Pages

Friday, February 17, 2012

ಮಂಕು ತಿಮ್ಮನ ಕಗ್ಗ - ರಸಧಾರೆ -2




ಮಂಕು ತಿಮ್ಮನ ಕಗ್ಗ - ರಸಧಾರೆ 



ಜೀವ ಜಡರೂಪ ಪ್ರಪಂಚವನದಾವುದೋ I
ಆವರಿಸಿಕೊಂಡುಮೊಳನೆರೆದುಮಿಹುದಂತೆ II
ಭಾವಕೊಳಪಡದಂತೆ ಅಳತೆಗಳವಡದಂತೆ I
ಆ ವಿಶೇಷಕೆ ಮಣಿಯೋ - ಮಂಕುತಿಮ್ಮ II



(ಜೀವ ಜಡ ರೂಪ ಪ್ರಪಂಚವನು ಅದಾವುದೋ ಆವರಿಸಿಕೊಂಡು ಒಳನೆರೆದು ಇಹುದಂತೆ ಭಾವಕ್ಕೆ ಒಳಪಡದಂತೆ ಅಳತೆಗೆ ಅಳವಡದಂತೆ ಆ ವಿಶೇಷಕೆ ಮಣಿಯೋ- 
ಮಂಕುತಿಮ್ಮ )


(ಒಳನೆರೆದು=ಒಳಗೆ ತುಂಬಿ , ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ)


ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ ತುಂಬಿಕೊಂಡಿರುವ,  ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ  ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ (ಪರಮಾತ್ಮನಿಗೆ) ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ.



"ಯತಃ ಸರ್ವಾಣಿ ಭೂತಾನಿ ಭವ೦ನ್ತ್ಯಾದಿ ಯುಗಾಗಮೆ - ಯಸ್ಮಿನ್ಸ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೇ." ಎಂದು  ಯುಧಿಷ್ಠಿರನು ಕೇಳುವ ಐದು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪರಮಾತ್ಮ ಸ್ವರೂಪವನ್ನು ವಿವರಿಸುವಾಗ ಮಹಾಭಾರತದಲ್ಲಿ ಭೀಷ್ಮಪಿತಾಮಹರು  ಹೇಳುತ್ತಾರೆ. ಎಂದರೆ "ಯುಗದ ಆದಿಯಲ್ಲಿ ಯಾರಿಂದ ಎಲ್ಲವೂ ಪ್ರಕಟಗೊಳ್ಳುತ್ತದೋ ಮತ್ತು ಯುಗದ ಅಂತ್ಯದಲ್ಲಿ ಯಾರಲ್ಲಿ ಎಲ್ಲವೂ ವಿಲೀನವಾಗುತ್ತದೋ, ಅದೇ ಪರಮಾತ್ಮ " ಎನ್ನುತ್ತಾರೆ. 


ಈ ಪರಮಾತ್ಮ -ಜಡ-ಜೀವ ಪರಸ್ಪರ ಸಂಬಂಧವನ್ನು ಕುರಿತು ಹೇರಳವಾದ ವ್ಯಾಖ್ಯಾನಗಲಿದ್ದರೂ "ಇದೇ" ಇದು ಎಂದು ಹೇಳುವುದು ಅಸಾಧ್ಯ. ಅದು ಅನುಭವ ವೇಧ್ಯ. " ಅನ್ನಮಾಚಾರ್ಯರು" ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಆಟು ತಾನೈ" ಎಂದು ಹೇಳುತ್ತಾರೆ. ಅಂದರೆ ಎಲ್ಲರಲ್ಲೂ ಹುಟ್ಟು ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ" ಎಂದು ಆ ಪರಮಾತ್ಮನನ್ನು ವರ್ಣಿಸುತ್ತಾರೆ. ಇಲ್ಲಿ ನಮಗೆ ಆ ಪರಮ ಪುರುಷನು ತಾನೇ ಇಡೀ ಜಗತ್ತು ಮತ್ತು  ಅದರಲ್ಲಿರುವ   ಸಕಲವೂ  ಆಗಿ  ತಾನೇ ಪ್ರಕಟಗೊಂಡಿದ್ದಾನೆ  ಎಂದು ಅರ್ಥ ಬರುತ್ತದೆ. ಇರಲಿ ನಾವೂ ಸಹ ಇದನ್ನು ನಮ್ಮ ನಮ್ಮ ಮತಿಯ ಮಿತಿಯಲ್ಲಿ ವಿಚಾರದ ಒರೆಗೆ ಹಚ್ಚಿ ನಮ್ಮ ನಮ್ಮ ವಿಚಾರದ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡಬೇಕು. 


ಆದರೆ ಎಂತೆಂತ  ಮಹಾಮಹಿಮಾನ್ವಿತರಿಗೂ ಊಹಿಸಲು, ಅಳೆಯಲು ಮತ್ತು ತಿಳಿಯಲು ಕಷ್ಟಸಾಧ್ಯವಾದ ಆ ಪರಮಾತ್ಮ ಸ್ವರೂಪವನ್ನು, ವಿಚಿತ್ರ-ವಿಶೇಷ ಎಂದು ಕರೆದಿದ್ದಾರೆ,  ಡಿ.ವಿ.ಜಿ.ಯವರು.  ಅದಕ್ಕೆ, ನಮಿಸು ಮಣಿ ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು. 


ನಮಸ್ಕಾರ 

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ