Pages

Wednesday, April 29, 2015

ಜೀವನವೇದ-6



ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ

ಮನುಷ್ಯನ ಜೀವನಕ್ಕೆ ಉತ್ಸಾಹ ತುಂಬುವ ಒಂದು ವೇದ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ| ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
[ಅಥರ್ವ: ೨-೧೧-೫]

ಅರ್ಥ:
ಶುಕ್ರಃ ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜಃ ಅಸಿ = ನೀನು ತೇಜಸ್ವಿಯಾಗಿದ್ದೀಯೇ
ಸ್ವಃ ಅಸಿ = ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ
ಜ್ಯೋತಿಃ ಅಸಿ = ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ

ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ನೀನು ತೇಜಸ್ವಿಯಾಗಿದ್ದೀಯೇ,ನೀನು ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ,ನೀನು ಜ್ಞಾನಪ್ರಕಾಶದಿಂದ ಬೆಳಗುವನಾಗಿದ್ದೀಯೇ,  ಶ್ರೇಯಸ್ಸನ್ನು ನೀನೇ ಸ್ವvಃ ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು.


ಈ ಮಂತ್ರವು ಯಾವುದೋ ಒಂದು ಜಾತಿಗಾಗಿ ಹೇಳಿದೆಯೇ? ವೇದ ಮಂತ್ರಗಳು ಸಕಲ ಮಾನವನ ಅಭ್ಯುದಯಕ್ಕಾಗಿ ಇರುವ  ಮಾರ್ಗದರ್ಶನ. ಒಂದು ವೇಳೆ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ  ಅವನು ಕೆಳಗಿದ್ದೀನಿ, ಎಂದು ಕೀಳರಿಮೆ ಹೊಂದಿದ್ದರೆ, ಅವನಿಗೆ ಎಂತಾ ಆತ್ಮವಿಶ್ವಾಸವನ್ನು ತುಂಬುತ್ತದೆಂದರೆ ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ  ಎಂದು ಹುರಿದುಂಬಿಸುತ್ತದೆ.

ನೀನು ಪಾಪಿ! ನಿನಗೆ ಪುಣ್ಯ  ಸಿಗಬೇಕಾದರೆ ಇಂತಾ ದೇವರನ್ನು ನಂಬು, ಈ ಗ್ರಂಥವನ್ನು ಓದು, ಈ ಪ್ರವಾದಿಯನ್ನು ನಂಬು ಎಂದು ಹೇಳುವ, ಮನುಷ್ಯನನ್ನು ಭೀತಿಯಲ್ಲಿ ತಳ್ಳುವ ಮತಗಳ ಬಗ್ಗೆ ನಮಗೆ ಅರಿವಿದೆ. ಆದರೆ ಹಾಗೆ   ವೇದವು  ಹೇಳಲೇ ಇಲ್ಲ. ವೇದವನ್ನು ನಂಬು ಎಂದೂ ಕೂಡ ವೇದವು ಹೇಳಲಿಲ್ಲ. ಮನುಷ್ಯನು ಯಾವ ಮಾರ್ಗದಲ್ಲಿ ನಡೆಯಬೇಕೆಂಬುದನ್ನು ವೇದಮಂತ್ರ ಒಂದು ಹೇಳುತ್ತದೆ ಯಾವುದು ಪ್ರಾಚೀನದಿಂದ ಬಂದಿದೆಯೋ, ಯಾವುದು ಇಂದಿನ ನವೀನ ಜ್ಞಾನವಿದೆಯೋ, ಯಾವುದು ಶಾಸ್ತ್ರಗಳಲ್ಲಿ ಹೇಳಿದೆಯೋ, ಯಾವುದು ನಿನ್ನ ಅಂತರಂಗದಲ್ಲಿ ಹುಟ್ಟುತ್ತದೋ, ಎಲ್ಲವಕ್ಕೂ ಕಿವಿಗೊಡು, ಆದರೆ ಯಾವುದು ನಿನ್ನನ್ನು  ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗಬಲ್ಲದೆಂದು ನಿನ್ನ ವಿವೇಕ ಹೇಳುತ್ತದೆಯೋ, ಆ ಮಾರ್ಗದಲ್ಲಿ ನಿನ್ನ ಜೀವನರಥ ಸಾಗಲಿ ಈ ಮಂತ್ರದ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರ ಮಾಡೋಣ. ಆದರೆ ಸಧ್ಯಕ್ಕೆ ಇಷ್ಟನ್ನು ನಾವು ಅರ್ಥ ಮಾಡಿಕೊಳ್ಳಬಹುದು. ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಮಾರ್ಗದರ್ಶನ ಲಭ್ಯವಿದ್ದರೂ ವೇದವು ತನ್ನನ್ನೇ ನಂಬಿ ಎಂದು ಎಲ್ಲೂ ಹೇಳಿಲ್ಲ.
ಮನುಷ್ಯನಿಗೆ ಉನ್ನತಿಹೊಂದಲು ಇದಕ್ಕಿಂತ ಇನ್ನೇನು ಬೇಕು? ಇಂತಹಾ ಆತ್ಮಸ್ಥೈರ್ಯವನ್ನು ತುಂಬುವಂತಹ ವೇದಮಂತ್ರವನ್ನು ಬದಿಗಿಟ್ಟು ಅದನ್ನು ಪಂಡಿತರ ಮಡಿವಂತ ಪಟ್ಟಿಗೆ ಸೇರಿಸಿ ಅದರಿಂದ ದೂರವಿದ್ದೀವಲ್ಲಾ! ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿದೆಯೇ?
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಟೀಚರ್ ಗಳು ಪಾಠಮಾಡುವ ಚಿತ್ರವು ನನ್ನ  ಕಣ್ಮುಂದೆ ಬಂತು.ಎಲ್ಲರಿಗೂ ಈ ವಿಚಾರ ಗೊತ್ತಿದೆಯಾದರೂ ಈ ಸಂದರ್ಭದಲ್ಲಿ ನಾನು ನನ್ನೆಲ್ಲಾ ಮಿತ್ರರ ಗಮನವನ್ನು ಇತ್ತ ಸೆಳೆಯಲು ಬಯಸುತ್ತೇನೆ.
ನಮ್ಮ ಪ್ರೈಮರಿ ಶಾಲೆಗಳಿಗೆ ಹೋಗಿ ನೋಡಿ[ಕೆಲವು ಶಾಲೆಗಳು ಅಪವಾದ ವಿರಬಹುದು] ಅಲ್ಲಿನ ಟೀಚರ್‌ಗಳ ಬಾಯಲ್ಲಿ ಬರುವ ಮಾತುಗಳನ್ನು ಕೇಳಿ ಇನ್ನು ಹತ್ತು ಜನ್ಮ ಎತ್ತಿ ಬಂದರೂ ನಿನಗೆ ಬುದ್ಧಿ ಬರುದಿಲ್ಲ! ಅಂತಾ  ದಡ್ಡಾ ನೀನು!! ಅವನನ್ನು ನೋಡು ಎಷ್ಟು ಸೊಗಸಾಗಿ ಇಂಗ್ಳೀಶಲ್ಲಿ ಮಾತನಾಡುತ್ತಾನೆ! ಎಷ್ಟು ಶಿಸ್ತಾಗಿ ಅವರ ಮನೆಯಲ್ಲಿ ಬೆಳೆಸಿದ್ದಾರೆ, ನೋಡು! ನೀನು ಇದೀಯ ಮಂಕು ಮುಂಡೇದು!!
ವೇದವು ಹೇಳುತ್ತಿದೆ  ನೀನು ಸಮರ್ಥ, ನೀನು ತೇಜಸ್ವೀ, ನೀನು ಪರಿಶುದ್ಧ
ಆದರೆ ನಮ್ಮ ಶಾಲೆಯ ಟೀಚರ್ ಗಳು ಹೇಳುತ್ತಾರೆ  ನೀನು ದಡ್ಡ, ನೀನು ಪೆದ್ದ, ನೀನು ನಿಶ್ಪ್ರಯೋಜಕ ನೋಡಿ ಗ್ರಹಚಾರ ಹೇಗಿದೆ? ಟೀಚರ್ ಗಳ ಹತ್ತಿರ ಛೀಮಾರಿ  ಹಾಕಿಸಿಕೊಳ್ಳುವ ವಿದ್ಯಾರ್ಥಿಯ ಮಾತಾ ಪಿತೃಗಳು ಆ ಶಾಲೆಯ ಭವ್ಯವಾದ ಕಟ್ಟಡ, ಫುಲ್‌ಸೂಟ್ ಹಾಕಿರುವ ಪ್ರಿನ್ಸಿಪಾಲ್ [ನಮ್ಮ ಕಾಲದಲ್ಲಿ ಕಾಲೇಜುಗಳಲ್ಲಿ ಮಾತ್ರ ಪ್ರಿನ್ಸಿಪಾಲರಿರುತ್ತಿದ್ದರು. ಹೈಸ್ಕೂಲ್‌ಗಳಿಗೆ ಇರುತ್ತಿದ್ದವರೂ ಹೆಡ್ ಮಾಸ್ಟರ್ ಮಾತ್ರವೇ. ಈಗೆಲ್ಲಾ ಪ್ರೈಮರಿ ಶಾಲೆಗೂ ಪ್ರಿನ್ಸಿಪಾಲರಿರುತ್ತಾರೆ] ಶಾಲೆಯ ಗೇಟ್‌ನಲ್ಲೊಬ್ಬ ಮಿಲಿಟರಿ ಉಡುಪು ಧರಿಸಿರುವ  ಗಾರ್ಡ್,ಇವೆಲ್ಲಾ ಚಿತ್ರಣವನ್ನು ನೋಡಿ ಕೇಳಿದಷ್ಟು ಡೊನೇಶನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿ ನಂತರ ಟೀಚರ್ ಗಳಿಂದ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವಂತಹ ಕೆಟ್ಟ ಶಿಸ್ತನ್ನು ಹೇರಿಸಿಕೊಳ್ಳುವುದು!! ಇದು  ಬೇಕಿತ್ತಾ? ಯಾವಾಗ ನಮ್ಮ ಪೋಷಕರುಗಳಿಗೆ ಬುದ್ಧಿ ಬರುತ್ತೋ ಗೊತ್ತಿಲ್ಲ.

ಮಕ್ಕಳನ್ನು ಅಯೋಗ್ಯರೆಂದು ಯಾರಾದರೂ ಟೀಚರ್ ಹೇಳಿದರೆ ಅಂತವರು ಈ ಸುಭಾಷಿತವನ್ನು ಮೊದಲು ಅರ್ಥಮಾಡಿಕೊಳ್ಳ  ಬೇಕು.

ಅಮಂತ್ರಂ ಅಕ್ಷರಮ್ ನಾಸ್ತಿ  ನಾಸ್ತಿ ಮೂಲ ಮನೌಷಧಮ್|
ಅಯೋಗ್ಯಃ ಪುರುಷೋ ನಾಸ್ತಿ  ಯೋಜಕಸ್ತತ್ರ ದುರ್ಲಭಃ ||

ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲ.ಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟೆಯನ್ನೇ ಇಟ್ಟು ಕಳಿಸಿದ್ದಾನೆ, ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು? ಮನೆಯಲ್ಲಿ ಅಪ್ಪ-ಅಮ್ಮ, ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತಃಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ? ನಮ್ಮ ಕಣ್ಮುಂದಿರುವ ದಾರಿ ಯಾವುದು?
ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ, ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ, ಆತ್ಮಸ್ಥೈರ್ಯ,ಧೈರ್ಯ,ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ? ವೇದ ಮಂತ್ರವು ಹೇಳುವಂತೆ   ನೀನು ಪುಣ್ಯವಂತ, ನೀನು ಭಾಗ್ಯಶಾಲಿ, ನೀನು ಶಕ್ತಿವಂತ, ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ, ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ, ಹೇರಿಕೆಯ ಶಿಸ್ತು,  ಈ ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ, ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ? ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ, ಸದ್ಗುಣಗಳನ್ನು  ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು   ಕಾಣುತ್ತೇವೆ.
ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ, ನೀನು ಒಳ್ಳೆಯವ, ನೀನು ಶಕ್ತಿಶಾಲಿ,ನೀನು ಮೇಧಾವಂತ, ನೀನು ಗುಣವಂತ  ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ, ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?
ಮತ್ತೊಂದು ವೇದದಮಾತನ್ನು ಇಲ್ಲಿ ನಾವು ಗಮನಿಸಬೇಕು. ನಿನ್ನ ಸ್ವಸಾಮರ್ಥ್ಯದಿಂದ ಸಮನಾದವರನ್ನು ಮೀರಿಸಿ ಮುಂದೆ ನಡೆ. ಅಂದರೆ ನಮ್ಮನ್ನು ಮುನ್ನಡೆಸಲು ಮಧ್ಯವರ್ತಿಗಳು ಬೇಕಾಗಿಲ್ಲ. ನಮ್ಮ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟು ನಾವೇ ಮುನ್ನಡೆಯಬೇಕು.