Pages

Monday, September 1, 2014

"ವೇದಜ್ಞಾನವೆಂದರೆ ಕೇವಲ ಮಂತ್ರಪಾಠವಷ್ಟೇ ಅಲ್ಲ"

             "ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ.  ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು. ನೇರವಾಗಿ MBBS ಬರೆಯಲು ಸಾಧ್ಯವೇ?  ಅದಕ್ಕೆ ಪೂರ್ವಭಾವಿಯಾಗಿ ಪ್ರಾಥಮಿಕ ಹಂತದ  ಶಾಲೆಗಳಲ್ಲಿ   ಓದಿ ನಂತರ CET ಬರೆದು ಅರ್ಹತೆ ಗಳಿಸಿದರೆ ಮಾತ್ರ MBBS ಓದಲು ಸಾಧ್ಯ.ಇದು ವಿವರಣೆ. ಹೌದು, ಇದನ್ನು ಒಪ್ಪ ಬೇಕು. ಆದರೆ ವೇದದ ವಿಚಾರ ಮಾಡುವಾಗ "ಅಧಿಕಾರ" ಪದದ ಹಿಡಿತದಿಂದ ಬಹುಪಾಲು ಜನರಿಗೆ ಯಾವ ಬದುಕಿನ ಜ್ಞಾನ ಸಿಗಬೇಕಾಗಿತ್ತೋ ಅದರಿಂದ  ವಂಚನೆಯಾಗಿರುವುದೂ ಸುಳ್ಳಲ್ಲ. 
                  ವೇದಜ್ಞಾನವೆಂದರೆ ಕೇವಲ "ಮಂತ್ರಪಾಠ" ಎಂದು ಕೊಂಡಾಗ ಹೌದು ಕಷ್ಠವಿದೆ.ಯಾವ ವಿದ್ಯೆಯೂ ಸುಲಭವಾಗಿ ದಕ್ಕುವುದಿಲ್ಲ.ಹಲವಾರು  ಶತಕಗಳಿಂದ ಗುರುಕುಲ ಪದ್ದತಿ ಹೋಗಿ ನಂತರದ ಕಾಲದಲ್ಲಿ  ಮೆಖಾಲೆ ಶಿಕ್ಷಣ ಪದ್ದತಿ ಬಂದಮೇಲೆ ನಾವೆಲ್ಲರೂ ವೇದಜ್ಞಾನದಿಂದ ವಂಚಿತರಾಗಿ ಈ ಸ್ಥಿತಿಯನ್ನು ತಲುಪಿಯಾಗಿದೆ. ಆದರೆ ಹಲವರ ಪ್ರಯತ್ನದಿಂದ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ "ವೇದಗುರುಕುಲಗಳಲ್ಲಿ" ಕಲಿಯುತ್ತಿರುವ ಮಕ್ಕಳಿಗೆ ಸಂಪೂರ್ಣವಾಗಿ ಆರ್ಷಪದ್ದತಿಯಲ್ಲಿ  ವೇದಮಂತ್ರಪಾಠ ಕಲಿಯಲು ಈಗಲೂ ಅವಕಾಶ ಸಿಕ್ಕಿರುವುದು ನಮ್ಮ ಸುದೈವ. ಈ ಪದ್ದತಿ ಮತ್ತೆ ಬೆಳೆದು ವಿಸ್ತಾರವಾಗಲು ಇನ್ನೂ ಅನೇಕ ದಶಕಗಳೇ ಬೇಕು. ಆ ನಂಬಿಕೆ ನನಗಿದೆ. ಇಂದಲ್ಲಾ ನಾಳೆ  ವೇದಜ್ಞಾನವು ಎಲ್ಲರಿಗೂ ಆರ್ಷಪದ್ದತಿಯಲ್ಲಿಯೇ ಸಿಗಲು ಸಾಧ್ಯ. ಆದರೆ ಅಂತಹ ಉತ್ಕೃಷ್ಟ  ಜ್ಞಾನವು ಯಾವುದೋ ಕಾರಣದಿಂದ ಕೆಲವರಿಗೇ ಮಾತ್ರ ಸೀಮಿತವಾಗಿ ಪೂಜೆ ಪುನಸ್ಕಾರಗಳು, ಯಜ್ಞಯಾಗಾದಿಗಳಿಗೆ ಸೀಮಿತವಾಗಿದ್ದು ಸುಳ್ಳಲ್ಲ. ಅಲ್ಲವೇ?

          ಇಂತಹ ಸ್ಥಿತಿಯಲ್ಲಿ ಪಂಡಿತ್ ಶ್ರೀ ಸುಧಾಕರಚತುರ್ವೇದಿಯವರು ,ವೇದಾಧ್ಯಾಯೀ ಶ್ರೀಸುಧಾಕರಶರ್ಮ ಮುಂತಾದವರ ಅವಿರತ ಶ್ರಮದಿಂದಾಗಿ ವೇದಜ್ಞಾನವನ್ನು ಸರಳವಾಗಿ ಕನ್ನಡಿಗರಿಗೆ ತಲುಪಿಸುವ ಸಾಹಿತ್ಯವು ಇಂದು ಲಭ್ಯವಾಗಿದೆ. ಅಂತಹ ಸಾಹಿತ್ಯದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಯವರ  "ವೇದೋಕ್ತ ಜೀವನ ಪಥ" ಕೂಡ ಒಂದು. "ವೇದತರಂಗ " ಮಾಸಪತ್ರಿಕೆಯಂತೂ  ವೇದದ ಅರಿವನ್ನು ಸಾಮಾನ್ಯರಲ್ಲಿ ಮೂಡಿಸಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ. ವೇದಮಂತ್ರಪಾಠವನ್ನು ಕಲಿಯಲು  ನಮ್ಮಿಂದ ಸಾಧ್ಯವಿಲ್ಲ. ನಮಗೆ ಸ್ವರ ಹೊರಡುವುದೇ ಇಲ್ಲಾ    ಎಂದು ಭಾವಿಸುವವರೂ ಕೂಡ ವೇದಜ್ಞಾನದಿಂದ ವಂಚಿತರಾಗಬೇಕಿಲ್ಲ. "ವೇದಜ್ಞಾನವೆಂದರೆ  ಕೇವಲ    ಮಂತ್ರಪಾಠವಷ್ಟೇ ಅಲ್ಲ"  ಎಂಬುದನ್ನು ಅರಿತುಕೊಂಡರೆ ವೇದದ ಲಾಭ ಪಡೆಯಲು ಸುಲಭವಾಗುವುದು. ಶ್ರೀ ಸುಧಾಕರಶರ್ಮರು ಇನ್ನೂ ಮುಂದುವರೆದು ಒಂದು ಮಾತು ಹೇಳುತ್ತಾರೆ " ವೇದ ಎಂದರೆ ಅದು ಪುಸ್ತಕದಲ್ಲಿರುವ ಮಂತ್ರವಷ್ಟೇ ಎಂದು ಯಾಕೆ ಭಾವಿಸುತ್ತೀರಿ? "

         ಇಲ್ಲಿ ನಾನು ಒಂದು ಮಾತನ್ನು ಒತ್ತಿ ಹೇಳಲು ಇಚ್ಛಿಸುತ್ತೇನೆ.    ಹಾಸನದ " ವೇದಭಾರತಿಯು" ಈಗ್ಗೆ ಎರಡು ವರ್ಷದ ಮುಂಚೆ ಸಾಪ್ತಾಹಿಕ ವೇದಪಾಠವನ್ನು ಆರಂಭಿಸಿದಾಗ 80ಕ್ಕೂ ಹೆಚ್ಚು ಜನ ಆಸಕ್ತರು ಸಮಾಜದ ಎಲ್ಲಾ ವರ್ಗಗಳಿಂದಲೂ ಬರಲು ಆರಂಭಿಸಿದರು. ನಮ್ಮ ಗುರುಗಳು ಆರ್ಷಪದ್ದತಿಯಲ್ಲಿಯೇ ಪಾಠ ಆರಂಭಿಸಿದರು. ಓಂಕಾರದಿಂದ ಆರಂಭವಾಗಿ ಸ್ವರದ ಪರಿಚಯಿಸಲು ಒಂದೆರಡು ತಿಂಗಳಾದರೂ ಹಲವರಿಗೆ ಕಲಿಯುವುದು ಕಷ್ಟವಾಯ್ತು. ಸಂಖ್ಯೆ ಕಡಿಮೆಯಾಗುತ್ತಾ ಬಂತು. ಬದ್ಧತೆ ಇದ್ದವರು ಮಾತ್ರ ಸಹನೆ ಕಳೆದುಕೊಳ್ಳದೆ  ಉಳಿದರು. ದೂರದ   ಊರಿನಿಂದ ಬರಬೇಕಾಗಿದ್ದ ನಮ್ಮ ಗುರುಗಳು    ಆನಂತರದ ದಿನಗಳಲ್ಲಿ ಬರುವುದೂ ಸ್ವಲ್ಪ ಕಡಿಮೆಯಾಯ್ತು. ಈಗ ಎರಡು ವರ್ಷ ಕಳೆದಿದ್ದರೂ    ಮಂತ್ರಭಾಗ ಮುಂದುವರೆಸುವುದು ಕಷ್ಟವೆನಿಸಿದೆ. ಅಷ್ಟೇ ಅಲ್ಲ ಆರಂಭಿಕ ಮಂತ್ರಗಳ ಸ್ವರವನ್ನೇ ತಿದ್ದುವ ಕೆಲಸ ಮುಂದುವರೆದಿದೆ.  ಕಾರಣ ಪಾಠಕ್ಕೆ ಬರುವವರಲ್ಲಿ ಹಲವರು 50 ದಾಟಿದವರು. ಆದರೂ ಮಂತ್ರಪಾಠ ಮುಂದುವರೆದಿದೆ.

             ಆದರೆ  ಸಾಮಾನ್ಯರಿಗೆ ವೇದದ ಅರಿವು ಮೂಡಿಸುವ ನಿರಂತರ ಪ್ರಯತ್ನವನ್ನು ವೇದ ಭಾರತಿಯು ಮಾಡುತ್ತಲೇ ಇದೆ. ಹಾಸನದ ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು  ರಾಜ್ಯಮಟ್ಟದ   "ವಿಕ್ರಮ " ವಾರಪತ್ರಿಕೆಯಲ್ಲಿ ವೇದದ ಅಂಕಣವನ್ನು ಬರೆಯುವ ಮೂಲಕ ತನ್ನ ಶಕ್ತಿಮೀರಿ ವೇದಭಾರತಿಯು ಪ್ರಯತ್ನಿಸುತ್ತಿದೆ. ಅಲ್ಲದೆ ವೇದಸುಧೆ ಬ್ಲಾಗ್ ಮತ್ತು ವೆಬ್ ಸೈಟ್ ಮೂಲಕ ನಾಲ್ಕೈದು ವರ್ಷಗಳಿಂದ  ಪ್ರಮುಖವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಆಡಿಯೋ ಕೇಳಿಸುವಲ್ಲಿ ಸಫಲವಾಗಿದೆ.

       ವೇದಭಾರತಿಯು ಹಲವಾರು ಉಪನ್ಯಾಸಗಳನ್ನು ಆಯೋಜಿಸುವುದರ ಮೂಲಕ ಸಾಮಾನ್ಯಜನರಿಗೂ ವೇದದ ಅರಿವು ಮೂಡಿಸುವ, ಸಮಾಜದಲ್ಲಿ ಸಾಮರಸ್ಯ ಉಳಿಸುವ  ಕೆಲಸವನ್ನು ನಿರಂತರ ವಾಗಿ ಮಾಡುತ್ತಾ ಬಂದಿದೆ. ಮುಂದೆಯೂ ಮಾಡುತ್ತದೆ. ನೆಮ್ಮದಿಯ  ಆರೋಗ್ಯಕರ ಬದುಕಿಗಾಗಿ ಅರಿವು ಮೂಡಿಸುವ ವೇದಮಂತ್ರಗಳ ಆಧಾರಿತ ಲೇಖನಗಳಿಗಾಗಿ  ವೇದತರಂಗದ ಜೊತೆಗೆ  ಈ ಕೆಲವು ಪತ್ರಿಕೆ ಹಾಗೂ ಬ್ಲಾಗ್ ಗಳನ್ನೂ ನೋಡಬಹುದು.

1. ವಿಕ್ರಮ -ವಾರಪತ್ರಿಕೆಯಲ್ಲಿ "ಜೀವನವೇದ" ಅಂಕಣ
2. ಹಾಸನ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ "ವೇದಪಥ"
3. ಹಾಸನ ಸ್ಥಳೀಯ ಪತ್ರಿಕೆ ಜನಹಿತದಲ್ಲಿ "ಸರ್ವಹಿತ ವೇದ"
4 Website:    http://www.vedasudhe.com/
5.Blog: http://blog.vedasudhe.com/
6.http://vedajeevana.blogspot.in/
7.http://vedabharatihassan.blogspot.in/