ನಿಮ್ಮ ಮನೆಯಲ್ಲಿ ಮಕ್ಕಳ ಜನ್ಮದಿನ, ವಿವಾಹವಾಗಿ 25 ವರ್ಷ ನಿಮಿತ್ತ ವಿವಾಹ ರಜತಮಹೋತ್ಸವ, 60ವರ್ಷ ತುಂಬಿದಾಗ ಶಷ್ಠ್ಯಬ್ಧಿ ಕಾರ್ಯಕ್ರಮ.........ಇತ್ಯಾದಿ ಕಾರಣ ಗಳಿಂದ ಏನಾದರೊಂದು ಶುಭಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಏನಿಲ್ಲದಿದ್ದರೂ ಮಕ್ಕಳು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬ, ಅಪ್ಪ-ಅಮ್ಮನ ಹುಟ್ಟು ಹಬ್ಬಕ್ಕಾಗಿ ಸ್ನೇಹಿತರನ್ನು ಕರೆದು ಪಾರ್ಟಿ ಮಾಡುವ ಹೊಸ ಸ್ಟೈಲಂತೂ ಶುರುವಾಗಿದೆ.
ಹೇಗೂ ಕಾರ್ಯಕ್ರಮಗಳು ನಡೆಯುತ್ತವೆ, ಅದನ್ನೇ ಏಕೆ ವೇದೋಕ್ತವಾಗಿ ನಡೆಸಬಾರದು! ಹೀಗೊಂದು ಆಲೋಚನೆ ನನ್ನ ತಲೆಯಲ್ಲಿ ಯಾವಾಗಲೂ ಇದ್ದದ್ದೇ!
ತಮ್ಮ ಮದುವೆಯಾಗಿ 25 ವರ್ಷ ಆಯ್ತು. ಶನಿವಾರ ನಮ್ಮ ಮನೆಗೆ ಬನ್ನಿ, ಒಟ್ಟಿಗೆ ಊಟ ಮಾಡೋಣ,ಎಂದು ಮಿತ್ರರಾದ ಶ್ರೀ ಶೇಷಪ್ಪ ಆಹ್ವಾನಿಸಿದರು. ನಾನು ಅವರಿಗೆ ಒಂದು ಸಲಹೆ ಕೊಟ್ಟೆ. ಅದನ್ನೇ ನಮ್ಮ ಸತ್ಸಂಗದಲ್ಲಿ ಆಚರಿಸೋಣ.ಮಿತ್ರರನ್ನೆಲ್ಲಾ ಕರೆಯಿರಿ, ಎಂದೆ. ಇಂದು 13.3.2016] ಕಾರ್ಯಕ್ರಮ ನಡೆದೇ ಹೋಯ್ತು. ಎಲ್ಲಾ ವೇದ ಮತ್ತು ಯೋಗ ಬಂಧುಗಳೂ ನಮ್ಮ ಮನೆಯಲ್ಲಿ ಸೇರಿದರು. ಒಟ್ಟಿಗೆ ಅಗ್ನಿಹೋತ್ರ ಮಾಡಿದೆವು. ಹಿಂದೂ ಕುಟುಂಬ ವ್ಯವಸ್ಥೆಯ ವೈಶಿಷ್ಠ್ಯ ಮತ್ತು ಅದು ಕುಸಿಯುತ್ತಿರುವ ವಿಚಾರಗಳನ್ನು ಸ್ನೇಹಿತರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ. ಇಂತಾ ಸಂದರ್ಭಗಳನ್ನು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಉಪಯೋಗಿಸಿಕೊಳ್ಳಬೇಕೆಂಬ ಅಂಶವನ್ನು ಕವಿನಾಗರಾಜ್ ಕೂಡ ತಿಳಿಸಿದರು.ಮಿತ್ರರೆಲ್ಲಾ ಶುಭಹಾರೈಸಿದಮೇಲೆ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ನಂತರ ಲಘು ಭೋಜನವನ್ನು ಸ್ವೀಕರಿಸಿ ಎಲ್ಲರೂ ಮನೆಗೆ ತೆರಳಿದರು. ಒಂದು ಸರಳಸಮಾರಂಭವನ್ನು ಸಾಮಾಜಿಕಜಾಗೃತಿಗಾಗಿ ಪೂರ್ಣ ಬಳಸಿಕೊಳ್ಳಲಾಯ್ತು. ಇಂತಾ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಬೇಕಲ್ವಾ?





