Pages

Sunday, September 18, 2011

ಗೌರಿ ಪೂಜಾ ವಿಧಾನ


ಈ ಹಿಂದೆ ಮೂರ್ತಿ ಪೂಜೆಯ ಬಗ್ಗೆ ಕವಿ ನಾಗರಾಜರು ವಿಚಾರ ಮಂಥನ ಆರಂಭಿಸಿದರಷ್ಟೇ. ಅಲ್ಲಿ ನಾನೊಂದು ವಿಷಯ ಪ್ರಸ್ತಾಪಿಸಿದೆ.ಅದು ಗೌರಿ ಪೂಜಾ ವಿಧಾನ. ಅರಿಶಿನ-ಕುಂಕುಮ-ಮೊರದ ಜೊತೆ ಯನ್ನು ಗೃಹಿಣಿಯರು ಕೊಡು-ತೆಗೆದುಕೊಳ್ಳುವ ಬಗೆಗೆ.ಸಾಮಾನ್ಯವಾಗಿ ಇಂಥಹ ವಿಷಯದ ಬಗ್ಗೆ ಯಾರೂ ಚರ್ಚೆ  ಮಾಡಲು ಸಿದ್ಧರಿರುವುದಿಲ್ಲ. ಆಚರಣೆ ಗಳ ಬಗ್ಗೆ ಚರ್ಚಿಸಿದರೆ ಎಲ್ಲಿ ನಮ್ಮ ಮುಂದುವರೆದ ಪೀಳಿಗೆಯು ಹಬ್ಬ ಹರಿದಿನವನ್ನೇ ನಿಲ್ಲಿಸಿಬಿಟ್ತಾರೋ ಎಂಬ ಚಿಂತೆ ಹಲವರಿಗೆ ಇರಬಹುದು!
ಆದರೆ ನಮ್ಮ ಪರಂಪರೆಯ ಬಗ್ಗೆ ಆಚರಣೆಗಳ ಬಗ್ಗೆ ಅತ್ಯಂತ ಶ್ರದ್ಧೆ ಇರುವ ನಮ್ಮಂತವರು  ಮಂಗಳ ದ್ರವ್ಯಗಳ ಪಾವಿತ್ಯ್ರದ ಬಗ್ಗೆ ಚಿಂತನೆ ನಡೆಸ ಬೇಡವೇ? ಯಾಕೆ ಇಷ್ಟು ಭಯ? 
ವಿಷಯಕ್ಕೆ ನೇರವಾಗಿ ಬರುವೆ. ಈ ಭಾರಿ ನಮ್ಮ ಮನೆಯಲ್ಲಿ ಗೌರಿ ಹಬ್ಬದ ತಯಾರಿ ಮಾಡುವಾಗಲೇ ಒಂದಿಷ್ಟು ತಿಳುವಳಿಕೆ ಹೇಳಿದ್ದೆ.
 ಮೊರದ ಬಾಗಿನ ಕೊಡುವಾಗ ಅದರಲ್ಲಿಡುವ  ಧಾನ್ಯಗಳು, ಬಳೆ, ಅರಿಶಿನ-ಕುಂಕುಮ ಪೊಟ್ಟಣಗಳು, ತೆಂಗಿನಕಾಯಿ, ಹಣ್ಣು , ಕನ್ನಡಿ-ಬಾಚಣಿಗೆ ,ಇತ್ಯಾದಿ ಎಲ್ಲವನ್ನೂ ಜನರು ಉಪಯೋಗಿಸಲು ಸಾಧ್ಯವಾಗುವ ಗುಣ ಮಟ್ಟದ ವಸ್ತುಗಳಾಗಿರಬೇಕು. ಅರಿಶಿನ ಕುಂಕುಮದ ಹೆಸರಲ್ಲಿ  ಬಣ್ಣಗಳನ್ನು ಕೊಡಬೇಡಿ...ಇತ್ಯಾದಿ.... 
ನನ್ನ ಪತ್ನಿ  ನನ್ನ ಮಾತನ್ನು ನೆರವೇರಿಸಿದಳು. ಹಬ್ಬ ಮುಗಿಯಿತು. ನಾಲ್ಕಾರು ದಿನಗಳು ಕಳೆದ ನಂತರ ನೋಡುವಾಗ ನಾಲ್ಕೈದು ಮೊರದ ಬಾಗಿನ ಒಂದರ ಮೇಲೊಂದು ಪೇರಿಸಿರುವುದನ್ನು ತೆಗೆದು ನನ್ನ ಪತ್ನಿಯು ಎಲ್ಲವನ್ನೂ ಪ್ರತ್ಯೇಕ ಗೊಳಿಸುವುದನ್ನು ಕಂಡೆ. ನನ್ನ ಮಾತನ್ನು ನನ್ನ ಪತ್ನಿಯು ಉಳಿಸಿದರೂ ಅವಳಿಗೆ ಬಂದ ಬಾಗಿನಗಳಲ್ಲಿ ಎಲ್ಲವೂ ಮಕ್ಕಳಾಟಕ್ಕೆ ಯೋಗ್ಯವಾದವು!!. ಈಗ ಅವನ್ನೇನು ಮಾಡಬೇಕು? ಮಂಗಳ ದ್ರವ್ಯಗಳ ಪಾವಿತ್ರ್ಯವನ್ನು  ಉಳಿಸುವುದಾದರೂ ಹೇಗೆ? ಬಲ್ಲವರು ತಿಳಿಸಿ.ನನ್ನ ಮದುವೆ ಯಾದ ದಿನಗಳಿಂದ ಆಡಿದ ಮಕ್ಕಳಾಟದ ಬಳೆ ಬಿಚ್ಚೋಲೆ, ಅರಿಶಿನ ಕುಂಕುಮದ ಪೊಟ್ಟಣಗಳು, ಕನ್ನಡಿ-ಬಾಚಣಿಗೆ  ಮೂಟೆಯನ್ನು ಗೌರಿ  ಹಬ್ಬದ ಹಿಂದಿನ ದಿನ  ಖಾಲಿ ಮಾಡಿದ್ದೆ. ಈಗ ಪುನ: ಶುರುವಾಯ್ತಲ್ಲ!! ಇದಕ್ಕೆ ಪರಿಹಾರ ಇದೆಯೇ? 
ನನ್ನ ವಿನಂತಿ ಇಷ್ಟೇ. ನಮ್ಮ ಹಬ್ಬ ಹರಿದಿನಗಳು ಮಕ್ಕಳಾಟ ಆಗಬಾರದು. ನಮ್ಮ ಬದುಕಿಗೆ ನೆಮ್ಮದಿ ನೀಡುವ, ಸಂತಸ ಕೊಡುವ ಸಾಧನವಾಗಬೇಕು. ಏನಂತೀರಿ?