Pages

Tuesday, June 1, 2010

ಜೀವನ ಬುನಾದಿ -1

ಮಾನವನು ಮಾನವೇತರ ಜೀವರಿಗಿಂತ ಒಂದು ವಿಷಯದಲ್ಲಿ ಭಿನ್ನನಾಗಿದ್ದಾನೆ. ಮಾನವೇತರ ಜೀವರಾದ ಪಶು-ಪಕ್ಷಿ-ಕ್ರಿಮಿ-ಕೀಟಗಳಲ್ಲಿಯೂ ಚೇತನನಾದ ಆತ್ಮವಿರುವುದರಿಂದ ಅವುಗಳಲ್ಲಿಯೂ ಜ್ಞಾನವಿದೆ. ಅದರೆ, ಅದು ಸ್ವಾಭಾವಿಕ ಜ್ಞಾನ. ಶರೀರಧಾರಿಗಳಾದ ಚೇತನಮಾತ್ರರಿಗೆ ಹಸಿವಾದಾಗ ತಿನ್ನಬೇಕು, ಬಾಯಾರಿದಾಗ ಕುಡಿಯಬೇಕು, ತನಗೆ ಸಂಭವಿಸಬಹುದಾದ ಅಪಾಯಕ್ಕೆ ಹೆದರಬೇಕು,ಆತ್ಮರಕ್ಷಣೆಗಾಗಿ ಹೆಣಗಬೇಕು; ವಂಶ ಪರಂಪರೆಯ ರಕ್ಷಣೆಗಾಗಿ ತನ್ನ ಜಾತಿಯ ಭಿನ್ನ ಲಿಂಗದ ಪ್ರಾಣಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕು - ಈ ಮೊದಲಾದ ಅರಿವು ಸ್ವಾಭಾವಿಕವಾಗಿಯೇ ಇರುತ್ತವೆ. ಚೇತನಮಾತ್ರರಲ್ಲಿ ಮಾನವನ ಗಣನೆಯೂ ಆಗುವುದರಿಂದ, ಮಾನವನಲ್ಲಿಯೂ ಈ ಸ್ವಾಭಾವಿಕ ಜ್ಞಾನವಿದ್ದೇ ಇರುತ್ತದೆ. ಆದರೆ ಈ ಸ್ವಾಭಾವಿಕ ಜ್ಞಾನದಿಂದಲೇ ಮಾನವನು ತೃಪ್ತನಾಗಲಾರನು. ಏಕೆಂದರೆ "ಏಕೆ? ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ ಮಾನವನ ಮನಸ್ಸು. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. ಈ ಜಿಜ್ಞಾಸೆಯಿಂದಾಗಿ ಮಾನವನು ಅನ್ಯ ಜೀವರಿಗಿಂತ ಉನ್ನತ ಸ್ತರದಲ್ಲಿದ್ದಾನೆ.ಈ ಜಿಜ್ಞಾಸೆಯ ಪರಿಣಾಮವಾಗಿ, ಮಾನವನು ನೈಮಿತ್ತಿಕಜ್ಞಾನವನ್ನು ಪಡೆದುಕೊಳ್ಳಲು ಸಮರ್ಥನಾಗಿದ್ದಾನೆ. ನೈಮಿತ್ತಿಕ ಜ್ಞಾನಕ್ಕೆ ಆಶಿಸದೆ, ಕೇವಲ ಸ್ವಾಭಾವಿಕಜ್ಞಾನವೇ ಸಾಕೆಂಬ ತೃಪ್ತ ಮನೋಭಾವವನ್ನು ಸೂಚಿಸುವ ಮಾನವನ ಬೆಳವಣಿಗೆ ಅಲ್ಲಿಗೇ ನಿಂತು ಹೋಗಿ, ಅವನು ಶರೀರದ ಆಕಾರದಿಂದ ಮಾನವನಂತೆಯೇ ಕಂಡುಬಂದರೂ, ಆಂತರಿಕ ವಿಕಾಸದ ದೃಷ್ಟಿಯಿಂದ ಪಶುಪಕ್ಷಿ-ಕ್ರಿಮಿಕೀಟಗಳ ಮಟ್ಟದಲ್ಲಿಯೇ ಉಳಿದು ಹೋಗುತ್ತಾನೆ.ಮಾನವನ ನಿಜವಾದ ಸರ್ವಾಂಗೀಣ ವಿಕಾಸಕ್ಕೆ ಅನಿವಾರ್ಯವಾದ ಸಾಧನ ನೈಮಿತ್ತಿಕಜ್ಞಾನವೇ. ಬೇರೆ ನಿಮಿತ್ತಗಳಿಂದ, ಕಾರಣಗಳಿಂದ ಲಭಿಸುವ ಜ್ಞಾನವೇ ನೈಮಿತ್ತಿಕ ಜ್ಞಾನ.ಸ್ವಾಭಾವಿಕ ಜ್ಞಾನ, "ಹುಟ್ಟಿದ; ಇದ್ದ;ಸತ್ತ"- ಎಂದು ಮಾನವನ ಜೀವನವನ್ನು ಚಿತ್ರಿಸಬೇಕಾದರೆ ಸಾಕು."ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ. ಏನೋ ಆಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ,ಶರೀರತ್ಯಾಗ ಮಾಡಿ ಅಮರನಾಗಿ ಹೋದ"- ಎಂದು ಮಾನವಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಕ ಜ್ಞಾನ ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು; "ಹೇಗೆ? ಏಕೆ?" ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.
-ಕವಿ ನಾಗರಾಜ್

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಜಿಜ್ಞಾಸೆ-೨

ಶ್ರೀ ಶರ್ಮಾಜಿ,
ನಮಸ್ತೆ,

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಒಂದು ಜಿಜ್ಞಾಸೆ ಬರಹಕ್ಕೆ ನೀವು ಬರೆದಿರುವ ಅಭಿಪ್ರಾಯಗಳನ್ನಾದರಿಸಿ ನಿಮಗೆ ಕೆಲವುಪ್ರಶ್ನೆಗಳನ್ನು ಅದೇ ಬರಹದಲ್ಲಿ ಹಾಕಲಾಗಿದೆ. ದಯಮಾಡಿ ಅದಕ್ಕೆ ಉತ್ತರಿಸಿ. ನಿಮ್ಮ ಸಮಯದ ಅಭಾವದ ಅರಿವು ನನಗಿದೆ. ಆದರೂಸಮಯಮಾಡಿಕೊಂಡು ನೀವು ಉತ್ತರಿಸುವುದು ನಮಗೆ ಅನಿವಾರ್ಯವಾಗಿದೆ.