Pages

Saturday, May 28, 2011

ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ನಮಸ್ತೆ. ನಿಮಗೆಲ್ಲರಿಗೂ ತಿಳಿದಿರುವಂತೆ  ನಮ್ಮ ನಿಮ್ಮೆಲ್ಲರ  ನೆಮ್ಮದಿಯ ಬದುಕಿಗಾಗಿ ಒಂದಿಷ್ಟು ಉತ್ತಮ ವಿಚಾರಗಳನ್ನು ನೀಡುತ್ತಾ , ಸಂದೇಹಗಳು ಬಂದಾಗ ಆರೋಗ್ಯಪೂರ್ಣ ಚರ್ಚೆಮಾಡುತ್ತಾ ವೇದಸುಧೆಯ ಚಟುವಟಿಕೆಗಳು ಆತ್ಮೀಯ ವಾತಾವರಣದಲ್ಲಿ ಸಾಗುತ್ತಿರುವುದು ಸರಿಯಷ್ಟೆ. ಆದರೆ ಒಮ್ಮೊಮ್ಮೆ  ಕೆಲವು ವಿಚಾರಗಳು ಎಲ್ಲರಿಗೂ ಒಪ್ಪಿಗೆ ಯಾಗುವುದಿಲ್ಲ. ಸತ್ಯ ಏನೇ ಇರಲಿ ತಾವು ನಂಬಿದ ವಿಚಾರವನ್ನು ಯಾರಾದರೂ ಖಂಡಿಸಿದಾಗ ಬೇಸರಗೊಂಡು ಕಡೆಗೆ ಚರ್ಚೆ ವೈಯಕ್ತಿಕ ಮಟ್ಟಕ್ಕೆ  ಸಾಗಲು ಅನುವು ಮಾಡುತ್ತದೆ. ಅಂತಹ ಒಂದು ಪ್ರಸಂಗ ವೇದಸುಧೆಯಲ್ಲಿ ನಡೆದಿದೆ. ಆತ್ಮೀಯರಾದ ಶ್ರೀ ಮಹೇಶ್ ನೀರ್ಕಜೆಯವರು ನನಗೆ ಎಸ್,ಎಂ.ಎಸ್. ಮಾಡಿದಾಗ ಅಂತಹ ಪ್ರಸಂಗವು ನನ್ನ ಕಣ್ಣಿಗೆ ಬಿತ್ತು. ಚರ್ಚೆಗಳು ತೀರಾ ವೈಯಕ್ತಿಕ  ಮಟ್ಟಕ್ಕೆ  ಇಳಿದಿದ್ದರಿಂದ ಆ ಎರಡು ಪ್ರತಿಕ್ರಿಯೆಗಳನ್ನು
 ತೆಗೆಯಲಾಗಿದೆ. ವೇದಸುಧೆಯಲ್ಲಿ ನೇರವಾಗಿ ಚರ್ಚೆ ಮಾಡಲು ಅನುಕೂಲವಿರಲೆಂಬ ಕಾರಣಕ್ಕಾಗಿ ಓದುಗರು ಬರೆದ ಪ್ರತಿಕ್ರಿಯೆಗಳನ್ನು ಪರಿಶೀಲಿಸದೆ ಪ್ರಕಟವಾಗಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮುಂದೆ ಈ ಬಗ್ಗೆಯೂ ವೇದಸುಧೆ ಬಳಗವು ಒಂದು ಹೊಸನಿಲುವು ತೆಗೆದುಕೊಳ್ಳಬೇಕಾಗಬಹುದು. ಅಂತೂ ಯಾರೋ ಒಬ್ಬ ಓದುಗರ ಪ್ರತಿಕ್ರಿಯೆಯನ್ನು ಆಧರಿಸಿ ವೇದಸುಧೆಯು ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ, ಬದಲಿಗೆ ಬಳಗದ ಹಿರಿಯ ಸದಸ್ಯರೊಡನೆ ಸಮಾಲೋಚಿಸಿ ನಿರ್ಧರಿಸಲಾಗುವುದು.     

ವೇದೋಕ್ತ ಜೀವನ ಪಥ: ಮಾನವಧರ್ಮ - ೫

ಕೇಳಿರಿ:-

ಪರಾ ಯಾಹಿ ಮಘವನ್ನಾ ಚ ಯಾಹೀಂದ್ರ ಭ್ರಾತರುಭಯತ್ರಾ ತೇ ಅರ್ಥಮ್ |
ಯತ್ರಾ ರಥಸ್ಯ ಬೃಹತೋ ನಿಧಾನಂ ವಿಮೋಚನಂ ವಾಜಿನೋ ರಾಸಭಸ್ಯ ||
(ಋಕ್. ೩.೫೩.೫.)


     [ಮಘವನ್] ಓ ಸೌಭಾಗ್ಯಶಾಲಿ, [ಭ್ರಾತಃ] ಸೋದರ, [ಇಂದ್ರ] ಇಂದ್ರಿಯವಾನ್ ಜೀವಾತ್ಮನ್, [ಯತ್ರ] ಎಲ್ಲಿ [ಬೃಹತಃ ರಥಸ್ಯ] ಮಹಾನ್ ಶರೀರದ [ನಿಧಾನಮ್] ಆಶ್ರಯವಿದೆಯೋ [ರಾಸಭಸ್ಯ] ಮೋಕ್ಷಕ್ಕಾಗಿ ಹಾತೊರೆದು ಕೂಗುವ [ವಾಜಿನಃ] ಜ್ಞಾನವಾನ್ ಆತ್ಮನ [ವಿಮೋಚನಮ್] ಮುಕ್ತಿಯಿದೆಯೋ [ಉಭಯತ್ರಾ] ಆ ಎರಡೂ ಕಡೆಗೂ [ತೇ ಅರ್ಥಮ್] ನಿನ್ನ ಹಿತದ ಸಲುವಾಗಿ [ಆ ಯಾಹಿ] ಬಾ [ಚ] ಮತ್ತು [ಪರಾಯಾಹಿ] ಹೋಗು.
      ಭಾವನೆ ಸ್ಪಷ್ಟವಾಗಿದೆ. ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ.
*********************************