Pages

Monday, April 5, 2010

ಸುಭಾಷಿತ ೪ ಮತ್ತು ೫

ಸುಭಾಷಿತ ೪ ಮತ್ತು ೫

4 ಏಪ್ರಿಲ್ 2010


ಆಕಾಶಾತ್ ಪತಿತಂ ತೋಯಮ್
ಯಥಾ ಗಚ್ಛತಿ ಸಾಗರಮ್|
ಸರ್ವ ದೇವ ನಮಸ್ಕಾರ:
ಕೇಶವಮ್ ಪ್ರತಿ ಗಚ್ಛತಿ||

ಆಕಾಶದಿಂದ ಬಿದ್ದ ನೀರೆಲ್ಲವೂ ಸಾಗರವನ್ನು ಸೇರುವಂತೆ ಎಲ್ಲ ದೇವರಿಗೆ ಮಾಡಿದ ನಮಸ್ಕಾರಗಳೂ ಕೇಶವನಿಗೇ ಸೇರುತ್ತವೆ.

ದೇವನೊಬ್ಬ ನಾಮ ಹಲವು ಎಂದೂ, ಏಕಂ ಸತ್ ವಿಪ್ರಾ ಬಹುಧಾ ವದಂತಿ ಎಂದೂ ಹೇಳುವುದನ್ನೂ ಕೇಳಿದ್ದೇವೆ. ನಮ್ಮ ಪೂರ್ವಜರು ಎಷ್ಟು ವಿಶಾಲ ಹೃದಯಿಗಳಾಗಿದ್ದರೆಂಬುದಕ್ಕೆ ಈ ಕೆಲವು ಉಧಾಹರಣೆಗಳು ಸಾಕು. ಬಹಳ ಸರಳವಾಗಿ "ದೇವನೊಬ್ಬ ನಾಮ ಹಲವು" ಎಂದರು.ಇದಕ್ಕೆ ವಿವರಣೆ ಅನಗತ್ಯ. ಸತ್ಯವಾದ ಆ ಪರಬ್ರಹ್ಮ ಒಂದೇ ಜ್ಞಾನಿಗಳು ಅದನ್ನು ನಾನಾ ರೀತಿಯಲ್ಲಿ ಕರೆಯುತ್ತಾರೆ.ನಮ್ಮ ದೇವರೇ ಶ್ರೇಷ್ಠ , ನಿಮ್ಮ ದೇವರು ಕನಿಷ್ಠ ಎಂದು ಬಡಿದಾಡುತ್ತಿರುವ ಇಂದಿನ ಜನರ ಕಿವಿಗೆ ಈ ಮಾತುಗಳು ಬೀಳಬಾರದೇ?
----------------------------------------------------------------------
5ಏಪ್ರಿಲ್ 2010
ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ|ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ದೇಹಿನಮ್||
ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ.ಆದರೆ ಚಿತೆಯು ನಿರ್ಜೀವವನ್ನು ಸುಟ್ಟರೆ ಚಿಂತೆಯು ಜೀವಂತ ದೇಹವನ್ನೇ ಸುಡುತ್ತದೆ.
ಸಂತೋಷವೇ ಯೌವನ, ಚಿಂತೆಯೇ ಮುಪ್ಪು - ಎನ್ನುವ ಮಾತನ್ನೂ ಕೇಳಿದ್ದೇವೆ.
ಈಗ ಸ್ಟ್ರೆಸ್ ಅಥವಾ ಒತ್ತಡದಿಂದ ಮನುಷ್ಯನಿಗೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧೀ ರೋಗಗಳು ಬರುತ್ತಿವೆ ಎಂದು ಎಲ್ಲರಿಗೂ ಗೊತ್ತು. ಇದು ನಮ್ಮ ಪೂರ್ವಿಕರಿಗೆ ಚೆನ್ನಾಗಿಯೇ ಗೊತ್ತಿತ್ತು. ಚಿಂತೆ ಎಂಬುದು ಜೀವಂತ ದೇಹವನ್ನೇ ಸುಡುತ್ತದೆ ಎಂಬ ಕಟು ಸತ್ಯವನ್ನು ಹೇಳಿದರು. ಸಾಂಸಾರಿಕ ಚಿಂತೆಯಿಂದ ಹತ್ತು ಹಲವು ರೋಗಗಳು, ಭಗವಂತನ ಚಿಂತನೆಯಿಂದ ಆನಂದ! ಯಾವುದು ಬೇಕು? ಆಯ್ಕೆ ನಮ್ಮದು.