Pages

Monday, July 23, 2012

ವಿಶೇಷ ರೀತಿಯ ಹುಟ್ಟುಹಬ್ಬ!

ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದ ಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು   ಹಾಸನದ ವೃದ್ಧಾಶ್ರಮದಲ್ಲಿ  ಆಚರಿಸಿದ್ದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು "ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
ನಾಗರಾಜ್ ಹೇಳಿದರು, "ನೋಡಮ್ಮಾ  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
    ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.

                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 


ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ಅಜ್ಜಿ ನೀವು ಬೆಚ್ಚಗಿರಬೇಕು

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್








ಅನರ್ಘ್ಯ ರತ್ನಗಳು





ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ.

ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು.   ತನ್ನನ್ನು ಸಂತೈಸಲು ಬಂದವರಿಗೆ " ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ.  ನನ್ನ ಯಜಮಾನರು ಬರುವ ಸಮಯ.  ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ.  ಅವರನ್ನು ಸಂತೈಸಿ ನಂತರ   ಹೇಳುತ್ತೇನೆ " ಎಂದು ಎಲ್ಲರನ್ನು ಬೀಳ್ಕೊಟ್ಟಳು.

ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ  " ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು.  ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. " ಎಂದು ಪೀಟಿಕೆ ಹಾಕಿದಳು.  ರಬಿಯಾಲನ್ನು  ಅಪಾರ ಗೌರವದಿಂದ ನೋಡುತ್ತಿದ್ದ  ಗಂಡ ಕಾತರದಿಂದ "ಅದೇನು?" ಎಂದು ಕೇಳಿದ.  " ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ   ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ.  ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ.  ಆದರೆ, ಅವರು ಈಗ ಬಂದು ಅವರ  ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ.  ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ.  ಈ ಗ ಹೇಳಿ ನಾನೇನು ಮಾಡಲಿ? "  ಎಂದು ಖಿನ್ನಳಾಗಿ ಹೇಳಿದಳು.   ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ " ರಬಿಯ, ನಿನಗೆ ಹೇಳುವುದೇನಿದೆ?  ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ.  ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು." ಎಂದು ಸ್ಪಷ್ಟವಾಗಿ ಹೇಳಿದ.

ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು  ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು.  ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ.   ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, " ಇವೆ, ಆ ಅನರ್ಘ್ಯ ರತ್ನಗಳು.  ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ.  ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ .  ಈಗ ಕೊಡಬೇಕಲ್ಲವೇ?  ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ."  ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.

ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು.  ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ  ಆದರ್ಶಗಳು ಇಂದಿಗೂ ಜನಮಾನಸದಲ್ಲಿ   ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.


ಹೇ ವಿನಾಯಕ ಆಲಿಸೆನ್ನಯ ಪ್ರಾರ್ಥನೆ







ಹೇ ವಿನಾಯಕ ಸುಖ ಪ್ರದಾಯಕ
ಆಲಿಸೆನ್ನಯ ಪ್ರಾರ್ಥನೆ|
ಕಾಲಚಕ್ರದ  ಆಹುತಿಗೆ ಸಿಲುಕಿದೆನು
ಸಲಹೈ ದೇವನೇ..ದೇವನೇ....||

ಸತ್ಯವೆನ್ನುವ   ಸೊಲ್ಲು ಅಡಗಿದೆ
ಸಿರಿಯು ಗರ್ವದಿ ಮೆರೆದಿದೆ|
ಹಣವು ಉಳ್ಳವ ಗೆಲ್ಲ ಬಲವಿದೆ|
ಅವಗೆ ಜಗ ಶಿರ ಬಾಗಿದೆ||

ದುಡಿಮೆ ಪ್ರಾಮಾಣಿಕತೆ ಇಂದು
ಕಾಣದಾಗಿದೆ ಜಗದಲಿ|
ಜನರ ವಂಚಿಪ ಸ್ವಾರ್ಥ ಸಾಧಿಪ|
ಲೋಕ ಬದುಕಿದೆ ಸೊಗದಲಿ||


ಶಾಲೆಯ ಶಿಕ್ಷಕರ ಜಿಲಾಮಟ್ತದ ಒಂದು ಸಭೆ. ಆ ಸಭೆಗೆ ನಾನು ಆಹ್ವಾನಿಸಲಪಟ್ಟಿದ್ದೆ. ಕಾರ್ಯಕ್ರಮದ ಆರಂಭದಲ್ಲಿ ಒಬ್ಬ ಟೀಚರ್ ಆಕೆಯ ಅಣ್ಣ ರಚಿಸಿದ್ದ  ಈ ಹಾಡು ಹಾಡಿದರು. ನಾನು ತಲೆ ದೂಗಿದೆ. ಆದರೆ ಒಬ್ಬ ಹಿರಿಯರು ತಮ್ಮ ಆಕ್ಷೇಪ ಎತ್ತಿದರು. ಏನು ಈ ಹಾಡು  ನಿರಾಸಾದಾಯಕವಾಗಿದೆಯಲ್ಲಾ! ಅವರ ಆಕ್ಷೇಪದ ಮಾತು.


ನನ್ನ ಅಭಿಪ್ರಾಯದಲ್ಲಿ  ಒಬ್ಬ ಕವಿ  ತನ್ನ ಭಾವನೆಗೆ ಅಕ್ಷರವನ್ನು ಕೊಡುತ್ತಾನೆ. ಅದು  ಆಶಾದಾಯಕ ವಾಗಿರುತ್ತದೋ , ನಿರಾಶೆಯಿಂದ ತುಂಬಿರುತ್ತದೋ, ಏನೋ ಒಂದು ಭಾವ ಹೊತ್ತು ಹಾಡು ಮೂಡಿ ಬಂದಿರುತ್ತದೆ.  ಇಲ್ಲಿ ಕವಿಯು ತೋಡಿ ಕೊಂಡಿರುವ ಭಾವನೆ ಸುಳ್ಳೇ?  ವಾಸ್ತವ ವಲ್ಲವೇ?  ನಿರಾಶೆಯಿಂದ ತುಂಬಿದೆ ಎಂದರೆ  ಇಲ್ಲಿ ಕವಿಯು ಎತ್ತಿರುವ  ಪ್ರಶ್ನೆಗಳಿಗೆ      ಆಶಾದಾಯಕವಾಗಿ  ಸೂತ್ರ ರೂಪಿಸಬೇಕಾದ ಜವಾಬ್ದಾರಿ ಆಕ್ಷೇಪ ಮಾಡುವವರದ್ದು ತಾನೇ?  ನೀವೇನು ಅನ್ನುವಿರಿ?  ನಿಮ್ಮ  ಪ್ರತಿಕ್ರಿಯೆ ನಿರೀಕ್ಷಿಸುವೆ.