Pages

Saturday, June 29, 2013

ವೇದೋಕ್ತಜೀವನ ಶಿಬಿರ

ಓಂ
ವೇದಭಾರತೀ,ಹಾಸನ,

ವೇದೋಕ್ತಜೀವನ ಶಿಬಿರ

ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ

ಮಾರ್ಗದರ್ಶನ:
 ವೇದಾಧ್ಯಾಯೀ ಸುಧಾಕರಶರ್ಮ
ಬೆಂಗಳೂರು

ಸ್ಥಳ:  ಸಹೃದಯ  ಮಂದಿರ,ಶ್ರೀ ಶಂಕರಮಠದ ಆವರಣ,ಹಾಸನ

ಶುಲ್ಕ: 500:00 ರೂಗಳು

ಮೊದಲು ಬಂದ ಕೇವಲ 40  ಜನರಿಗೆ ಅವಕಾಶ

ನೊಂದಾಯಿಸಿಕೊಳ್ಳಲು ಕಡೆಯದಿನ 15.07.2013

ಹರಿಹರಪುರಶ್ರೀಧರ್-9663572406             ಕವಿನಾಗರಾಜ್-9448501804
---------------------------------------------------------------------
ತಾತ್ಕಾಲಿಕ ಸಮಯ ಸಾರಿಣಿ

ಪ್ರಾತ:ಕಾಲ 

5:00  :ಉತ್ಥಾನ

5:00 ರಿಂದ 6:15  :ಶೌಚ-ಸ್ನಾನ-ಪಾನೀಯ

6:15 ರಿಂದ 7:00 :ಯೋಗ-ಪ್ರಾಣಾಯಾಮ [ಶ್ರೀ ಪಾರಸ್ ಮಲ್]

7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

8:00 ರಿಂದ 8.30  :ಉಪಹಾರ

8:45 ರಿಂದ 11:00 :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ  ಅವಧಿ-1 ಶ್ರೀ ಸುಧಾಕರಶರ್ಮ]

11:00 ರಿಂದ 12:00 :ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಮಧ್ಯಾಹ್ನ:

12:15 ರಿಂದ 2:30 :ಭೋಜನ ವಿಶ್ರಾಂತಿ

2:45 ರಿಂದ 4:00  :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ  ಅವಧಿ-2 ಶ್ರೀ ಸುಧಾಕರಶರ್ಮ]

4:00 ರಿಂದ 4:30  :ಪಾನೀಯ

4:30 ರಿಂದ 6:00 :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ ಅವಧಿ-3 ಶ್ರೀ ಸುಧಾಕರಶರ್ಮ]

6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

ರಾತ್ರಿ: 

7:00 ರಿಂದ  8:00 :ಉಪನ್ಯಾಸ - ಶ್ರೀ ಸುಧಾಕರಶರ್ಮ

8:15 ರಿಂದ  9:00  :ಭೋಜನ

9:00 ರಿಂದ 10:00  :ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಕೆಲವು ಮಾಹಿತಿಗಳು:

*   ವ್ಯವಸ್ಥೆ:  ವಸತಿ: ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ.  ಸಾತ್ವಿಕ ಆಹಾರ -ವೇದೋಕ್ತ ವಿಚಾರ.

*   ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.

*  ಹೊರ ಊರುಗಳಿಂದ ಬಂದು ಪಾಲ್ಗೊಳ್ಳುವ  ಸ್ತ್ರೀ ಮತ್ತು ಪುರುಷರಿಗೆ  ಪ್ರತ್ಯೇಕವಾದ ಮಲಗುವ ಮತ್ತು ಸ್ನಾನ- ಶೌಚ    
     ಗೃಹದ  ವ್ಯವಸ್ಥೆ ಇರುತ್ತದೆ ಹೊರತೂ ಒಬ್ಬೂಬ್ಬರಿಗೂ ಪ್ರತ್ಯೇಕ ಕೊಠಡಿಗಳಿರುವುದಿಲ್ಲ.

*   ವೇದೋಕ್ತ ಜೀವನ ಶಿಬಿರವು ವಿಹಾರಕ್ಕಾಗಿ ಅಲ್ಲ.

* ಶಿಬಿರಾರ್ಥಿಗಳಿಗೆ ವಿವರವಾದ ಸೂಚನೆಯನ್ನು ಮುಂದೆ ಪ್ರಕಟಿಸಲಾಗುವುದು.ಶಿಬಿರಾರ್ಥಿಗಳು ತಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ವೇದಸುಧೆ ಗೆ ಮೇಲ್ ಮಾಡಬೇಕಾಗಿ ಕೋರಿಕೆ.

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ಸುಹಾಸ್ ದೇಶಪಾಂಡೆ,ಬೆಂಗಳೂರು
3.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
4.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ ಮೂಲಕ ನೊಂದಾಯಿಸಿಕೊಂಡಿರುವವರು
1.ಶ್ರೀ ವಿಶ್ವನಾಥ್ ಕಿಣಿ-ಪುಣೆ 
2.ಶ್ರೀ ಮೋಹನ್ ಕುಮಾರ್, ನಂಜನ ಗೂಡು
3.ಶ್ರೀಗುರುಪ್ರಸಾದ್, ಭದ್ರಾವತಿ
4.ಶ್ರೀ ಮಹೇಶ್, ಭದ್ರಾವತಿ
5.ಶ್ರೀ ಶಿವಕುಮಾರ್, ಬೆಂಗಳೂರು
6.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 



ನಿಜವೋ? ಸುಳ್ಳೋ ? ನಿರ್ಧರಿಸಿ

ಇಂದು ಬೆಳಿಗ್ಗೆ ಜನಶ್ರೀಯಲ್ಲಿ "ಬದುಕಿನ ಬಗೆ" ಕಾರ್ಯಕ್ರಮ ನೋಡಲು ಕುಳಿತೆ. ಆ ಕಾರ್ಯಕ್ರಮಕ್ಕಿಂತ ಮುಂಚೆ ಡಾ. ಆರತಿಯವರು ಹೇಳುವ ಪುರಾಣದ ಕಥೆ ಪ್ರಕಟವಾಗುತ್ತೆ. ಎರಡೂ ಕಾರ್ಯಕ್ರಮ ವೀಕ್ಷಿಸುತ್ತಾ ಅದನ್ನು ರೆಕಾರ್ಡ್ ಮಾಡಿದೆ. ಎರಡೂ ಕ್ಲಿಪ್ ಕೇಳಿ. ಪುರಾಣದ ಕಥೆ ಬೇಕಾ? ನಿಜವಾದ ವೇದದ ಅರಿವು ಜೀವನಕ್ಕೆ ಬೇಕಾ? ನೀವೇ ನಿರ್ಧರಿಸಿ.ಡಾ.ಆರತಿಯವರು ತುಂಬಾ ಸೊಗಸಾಗಿ ಕಥೆ ಹೇಳುತ್ತಾರೆ. ಆದರೆ ಯಾವ ಕಥೆ ಹೇಳಿದರೆ ಜನರಲ್ಲಿ ನಿಜವಾದ ಅರಿವು ಮೂಡುತ್ತದೆ, ಎಂಬುದನ್ನು ಅವರು ವಿಮರ್ಶಿಸಿ ಕಥೆ ಹೇಳಿದರೆ ಜನರಿಗೆ ಏನು ಕೊಡಲು ಹೊರಟಿದ್ದಾರೋ ಅದು ಸಾರ್ಥಕವಾದೀತು, ಎಂಬುದು ನನ್ನ ಅನಿಸಿಕೆ. ವೇದಸುಧೆಯ ಅಭಿಮಾನಿಗಳು ಧ್ವನಿ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.ವೇದವ್ಯಾಸರು ಇಂತಾ ಕಥೆಯನ್ನೆಲ್ಲಾ ರಚಿಸಿದರೇ? ನನಗೆ ಅನುಮಾನ ಕಾಡಿದೆ. ನಿಮಗೆ?

             ಪೂರ್ವಾಗ್ರಹವಿಲ್ಲದೆ ಪುರಾಣ ಮತ್ತು ವೇದದ ವಿಚಾರವನ್ನು ಏಕ ಕಾಲಕ್ಕೆ ಪ್ರಕಟಿಸುತ್ತಿರುವ ಜನಶ್ರೀವಾಹಿನಿಗೆ ವೇದಸುಧೆಯು ಆಭಾರಿಯಾಗಿದೆ.

ಕೆಳಗಿನ   ಕ್ಲಿಪ್ ಗಳ ಮೇಲೆ ಕ್ಲಿಕ್ ಮಾಡಿ ಪ್ಲೆಯರ್ ನಲ್ಲಿ ಧ್ವನಿ ಕೇಳಿ


ನಿಮ್ಮ ಮಾತನ್ನು ವೇದಸುಧೆಯು ಗೌರವಿಸುತ್ತದೆ

ವೇದಸುಧೆಯ ಆರಂಭದಿಂದಲೂ ಸತ್ಯಾನ್ವೇಶಣೆಯಲ್ಲಿ ತನ್ನ ಎಲ್ಲಾ ಪ್ರಯತ್ನವನ್ನೂ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚು ಮಾಡುತ್ತಿದೆ..ನಮ್ಮ ಪ್ರಯತ್ನವಾದರೂ ನಾವು ಮೌಡ್ಯದಿಂದ ಆಚೆ ಬರುವ ಪ್ರಯತ್ನ. ಅದಕ್ಕೆ ವೇದದ ಆಶ್ರಯ. ಹಲವು ವೇಳೆ ನಾವು ಮಾಡುವ ಪ್ರಯತ್ನಗಳಿಂದ ಮೇಲ್ನೋಟಕ್ಕೆ ನಮ್ಮ ಆಚರಣೆಗಳ  ವಿರುದ್ಧವಾಗಿ ಕಂಡು ಇವರೇನು, ನಾಸ್ತಿಕರೇನೋ ಎನಿಸದೆ, ಇರದು. ಆದರೆ ನಿಜವಾಗಿ ಪರಿಶುದ್ಧ ಆಸ್ತಿಕ ಪ್ರಯತ್ನವಿದು. ನಮಗೆ ಹೆಚ್ಚು ಸಹಕಾರಿಯಾಗಿರುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ಒಂದೊಂದು ಮಾತನ್ನು ಬಹಳ ಆಳವಾಗಿ ನಾನು ಚಿಂತನೆ ಮಾಡುವುದುಂಟು. ಮೇಲ್ನೋಟಕ್ಕೆ ಅವರ ಮಾತುಗಳು ನಮ್ಮ ಆಚರಣೆಗಳ ವಿರುದ್ಧವಾಗಿ ಕಂಡು ಅವರೊಡನೆ ಸಾಕಷ್ಟು ವಾದ ಮಾಡಿದ್ದೇನೆ. ಆದರೆ ಕೊನೆಗೂ ಅವರಮುಂದೆ ನನ್ನದೇ ಸೋಲು.ಅವರ ಎಲ್ಲಾ  ಮಾತಿಗೂ ವೇದದ ಆಧಾರವಿದೆ. ಈ ಸಂಪಾದಕೀಯ ಬರೆಯಲು ಕಾರಣವಿದೆ. ವೇದಸುಧೆಯನ್ನು ನಿತ್ಯವೂ ಕನಿಷ್ಠ   ಮೂವತ್ತು ಜನರು  ಓದುತ್ತಾರೆ. ಸುಮಾರು 230 ಜನರಿಗೆ  ಮೇಲ್ ಮೂಲಕ ನಿತ್ಯವೂ ತಲುಪುತ್ತದೆ. ಓದುತ್ತಾರೆ. ಆದರೆ ಆ ಬಗ್ಗೆ ಮಾತನ್ನೇ ಆಡುವುದಿಲ್ಲವಲ್ಲಾ! ನಮ್ಮ ಸಂದೇಹಗಳನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಶರ್ಮರ ಮಾತುಗಳು ನಿಮಗಿಷ್ಟವಾಗಿಲ್ಲದಿದ್ದರೆ ಅದರ ಕಾರಣ ತಿಳಿಸಿದರೆ ಸರಿಯಾದ ಉತ್ತರ ಪಡೆಯಬಹುದು. ಶರ್ಮರ ಹಲವು ಉಪನ್ಯಾಸಗಳ  ಸಂಗ್ರಹ "ಶರ್ಮರ ಪುಟದಲ್ಲಿದೆ" ಅಲ್ಲದೆ ಜನಶ್ರೀ ಟಿ.ವಿ.ಯಲ್ಲಿ ಪ್ರಸಾರವಾಗುವ ಅವರ ಮಾತುಗಳ ಆಡಿಯೋ ಕೂಡ   ಇಲ್ಲಿ ಪ್ರಕಟವಾಗುತ್ತಿದೆ.ನಾವು ನಮ್ಮೆಲ್ಲಾ ಪ್ರಯತ್ನವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡುತ್ತೇವೆ.ನಮಗೆ ಅಗತ್ಯವಿರುವುದು ನಿಮ್ಮ ಅಭಿಪ್ರಾಯ. ಕಾರಣ   ನಮ್ಮ ಪ್ರಯತ್ನ ನಿಶ್ಪ್ರಯೋಜಕ ವಾಗಬಾರದು. ಅದರಿಂದ ನಾಲ್ಕು ಜನರ ನೆಮ್ಮದಿಯ ಜೀವನಕ್ಕೆ ಅನುಕೂಲವಾಗಬೇಕು. ನಮ್ಮೊಡನೆ ನಿಮ್ಮ ಭಿಪ್ರಾಯವನ್ನು  ಹಂಚಿಕೊಳ್ಳಲು vedasudhe@gmail.comಮೇಲ್ ಮಾಡುವಿರಾ?ಶ್ರೀ ಸುಧಾಕರ ಶರ್ಮರ  ಮಾತುಗಳನ್ನು ವೇದಸುಧೆ ಡಾಟ್ ಕಾಮ್ ನಲ್ಲಿ  ಕೇಳಿ.

Thursday, June 27, 2013

“ನಿಜವ ತಿಳಿಯೋಣ” ಭಾಗ-1

 ನನ್ನ ಗುರುಗಳಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25 ವರ್ಷಗಳಿಂದ ಹಲವು ಗುರುಗಳ ಹತ್ತಿರ  ನಿಯಮಿತವಾಗಿ ವೇದಾಧ್ಯಯನ ಮಾಡುತ್ತಿರುವ ಪಂಡಿತರು. ನಮ್ಮ ಸುಖಮಯ ಜೀವನಕ್ಕೆ ವೇದವು ಎಷ್ಟು ಉಪಕಾರಿ ಯಾಗಿದೆ, ಎಂದುದನ್ನು ಬಲು ಸರಳ ಸ್ಪಷ್ಟ ನುಡಿಗಳಲ್ಲಿ ತಮ್ಮ ಉಪನ್ಯಾಸ ಮಾಲೆಯಲ್ಲಿ ತಿಳಿಸಿಕೊಟ್ಟಿದ್ದಾರೆ.  ಉಪನ್ಯಾಸದ ಬರಹ ರೂಪವನ್ನು ಈ ಸಂಚಿಕೆಯಿಂದ ಆರಂಭಿಸಿ ಸುಮಾರು 20 ಸಂಚಿಕೆಯಲ್ಲಿ ಪ್ರಕಟಿಸಲಾಗುವುದು] 
  
ಯಾವುದೇ ವಿಚಾರವನ್ನು ನಾವು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅಥವಾ ಬೇರೆಯವರಿಗೆ ತಿಳಿಸಬೇಕಾದರೆ ಒಂದು ಎಚ್ಚರಿಕೆಯನ್ನು ನಾವು ವಹಿಸಬೇಕು.ಅದೇನದು? “ನಾವು ಆಡುತ್ತಿರುವ ಮಾತು ಸತ್ಯವಾಗಿದೆಯೇ? ಪ್ರಿಯವಾಗಿದೆಯೇ? ಮತ್ತು ಎಲ್ಲರ ಹಿತಕ್ಕಾಗಿ ಈ ವಿಚಾರ ಇದೆಯೇ?ನಾವು ಆಡುವ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತ ಈ ಮೂರು ಅಂಶಗಳು ಇವೆಯೇ ಎಂಬುದನ್ನು ನಾವು ಮೊದಲು ಗಮನಿಸಿಕೊಳ್ಳಬೇಕು.ಯಾವ ನಮ್ಮ ಮಾತಿನಲ್ಲಿ ಯಾವ ನಮ್ಮ ನಂಬಿಕೆಯಲ್ಲಿ ಈ ಮೂರು ಅಂಶಗಳು ಇಲ್ಲ,ಅವು ನಮಗೆ ಜೀವನದಲ್ಲಿ ನಿಶ್ಪ್ರಯೋಜಕ. ಬೆಳಗಿನಿಂದ ಸಂಜೆಯವರಗೆ ನಾವು ಆಡಿರುವ ಮಾತಿನಲ್ಲಿ ಈ ಮೂರೂ ಅಂಶಗಳು ಇವೆಯೇ?  ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ನೋಡೋಣ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವಾಡುವ ಬಹಳಷ್ಟು ಮಾತುಗಳು ಈ ಮೂರೂ ಅಂಶಗಳಿಗಿಂದ ದೂರವೇ ಇರುತ್ತದೆ. ಹೀಗಿರುವುದರಿಂದ ನಾವಾಡುವ ಮಾತಿನಿಂದ ಯಾವ ಪ್ರಭಾವ ಆಗುತ್ತಿಲ್ಲ,ಜೀವನದಲ್ಲಿ ಯಾವ ಪರಿವರ್ತನೆ ಆಗಬೇಕಿತ್ತು ಅದು ಆಗುತ್ತಿಲ್ಲ, ಮಾತು ತನ್ನ ಶಕ್ತಿಯನ್ನು ಕಳೆದುಕೊಂಡಿದೆ.ನಮ್ಮ ಜೀವನ “ಇಷ್ಟೇನಾ?” ಎನ್ನುವಂತೆ ಸಪ್ಪೆಯಾಗಿದೆ.ಆದರೆ ಹೀಗಿರಬೇಕಾಗಿಲ್ಲ. ನಮ್ಮ ಜೀವನವನ್ನು ನಗುನಗುತ್ತಾ ಸಂತಸದಿಂದ ಕಳೆಯಲು ಸಾಧ್ಯ.ನಾವು ಚೆನ್ನಾಗಿರುವುದರ ಜೊತೆಗೆ ಬೇರೆಯವರನ್ನೂ ಚೆನ್ನಾಗಿಕಾಣುತ್ತಾ ಬದುಕಬಹುದು.ಅದಕ್ಕೆ ಬೇಕಾದ ಸಕಲ ಸೂತ್ರಗಳೂ ಸಿದ್ಧವಿದೆ.ಹೊಸದಾಗಿ ಹುಡುಕುವ ಅಗತ್ಯವಿಲ್ಲ. ಅದು ಯಾವುದೆಂದರೆ ಅದುವೇ ವೇದದ ಜ್ಞಾನ.
ವೇದ ಎಂಬುದು ನಾವು ನಿತ್ಯಜೀವನದಲ್ಲಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಡುವ ಜ್ಞಾನ. ಈ ಮಾನವ ಜೀವನದಲ್ಲಿ ಹೇಗೆ ಬದುಕಬೇಕು, ಜೀವನ ಮಾಡುತ್ತಲೇ ಅಧ್ಯಾತ್ಮಸಾಧನೆಯನ್ನು ಹೇಗೆ ಮಾಡಬೇಕೆಂಬ   ಅರಿವನ್ನು ವೇದವು ತಿಳಿಸಿಕೊಡುತ್ತದೆ.ಲೌಕಿಕ ಜೀವನವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆಯೂ ಅದ್ಭುತವಾದ ಮಾರ್ಗದರ್ಶನವಿದೆ, ಮತ್ತು ಈ ಜೀವನದ ಪರಮ ಉದ್ಧೇಶವು ಕೆವಲ ಸಂಪತ್ತನ್ನುಗಳಿಸಿ ಭೋಗಜೀವನದಲ್ಲಿಮುಳುಗುವುದಲ್ಲ, ಅದರಾಚೆಗಿರುವ ಆಧ್ಯಾತ್ಮ ಸಾಧನೆಯನ್ನೂ ಮಾಡಬೇಕೆಂಬುದನ್ನು ತಿಳಿಸಿಕೊಡುತ್ತದೆ.ಇದೊಂದು ಸಮನ್ವಯದ ಚಿಂತನೆ.  ಇದನ್ನು ಅರ್ಥಮಾಡಿಕೊಳ್ಳಲು ಮಾಜದಲ್ಲಿರುವ ಎರಡು ವಿಪರೀತವಾದಗಳನ್ನು ನೋಡಬೇಕು.ಒಂದು ವಿಪರೀತವಾದವೇನೆಂದರೆ ಎಷ್ಟು ವರ್ಷಗಳು ಬದುಕ ಬೇಕಾಗಿದೆ! ಬದುಕಿರುವಷ್ಟು ಕಾಲ ಜೀವನವನ್ನು  ಭೋಗಿಸಿ ಬಿಡೋಣ.ಸಾಲಮಾಡಿಯಾದರೂ ತುಪ್ಪ ತಿನ್ನು. ಈ ಜೀವನವನ್ನು ಭೋಗವಾದ ಎನ್ನುತ್ತಾರೆ.ಇದು ಒಂದು ವಿಪರೀತವಾದದ ಗುಂಪು.
 ಈ ಜೀವನ ಎಂಬುದನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಮಾತನಾಡುವ ಮತ್ತೊಂದು  ಗುಂಪು. ಇದು ಪುನ: ವಿಪರೀತವೇ ಸರಿ. ಜೀವನವನ್ನು ಪೂರ್ಣ ತಿರಸ್ಕರಿಸಿ ಬದುಕುವ ಬಗೆಯಾದರೂ ಹೇಗೆ? ಆದರೂ ಇಂತಾದೊಂದು ವಾದವಿದೆ.ವಿಚಿತ್ರವೆಂದರೆ ವೈರಾಗ್ಯದ ಮಾತನಾಡುವವರೂ ಕೂಡ ಲೌಕಿಕವನ್ನು ಬಿಟ್ಟು ಬದುಕಲಾರರು. ಹಾಗಾಗಿ ಈ ಎರಡೂ ವಿಪರೀತವಾದಗಳ  ನಡುವೆ ಎರಡನ್ನೂ ಸಮನ್ವಯಗೊಳಿಸುವ ಒಂದು ಮಾರ್ಗವಿದೆ. ಅದೇ ವೇದದ ನಿಜವಾದ ಮಾರ್ಗ. ಅದು ಏನು ಹೇಳುತ್ತದೆ? ಮಾನವ ಜೀವನದಲ್ಲಿ ಲೌಕಿಕ ಜೀವನವನ್ನು ಅಲ್ಲಗಳೆಯುವಂತಿಲ್ಲ. ಅದು ಇರಲಿ. ಅಂದರೆ ಹೆಂಡತಿ ಮಕ್ಕಳು, ಐಶ್ವರ್ಯ, ಸಂಪತ್ತು ಎಲ್ಲವೂ ಇರಲಿ. ಆದರೆ…..ಇದೇ ಜೀವನದ ಅಂತಿಮ ಲಕ್ಷ್ಯ ಗುರಿ ಅಲ್ಲ.ಅದರಾಚೆಗೂ ಇನ್ನೇನೋ ಇದೆ. ಹಾಗಾಗಿ ಇವುಗಳಲ್ಲಿ ಮುಳುಗಿಹೋಗಬೇಡ.ಅಧ್ಯಾತ್ಮ ವಿಚಾರವನ್ನು ಮಾತನಾಡುವವನಿಗೂ ಹಸಿವಾಗುತ್ತದೆ, ಆದ್ದರಿಂದ ಅನ್ನವನ್ನು ತಿರಸ್ಕರಿಸುವಂತಿಲ್ಲ, ಐಶ್ವರ್ಯ ಸಂಪಾದನೆಯನ್ನು ತಿರಸ್ಕರಿಸುವಂತಿಲ್ಲ, ಎಲ್ಲವೂ ಬೇಕು, ಆದರೆ ಎಲ್ಲವೂ ಜೀವನಕ್ಕೆ ಎಷ್ಟುಬೇಕೋ ಅಷ್ಟರಲ್ಲಿರಲಿ, ಹೆಚ್ಚು ಮಾಡಿಕೊಂಡರೇ ನೀನೇ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ, ಹೆಚ್ಚಾಗಿ ದುಡಿದ ಯಾವ ಸಂಪತ್ತೂ ಕಡೆಯಲ್ಲಿ ನಿನ್ನಜೊತೆ ಬರುವುದಿಲ್ಲ. ಈ ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟೇ ಹೋಗಬೇಕಲ್ಲವೇ? ತೆಗೆದುಕೊಡುಹೋದವರನ್ನು ಯಾರಾದರೂ ನೋಡಿದ್ದೀರಾ?
ಆದ್ದರಿಂದ ಕಡೆಯಲ್ಲಿ ಬಿಟ್ಟೇ ಹೋಗಬೇಕಾದ ಸಂಪತ್ತನ್ನು ಎಷ್ಟು ಮಾಡಿಕೊಳ್ಳಬೇಕು? ಇದಕ್ಕಾಗಿ ವಾಮಮಾರ್ಗದಲ್ಲೂ ಸಂಪಾದಿಸಬೇಕೇ? ಇರುವಾಗ ಬದುಕಲು ಹಣದ ಅವಶ್ಯಕತೆ ಇದೆ, ಅದಕ್ಕಾಗಿ ಸಂಪಾದಿಸಲೇ ಬೇಕು.ಅದು ಸರಿ. ಅದು ಕರ್ತವ್ಯವೂ ಕೂಡ.ಸರಿ, ಹಾಗಾದರೆ ಉಳಿದ ಸಮಯವನ್ನೆಲ್ಲಾ ಕಳೆಯುವುದಾದರೂ ಹೇಗೆ? ಅದನ್ನೇ ತಿಳಿದುಕೊಳ್ಳಬೇಕಾದ್ದು. ನಿನ್ನ ಅಗತ್ಯ ದುಡಿಮೆಗೆ ಹೊರತಾಗಿ ಹೆಚ್ಚಾಗಿ ಇರುವ ಸನಯವನ್ನು ಆಧ್ಯಾತ್ಮದ ಸಾಧನೆಗಾಗಿ ಬಳಸಿಕೋ.ಕಾರಣ  ಏನೆಂದರೆ ಈ ಆಧ್ಯಾತ್ಮಿಕ ಸಾಧನೆಮಾಡಲು ಈ ಮನುಷ್ಯಜನ್ಮದಲ್ಲಿ ಮಾತ್ರವೇ ವಿಶೇಷ ಅವಕಾಶವಿದೆ. ಬೇರೆ ಯಾವ ಜನ್ಮದಲ್ಲೂ ಆಧ್ಯಾತ್ಮಿಕ ಸಾಧನೆಮಾಡಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯೇತರ ಜೀವಿಗಳಿಗೆ  ಇರುವ ಶರೀರ, ಇಂದ್ರಿಯ ಮನಸ್ಸುಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡುವ ಸಾಮರ್ಥ್ಯ ಇಲ್ಲ. ಸರಳವಾಗಿ ಹೇಳಬೇಕೆಂದರೆ  ನಮ್ಮ ಶರೀರವು ಒಂದು   ಸೈಂಟಿಫಿಕ್ ಕ್ಯಾಲ್ಕುಲೇಟರ್ ಇದ್ದಂತೆ.ಮಿಕ್ಕ ಜೀವಿಗಳದ್ದು ಸಾಮಾನ್ಯ ಕ್ಯಾಲ್ಕುಲೇಟರ್ . ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು ಇಷ್ಟು ಮಾತ್ರ ಮಾಡಲು ಸಾಧ್ಯ. ನಮ್ಮ ಕ್ಯಾಲ್ಕುಲೇಟರ್ ಆದರೋ ವಿಶೇಷ ಕ್ಯಾಲ್ಕುಲೇಟರ್. ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು,ಜೊತೆಗೆ ಟ್ಯಾನ್ ತೀಟಾ, ಕಾಸ್ ತೀಟಾ, ಟ್ಯಾನ್ ಇನ್ವರ್ಸ್ ಅಲ್ಲದೆ ಇನ್ನೂ ಹಲವಾರು ವಿಶೇಷ ಲಾಭಕ್ಕಾಗಿ ಉಪಯೋಗಿಸಬಹುದು.ಆದರೆ ಸಾಮಾನ್ಯ  ಭೋಗ ಜೀವನ ಅಪೇಕ್ಷಿಸುವವನು ಈ ಒಂದು ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ  ಕೂಡು,ಕಳೆ,ಗುಣಿಸು, ಭಾಗಿಸುವುದಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಇಷ್ಟು ಸಾಧಾರಣ ಕೆಲಸ ಮಾಡಲು ಇಂತಹಾ ಉತ್ತಮ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬೇಕಾಗಿತ್ತೇ? ಪ್ರಾಣಿಗಳಂತೆ ಕೇವಲ  ತಿಂದುಉಂಡು ಮಕ್ಕಳನ್ನು ಹಡೆಯಲು ಮನುಷ್ಯ ಶರೀರವೇ ಬೇಕೇ? ಯಾವ ಪ್ರಾಣಿಯೂ ಇಷ್ಟು ಕೆಲಸ ಮಾಡುತ್ತೆ.  ಅಷ್ಟನ್ನೇ ಮನುಷ್ಯ ಶರೀರದಲ್ಲೂ ಮಾಡಿದರೆ ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ ಕೂಡು ಕಳೆಯುವುದಕ್ಕೆ ಉಪಯೋಗಿಸಿದಂತಾಗುತ್ತದೆ.ಇಷ್ಟೇ ಸರಳವಾದ ವಿಚಾರವಿದು.ಮನುಷ್ಯ ಶರೀರ ಸಿಕ್ಕಿರುವಾಗ ಅದನ್ನು ಉಪಯೋಗಿಸಿಕೊಂಡು ಎಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಬೇಕು.ಆಗ ಮಾತ್ರ ಮನುಷ್ಯನಾಗಿ ಹುಟ್ಟಿದ್ದಕ್ಕೂ ಸಾರ್ಥಕ ವಾಗುತ್ತದೆ.ಹಾಗಾದರೆ ಕೂಡು ಕಳೆಯುವ ಲೆಕ್ಖಾಚಾರ ಬೇಡವೇ? ಅದೂ ಬೇಕು. ಆದರೆ ನಮ್ಮ ಜೀವನ ಅಷ್ಟಕ್ಕೇ ನಿಲ್ಲ ಬಾರದು. ಈ ವಿಶಿಷ್ಟವಾದ ಮಾನವ ಶರೀರವನ್ನು ಉಪಯೋಗಿಸಿಕೊಂಡು ಏನಾದರೂ ಉತ್ತಮ ಕೆಲಸ ಮಾಡಬೇಕು.
ನಮಗೆ ಈಗ ಅರ್ಥವಾಗಬಹುದು ಸಮನ್ವಯದ ಸೂತ್ರ. ಲೌಕಿಕ ಜೀವನ ಬೇಡವೇ? ಬೇಕು. ಶರೀರ  ಮನಸ್ಸು ಇಂದ್ರಿಯಗಳ ಪೋಷಣೆಗಾಗಿ ಏನೇನು ಬೇಕೋ ಎಲ್ಲವೂ ಬೇಕು. ಆದರೆ ಅದೇ ಕೊನೆಯಲ್ಲ. ಅದನ್ನು ಆಧಾರವಾಗಿಟ್ಟುಕೊಂಡು ಮುಂದೆ ಆಧ್ಯಾತ್ಮಿಕ ಸಾಧನೆಮಾಡಬೇಕಾಗಿದೆ ಏಕೆಂದರೆ ಮನುಷ್ಯಜೀವ ಒಂದೇ ಅಧ್ಯಾತ್ಮ ಸಾಧನೆ ಮಾಡಲು ಇರುವ ಅವಕಾಶ. ಈ ಶರೀರವನ್ನು ಬಳಸಿ ಕೊಂಡು ಸಾಧನೆ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ.ಇದೇ ಸಮನ್ವಯದ ಗುಟ್ಟು.ಇದನ್ನೇ ಶ್ರೀ ಕೃಷ್ಣ ಹೇಳಿದ್ದು “ಸಮತ್ವಂ ಯೋಗ ಉಚ್ಚತೇ”. ಇದನ್ನು ಗುರುತಿಸಿಕೊಂಡವನು ಸಾಧನೆ ಮಾಡಬಲ್ಲ. ಹಿಂದಿನ ಋಷಿಮುನಿಗಳೆಲ್ಲಾ ಬಹುಪಾಲು ಗೃಹಸ್ಥರೇ ಆಗಿದ್ದರು. ವೈರಾಗ್ಯದ ಹೆಸರಲ್ಲಿ ತಮ್ಮ ಲೌಕಿಕ ಜೀವನವನ್ನು ಅಲ್ಲಗಳೆದವರಲ್ಲ. ಅವರು ಲೌಕಿಕ ಜೀವನದಲ್ಲಿದ್ದುಕೊಂಡೇ ಆಧ್ಯಾತ್ಮಿಕ ಸಾಧನೆ ಮಾಡಿದವರು.ಇದೇ ಸರಿಯಾದ ಮಾರ್ಗ. ಇದುವೇ ಸಮತ್ವದ ಜೀವನ. ಈ ಮಾರ್ಗವನ್ನು ತಿಳಿಸುವ ಏಕೈಕ ವಿಜ್ಞಾನ ಶಾಸ್ತ್ರವೆಂದರೆ ಅದು ವೇದ. ವೇದವೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಬೇಕಾದ, ಶ್ರಾದ್ಧಾದಿಗಳನ್ನು ಮಾಡಿಸಲು ಇರುವ ಮಂತ್ರಗಳಲ್ಲ. ಒಂದೊಂದು ವೇದ ಮಂತ್ರದಲ್ಲೂ ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಅದ್ಭುತವಾದ ಜ್ಞಾನ ಭಂಡಾರ ಇದೆ. ನಾವು ಅದನ್ನು ಉಪಯೋಗಿಸಿಕೊಂದು  ಬದುಕಿಗೆ  ಅಳವಡಿಸಿಕೊಂಡು ಜೀವನ ಮಾಡಿದ್ದೇ ಆದರೆ ನಾವೂ ಚೆನ್ನಾಗಿರಬಹುದು, ಜೊತೆಯಲ್ಲಿರುವ ಇತರರನ್ನೂ ಚೆನ್ನಾಗಿರುವಂತೆ ಮಾಡಬಹುದು.ಲೌಕಿಕ ಮತ್ತು ಆಧ್ಯಾತ್ಮಿಕದ ಸಮತ್ವವನ್ನು ಕಾಪಾಡಿಕೊಂಡು ಜೀವನ ನಡೆಸಲು ಇದರಿಂದ ಸಾಧ್ಯ.
ಹಿಂದಿನ ತಲೆಮಾರಿನವರು ಆಧ್ಯಾತ್ಮಿಕ ವಿಷಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆದರೆ  ಈಗಿನ ಪೀಳಿಗೆ “ಯಾಕೆ” ಅಂತ ಪ್ರಶ್ನೆ ಕೇಳಿದರೆ ಹಿಂದಿನ ತಲೆಮಾರಿನವರಲ್ಲಿ ಸ್ಪಷ್ಟ ಉತ್ತರವಿಲ್ಲ. ನಮ್ಮ ಹಿಂದಿನವರು ಮಾಡುತ್ತಿದ್ದರು. ಅದಕ್ಕೆ ನಾನೂ ಮಾಡುತ್ತಿರುವೆ. ನೀನೂ ಮಾಡು, ಹೀಗೆ ಕೊಡುವ ಉತ್ತರದಿಂದ ಇಂದಿನ ಯುವ ಪೀಳಿಗೆಗೆ ಸಮಾಧಾನವಾಗುವುದಿಲ್ಲ. ಹಿಂದಿನ ತಲೆಮಾರು ಮತ್ತು ಈಗಿನ ಯುವ ಪೀಳಿಗೆಯ ನಡುವೆ ಇರುವ ಸಮಸ್ಯೆಯೇ ಇದು. ಇಂದಿನ ಯುವ ಪೀಳಿಗೆ ಏನು ಹೇಳಬಹುದು? ಜೀವನದಲ್ಲಿ ಅನುಭವಿಸಲು ಏನೋ ಸಿಗುತ್ತಿರುವ ಹೊತ್ತಿಗೆ ನೀವು ಅಡ್ಡಿ ಮಾಡುವುದು ಸರಿಯೇ? ಎಂದು ಹಿಂದಿನ ತಲೆಮಾರಿನವರಿಗೆ ಪ್ರಶ್ನೆ ಹಾಕುತ್ತಾರೆ. ಇಂದಿನ ಪೀಳಿಗೆಯ ಪ್ರಶ್ನೆಗೆ ಹಿಂದಿನ ತಲೆಮಾರಿನವರಿಗೆ ಉತ್ತರ ಕೊಡಲು ಗೊತ್ತಿಲ್ಲದಿರುವುದು ಇಂದಿನ ಸಮಸ್ಯೆಗೆಲ್ಲಾ ಮೂಲ ಕಾರಣವಾಗಿದೆ. ಎಲ್ಲರ ಮನೆಗಳಲ್ಲೂ ಈ ಸಮಸ್ಯೆಯನ್ನು ಕಾಣಬಹುದಾಗಿದೆ. ಈ ಎರಡೂ ಪೀಳಿಗೆಗೆ ಸರಿಯಾಗಿ ಸಮನ್ವಯ ಮಾಡುವ ಸಾಮರ್ಥ್ಯ ಇರುವುದು ವೇದಕ್ಕೆ ಮಾತ್ರ. ಹಿಂದಿನವರು ಗೊಡ್ಡು ಸಂಪ್ರದಾಯವನ್ನು ಹೇಳುತ್ತಿದ್ದರೆ ಅದು ಹಾಗಲ್ಲ, ಇದು ಸರಿಯಾದ ಮಾರ್ಗ ಎಂದು ಋಜುಮಾರ್ಗವನ್ನು  ತೋರಿಸಿ ಅವರನ್ನು ತಿದ್ದಲು ಸಹಾಯಕವಾಗುತ್ತದೆ. ಅದೇ ಸಮಯದಲ್ಲಿ ಇಂದಿನ ಪೀಳಿಗೆಯವರ ಪ್ರಶ್ನೆಗಳಿಗೆ ಸರಿಯಾದ ವೈಜ್ಞಾನಿಕ ಉತ್ತರಕೊಟ್ಟು ಅವರ ಅಭ್ಯುದಯಕ್ಕೂ ಕಾರಣ ವಾಗುತ್ತದೆ. ಇದು ವೇದದ ವೈಶಿಷ್ಠ್ಯ.

Monday, June 24, 2013

ಯೋಚಿಸಲೊ೦ದಿಷ್ಟು... ೬೫




೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು  ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು!
೨. ಸತ್ಯವನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ನಡೆಯುವಷ್ಟೂ ದಿನವೂ ನಮ್ಮ ಪ್ರಾಮಾಣಿಕ ನಡೆಗೆ ಕು೦ದು೦ಟಾಗದು!
೩. ಜೀವನದಲ್ಲಿ ರಾಜಿ ಮಾಡಿಕೊಳ್ಳಲೇ ಬೇಕಾಗುತ್ತದೆ. ಆದರೆ ಸುಳ್ಳಿನೊ೦ದಿಗಲ್ಲ!
೪. ಸತ್ಯವನ್ನು ಬಚ್ಚಿಟ್ಟುಕೊಳ್ಳಲಾಗದು. ಯಾವತ್ತಿಗಾದರೂ ಅದು ಹೊರಬರಲೇ ಬೇಕು!
೫. ಜೀವನದಲ್ಲಿ ನಾವು ಎದುರಿಸಬಹುದಾದ ಪರಿಸ್ಠಿತಿಗಳಿಗೆ ನಮ್ಮ ಕಾಣಿಕೆಯೂ ಇರುತ್ತದೆ!
೬. ಮಕ್ಕಳ ಕುತೂಹಲವನ್ನು ಕೆಲವೊಮ್ಮೆ ತಣಿಸಲೇಬೇಕು! ಅವರ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು! ಹಾರಿಕೆಯ ಉತ್ತರ ಸಮಾಧಾನವನ್ನು ನೀಡದಿದ್ದಲ್ಲಿ, ಸರಿಯಾದ ಉತ್ತರವನ್ನು ಕ೦ಡುಕೊಳ್ಳುವ ಮತ್ತೊ೦ದು ಕುತೂಹಲದೊಳಗೆ ಅವರು ಬೀಳಬಹುದು!
೭. ಸಾಮಾನ್ಯವಾಗಿ ಪ್ರತಿಯೊ೦ದರತ್ತವೂ ನಾವು ಪೂರ್ವಾಗ್ರಹ ಮನಸ್ಸಿನ೦ದಲೇ ಗಮನ ಹರಿಸುತ್ತೇವೆ! ಪರಿಸ್ಠಿತಿಯ ಉಗಮದ ಮೂಲಕ್ಕೆ ನಮ್ಮಲ್ಲಿ ಸಿಧ್ಧ ಉತ್ತರವೊ೦ದು ತಯಾರಾಗಿರುತ್ತದೆ!
೮. ಇದ್ದುದರೊಳಗೆ ಸುಖವನ್ನು ಕಾಣುವ ಮನಸ್ಸೆ೦ಬುದು ಎ೦ಥಹಾ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸಿನೊಡೆಯನನ್ನು ಪ್ರೇರೇಪಿಸುತ್ತದೆ!
೯. ವಿಧಿ ಲಿಖಿತ ತಪ್ಪಿಸಲಾಗದು!  ಕಷ್ಟಗಳನ್ನೆದುರಿಸಲಾಗದೇ ದೇವರಲ್ಲಿ ಮೊರೆ ಹೋಗುವವರು ದೇವಸ್ಥಾನಗಳಿಗೆ- ದೇವರ ಹು೦ಡಿಗಳಿಗೆ ಹಣ ಹಾಕುವ ಬದಲು  ಬೇರೇನನ್ನೂ ಮಾಡರು! ಕಷ್ಟದಿ೦ದ ಹೊರ ಬರುವ ಚಿ೦ತನೆಯನ್ನಾಗಲೀ ಉಪಾಯವನ್ನಾಗಲೀ ಮಾಡುವ ಗೋಜಿಗೇ ಹೋಗರು!
೧೦. ವಿಧಿ ಎನ್ನುವುಧು ದೇವರ ಉತ್ಸವ ಮೂರ್ತಿಯನ್ನೂ ಕಾಡದೇ ಇರದು!
೧೧. ಸತ್ಯದ ಹಾದಿಯಲ್ಲಿ ನಡೆಯುವವರ ಮು೦ದೆ ನಡೆಯಲಾಗದಷ್ಟು ಮುಳ್ಳಿನ ಹಾದಿ ಚಾಚಿಕೊ೦ಡಿರುತ್ತದೆ!
೧೨. ಪ್ರಾಮಾಣಿಕತೆಯೆ೦ಬುದು ಬದುಕನ್ನು ಬೆಳಗುವ ಸಾಧನವಾಗಿರುವ೦ತೆಯೇ ಕೆಲವೊಮ್ಮೆ  ಬದುಕನ್ನು ಆರಿಸುವ ಬೆ೦ಕಿಯಾಗಲೂ ಬಹುದು!
೧೩.ಸ೦ಸಾರದಲ್ಲಿ ಸಾಮರಸ್ಯವಿದ್ದರಷ್ಟೇ ಸಾಲದು! ಪರಸ್ಪರ ನ೦ಬಿಕೆ ಹಾಗೂ ಗೌರವಗಳಿರಬೇಕು.
೧೪. ಕೆಟ್ಟ ಯೋಚನೆಗಳನ್ನು ಮಾಡುವವನು ಹಾಗೂ ಮತ್ತೊಬ್ಬರ ಬದುಕಿನಲ್ಲಿನ ಬೆ೦ಕಿಯಲ್ಲಿ ತನ್ನ ಆಹಾರವನ್ನು ಬೇಯಿಸಿಕೊಳ್ಳವವನು, ತನ್ನವರಿಗೂ ಒಳಿತನ್ನು ಬಯಸನು!

೧೫.ಸತ್ಯದ ಹಾದಿಯಲ್ಲಿ  ಆರ೦ಭದಲ್ಲಿ ಬೀಸುವ ತ೦ಗಾಳಿ ಕ್ರಮೇಣವಾಗಿ ಬಿರುಗಾಳಿಯಾಗಬಹುದು! ಎದೆಯೊಡ್ಡಿ ನಿಲ್ಲುವ ಹಾಗೂ ಗೆಲ್ಲುವ ಛಲವಿರಬೇಕಷ್ಟೇ!

Friday, June 21, 2013

ಚರ್ಚೆ ಸಾಕೋ? ಅಧ್ಯಯನ ಬೇಕೋ?


ನನ್ನ ಹುಟ್ಟೂರಿನ ಯುವಕರಿಗೆ ನಮ್ಮ ಧಾರ್ಮಿಕ ಆಚರಣೆಗಳ , ನಂಬಿಕೆಗಳ ಬಗ್ಗೆ ಚರ್ಚೆ ಮಾಡುವಾಸೆ. ಅದಕ್ಕಾಗಿಯೇ ನಮ್ಮ ಯುಕರು ಒಂದು ಫೇಸ್ ಬುಕ್ ಗುಂಪನ್ನು ಮಾಡಿಕೊಂಡಿದ್ದಾರೆ. ಅಲ್ಲಿ ಈಗ "ದೇವರು ಮೈಮೇಲೆ"  ಬರುವ ಬಗ್ಗೆ ಚರ್ಚೆ ಆರಂಭವಾಗಿದೆ. ಅದು ಚರ್ಚೆಗಿಂತ ಹೆಚ್ಚಾಗಿ ಇದನ್ನು  ನಂಬುತ್ತೀರಾ? ಇಲ್ವಾ? ಸರಿಯೇ? ತಪ್ಪೇ? ಎಂಬ ನೇರವಾದ ಅಭಿಪ್ರಾಯವನ್ನು ಬಯಸಿದ್ದಾರೆ. ಒಂದು ವೇಳೆ ಅಲ್ಲಿರುವ ಎಪ್ಪತ್ತು ಎಂಬತ್ತು ಜನರಲ್ಲಿ ಐವತ್ತು ಜನ ಸರಿ ಎಂದರೆ ಅದು ಸರಿಯೇ? ಅಥವಾ ಐವತ್ತು ಜನ ಅದು ತಪ್ಪು ಎಂದರೆ ತಪ್ಪೇ? ಇದೇನು ಅಂಕಿಯ ಆಟವೇ? ಅದಕ್ಕೆ ನಾನು ಅಲ್ಲಿ ಚರ್ಚೆ ಮಾಡುವ ಬದಲು ನನ್ನ ಮುಖ ಪುಟದಲ್ಲಿ ಬರೆದು ನನಗೆ ಮೆಸ್ಸೇಜ್ ಮಾಡಿದವರಿಗೆ ಅಲ್ಲಿಯೇ ಬಂದು ನೋಡಲು   ತಿಳಿಸಿದೆ. ಅಲ್ಲೂ ಬಂದರು. ಮತ್ತೆ ಅದೇ ಪ್ರಶ್ನೆ. ಇದನ್ನು ಒಪ್ಪುತ್ತೀರಾ? ಇಲ್ವಾ? ನಾನು ಒಪ್ಪಿದರೇನು? ಬಿಟ್ಟರೇನು? ಸತ್ಯ ಎನ್ನುವುದನ್ನು ತಿರುಚಲು ಸಾಧ್ಯವೇ? ಅದಕ್ಕಾಗಿ ಅವರಿಗಾಗಿ ಬರೆದ ಸರಳ ಮಾತುಗಳನ್ನು ನೀವೂ ಓದ ಬಹುದು. ಈ ಬಗ್ಗೆ ಅಭಿಪ್ರಾಯವನ್ನೂ ಹಂಚಿ ಕೊಳ್ಳ ಬಹುದು.


ನಮ್ಮೂರ ಹುಡುಗರು " ದೇವರು ಮೈದುಂಬಿ ಬರುವುದರ" ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಲ್ಲಿ ಚರ್ಚೆ ಮಾಡುತ್ತಾ ಹೋದರೆ ಕೆಲವರ ಮನಸ್ಸಿಗೆ ಬೇಸರವೂ ಆಗಬಹುದು.ಆದರೆ ಆ ಬಗ್ಗೆ ನನ್ನ ಅಭಿಪ್ರಾಯವನ್ನು ನನ್ನ ಮುಖಪುಟದಲ್ಲಿ ಪ್ರಕಟಿಸದಿದ್ದರೆ ಆತ್ಮವಂಚನೆ ಮಾಡಿದಂತಾಗುತ್ತದೆ. ದೇವರು ಮೈದುಂಬಿ ಬರುವುದನ್ನು ಚರ್ಚುಸುವ ಮುಂಚೆ ದೇವರ ಸ್ವರೂಪದಬಗ್ಗೆ ಚಿಂತನೆ ನಡೆಸ ಬೇಕಾಗುತ್ತದೆ. ಭಗವಂತನು ಸರ್ವಾಂತರ್ಯಾಮಿ, ನಿರಾಕಾರಿ ಎಂಬುದನ್ನು ವೇದವು ಹಲವು ಮಂತ್ರಗಳಲ್ಲಿ ಸಾರಿ ಹೇಳಿದೆ. ಅದರಿಂದಲೇ ನಮ್ಮ ಪೂರ್ವಜರು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರೇ ಹೊರತೂ ವಿಗ್ರಹಾರಾಧನೆಯನ್ನಲ್ಲ. ವಿಗ್ರಹಾರಾಧನೆ ಬಂದಿರುವುದೇ ಪುರಾಣದ ಕಾಲದಲ್ಲಿ. ನಾವು ತಿಳಿಯಬೇಕಾದುದೇನೆಂದರೆ ವೇದವನ್ನು ಅರ್ಥಮಾಡಿಕೊಳ್ಳುವುದು ಕ್ರಮೇಣ ಕಡಿಮೆಯಾದಾಗ ಭಗವಂತನ ಬಗ್ಗೆ ಹೇಗಾದರೂ ನಂಬಿಕೆ ಉಳಿಯಲಿ, ಎಂದು ನಮ್ಮ ಪೂರ್ವಜರು ವಿಗ್ರಹಾರಾಧನೆಯ ಆಚರಣೆ ತಂದರು. ಇದು ಯಾರಿಗೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳ ಬೇಕು. ಅರಿವು ಕಡಿಮೆ ಇದ್ದವರಿಗೆ ಆಚರಣೆಗೆ ತಂದ ಪದ್ದತಿಗಳು ಬರು ಬರುತ್ತಾ ಇದೇ ವೇದೋಕ್ತವೆನಿಸುವ ಮಟ್ಟಿಗೆ ಬೆಳೆಯಿತು. ನಿಜವಾಗಿ ಅರಿವಿನ ಕೊರತೆ ಇದ್ದವನು ಮಾಡ ಬೇಕಾದುದನ್ನು ಪಂಡಿತರೂ ಕೂಡ ಮಾಡಲಾರಂಭಿಸಿದರು. ಯಾವಾಗ ಪಂಡಿತರೇ ವಿಗ್ರಹಾರಾ ಧನೆ ಆರಂಭಿಸಿದರೂ ಚೆನ್ನಾಗಿಯೇ ಬಣ್ಣ ಕಟ್ಟಿದರು. ಜನರೂ ಒಪ್ಪಿದರು." ದೇವ ನೊಬ್ಬ ನಾಮ ಹಲವು" ಎನ್ನುತ್ತಾ ರೂಪವನ್ನೂ ಹಲವು ಮಾಡಿ ಬಿಟ್ಟರು. ದೇವರಲ್ಲಿಯೇ ಪತಿ-ಪತ್ನಿ ಸಂಬಂಧವನ್ನು ಕೂಡ ತಂದು ಬಿಟ್ಟರು. ಇಷ್ಟೆಲ್ಲಾ ಆದ ಮೇಲೆ ಅವನಿಗೆ ಸ್ನಾನ ಬೇಡವೇ? ನೈವೇದ್ಯ ಬೇಡವೇ? ಅಷ್ಟೇ ಅಲ್ಲ ಜೋಗುಳ ಹೇಳಿ ಮಲಗಿಸಿಯೂ ಬಿಟ್ಟರು. ಈಗ ಯೋಚನೆ ಮಾಡಬೇಕು. ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ಭಗವಂತನು ನಿದ್ರಿಸಿಬಿಟ್ಟರೆ ಪ್ರಪಂಚದ ಗತಿ  ಏನಾಗಬೇಕು!!

         ಈ ಮಾತಿಗೆಲ್ಲಾ ವೇದ ಮಂತ್ರದ ಆಧಾರವಿದೆ. ಸಮಯ ಬಂದಾಗ ಬರೆಯುವೆ. ಈಗ ದೇವರು ಮೈದುಂಬಿಬರುವ ಬಗ್ಗೆ ವಿಚಾರ ಮಾಡಬೇಕಲ್ಲವೇ? ಇದನ್ನು ನಿರಾಕರಿಸುವಂತೂ ಇಲ್ಲ, ಒಪ್ಪಿಕೊಳ್ಳುವಂತೂ ಇಲ್ಲ. ಕಾರಣ ದೇವರು ಮೈ ದುಂಬಿ ಬಂದಿದ್ದ ವ್ಯಕ್ತಿ ತನ್ನ ಸಹಜ ಸ್ಥಿತಿ ಯಲ್ಲಿರುವುದಿಲ್ಲ. ಹಾಗಾಗಿ ಅವನು ತನ್ನ ಸಹಜ ಸ್ಥಿತಿಯಲ್ಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಆದರೆ ದೇವರು ಮೈ ದುಂಬಿದೆಯೇ? ಎಂದರೆ ನಿಮಗೆ ಸರಿಯಾದ ಉತ್ತರ ಸಿಗಲಾರದು. ಆ ವ್ಯಕ್ತಿ ಲೌಕಿಕ ಪ್ರಪಂಚವನ್ನು ಮರೆತು ಅಲೌಕಿಕದಲ್ಲಿ ಧ್ಯಾನಾಸಕ್ತನಾಗಿದ್ದರೆ , ಅದೇ ಸಮಯಕ್ಕೆ ಯಾವುದಾದರೂ ದೇವರ ಹೆಸರನ್ನು ಮನದಲ್ಲಿ ತುಂಬಿಕೊಂಡಿದ್ದರೆ ಅವನು ಅಸಹಜವಾಗಿ ವರ್ತಿಸಬಹುದು. ಮನಸ್ಸಿನಲ್ಲಿ ಯೋಚಿಸುತ್ತಿದ್ದ ವಿಷಯಗಳ ಬಗ್ಗೆ ಬಡಬಡಿಸಬಹುದು.ಅವನ ಸ್ಥಿತಿ ಅಸಹಜವಾಗಿದೆ! ಬಾಯಲ್ಲಿ ಭಕ್ತರಿಗೆ ಬೇಕಾದ ಮಾತುಗಳು ಬರುತ್ತಿವೆ!! ಆಗ ಸಹಜವಾಗಿ ಜನರು ಹೇಳುತ್ತಾರೆ" ದೇವರು ಮೈ ದುಂಬಿದೆ!! ಇಲ್ಲಿ ಮೈದುಂಬಿಸಿಕೊಂಡವನನ್ನು ಖಂಡಿಸುವಂತಿಲ್ಲ. ಕಾರಣ ಆ ಸಮಯದಲ್ಲಿ ಅವನು ಏನು ಮಾಡುತ್ತಿದ್ದಾನೆಂಬ ಅರಿವು ಅವನಿಗಿರಲಾರದು. ಆದರೆ ಮನಸ್ಸಿನಲ್ಲಿದ್ದುದೆಲ್ಲಾ ಹೊರಬಂದಿದೆ! ಇದೊಂದು ರೀತಿಯ ಮಾನಸಿಕ ವಿಜ್ಞಾನದಿಂದ ತಿಳಿಯಬೇಕಾದ ಅಂಶವೆಂದರೆ ಕೆಲವರು ಒಪ್ಪುವುದಿಲ್ಲ. ಇವನು ದೈವ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲು ಹೇಸುವುದಿಲ್ಲ.ಇದಕ್ಕೆಲ್ಲಾ ಪ್ರತ್ಯಕ್ಷವಾಗಿ ಕಂಡಿರುವ ಹಲವು ಉಧಾಹರಣೆಗಳಿವೆ. ಯುವಕರು ಈ ವಿಚಾರವನ್ನು ಚರ್ಚಿಸುವುದಲ್ಲ, ಅಧ್ಯಯನ ಮಾಡಬೇಕು. ಪ್ರಜಾಪ್ರಭುತ್ವ ಪದ್ದತಿಯಂತೆ ಹತ್ತು ಜನ ಇದು ಸರಿ ಎಂದರೆ ಸರಿ ಯಾಗುವುದಿಲ್ಲ ಹತ್ತು ಜನ ತಪ್ಪು ಎಂದರೆ ತಪ್ಪಾಗುವುದಿಲ್ಲ. ನಮಗೆ ಎಲ್ಲಕ್ಕೂ ಆಧಾರ ವೇದ. ವೇದವು ಈ ಬೂಟಾಟಿಕೆಯನ್ನು ಒಪ್ಪುವುದಿಲ್ಲ.


ಅಧ್ಜ್ಯಯನ ಮಾಡಲು ಸಮಯ ಸಾಲದಾದರೆ ಇತ್ತೀಚೆಗೆ ದೂರದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳ ಪ್ರಸಾರವಾಗುತ್ತಿದೆ. ಅದರಲ್ಲಿ ಒಂದು ಜನಶ್ರೀಯಲ್ಲಿ  ಪ್ರತಿದಿನ ಬೆಳಿಗ್ಗೆ 7.15 ರಿಂದ 7.45 ರ ಮಧ್ಯೆ  ಹತ್ತು ನಿಮಿಷಗಳ ಅವಧಿಯ ಮೂರು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು  ಸತ್-ಚಿತ್-ಆನಂದ ಪದಗಳ   ವಿಮರ್ಶೆ ಮಾಡುತ್ತಿದ್ದಾರೆ. ಭಗವಂತನ ನಿಜವಾದ ಸ್ವರೂಪವಾದ ಸಚ್ಚಿದಾನಂದ ಸ್ವರೂಪದ ಬಗ್ಗೆ ತಿಳಿದುಕೊಳ್ಳಲು ಆ ಕಾರ್ಯಕ್ರಮ ನೋಡಬೇಕು. ಅವರ ಮಾತು ವೇದಕ್ಕೆ ಅನುಗುಣವಾಗಿದ್ದರೆ ಒಪ್ಪಬಹುದು. ಇಲ್ಲವಾದರೆ ಆಧಾರಸಹಿತ ಯಾವ ವಿಚಾರದಲ್ಲಿ ತಪ್ಪಾಗಿದೆ ಎಂದು ಹೇಳುವ ಅಧಿಕಾರವು ನೋಡುಗರಿಗೆ ಇದ್ದೇ ಇದೆ.
https://www.facebook.com/hariharapursridhar

Sunday, June 9, 2013

ಸಮಾಜಕ್ಕಾಗಿ ಏನಾದರೂ ಮಾಡಲು ಬದುಕಬೇಕು.






ಚಿದ್ರೂಪಾನಂದ ಸರಸ್ವತಿಸ್ವಾಮೀಜಿಯವರೊಡನೆ ಶ್ರೀದತ್ತಾತ್ರೇಯ ಭಟ್



ಶ್ರೀಮತೀ ಸ್ವರೂಪರಾಣಿ

ಶ್ರೀಮತಿ ಸ್ವರೂಪರಾಣಿಯವರ ಮನೆಯಲ್ಲಿ ಸ್ವಾಮಿ ಚಿದ್ರೂಪಾನಂದರು

ಮನೆಯೇ ಗ್ರಂಥಾಲಯ


ಸಭೆಯ ಮುಂದಿನ ಸಾಲಿನಲ್ಲಿ ಹಾಸನದ ವೇದಭಾರತೀ ಸದಸ್ಯರು

ನೋಡಲು ಹೋಗಿದ್ದ ನನ್ನದೂ ಒಂದು ಪಾತ್ರ




ಆರ್.ಎಸ್.ಎಸ್. ಪ್ರೇರಿತ ಧರ್ಮಜಾಗರಣ ವಿಭಾಗದ ಪ್ರಾಂತ ಸಂಚಾಲಕರಾದ ಶ್ರೀಯುತ ಗ.ರಾ.ಸುರೇಶ್ ನನಗೆ ದೂರವಾಣಿಯಲ್ಲಿ ಮಾತನಾಡಿ ಒಂದು ವಿಶಿಷ್ಠ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೆ.ಆರ್.ನಗರ ಸಮೀಪದ ಹಂಪಾಪುರದಲ್ಲಿ ಗೋಶಾಲೆಯಲ್ಲೊಂದು ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಹುಬ್ಬಳ್ಳಿಯ ಆರ್ಷ ವಿದ್ಯಾ ಗುರುಕುಲದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ಬರುತ್ತಾರೆ, ನೀವೂ ಕಾರ್ಯಕ್ರಮಕ್ಕೆ ಬನ್ನಿ ಎಂದರು. ಅದರ ಮರುದಿನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಿಂದ ದೂರವಾಣಿಯಲ್ಲಿ ವಿವರ ಪಡೆದೆ. ನಮ್ಮ ವೇದ ಭಾರತಿಯ ಬಗ್ಗೆಯೂ ತಿಳಿಸಿದೆ. ವೇದಭಾರತಿಯ ಟೀಮ್ ಅಂದು ಬಂದು ಸ್ವಾಮೀಜಿಯವರು ಪುರಪ್ರವೇಶಮಾಡುವಾಗ ಜೊತೆಯಲ್ಲಿದ್ದು ವೇದ ಪಠಣ ಮಾಡಬೇಕೆಂದು ತಿಳಿಸಿದರು. ವೇದಭಾರತಿಯಲ್ಲಿ ಜಾತಿ/ಲಿಂಗ/ವಯಸ್ಸಿನ ಭೇದವಿಲ್ಲದೆ ವೇದಾಧ್ಯಯನ ನಡೆಯುತ್ತಿದೆ ಎಂಬುದು ಅವರಿಗೆ ಸಂತೋಷದ ಸಂಗತಿಯಾಗಿತ್ತು. ಆತ್ಮೀಯವಾಗಿ ಎಲ್ಲರನ್ನೂ ಆಹ್ವಾನಿಸಿದರು. ನಿತ್ಯ ವೇದಾಧ್ಯಯನ ನಡೆಯುತ್ತಿರುವುದರಿಂದ ಚರ್ಚಿಸಿ ನಿರ್ಧರಿಸುವುದು ಕಷ್ಠವೇನಾಗಲಿಲ್ಲ. ಇಂದು ಬೆಳಿಗ್ಗೆ [9.6.2013 ಭಾನುವಾರ] ಹಾಸನದಿಂದ ಒಂದು ಟಾಟಾ ಸುಮೋ ಮತ್ತು ಒಂದು ಕಾರ್ ನಲ್ಲಿ ಹದಿನೈದು ಜನ ಹೊರಟೆವು. ಹಂಪಾಪುರ ತಲುಪಿದಾಗ ಬೆಳಿಗ್ಗೆ 10:30 ಆಗಿತ್ತು. ಆ ಹೊತ್ತಿನಿಂದ ಹಿಂದುರುಗುವ ಸಮಯದ ವರೆಗೂ [ ಮಧ್ಯಾಹ್ನ 2:30] ಒಂದು ಅದ್ಭುತ ಸತ್ಸಂಗದಲ್ಲಿ ನಾವಿದ್ದೆವು ,ಎಂದರೆ ಅನ್ವರ್ಥವಾದೀತು. ನಾವಿನ್ನೂ ಆರೇಳು ತಿಂಗಳಿನಿಂದ ವೇದಾಭ್ಯಾಸವನ್ನು ಮಾಡುತ್ತಿರುವ ಶಿಶುಗಳು! ಸ್ವಾಮೀಜಿಯವರ ಮುಂದೆ ವೇದ ಪಠಣ ಮಾಡುವಾಗ ತಪ್ಪಾದರೆ!! ನಾವು ಒಂದು ನಿರ್ಧಾರ ಮಾಡಿದೆವು. ನಾವು ವೇದಾಧ್ಯಯನದಲ್ಲಿ ಶಿಶುಗಳೆಂಬುದನ್ನು ಸ್ವಾಮೀಜಿಯವರಲ್ಲಿ ಅರಿಕೆಮಾಡಿಕೊಂಡು ಸಾಮೂಹಿಕವಾಗಿ ಹೇಳಿಬಿಡೋಣ, ಎಂತಲೇ ಗಟ್ಟಿ ನಿರ್ಧಾರದೊಂದಿಗೆ. ಹೋದೆವು. ಸ್ವಾಮೀಜಿಯವರ ಪುರಪ್ರವೇಶವಾದಾಗ ಮೆರವಣಿಗೆಯಲ್ಲಿ ನಾವು ಒಟ್ಟಾಗಿ ವೇದಪಠಿಸುತ್ತಾ ಹೆಜ್ಜೆ ಹಾಕಿದೆವು. ಕಾರ್ಯಕ್ರಮದ ಸ್ಥಳವನ್ನು ತಲುಪಿದಾಗ ಶ್ರೀ ಸುರೇಶರು ಸ್ವಾಮೀಜಿಯವರಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ಹಾಸನ ವೇದ ಭಾರತಿಯ ಧ್ಯೇಯೋದ್ಧೇಶವನ್ನು ಎರಡು ಮಾತುಗಳಲ್ಲಿ ಅರಿಕೆ ಮಾಡಿಕೊಂಡೆವು. ಏನು!! ಎಲ್ಲರಿಗಾಗಿ ವೇದ!! ಜಾತಿಭೇದವಿಲ್ಲ!!! ಹೆಂಗಸರೂ ಕಲಿಯುತ್ತಿದ್ದಾರಾ!!! ಇದೇ ಆಗಬೇಕಾಗಿದ್ದ ಕೆಲಸ, ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರ ಮಾತುಗಳ ವೀಡಿಯೋ ನೋಡಿ ಇನ್ನು ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಬಗ್ಗೆ ಹೇಳಲೇ ಬೇಕು. ಸುಮಾರು ಇಪ್ಪತ್ತು ವರ್ಷದ ಮಗ ಸುಭಾಷ್ ಅಕಾಲಿಕ ವಾಗಿ ಅಗಲಿದಾಗ ಆ ದು:ಖವನ್ನು ಸಹಿಸಲಾರದೆ ಐದಾರು ವರ್ಷ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದ ಸ್ವರೂಪರಾಣಿಯವರಿಗೆ ಧೈರ್ಯತುಂಬಿದವರಲ್ಲಿ ಶ್ರೀಯುತ ಗ.ರಾ .ಸುರೇಶರೂ ಒಬ್ಬರು. ಹಿತೈಷಿಗಳ ಆತ್ಮೀಯನುಡಿಗಳು ಸ್ವರೂಪರಾಣಿಯವರನ್ನು ಬದುಕುವಂತೆ ಮಾಡಿತು. ಹೌದು ಮಗನನ್ನು ಕಳೆದುಕೊಂಡ ಮೇಲೆ ಯಾರಿಗಾಗಿ ಬದುಕಬೇಕು? ಹಿತೈಷಿಗಳ ಹೃದಯಸ್ಪರ್ಶೀ ಮಾತುಗಳಿಂದ ಉತ್ತೇಜಿತರಾಗಿ " ಹೌದು ಬದುಕಿದರೆ ಸಾಮಜಕ್ಕೆ ಏನಾದರೂ ಮಗನ ಹೆಸರಲ್ಲಿ ಮಾಡ ಬೇಕು" ಆಗ ಆರಂಭವಾದದ್ದೇ ಸುಭಾಷ್ ಎಂ.ರಾವ್ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್. ಅದರ ಮೂಲಕ ಅವರು ಮಾಡುತ್ತಿರುವ ಸೇವೆ ಅಪಾರ. ಗೋಶಾಲೆ ತೆರೆದರು. ಗೋವಿನ ಮೂತ್ರದಿಂದ ಜೀವ ರಕ್ಷಕ ಔಷಧಿಗಳನ್ನು ತಯಾರಿಸುವ ತರಬೇತಿ ಪಡೆದು ಗೋ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ವರ್ಷಕ್ಕೊಮ್ಮೆ ವಸತಿ ಸಹಿತ ವೇದಶಿಬಿರ ಆರಂಭಿಸಿದರು. ಕೇವಲ ಕೆಲವು ಗಂಟೆಗಳಲ್ಲಿ ಇಷ್ಟು ಚಟುವಟಿಕೆಗೆಗಳ ಬಗ್ಗೆ ಮಾಹಿತಿ ದೊರೆಯುತು. ಅವರು ಮಾಡುತ್ತಿರುವ ಸೇವಾ ಕೆಲಸಗಳು ಇನ್ನೂ ಅಪಾರ. ವಿವರಗಳನ್ನು ಪಡೆದು ಮತ್ತೊಮ್ಮೆ ಬರೆಯುವೆ. ಇಂದಿನ ಕಾರ್ಯಕ್ರಮದಲ್ಲಿ ಶ್ರೀ ಯುತ ದತ್ತಾತ್ರೇಯ ಭಟ್ ಮತ್ತು ಪೂಜ್ಯ ಸ್ವಾಮೀಜಿಯವರು ಮಾಡಿರುವ ಉಪನ್ಯಾಸಗಳ ವೀಡಿಯೋ ಗಳನ್ನು ಒಂದೆರಡು ದಿನಗಳ ಲ್ಲಿ ಅಳವಡಿಸುವೆ. ನೀವು ವೀಡಿಯೋ ನೋಡಲೇ ಬೆಕೆಂಬುದು ನನ್ನ ಮನವಿ.

Friday, June 7, 2013

ವಿಶ್ವದಲ್ಲಿ ಇಂದಿನವರಗೆ ವೇದಸುಧೆಯನ್ನು ನೋಡಿದವರು

India
75621
United States
9110
China
3580
Russia
1299
United Arab Emirates
1227
United Kingdom
591
Malaysia
322
Singapore
316
Germany
246
Oman
241

ಹತ್ತಿರದಲ್ಲೇ ವೇದಸುಧೆಯ ಪುಟ ವೀಕ್ಷಣೆಗಳು ಒಂದು  ಲಕ್ಷ ದಾಟಲಿದೆ ,ಎಂಬುದು ವೇದಸುಧೆಗೆ ಸಂತಸದ ಸಂಗತಿ