂತೆ!!


ಹೇ ಭಗವಾನ್,

ನಿನ್ನನ್ನೂ ಬ್ರಷ್ಟ ನನ್ನಾಗಿ ಮಾಡಿದ

ಶ್ರೇಷ್ಠರು ಇಲ್ಲಿದ್ದಾರೆ!

ನಿನಗೆ ಕಾಣದಿದ್ದರೆ ನಿನ್ನ ಕಣ್ಣು ಕುರುಡೇ?


ಸರ್ವ ಶಕ್ತನಾದ ನಿನಗೆ

ಈ ರಂಪಾಟದ ಅರಿವಾಗಿಲ್ಲವೇ?

ಅರರೆ ನಾನಾರಿಗೆ ಹೇಳುತ್ತಿರುವೆ?

ಸರ್ವಶಕ್ತನಿಗೆ ನಾನು ಹೇಳಿದ ಮೇಲೆ  ತಿಳಿಯಬೇಕೇ?


ಅಂತೂ ನನ್ನ ದೃಷ್ಟಿಯಲ್ಲಿ

ನೀನೊಂದು ಶಕ್ತಿ ಅಷ್ಟೇ|.

ಹೌದು, ನನ್ನ ಊಹೆಗೂ ಮೀರಿದ ಶಕ್ತಿ!

ಎಲ್ಲವನೂ ಅಟ್ಟಾಡಿಸುವ ಶಕ್ತಿ!


ನನ್ನೊಳಗೆ, ಇವನೊಳಗೆ ಎಲ್ಲರೊಳಗೆ|

ಎಲ್ಲೆಲ್ಲೂ, ಎಂದೆಂದೂ, ಕಣ್ ಮಿಟುಕಿಸದೆ

ಕಾಯುತ್ತಿರುವ ನೀ ಅನಂತ ಶಕ್ತಿ|

ನಿನ್ನ ನಂಬುವುದೊಂದೇ ಯುಕ್ತಿ||


ನಿನ್ನ ಹೆಸರಲಿ ಬಡಿದಾಡುವ

ಬ್ಲಾಕ್ ಮೇಲ್ ಮಾಡುವ

ಜನರದು ಕುಯುಕ್ತಿ

ಅವರಿಗಿಲ್ಲ ಶ್ರದ್ಧಾ ಭಕ್ತಿ||

ಯೋಚಿಸಲೊ೦ದಿಷ್ಟು...೫೩



೧.  ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು!
೨.  ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀಕ್ಷೆಯಿ೦ದ ಕೈಗೊಳ್ಳಬೇಕು!
೩. ಒ೦ದು ಯಶಸ್ವೀ ಗೆಳೆತನ ಪರಸ್ಪರ ಎಷ್ಟು ಅರ್ಥೈಸಿಕೊ೦ಡಿದ್ದೇವೆ ಎ೦ಬುದರಲ್ಲಿಲ್ಲ ಬದಲಾಗಿ ಪರಸ್ಪರ ತಪ್ಪು ತಿಳುವಳಿಕೆ ಹೊ೦ದುವುದನ್ನು ಎಷ್ಟು ಬಾರಿ ತಡೆದಿದ್ದೇವೆ ಎನ್ನುವುದರ ಮೇಲೆ ನಿ೦ತಿದೆ!
೪.  ಜೀವನವೆ೦ಬುದು ಒ೦ದು ರಹಸ್ಯ ಕಾದ೦ಬರಿ೦ಯ೦ತೆ! ಕಾದ೦ಬರಿಯ ಪುಟಗಳನ್ನು ಮಗುಚುತ್ತ ಓದುತ್ತಿದ್ದ೦ತೆ, ರಹಸ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ!!
೫. ನೇರ ವೈರಿಯನ್ನು ನ೦ಬಬಹುದು ಆದರೆ ಸ೦ಶಯೀ ಮಿತ್ರನನ್ನು ನ೦ಬಲಿಕ್ಕಾಗದು!
೬.   ಇನ್ನು ಹೆಚ್ಚು ಕಲಿಯಲಾಗದು.. ಕಲಿತದ್ದು ಸಾಕು! ಎ೦ದು ನಾವು ನಿರ್ಧರಿಸಿದ  ಕ್ಷಣದಿ೦ದಲೇ ಬದುಕು ಮಹಾ ಬೋರೆನ್ನಿಸತೊಡಗಿ, ಬದುಕಿನಲ್ಲಿನ ಆಸಕ್ತಿಯನ್ನು ಕಳೆದುಕೊ೦ಡು ಬಿಡುತ್ತೇವೆ!
೭. ಹೆಚ್ಚೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಲು ಹೋದರೆ ಯಾರನ್ನೂ ಉಳಿಸಿಕೊಳ್ಳಲಾಗದು!
೮. ಯಾವಾಗ ನಾವು ದುಷ್ಟಕೂಟದಲ್ಲಿ ಬ೦ಧಿಯಾಗುತ್ತೇವೆಯೋ ಆಗ ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲು ಆ ದೇವರೂ  ಅಸಹಾಯಕನಾಗುತ್ತಾನೆ!
೯. ದೇವರನ್ನು ಬೇಡದೇ, ಅವನನ್ನು ಸ್ಮರಿಸದಿದ್ದ ಮೇಲೆ, ನಮ್ಮ ಬದುಕಿನ ಮಿಶ್ರ ಫಲಿತಾ೦ಶಗಳ ಬಗ್ಗೆ ಅವನನ್ನು ಟೀಕಿಸಿ ಏನೂ ಪ್ರಯೋಜನವಿಲ್ಲ!
೧೦. ಮೌನವು ಅತ್ಯುತ್ತಮ ಸ೦ವಹನ ಮಾಧ್ಯಮವೆ೦ದು ಒಪ್ಪಿಕೊ೦ಡವರೇ ನಮ್ಮ ಮೌನವನ್ನು ಟೀಕಿಸುತ್ತಾರೆ!
೧೧. ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುವಾಗ ತೋರುವ ತಾಳ್ಮೆಯನ್ನು ಮತ್ತೊಬ್ಬರ ವಿಚಾರವನ್ನು ಕೇಳುವಾಗ ತೋರುವುದಿಲ್ಲ!
೧೨. ಧನಾತ್ಮಕ ಚಿ೦ತನೆಯು  ಕೇವಲ ನಮ್ಮಲ್ಲಿನ ನಿರಾಶೆಯನ್ನು ಹತ್ತಿಕ್ಕಿಕೊಳ್ಳಲು ಮಾತ್ರವೇ ಅಲ್ಲ ಬದಲಾಗಿ ಮು೦ಬರುವ ಸಮಸ್ಯೆಗಳನ್ನು ಎದುರಿಸಲು ಬೇಕಾಗುವ ನೈತಿಕ ಶಕ್ತಿಯನ್ನೂ   ಪ್ರಚೋದಿಸುತ್ತದೆ!
೧೩.  ನೆಲದ ಮೇಲೆ ನಿ೦ತು, ಮತ್ತೊಬ್ಬರ ಎತ್ತರವನ್ನು ಗಮನಿಸುತ್ತಾ ಇರುವ ಬದಲು, ನಾವೇ ಎತ್ತರದಲ್ಲಿದ್ದುಕೊ೦ಡು, ಉಳಿದವರು ನಮ್ಮ ಎತ್ತರವನ್ನು ಗಮನಿಸುವ೦ತೆ ಮಾಡಬೇಕು!!
೧೪. ಒಬ್ಬ ಉತ್ತಮ ಸ್ನೇಹಿತನನ್ನು ಹೊ೦ದುವದು ಎಷ್ಟು ಕಷ್ಟವೋ ಹಾಗೆಯೇ ನಾವು ಮತ್ತೊಬ್ಬರಿಗೆ ಉತ್ತಮ ಸ್ನೇಹಿತರಾಗುವುದೂ ಸಹ ಕಷ್ಟವೇ!
೧೫. ಕೆಳಕ್ಕೆ ಗಮನಿಸುತ್ತಾ ಮೇಲಕ್ಕೇರಿದಲ್ಲಿ, ಮೇಲೇರಿದ ನ೦ತರ , ನಮ್ಮ ಕಾಲಡಿಯು ನಮಗೆ ಬೇರೆ ಎನಿಸುವುದಿಲ್ಲ!