Pages

Thursday, May 26, 2011

ನಾ ಕಂಡ ಅಪರೂಪದ ಖಾಸಗೀ ಆಸ್ಪತ್ರೆ

ನನ್ನ ಪತ್ನಿಗೆ ಒಂದೆರಡು ತಿಂಗಳುಗಳಿಂದ ಎಡಗೈ ಎತ್ತಲಾಗದಷ್ಟು ನೋವು.ಹಾಸನದ ಸ್ಥಳೀಯ ವೈದ್ಯರ ಸಲಹೆ,ಉಪಚಾರ, ಎಲ್ಲವೂ ನಡೆದಿದ್ದರೂ ಪೂರ್ಣ ಸಮಾಧಾನವಾಗಿರಲಿಲ್ಲ. ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರ ಸಲಹೆ ಮೇರೆಗೆ ನಿನ್ನೆ ಶಿವಮೊಗ್ಗ ಪಯಣಿಸಿದೆ. ಅಲ್ಲಿ ನಾಗರಾಜರ ಸೋದರರೂ ವೇದಸುಧೆಯ ಬಳಗದ ಸಕ್ರಿಯ ಸದಸ್ಯರೂ ಆದ ಶ್ರೀ ಕವಿ ಸುರೇಶ್ ರು ನನ್ನ ಜೊತೆಗಿದ್ದು ಒಬ್ಬ ವೈದ್ಯರಲ್ಲಿ ಕರೆದುಕೊಂಡು ಹೋದರು. ಸಾಮಾನ್ಯವಾದ ಒಂದು ಚಿಕ್ಕ ಖಾಸಗೀ ಆಯುರ್ವೇದ ಆಸ್ಪತ್ರೆ.ಒಳಗೆ ಪ್ರವೇಶಿಸುತ್ತಿದ್ದಂತೆ  ಕೆಳಗಿನ ಫಲಕವು ನಮ್ಮನ್ನು ಸ್ವಾಗತಿಸುತ್ತದೆ.


ಅರ್ಥ:
ಪ್ರತಿನಿತ್ಯವೂ ಹಿತವಾದ ಆಹಾರ ಸೇವನೆ,ಹಿತವಾದವಿಹಾರ,ಪ್ರತಿಯೊಂದು ವಿಚಾರವನ್ನೂ ವಿಮರ್ಷೆಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವವನೂ,ಇಂದ್ರಿಯ ವಿಷಯಗಳಲ್ಲಿ ಅನಾಸಕ್ತಿಯುಳ್ಳವನೂ,ತ್ಯಾಗವಂತನೂ,ಸಕಲ ಜೀವಿಗಳಲ್ಲಿ ಸಮಭಾವವನ್ನು ಹೊಂದಿರುವವನೂ,ಯಾವಾಗಲೂ ಸತ್ಯವನ್ನು ನುಡಿಯುವವನೂ,ಕ್ಷಮಾಗುಣ ಉಳ್ಳವವನೂ,ಶಾಸ್ತ್ರ ತಿಳಿಸಿರುವಂತೆ ಜೀವನ ನಡೆಸುವವನೂ,ಸದಾಕಾಲವೂ ಆರೋಗ್ಯವಂತನಾಗಿರುತ್ತಾನೆ.
                  ಆಸ್ಪತ್ರೆಯನ್ನು ಪ್ರವೇಶಿಸುತ್ತಿದ್ದಂತೆ ಆತ್ಮೀಯವಾಗಿ ನಮ್ಮ ಕುಳ್ಳಿರಿಸಿ ನಮ್ಮ ಕೈಗೆ ಒಂದು ಪತ್ರವನ್ನು ಕೊಟ್ಟು ಅದರಲ್ಲಿ ನಮ್ಮ ದೈನಂದಿನ ಜೀವನ ಶೈಲಿಯ ಎಲ್ಲಾ ವಿವರಗಳನ್ನೂ ಪಡೆದರು. ಅಲ್ಲಿದ್ದ ಒಬ್ಬಿಬ್ಬ ವ್ಯಕ್ತಿಗಳನ್ನು ವೈದ್ಯರು ನೋಡಿದಮೇಲೆ ನಮ್ಮ ಸರದಿ ಬಂತು.ಡಾ|| ಚಿತ್ರಲೇಖ ನನ್ನ ಪತ್ನಿಯೊಡನೆ ಆತ್ಮೀಯವಾಗಿ ಮಾತುಕತೆ ಆರಂಭಿಸಿ ಅವಳಿಂದ ಅವಳ ಸಮಸ್ಯೆಗಳ  ಎಲ್ಲಾ ವಿವರವನ್ನೂ ಸಮಾಧಾನಚಿತ್ತದಿಂದ ಕೇಳಿ ಪಡೆಯುವಾಗ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿತ್ತು.[ಸಾಮಾನ್ಯವಾಗಿ ೫-೧೦ ನಿಮಿಷಗಳಲ್ಲಿ ಸಮಾಲೋಚನೆ ಮುಗಿಯುತ್ತದೆ] ಇಂಟರ್ ಕಾಮ್ ನಿಂದ ಅವರಿಗೊಂದು ಕರೆ ಬಂತು ಒಬ್ಬ ರೋಗಿಯ ಸ್ಥಿತಿ ಗಂಭೀರವಾಗಿದ್ದಿರಬಹುದು.ರೋಗಿಯನ್ನುಪಚರಿಸುತ್ತಿದ್ದ ಸಹಾಯಕಿಗೆ ಒಂದಿಷ್ಟು ಸಲಹೆ ನೀಡಿ ಹತ್ತು ನಿಮಿಷದಲ್ಲಿ ಬರುವುದಾಗಿ ತಿಳಿಸಿದರು. ನಂತರ ಒಂದೈದು ನಿಮಿಷಗಳಲ್ಲಿ ನಾನೇ ವೈದ್ಯರಿಗೆ ಹೇಳಿದೆ" ಪರವಾಗಿಲ್ಲ ಡಾಕ್ಟರ್ ಆ ರೋಗಿಯನ್ನು ನೋಡಿಬನ್ನಿ."ನೀವು ಕುಳಿತಿರಿ, ಇನ್ನೈದು ನಿಮಿಷಗಳಲ್ಲಿ  ಬಂದೆ"ಎಂದು ತಿಳಿಸಿ  ವೈದ್ಯರು ಆ ರೋಗಿಯನ್ನು ನೋಡಲು ಹೋದರು. ಆ ಹೊತ್ತಿಗಾಗಲೇ ನನ್ನಾಕೆಯ ಮುಖ ಅರಳಿತ್ತು.ಅವಳಲ್ಲಿ ಆತ್ಮವಿಶ್ವಾಸವನ್ನು ವೈದ್ಯರು ತುಂಬಿದ್ದರು.ನನ್ನಾಕೆ ಹೇಳಿದಳು" ಇವರು ಪ್ರತ್ಯಕ್ಷ ದೇವತೆ ಕಣ್ರೀ" 
 ನನಗೂ ತುಂಬಾ ಸಮಾಧಾನವಾಗಿತ್ತು. ವೈದ್ಯರು ಪುನ: ಬಂದರು
ಅವರು ಹೇಳಿದರು" ನಿಮಗೆ ಏನೂ ಆಗಿಲ್ಲ. ನಿತ್ಯ ನಿಮ್ಮ ಬದುಕಿನ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಈ ಔಷಧವನ್ನು ತೆಗೆದುಕೊಳ್ಳಿ, ನೀವು ಒಂದು ತಿಂಗಳಲ್ಲಿ ಪರ್ಫೆಕ್ಟ್ ಆಗುತ್ತೀರಿ"
ನಾನು ಕೇಳಿದೆ" ಇಷ್ಟೊಂದು ಕೈ ನೋವಿದೆಯಲ್ಲಾ, ಕೈ ಎತ್ತಲು ಆಗುತ್ತಿಲ್ಲವಲ್ಲಾ, ಪಂಚಕರ್ಮ ಚಿಕಿತ್ಸೆ ಏನಾದರೂ ಆರಂಭಿಸುವಿರಾ?
" ಅದೇನೂ ಬೇಡ ,ಒಂದು ತಿಂಗಳು ನಾನು ಸೂಚಿಸಿರುವ ಕ್ರಮದಲ್ಲಿ ನಿಮ್ಮ ನಿತ್ಯ ಜೀವನ ಸಾಗಲಿ, ಈ ಔಷಧಗಳು ಜೊತೆಗಿರಲಿ, ನೀವು ಸುಧಾರಿಸುತ್ತೀರಿ. ಹೋಗಿಬನ್ನಿ, ನಿಮಗೆ ಒಳ್ಳೆಯದಾಗಲೀ"
.........ನನ್ನ ಪತ್ನಿಯನ್ನು    ಒಂದು ವಾರವಾದರೂ ಆಸ್ಪತ್ರೆಯ ಒಳರೋಗಿಯಾಗಿ ಇಟ್ಟುಕೊಳ್ಳುತ್ತಾರೆಂದು ನಾನು ತಯಾರಾಗೇ ಹೋಗಿದ್ದೆ. ಆದರೆ ಹಾಗಾಗಲೇ ಇಲ್ಲ. ನಾನು ನಿರೀಕ್ಷಿಸಿದಂತೆ ಖರ್ಚುಗಳೂ ಇಲ್ಲ.ಕೇವಲ ಔಷಧಿಯ ಮೌಲ್ಯವನ್ನು ಪಡೆದಿದ್ದರಷ್ಟೆ.ಸಮಾಲೋಚನೆಗಾಗಿ ದುಬಾರಿ ಶುಲ್ಕವೂ ಇಲ್ಲ. ರೋಗಿಗಳಿಗೆ ಅನಗತ್ಯ ಚಿಕಿತ್ಸೆಯೂ ಇಲ್ಲ. ಗುಣಮುಖರಾಗಲೂ ಏನು ಬೇಕೋ ಅಷ್ಟು. ಆದರೆ ಅನೇಕ ಖಾಸಗೀ ಆಸ್ಪತ್ರೆಗಳಲ್ಲಷ್ಟೇ ಅಲ್ಲ, ಸರ್ಕಾರೀ ಆಸ್ಪತ್ರೆಗಳಲ್ಲೂ ಸುಲಿಗೆ ಮಾಡುವ ಪ್ರವೃತ್ತಿಯು ಸಾಮಾನ್ಯ ವಾಗಿರುವಾಗ ಇಂತಾ ಒಬ್ಬ ವೈದ್ಯರ ಪರಿಚಯ ಮಾಡಿಸಿದ ಶ್ರೀಕವಿನಾಗರಾಜ್ ಮತ್ತು  ಕವಿ ಸುರೇಶ್ ಸೋದರರಿಗೆ ನಾನು ಋಣಿ.
ವೇದಸುಧೆಯ ವಾರ್ಷಿಕೋತ್ಸವದ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರವನ್ನು ಮಂಡಿಸಿದ ಡಾ|| ವಿವೇಕ್ ಅವರ ವಿಚಾರಗಳನ್ನು ಕೇಳುವಾಗಲೂ ನಮಗೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಇಂತಹ ಅನೇಕ ವೈದ್ಯರುಗಳು ಇರಬಹುದು. ಅಂತವರ ಬಗೆಗೆ ವೇದಸುಧೆಯ ಅಭಿಮಾನಿಗಳು ವೇದಸುಧೆಗೆ ಮಾಹಿತಿಕೊಡಬೇಕೆಂದು ವಿನಂತಿಸುತ್ತೇನೆ.
ಶಿವಮೊಗ್ಗೆಯಲ್ಲಿ ನಾವು ಭೇಟಿಮಾಡಿದ ಆಸ್ಪತ್ರೆಯ ವಿಳಾಸ:


ಆಯುರ್ ಲೈಫ್
[ಶ್ರೀ ಸದ್ಗುರು ಚಿಕಿತ್ಸಾಲಯದ ಘಟಕ]
ಸರ್ ಎಂ.ವಿ. ಕಾಂಪ್ಲೆಕ್ಸ್, ತಿಲಕ್ ನಗರ ಮುಖ್ಯರಸ್ತೆ. ಶಿವಮೊಗ್ಗ-577201
ದೂರವಾಣಿ: 08182-405667,402611
web:  www.srisadguruchikitsalaya.org
E-Mail:  srisadguru@gmail.com