Pages

Monday, September 23, 2013

ಒಂದು ಸಾರ್ಥಕ ಪ್ರಯೋಗ-"ಪರಂಪರೆ"







ಸಾಮಾನ್ಯವಾಗಿ ಒಂದು ಮಾತನ್ನು   ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು  ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು ಸುಳ್ಳುಮಾಡುವ ಅದ್ಭುತ ಪ್ರಯತ್ನ ಒಂದು ಮೈಸೂರಿನಲ್ಲಿ    ನಡೆದಿದೆ.ಅದರ ಹೆಸರು "ಪರಂಪರೆ" 
ಹೆಸರೇ ಹೇಳುವಂತೆ ನಮ್ಮ  ಧರ್ಮ, ಸಂಸ್ಕೃತಿ ಪರಂಪರೆಯನ್ನುಳಿಸಲು ಒಂದು ಪ್ರಯತ್ನ. ವರ್ಷದಲ್ಲಿ ಹಲವಾರು ಉಪನ್ಯಾಸಗಳು. ರಾಮಾಯಣ , ಮಹಾಭಾರತ, ಗೀತೆ, ವೇದ, ಉಪನಿಷತ್ತು.......ಹೀಗೆ ಹಲವು ವಿಷಯಗಳ ಬಗ್ಗೆ ಉಪನ್ಯಾಸದ ಏರ್ಪಾಡು ಮಾಡುತ್ತಾರೆ. "ಪರಂಪರೆ" ಸಂಸ್ಥೆಗೆ 1200 ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಎಲ್ಲರ ವಿಳಾಸ, ಮೊಬೈಲ್ ನಂಬರ್, ಈ ಮೇಲ್ ವಿಳಾಸವು ಅದರ ಸಂಯೋಜಕರಾದ ಶ್ರೀ ಕೃಷ್ಣಕುಮಾರರ ಹತ್ತಿರವಿದೆ. ಒಂದು ಕಾರ್ಯಕ್ರಮವನ್ನು ಯೋಜಿಸಿದನಂತರ ಈ ಎಲ್ಲಾ 1200 ಜನರಿಗೆ ಆಮಂತ್ರಣವು  ಈಮೇಲ್ , SMS,ಮತ್ತು ಅಂಚೆ ಮೂಲಕ ತಲುಪುತ್ತದೆ. ಕೆಲವು ಸಂಯೋಜಕರಿಗೇ ವಾಪಸ್ ಕೂಡ ಬರುತ್ತವೆ. ಆದರೂ ಸುಮಾರು 700 ರಿಂದೆ 800 ಜನ ಸದಸ್ಯರು ತಪ್ಪದೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಉಪನ್ಯಾಸವನ್ನು ಕೇಳುತ್ತಾರೆ.
                    ಇಂತಾ ಒಂದು ಕಾರ್ಯಕ್ರಮದಲ್ಲಿ ಹಾಸನದ ವೇದ ಭಾರತಿಯ ಸದಸ್ಯರು ಪಾಲ್ಗೊಳ್ಳುವ ಒಂದು ಅವಕಾಶ ಸಿಕ್ಕಿತ್ತು. ಕಳೆದ 16.9.2013 ರಿಂದ  22.9.2013 ರವರಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸ ಮಾಲಿಕೆ ಏರ್ಪಾಡಾಗಿತ್ತು. ಕೊನೆಯ ದಿನ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆದರೆ, ಅಗ್ನಿಹೋತ್ರದ ಅರ್ಥ ವಿವರಣೆಯು  ಶ್ರೀ ಸುಧಾಕರ ಶರ್ಮರಿಂದ ನಡೆಯಿತು. ಅದರ ನಂತರ  ಸಂಸ್ಕೃತ ಸೌರಭ ಮತ್ತು ವೇದ ಪಠಣ ಕಾರ್ಯಕ್ರಮಗಳು. ಕೊನೆಯಲ್ಲಿ  ಶ್ರೋತೃಗಳ ಪ್ರಶ್ನೆಗಳಿಗೆ ಶರ್ಮರ ಉತ್ತರ.  ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಅನುಭವ.ಸೇರಿದ್ದ ಸುಮಾರು 800 ಜನ ಶ್ರೋತೃಗಳು ಸುಮಾರು ಮೂರು ಗಂಟೆ ಗಳ ಕಾಲ ಕಾರ್ಯಕ್ರಮದಲ್ಲಿ  ಶಿಸ್ತುಬದ್ಧವಾಗಿದ್ದು ವೇದದ ಸವಿಯನ್ನು ಅನುಭವಿಸಿದರು. ಇಂತಾ ಕಾರ್ಯಕ್ರಮಗಳು ಎಲ್ಲಾ ಊರುಗಳಲ್ಲೂ ನಡೆದರೆ ನಮ್ಮ ಪರಂಪರೆಯ ಉತ್ಥಾನವಾಗುವುದರಲ್ಲಿ ಸಂಶಯವಿಲ್ಲ.