Pages

Monday, March 21, 2011

ಅನುಮಾನದ ಮೇಲ್

ವೇದಸುಧೆಯ ಬಂಧುಗಳೇ,
ಇತ್ತೀಚೆಗೆ ಪರಿಚಿತರ ಮೇಲ್ ವಿಳಾಸದಿಂದ ಬರುವ  ಕೆಲವು ಮೇಲ್ ಗಳೂ ಕೂಡ ಸಂಶಯಕ್ಕೆಎಡೆಮಾಡಿಕೊಡುತ್ತಿದೆ. ವೇದಸುಧೆಯ ಬಳಗದ ಶ್ರೀ ಲಕ್ಷ್ಮೀನಾರಾಯಣ್ ರವರಿಗೆ ಹೀಗೊಂದು ಅನುಮಾನದ ಮೇಲ್ ಬಂದಿದೆ. ಶ್ರೀ ವಿಶ್ವನಾಥ ಶರ್ಮರ ಮೇಲ್ ವಿಳಾಸದಿಂದ ನನಗೂ ಇಂತದೇ ಮೇಲ್ ಬಂದಿದೆ.ಈ ಬಗ್ಗೆ ಚಿಂತನೆ ಮಾಡುವುದು ಸೂಕ್ತವೆಂದು ಕಾಣುತ್ತದೆ. ಹಾಗೊಂದು ವೇಳೆ ನಿಮ್ಮ ಪಾಸ್ ವರ್ಡ್ ನ್ನು ಯಾರಾದರೂ ಕದ್ದಿದ್ದಾರೆಂದು ನಿಮಗೆ ನಿಮಗೆ ಸಂಶಯ ಬಂದರೆ ಪಾಸ್ ವರ್ಡ್ ಕೂಡಲೇ ಬದಲಿಸಿಕೊಳ್ಳುವುದು ಸೂಕ್ತ. ಶ್ರೀ ಲಕ್ಷ್ಮೀ ನಾರಾಯಣರಿಂದ ವೇದಸುಧೆಗೆ ಬಂದಿರುವ ಈ ಮೇಲ್ ಎಲ್ಲರ ಗಮನಕ್ಕಾಗಿ ಈ ಕೆಳಗೆ ಪ್ರಕಟಿಸಲಾಗಿದೆ.

ಪ್ರಿಯ ಶ್ರೀಧರ್,
ನನಗೊಂದು ಮೇಲ್ ಬಂದಿದೆ. ಅದು ಹೀಗಿದೆ.
read message ಮೇಲೆ ಕ್ಲಿಕ್ ಮಾಡಿದರೆ , ಅದು ನನ್ನ ಬಗೆಗಿನ ಎಲ್ಲ details ಕೇಳಿ ನಂತರ ನನ್ನ ಮೇಲ್ ಅಡ್ರೆಸ್  ಮತ್ತು password ಕೇಳುತ್ತಿದೆ.
 ನೋಡುವ ಎಂದು ಹೊಸ ಪಾಸ್ವರ್ಡ್ ಕೊಟ್ಟರೆ , invalid ಎನ್ನುವ ಸೂಚನೆ ಬರಿತ್ತಿದೆ. ನನ್ನ gmail na paasword ಕೊಡಲು ಯೋಚಿಸುವಂತಾಯಿತು. ಹಾಗಾಗಿ ಇದು ಏನು , ನಿಮ್ಮ ಗಮನಕ್ಕೆ , ಬಂದಿರದ  ವಿಷಯವೇ ಹೇಗೆ , ನನ್ನ ಪಾಸ್ವರ್ಡ್  ಪಡೆಯಲು ಬೇರೆ ಯಾರೋ ಮಾಡುತ್ತಿರುವ , ವಿಷಯವೇ  ಹೇಗೆ ?
ಇದು ನಿಮಗೆ ತಿಳಿಸುವುದು ಸೂಕ್ತವೆಂದು   ನಿಮಗೆ ಬರೆಯತ್ತಿರುವೆ.,
ವಂದನೆಗಳೊಂದಿಗೆ,
ಬಿ ಎಸ್ಸ್ ಲಕಶ್ಮೀ ನಾರಾಯಣ ರಾವ್.

-----------------------------------------

ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.

ಬೆಕ್ಕಿನಮರಿಯ ಕುತೂಹಲದಿಂದಾಗಿ ಇತ್ತೀಚಿಗೆ ನನ್ನ ಆರ್ಕುಟ್ ಪ್ರೊಫೈಲ್ ಕನ್ನಕೊರಕರ ದಾಳಿಗೆ ಗುರಿಯಾಯಿತು. ಆ ಕನ್ನಕೊರಕರಿಗೆ ಕೋಟೆಯ ಹೆಬ್ಬಾಗಿಲಿನ ಬೀಗ ತೋರಿಸಿ ಕೀಲಿ ಕೈಯೆತ್ತಿ ಕೊಟ್ಟವರು ನಾವೇ ಅನ್ನುವುದು ನೂರಕ್ಕೆ ನೂರು ಸತ್ಯ. ನಾವು ಹೇಗೆ ಮಂಗಗಳು ಆದೆವೆಂಬುದನ್ನು ಮುಂದೆ ಓದಿ.
     ಹಿಂದೊಮ್ಮೆ ಸರಿಯಾಗಿ ಏಟು ತಿಂದ ಮೇಲೆ ಜಾಲ ತಾಣ ಕ್ಲಿಕ್ ಮಾಡುವ ವಿಷಯದಲ್ಲಿ ನಾನು ತುಂಬಾ ಎಚ್ಚರವಾಗಿರುತ್ತೇನೆ. ಇಂಟರ್ನೆಟ್ ಹಾಗು ಕಂಪ್ಯೂಟರ್ ಬಂದ ಹೊಸತರಲ್ಲಿ ಏನೇನೋ ಹುಡುಕಿ ಯಾವುದೋ ವೆಬ್ ಸೈಟ್ಗೆ ಹೋಗಿ ಅವಾಂತರ ಪಟ್ಟಿದ್ದೆ.(ಹಾವು ಬಿಡುವವರು ಅವರೇ ದುಡ್ಡಿಗೆ ಹಾವು ಹಿಡಿಯುವವರೂ ಅವರೇ – ಎಂಬ ಮಾತಿನ ಸಾಕ್ಷಾತ್ ಅನುಭವವಾಗಿತ್ತು.) ಡೈಲ್ ಅಪ್ ಇಂಟರ್ನೆಟ್ ನಲ್ಲೇ ತುಂಬಾ ಹಾನಿಯಾಗಿತ್ತು. ಕಂಪ್ಯೂಟರ್ ರಿ ಫಾರ್ಮೆಟ್ ಮಾಡಬೇಕಾಯಿತು. ಆಗ ಡಿಜಿಟಲ್ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕೆಲವೊಂದು ಹಾಡುಗಳನ್ನ ಬಿಟ್ಟರೆ ಹೆಚ್ಹೇನನ್ನು ಕಳೆದುಕೊಂಡಿರಲಿಲ್ಲ. ಒಮ್ಮೆ ಹಾಗೆ ಆದಮೇಲೆ ಮತ್ತೆ ಹಾಗೆಂದೂ ಆಗಿರಲಿಲ್ಲ. ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಿದ್ದರೂ ಏನೂ ಆಗಿರಲಿಲ್ಲ.
        ಆದರೆ ಮೊನ್ನೆ ಮಾತ್ರ ಆರ್ಕುಟ್ನಲ್ಲಿ ಏನಾಯಿತೆಂದರೆ —
ಅರವತ್ತಕ್ಕಿಂತ ಹೆಚ್ಚು ವಯಸ್ಸಾದ, ದೊಡ್ಡ ಶಾಲೆಯೊಂದರ ನಿರ್ದೇಶಕರಾದ, ಜ್ಯೋತಿಷ್ಯ ವಿಶಾರದರಾದ, ನನ್ನ ಕಸಿನ್ ಹೆಂಡತಿಯ ನೆಂಟರಾದ, ದೊಡ್ಡ ಫೋಟೋಗ್ರಾಫರ್ ಆದ ನನ್ನ ಆರ್ಕುಟ್ ಸ್ನೇಹಿತರೊಬ್ಬರ (ನನ್ನ ಹೋಂ ಪೇಜ್ನಲ್ಲಿ ಕಂಡ) ಅಪ್ ಡೆಟ್ ನ ಲಿಂಕ್ ಒಂದರ ಮೇಲೆ ಬೆಕ್ಕಿನ ಮರಿಯ ಕುತೂಹಲದಿಂದ ಕ್ಲಿಕ್ ಮಾಡಿದೆ.(ಅವರು ವಿನೋದಕ್ಕೆ ಆ ಸೈಟಿನ ಲಿಂಕ್ ಅಪ್ ಡೆಟ್ ಮಾಡಿಕೊಂದಿದ್ದರೆನೋ. ಬೇರೆ ಹುಡುಗ ಬುದ್ದಿಯವರು ಆ ವೆಬ್ ಸೈಟ್ ಲಿಂಕ್ ಅಪ್ ಡೆಟ್ ಮಾಡಿದ್ದರೆ ಕಣ್ಣೆತ್ತಿಯೂ ನೋಡುತ್ತುರಲಿಲ್ಲ.) ಅಷ್ಟು ಮಾಡಿದ್ದೆ ತಡ ಆರ್ಕುಟ್ ಹೋಂ ಪೇಜ್ ಪ್ರತ್ಯಕ್ಷವಾಯಿತು. ಕೆಲವೊಮ್ಮೆ ಬೇರೆ ಟ್ಯಾಬ್ ನಲ್ಲಿ ಗೂಗಲ್ ನವರ ಇತರ ಸೇವೆಗಳು ಅಂದರೆ ಬ್ಲಾಗರ್, ಜಿ ಮೇಲ್ ಕೆಲಸ ಮಾಡುತ್ತಿದ್ದು ಅಲ್ಲಿ ನಾವು ಸೈನ್ ಔಟ್ ಮಾಡಿ ಆರ್ಕುಟ್ ನ ನಮ್ಮ ಪೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದಾಗ ಅಲ್ಲೂ ಹಾಗೇ ಆಗಿ ಆರ್ಕುಟ್ ಹೋಂ ಪೇಜ್ ಬರುತ್ತಿತ್ತು. ನಾವು ಮತ್ತೊಮ್ಮೆ ನಮ್ಮ ಯುಸರ್ ನೇಮ್ ಪಾಸ್ ವರ್ಡ್ ಕೊಟ್ಟು ಮತ್ತೊಮ್ಮೆ ಲಾಗಿನ್ ಆಗಬೇಕಿತ್ತು. ಹಾಗೇನೂ ಆಯಿತೇನೋ ಎಂದು ತಿಳಿದು ಪ್ರತ್ಯಕ್ಷವಾದ ಆರ್ಕುಟ್ ಹೋಂ ಪೇಜ್ ನಲ್ಲಿ ನನ್ನ ಯುಸರ್ ನೇಮ್, ಪಾಸ್ ವರ್ಡ್ ಕೊಟ್ಟು ಎಂಟರ್ ಒತ್ತಿ ನನ್ನ ಪೇಜ್ ತೆರೆಯುವುದೇ ಕಾಯುತ್ತಿದ್ದೆ. ತೆರೆಯದಿದ್ದಾಗ ಅನುಮಾನ ಬಂದು ಆ ಸೈಟನ್ನು ಕ್ಲೋಸ್ ಮಾಡಿ ಲ್ಯಾಪ್ ಟಾಪ್ ಆಫ್ ಮಾಡಿದೆ. ಅಷ್ಟರಲ್ಲಾಗಲೇ ಬೀಗ ಮತ್ತು ಬೀಗದ ಕೈ ಕನ್ನಕೊರಕರ ಕೈ ಸೇರಿಯಾಗಿದೆ.
           ನಾನು ಮೊನ್ನೆ ರಾತ್ರಿ ಮನೆ ಸೇರುತ್ತಿದ್ದಂತೆಯೇ ಹೆಂಡತಿ ಮೊದಲು ಹೇಳಿದ ವಿಷಯ ಇಂಜಿನಿಯರ್ ಓದುತ್ತಿರುವ ನನ್ನ ಅಕ್ಕನ (ಕಸಿನ್) ಮಗ ನಮ್ಮನೆಗೆ ಫೋನ್ ಮಾಡಿ ನನ್ನ ಪ್ರೊಫೈಲ್ ಹ್ಯಾಕ್ ಆಗಿದೆಯೆಂದು ಹೇಳಿದ್ದು. ಸಾದಾರಣ ಉಟವಾದಮೇಲೆ ನೆಟ್ ತೆರೆಯುವವನು ಅಂದು ಕೂಡಲೇ ಕನೆಕ್ಟ್ ಮಾಡಿ ನನ್ನ ಆರ್ಕುಟ್ ಪೇಜ್ ನೋಡ್ತೀನಿ. ಏನಿದೆ ಅಲ್ಲಿ? ನನ್ನ ಫೋಟೋ ಬದಲು ಜೀನ್ಸ್ – ಟಿ ಶರ್ಟ್ ಧಾರಿ ನಗುಮೊಗದ ಚೆಲುವೆಯ ಚಿತ್ರ!! ಹೆಸರೂ ತುಂಬ ರಮ್ಯ."Call girl for sex"-ಅಂತ. (ಅಷ್ಟರಲ್ಲಾಗಲೇ ಕೊಂಗನೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬೇರೆ!!) ಹ್ಯಾಕ್ ಆಗಿದೆಯೆಂದು ನನ್ನ ಕೆಲವು ಮಿತ್ರರ ಹೇಳಿಕೆಗಳು. ಕೂಡಲೇ ಆನ್ ಲೈನಲ್ಲಿ ಕಾಣಿಸಿಕೊಂಡ ಒಂದಿಬ್ಬರು ಮಿತ್ರರು ಹ್ಯಾಗಾಯಿತೆಂಬ ಪ್ರಶ್ನೆ. ಒಮ್ಮೆಲೇ ಜೋರು ನಗುಬಂತು. ಸದ್ಯ ೫-೬ ಘಂಟೆ ಮಾತ್ರ ಆಗಿದ್ದದರಿಂದ ಹೆಚ್ಚಿನ ಜನ ನೋಡಿರಲಿಲ್ಲ.
 ಹತ್ತು ನಿಮಿಷದಲ್ಲೇ ಎಲ್ಲಾ ಸರಿಮಾಡಿಕೊಂಡೆ. ನಾನು ಏನೇನು ಮಾಡಿದೆನೆಂದು ಹೇಳುತ್ತೇನೆ. ನಾಳೆ ನಿಮ್ಮ ಪ್ರೋಫೈಲೂ ಹ್ಯಾಕ್ ಆಗಬಹುದು. ನೀವೂ ಹೀಗೇ ಮಾಡಿಕೊಳ್ಳಬಹುದು.
-ಆರ್ಕುಟ್ ನಿಂದ ಸೈನ್ ಔಟ್ ಮಾಡಿ ಗೂಗಲ್ ಅಕೌಂಟ್ಗೆ ಹೋಗಿ ಸೈನ್ ಇನ್ ಮಾಡಿದೆ.
-ಪಾಸ್ ವರ್ಡ್ ಚೇಂಜ್ ಕ್ಲಿಕ್ ಮಾಡಿ ಹೊಸ ಪಾಸ್ ವರ್ಡ್ ಪಡೆದೆ.
-ಈಗ ಮತ್ತೆ ಹೊಸ ಪಾಸ್ ವರ್ಡ್ ನಿಂದ ಆರ್ಕುಟ್ ಲಾಗ್ ಇನ್ ಆಗಿ ಪ್ರೊಫೈಲನ್ನು ಹೊಸದಾಗಿ ಎಡಿಟ್ ಮಾಡಿ ಹಾರ್ಡ್ ಡಿಸ್ಕ್ ನಿಂದ ನನ್ನ ಫೋಟೋ ಅಪ್ ಲೋಡ್ ಮಾಡಿಕೊಂಡೆ. ಸ್ನೇಹಿತರಿಗೆಲ್ಲ ಸುದ್ದಿ ಮುಟ್ಟಿಸಿದ್ದಕ್ಕೆ ಧನ್ಯವಾದ ಹೇಳಿದೆ.
-ಹ್ಯಾಕರ್ ನನ್ನನ್ನು ಸೇರಿಸಿದ ಯಾವ್ಯಾವುದೋ ಕಮ್ಯೂನಿಟಿಯಿಂದ ಹೊರಬಂದೆ.
      ಇಲ್ಲಿ ನಾನು (ನಾವು) ತಪ್ಪದೇ ಧನ್ಯವಾದ ಹೇಳಬೇಕಾಗಿರುವುದು ಆ ಪುಣ್ಯಾತ್ಮ ಹ್ಯಾಕರ್ ನಿಗೆ!!!! ನಿಜಕ್ಕೂ ಪುಣ್ಯಾತ್ಮ. ಆತ ಏನು ಬೇಕಾದರೂ ಮಾಡಬಹುದಿತ್ತು. ಬ್ಲಾಗುಗಳನ್ನ, ಮೇಲ್ಗಳನ್ನ ಹಾಗೂ ಪಿಕಾಸದಲ್ಲಿದ್ದ ಅನೇಕ ನೂರು ಫೋಟೋಗಳನ್ನ ಅಳಿಸಿ ಹಾಕಬಹುದಿತ್ತು. ಆದರೆ ಹಾಗಾಗಿರಲಿಲ್ಲ.

         ನೀವೂ ಹ್ಯಾಕರ್ ದಾಳಿ ಅನುಭವ ಪಡೆಯಬೇಕೇ? ಅಥವಾ ನಿಮ್ಮ ಸ್ನೇಹಿತರಿಗೆ ಆ ಅನುಭವ ಕೊಡಬೇಕೇ?

ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು, ನಿಮ್ಮ ಸಮಝಾಯಿಶಿ ಬೇಕು.

ಶ್ರೀ ಮಂಜುನಾಥಶರ್ಮರು ಅಭಿಮತದಲ್ಲಿ ಬರೆದಿರುವ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಇದನ್ನು ಶರ್ಮರ ಗಮನಕ್ಕೆ ತರಲಾಗುವುದು.
----------------------------------------
ಶ್ರೀ ಮಂಜುನಾಥಶರ್ಮರೇ, 
ನಿಮ್ಮ ಮೇಲ್ ವಿಳಾಸ ಕೊಟ್ಟಿದ್ದರೆ ಚೆನ್ನಿತ್ತು. ಶ್ರೀ ಸುಧಾಕರ ಶರ್ಮರು ತುಂಬಾ ಕೆಲಸಗಳ ಒತ್ತಡದಲ್ಲಿದ್ದಾರೆ.ವೇದಸುಧೆಯನ್ನು ವಾರಕ್ಕೊಮ್ಮೆಯೂ ಇಣುಕಲು ಅವರಿಗೆ ಪುರಸೊತ್ತಿಲ್ಲವಾಗಿದೆ.ಆದರೂ ಶ್ರೀ ಶರ್ಮರಿಗೆ ದೂರವಾಣಿಮೂಲಕ ವಾದರೂ ವಿನಂತಿಸುವೆ.ಸ್ವಲ್ಪ ತಾಳ್ಮೆ ಇರಲಿ. ನಿಮ್ಮ ಸಂದೇಹಗಳು ನಿಮ್ಮೊಬ್ಬರದೇ ಅಲ್ಲ. ಹಲವರ ಅಭಿಪ್ರಾಯಗಳು ನಿಮ್ಮಿಂದ ಧ್ವನಿಸಿವೆ ಅಷ್ಟೆ.ನೂರಾರು ವರ್ಷಗಳಿಂದ ಇದೇ ಸತ್ಯವೆಂದು ನಂಬಿ ಆಚರಿಸಿಕೊಂಡು ಬಂದಿರುವ ಬಹುಪಾಲು ಎಲ್ಲರಿಗೂ  ಇಂತಹ ದ್ವಂದ್ವಗಳಿದ್ದೇ ಇದೆ. ಪರವಾಗಿಲ್ಲ. ಈ ದ್ವಂದ್ವಗಳು ನಮ್ಮ ನೆಮ್ಮದಿ ಹಾಳುಮಾಡದಂತೆ ಎಚ್ಚರವಿರಲಿ, ಅಷ್ಟೆ. ನಿಮಗೆ ಸತ್ಯವೆನಿಸಿದ ವಿಚಾರಗಳನ್ನು ನಂಬಿ ಅದರಂತೆ ನಡೆಯಿರಿ, ಅನುಮಾನವಿದ್ದ ವಿಚಾರಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ನಿಧಾನವಾಗಿ ನಮಗೆ ಸತ್ಯದ ಅರಿವಾಗುವುದರಲ್ಲಿ ಸಂದೇಹವಿಲ್ಲ.ಸಧ್ಯಕ್ಕೆ ಒಂದು ಪುಸ್ತಕದ ಬಗ್ಗೆ ತಿಳಿಸಬಹುದು. ಪಂ|| ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ ಓದಿ ನೋಡಿ.ಪುಸ್ತಕವು ಬೆಂಗಳೂರಿನ ಆರ್ಯ ಸಮಾಜದಲ್ಲಿ ಲಭ್ಯ.
-----------------------------
ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ:
ಶ್ರೀ ಮಂಜುನಾಥಶರ್ಮರು ಯೋಚಿಸಬೇಕಾದ ಒಂದಿಷ್ಟು ವಿಚಾರಗಳನ್ನು ಹೊರಹಾಕಿದ್ದಾರೆ.ನಿಮ್ಮ ಮನದ ವಿಚಾರಗಳನ್ನು
 ನೀವು ಪ್ರತಿಕ್ರಿಯಿಸಿದರೆ  ಶ್ರೀ ಸುಧಾಕರ ಶರ್ಮರಿಂದ ಕಡೆಗಾದರೂ ಸಮಝಾಯಿಶಿ ಪಡೆಯಬಹುದು.
-ಹರಿಹರಪುರಶ್ರೀಧರ್
ಸಂಪಾದಕ
--------------------------------------------------------------------------------
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ