Pages

Thursday, February 24, 2011

ಜಿಜ್ಞಾಸುಗಳಿಗೆ ಹಾದಿ ಹೂವಿನ ಹಾಸಿಗೆಯೇನಲ್ಲ.

ವೇದಸುಧೆಯ ಅಭಿಮಾನಿಗಳೇ,
ಶ್ರೀ ಸುಧಾಕರ ಶರ್ಮರು ವೇದಮಂತ್ರಗಳನ್ನು ಅರ್ಥೈಸುವಾಗ ಕೊಡುವ ಅನೇಕ ವಿವರಣೆಗಳು ಇದುವರಗೆ ನಡೆದುಬಂದಿರುವ ಸಂಪ್ರದಾಯಗಳು, ಆಚರಣೆಗಳಿಗೆ ವಿರುದ್ಧವಾಗಿಯೇ ಕಾಣುತ್ತವಾದರೂ ಶರ್ಮರ ಮಾತುಗಳಲ್ಲಿರುವ ಸತ್ಯ ನಮ್ಮನ್ನು ಸೆಳೆಯುತ್ತದೆ. ವೇದಸುಧೆ ಆರಂಭವಾಗಿ ಒಂದುವರ್ಷ ಕಳೆದಿದ್ದರೂ ಶರ್ಮರ ಮಾತುಗಳನ್ನು ಆಧಾರಪೂರ್ವಕವಾಗಿ ತಪ್ಪು ಎಂದು ಹೇಳುವ ಯಾವ ವೇದಪಂಡಿತರೂ   ವೇದಸುಧೆಯನ್ನು ಪ್ರವೇಶಿಸಲಿಲ್ಲವಲ್ಲಾ! ಆಗಿಂದಾಗ್ಗೆ ಈ ಬಗ್ಗೆ ವೇದಸುಧೆಯ ಅಭಿಮಾನಿಗಳಲ್ಲಿ ಮನವಿ ಮಾಡಲಾಗಿದ್ದು  ಅತ್ಯಂತ ಗೌರವವಾಗಿ  ವೇದಪಂಡಿತರನ್ನು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ವೇದಸುಧೆಯು ಆಹ್ವಾನಿಸುತ್ತದೆ. ಒಟ್ಟಿನಲ್ಲಿ ಎಲ್ಲರಿಗೂ ಅಗತ್ಯವಿರುವುದು ಸತ್ಯದ ದಾರಿ ಮತ್ತು ನೆಮ್ಮದಿಯ ಬದುಕಿಗೆ ಸೂತ್ರಗಳು.ಹಿಂದಿನಿಂದ ನಡೆದು ಬಂದಿರುವ ಆಚರಣೆಗಳು, ವ್ರತ ಕಥೆಗಳು, ಕೇಳಿಕೊಂಡುಬಂದಿರುವ ಪುರಾಣಪುಣ್ಯಕಥೆಗಳು ಇಂದಿನ ನಮ್ಮ ಚಿಂತನೆಗೆ ಒಗ್ಗದಿದ್ದರೂ, ಯಾಕೋ ಸರಿಕಾಣುತ್ತಿಲ್ಲವೆಂದು ಭಾಸವಾದರೂ ಕುರುಡಾಗಿ ಅನುಸರಿಸಬೇಕೇ? ಸಂಶಯಗಳಿಗೆ ಸುಧಾಕರಶರ್ಮರು ಉತ್ತರಿಸುತ್ತಾರೆಂಬ ನಂಬಿಕೆಯಿಂದ ವೇದಸುಧೆಯು ಈ ಪ್ರಯತ್ನ ಮಾಡುತ್ತಿದೆ. ಆದರೆ ಇದುವರೆವಿಗೆ ಆಧಾರಪೂರ್ವಕವಾಗಿ ಯಾವ ಪ್ರಶ್ನೆಯೂ ಬಂದಿಲ್ಲ. ವೇದಸುಧೆಯ ಹಲವಾರು ಅಭಿಮಾನಿಗಳು ಶರ್ಮರ ಸತ್ಯಪಥವನ್ನು ಒಪ್ಪಿದರೂ ಕೆಲವರಿಗೆ ಅನೂಚಾನದಿಂದ ನಡೆದು ಬಂದಿರುವ ಆಚರಣೆಗಳು ಒಂದು ವೇಳೆ ತಪ್ಪೆನಿಸಿದರೂ ಬಿಡಲು ಮುಜುಗರವಾಗುತ್ತಿದೆ. ಇದೆಲ್ಲಾ ನಮ್ಮ ಭಾವನೆಗಳ, ಸತ್ಯದ ವಿಚಾರಗಳ, ನಮ್ಮ ಸಂಸ್ಕಾರಗಳ ನಡುವಿನ ಸಂಘರ್ಷ. ವೇದಸುಧೆಯ ಮುಖ್ಯ ಉದ್ಧೇಶವೆಂದರೆ ಸಾಮಾನ್ಯ ಜನರ ಆತ್ಮೋನ್ನತಿಗಾಗಿ, ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ, ಆನಂದಮಯ ಜೀವನಕ್ಕಾಗಿ ದಾರಿಯ ಹುಡುಕಾಟ. ಎಷ್ಟು ಸರಳವಾಗಿದ್ದರೆ ಅಷ್ಟು ಒಳ್ಳೆಯದೆಂಬ ನೀತಿ. ಹಾಗಾಗಿ ಇದೆಲ್ಲಾ ಪ್ರಯತ್ನಗಳು. ಈವರೆಗಿನ ಹುಡುಕಾಟದಲ್ಲಿ ಇಂತಿಂತ ವಿಚಾರಗಳು ತಪ್ಪಾಗಿವೆ, ಎಂದು ಯಾರೇ ಅಭಿಮಾನಿಗಳು ಹೇಳಿ ಎಚ್ಚರಿಸಿದರೂ ಯಾವ ಪೂರ್ವಾಗ್ರಹವಿಲ್ಲದೆ ಸಾಮಾನ್ಯಜನರ ಹಿತಕ್ಕಾಗಿ ಸ್ವೀಕರಿಸುವ, ತಪ್ಪಾಗಿದ್ದರೆ ಒಪ್ಪಿಕೊಳ್ಳುವ ಮನೋಭಾವ. ಜಿಜ್ಞಾಸುಗಳಿಗೆ ಹಾದಿ ಹೂವಿನ ಹಾಸಿಗೆಯೇನಲ್ಲ.