Pages

Monday, November 9, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?


ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.

ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು"ಸುಮ್ಕಿರು ಮಗ, ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"

ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ ಜಬಾಬ್ದಾರಿ ಮಾಡು"
-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮, ಸೂಕ್ತ-೧ , ಮಂತ್ರ- ೮ ]


ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ
ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.

ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!

ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.

ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು. ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ
                 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.
                        ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.

ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು. ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇರ್ಥೇ ನತ್ವಂ ಶೋಚಿತು ಮರ್ಹಸಿ ||

ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು

ದೇಹೀ ನಿತ್ಯ ಮವಧ್ಯೋಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]
ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು. ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ. ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.

ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ ಅಂತವರಿಗೆ ವೇದವು ಹೇಳುತ್ತದೆ.. . . .
ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||

[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.
ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
                ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.