ವಿದ್ವಾಂಸರ ಕರ್ತವ್ಯದ ಬಗ್ಗೆ ಇರುವ ವೇದ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.
ಸುತಾ ಅನು ಸ್ವಮಾ ರಜೋ ಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಚಂತ ಇಂದವಃ ||
[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೬]
ಪದಾರ್ಥ :-
ಸ್ವಂ ಆ ರಜಃ ಅನು = ತನ್ನ ಶಕ್ತಿಯನ್ನು ಅನುಸರಿಸಿ
ಬಭ್ರವಃ = ಭರಣಪೋಷಣ ಮಾಡುವವರಾಗಿ
ಇಂದ್ರಮ್ ಗಚ್ಛಂತಃ = ಸರ್ವೇಶ್ವರನ ಬಳಿ ಸಾಗುತ್ತಾ
ಇಂದವಃ = ಕರುಣಾಮಯರು
ಸುತಾಃ = ಪವಿತ್ರರಾಗಿ
ಅಭಿ ಅರ್ಷಂತಿ = ಮುಂದೆ ಸಾಗುತ್ತಾರೆ
ಭಾವಾರ್ಥ :
ಕ್ರಿಯಾಶೀಲರಾದ ವಿದ್ವಾಂಸರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿ ಇತರರ ಪೋಷಣೆ ಮಾಡುತ್ತಾ ಸಮಾಜದ ಸಂಪತ್ತನ್ನು ಉಳಿಸಿ ಬೆಳೆಸುತ್ತಾರೆ. ಮತ್ತು ಜಗತ್ತಿನ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡುತ್ತಾರೆ. ಅಂತೆಯೇ ಸ್ವಾರ್ಥಭಾವನೆಯನ್ನು ನಾಶ ಮಾಡುತ್ತಾರೆ. ಈ ರೀತಿಯ ಕರುಣಾಮಯರೂ, ಪವಿತ್ರರೂ ಆದ ವಿವೇಕಿಗಳು ಭಗವಂತನ ಸಾಮೀಪ್ಯವನ್ನು ಪಡೆಯುತ್ತಾರೆ.
ಸಮಾಜದಲ್ಲಿ ಯಾವಾಗಲೂ ಹಾಗೆಯೇ, ಹೆಚ್ಚು ತಿಳಿದವನಿಗೆ ಹೆಚ್ಚು ಹೊಣೆ. ಇದು ಧರ್ಮ. ತನ್ನಲ್ಲಿರುವ ಸಾಮರ್ಥ್ಯವನ್ನು ವಿದ್ವಾಂಸನಾದವನು ತನ್ನಲಿಟ್ಟುಕೊಂಡು ಸುಮ್ಮನಾಗುವಂತಿಲ್ಲ. ತನ್ನ ಜ್ಞಾನವನ್ನು ಇತರರಿಗೆ ಹಂಚಿ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗೆ ಕಾರಣರಾದಾಗ ಒಬ್ಬ ವಿದ್ವಾಂಸನ ಜ್ಞಾಕ್ಕೆ ಮಾತ್ರ ಬೆಲೆ. ಹಾಗಿಲ್ಲದೆ ಹತ್ತಾರು ಪದವಿಗಳನ್ನು ಪಡೆದಿದ್ದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅಂತವನಿಗೆ ಸದ್ಗತಿಯೂ ಕೂಡ ಸಿಕ್ಕಲಾರದು. ವಿದ್ವಾಂಸನಾದವನು ತನ್ನ ಜ್ಞಾನವನ್ನು ಹಂಚುತ್ತಾ ಸಮಾಜದ ಉನ್ನತಿಗೆ ಕಾರಣ ನಾಗುತ್ತಾ ಇಡೀ ವಿಶ್ವದ ಜನರನ್ನು ಶ್ರೇಷ್ಠರನ್ನಾಗಿ ಮಾಡಬೇಕೆಂದು ವೇದವು ವಿದ್ವಾಂಸನಾದವನಿಗೆ ಕರೆ ಕೊಡುತ್ತದೆ. ಅಂತವನಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ.
ಮತ್ತೊಂದು ಮಂತ್ರವೂ ಈ ವಿಚಾರವನ್ನೇ ಒತ್ತಿ ಹೇಳುತ್ತದೆ.
ಅಯಾ ಪವಸ್ಯ ಧಾರಯಾ ಯಯಾ ಸೂರ್ಯಮರೋಚಯಃ |
ಹಿನ್ವಾನೋ ಮಾನುಷೀರಪಃ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೭]
ಪದಾರ್ಥ :-
ಯಯಾ ಧಾರಯಾ = ಯಾವ ವಚನದಿಂದ
ಮಾನುಷೀಃ ಅಪಃ = ಮಾನವೀಯ ಪ್ರಜೆಗಳನ್ನು
ಹಿನ್ವಾನಃ = ಪ್ರೇರಿಸುತ್ತಾ
ಸೂರ್ಯಮ್ = ಪ್ರಗತಿಶೀಲನನ್ನು
ಅರೋಚಯಃ = ಬೆಳಗಿಸುತ್ತೀಯೋ
ಅಯಾ ಧಾರಯಾ = ಆ ವಚನದಿಂದ
ಪವಸ್ವ = ಮುನ್ನಡೆಸು
ಭಾವಾರ್ಥ :
ಯಾವ ವಚನಗಳಿಂದ ಜನರಿಗೆ ಪ್ರೇರಣೆ ಸಿಗಬಲ್ಲದೋ ಅಂತಹ ವಚನಗಳಿಂದ ವಿದ್ವಾಂಸರು ಜನರನ್ನು ಪ್ರೇರಿಸುತ್ತಾ ಮುನ್ನಡೆಸಬೇಕೆಂಬುದು ವೇದದ ಕರೆ.ಇದು ವೇದದ ಆದೇಶ ಕೂಡ. ಜ್ಞಾನವನ್ನು ಪಡೆದು ಒಬ್ಬ ವಿದ್ವಾಂಸನು ಸುಮ್ಮನಿರುವಂತಿಲ್ಲ. ಪಡೆದ ಜ್ಞಾನವನ್ನು ಜನರಿಗೆ ಹಂಚಬೇಕು.
ಇನ್ನೊಂದು ಮಂತ್ರವನ್ನು ನೋಡೋಣ.
ಅಯುಕ್ತ ಸೂರ ಏತಶಂ ಪವಮಾನೋ ಮನಾವಧಿ |
ಅಂತರಿಕ್ಷೇಣ ಯಾತವೇ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೮]
ಪದಾರ್ಥ:
ಪವಮಾನಃ ಸೂರಃ = ಪವಿತ್ರಕಾರಕನಾದ ಪ್ರೇರಕನು
ಮನೌ ಅಧಿ = ಮಾನವ ಸಮಾಜದಲ್ಲಿ
ಅಂತರಿಕ್ಷೇಣ ಯಾತವೇ = ಆಂತರಿಕ ಮಾರ್ಗದಿಂದ ಹೋಗಲು
ಏತಶಮ್ = ಗತಿಸಾಧನವನ್ನು
ಅಯುಕ್ತ = ಹೊಂದಿಸಿಕೊಳ್ಳಬೇಕು
ಭಾವಾರ್ಥ :
ಇಲ್ಲಿ ವಿದ್ವಾಂಸರುಗಳಿಗೆ ವೇದವು ಕೊಡುವ ಕರೆಯನ್ನು ಗಮನಿಸ ಬೇಕು. ಒಬ್ಬ ವಿಚಾರಶೀಲನು ಪ್ರಾಪಂಚಿಕ ಜ್ಞಾನವನ್ನು ಜನರಿಗೆ ನೀಡುವುದರ ಜೊತೆಗೆ ಜನರು ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಏನಾದರೂ ಇನ್ನೊಬ್ಬರಿಗೆ ಕೊಡಬೇಕಾದರೆ ಅವನಲ್ಲಿ ಅದು ಮೊದಲು ಇರಬೇಕು ತಾನೇ? ಇಲ್ಲದಿದ್ದುದನ್ನು ಕೊಡುವುದಾದರೂ ಹೇಗೆ? ಆದ್ದರಿಂದ ಪಂಡಿತನಾದವನು ಮೊದಲು ತಾನು ಆತ್ಮೋನ್ನತಿಯ ಮಾರ್ಗದಲ್ಲಿ ಸಾಧನೆಯನ್ನು ಮಾಡಿ ಉಳಿದ ಜನರಿಗೂ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಇಂದು ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪಡೆಯುತ್ತಿರುವ ವಿದ್ಯೆಯ ಪರಿಣಾಮ ಏನಾಗಿದೆ! ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡಬೇಡವೇ? ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಗುವನ್ನು ಅದರ ಮೂರನೇ ವಯಸ್ಸಿನಲ್ಲಿಯೇ ಎಲ್.ಕೆ.ಜಿ ಎಂಬ ತರಗತಿಗೆ ತಳ್ಳಲಾಗುತ್ತದೆ. ಆಗಿನಿಂದಲೇ ಅದರ ಸ್ವಾತಂತ್ರ್ಯ ಹರಣವಾಗುತ್ತದೆ. ಬಲವಂತದ ವಿದ್ಯೆ ತುಂಬಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಆ ಮಗುವಿಗೆ ವಿದ್ಯೆಯ ಹೆಸರಲ್ಲಿ ಅದಕ್ಕೆ ಇಚ್ಚೆ ಇರಲಿ ಬಿಡಲಿ ತುರುಕುತ್ತಾ ಅಂತೂ ಆ ಮಗು ಬೆಳೆದು ಒಬ್ಬ ವೈದ್ಯನೋ, ಸಾಫ್ಟ್ ವೇರ್ ಇಂಜಿನಿಯರೋ ಆದರೆ ಅಪ್ಪ-ಅಮ್ಮನ ಜನ್ಮ ಸಾರ್ಥಕ ಎಂದುಕೊಳ್ಳುತ್ತೇವೆ. ಆದರೆ ಸಾಮಾಜಿಕ ಕಾರ್ಯಕರ್ತನಾದ ನಾನು ಹಲವು ಮನೆಯಲ್ಲಿ ಅಪ್ಪ ಅಮ್ಮನ ಸಂಕಟವನ್ನೂ ಗಮನಿಸಿರುವೆ.
೨೫ ವರ್ಷ ವಯಸ್ಸಿನ ಮಗನ ನಡವಳಿಕೆ,ಸ್ವಭಾವ,ಮಾತುಕತೆ ಗಮನಿಸಿದಾಗ ಅಪ್ಪ-ಅಮ್ಮನಿಗೆ ಚಿಂತೆ ಶುರುವಾಗುತ್ತದೆ.ಯಾಕೋ ನನ್ನ ಮಗನ ನಡವಳಿಕೆಯೇ ವಿಚಿತ್ರವಾಗಿದೆಯಲ್ಲಾ! ಆಫೀಸ್‌ಗೆ ಹೋಗುತ್ತಾನೆ, ಮನೆಗೆ ಬಂದರೆ ಟಿ.ವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಬಿಟ್ಟರೆ ಅವನಿಗೆ ಪ್ರಪಂಚವೇ ಬೇಡವಾಗಿದೆಯಲ್ಲಾ! ಜೀವನದಲ್ಲಿ ಸ್ಪೂರ್ತಿಯೇ ಇಲ್ಲವಲ್ಲಾ! ಜೀವಂತಿಕೆಯೇ ಇಲ್ಲವಲ್ಲಾ!
ಈ ಪರಿಸ್ಥಿತಿ ಯಾರದೋ ಒಂದು ಮನೆಯದ್ದಲ್ಲ. ಬಹುಪಾಲು ತಂದೆತಾಯಿಯರ ಸಂಕಟ ಇದೇ ಆಗಿದೆ. ಯಾಕೆ ಹೀಗೆ? ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಮಗುವಿನೊಳಗಿನ ಚೈತನ್ಯವನ್ನು ಜಾಗೃತ ಮಾಡುವ ವ್ಯವಸ್ಥೆಯೇ ಇಲ್ಲ. ಮೇಲಿನಿಂದ ತುರುಕುತ್ತಾ ಇದ್ದೇವೆ, ಅಷ್ಟೆ. ಮೆಲಿನ ಒತ್ತಡಗಳ ಪರಿಣಾಮ ಒಳಗಿನ ಚೈತನ್ಯವು ಕಮರಿ ಹೋಗುತ್ತಿದೆಯಲ್ಲಾ!!
ಇಂತಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನಮ್ಮ ಪಂಡಿತರನ್ನು[?] ವಿದ್ವಾಂಸರೆನಲು ಸಾಧ್ಯವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವರು ಯಾವ ಭಾಷಾಪಂಡಿತರೇ ಇರಲಿ, ವಿಜ್ಞಾನದ ಪಂಡಿತರೇ ಇರಲಿ ಅವರನ್ನು ವೇದದ ಆಶಯದಂತೆ ವಿದ್ವಾಂಸರೆಂದು ಕರೆಯಲು ಬಹುಪಾಲು ಜನರು ಅರ್ಹರಲ್ಲ.
ಮೇಲಿನ ಮಂತ್ರಗಳಲ್ಲಿ ವಿದ್ವಾಂಸನ ಕರ್ತವ್ಯದ ಬಗ್ಗೆ ಸೂಚಿಸುತ್ತಲೇ ಇನ್ನೂ ಮುಂದುವರೆದಂತೆ ಕರ್ತವ್ಯದ ವ್ಯಾಪ್ತಿಯನ್ನು ಇನ್ನೂ ಹೆಚ್ಚುಗೊಳಿಸುವುದನ್ನು ಮುಂದಿನ ಮಂತ್ರದಲ್ಲಿ ನಾವು ತಿಳಿಯಬಹುದಾಗಿದೆ.
ಉತ ತ್ಯಾ ಹರಿತೋ ದಶ ಸೂರೋ ಆಯುಕ್ತ ಯಾತವೇ |
ಇಂದುರಿಂದ್ರ ಇತಿ ಬ್ರುವನ್ ||[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೯]
ಪದಾರ್ಥ:
ಸೂರಃ ಇಂದುಃ = ಪ್ರೇರಣಾದಾಯಕನಾದ ಕರುಣಾಮಯನು
ಇಂದ್ರಃ = ಭಾಗ್ಯಶಾಲಿಯಾಗಿ
ಉತ =ಮತ್ತು
ಇತಿ ಬ್ರುವನ್ = ಹೀಗೆಯೇ ಉಪದೇಶ ಮಾಡುತ್ತಾ
ಯಾತವೇ = ಮುಂದುವರೆಯುವುದಕ್ಕಾಗಿ
ತ್ಯಾ ದಶ ಹರಿತಃ = ಆ ಹತ್ತು ದಿಕ್ಕುಗಳಲ್ಲಿ ಇರುವ ಆಕರ್ಷಣೀಯ ಪ್ರಜೆಗಳನ್ನು
ಅಯುಕ್ತ = ನಿಯೋಜಿಸಬೇಕು
ಭಾವಾರ್ಥ :
ವಿಚಾರಶೀಲನಾದ ಮಾನವನು ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ದಯಾಮಯನೂ ಆಗಿರಬೇಕು. ಜನರಿಗೆ ಉಪದೇಶಮಾಡುತ್ತಾ ಹತ್ತು ದಿಕ್ಕುಗಳಲ್ಲೂ ವಾಸಿಸುವ ಪ್ರಜೆಗಳನ್ನು ಉನ್ನತಿಯ ಮಾರ್ಗದಲ್ಲಿ ನಿಯೋಜಿಸಬೇಕು.
ಜ್ಞಾನವನ್ನು ಪಡೆದಂತೆಲ್ಲಾ ಅವನ ಸಾಮಾಜಿಕಪ್ರಜ್ಞೆ ಹೇಗೆ ಹೆಚ್ಚುತ್ತಾ ಹೋಗಬೇಕೆಂಬುದಕ್ಕೆ ಈ ಮಂತ್ರದಲ್ಲಿ ನಿಖರವಾದ ಸಂದೇಶವಿದೆ. ಒಬ್ಬ ವಿದ್ವಾಂಸನು ತನ್ನ ಪಾಂಡಿತ್ಯದಿಂದ ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ಆಗುವುದರ ಜೊತೆಗೆ ಅವನು ದಯಾಮಯನೂ ಆಗಿರಬೇಕು, ಹಾಗೂ ಎಲ್ಲಾ ದಿಕ್ಕುಗಳಲ್ಲಿರುವ ಜನರಲ್ಲೂ ಆತ್ಮೋನ್ನತಿಗಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಈ ಮಂತ್ರವು ವಿದ್ವಾಂಸರಿಗೆ ಕರೆಕೊಡುತ್ತದೆ.
-ಹರಿಹರಪುರಶ್ರೀಧರ್