Pages

Friday, March 25, 2011

ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಕಳೆದ ಒಂದು ಸಾರ್ಥಕ ಸಂಜೆ

ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು

ಪಂಡಿತರ ಸಾನ್ನಿಧ್ಯದಲ್ಲಿನ ಸಂತಸ - ಕವಿ ನಾಗರಾಜ್ ಪತ್ನಿ ಭಾರತಿಯೊಂದಿಗೆ


      ಪಂ. ಸುಧಾಕರ ಚತುರ್ವೇದಿಯವರು ೧೮೯೭ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, ೧೩ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಅವರು ಹಿಂದೊಮ್ಮೆ ’ವಿಜಯ ಕರ್ನಾಟಕ’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. ’ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್’ - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಬರಲಿರುವ ರಾಮನವಮಿಗೆ ೧೧೫ ವರ್ಷಗಳಿಗೆ ಕಾಲಿರಿಸಲಿರುವ ಇವರು ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನಲ್ಲಿ ಶ್ರೀ ಕೃಷ್ಣಸೇವಾಶ್ರಮದ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ಇವರ ಮನೆಯಲ್ಲಿ ಸತ್ಸಂಗ ಇದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಳೆದ ೧೯-೦೩-೨೦೧೧ರಂದು ನನ್ನ ಪತ್ನಿ ಮತ್ತು ಮಗನೊಂದಿಗೆ ಅಂತಹ ಒಂದು ಸತ್ಸಂಗದಲ್ಲಿ ಪಾಲುಗೊಂಡದ್ದು ನನ್ನ ಪುಣ್ಯವಿಶೇಷ.





     ಸರಿಯಾಗಿ ಸಾಯಂಕಾಲ ೫-೩೦ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ (೫-೨೫ರಲ್ಲಿ ಸಮಯ ವಿಚಾರಿಸಿದ ಅವರು, ಇನ್ನೂ ೫ ನಿಮಿಷವಿದೆ ಎಂದು ಹೇಳಿದ್ದರು) ಮೊದಲಿಗೆ ಸುಮಾರು ೧೫-೨೦ ನಿಮಿಷಗಳ ಕಾಲ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಭಾಗವಹಿಸಿದ ಅಗ್ನಿಹೋತ್ರಕ್ಕೆ ನಾವು ಸಾಕ್ಷಿಯಾದೆವು. ನಂತರದಲ್ಲಿ ಸುಮಾರು ೪೫-೫೦ ನಿಮಿಷಗಳ ಕಾಲ ಪಂ. ಸುಧಾಕರ ಚತುರ್ವೇದಿಯವರು ಬಂದಿದ್ದವರಿಗೆ ತಮ್ಮ ವಿಚಾರಗಳನ್ನು ಮುಂದಿಟ್ಟರು. ವಯೋಮಾನದ ಕಾರಣ ಕೆಲವು ಪದಗಳು ಅಸ್ಪಷ್ಟವೆಂದೆನಿಸಿದರೂ ಗಮನವಿರಿಸಿದರೆ ಅರ್ಥವಾಗುತ್ತಿತ್ತು. ಅವರು ತಿಳಿಸಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸಿ ಈ ಲೇಖನ. ಅವರ ಅಂದಿನ ವಿಚಾರದ ತುಣುಕುಗಳು, ಇದೋ ನಿಮ್ಮ ಮುಂದೆ:

ವಿಚಾರ ಮಾಡೋಣ

     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ.
     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ||

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ. [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು 'ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು' ಎಂದು ಹೇಳಿದ್ದರು.

     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.

     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು,'ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ?' ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ? ಹಸಿವಾದಾಗ 'ಭವತಿ ಭಿಕ್ಷಾಂದೇಹಿ'ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ? ಸ್ವಾಮಿ ಶ್ರದ್ಧಾನಂದರು ಹಾಸ್ಯವಾಗಿ ಹೇಳುತ್ತಿದ್ದರು - 'ದೇಶಕ್ಕೆ ಸ್ವಾತಂತ್ರ್ಯ ಬಂದು ನಾನು ಪ್ರಧಾನ ಮಂತ್ರಿಯಾದರೆ ಮಾಡುವ ಮೊದಲ ಕೆಲಸವೆಂದರೆ ಸಾಧು-ಸಂತರೆನಿಸಿಕೊಂಡವರನ್ನೆಲ್ಲಾ ಹಿಡಿದು ಮಿಲಿಟರಿಗೆ ಸೇರಿಸಿಬಿಡುತ್ತಿದ್ದೆ! ಮೊದಲೇ ಬಡ ದೇಶ, ಒಂದಿಷ್ಟು ಭಿಕ್ಷುಕರು ಕಡಿಮೆಯಾಗಲಿ!'

     ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಹೇಳುವವರನ್ನು ನೋಡಿದ್ದೇನೆ - ಅವರು ಕಂಡೆವೆಂದು ಹೇಳುವ ಪರಮಾತ್ಮ ಅಂದರೆ ಮೂರು ಕಣ್ಣಿನ ಶಿವ, ನಾಲ್ಕು ತಲೆಯ ಬ್ರಹ್ಮ, ಹೀಗೆ. ಇದೆಲ್ಲಾ ಬುರುಡೆ. ನಿರಾಕಾರ ಪರಮಾತ್ಮ ಎಂದೂ ಸಾಕಾರನಾಗಿರಲಿಲ್ಲ, ಆಗುವುದೂ ಇಲ್ಲ. ಕೃಷ್ಣನನ್ನು ವಿಷ್ಣುವಿನ ಅವತಾರ ಅನ್ನುತ್ತಾರೆ. ಅವತಾರ ಎಂದರೆ ಮೇಲಿನಿಂದ ಕೆಳಗೆ ಅವತರಿಸಿದವನು ಎಂದು. ಆ ಪರಮಾತ್ಮ ಮೇಲಿನಿಂದ ಕೆಳಗೆ ಇಳಿದು ಬಂದನೆಂದರೆ ಆತ ಮೊದಲು ಕೆಳಗೆ ಇರಲಿಲ್ಲವೇ? ಕೌಸಲ್ಯೆಯ ಮಗನಾಗಿ ಪರಮಾತ್ಮ ರಾಮನ ಅವತಾರದಲ್ಲಿ ಬಂದನೆಂದರೆ ಅದಕ್ಕೂ ಮೊದಲು ಭೂಮಿಯಲ್ಲಿ ದೇವರಿರಲಿಲ್ಲವೆ? ಸಾಕ್ಷಾತ್ಕಾರ ಎನ್ನುವ ಪದವನ್ನೇ ನಾನು ಬಳಸಲು ಇಚ್ಛಿಸುವುದಿಲ್ಲ. ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಪರಮಾತ್ಮ ರಾಮನೆಂದರೆ ಹೃದಯದಲ್ಲಿ ನೆಲೆಸಿರುವ, ರಮಿಸುವ ಭಗವಂತನೇ ಹೊರತು ಕೌಸಲ್ಯಾಸುತನೆಂದಲ್ಲ. ರುದ್ರನೆಂದರೆ ಲಯಕಾರಕನೆಂದು ಬಿಂಬಿಸಲ್ಪಟ್ಟವನಲ್ಲ, ಪರರ ಸಂಕಷ್ಟಗಳನ್ನು ಕಂಡು ಕಣ್ಣೀರು ಸುರಿಸುವವನು, ಪರಿಹರಿಸಲು ಸಹಕರಿಸುವವನು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು, ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ!
-0-0-0-0-0-