Pages

Thursday, September 9, 2010

ಯೋಚಿಸಲೊ೦ದಿಷ್ಟು... ೯

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!
೨.ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು.ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.

೩. ವಿವೇಚನೆಯಿಲ್ಲದೆ ಯಾರನ್ನಾದರೂ ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.

೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿ ಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!

೫.  ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!

೬.ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!

೭. ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!

೮. ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸು ತ್ತವೆ!

೯. ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿ ಕೊಳ್ಳುತ್ತದೆ!

೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!

೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ.ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯ ದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.

೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.

೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!

೧೪.ಹೆ೦ದತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ಯೂ,ಮಗನೆಡೆಗಿನ ಪ್ರೀತಿಯಲ್ಲಿ “ಮಹತ್ವಾಕಾ೦ಕ್ಷೆ“ಯೂ ತು೦ಬಿಕೊ೦ಡಿ ದ್ದರೆ,ಮಗಳೆಡೆಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.

೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.

ಎಲ್ಲಾ ಆತ್ಮ ಸಂತೋಷ ಕ್ಕಾಗಿ

ವೇದಸುಧೆಯ ಅಭಿಮಾನಿಳೇ, ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.ಗೌರಿ-ಗಣೇಶನ ವಿಚಾರ ವೇದಗಳಲ್ಲಿದೆಯೇ? ನೀವು ಆಚರಿಸುತ್ತೀರಾ? ನಿಮ್ಮ ಆಚರಣೆಗೆ ಅರ್ಥ ಇದೆಯೇ? ಅಂತಾ ನನ್ನ ಸ್ನೇಹಿತರೊಬ್ಬರು ನನ್ನೊಡನೆ ನಿನ್ನೆ ಚರ್ಚೆ ಆರಂಭಿಸಿದರು.ವೇದಸುಧೆ ಅನ್ನೋ ಹೆಸರಲ್ಲಿ ಬ್ಲಾಗ್ ಶುರು ಮಾಡಿದಮೇಲೆ ಕೆಲವು ಸಲ ನನಗೆ ಮುಜುಗರವೂ ಆಗಿದೆ. ಖುಷಿಯೂ ಆಗಿದೆ.ನನ್ನ ಸ್ನೇಹಿತ ಒಪ್ಪಲಿ ಬಿಡಲಿ ಅವನಿಗೆ ನಾನು ಏನು ಹೇಳಿದೆನೋ ಅದನ್ನು ಮತ್ತು ಇವತ್ತು ಹಬ್ಬದ ತಯಾರಿಯಲ್ಲಿಯೇ ಉಂಟಾಗಿರುವ ಸಂತೋಷವನ್ನೂ ಇಲ್ಲಿ ನಿಮಗೂ ತಿಳಿಸಿ ಬಿಡ್ತೀನಿ.
ನಮ್ಮ ಎಲ್ಲಾ ಚಟುವಟಿಕೆಗಳ ಒಟ್ಟು ಉದ್ಧೇಶವೇನು? ಒಂದು ಸಮಾಧಾನಕರ ಜೀವನ ಸಾಗಿಸುವುದು, ಅಷ್ಟೇ ತಾನೆ? ದಿನವೂ ಆಫೀಸು,ವ್ಯಾಪಾರ-ವ್ಯವಹಾರ ಅಂತಾ ಕಾಲ ಹಾಕೋ ನಾವು ಒಟ್ಟಾರೆ ನಮ್ಮ ಹೊಟ್ಟೆ-ಬಟ್ಟೆಗೆ ಒಂದಿಷ್ಟು ದುಡಿಮೆ ಮಾಡೋದರಲ್ಲಿ ಇಡೀ ದಿನವನ್ನು ಕಳೆದು ಬಿಡ್ತೀವಿ. ಸರ್ಕಾರೀ ನೌಕರರಂತೂ ತಮ್ಮ ೩೦-೩೫ ವರ್ಷಗಳ ಸರ್ವೀಸ್ ನಲ್ಲಿ ಸಾಲಮಾಡಿ ಒಂದು ೩೦*೪೦ ಅಳತೆಯ ಮನೆಕಟ್ಟಿ ಜೀವನವೆಲ್ಲಾ ಸಾಲ ತೀರಿಸಿ ಒಂದು ದಿನ ಗೊಟಕ್ ಅಂದ್ರೆ ಅಲ್ಲಿಗೆ ಅವರ ಜೀವನದ ಕಥೆ ಮುಗಿದಂತೆಯೇ. ಇಂತಾ ಗಡಿಬಿಡಿ ಜೀವನದಲ್ಲಿ ಮನುಷ್ಯನಿಗೆ ಒಂದಿಷ್ಟು ಬದಲಾವಣೆ ಬೇಡವೇ? ಅದಕ್ಕಾಗಿ ಈ ಹಬ್ಬ-ಹರಿದಿನ. ಒಂದು ವೇಳೆ ಗಣಪತಿ ವ್ರತ ಮಾಡದೆ ಹೋದ್ರೆ ಆಕಾಶ ಕಳಚಿ ತಲೆ ಮೇಲೆ ಬೀಳುವುದಿಲ್ಲ. ಆದರೆ ಹಬ್ಬದ ತಯಾರಿಯ ಆ ಸಡಗರ ಇದೆಯಲ್ಲಾ! ಅದನ್ನು ಕಳೆದುಕೊಂಡು ಬಿಡ್ತೀವಲ್ರೀ. ಎಂ.ಬಿ.ಏ ಮಾಡ್ತಿರೋ ನನ್ನ ಮಗಂಗೆ ನಿತ್ಯವೂ ದೇವರಿಗೊಂದು ನಮಸ್ಕಾರ ಹಾಕಬೇಕೆಂಬ ಮನಸ್ಸಿಲ್ಲ. ಆದರೆ ಇವತ್ತು ನನ್ನೊಡನೆ ಮಾರ್ಕೆಟ್ಟಿಗೆ ಬಂದು ಹಣ್ಣು-ಹೂವು, ಬಾಳೆಕಂದು-ಮಾವಿನಸೊಪ್ಪು, ಎಲ್ಲಾ ಖರೀಧಿಸುವಾಗ ಎಂತಾ ಸಡಗರ ಇತ್ತು, ಗೊತ್ತಾ? ನಾನು ಸಾಮಾನ್ಯವಾಗಿ ಒಂದು ಚಿಕ್ಕ ಗಣಪತಿ ವಿಗ್ರಹ ತರ್ತಾ ಇದ್ದೆ. ಈ ವರ್ಷ ಅವನ ದರ್ಬಾರಲ್ಲಿ ಸ್ವಲ್ಪ ದೊಡ್ಡ ಗಣಪನೇ ನಮ್ಮ ಮನೆಗೆ ಬಂದು ಕುಳಿತಿದ್ದಾನೆ. ಇನ್ನು ಗಣಪತಿ ಮಂಟಪ ಕಟ್ಟೋ ಸಡಗರ. ಇನ್ನು ನನ್ನ ಪತ್ನಿಗಾದರೋ ಅವಳ ತಂಗಿ ಜೊತೆ ಸೇರಿಕೊಂಡು ಮೋದಕ ಮಾಡುವ, ಮೊರದ ಬಾಗಿನಕ್ಕೆ ಅಣಿ ಮಾಡಿಕೊಳ್ಳುವ ಸಡಗರ. ಮನೆಯಲ್ಲಿ ಎಲ್ಲಾ ಆಕ್ಟ್ವೀವ್ ಆಗಿಬಿಟ್ಟಿದ್ದಾರೆ. ಬಹುಷ: ಇವತ್ತು ರಾತ್ರಿ, ನಾಳೆ ರಾತ್ರಿ ಮಲಗಿಕೊಳ್ಳುತ್ತಾರೋ ಇಲ್ವೋ ಗೊತ್ತಿಲ್ಲ. ಅಂದಹಾಗೆ ಶನಿವಾರ ಮಾಡೋ ಹಬ್ಬಕ್ಕೆ ಇವತ್ತೇ ಹೂವು- ಹಣ್ಣು ಇತ್ಯಾದಿ ತಂದಾಯ್ತು. ಯಾಕೆ ಗೊತ್ತಾ? ನಾಳೆ ಹಾಸನದ ಮಾರ್ಕೆಟ್ ನಲ್ಲಿ ಒಂದು ಹುಳುವೂ ತೆವಳಲು ಸಾಧ್ಯವಿರುವುದಿಲ್ಲ. ಅಷ್ಟು ರಷ್. ಏನ್ರೀ ಜನಕ್ಕೆ ಹುಚ್ಚು ಅಂತೀರಾ? ನಾನು ಹೇಳೋದು ಹುಚ್ಚಲ್ಲ, ಬದಲಿಗೆ ಸಡಗರ. ಅದರಲ್ಲೇ ಸಂತೋಷ. ಅದರಲ್ಲೇ ಆನಂದ. ಆ ಅನಂದವನ್ನು ಯಾಕೆ ಕಳೆದು ಕೊಳ್ಳಲಿ? ವೇದದಲ್ಲಿ ಇರಲಿ-ಬಿಡಲಿ ಸಂತೋಷಕ್ಕಾಗಿ, ಸಡಗರಕ್ಕಾಗಿ ಗಣೇಶನ ಹಬ್ಬ ಆಚರಿಸುತ್ತೀನಿ. ಅಂದಹಾಗೆ ಹಬ್ಬ ಆಚರಿಸುವುದರಿಂದ ಗಣೇಶ ಸುಪ್ರೀತನಾಗಿ ನಮಗೆ ಬೇಕಾದ ವರ ಕೊಡ್ತಾನೇ ಅಂತಾನೂ ಅಲ್ಲ, ಆಚರಿಸದೆ ಹೋದರೆ ಶಾಪಕ್ಕೆ ಗುರಿಯಾಗುತ್ತೀ ನೆಂದೂ ಅಲ್ಲ. ಎಲ್ಲಾ ಆತ್ಮ ಸಂತೋಷ ಕ್ಕಾಗಿ.