Pages

Wednesday, April 7, 2010

ಋಣ

ನನ್ನ ಕವನದ ಒಂದು ಸಾಲು ಹೀಗಿದೆ- "ಜಗಕೆಲ್ಲ ಬೆಳಕ ಕೊಡುವಂತ ರವಿಗೆ ನಾನೆಂಬ ಗರ್ವವಿಲ್ಲ| ಹಗಲೆಲ್ಲ ದುಡಿದು ಕತ್ತಲೆಯ ರಾತ್ರಿಯಲಿ ರವಿ ಮಾಯಾದನಲ್ಲ"
ನಮ್ಮನ್ನೆಲ್ಲಾ ಹೊತ್ತಿರುವ ಭೂಮಿಯು ಎಂದೂ ನಿಮ್ಮನ್ನೆಲ್ಲಾ ಹೊತ್ತಿರುವವಳು ನಾನೇ ಎಂದು ಜಂಬ ಪಡಲಿಲ್ಲ, ಅಂತೆಯೇ ಸೂರ್ಯನೂ ಕೂಡ, ಜಗತ್ತಿಗೇ ಬೆಳಕು ಕೊಟ್ಟರೂ ಅಹಂಕಾರ ಪಡಲಿಲ್ಲ. ಆದರೆ ನಮ್ಮ ಬಗೆಗೆ ಇದೇ ಪ್ರಶ್ನೆ ಹಾಕಿಕೊಂಡರೆ " ಬಡ ಹುಡುಗನಿಗೆ ಪೆನ್ಸಿಲ್ ತೆಗೆದು ಕೊಟ್ಟಿದ್ದು ನಾನೇ ಎಂದು ಟಾಮ್-ಟಾಮ್ ಮಾಡುತ್ತೇವೆ. ಆದರೆ ಯಾರೋ ಪುಣ್ಯಾತ್ಮ ಇಡೀ ವರ್ಷ ಊಟಹಾಕಿದ್ದರೂ ತಾನು ಊಟ ಹಾಕಿದೆ ಎಂದು ಹೇಳಿಕೊಂಡು ತಿರುಗುವುದಿಲ್ಲ. ಆದರೆ ಯಾವುದೋ ಒಂದು ಚಿಕ್ಕ ಸಹಾಯ ಮಾಡಿದರೂ ಅದಕ್ಕೆ ಬಣ್ಣ ಕಟ್ಟಿ ಪ್ರಚಾರ ಗಿಟ್ಟಿಸಲು ಯತ್ನಿಸುತ್ತೇವೆ.
ಒಂದು ದೇವಾಲಯ. ಯಾರೋ ಪುಣ್ಯಾತ್ಮ ಜೀರ್ಣೋದ್ಧಾರ ಮಾಡಿದ್ದಾನೆ.ಅವನ ಹೆಸರು ಯಾರಿಗೂ ಗೊತ್ತಿಲ್ಲ, ಕಾರಣ ಅವನ ಹೆಸರು ಕೆತ್ತಿಸಲೇ ಇಲ್ಲ. ಆದರೆ ದೇವಾಲಯಕ್ಕೆ ಒಂದು ನಾಮ ಫಲಕ ಹಾಕಿದ್ದಾರೆ. ಅದರ ಕೆಳಗೆ ಪ್ರಥಮ ದರ್ಜೆ ಗುತ್ತಿಗೆ ದಾರರಾದ ದುಗ್ಗಪ್ಪನವರ ಸೇವಾರ್ಥ-ಎಂದು ದೊಡ್ಡದಾಗಿ ಬರೆದಿದೆ. ನೋಡಿದವರು ದೇವಸ್ಥಾನ ಕಟ್ಟಿಸಿದ ಪುಣ್ಯಾತ್ಮ ಇವನೇ ಇರಬೇಕು, ಎಂದುಕೊಳ್ಳುತ್ತಾರೆ. ಆದರೆ ದೇವಾಲಯಕ್ಕೆ ಒಂದು ಬೋರ್ಡ್ ಬರೆಸಿದವನು ಈತ ನೆಂಬ ಸತ್ಯ ಹಲವರಿಗೆ ತಿಳಿಯುವುದೇ ಇಲ್ಲ. ಅದಕ್ಕಿಂತ ನಾಚಿಕೆಗೇಡಿನ ಇನ್ನೊಂದು ಉದಾಹರಣೆಯನ್ನೂ ಕಂಡೆ. ದೇವಾಲಯದ ಒಂದು ಫೋಟೋ ವನ್ನು ಗರ್ಭಗೃಹದ ಮುಂದೆ ಹಾಕಿದ್ದಾರೆ. ಅದರಲ್ಲಿ ಬಹಳ ದೊಡ್ಡ ಅಕ್ಷರಗಳಲ್ಲಿ ನಮ್ಮ ಕಣ್ಣಿಗೆ ರಾಚುವುದು" ಕೊಡುಗೆ: ರಾಮಪ್ಪನವರು" ರಾಮಪ್ಪನವರ ಕೊಡುಗೆ ಏನೂ ಅಂತಾ ಗೊತ್ತಾಯ್ತ?

ನಾವು ಸೂಟು-ಬೂಟು ಧರಿಸಿ ಸ್ಟೈಲ್ ಆಗಿ ಹೊರಟು ಬಿಡುತ್ತೇವೆ. ಯಾರಿಗೇನು ಕಡಿಮೆ? ನನಗೆಲ್ಲಾ ಇದೆ!!ಅನ್ನೋ ಅಹಂಕಾರ.[ಎಲ್ಲರಿಗೆ ಅನ್ವಯಿಸುವುದಿಲ್ಲ ಬಿಡಿ]
ನಮಗೆ ಬೇಕಾದಷ್ಟು ಇರಬಹುದು, ತಿಂಗಳಿಗೆ ೬೦-೭೦ ಸಾವಿರ ರೂಪಾಯಿ ಸಂಬಳ ಸಿಗಬಹುದು. ಆದರೆ ನಾವು ಧರಿಸೋ ಒಂದು ಅಂಗಿ ನನ್ನ ಸ್ವಂತದ್ದಾ? ಎಂಬ ಪ್ರಶ್ನೆ ಹಾಕಿಕೊಂಡು ನೋಡಿದ್ದೀವಾ?
ನನ್ನ ಅಂಗಿಯಲ್ಲಾ ಅದರಲ್ಲಿರುವ ಒಂದು ಬಟನ್ ಕೂಡಾ ನಮ್ಮ ಸ್ವಂತದ್ದಲ್ಲ. ಅದರಹಿಂದೆ ಅದೆಷ್ಟು ಜನರ ಬೆವರು ಹರಿದಿರುತ್ತೋ! ಮಾತುಗಳನ್ನು ಕೇವಲ ಅಕ್ಷರಗಳಾಗಿ ಓದಿದರೆ ಆಗದು.....
ನಾನು ಧರಿಸಿರುವ ಅಂಗಿಯ ಹಿಂದೆ ಅದೆಷ್ಟು ಜನರ ಶ್ರಮವಿದೆ , ಗಮನಿಸೋಣ.
ಯಾವುದೋ ಬಟ್ಟೆಯಿಂದ ಅಂಗಿ. ಬಟ್ಟೆಯನ್ನು ನೇಯ್ದವನು ಯಾರೋ? ,ದಾರದಿಂದ ಬಟ್ಟೆ. ಒಂದು ದಾರ ಹೊರಬರಬೇಕಾದರೆ ಅದು ತಯಾರಾದ ಕಾರ್ಖಾನೆಯಲ್ಲಿ ಅದೆಷ್ಟು ಜನರ ಶ್ರಮವಿದೆಯೋ?. ನಂತರ ಮಗ್ಗ. ಮುಂದೆ ಅದರ ಮಾರಾಟ. ಬಟ್ಟೆಯನ್ನು ಕೊಂಡರೆ ಸಾಲದು. ಅದನ್ನು ಹೊಲಿಯಲು ದರ್ಜಿ. ಕತ್ತರಿಸುವವನು ಯಾರೋ, ಗುಂಡಿ ಹಾಕುವವನು ಯಾರೋ, ಇನ್ನು ಅದೆಷ್ಟು ಜನರ ಶ್ರಮ ಅಡಗಿದೆಯೋ, ಅಂತೂ ಇದ ನನ್ನ ಶರ್ಟ್ ಎಂದು ಬೀಗುವವರು ನಾವು. ಅದು ನಮಗೆ ಇಷ್ಟು ಅಂದ ಕೊಡಬೇಕಾದರೆ ಅದೆಷ್ಟೋ ಕಾರ್ಮಿಕರ ಅರೆಹೊಟ್ಟೆಯ ದುಡಿಮೆಯೂ ಸೇರಿದೆ. ನಮಗೆ ಹೇರ್ ಕಟಿಂಗ್ ಮಾಡುವ ಕ್ಷೌರಿಕ, ಚಪ್ಪಲಿ ಹೊಲಿಯುವ ಚಮ್ಮಾರ, ಬಟ್ಟೆ ಹೊಲಿಯುವ ದರ್ಜಿ,ಕಾರ್ ದುರಸ್ತಿ ಮಾಡುವ ಮೆಕ್ಯಾನಿಕ್, ಕಾರು ತೊಳೆಯುವ ಹುಡುಗ, ಮನೆ ಮುಂದೆ ಗುಡಿಸುವ ಜಾಡಮಾಲಿ, ಅದೆಷ್ಟು ಜನರ ಋಣ ತೀರಿಸ ಬೇಕೋ ನಾವು!!
ಆದರೆ ಸುಲಭದಲ್ಲಿ ಮಾತನಾಡುವ ಜನರಿದ್ದಾರೆ. ನಮ್ಮ ಕೆಲಸ ನಮಗೆ, ಅವರ ಕೆಲಸ ಅವರಿಗೆ. ಜಾಡಮಾಲಿ, ಕ್ಷೌರಿಕರು, ಇಂತಹ ಕಾರ್ಮಿಕರು ಒಂದು ತಿಂಗಳು ರಜೆ ಮಾಡಲಿ, ಗೊತ್ತಾಗುತ್ತೆ, ಯಾರ ಮಹತ್ವ ಎಷ್ಟು? ಅಂತಾ.

ಪರರ ಪೀಡಿಸದ ಸಂಪಾದನೆ

ಅಕೃತ್ವಾ ಪರಸಂತಾಪಂ
ಅಗತ್ವಾ ಖಲ ನಮ್ರತಾಮ್|
ಅನುಸೃತ್ಯ ಸತಾಂ ಮಾರ್ಗಂ
ಯತ್ ಸ್ವಲ್ಪ ತದ್ ಬಹು||


ಬೇರೆಯವರಿಗೆ ನೋವುಂಟುಮಾಡದೆ,
ದುಷ್ಟರಿಗೆ ಬಗ್ಗದೆ,ಸಜ್ಜನರು ತುಳಿದ ಮಾರ್ಗವನ್ನು ಬಿಡದೆ,
ಸ್ವಲ್ಪವನ್ನೇ ಮಾಡಿದರೂ ಅದು ಮಹತ್ವದ್ದೇ ಸರಿ.