Pages

Wednesday, December 10, 2014

ನಾವೆಲ್ಲರೂ ಒಂದೇ. . . . ಜಾತಿ ಒಂದೇ. . . . .ಕುಲ ಒಂದೇ. . . . ನಾವ್ ಮನುಜರು

ನಮ್ಮ ಹಿಂದು ಸಮಾಜವನ್ನು ಕಾಡುತ್ತಿರುವ ಬಹುದೊಡ್ದ ಸಮಸ್ಯೆ ಎಂದರೆ ಸ್ಪೃಶ್ಯ-ಅಸ್ಪೃಶ್ಯ ಸಮಸ್ಯೆ , ಮೇಲು ಕೀಳೆಂಬ ಭಾವನೆ. ಜಾತಿ-ಜಾತಿಗಳ ನಡುವೆ ದ್ವೇಷ. ಈ ಎಲ್ಲಾ ಸಮಸ್ಯೆಗಳ ಮೂಲ ಎಲ್ಲಿದೆ? ಇವೆಲ್ಲಾ ನಾವು ಮಾಡಿಕೊಂಡಿರುವುದೇ? ಅಥವಾ ನಾವು ಪರಮ ಪ್ರಮಾಣವೆಂದು ನಂಬುವ ವೇದದಲ್ಲಿ ಇದೆಯೇ? ಈ ಬಗ್ಗೆ ವಿಚಾರ ಮಾಡೋಣ.
 ಶಾಸ್ತ್ರಾದ್ರೂಢಿರ್ಬಲೀಯಸಿ ಎಂಬ ಒಂದು ಮಾತಿದೆ. ಅಂದರೆ ಶಾಸ್ತ್ರಕ್ಕಿಂತ ರೂಢಿಯೇ ಬಲಶಾಲಿನಿ. ವೇದದಲ್ಲಿ ಹೇಳಿದ ವರ್ಣ ವ್ಯವಸ್ಥೆಯ ರೂಪವು ಕೆಟ್ಟು ಹಿಂದು  ಸಮಾಜದಲ್ಲಿ ಆತ್ಮಾಪಮಾನಕಾರವಾದ ಆಚರಣೆಗಳು ರೂಢಿಗೆ ಬಂದು ಇಂದು ಹಿಂದು ಸಮಾಜಕ್ಕೆ ಅದು ದೊಡ್ಡ   ಸಮಸ್ಯೆಯಾಗಿ ದೇಶದ ಅಭಿವೃದ್ಧಿಗೆ ಮತ್ತು ಸಮಜದ ಸಾಮರಸ್ಯಕ್ಕೆ ದೊಡ್ಡ ಅಡಚಣೆಯಾಗಿದೆ. ವೇದಗಳು ಸಾರ್ವಭೌಮ,ಸಾರ್ವಕಾಲಿಕ ಮತ್ತು ಸರ್ವಮಾನವ ಸಮಾನತೆಯ ವಿಚಾರಗಳನ್ನೇ ಪ್ರತಿಪಾದಿಸುವ ಅಮೂಲ್ಯ ನಿಧಿ. ವೇದಗಳು ಪ್ರತಿಪಾದಿಸುವ ಮಾನವ ಸಮಾನತೆಯನ್ನು  ಕೆಲವು ಮಂತ್ರಗಳ ಆಧಾರದಿಂದ ವಿಚಾರಮಾಡೋಣ.

ಅಯಂ ನಾಭಾ ವದತಿ ವಲ್ಗು ವೋ ಗೃಹೇ | ವೇದಪುತ್ರಾ ಋಷಯಸ್ತಚ್ಛೃಣೋತನ ||
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು | ಪ್ರತಿಗೃಬ್ಣೀತ ಮಾನವಂ ಸುಮೇಧಸಃ ||
[ಋಗ್ವೇದ ೧೦ನೇ ಮಂಡಲ, ೬೨ ನೇ ಸೂಕ್ತ, ೪ ನೇ ಮಂತ್ರ]

ಅರ್ಥ  :
ದೇವಪುತ್ರಾಃ = ಭಗವಂತನ ಮಕ್ಕಳೇ
ಋಷಯಃ = ಋಷಿಗಳೇ,ದಾರ್ಶನಿಕರೇ
ಸುಮೇಧಸಃ = ಉತ್ತಮ ಬುದ್ಧಿಸಂಪನ್ನರೇ
ಅಂಗಿರಸಃ = ಆತ್ಮನಲ್ಲಿ ರಮಿಸುವವರೇ
ಅಯಂ ನಾಭಾ = ಈ ಪ್ರಭುವು, ಭಗವಂತನು
ವಃ ಗೃಹೇ = ನಿಮ್ಮ ಗೃಹಗಳಲ್ಲಿ [ನಿಮ್ಮ ಆತ್ಮನಲ್ಲಿ]
ವಲ್ಗು ವದತಿ = ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ
ತತ್ ಶೃಣೋತನ = ಆ ಅಂತಃಪ್ರೇರಣೆಯನ್ನು ಆಲಿಸಿರಿ
ವಃ ಬ್ರಹ್ಮಣ್ಯಂ = ನಿಮ್ಮ ವೇದ ಜ್ಞಾನವು
ಸು ಅಸ್ತು = ಕಲ್ಯಾಣಕಾರಿಯಾಗಲಿ
ಮಾನವಂ = ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು
ಪ್ರತಿ ಗೃಭ್ಣೀತ = ಗ್ರಹಿಸಿರಿ
ಭಾವಾರ್ಥ  :
ಭಗವಂತನ ಮಕ್ಕಳೇ, ಋಷಿಗಳೇ,ದಾರ್ಶನಿಕರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ಭಗವಂತನು ನಿಮ್ಮ ಆತ್ಮನಲ್ಲಿ ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ,  ಆ ಅಂತಃಪ್ರೇರಣೆಯನ್ನು ಆಲಿಸಿರಿ , ನಿಮ್ಮ ವೇದಜ್ಞಾನವು ಕಲ್ಯಾಣಕಾರಿಯಾಗಲಿ, ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು  ಗ್ರಹಿಸಿರಿ.
 ಎಂತಹ ಅದ್ಭುತವಾದ ಮಾತುಗಳು! ಮಾನವರೆಲ್ಲರನ್ನೂ ದೇವಪುತ್ರರೇ ಎಂದು ಸಂಬೋಧಿಸುವ ವೇದವು ಎಲ್ಲಾ ಜನರಲ್ಲಿ ಅವನ ಅಂತಃಪ್ರಜ್ಞೆಯನ್ನು ಬಡಿದೇಳಿಸಬೇಕಲ್ಲವೇ?ನೂತನ ಚೈತನ್ಯವನ್ನು ತುಂಬಬೇಕಲ್ಲವೇ? ಇಲ್ಲಿ ಮೇಲು-ಕೀಳಿನ ಪ್ರಶ್ನೆಗೆ ಅವಕಾಶವಿದೆಯೇ? ನಿಮ್ಮ ವೇದಜ್ಞಾನದಿಂದ ಮಾನವೀಯತೆಯನ್ನು ಗ್ರಹಿಸಿರಿ, ಎಂದು ವೇದವು ಸಾರುತ್ತಿದೆ.
ಯಜುರ್ವೇದದ ಇನ್ನೊಂದು ಮಂತ್ರವನ್ನು ನೋಡಿ. . . . . .

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ 
ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ || [ಯಜುರ್ವೇದ ಅಧ್ಯಾಯ -೧೧ , ಮಂತ್ರ-೫]

ಯೇ = ಯಾರು
ದಿವ್ಯಾನಿ ಧಾಮಾನಿ ತಸ್ಥುಃ = ದೇವದೇವನಿಂದ ನಿರ್ಮಿತವಾದ ನೆಲೆಗಳಲ್ಲಿ ಸ್ಥಿತರಾಗಿದ್ದಾರೋ
ವಿಶ್ವೇ ಅಮೃತಸ್ಯ ಪುತ್ರಾಃ =  ಆ ಸಮಸ್ತ ಅಮರಪ್ರಭುವಿನ ಪುತ್ರರು, ಅಮೃತಪುತ್ರರು
ಶೃಣ್ವಂತು = ಆಲಿಸಲಿ

 ಋಗ್ವೇದದ ಮಂತ್ರದಲ್ಲಿ ದೇವಪುತ್ರರೇ! ಎಂದು ಮಾನವರೆಲ್ಲರನ್ನೂ ಸಂಬೋಧಿಸಿದರೆ ಯಜುರ್ವೇದದ ಈ ಮಂತ್ರದಲ್ಲಿ ಅಮೃತಪುತ್ರರೇ!! ಎಂದು ಕರೆಯುತ್ತಿದೆ.
ಈ ವೇದ ಮಂತ್ರಗಳಲ್ಲಿನ ದೇವಪುತ್ರರೇ! ಅಮೃತಪುತ್ರರೇ!!  ಎಂಬ ಈ ಎರಡು ಶಬ್ಧಗಳನ್ನು ಕೇಳಿದಾಗ ನಮ್ಮ ಮೈ ನವಿರೇಳಬಾರದೇ? ವೇದವು ಮಾನವರನ್ನೆಲ್ಲಾ ಇಷ್ಟು ಶ್ರೇಷ್ಠಪದಗಳಿಂದ ಸಂಬೋಧಿಸುತ್ತಿರುವಾಗ ಎಲ್ಲಿ  ಮತ್ತು ಯಾವಾಗ ಮೇಲು-ಕೀಳೆಂಬುದು ಭೇದವು ನಮ್ಮ ಸಮಾಜದಲ್ಲಿ  ನುಸುಳಿತು?
ವೇದದಲ್ಲಿ  ಮಾನವರೆಲ್ಲರೂ ಒಂದೇ ಎಂಬುದಕ್ಕೆ ಸಾಕಷ್ಟು ಮಂತ್ರಗಳಿದ್ದರೂ ಈ ಎರಡು ಶಬ್ಧಗಳು ನಮ್ಮ ಆತ್ಮನಿರೀಕ್ಷಣೆಗೆ ಅವಕಾಶಮಾಡಬಾರದೇ? ಭಗವಂತನು ನಿಮ್ಮ ಆತ್ಮದಲ್ಲಿ ಒಳ್ಳೆಯ ವಿಚಾರಗಳನ್ನೇ ನೆಲೆಗೊಳಿಸಿದ್ದಾನೆ.ಮಾನವರೆಲ್ಲರೂ ಒಂದು ಎಂಬುದನ್ನು ವೇದವು ಸಾರಿ ಸಾರಿ ಹೇಳುತ್ತಿದೆ. ನಿಮ್ಮ ಆತ್ಮನ ಕರೆಗೆ ಓಗೊಡಿ, ನಿಮ್ಮ  ವೇದದ ಜ್ಞಾನದಿಂದ  ಮಾನವೀಯತೆಯನ್ನು ಗ್ರಹಿಸಿರಿ
ಬಹುಷಃ ಅಂದಿನ ಋಷಿಗಳಿಗೆ ಮಾನವೀಯತೆಯ ಬಗ್ಗೆ ಅತ್ಯಂತ ಕಾಳಜಿ. ಮಾನವ ಸಮಾಜವು ಎಂದೆಂದಿಗೂ  ಸಾಮರಸ್ಯದಿಂದ ಇರಬೇಕೆಂಬ ಅಪೇಕ್ಷೆ. ಆದ್ದರಿಂದಲೇ ಇರಬೇಕು ಅವರು ಕಣ್ಮುಚ್ಚಿ ತಪಸ್ಸಿಗೆ ಕುಳಿತರೆ ಅವರ ಮುಂದೆ ಧುತ್ತೆಂದು ಮಾನವ ಸಮಾಜವು ಮೂಡುತ್ತಿದ್ದಿರಬೇಕು. ಆದ್ದರಿಂದಲೇ ಮಾನವೀಯತೆಯ ಬಗ್ಗೆ ಹಲವು ಮಂತ್ರಗಳಲ್ಲಿ ಒತ್ತು ಕೊಟ್ಟಿದ್ದಾರೆ.

ಮಾನರಲ್ಲಿ ಸಮರಸತೆಯನ್ನು ಸಾರುವ ಋಗ್ವೇದದ ಮತ್ತೊಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.

ದ್ಯೌರ್ವಃ ಪಿತಾ ಪೃಥಿವೀ ಮಾತಾ ಸೋಮೋ ಭ್ರಾತಾದಿತಿಃ ಸ್ವಸಾ |
ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಠತೇಲಯತಾ ಸು ಕಮ್ ||
[ಋಗ್ವೇದ ೧ನೇ ಮಂಡಲ, ೧೯೧ ನೇ ಸೂಕ್ತ, ೬ ನೇ ಮಂತ್ರ]
ಅರ್ಥ :
ದ್ಯೌಃ = ಜ್ಯೋತಿರ್ಮಯ ಪರಮಾತ್ಮನು
ವಃ ಪಿತಾ =ನಿಮ್ಮೆಲ್ಲರ ತಂದೆ
ಪೃಥಿವೀ = ಭೂಮಿಯು
ಮಾತಾ =ತಾಯಿ
ಸೋಮಃ = ವಿವೇಕವು
ಭ್ರಾತಾ = ನಿಮ್ಮನ್ನು ಉದ್ಧರಿಸುವ ಸೋದರ
ಅದಿತಿಃ = ಅಖಂಡತ್ವ ಅಥವಾ ಪ್ರಾಮಾಣಿಕತೆಯು
ಸ್ವಸಾ = ಸ್ವತಃ ಬಾಳಿಗೆ ಸರಿದು ಬರುವ ಸೋದರಿ
ಅದೃಷ್ಟಾ = ಕಣ್ಣಿಗೆ ಕಾಣಿಸದಿರುವ
ಚ = ಮತ್ತು
ವಿಶ್ವದೃಷ್ಟಾಃ = ಕಾಣಿಸುತ್ತಿರುವ ಸರ್ವರೂ
ಸು ತಿಷ್ಠತ = ಒಳ್ಳೆಯ ರೀತಿಯಲ್ಲಿ ಬಾಳಿರಿ
ಕಂ  ಇಲಯತ = ಸುಖದಿಂದ ಉಪಭೋಗಿಸಿರಿ
ಭಾವಾರ್ಥ  :
ಜ್ಯೋತಿರ್ಮಯ ಪರಮಾತ್ಮನು ನಿಮ್ಮೆಲ್ಲರ ತಂದೆ, ಭೂಮಿಯು ನಿಮ್ಮ  ತಾಯಿ, ವಿವೇಕವು  ನಿಮ್ಮನ್ನು ಉದ್ಧರಿಸುವ ಸೋದರ,  ಅಖಂಡತ್ವ ಅಥವಾ ಪ್ರಾಮಾಣಿಕತೆಯು ಸ್ವತಃ ಬಾಳಿಗೆ ಸರಿದು ಬರುವ ಸೋದರಿ,  ಕಣ್ಣಿಗೆ ಕಾಣಿಸದಿರುವ ಮತ್ತು ಕಾಣಿಸುತ್ತಿರುವ ಸರ್ವರೂ  ಒಳ್ಳೆಯ ರೀತಿಯಲ್ಲಿ ಬಾಳಿರಿ, ಸುಖದಿಂದ ಉಪಭೋಗಿಸಿರಿ.
ವೈದಿಕ ಧರ್ಮದಲ್ಲಿ ಏಕರಸವಾಗಿ ಪ್ರವಹಿಸುವ ದಿವ್ಯ ಭಾವನೆ ಎಂದರೆ ಇದೇ ಆಗಿದೆ. ಜ್ಯೋತಿಸ್ವರೂಪನಾದ  ಆ ಪರಮಾತ್ಮನೇ ನಮ್ಮೆಲ್ಲರ ತಂದೆ. ಭೂಮಿಯೇ  ನಮ್ಮ ತಾಯಿ. ನಮ್ಮ ವಿವೇಕವೇ ನಮ್ಮನ್ನು ಉದ್ಧರಿಸುವ ಸೋದರ, ನಮ್ಮ ಪ್ರಾಮಾಣಿಕತೆಯೇ ನಮ್ಮ ಸೋದರಿ. ಎಲ್ಲರೂ ಸುಖವಾಗಿ ಬಾಳಿರೆಂಬುದು ವೇದದ ಕರೆ.ಇನ್ನೆಲ್ಲಿ ಬಂತು ಉಚ್ಚ-ನೀಚ ಭೇದ? ಸಂಸ್ಕೃತ ಶಬ್ದಕೋಶದಲ್ಲಿ ವೇದಮಂತ್ರಗಳ ಆಳವಾದ ಅರ್ಥ ತಿಳಿಯುವುದು ಕಷ್ಟ. ಈ ಮಂತ್ರದ ಹಲವು ಪದಗಳಿಗೆ ಸಂಸ್ಕೃತ ಶಬ್ದಕೋಶದಲ್ಲಿ ಬೇರೆಯೇ ಅರ್ಥ ಇದೆ. ಆದರೆ ದಯಾನಂದ ಸರಸ್ವತಿಯವರ ವೇದಭಾಷ್ಯ ದ ಆಧಾರದಲ್ಲಿ ವೇದಮಂತ್ರವನ್ನು ಅರ್ಥಮಾಡಿಕೊಂಡಾಗ ಅದರ ವಿಶಾಲತೆ ಅರ್ಥವಾಗುತ್ತದೆ.