Pages

Thursday, April 1, 2010

ಸುಭಾಷಿತ ರತ್ನ -ದಿನಕ್ಕೊಂದು ಸುಭಾಷಿತ

1 ನೇ ಏಪ್ರಿಲ್ 2010

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ

ನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|
ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||

ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.

ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.

ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:ಖ. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಆ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?

ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?
-------------------------------------------------------------------
2 ನೇ ಏಪ್ರಿಲ್ 2010

ಜಠರಂ ಪೂರಯೇದರ್ಧಂ

ತದರ್ಧಂ ತು ಜಲೇನ ಚ|
ವಾಯೋ: ಸಂಚಾರೇಣಾರ್ಥಂ ತು
ಭಾಗಯೇಕಂ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗ ಆಹಾರ, ಉಳಿದರ್ಧದಲ್ಲಿ ಅರ್ಧಭಾಗ ನೀರು, ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಬಿಡಬೇಕು.

ನಮ್ಮ ಪೂರ್ವಜರ ಸೂತ್ರ ಹೇಗಿದೆ ನೋಡಿ.ಜಾನಪದದಲ್ಲಿ ಒಂದು ಮಾತಿದೆ. ಒಂದು ಹೊತ್ತು ಉಂಡವ ಯೋಗಿ. ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನನ್ನು ಹೊತ್ಕೊಂಡ್ ಹೋಗಿ. ಈ ಎರಡೂ ಸೂತ್ರಗಳು ಮಿತಾಹಾರವನ್ನೇ ಹೇಳುತ್ತವೆ. ಮನುಷ್ಯನಾದರೋ ಬಾಯಿ ಚಪಲಕ್ಕೆ ಹೆಚ್ಚೆಚ್ಚು ಆಹಾರ ಸೇವಿಸಿ ರೋಗಕ್ಕೆ ತುತ್ತಾಗುತ್ತಾನೆ.
----------------------------------------------------------------------
3ನೇ ಏಪ್ರಿಲ್ 2010

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?

ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ.ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ.

---------------------------------------------------------------------------------------------


8 comments:

  1. ತ್ಯಾಗೇನೈಕೇ ಅಮೃತತ್ವ ಮಾನಷುಃ ...ಎಂದು ಹೇಳಿರುವುದು ನಿಸ್ವಾರ್ಥದ ಜೀವನಕ್ಕೆ ದಾರಿಯಾಗಲಿ ಎಂದೇ ಅಲ್ಲವೇ..ಸುಭಾಷಿತ ರತ್ನ ಅತ್ಯಂತ ಪ್ರಸ್ತುತವಾಗಿದೆ. ಧನ್ಯವಾದಗಳು.

    ReplyDelete
  2. ಆತ್ಮೀಯ
    ಶ್ರೀಧರ್ ಸರ್ ಉತ್ತಮ ಬರಹ

    ಅವಶ್ಯ೦ ಯಾತಾರಶ್ಚಿರತರಮುಷಿತ್ವಾಪಿ ವಿಷಯಾ
    ವಿಯೋಗೇ ಕೋ ಭೇದಸ್ಯ ಜತಿ ನ ಜನೋ ಯತ್ಸ್ವಯ ಮಮೂನ್?
    ವ್ರಜ೦ತಃ ಸ್ವಾತ೦ತ್ರ್ಯಾದತುಲಪರಿತಾಪಾಯ ಮನಸಃ
    ಸ್ವಯ೦ ತ್ಯಕ್ತಾ ಹ್ಯೇತೇ ಶಮಸುಖಮನ೦ತ೦ ವಿದಧತಿ

    ಎ೦ದು ಭರ್ತೃಹರಿ ಹೇಳುತ್ತಾನೆ ಲೌಕಿಕ ಭೋಗಗಳು ನಮ್ಮನ್ನು ಕಾಲಕ್ರಮೇಣ ಬಿಟ್ಟು ಹೋಗುತ್ತವೆ.ಅವು ನಮ್ಮನ್ನು ತ್ಯಜಿಸಿದರೆ ಸ೦ಕಟವಾಗುತ್ತದೆ.ನಾವೇ ಅದನ್ನು ತ್ಯಜಿಸಿದರೆ ಸುಖವು೦ಟಾಗುತ್ತದೆ ಮತ್ತು ಅದು ಅನ೦ತವು ಹೌದು

    ’ನ ಕರ್ಮಣ ನ ಪ್ರಜಯ ನ ಧನೇನ ತ್ಯಾಗೇನೈಕೇ ಅಮೃತತ್ವಮಾನಷುಃ’ ಎ೦ದಲ್ಲವೇ ನಾವು ಹೇಳಿಕೊಳ್ಳುವುದು
    ಕರ್ಮ ದಿ೦ದಲಾಗಲೀ ಜನಬಲದಿ೦ದಲಾಗಲೀ ಧನಬಲದಿ೦ದಲಾಗಲೀ ಅಮೃತತ್ವವು ಸಿಗದು
    ಇವೆಲ್ಲದರ ತ್ಯಾಗದಿ೦ದ ಮಾತ್ರ ಅಮೃತತ್ವವು ಪ್ರಾಪ್ತವಾಗುತ್ತೆ ಎ೦ದಲ್ಲವೇ ಇದರರ್ಥ.
    ಇನ್ನೊಬ್ಬರ ಸ೦ತೋಷಕ್ಕಾಗಿ ಮಾಡಿದ ತ್ಯಾಗ ಶ್ರೇಷ್ಠ

    ಹರಿ

    ReplyDelete
  3. ಉತ್ತಮ ವಿಚಾರಗಳು ದೊರೆಯುತ್ತಿವೆ.
    ಧನ್ಯವಾದಗಳು.

    ReplyDelete
  4. ಓದುಗ ಮಿತ್ರರಲ್ಲಿ ಇನ್ನೊಮ್ಮೆ ವಿಜ್ಞಾಪನೆ, ವೇದಸುಧೆ ಬ್ಲಾಗ್ ಸ್ವಲ್ಪ ನವೀಕರಿಸಲ್ಪಟ್ಟಿದೆ, ಆದಷ್ಟೂ ಉತ್ತಮ ಮಾಹಿತಿಗಳನ್ನು ಕೊಡಲು ಪ್ರಯತ್ನಿಸುತ್ತೇವೆ, ದಯವಿಟ್ಟು ಓದುಗ ಮಿತ್ರರು ಇದರ ಸದುಪಯೋಗ ಪಡೆದುಕೊಳ್ಳಿ.

    ReplyDelete
  5. ಆತ್ಮೀಯ ವಿಷ್ಣು ಭಟ್ಟರೆ,
    ವೇದಸುಧೆಗೆ ನೀವು ತೋರಿಸುತ್ತಿರುವ ಪ್ರೀತಿಯಿಂದ ಹೆಚ್ಚು ಓದುಗರಿಗೆ ವಿಚಾರ ತಲುಪುತ್ತಿರುವದರಲ್ಲಿ ಸಂದೇಹವಿಲ್ಲ.ಇನ್ನು ಮುಂದೆ ದಿನಕ್ಕೊಂದು ಸುಭಾಷಿತ ಪ್ರಕಟಿಸುವ ಇಚ್ಛೆ ಇದೆ. ನಿಮ್ಮ ವೈಯಕ್ತಿಕ ಬ್ಲಾಗ್ http://nimmodanevrbhat.blogspot.com/
    ನಿಂದ ವೇದಸುಧೆಗೆ ನೇರ ಪ್ರವೇಶಕೊಟ್ಟರೆ ಇನ್ನೂ ಹೆಚ್ಚು ಅನುಕೂಲವಾಗಬಹುದು.
    ಧನ್ಯವಾದಗಳು

    ReplyDelete
  6. ಎಂತಹ ಅಮೂಲ್ಯ ರತ್ನಗಳು

    ReplyDelete
  7. ರಾಗಕ್ಕೆ ಸಮನಾದ ದು:ಖವಿಲ್ಲ. ಇದು ಸ್ವಲ್ಪ ತಪ್ಪಿದೆ ಎಂದು ಭಾವಿಸುತ್ತೇನೆ ರಾಗ ವೆಂಬುದು ಹಾಡಿಗೆ ಕೊಡುವ ಸುಂದರ ರೂಪ ಅದು ತಪ್ಪಾದ ದುಃಖವ ಕೊಡಲು ಸಾಧ್ಯವಿಲ್ಲವೆಂಬುದು ನನ್ನ ವೈಯಕ್ತಿಕ ನಂಬಿಕೆ

    ReplyDelete
    Replies
    1. ರಾಗ ಪದವು ಪ್ರೀತಿ, ಮೋಹ ಎಂಬ ಅರ್ಥವೂ ಇದೆ. ಅತಿಯಾದ ಮೋಹ ದುಃಖವನ್ನೇ ತರುತ್ತದೆ.

      Delete