Pages

Sunday, February 26, 2012

ಸಮಾಜದಲ್ಲಿ ಸಾಮರಸ್ಯ


ಹಾಸನದ ಸಮೀಪ ದೊಡ್ದಪುರದಲ್ಲಿ ನಡೆಯಲಿರುವ  ಸಾಂಕೇತಿಕ ಅಶ್ವಮೇಧ ಯಾಗದ ಬಗ್ಗೆ    ವೇದಸುಧೆಯ ಸಕ್ರಿಯ  ಸದಸ್ಯರೂ ಹಾಗೂ ಪತ್ರಕರ್ತರೂ ಆದ ಶ್ರೀ ಹೆಚ್.ಎಸ್. ಪ್ರಭಾಕರ್ ರವರು  ರಾಜ್ಯದ ಹಲವು ಪತ್ರಿಕೆಗಳಲ್ಲಿ ಮತ್ತು ಹಾಸನದ ಸ್ಥಳೀಯ ಪತ್ರಿಕೆಗಳಲ್ಲಿ ಬರೆದಿರುವ ಲೇಖನವನ್ನು ವೇದಸುಧೆಯಲ್ಲೂ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸವನ್ನೂ ಮತ್ತು ಅದರ  ಬರಹ ರೂಪವನ್ನೂ ಕೂಡ ವೇದಸುಧೆಯಲ್ಲಿ ಪ್ರಕಟಿಸಲಾಗಿದೆ. ವೇದಸುಧೆಯ ಅಭಿಮಾನಿಗಳಲ್ಲಿ   ವಿನಂತಿಸುವುದೆನೆಂದರೆ  ಸಮಾಜದಲ್ಲಿ ಯಾವುದೇ  ಈ ರೀತಿಯ  ಧಾರ್ಮಿಕ ವಿಧಿಗಳು ನಡೆಯುವಾಗ ನಾವು  ವೇದಕ್ಕೆ ಪೂರಕವಾಗಿ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ತರಲು ಅನುಕೂಲವಾಗುವಂತೆ ವ್ಯವಸ್ಥಾಪಕರಿಗೆ ಸಲಹೆ ಕೊಡಲು ಸಾಧ್ಯವೇ? ಪ್ರಯತ್ನಿಸಬೇಕು. ಅಲ್ಲದೆ ಹೀಗೊಂದು ಕಾರ್ಯಕ್ರಮವನ್ನು ಯೋಜಿಸಿರುವಾಗ ಅದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಮಾಜದ ಸಾಮರಸ್ಯದ ದೃಷ್ಟಿಯಿಂದ ಸಾದುವಲ್ಲ ಎಂಬುದನ್ನು ಮನಗಂಡು ಇದರಿಂದ ಸಮಾಜದ ನೆಮ್ಮದಿಗೆ ಪೂರಕವಾಗುವಂತೆ, ಹಾಗೂ ಮಾಡುವ  ಯಜ್ಞದಿಂದ ಪರಿಸರ ಶುದ್ಧವಾಗಲು  ,ಪಠಿಸುವ ಮಂತ್ರದಿಂದ ಮನಸ್ಸು ಶುದ್ಧವಾಗಲು ಅನುಕೂಲವಾಗುವಂತೆ ಎಚ್ಚರ ವಹಿಸಲು ವ್ಯವಸ್ಥಾಪಕರಿಗೆ  ಸೂಕ್ತ ಸಲಹೆ ಕೊಡಲು ಪ್ರಯತ್ನಿಸಬೇಕು.

ಅಶ್ವಮೇಧ ಯಾಗ



ವೇದವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
19.9.2003  ರಂದು ಬೇಲೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮರು ವೇದವನ್ನು ಸರಿಯಾಗಿಅರ್ಥಮಾಡಿಕೊಳ್ಳುವ ಬಗೆ ಹೇಗೆ? ಎಂಬ ವಿಚಾರವಾಗಿ ಬಹು ಸರಳ ಮತ್ತು ಸ್ಪಷ್ಟ ಮಾತುಗಳಲ್ಲಿ ಉಪನ್ಯಾಸವನ್ನು ಮಾಡಿದ್ದಾರೆ. ಅಂದುಮಾಡಿದ ಉಪನ್ಯಾಸಕ್ಕೆ ಅಕ್ಷರಕೊಡುವ ಪ್ರಯತ್ನ ಮಾಡುತ್ತಿರುವೆ. ಒಂದು ವೇಳೆ ಬರೆಯುವಾಗ ಅಕ್ಷರ ತಪ್ಪಾಗಿ ಅರ್ಥ ತಪ್ಪಾದರೆ ಅದುನನ್ನ ತಪ್ಪು. ಆದರೆ ಅವರ ಮಾತುಗಳನ್ನು ಒಪ್ಪದಿದ್ದರೆ ದಯಮಾಡಿ ಓದುಗರು ಪ್ರತಿಕ್ರಿಯಿಸಿದರೆ ಶ್ರೀಯುತರ ಗಮನಕ್ಕೆ ತಂದುಅವರಿಂದಲೇ ಸಮಾಧಾನದ ಉತ್ತರ ಕೊಡಿಸುವೆ. ಇನ್ನು ಮುಂದೆ ಅವರದೇ ಮಾತು ಕೇಳಿ.......
ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರರು ನಿರೂಪಿಸಿದ್ದಾರೆ. ಇದನ್ನುನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನುಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ?
ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂಪದದನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋಅದಕ್ಕೆ ಅಶ್ವ ವೆಂದುಹೆಸರು. ಇದನ್ನು ನಾವು ಶುದ್ಧ ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕಅರ್ಥ ೩]ಇವೆರಡರಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥದೊಡನೆ ರೂಢಿಯಿಂದ ಬಂದಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈಮಿತಿಯಿಲ್ಲ. ಒಂದು ಉಧಾಹರಣೆನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆಕೆಸರು ಜ ಎಂದರೆ ಹುಟ್ಟಿದ್ದು ಎಂದುಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವುಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿಕೇವಲ ಕಮಲ ಎಂದು ಕರೆಯಲಾಗಿದೆ. ಇದುಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆಯಾವುದು ತಿನ್ನುತ್ತದೋ ಅದು , ಎಂದಾಗಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನುತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನುತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂಅಶ್ವವೇ. ಅಂದರೆ ಯಾಸ್ಕರಾಚಾರ್ಯರುಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದುಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮಪಂಚೇಂದ್ರಿಯಗಳು. ಮೇಧ ಎಂದಾಗ ಒಂದುಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸುಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲುಏನು ಮಾಡಬೇಕೆಂಬುದು ಅದರ ಸಾರ.
---------------------------------------------------------------------------------
ಯಜ್ಞ
ಯಜ್ಞ:[ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸದ ಆಯ್ದ ಭಾಗ] 
ಕೇವಲ ಸಮಿತ್ತನ್ನು ಹೋಮಕುಂಡಕ್ಕೆ ಹಾಕಿ ಸ್ವಾಹಾ, ಇದಂ ನಮಮ, ಎನ್ನುವುದಕ್ಕೇ ಯಜ್ಞದ ಅರ್ಥ ಮುಗಿದುಬಿಡುವುದಿಲ್ಲ. ಇದಕ್ಕೆ ಇನ್ನೂ ವಿಸ್ತಾರವಾದ ಅರ್ಥವಿದೆ.ಯಜ್ಞವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದು ಯಾವಧಾತುವಿನಂದ ಬಂತು ಅಲ್ಲಿಂದಲೇ ತಿಳಿಯಬೇಕು.ಆಗ ನಮಗೆ ಸರಿಯದ ಅರ್ಥ ಸಿಗುತ್ತದೆ.ನಾವು ವೇದಾಂಗಕ್ಕೆ ಹೋಗಿ ಆರ್ಶೇಯ ಕ್ರಮದಲ್ಲಿ ಅರ್ಥ ನೋಡುವುದು ಸರಿಯಾದ ಕ್ರಮ. ಯಜ್ಞ ಎನ್ನುವುದಕ್ಕೆ ಅರ್ಥ ಹುಡುಕಿದಾಗ -ಯಜ್ ದೇವಪೂಜಾ ಸಂಗತಿಕರಣ ದಾನೇಶು, ಇದು ಮೂಲದಲ್ಲಿರುವ ಧಾತು. ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಪದಗಳು ಇದರಿಂದ ಮೂಡುತ್ತವೆ. ಶತಪತಬ್ರಾಹ್ಮಣದಲ್ಲಿ ಹೇಳುತ್ತದೆ "ಯಜ್ಞೋವೈಶ್ರೇಷ್ಠತಮಂ ಕರ್ಮ" ಶ್ರೇಷ್ಠತಮ ಕರ್ಮ ಎಂದಾಗ [ಶ್ರೇಷ್ಠ-ಶ್ರೇಶ್ಠತರ-ಶ್ರೇಷ್ಠತಮ]ಅಂದರೆ ಅತ್ಯಂತಶ್ರೇಷ್ಠವಾದ ಕರ್ಮಗಳಿಗೆ ಯಜ್ಞ ಎಂದು ಅರ್ಥೈಸಲಾಗಿದೆ.ನಾವು ಮಾಡುವ ಆಲೋಚನೆಗಳು, ನಾವು ಆಡುವ ಮಾತುಗಳು, ನಾವು ಮಾಡುವ ಕೆಲಸ ಎಲ್ಲದರಿಂದಲೂ ನಾವು ಯಜ್ಞವನ್ನು ಮಾಡಲು ಸಾಧ್ಯವಿದೆ. ಕೇವಲ ಹೋಮಕುಂಡದ ಅಗ್ನಿಯಿಂದ ಮಾಡುವ ಯಜ್ಞವನ್ನಷ್ಟೇ ನಾವು ಯಜ್ಞ ಎಂದು ಭಾವಿಸಬೇಕಿಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಶ್ರೇಷ್ಠತಮವಾಗಿ ಮಾಡಿದರೆ ಅದು ಯಜ್ಞ ಎನಿಸಿಕೊಳ್ಳುತ್ತದೆ. ನಾವು ಪುರೋಹಿತರಿಂದ ಯಜ್ಞಕುಂಡದ ಎದುರು ಮಾಡುವ ಹೋಮವನ್ನು ಮಾತ್ರವೇ ಯಜ್ಞ ವೆಂದುಭಾವಿಸುತ್ತೇವೆ ,ಆದರೆ ಇದೂ ಕೂಡ ಒಂದು ಯಜ್ಞವೇ ಹೊರತೂ ಯಜ್ಞ ವೆಂದರೆ ಇಷ್ಟೇ ಅಲ್ಲ. ನಾವು ಶ್ರೇಷ್ಠತಮವಾಗಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗಿದೆ.ಈ ಒಂದು ವಿಶಾಲವಾದ ಅರ್ಥವು ದೊರೆತಾಗ ನಮ್ಮ ಇಡೀ ಜೀವನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಇಡೀ ದಿನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಮಾಡುವ ಆಲೋಚನೆಗಳು ಇದಕ್ಕಿಂತ ಇನ್ನೂ ಶ್ರೇಷ್ಠತಮವಾಗಿ ಮಾಡಬಹುದೇ ಎಂದು ಯೋಚಿಸಿ ಮಾಡಿದಾಗ ಅದು ಯಜ್ಞವಾಗುತ್ತದೆ.ನಾವು ಆಡುವ ಮಾತು ಇನ್ನೂ ಶ್ರೇಷ್ಠತಮವಾಗಿ ಆದಬಹುದೇ ಎಂದು ಆಲೋಚಿಸಿ ಆಡಿದಾಗ ಅದೂ ಯಜ್ಞವೇ ಆಗುತ್ತದೆ.ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದೆ. ನಾವು ಅಡಿಗೆ ಮಾಡುವ ಕೆಲಸವೇ ಆಗಲೀ, ಕಸ ಗುಡಿಸುವ ಕೆಲಸವೇ ಆಗಲೀ, ಸೌದೆ ಒಡೆಯುವ ಕೆಲಸವೇ ಆಗಲೀ, ಇದಕ್ಕಿಂತ ಶ್ರೇಷ್ಠತಮವಾಗಿ ಮಾಡಿದೆ ನೆಂದರೆ ಅದು ಯಜ್ಞವೆನಿಸುತ್ತದೆ. ಅಂದರೆ ಇದಕ್ಕಿಂತ ಇನ್ನು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಅದು ಯಜ್ಞವೆನಿಸುತ್ತದೆ.ಶಾಲೆಯಲ್ಲಿ ಪಾಠಮಾಡುವಾಗ ಚೆನ್ನಾಗಿ ಪಾಠಮಾಡಿದೆನೆಂದರೆ ಅದು ಶ್ರೇಷ್ಠ. ಸಂಬಳ ಪಡೆಯುತ್ತೇನಾದ್ದರಿಂದ ಮಕ್ಕಳಿಗೆ ದ್ರೋಹವಾಗದಂತೆ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತರ. ಸಂಬಳ ಬಾರದಿದ್ದರೂ ಚಿಂತೆಯಿಲ್ಲ ಮಕ್ಕಳ ಅಭ್ಯುದಯಕ್ಕಾಗಿನಾನು ಅತ್ಯಂತಶ್ರದ್ಧೆಯಿಂದ ಪಾಠಮಾಡುತ್ತೇನೆಂದರೆ ಅದುಶ್ರೇಷ್ಠತಮ. ಇದು ಎಲ್ಲಾ ಕೆಲಸಕ್ಕೂ ಅನ್ವಯ.ಶ್ರೇಷ್ಠತಮ ಕೆಲಸವು ಯಜ್ಞ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ಮಾತಿನಲ್ಲೂ ಶ್ರೇಷ್ಠ ,ಶ್ರೇಷ್ಠತರ, ಶ್ರೇಷ್ಠತಮ ಎಂದು ಪರಿಗಣಿಸಲು ಸಾಧ್ಯವಿದೆ. ಮಾತಿನಲ್ಲಿ,ಆಲೋಚನೆಯಲ್ಲಿ, ಕೆಲಸದಲ್ಲಿ ಶ್ರೇಷ್ಠತಮವಾದಾಗ ಅವುಗಳೆಲ್ಲವೂ ಯಜ್ಞ ಎನಿಸಿಕೊಳ್ಳುತ್ತವೆ.ನಮ್ಮ ಇಡೀ ಜೀವನವು ಯಜ್ಞಮಯವಾದಾಗ ನಮಗೆ ಸಿಗುವ ಲಾಭವೂ ಅಷ್ಟೇ ವಿಶೇಷವಾಗಿರುತ್ತದೆ.ನಮಗೆ ಉತ್ತಮ ಆರೋಗ್ಯ , ಸುಖ, ಸಂತೋಷ, ನೆಮ್ಮದಿ ಎಲ್ಲಾ ಬೇಕಾದರೆ ನಮ್ಮ ಜೀವನ ಯಜ್ಞಮಯವಾಗಿರಬೇಕು.ಆಗ ಎಲ್ಲವೂ ತಾನೇ ತಾನಾಗಿ ಲಭ್ಯವಾಗುತದೆ.ವೇದವು ನಮಗೆ ಹೇಳುವ ಮಾರ್ಗ ಇದೇ ಆಗಿದೆ- "ನಾನ್ಯ ಪಂಥಾ ಅಯನಾಯ ವಿದ್ಯತೇ" ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಯಾರುಈ ಮಾರ್ಗವನ್ನು ಅರ್ಥಮಾಡಿಕೊಂಡು ಜೀವನ ಮಾಡುತ್ತಾರೋ ಅವರು ಇಲ್ಲೇ ಅಮೃತತ್ವವನ್ನು ಹೊಂದುತ್ತಾರೆ ಎಂದು ಹೇಳಿದೆ. ಅಮೃತತ್ವ ಎಂದರೇನು? ಮೃತ ಎಂದರೆ ಸಾವು , ಅಮೃತ ಎಂದರೆ ಸಾವಿಲ್ಲದಿರುವುದು.[ಇಲ್ಲಿ ಸುಧಾಕರ ಶರ್ಮರು ಮೃತ್ಯುವೆಂಬ ಪದವನ್ನು ಬಹುವಾಗಿ ವಿಶ್ಲೇಷಿಸಿದ್ದಾರೆ , ಅದನ್ನು ಇಲ್ಲಿ ಬಿಟ್ಟಿದ್ದೇನೆ] ಅಂದರೆ ಯಾರಿಗೂ ಸಾವು ತಪ್ಪಿದ್ದಲ್ಲವಾದರೂ ನಿಜವಾಗಿ ಮನುಷ್ಯನಿಗೆ ನಿಜವಾಗಿ ತೊಂದರೆ ಕೊಡುತ್ತಿರುವುದು ಸಾವಲ್ಲ, ಸಾವಿನಭಯ.ಯಾವಾಗ ಸಾವಿನಭಯ ಹೋಗುತ್ತದೆ, ಇನ್ಯಾವುದಕ್ಕೂ ಭಯ ಪಡುವ ಕಾರಣವೇ ಇಲ್ಲ.ಎಲ್ಲಾಭಯಗಳಿಗೂ ಮೂಲವೇ ಪ್ರಾಣಭಯ.ಆದ್ದರಿಂದ ಯಜ್ಞದ ಜ್ಞಾನದಿಂದ ಪ್ರಾಣಭಯದಿಂದ ದೂರವಾಗುತ್ತಾರೆ.ಯಾವಾಗ ಸಾವಿನಭಯವೇ ಇಲ್ಲ ಆಗ ಅಸತ್ಯ, ಅನ್ತ್ಯಾಯ, ಅಧರ್ಮಗಳಿಗೆ ಅಂಜದೆ ಸತ್ಯಮಾರ್ಗದಲ್ಲಿ ಅವರ ದಾರಿ ಸಾಗುತ್ತದೆ. 
-------------------------------------------------------------------------- 
ನನ್ನ ಮಾತು: 
ಯಜ್ಞದ ಈ ಪರಿಕಲ್ಪನೆ ಮೂಡಿದಾಗ ನಮ್ಮ ಸಮಾಜದ ಸ್ಥಿತಿ ಎಷ್ಟು ಭವ್ಯ ವಾಗಬಹುದು! 
ಸರ್ಕಾರಿ ಕಛೇರಿಯಲ್ಲಿನ ಒಬ್ಬ ನೌಕರ ತನ್ನ ಕರ್ತವ್ಯವನ್ನು ಶ್ರೇಷ್ಠತಮವಾಗಿ ನಿರ್ವಹಿಸಿದರೆ, ಬದುಕಿನ ಯಾವುದೇ ರಂಗದಲ್ಲಿರಲಿ ಆಯಾ ವ್ಯಕ್ತಿ ತನ್ನ ಕರ್ತವ್ಯವನ್ನುಶ್ರೇಷ್ಠತಮವಾಗಿ ನಿರ್ವಹಿಸಿದರೆ ನಮ್ಮ ದೇಶ ಸಮೃದ್ಧವಾಗಲು ಮತ್ತೇನು ಬೇಕು? 
ಒಂದು ಕುಟುಂಬದ ಎಲ್ಲಾ ಸದಸ್ಯರೂ ತಾವು ಮಾತನಾಡುವ ಮುಂಚೆ, ಆಲೋಚಿಸುವ ಮುಂಚೆ, ಕೆಲಸಮಾಡುವ ಮುಂಚೆ, ವೇದದ ಪರಿಕಲ್ಪನೆಯಲ್ಲಿ ಶ್ರೇಷ್ಠತಮವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿದರೆ ಅದು ಸುಖೀ ಕುಟುಂಬ ಆಗದಿರದೇ?

ಅಶ್ವಮೇಧ ಯಾಗ
ಅಶ್ವಮೇಧ ಯಾಗ: ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು" ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು. 
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.
ಗೋಮೇಧ: ಗೋಮೇಧ ಎಂದಾಕ್ಷಣ ಗೋವಿನ ಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಗೋ ಎಂದರೆ ಹಸು ಎಂದಷ್ಟೇ ಅಲ್ಲ. ಯಾಸ್ಕರ ಪ್ರಕಾರ ಗೋ ಎಂದರೆ " ಇಂದ್ರಿಯ " ಎಂದೂ ಅರ್ಥವಿದೆ." ವಾಕ್" ವಾಣಿ ಎಂದೂ ಅರ್ಥವಿದೆ.ಇಲ್ಲಿ ಗೋಮೇಧ ಎಂದರೆ "ವಾಕ್ ಸಂಯಮ" ಎಂದು ಅರ್ಥ. ಮಾತನ್ನು ನಿಯಂತ್ರಣದಲ್ಲಿಡು ಎಂದು ಅರ್ಥ. ಅಂದರೆ ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಎಂದು ಹೆಸರು.ಗೋಮೇಧಾ ಎಂದರೆ ಹಸುವನ್ನು ಬಲಿಕೊಡುವ ಯಜ್ಞವಲ್ಲ.ವೇದಗಳ ಮೂಲ ಸಿದ್ಧಾಂತವೇ ಅಹಿಂಸೆಯಾದ್ದರಿಂದ ಈ ಅರ್ಥಗಳು ನಾವು ಹುಡುಕಿದರೆ ಸಿಗುತ್ತವೆ.ಮಾತನ್ನು ಹೇಗೆ ಆಡಬೇಕೆಂದೂ ವೇದದಲ್ಲಿಯೇ ಹೇಳಿದೆ. "ಹಿಟ್ಟನ್ನು ಜರಡಿ ಆಡಿದಂತೆ ಜರಡಿಯಾಡಿ ಮಾತನಾಡು" ಎಂದು ಹೇಳಿದೆ. ಹಿಟ್ಟನ್ನು ಜರಡಿಯಾಡಿ ಕಸ ಕಡ್ಡಿ ತೆಗೆದು ನಂತರವಷ್ಟೇ ರೊಟ್ಟಿ ಮಾಡುವುದಿಲ್ಲವೇ ಹಾಗೆ ಮಾತನ್ನು ಆಡುವ ಮುಂಚೆ ಜರಡಿಯಾಡಿ ಮಾತನಾಡು. ಅಂದರೆ ಮಾತನಾಡುವ ಮುನ್ನ ನಾವಾಡುವ ಮಾತು ಸತ್ಯವೇ, ಎಂದು ತಿಳಿದಿರಬೇಕು.ಇದು ಮೊದಲನೆಯ ಹಂತ. ಎರಡನೆಯದು "ಪ್ರಿಯವೇ" . ನಾನಾಡುವ ಮಾತು ಬೇರೆಯವರಲ್ಲಿ ದ್ವೇಶ ಉಂಟುಮಾಡುತ್ತದೋ, ಉದ್ವೇಗ ಉಂಟುಮಾಡುತ್ತದೋ, ಅಥವಾ ಪ್ರಿಯವಾಗುತ್ತದೋ , ಹಿತವಾಗುತ್ತದೋ ಎಂಬುದನ್ನು ಆಲೋಚಿಸಿ ನಂತರ ನಮ್ಮ ಬಾಯಿಂದ ಮಾತು ಹೊರಬರಬೇಕು. ಈಬಗ್ಗೆ ನಾವು ಯೋಚಿಸಿದ್ದೇವೆಯೇ? 
ಈ ಒಂದು ಮಾತಿನ ನಿಯಂತ್ರಣವಿದ್ದರೆ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಅಶಾಂತಿ ಮೂಡುವುದೇ ಇಲ್ಲ. ಮಾತನಾಡುವ ಮುಂಚೆ ಅದು ಸತ್ಯವೇ,ಪ್ರಿಯವೇ, ಹಿತವೇ ಎಂದು ಆಲೋಚಿಸಿ ಮಾತನಾಡಿದರೆ ಸಮಾಜದಲ್ಲಿ ಸಾಮರಸ್ಯಕ್ಕೆ ಬಂಗ ಬರುವುದಿಲ್ಲ.ಸತ್ಯವೂ, ಪ್ರಿಯವೂ, ಹಿತವೂಆದ ಮಾತನ್ನಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ? ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿವಾಚಿ"ಮಂಗಳಕರವಾದ ಸಂಪತ್ತು ,ಶ್ರೇಯಸ್ಕರವಾದ ಹಿತ ಅಂತಹಾ ಮಾತಿನಲ್ಲಿ ನೆಲೆಗೊಂಡಿದೆ. ಬ್ಯಾಂಕಿನಲ್ಲಿರುವ ಡಿಪಾಸಿಟ್ ನಮ್ಮನ್ನು ಕಾಪಾಡುವುದಿಲ್ಲ. ನಿಜವಾದ ಸಂಪತ್ತು ನಮ್ಮ ಮಾತಿನಲ್ಲಿದೆ. ಮಾತು ಸರಿಯಾಗಿದ್ದಲ್ಲಿ ಸಂಪತ್ತನ್ನು ಗಳಿಸುವುದು ಕಷ್ಟವಿಲ್ಲ.ಆದರೆ ಮಾತು ಸರಿಯಿಲ್ಲದಿದ್ದಾಗ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುತ್ತದೆ.ಹೀಗೆ ಜರಡಿಯಿಂದಆಡಿಸಿ ಮಾತನಾಡಬೇಕು, ಇದನ್ನು ವಾಕ್ ಸಂಯಮ ಎನ್ನುವರು. ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಯಜ್ಞ ಎಂದುಕರೆದರು.ಆದರೆ ಅದನ್ನು ಹಸುವನ್ನು ಬಲಿಕೊಡುವ ಒಂದು ಯಜ್ಞಎಂದು ತಪ್ಪಾಗಿ ಅರ್ಥೈಸಿ ಹಸುವನ್ನು ಬಲಿಕೊಟ್ಟು ಅದರ ವಪೆಯನ್ನು ಯಜ್ಞಕ್ಕೆ ಹಾಕಿ, ಇನ್ನು ಯಜ್ಞಕ್ಕೆ ಗೋಬಲಿ ಕೊಟ್ಟಮೇಲೆ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನು, ಎಂದೆಣಿಸಿ ಮಾಂಸವನ್ನೂ ಭಕ್ಷಿಸಿದರು.ಇದಕ್ಕಿಂತ ಮೂರ್ಖತನ ಬೇರೊಂದಿದೆಯೇ? ಇಂತಾ ಅನರ್ಥ ಎಲ್ಲಿಯವರೆಗೆ ಬೆಳೆದಿದೆ ಎಂದರೆ "ಗೋಘ್ನ" ಎಂಬ ಮಾತಿದೆ. ಇದಕ್ಕೆ ಏನು ಅರ್ಥೈಸಿದ್ದಾರೆಂದರೆ ಮನೆಗೆ ಬಂದ ಅಥಿತಿಗಳಿಗೆ ಊಟದಲ್ಲಿ ಗೋಮಾಂಸ ಬಡಿಸು. ಗೋಘ್ನ ಎನ್ನುವುದಕ್ಕೆ ಇನ್ನೊಂದು ಅರ್ಥ ಗೋವಿನ ಉತ್ಪತ್ತಿ , ಎಂದರೆ ಹಾಲು ಮೊಸರು, ತುಪ್ಪ ಬಡಿಸಿ ಸತ್ಜರಿಸು ಎಂದು ಅರ್ಥೈಸುವ ಬದಲು ಗೋಮಾಂಸ ಬಡಿಸು ಎಂದು ಅರ್ಥೈಸಿದರು! 
ಅಥಿತಿಯನ್ನು ಗೋವಿನಿಂದ ಉಪಚರಿಸಬೇಕೆಂದರೆ ಗೋ ಎಂದರೆ ವಾಕ್ ಎಂತಲೂ ಅರ್ಥವಿರುವುದರಿಂದ ಅಥಿತಿಯನ್ನು ಒಳ್ಳೆಯ ಹಿತವಾದ ಮಾತುಗಳಿಂದ ಉಪಚರಿಸು ಎಂದರ್ಥವಾಗುತ್ತದೆ. ದೊಡ್ದ ದೊಡ್ಡ ವಿಸ್ವಾಂಸರುಗಳೂ ಸಹ ಇದನ್ನು ತಪ್ಪು ತಪ್ಪಾಗಿ ಅರ್ಥೈಸಿದ್ದರ ಪರಿಣಾಮ ಬಹಳ ಅನರ್ಥಗಳು ಸಂಭವಿಸಿವೆ, ವೇದದ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವಾಗಿದೆ. ಅಂದರೆ ಒಂದೊಂದುಶಬ್ಧವನ್ನೂ ಅರ್ಥಮಾಡಿಕೊಳ್ಳುವಾಗ ಮೂಲ ಸಿದ್ಧಾಂತವನ್ನು ಮರೆತಿದ್ದರಿಂದ ಇಂತಹಾ ಅನರ್ಥಗಳಾಗಿವೆ. ಅಂದರೆ ಮೂಲ ಸಿದ್ಧಾಂತವೇನು? ಯಜ್ಞವೆಂದರೆ ಅಹಿಂಸೆ. ಅದನ್ನೇ ಮರೆತು ಅರ್ಥಹುಡುಕಿದ್ದರಿಂದ ಬಹಳ ಅನರ್ಥಗಳು ಘಟಿಸಿರುವುದು ಸುಳ್ಳಲ್ಲ.