Pages

Tuesday, September 28, 2010

ಎಲ್ಲರ ಜನನ ವಾಗಿರುವುದು ತಾಯಿಯ ಗರ್ಭದಿಂದಲ್ಲವೇ?

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ-2



[ ಕಳೆದ ಕೆಲವು ದಿನಗಳ ಮುಂಚೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಬ್ರಾಹ್ಮಣ ಸಮಾಜದಲ್ಲಿ ಮಾಡಿದ ಉಪನ್ಯಾಸದ ಆಡಿಯೋ ವನ್ನು ಇಲ್ಲಿ ನೀವು ಕೇಳಬಹುದು.ಆದರೆ ಕೆಲವರಿಗೆ ಆಡಿಯೋ ಕೇಳುವ ಸೂಕ್ತ ಸೌಲಭ್ಯವಿರುವುದಿಲ್ಲ. ಅವರಿಗಾಗಿ ಉಪನ್ಯಾಸದ ಬರಹರೂಪವನ್ನು ಇಲ್ಲಿ ಕೊಟ್ಟಿದೆ. ಬರಹ ರೂಪವನ್ನು ಓದುವಾಗ ಉಪನ್ಯಾಸವನ್ನು ಕೇಳಿದಂತಾಗುವುದಿಲ್ಲ. ವೀಡಿಯೋ ದಲ್ಲಿ ನೋಡಿದರಂತೂ ಇನ್ನೂ ಭಾವನೆಗಳು ಸ್ಪಷ್ಟವಾಗುತ್ತದೆ. ಆದರೂ ಆಡಿಯೋ/ವೀಡಿಯೋ ಗಳನ್ನು ಅಂತರ್ಜಾಲದಲ್ಲಿ ನೋಡುವಾಗ/ಕೇಳುವಾಗ ಅನೇಕ ತಾಂತ್ರಿಕ ತೊಂದರೆಗಳಿರುತ್ತವೆ. ಅದಕ್ಕಾಗಿ ಬರಹ ರೂಪ ಇಲ್ಲಿದೆ. ಆದರೂ ಆಡಿಯೋ ಕೇಳಿ.]
ಇವತ್ತು ರೂಢಿಯಲ್ಲಿ ಬ್ರಾಹ್ಮಣ ಎಂದರೆ ಅರ್ಥ ಏನು? ಅದು ಒಂದು ಜಾತಿ.ನಾವೆಲ್ಲಾ ಒಪ್ಪಿಕೊಂಡಿರುವಂತೆ ಬ್ರಾಹ್ಮಣ ಎಂಬುದು ಹುಟ್ಟಿನಿಂದ ಬರುತ್ತದೆ,ತಂದೆತಾಯಿ ಬ್ರಾಹ್ಮಣರಾಗಿದ್ದರೆ ಜನಿಸುವ ಮಗುವೂ ಬ್ರಾಹ್ಮಣ ಎಂಬುದು ಈಗ ನಡೆದುಬಂದಿರುವ ವಿಚಾರ.ಇದು ಬ್ರಾಹ್ಮಣ ಎಂಬ ಪದಕ್ಕಷ್ಟೇ ಅಲ್ಲ, ಎಲ್ಲಾ ಜಾತಿಯ ಕಥೆಯೂ ಇದೇ ಆಗಿದೆ. ವೈಶ್ಯ ನೆಂದರೆ ವೈಶ್ಯ ತಂದೆತಾಯಿಗೆ ಜನಿಸಿರುವವ ಎಂದೇ ಅರ್ಥ ಮಾಡುತ್ತೇವೆ.ಇದು ಎಲ್ಲಾ ಜಾತಿಗೂ ಅನ್ವಯ. ಅಥವಾ ಮತಗಳ ಹೆಸರಲ್ಲಿ ನೋಡಬೇಕೆಂದರೆ ಹಿಂದುಗಳ ಮನೆಯಲ್ಲಿ ಹುಟ್ಟಿದ ಮಗು ಹಿಂದು. ಕ್ರಿಶ್ಚಿಯನ್ ಮನೆಯಲ್ಲಿ ಹುಟ್ಟಿದ ಮಗು ಕ್ರೈಸ್ತ್ , ಮುಸಲ್ಮಾನರ ಮನೆಯಲ್ಲಿ ಹುಟ್ಟಿದವ ಮುಸ್ಲಿಮ್,ಲಿಂಗಾಯಿಯತರ ಮನೆಯಲ್ಲಿ ಹುಟ್ಟಿದವ ಲಿಂಗಾಯಿತ. ಒಟ್ಟಿನಲ್ಲಿ ಜಾತಿಯಾಗಲೀ, ಮತವಾಗಲೀ ಹುಟ್ಟಿನಿಂದ ಬರುತ್ತದೆಂಬ ವಿಚಾರ ನಮ್ಮ ತಲೆಯಲ್ಲಿ ಸೇರಿಕೊಂಡಿದೆ. ಆದರೆ ವೇದವು ಹೇಳುವ ವಿಚಾರವನ್ನು ನಾವು ಪ್ರಾಮಾಣಿಕವಾಗಿ ಗಮನಿಸುವುದಾದರೆ ಈ ರೀತಿಯ ಹುಟ್ಟಿನಿಂದ ಬರುವ ಜಾತಿಯನ್ನು ವೇದವು ಒಪ್ಪುವುದಿಲ್ಲ.ಭಗವಂತನು ಈ ರೀತಿಯ ವಿಭಾಗವನ್ನು ಮಾಡಿರುವುದಿಲ್ಲ. ಇಂದು ಇರುವ ಎಲ್ಲಾ ಈ ಜಾತಿಯ ವ್ಯವಸ್ಥೆಯನ್ನು ಮನುಷ್ಯನು ಭಗವಂತನಿಗೆ ವಿರುದ್ಧವಾಗಿ ಮಾಡಿಕೊಂಡಿದ್ದಾನೆಯೇ ಹೊರತು ಭಗವಂತನು ಮಾಡಿದ್ದಲ್ಲ. ಮನುಷ್ಯನು ಮಾಡಬಾರದೆಂದೇನೂ ಅಲ್ಲ, ಆದರೆ ಮನುಷ್ಯನು ಮಾಡಿದ್ದು ಭಗವಂತನ ಆದೇಶಕ್ಕೆ ಅನುಗುಣವಾಗಿರಬೇಕು.ಈ ಜಾತಿ ವ್ಯವಸ್ಥೆಯು ಭಗವಂತನ ಆದೇಶಕ್ಕೆ ವಿರುದ್ಧವಾಗಿದೆ.ಅಲ್ಲದೆ ವೇದದಲ್ಲಿರುವ ವರ್ಣಾಶ್ರಮ ವ್ಯವಸ್ಥೆಗೆ ತದ್ವಿರುದ್ಧವಾಗಿದೆ.ವೇದದಲ್ಲಿ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರ ಎಂಬ ಪದಗಳು ಪ್ರಯೋಗದಲ್ಲಿವೆ. ಆದರೆ ಅವುಗಳನ್ನು ಎಲ್ಲೂ ಈಗಿರುವ ಜಾತಿಯ ಅರ್ಥದಲ್ಲಿ ಬಳಸಿಲ್ಲ.ಒಬ್ಬ ವ್ಯಾಪಾರ ಮಾಡುವ ವ್ಯಕ್ತಿ ಇದ್ದಾನೆಂದರೆ ವೇದಗಳ ಪ್ರಕಾರ ಅವನು ವೈಶ್ಯ.ಅವನು ಯಾವ ಮನೆಯಲ್ಲಿ ಹುಟ್ಟಿದ್ದಾನೆ? ಅವರಪ್ಪ ಯಾರು? ಅವರಮ್ಮ ಯಾರು? ಎಂಬುದು ನಗಣ್ಯ.ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಹೆಸರು ಡಿಸೋಜ ಎಂದು ಭಾವಿಸೋಣ. ಅವನನ್ನು ಇಂದು ನಾವು ಏನೆಂದು ಕರೆಯುತ್ತೇವೆ? ಅವನನ್ನು ಕ್ರಿಶ್ಚಿಯನ್ ಎಂದು ಕರೆಯುತ್ತೇವೆ. ಆದರೆ ವೇದದ ಪ್ರಕಾರ ಅವನು ವೈಶ್ಯ. ಇಬ್ರಾಹಿಮ್ ಎಂಬುವನೊಬ್ಬ ಟೀಚರ್ ಕೆಲಸದಲ್ಲಿದ್ದರೆ ಅವನನ್ನು ಮುಸ್ಲಿಮ್ ಎಂದೇ ನಾವು ಕರೆಯುತ್ತೇವೆ. ವೇದದ ಪ್ರಕಾರ ಜ್ಞಾನವನ್ನು ಪ್ರಚಾರ ಮಾಡುತ್ತಿರುವ ಇಬ್ರಾಹಿಮ್ ಕೂಡ ಬ್ರಾಹ್ಮಣನೇ.ಜಾತಿ ಎಂಬುದು ಹುಟ್ಟಿನಿಂದ ಬರುವಂತಹದ್ದಲ್ಲ. ಇದನ್ನೆಲ್ಲಾ ಮನುಷ್ಯನು ವೇದದ ಆದೇಶಕ್ಕೆ ವಿರುದ್ಧವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಇದು ತಪ್ಪು.
ಇವತ್ತಿನ ನಮ್ಮ ಕಲ್ಪನೆ ಹೇಗಿದೆ, ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ.ಇದು ಇವತ್ತಿನ ವ್ಯವಸ್ಥೆಯಲ್ಲ, ಅನೇಕ ಶತಮಾನಗಳಿಂದ ಶೂದ್ರರನ್ನು ಕೀಳಾಗಿ ಕಾಣುತ್ತಾ ಬರಲಾಗಿರುವ ಧ್ಯೋತಕ..ಮೇಲ್ಜಾತಿ ಎಂಬುವರಿಂದ ಕೀಳ್ಜಾತಿ ಎಂಬುವರ ಮೇಲೆ ದೌರ್ಜನ್ಯಗಳು ನಡೆದಿರುವ ಹಲವು ಉಧಾಹರಣೆಗಳು ಚರಿತ್ರೆಯಲ್ಲಿದೆ.ಇವತ್ತಿಗೂ ಕೆಳಜಾತಿಯವರು ಮೇಲ್ಜಾತಿಯವರ ಸೇವೆ ಮಾಡುವುದಕ್ಕಾಗಿಯೇ ಇರುವುದು ಎಂಬ ಭಾವನೆ ಹಲವರಲ್ಲಿದ್ದು ಸಮಾಜದಲ್ಲಿನ ಸಾಮರಸ್ಯ ಕೆಡಲು ಮುಖ್ಯ ಕಾರಣವಾಗಿದೆ.ಈ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆಯೇ ಹೊರತು ನೆಮ್ಮದಿಗೆ ಕಾರಣವಾಗಿಲ್ಲ.ಆದ್ದರಿಂದಲೇ ಇದು ಭಗವಂತನು ಮಾಡಿರುವ ವ್ಯವಸ್ಥೆಯಲ್ಲ. ಭಗವಂತನು ಸಮಾಜದಲ್ಲಿ ನೆಮ್ಮದಿ ಹಾಳುಮಾಡುವ ವ್ಯವಸ್ಥೆ ಮಾಡಿರಲು ಸಾಧ್ಯವೇ ಇಲ್ಲ.ಭಗವಂತನ ಮಕ್ಕಳಾದ ನಾವೆಲ್ಲರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕ ಬೇಕೆಂಬುದೇ ಭಗವಂತನ ಇಚ್ಛೆ.ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಾಗ ಈಗ ಸಮಾಜದ ನೆಮ್ಮದಿ ಹಾಳುಮಾಡಲು ಯಾವಯಾವ ವ್ಯವಸ್ಥೆಗಳಿವೆ, ಅವೆಲ್ಲಾ ಭಗವಂತನು ಮಾಡಿದ್ದಲ್ಲ, ಅದನ್ನು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಜ್ಞಾನಿಗಳು ಮಾಡಿದ್ದು, ಎಂದು ನಾವು ತಿಳಿದುಕೊಳ್ಳಬಹುದು , ಅಷ್ಟೇ ಅಲ್ಲ, ಸಮಾಜದ ನೆಮ್ಮದಿಯನ್ನು ಹಾಳುಮಾಡುವಂತಹ ವ್ಯವಸ್ಥೆಯನ್ನು ಪಾಲಿಸ ಬೇಕಾಗಿಲ್ಲ.
ವೇದವು ನಿಜವಾಗಿ ಏನು ಹೇಳುತ್ತದೆಂಬುದನ್ನು ಈಗ ನೋಡೋಣ.ಶೂದ್ರರನ್ನು ಕೀಳು ಅಥವಾ ಬ್ರಾಹ್ಮಣರನ್ನು ಮೇಲು ಎಂದು ಕರೆಯಲು ಹಾಗೆ ಭಾವಿಸಿರುವವರು ಕೊಡುವ ಕಾರಣವೇನೆಂದರೆ, ವೇದದಲ್ಲಿ ಬರುವ ಒಂದು ಮಂತ್ರ.ಪುರುಷಸೂಕ್ತದ ಈ ಮಂತ್ರವನ್ನು ತಪ್ಪಾಗಿ ಅರ್ಥೈಸಿರುವುದೇ ಇವೆಲ್ಲಾ ಆಭಾಸಗಳಿಗೆ ಮೂಲ ಕಾರಣ. ಅದನ್ನೀಗ ನೋಡೋಣ.
||ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತ: | ಊರೂತದಸ್ಯ ಯದ್ವೈಶ್ಯೋ|ಪದ್ಭ್ಯಾಮ್ ಶೂದ್ರೋ ಅಜಾಯತ|| ಈ ಮಂತ್ರವು ನಾಲ್ಕೂ ವೇದಗಳಲ್ಲಿ ಬರುತ್ತದೆ. ಬ್ರಾಹ್ಮಣರು ಭಗವಂತನ ಮುಖದಿಂದ, ಬಾಹುಗಳಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಕಾಲುಳಿಂದ ಶೂದ್ರರೂ ಹುಟ್ಟಿದರು, ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿಂದ ಸಮಾಜದ ನೆಮ್ಮದಿ ಕೆಡಿಸುವ ಕ್ರಿಯೆ ಶುರುವಾಗಿದೆ.ಮುಖದಿಂದ ಹುಟ್ಟಿದ ಬ್ರಾಹ್ಮಣ ಮೇಲು, ಕಾಲುಗಳಿಂದ ಹುಟ್ಟಿದ ಶೂದ್ರ ಕೀಳೆಂಬ ಭಾವನೆಯನ್ನು ಗಟ್ಟಿಯಾಗಿ ಬಿತ್ತಲಾಗಿದೆ.ದುರ್ದೈವವೆಂದರೆ ಹಲವಾರು ಸಂಸ್ಕೃತ ಪಂಡಿತರೆನೆಸಿಕೊಳ್ಳುವರೂ ಸಹ ಈ ಮಂತ್ರಗಳಿಗೆ ಇದೇ ಅರ್ಥವನ್ನು ಹೇಳುತ್ತಾ ಸಮಾಜದ ನೆಮ್ಮದಿ ಹಾಳುಮಾಡುವ ಕೆಲಸವನ್ನು ಮಾಡಿದ್ದಾರೆ.ಇದು ಒಂದು ದೊಡ್ಡ ಗೊಂದಲ. ಈ ಗೊಂದಲವನ್ನು ಮೊದಲು ಬಿಡಿಸಿಕೊಳ್ಳುವ ಪ್ರಯತ್ನ ಮಾಡೋಣ.ಬ್ರಾಹ್ಮಣೋಸ್ಯ ಮುಖಮಾಸೀತ್, ಎಂಬ ಈ ಮಂತ್ರಕ್ಕೆ ಅರ್ಥವನ್ನು ಹುಡುಕುವ ಮೊದಲು ಅದರ ಹಿಂದಿನ ಮಂತ್ರವನ್ನು ನೋಡಬೇಕು. ಹಿಂದಿನ ಮಂತ್ರವು ಏನು ಹೇಳುತ್ತದೆಂದರೆ ಈ ಸಮಾಜ ಪುರುಷನ ಮುಖ ಯಾವುದು? ಬಾಹುಗಳು ಯಾವುವು?ತೊಡೆ ಹಾಗೂ ಕಾಲುಗಳು ಯಾವುವು? ಪ್ರಶ್ನೆ ಹೀಗಿರುವಾಗ ಉತ್ತರ ಹೇಗಿರ ಬೇಕು? ಮುಖ ಯಾವುದೆಂದರೆ ಮುಖ ಇದು ಎಂದು ಹೇಳಬೇಕಲ್ಲವೇ? ಅಂದರೆ ಬ್ರಾಹ್ಮಣನು ಸಮಾಜ ಪುರುಷನ ಮುಖ, ಕ್ಷತ್ರಿಯರು ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರರು ಪಾದಗಳು, ಎಂದು ತಾನೇ ಉತ್ತರಿಸ ಬೇಕಾದ್ದು.ಆದರೆ ಹೀಗೆ ಅರ್ಥ ಮಾಡಿದರೆ ಕೇಳಿದ ಪ್ರಶ್ನೆಯೇ ಒಂದು ಉತ್ತರವೇ ಬೇರೆ ಆಗುತ್ತದಲ್ಲವೇ?..........[ಮುಂದುವರೆದ ಮಾತುಗಳನ್ನು ಇದೇ ಅಕ್ಟೋಬರ್ ೧ ಶುಕ್ರವಾರ ನಿರೀಕ್ಷಿಸಿ]


-------------------------------------------------------------------------------------------------
ಹಾಸನದ ಮಲೆನಾಡು ಇಂಜಿನೀರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಸ್.ಆರ್.ಜಯರಾಮ್ ಇವರು ತಮ್ಮ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದ್ದಾರೆ.
Sri.Sridhar,
Normally I do not Check mail. By chance I did it today.
I think we have already come long way from the old definition of Brahmin. But what are we today!
Jayaram.


Dr.S.R.Jayaram
Professor in Mechanical Engineering
Malnad College of Engineering
HASSAN 573 201
Phone 08172-245307(O)
08172-265456(R)
Cell No. 94481 66877

-------------------------------------------------------------------------------------------------
ಎಷ್ಟೇ ದೂರ ಸಾಗಿದ್ದರೂ ಸತ್ಯದ ಅರಿವಾದಾಗ ಒಪ್ಪಬೇಕಾಗುತ್ತದೆ.ಇಲ್ಲಿ ನನ್ನದೊಂದು ಪ್ರಶ್ನೆ ಇದೆ. ಸುಧಾಕರ ಶರ್ಮರುಹೇಳುತ್ತಿರುವುದು ವೇದದ ಪರವಾಗಿದೆಯೋ ಅಥವಾ ವಿರುದ್ಧವೋ? ಎಂಬುದು. ಹೇಗೂ ವೇದಸುಧೆಗೆ ನಿಮ್ಮ ಪ್ರವೇಶವಾಗಿದೆ.ಇಲ್ಲಿಪ್ರಕಟವಾಗುತ್ತಿರುವುದು ತಪ್ಪೆಂದು ಕಂಡರೆ ತಪ್ಪೆಂದು ಹೇಳಿ.ಇವತ್ತು ನಾವೇನಾಗಿದ್ದೆವೆನ್ನುವ ಪ್ರಶ್ನೆ ಅವರವರ ಅಂತರಂಗಕ್ಕೆಕೇಳಿಕೊಳ್ಳಬಾಕಾದುದಲ್ಲವೇ?
ನಿಮ್ಮ ವನೇ ಆದ
-ಶ್ರೀಧರ್
-------------------------------------------------------------------------------------------------