Pages

Saturday, June 12, 2010

ಬುನಾದಿ -೨-

ವೇದೋಕ್ತ ಜೀವನಪಥ
ಜೀವನ ಬುನಾದಿ -೨-
ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:
ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.
-ಕವಿ ನಾಗರಾಜ್