Pages

Saturday, May 22, 2010

ನಿಮಗೆ ಹೃತ್ಪೂರ್ವಕ ನಮಸ್ಕಾರಗಳು


ವೇದಸುಧೆಯ ಅಭಿಮಾನಿಗಳೇ,
ನಿಮಗೆ ಹೃತ್ಪೂರ್ವಕ ನಮಸ್ಕಾರಗಳು. ಕೇವಲ ಮೂರು ತಿಂಗಳ ಅವಧಿಯಲ್ಲಿ ಬ್ಲಾಗ್ ಇಣುಕಿದವರ ಸಂಖ್ಯೆ ಮೂರು ಸಹಸ್ರವನ್ನು ದಾಟಿದೆ! ಎಂದರೆ ವೇದದ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲ ಬಹಳ ಜನರಿಗಿದೆ, ಎಂದೇ ಅರ್ಥ, ಅಲ್ಲವೇ? ವೇದಸುಧೆಗೆ ವೇದಾಧ್ಯಾಯೀ ಸುಧಾಕರಶರ್ಮರೇ ಬಂಡವಾಳ.ನನಗೆ ಅವರ ಪರಿಚಯವಾಗಿ ಎರಡು ವರ್ಷ ದಾಟುತ್ತಿದೆ. ವೇದದ ಬಗ್ಗೆ ಅವರ ಅಧ್ಯಯನವು ಅವರನ್ನು ಅದರಲ್ಲಿ ನಿಷ್ಣಾತನನ್ನಾಗಿ ಮಾಡಿದೆ.ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾವು ಅನುಸರಿಸುತ್ತಿರುವ ಅನೇಕ ಸಂಗತಿಗಳು ಅಂಧಾನುಕರಣೆಯಾಗಿ ತೋರುತ್ತವೆ. ಅನೇಕ ಭಾರಿ ಗೊಂದಲ, ಸಂದೇಹವನ್ನೂ ಸೃಶ್ಟಿಸುತ್ತವೆ. ಜಿಜ್ಞಾಸೆ ಬೆಳೆದಂತೆಲ್ಲಾ ಇದು ಸಹಜ. ಸತ್ಯದ ಅರಿವಾದಾಗ ಗೊಂದಲಗಳು, ಸಂದೇಹಗಳು, ಭಯ, ಎಲ್ಲವೂ ದೂರವಾಗಿ ಜೀವನಕ್ಕೆ ಒಂದು ನಿಶ್ಚಿತ ಪಥ ಸಿಕ್ಕುವುದರಲ್ಲಿ ಸಂದೇಹವಿಲ್ಲ. ಈ ದಿಕ್ಕಿನಲ್ಲಿ ಸಾಗುವಾಗ ನಾನು ಕಾಣುತ್ತಿರುವ ಸತ್ಯವನ್ನು ಹಲವರಿಗೆ ತಿಳಿಸಬೇಕೆಂಬ ಆಶಯದೊಡನೆ ನನ್ನ ಪರಿಮಿತಿಯಲ್ಲಿ, ಇರುವ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಶರ್ಮರ ಧ್ವನಿ, ಅವರ ವೀಡಿಯೋ ದೃಶ್ಯಾವಳಿಯನ್ನು ವೇದಸುಧೆಯಲ್ಲಿ ಹಾಕುವ ಪ್ರಯತ್ನ ಮಾಡುತ್ತಿರುವೆ. ಹಾಗೆ ಮಾಡುವಾಗ ಎಡಿಟಿಂಗ್ ಮಾಡಲು ಬಾರದೆ ಹೇಗೆ ವೀಡಿಯೋ ಬಂದಿದೆಯೋ ಹಾಗೆಯೇ ಹಾಕಿರುವೆ. ಅದಕ್ಕಾಗಿ ಯಾವ ಎಚ್ಚರಿಕೆಯನ್ನೂ ತೆಗೆದುಕೊಂಡಿಲ್ಲ, ಅಥವಾ ಯಾವ ಸಂಸ್ಕಾರವನ್ನೂ ಮಾಡಿಲ್ಲ. ಹಾಗಾಗಿ ವೀಡಿಯೋ ಗುಣಮಟ್ಟವು ತೃಪ್ತಿಕರವಾಗಿಲ್ಲವೆಂಬ ಅರಿವು ನನಗಿದೆ. ಜೀವನುದ್ದಕ್ಕೂ ಕಲಿಯುವುದಿದ್ದೇ ಇದೆ. ವೇದಸುಧೆಯಲ್ಲಿ ವೀಡಿಯೋಆಡಿಯೋ ಅಪ್ ಲೋಡ್ ಮಾಡುವಾಗ ತಂತ್ರಗಳನ್ನು ಕಲಿಯಬೇಕಾದ್ದು ಬಹಳಷ್ಟಿದೆ. ನನ್ನ ಸಮಯಾವಕಾಶ ಕಲಿಯುವಸಾಮರ್ಥ್ಯ ಎಲ್ಲವನ್ನೂ ಪರಿಗಣಿಸಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಗುಣಮಟ್ಟ ಸುಧಾರಿಸಲು ಪ್ರಯತ್ನವಂತೂ ಇದ್ದೇ ಇರುತ್ತದೆ. ವೇದಸುಧೆಯ ಅಭಿಮಾನಿಗಳಲ್ಲಿ ಇದಕ್ಕೆ ಪೂರಕವಾದ ಜ್ಞಾನಹೊಂದಿದವರು ಕಾರ್ಯಕ್ಕೆ ಕೈಜೋಡಿಸಲು ವೇದಸುಧೆಗೆಈಮೇಲ್ ಮಾಡಬಹುದು.
ಚಿಕ್ಕಮಗಳೂರಿನಲ್ಲಿ ಅಗ್ನಿಹೋತ್ರ ಕಾರ್ಯಕ್ರಮ:

ದಿನಾಂಕ ೪.೬.೨೦೧೦ ರಂದು ಚಿಕ್ಕಮಗಳೂರಿನಲ್ಲಿ ಬೆಳಿಗ್ಗೆ ೭.೦೦ ಗಂಟೆಯಿಂದ ನಡೆಯುವ ಅಗ್ನಿಹೋತ್ರ ಕಾರ್ಯಕ್ರಮವನ್ನು ಶ್ರೀ ಸುಧಾಕರಶರ್ಮರು ನಡೆಸಿಕೊಡಲಿದ್ದು, ನಂತರ ಅವರ ಉಪನ್ಯಾಸವು ಇರುತ್ತದೆ. ಇಡೀ ಕಾರ್ಯಕ್ರಮವನ್ನು ವೀಡಿಯೋ ಚಿತ್ರೀಕರಿಸಿ ವೇದಸುಧೆಯಲ್ಲಿ ಹಾಕುವ ಉದ್ಧೇಶವಿದೆ. ಅದಕ್ಕಾಗಿಯೇ ಸೂಕ್ತ ಗುಣಮಟ್ಟದ ವೀಡಿಯೋ ಕ್ಯಾಮರಾ ಹೊಂದುವ ಪ್ರಯತ್ನ ಸಾಗಿದೆ.
ಹಾಸನದಲ್ಲಿ ನಡೆದ ಸುಧಾಕರಶರ್ಮರ ಉಪನ್ಯಾಸಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಯೋಜಿಸಿದ ನನ್ನಂತವರಿಗೆ ಸಮಾಧಾನದ ಸಂಗತಿಯಾಗಿದೆ. ಹಾಸನದ ಶಂಕರ ಜಯಂತಿಯಲ್ಲಿ ನಡೆದ ಶಂಕರಾಚಾರ್ಯರ " ಪರಾಪೂಜೆ" "ಭಜಗೋವಿಂದಮ್" ಹಾಗೂ "ಮಣೀಷಾಪಂಚಕ" ಉಪನ್ಯಾಸಗಳು ಜನರ ಮೆಚ್ಚುಗೆ ಪಡೆದವು. ಸೂಕ್ತ ಸಮಯದಲ್ಲಿ ಎಲ್ಲವನ್ನೂ ವೇದಸುಧೆಯಲ್ಲಿ ಪೇರಿಸುವ ಪ್ರಯತ್ನ ಮಾಡಲಾಗುವುದು.
ಎಂದಿನಂತೆ ಸಹಕಾರ/ಉತ್ತೇಜನ ವಿರಲಿ.ನೀವು ಬರೆಯುವ ಪ್ರತಿಕ್ರಿಯೆಗಳು ವೇದಸುಧೆಯ ಸುಧಾರಣೆಗೆ ಕಾರಣವಾಗಬಲ್ಲದು. ಆದ್ದರಿಂದ ನಿಮ್ಮ ಪ್ರತಿಕ್ರಿಯೆಗಳು ಇರಲಿ. ಕನ್ನಡದಲ್ಲಿ ಬರೆಯಲು ಕಷ್ಟವಾದವರು ಇಂಗ್ಲೀಶ್ ನಲ್ಲಿ ಬರೆಯಲೂ ಬಹುದು.