Pages

Monday, February 27, 2012


ಮಂಕುತಿಮ್ಮನ ಕಗ್ಗ  -  ರಸಧಾರೆ 


            ಕಗ್ಗ - ೧೧ 

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ II

ಸುತ್ತಿಪುದು = ಸುತ್ತಿಸುತ್ತದೆ , ಅನುದಿನವು= ಪ್ರತಿನಿತ್ಯವು, ಎತ್ತಲಿದಕೆಲ್ಲ = ಇದಕ್ಕೆಲ್ಲ ಎಲ್ಲಿ. 

ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ.  ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ, ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿದೂರಲ್ಲಿ ಬಿಟ್ಟ ಬೇರನ್ನೋ, ಆ  ಊರಿನ ಮಣ್ಣಿನ  ಋವನ್ನೋ,  ಕಳೆದುಕೊಂಡವರೆ ಬಹಳ ಜನ.  ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ.  ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ  ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.  

ಆ ಯುದ್ಧದಲ್ಲಿ ಗೆಲುವು  ಯಾರದಾಯಿತು ಎಂದು ಯೋಚಿಸಿದರೆ, ಗೆದ್ದದ್ದು " ಮೃತ್ಯು" ಮತ್ತೆಲ್ಲರೂ ಸೋತವರೇ. ಆ ಯುದ್ಧದಲ್ಲೇ ಅಲ್ಲ ಯಾವುದೇ ಯುದ್ಧವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಗೆಲ್ಲುವುದು "ಮೃತ್ಯು"  ಮಾತ್ರ. ಮಿಕ್ಕೆಲ್ಲರೂ, ಎಲ್ಲ ದೇಶಗಳೂ  ಸೋಲುತ್ತವೆ. ಕೇವಲ ಮೃತ್ಯು ಗೆಲ್ಲುತ್ತದೆ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಕ್ರೂರತ್ವಕ್ಕೆ ಒಂದು ಅಂತ್ಯವೇ ಇರಲಿಲ್ಲ. ಹಿಟ್ಲರನ ರಕ್ತ ದಾಹಕ್ಕೆ ಕೊನೆಯೇ ಇರಲಿಲ್ಲ. ಅದಕ್ಕೊಂದು ನಿದರ್ಶನವೆಂದರೆ
 " ಸಾಬಿಬಾರ್ " ಎಂಬಲ್ಲಿ ವಿಷಾನಿಲ ಘಟಕಗಳನ್ನು ನಿರ್ಮಿಸಿ, ವೈರಿ ದೇಶದ ಸೈನಿಕರಷ್ಟೇ ಅಲ್ಲ ಸೆರೆಸಿಕ್ಕ ಸಾಮಾನ್ಯ ಪ್ರಜೆಗಳನ್ನೂ ಅಲ್ಲಿಗೆ ತಂದು, ಕೆಲಸಮಾಡಲು ಶಕ್ತಿ ಇರುವವರನ್ನು ಹಲವಾರು  ಕೆಲಸಗಳಿಗೆ ಹಚ್ಚಿ, ಕೆಲಸ ಮಾಡಲಾಗದ  ಸ್ತ್ರೀಯರು, ವೃದ್ಧರು, ಮಕ್ಕಳು ಹೀಗೆ ಎಲ್ಲರನ್ನೂ ಅಮಾನವೀಯ ಕ್ರೌರ್ಯದಿಂದ ಆ ವಿಷಾನಿಲ ಘಟಕದೊಳಕ್ಕೆ ತಳ್ಳಿ ಕೊಂದು ಬಿಡುವ ಪರಮ ನೀಚತನವನ್ನು ಹಿಟ್ಲರ ತೋರಿಸಿದ್ದ. ಅದು ಕ್ರೌರ್ಯದ ಹಲವಾರು ಮಾರ್ಗಗಳಲ್ಲಿ ಒಂದಾಗಿತ್ತು. ಎಲ್ಲ ದೇಶಗಳೂ  ಒಂದಲ್ಲ ಒಂದು ದೇಶದ ಪಕ್ಷವನ್ನು ತೆಗೆದುಕೊಂಡು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುವಂಥಾ ಯುದ್ದವನ್ನು ನಡೆಸಿದರು. ಜಪಾನಿನ ಮೇಲೆ ಬಿದ್ದ ಎರಡು ಅಣು ಬಾಂಬುಗಳು, ಈ ಯುದ್ಧವನ್ನು ಒಂದು ಕೊನೆ ಮುಟ್ಟಿಸಿತು.  ಇದು ಚರಿತ್ರೆ. 

ಆದರೆ ವರ್ತಮಾನವೇನೂ ಭಿನ್ನವಾಗಿಲ್ಲ. ಇನ್ನೂ ಭೀಕರವಾಗುತ್ತಿದೆ. ಆಗ ಒಂದು ಯುದ್ಧ ನಡೆದರೆ, ಈಗ ಹಲವಾರು ಯುದ್ಧಗಳು. ವೈಜ್ಞಾನಿಕವಾಗಿ, ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಹಿಂದಿರುವ ರಾಷ್ಟ್ರಗಳಮೇಲೆ ಆಧಿಪತ್ಯ, ದಬ್ಬಾಳಿಕೆ. ಷಡ್ಯಂತ್ರ, ಒತ್ತಡ, ಅನವಶ್ಯಕ ಹಸ್ತಕ್ಷೇಪದಿಂದ ಇಂದಿಗೂ ದೇಶದೇಶಗಳ ಮಧ್ಯೆ ದ್ವೇಷದ ಭಾವ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತಿ, ಮತ, ಭಾಷೆ, ಎಲ್ಲೆ, ಗಡಿ ಹೀಗೆ  ಹೊಡೆದಾಟಕ್ಕೆ ಹಲವಾರು ಕಾರಣಗಳು. ತನ್ನ ಬಲದ ಕಾರಣ ಪರರ ದೇಶಗಳಿಗೆ ಕುಂಟು ನೆಪ ಒಡ್ಡಿ ನುಗ್ಗಿ  ಮಾರಣ ಹೋಮ ನಡೆಸಿ ಅಲ್ಲಿರುವ ಸಂಪತ್ತನ್ನು ಲೂಟಿಮಾಡುವ ಪ್ರವೃತ್ತಿ ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೂ ಇತ್ತು. ಇಂದೂ ಇದೆ. ಜನಾಂಗಗಳನ್ನು ಒಂದುಗೂಡಿಸುವುದಕ್ಕೆ ಪೂರಕವಾದ  ಜಾತಿ, ಮತ, ಭಾಷೆಗಳೇ ಜನ ಜನರ ಮಧ್ಯೆ, ದೇಶ ದೇಶಗಳ ಮಧ್ಯೆ ವೈರಕ್ಕೆ ಕಾರಣವಾಗಿರುವುದು ಒಂದು ವಿಪರ್ಯಾಸ. ಅಷ್ಟೇ ಅಲ್ಲ, ಅಂದು ಇದ್ದ ಅಸ್ತ್ರ -ಶಶ್ತ್ರಾಸ್ತ್ರ ಗಳಿಗೆ ಹೋಲಿಸಿದರೆ ಇಂದು ಪ್ರಪಂಚದಲ್ಲಿ, ಇಂತಹ ಹತ್ತು ಪ್ರಪಂಚಗಳನ್ನು ನಿಮಿಷದಲ್ಲಿ ಧ್ವಂಸ  ಮಾಡಬಲ್ಲ ಮಾರಕಾಸ್ತ್ರಗಳನ್ನು ಹೊಂದಿರುವ ಹಲವಾರು ದೇಶಗಳುಂಟು. ನಮ್ಮಲ್ಲಿ ಬತ್ತಿಯನ್ನು ಕಿತ್ತು ಸಿದ್ಧವಾಗಿರುವ ಅಸ್ತ್ರಗಳುಂಟು. ಬೆಂಕಿ ಕಡ್ಡಿ ಗೀರಬೇಕಷ್ಟೇ. ಸಮಗ್ರವಾಗಿ ಇದನ್ನೆಲ್ಲಾ ಸೇರಿಸಿ ದುರ್ದೈವ ಎಂದರು ಮಾನ್ಯ ಗುಂಡಪ್ಪನವರು. 

ಅಂದು ಗುಂಡಪ್ಪನವರು ಖೇದ ವ್ಯಕ್ತಪಡಿಸಿದ ಕಾರಣಗಳು ಇಂದಿಗೂ ಇವೆ.  ಅಷ್ಟೇ ಅಲ್ಲ,ಇನ್ನೂ ವಿಕೃತ ರೂಪ ಪಡೆದುಕೊಂಡು ಇಡೀ ಪ್ರಪಂಚವನ್ನೇ ಎತ್ತಕೊಂಡುಹೋಗುತ್ತಿದೆಯೋ ಯಾರು ಬಲ್ಲರು. ಅಂದು ಅಷ್ಟಕ್ಕೇ ಮರುಗಿದ ಗುಂಡಪ್ಪನವರು ಇಂದು ಈ ಸ್ಥಿತಿಯನ್ನು ನೋಡಿದರೆ ಏನು ಹೇಳಿರಬಹುದೆಂದು ಊಹಿಸಲೂ ಕಷ್ಟ. 

ಇಂತಹ ವಿಚಾರಗಳನ್ನು ಮಂಥನಮಾಡುತ್ತ, ಒಂದು ಶಾಂತ ಪ್ರಪಂಚವನ್ನು ನಿರ್ಮಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ? 

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ. ಎಲ್ಲೆಲ್ಲೂ ಶಾಂತಿ ನೆಲೆಸಲಿ ಎಂದು ಹಾರೈಸುತ್ತಾ

ನಮಸ್ಕಾರ 
ರವಿ ತಿರುಮಲೈ