ಇಷ್ಟಂತೂ ಸತ್ಯ. ನಮ್ಮ ದೇಶದಲ್ಲಿ ವೇದವನ್ನು ಎಲ್ಲದಕ್ಕೂ ಆಧಾರವೆಂದು ಹೇಳುತ್ತಲೇ ನೂರಾರು ದಾರ್ಶನಿಕರು ಅವರು ಕಂಡ ಸತ್ಯವನ್ನು ಪ್ರತಿಪಾದಿಸುತ್ತಾ ಅಂತೂ ಇಂತೂ ವೇದದ ಸುತ್ತ ಮುತ್ತವೇ ಸುತ್ತುತ್ತಾ, ವೇದದ ವಿರುದ್ಧವಾಗಿಯೂ ನಡೆಯುತ್ತಾ ನಮ್ಮ ಋಷಿಮುನಿಗಳು ಕೊಟ್ಟ ವಿಚಾರವನ್ನು ಅವರಿಗೆ ತೋಚಿದ ರೀತಿಯಲ್ಲಿ ಉಳಿಸಿದರು. ಉಳಿಸಿದರೆನ್ನುವುದಕ್ಕಿಂತಲೂ ವೇದವು ಅದರ ಗಟ್ಟಿತನದಿಂದ ಉಳಿದಿದೆ. ಇನ್ನು ಮುಂದೆಯೂ ಉಳಿಯುತ್ತದೆ.ಕಾರಣ ಅದು ಸಾರ್ವಕಾಲಿಕ ಸತ್ಯ. ಶಂಕರ,ಮಧ್ವ,ರಾಮಾನುಜ,ಬಸವಣ್ಣ, ಬುದ್ಧ,ಮಹಾವೀರ, ಗುರುನಾನಕ್ ಅಲ್ಲದೆ ಇತ್ತೀಚಿನ ವಿವೇಕಾನಂದ, ಡಾ.ಅಂಬೇಡ್ಕರ್ ವರಗೆ ಎಲ್ಲರೂ ಕೊಟ್ಟ ವಿಚಾರಗಳು ನಶಿಸಿದರೂ ವೇದವು ನಶಿಸಲು ಸಾಧ್ಯವೇ ಇಲ್ಲ.ಕಾರಣ ಅದು ಸಾರ್ವಕಾಲಿಕ, ಸಾರ್ವಭೌಮ, ಸಾರ್ವತ್ರಿಕ ಮತ್ತು ಸಾರ್ವದೇಶಿಕ. ಹಿಂದುಗಳಿಗೆ ಮಾತ್ರ ವೇದ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆ ಇದೆ. ಆದರೆ ವೇದವು ಸಕಲ ಮಾನವರಿಗಾಗಿ ಇದೆ.ಅದನ್ನು ಮರೆತಿರುವ ಪರಿಣಾಮವೇ ಈಗಿನ ಭಯೋತ್ಪಾದನೆ, ಮತೀಯ ಕಲಹ...ಎಲ್ಲವೂ ಕೂಡ. ಇವೆಲ್ಲ ಸಂಘರ್ಷಗಳಿಗೂ ಪರಿಹಾರ ಸಿಗಲು ಮತ್ತೆ ವೇದವೇ ಗತಿ. ನಮ್ಮ ವೇದ ಪಂಡಿತರು ಕೇವಲ ಪೂಜೆ-ಪುನಸ್ಕಾರಗಳು, ಹವನ ಹೋಮಗಳು, ಶ್ರಾದ್ಧಕರ್ಮಗಳು, ವ್ರತ ಕತೆಗಳಿಗೆ ಸೀಮಿತವಾಗದೆ ವೇದದ ಒಳಹೊಕ್ಕಿ ನೋಡುವ ಕಾಲ ಬಂದಿದೆ. ಆ ಕೆಲಸ ಎಷ್ಟು ಬೇಗ ಶುರುವಾಗುತ್ತದೋ ಅಷ್ಟು ಬೇಗ ಇಡೀ ವಿಶ್ವದ ಅಭ್ಯುದಯಕ್ಕೆ ಅಗತ್ಯವಾದ ಎಲ್ಲಾ ಮಾರ್ಗದರ್ಶನವೂ ಸಿಗುವುದರಲ್ಲಿ ಸಂಶಯವಿಲ್ಲ. ಈಗ ವೇದ ವಿದ್ವಾಂಸರನ್ನು ಎಚ್ಚರಿಸುವವರು ಬೇಕಾಗಿದ್ದಾರೆ. ಮೋದಿಯವರ ಸರ್ಕಾರವೂ ಕೂಡ ಈ ಬಗ್ಗೆ ಚಿಂತನೆ ನಡೆಸಬೇಕು." ವಿಶ್ವದ ಅಭ್ಯುದಯಕ್ಕಾಗಿ ವೇದ" ಗುರಿಯೊಡನೆ ರಭಸದ ಕೆಲಸವಾಗಬೇಕು. ನನಗೆಲ್ಲೋ ಹುಚ್ಚು ಅಂತೀರಾ? ಪರವಾಗಿಲ್ಲ. ಈ ಹುಚ್ಚನ್ನು ವಿದ್ವಾಂಸರಿಗೆ ಹಿಡಿಸುವ ಕೆಲಸವನ್ನು ಮಾಡಿ.